ಗಾಂಧಿ ಹತ್ಯೆ ಸಂಚು | ಭಾಗ 4 | ಬಾಂಬ್ ಸ್ಫೋಟ ಸುದ್ದಿಗೆ ನಡುಗಿದ ಬಾಂಬೆ ಪ್ರೊಫೆಸರ್

ಬಿರ್ಲಾ ಹೌಸಿನಲ್ಲಿ ಗೋಡ್ಸೆ ಸಹಚರ ಮದನ್‌ ಲಾಲ್‌ ಬಾಂಬ್ ಸ್ಫೋಟಿಸಿದ ಬಳಿಕ ನಡುಕು ಹುಟ್ಟಿದ್ದು ಬಾಂಬೆಯ ಪ್ರೊಫೆಸರ್ ಜೈನ್ ಅವರಿಗೆ. ಇವರು ಬಾಂಬೆಯ ಅಂದಿನ ಗೃಹ ಸಚಿವ ಮೊರಾರ್ಜಿ ದೇಸಾಯಿ ಅವರಿಗೆ ನೀಡಿದ ಮಾಹಿತಿ ಬೆನ್ನಟ್ಟಿ ಕ್ರಮ ಕೈಗೊಂಡಿದ್ದರೆ ಗಾಂಧಿ ಹತ್ಯೆ ತಪ್ಪುತ್ತಿತ್ತೇನೋ

ಗಾಂಧಿ ಹತ್ಯೆಯ ಉದ್ದೇಶದಿಂದ ೧೯೪೮ರ ಜ.೦ರಂದು ದೆಹಲಿಯ ಬಿರ್ಲಾ ಹೌಸ್‌ನಲ್ಲಿ ಕೈಬಾಂಬ್‌ ಸ್ಪೋಟಿಸಲಾಯಿತು. ಬಾಂಬ್ ಸ್ಫೋಟಿಸಿದ ಮದನ್‌ಲಾಲ್ ಸ್ಥಳದಲ್ಲೇ ಪೊಲೀಸರಿಗೆ ಸಿಕ್ಕಿಬಿದ್ದ. ಆದರೆ, ನಾಥೂರಾಂ ಗೋಡ್ಸೆ ಸೇರಿದಂತೆ ಇತರ ಎಲ್ಲ ಸಂಚುಕೋರರು ಪೊಲೀಸರ ಕಣ್ಣುತಪ್ಪಿಸಿ ಪರಾರಿಯಾಗುವಲ್ಲಿ ಯಶಸ್ವಿಯಾದರು. “ಗಾಂಧಿಯ ಶಾಂತಿಮಂತ್ರ ತನಗೆ ಇಷ್ಟವಿರಲಿಲ್ಲ. ಹಾಗಾಗಿ ಅವರ ಕೊಲ್ಲಲು ಬಯಸಿದ್ದೆ,” ಎಂದು ಬಂಧಿತ ಮದನ್‌ಲಾಲ್ ಹೇಳಿಕೆ ನೀಡಿದ. ಬಾಂಬ್ ಸ್ಪೋಟ ಪ್ರಕರಣದ ಕುರಿತು ದೆಹಲಿ ಮತ್ತು ಬಾಂಬೆಯಲ್ಲಿ ಎರಡು ಪ್ರತ್ಯೇಕ ತನಿಖೆಗಳು ಆರಂಭವಾದವು.

