ಒಂದೇ ಕಾಮಗಾರಿಗೆ ಎರಡು ಬಾರಿ ಹಣ; ವಿಧಾನಮಂಡಲ ಮತ್ತು ಪಿಡಬ್ಲ್ಯುಡಿ ಜಟಾಪಟಿ

ವಿಧಾನಸೌಧ ಕಟ್ಟಡ ಕಾಮಗಾರಿ ವಿಚಾರದಲ್ಲಿ ಶುರುವಾಗಿರುವ ಜಟಾಪಟಿ ಸದ್ಯಕ್ಕೆ ನಿಲ್ಲುವ ಲಕ್ಷಣಗಳಿಲ್ಲ. ಲೋಕೋಪಯೋಗಿ ಇಲಾಖೆ ನಿರ್ವಹಿಸಬೇಕಿದ್ದ ಕಾಮಗಾರಿಯನ್ನು ವಿಧಾನಸಭೆ, ಪರಿಷತ್‌ ಸಚಿವಾಲಯ ಕೈಗೆತ್ತಿಕೊಂಡಿದೆ. ಇದಕ್ಕೆ ಪಿಡಬ್ಲ್ಯುಡಿ ಇಲಾಖೆ ಮತ್ತೊಮ್ಮೆ ಆಕ್ಷೇಪ ವ್ಯಕ್ತಪಡಿಸಿದೆ.

ವಿಧಾನಸೌಧದ ಕಟ್ಟಡದಲ್ಲಿ ಪ್ರತ್ಯೇಕವಾಗಿ ಕಾಮಗಾರಿ ನಡೆಸುವ ವಿಚಾರ ಮತ್ತೊಮ್ಮೆ ಸದ್ದು ಮಾಡಿದೆ. ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ಲೋಕೋಪಯೋಗಿ ಇಲಾಖೆಗೆ ಯಾವುದೇ ಮಾಹಿತಿಯನ್ನೂ ನೀಡದೆ ವಿಧಾನಸಭೆ, ವಿಧಾನಪರಿಷತ್‌ ಸಚಿವಾಲಯ ಸ್ವತಃ ಕಾಮಗಾರಿ ಕೈಗೊಳ್ಳಲು ಮುಂದಾಗಿರುವುದು ಜಟಾಪಟಿಗೆ ಕಾರಣವಾಗಿದೆ.

ಈ ಎರಡೂ ಸಚಿವಾಲಯಗಳು ಕೈಗೆತ್ತಿಕೊಂಡಿರುವ ಕಾಮಗಾರಿಗಳಿಂದಾಗಿ ವಿಧಾನಸೌಧ ಕಟ್ಟಡದ ಸೌಂದರ್ಯ ಹಾಗೂ ಸುರಕ್ಷತೆಗೆ ಧಕ್ಕೆ ಆಗುವ ಸಾಧ್ಯತೆಗಳಿವೆ ಎಂದು ಲೋಕೋಪಯೋಗಿ ಇಲಾಖೆ ಆತಂಕವನ್ನೂ ವ್ಯಕ್ತಪಡಿಸಿದೆ. ಈ ಸಂಬಂಧ ಎಕ್ಸಿಕ್ಯುಟಿವ್‌ ಎಂಜಿನಿಯರ್‌, ಸೂಪರಿಟೆಂಡೆಂಟ್‌ ಎಂಜಿನಿಯರ್‌ಗೆ ೨೦೧೮ರ ಫೆ.೧ರಂದು ಖಾರವಾಗಿ ಪತ್ರ ಬರೆದಿದೆ. ಈ ಪತ್ರದ ಪ್ರತಿ ‘ದಿ ಸ್ಟೇಟ್‌’ಗೆ ಲಭ್ಯವಾಗಿದೆ.