ಘಟನೆ ನಡೆದ ಸಂಜೆ ೬.೩೦ಕ್ಕೆ ತುಘಲಕ್ ರಸ್ತೆ ಪೊಲೀಸ್ ಠಾಣೆಯಲ್ಲಿ, ಸ್ಫೋಟಕ ಸಾಮಗ್ರಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಯಿತು. ಸಬ್ ಇನ್ಸ್‌ಪೆಕ್ಟರ್ ದಸೊಂತ್ ಸಿಂಗ್‌ ತನಿಖಾಧಿಕಾರಿಯಾಗಿ ನೇಮಕಗೊಂಡು, ಪ್ರಕರಣದ ತನಿಖೆ ಕೈಗೆತ್ತಿಕೊಂಡರು. ಎಫ್‌ಐಆರ್ ಹೇಳಿಕೆ ದಾಖಲಿಸುವ ಮುನ್ನ ಮದನ್‌ಲಾಲ್‌ನನ್ನು ತಪಾಸಣೆಗೊಳಪಡಿಸಿದಾಗ ಆತನ ಬಳಿ ಹ್ಯಾಂಡ್‌ ಗ್ರನೇಡ್‌ ಪತ್ತೆಯಾಗಿತ್ತು. ಅದು ಆತ ಉದ್ದೇಶಪೂರ್ವಕವಾಗಿಯೇ ಆ ಕೃತ್ಯ ಎಸಗಿದ್ದ ಎಂಬುದಕ್ಕೆ ಪ್ರಬಲ ಸಾಕ್ಷ್ಯವಾಗಿತ್ತು. ಆತನನ್ನು ಮೊದಲು ಬಿರ್ಲಾ ಹೌಸ್ ಮತ್ತು ನಂತರ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗಳಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಆದರೆ, ಆತ ಆಗ ನೀಡಿದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಯಿತು. ಆದರೆ, ಆತ ತನ್ನ ಸಹಚರ ಕರ್ಕರೆಯ ಹೆಸರು ಹೇಳಿದ್ದ ಮತ್ತು ತಾವು ಎಲ್ಲಿ ಉಳಿದುಕೊಂಡಿದ್ದೆವು ಎಂಬುದನ್ನೂ ಬಾಯಿಬಿಟ್ಟಿದ್ದ. ಆತ ನೀಡಿದ ಮಾಹಿತಿ ಮೇರೆಗೆ ಮರೀನಾ ಹೋಟೆಲ್ ಮತ್ತು ಹಿಂದೂ ಮಹಾಸಭಾ ಭವನಗಳ ಮೇಲೆ ಪೊಲೀಸರು ದಾಳಿ ಮಾಡಿ ಶೋಧ ನಡೆಸಿದ್ದರು. ಮರೀನಾ ಹೋಟೆಲಿನಲ್ಲಿ ಇಬ್ಬರು ಸಂಚುಕೋರರು ‘ಎಸ್’ ಮತ್ತು ‘ಎಂ’ ದೇಶಪಾಂಡೆ ಎಂಬ ಸುಳ್ಳು ಹೆಸರು ನೀಡಿ ತಂಗಿ, ಅವಸರದಲ್ಲೇ ಅಲ್ಲಿಂದ ಖಾಲಿ ಮಾಡಿಕೊಂಡು ಹೋಗಿದ್ದರು. ಅವರು ತಂಗಿದ್ದ ಕೊಠಡಿಯಲ್ಲಿ ಕೆಲವು ದಾಖಲೆಗಳು ಪೊಲೀಸರಿಗೆ ದೊರೆತಿದ್ದು, ಅವು ಆ ಇಬ್ಬರು ಹಿಂದೂ ಮಹಾಸಭಾದೊಂದಿಗೆ ಹೊಂದಿದ್ದ ಆಪ್ತ ನಂಟಿಗೆ ಸಾಕ್ಷ್ಯವಾಗಿದ್ದವು ಎಂಬುದನ್ನು ಈ ಮೊದಲ ಪ್ರಕರಣದ ಡೈರಿಯಲ್ಲಿ ನಮೂದಿಸಲಾಗಿದೆ.