ಎಕ್ಸಿಕ್ಯುಟಿವ್‌ ಎಂಜಿನಿಯರ್‌ ಬರೆದಿರುವ ಪತ್ರ (ಪುಟ 1)
ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ಬರೆದಿರುವ ಪತ್ರ (ಪುಟ 2)

ವಿಧಾನಸೌಧದ ಕಟ್ಟಡ ಮತ್ತು ಕೊಠಡಿಗಳ ನವೀಕರಣ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆಯೇ ನಿರ್ವಹಿಸಬೇಕು ಎಂದು ಮಂತ್ರಿಮಂಡಲದಲ್ಲಿ ಚರ್ಚೆ ನಡೆದಿತ್ತು. ಲೋಕೋಪಯೋಗಿ ಇಲಾಖೆ ಕಾಮಗಾರಿ ಕೈಗೆತ್ತಿಕೊಳ್ಳುವುದರಲ್ಲಿ ಯಾವುದೇ ಬದಲಾವಣೆಯ ಅವಶ್ಯಕತೆ ಇಲ್ಲ ಎಂದು ಇತ್ತೀಚೆಗಷ್ಟೇ ಆದೇಶ ಹೊರಬಿದ್ದಿತ್ತು. ಈ ಆದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಅನುಮೋದಿಸಿದ್ದರು. ಆದರೂ ಆದೇಶವನ್ನು ಉಲ್ಲಂಘಿಸುವ ಮೂಲಕ ಈ ಎರಡೂ ಸಚಿವಾಲಯಗಳು ರಾಜ್ಯ ಸರ್ಕಾರಕ್ಕೆ ಸಡ್ಡು ಹೊಡೆದಿದೆ. ಕಾಮಗಾರಿಗಳ ವಿಚಾರದಲ್ಲಿ ಸ್ಪೀಕರ್‌ ಮತ್ತು ಸಭಾಪತಿಗಳಿಬ್ಬರೂ ಈ ಹಿಂದೆ ಹಿಡಿದಿದ್ದ ಹಠವನ್ನೇ ಮತ್ತೆ ಸಾಧಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ವಿಧಾನಸೌಧದ ಕಟ್ಟಡದ ೧೧೪, ೧೧೫, ೧೧೬, ೨೧೬ ಕೊಠಡಿಗಳಲ್ಲಿ ವಿಧಾನಪರಿಷತ್‌ ಕೆಆರ್‌ಡಿಎಲ್ ಗುತ್ತಿಗೆದಾರರ ಮೂಲಕ ಕಾಮಗಾರಿ ನಡೆಸುತ್ತಿದೆ. ಅದೇ ರೀತಿ, ವಿಧಾನಸಭೆ ಸಚಿವಾಲಯವೂ ಕೊಠಡಿ ಸಂಖ್ಯೆ ೧೦೨, ೧೧೯-ಎ, ೧೨೭, ೧೨೮, ೧೨೯, ೧೪೯-ಎ, ೨೬೮ರಲ್ಲಿ ಕಾಮಗಾರಿ ಕೈಗೊಳ್ಳಲು ೨೦೧೮ರ ಜನವರಿಯಲ್ಲಿ ಟೆಂಡರ್‌ ಆಹ್ವಾನಿಸಿದೆ. ಇದು ಲೋಕೋಪಯೋಗಿ ಇಲಾಖೆಯ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಸಚಿವಾಲಯದಲ್ಲಿ ದುಗುಡಕ್ಕೆ ಕಾರಣವಾದ ಜೇಷ್ಠತಾ ಪಟ್ಟಿ ಸರಿಪಡಿಸಲು ನಿರ್ದೇಶನ