ಜ.೨೧ರಂದು ಮದನ್ ಲಾಲ್‌ನನ್ನು ೨೧ ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ ಬಳಿಕ ಆತನನ್ನು ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೊಳಪಡಿಸಲಾಯಿತು. ಜನವರಿ ೨೪ರಂದು ಆತ ಪೂರ್ಣ ಹೇಳಿಕೆ ನೀಡಿ, ‘ಹಿಂದೂ ರಾಷ್ಟ್ರೀಯ’ ಪತ್ರಿಕೆಯ ಮಾಲೀಕ ತನ್ನ ಸಹಚರ ಎಂಬುದನ್ನು ಬಾಯಿಬಿಟ್ಟ. ಆದರೆ, ಅದರ ‘ಅಗ್ರಣಿ’ ಅಥವಾ ಸಂಪಾದಕರ ಹೆಸರನ್ನು ಮಾತ್ರ ಹೇಳಲಿಲ್ಲ. ಮುಂದಿನ ತನಿಖೆಯಲ್ಲಿ, ಪ್ರತ್ಯಕ್ಷದರ್ಶಿಗಳು ಗುರುತಿಸಿದ್ದ; ಆರೋಪಿಗಳು ಬಿರ್ಲಾ ಹೌಸ್‌ಗೆ ಬಂದಿದ್ದ ಟ್ಯಾಕ್ಸಿ ಸಂಖ್ಯೆ ತಪ್ಪು ಎಂಬುದು ಪತ್ತೆಯಾಯಿತು. ಏಕೆಂದರೆ, ಆ ನಂಬರ್ ಜಿಎನ್‌ಐಟಿ ಬಸ್‌ ಸಂಖ್ಯೆಯಾಗಿತ್ತು. ಅದೇ ದಿನ ಇಬ್ಬರು ಪೊಲೀಸರು ತನಿಖೆಯ ನಿಮಿತ್ತ ಬಾಂಬೆಗೆ ಪ್ರಯಾಣಿಸಿದರು. ಆದರೆ, ಅಲ್ಲಿ ಅವರಿಗೆ ಯಾವ ಮಾಹಿತಿ ಸಿಕ್ಕಿತು, ಯಾವ ಮಾಹಿತಿಗಾಗಿ ಅವರು ಅಲ್ಲಿಗೆ ಹೋಗಿದ್ದರು ಎಂಬುದನ್ನು ಪ್ರಕರಣದ ಡೈರಿಯಲ್ಲಿ ನಮೂದಿಸಿಲ್ಲ.