“ಲೋಕೋಪಯೋಗಿ ಇಲಾಖೆಯ ಆಯವ್ಯಯದಲ್ಲಿ ವಿಧಾನಸೌಧದ ಕಟ್ಟಡ ನವೀಕರಣ, ಕಾಮಗಾರಿಗಳಿಗಾಗಿ ೨೦ ಕೋಟಿ ರು. ಮಂಜೂರಾಗಿದೆ. ಇಲಾಖೆಯು ಕೈಗೊಂಡಿರುವ ಹಾಗೂ ಆಹ್ವಾನಿಸಲಾಗಿರುವ ಕೆಲಸಗಳೂ ಮಂಜೂರಾದ ಅಂದಾಜಿನಲ್ಲೇ ಒಳಗೊಂಡಿದೆ. ಪ್ರಸ್ತುತ ಕಾಮಗಾರಿ ಪ್ರಗತಿಯಲ್ಲಿದೆ. ಈ ಮಧ್ಯೆ ವಿಧಾನಸಭೆ, ಪರಿಷತ್‌ ಸಚಿವಾಲಯವೂ ನವೀಕರಣ, ಕಾಮಗಾರಿ ಕೈಗೆತ್ತಿಕೊಂಡಿವೆ. ಇದರಲ್ಲಿ ಲೋಕೋಪಯೋಗಿ ಇಲಾಖೆಗೆ ಕೈಗೊಂಡಿರುವ ಕಾಮಗಾರಿಯಲ್ಲಿ ನೆಲಹಾಸು ಬದಲಾಯಿಸುವುದು, ಪಾಲಿಷಿಂಗ್‌, ಪೇಂಟಿಂಗ್‌, ಶೌಚಾಲಯ ನವೀಕರಣ ಕಾಮಗಾರಿಯೂ ಸೇರಿದೆ. ಆದರೆ, ಯಾವುದೇ ಮಾಹಿತಿಯನ್ನೂ ನೀಡದ ವಿಧಾನಸಭೆ, ಪರಿಷತ್ ಸಚಿವಾಲಯ ಸ್ವತಃ ಕಾಮಗಾರಿಗಳನ್ನು ಕೈಗೊಳ್ಳಲು ಮುಂದಾಗಿದೆ. ಇದರಿಂದ ಒಂದೇ ಕಾಮಗಾರಿಗೆ ಎರಡು ಬಾರಿ ಅನುದಾನವನ್ನು ಸರ್ಕಾರವೇ ಒದಗಿಸಿದಂತಾಗಿದೆ. ಅಲ್ಲದೆ, ಸರ್ಕಾರದ ಆದೇಶವನ್ನೂ ಉಲ್ಲಂಘಿಸಲಾಗಿದೆ,” ಎಂದು ಎಕ್ಸಿಕ್ಯುಟಿವ್‌ ಎಂಜಿನಿಯರ್‌ ಪತ್ರದಲ್ಲಿ ವಿವರಿಸಿದ್ದಾರೆ.

“ವಿಧಾನಸಭೆ ಮತ್ತು ಪರಿಷತ್‌ ಸಚಿವಾಲಯ ಲೋಕೋಪಯೋಗಿ ಇಲಾಖೆಯನ್ನು ಪರಿಗಣಿಸದೆಯೇ ಕಾಮಗಾರಿ ಕೈಗೊಳ್ಳಲು ನೇರವಾಗಿ ಟೆಂಡರ್‌ ಕರೆದು ನಿರ್ವಹಿಸುತ್ತಿದೆ. ಇದು ಸರ್ಕಾರದ ಆದೇಶಕ್ಕೆ ತದ್ವಿರುದ್ಧವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ವಿಧಾನಸೌಧ ಕಟ್ಟಡ ವಾಸ್ತುಶಿಲ್ಪಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ,” ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

“ವಿಧಾನಸೌಧ ಕಟ್ಟಡದ ಸೌಂದರ್ಯ, ಸುರಕ್ಷತೆ ದೃಷ್ಟಿಯಿಂದ ವಿವಿಧ ಇಲಾಖೆಗಳು ಕಾಮಗಾರಿ ಮಾಡುವುದರಿಂದ ದುಷ್ಪರಿಣಾಮಗಳು ಆಗಲಿವೆ. ಹಣಕಾಸು, ಗೃಹ ಇಲಾಖೆ, ವಿಧಾನಸಭೆ, ಪರಿಷತ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಈ ವಿಚಾರವನ್ನು ಲೋಕೋಪಯೋಗಿ ಸಚಿವರ ಗಮನಕ್ಕೆ ತರುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕು,” ಎಂದು ಸೂಪರಿಟೆಂಡೆಂಟ್‌ ಎಂಜಿನಿಯರ್‌ಗೆ ಬರೆದ ಪತ್ರದಲ್ಲಿ ಎಕ್ಸಿಕ್ಯುಟಿವ್‌ ಎಂಜಿನಿಯರ್‌ ಕೋರಿದ್ದಾರೆ.

ಕಳೆದ ೫೭ ವರ್ಷಗಳಿಂದಲೂ ವಿಧಾನಸೌಧ ಕಟ್ಟಡ ನಿರ್ವಹಣೆಯನ್ನೂ ಲೋಕೋಪಯೋಗಿ ಇಲಾಖೆಯೇ ನಿರ್ವಹಿಸುವ ಮೂಲಕ ಮೇಲ್ವಿಚಾರಣೆ ನಡೆಸುತ್ತಿದೆ. ಇದಕ್ಕಾಗಿ ಇಲಾಖೆಯಲ್ಲಿ ಇಂಜಿನಿಯರ್‌ಗಳ ತಂಡ ಮತ್ತು ತಾಂತ್ರಿಕ ಸಿಬ್ಬಂದಿ ಹೊಂದಿದೆ. ಅಲ್ಲದೆ, ರಾಜಭವನ, ಮುಖ್ಯಮಂತ್ರಿಯವರ ನಿವಾಸ, ಗೃಹ ಕಚೇರಿ, ಕುಮಾರಕೃಪ ರಸ್ತೆಯಲ್ಲಿರುವ ಸಚಿವರ ನಿವಾಸಗಳು, ಕುಮಾರಕೃಪ ಅತಿಥಿ ಗೃಹ, ಅರಮನೆ ರಸ್ತೆಯಲ್ಲಿರುವ ಮುಖ್ಯ ನ್ಯಾಯಾಧೀಶರ ನಿವಾಸಗಳ ಸಿವಿಲ್‌ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆ ಕಳೆದ ಹಲವು ವರ್ಷಗಳಿಂದಲೂ ನಿರ್ವಹಿಸುತ್ತಿದೆ.

ವಿಪರ್ಯಾಸವೆಂದರೆ, ಎಂಜಿನಿಯರಿಂಗ್‌ ವಿಭಾಗ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಹೊಂದದ ವಿಧಾನಸಭೆ ಮತ್ತು ಪರಿಷತ್‌ ಸಚಿವಾಲಯ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ! ಈ ವಿಚಾರ ಸಚಿವ ಸಂಪುಟ ಸಭೆಯಲ್ಲಿ ಹಿಂದೊಮ್ಮೆ ಪ್ರಸ್ತಾಪವಾದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಚ್‌ ಸಿ ಮಹದೇವಪ್ಪ, ಕಾಗೋಡು ತಿಮ್ಮಪ್ಪ ಸೇರಿದಂತೆ ಬಹುತೇಕ ಸಚಿವರು ವಿರೋಧ ವ್ಯಕ್ತಪಡಿಸಿದ್ದರು.

ಇಷ್ಟೆಲ್ಲ ಬೆಳವಣಿಗೆಗಳು ನಡೆದಿದ್ದರೂ ವಿಧಾನಸೌಧದಲ್ಲಿ ವಿಧಾನಸಭೆ ಸಚಿವಾಲಯದ ವ್ಯಾಪ್ತಿಗೆ ಒಳಪಡುವ ಒಂದು ಮತ್ತು ಎರಡನೇ ಮಹಡಿಯ ಬಹುಭಾಗ, ಶಾಸಕರ ಭವನ, ಬೆಳಗಾವಿಯ ಸುವರ್ಣಸೌಧ, ಲಾಲ್‌ಬಾಗ್‌ ಸಿದ್ದಾಪುರ ಮತ್ತು  ಕ್ರೆಸೆಂಟ್‌ ರಸ್ತೆಯಲ್ಲಿರುವ ವಾಹನ ಚಾಲಕರ ವಸತಿ ಗೃಹಗಳ ಸಂಪೂರ್ಣ ಮಾಲೀಕತ್ವ ಹಾಗೂ ನಿರ್ವಹಣೆಯನ್ನು ಕರ್ನಾಟಕ ವಿಧಾನಸಭೆ ಸಚಿವಾಲಯ ವಶಕ್ಕೆ ಪಡೆದಿತ್ತು.

ಚಿತ್ರ ಕೃಪೆ: ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More