ಜ.೨೩ರಂದು ಮರೀನಾ ಹೋಟೆಲಿನ ಬೇರರ್ ತನಿಖಾಧಿಕಾರಿಗಳ ಮುಂದೆ ‘ಎನ್‌ ಜಿ ವಿ’ ಎಂದು ಗುರುತು ಮಾಡಿದ್ದ ಕೆಲವು ಬಟ್ಟೆಗಳನ್ನು ಹಾಜರುಪಡಿಸಿದ. ಆದರೆ, ದೆಹಲಿ ಅಥವಾ ಬಾಂಬೆ ಪೊಲೀಸರು ಆ ಮಹತ್ವದ ಸಾಕ್ಷ್ಯವನ್ನು ಬಳಸಿಕೊಂಡು ಏನಾದರೂ ಮಾಡಿದರೆ ಎಂಬುದು ಮಾತ್ರ ಗೊತ್ತಾಗಲಿಲ್ಲ. ಹಾಗೇ, ಬಾಂಬೆ ಪೊಲೀಸರಿಗೆ ಆ ಮಾಹಿತಿ ನೀಡಿದ್ದರೆ ಎಂಬುದು ಕೂಡ ದೃಢಪಟ್ಟಿಲ್ಲ. ಈ ನಡುವೆ, ಪೊಲೀಸ್ ವಿಚಾರಣೆಯ ನಡುವೆಯೇ ಮದನ್ ‌ಲಾಲ್‌ನನ್ನು ಜಿಲ್ಲಾ ಮ್ಯಾಜಿಸ್ಟ್ರೇಟರ ಒಪ್ಪಿಗೆಯೊಂದಿಗೆ ಮೆಹತಾ ಪುರಾಣ್ ಚಂದ್ ಎಂಬ ವಕೀಲರು ಭೇಟಿಯಾಗಿ ಮಾತನಾಡಿದರು. ಇದು ಸಹಜವಾಗಿ ಪೊಲೀಸರ ತನಿಖೆಯಲ್ಲಿ ಮಧ್ಯಪ್ರವೇಶದಂತಿತ್ತು. ಬಳಿಕ, ೧೯೪೮ರ ಜ.೨೫ರಂದು ಮದನ್‌ ಲಾಲ್ ನ ಸಂಪೂರ್ಣ ಹೇಳಿಕೆಯೊನ್ನೊಳಗೊಂಡ ಪ್ರತಿಯನ್ನು ಬಾಂಬೆ ಸಿಐಡಿ ಡಿಐಜಿ ಯು ಎಚ್‌ ರಾಣಾ ಅವರಿಗೆ ನೀಡಲಾಯಿತು. ಪ್ರತಿ ಪಡೆದ ಬಳಿಕ ಅವರು, ಅಂದೇ ಅಲಹಾಬಾದ್ ಮೂಲಕ ರೈಲಿನಲ್ಲಿ ಬಾಂಬೆಗೆ ಹಿಂತಿರುಗಿದರು. ಅವರಿಗೆ ವಿಮಾನ ಪ್ರಯಾಣ ಆಗುತ್ತಿರಲಿಲ್ಲ ಎಂಬ ಹಿನ್ನೆಲೆಯಲ್ಲಿ ಅವರು ರೈಲು ಮೂಲಕ ಹೋದದ್ದು ಸರಿ. ಆದರೆ, ನೇರ ರೈಲುಗೈಡಿಯಲ್ಲಿ ಅವರಿಗೆ ಕಾಯ್ದಿರಿಸದ ಹೊರತು, ತ್ರಿವೇಣಿ ಮೂಲಕ ಸುತ್ತಿಬಳಸಿ ಬಾಂಬೆಗೆ ಹೋಗುವ ಅಗತ್ಯವಿರಲಿಲ್ಲ. ಈ ನಡುವೆ, ಬಾಂಬೆಗೆ ಹೋಗಿದ್ದ ದೆಹಲಿ ಪೊಲೀಸರು ಜನವರಿ ೨೪ರಂದು ವಾಪಸ್ಸಾದರು ಮತ್ತು ಬಾಂಬೆಯಲ್ಲಿ ನಗರ್‌ವಾಲ್ ಮತ್ತು ಬಾಂಬೆ ಪೊಲೀಸರಿಂದ ತಮಗೆ ಆದ ಅವಮಾನದ ಬಗ್ಗೆ ಜ.೨೫ರಂದು ದೂರು ನೀಡಿದರು.

ಈ ನಡುವೆ, ಆಯಕಟ್ಟಿನ ಜಾಗಗಳಲ್ಲಿ ಸಂಚುಕೋರರ ಬಂಧನಕ್ಕಾಗಿ ವಿಶೇಷ ಪೊಲೀಸರ ನಿಯೋಜನೆ ಮುಂದುವರಿದಿತ್ತು ಮತ್ತು ಮದನ್‌ ಲಾಲ್‌ ವಿಚಾರಣೆ ಕೂಡ ಮುಂದುವರಿದಿದ್ದರೂ, ಅಂತಹ ಮಹತ್ವದ ಮಾಹಿತಿಯೇನೂ ಪೊಲೀಸರಿಗೆ ಸಿಗಲಿಲ್ಲ. ಜನವರಿ ೨೯ರಂದು ಪೊಲೀಸರು ಸಂಚುಕೋರರು ಕೃತ್ಯಕ್ಕೆ ಬಳಸಿದ ಟ್ಯಾಕ್ಸಿಯನ್ನು ಪತ್ತೆ ಮಾಡಿ ಅದರ ಚಾಲಕನನ್ನೂ ವಶಕ್ಕೆ ಪಡೆದರು.

ಅದರ ಮರುದಿನ, ಅಂದರೆ, ಜ.೩೦ರಂದು ಮಹಾತ್ಮ ಪ್ರಾರ್ಥನಾ ಸಭೆಗೆ ಹೋಗುತ್ತಿರುವಾಗ, ಅವರು ಮೈದಾನಕ್ಕೆ ಕಾಲಿಡುತ್ತಿದ್ದಂತೆ, ನಾಥೂರಾಂ ಗೋಡ್ಸೆ ಹಾರಿಸಿದ ಗುಂಡುಗಳು ಅವರನ್ನು ಬಲಿತೆಗೆದುಕೊಂಡವು. ಗೋಡ್ಸೆಯನ್ನು ಸ್ಥಳದಲ್ಲೇ ಬಂಧಿಸಲಾಯಿತು ಮತ್ತು ಆಗ ಆತನನ್ನು 'ನಾರಾಯಣ ವಿನಾಯಕ ಗೋಡ್ಸೆ’ ಎಂದು ಹೆಸರಿಸಲಾಗಿತ್ತು. ಡೈರಿ ಪ್ರಕಾರ, ಬಾಂಬ್‌ ಪ್ರಕರಣದಲ್ಲಿ ಮದನ್‌ಲಾಲ್‌ ಸಹಚರನಾಗಿದ್ದ ಪೂನಾದ ‘ರಾಷ್ಟ್ರೀಯ’ ಎಂಬ ಪತ್ರಿಕೆಯ ಸಂಪಾದಕ ಈ ಗೋಡ್ಸೆಯೇ. ಗಾಂಧಿಯ ಹತ್ಯೆಯಲ್ಲಿ ನಾಥೂರಾಂ ಗೋಡ್ಸೆಯೊಂದಿಗೆ ಕೈಜೋಡಿಸಿದ್ದ ಇತರ ಸಂಚುಕೋರರು ದೆಹಲಿಯಿಂದ ಪರಾರಿಯಾಗಿದ್ದರು. ಅವರ ಪತ್ತೆಗಾಗಿ, ದೆಹಲಿಯ ವಿಶೇಷ ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ ಜೆ ಡಿ ನಗರ್‌ವಾಲ್ ಅವರ ನಿರ್ದೇಶನದ ಮೇರೆಗೆ ಯು ಎಚ್ ರಾಣಾ ನೇತೃತ್ವದಲ್ಲಿ ಬಾಂಬೆಯಲ್ಲಿ ತನಿಖೆ ಆರಂಭವಾಗಿತ್ತು.

***

ಬಿರ್ಲಾ ಹೌಸ್‌ನಲ್ಲಿ ಬಾಂಬ್‌ ಸ್ಫೋಟಗೊಂಡ ಬಳಿಕ ಸಂಚುಕೋರರು ಹೇಗೆ ಪರಾರಿಯಾಗಿದ್ದರು ಎಂಬುದನ್ನು ಮುಂದೆ ನೋಡೋಣ. ಆದರೆ, ಅಂದು ಇಬ್ಬರು ಪ್ರಮುಖ ಸಂಚುಕೋರರಾದ ಗೋಡ್ಸೆ ಮತ್ತು ಆಪ್ಟೆ ದೆಹಲಿಯಿಂದ ಕಾಲ್ಕಿತ್ತು, ಕಾನ್ಪುರ, ಅಲಹಾಬಾದ್ ಮೂಲಕ ಸುತ್ತಿಬಳಸಿ ಜ.೨೩ರಂದು ಬಾಂಬೆಗೆ ತಲುಪಿದ್ದರು. ಆದರೆ, ಮತ್ತೆ ಜ.೨೭ರಂದು ನಕಲಿ ಹೆಸರಿನಲ್ಲಿ ದೆಹಲಿಗೆ ವಿಮಾನದ ಮೂಲಕ ವಾಪಸು ಬಂದಿದ್ದರು. ಬಳಿಕ ರೈಲಿನಲ್ಲಿ ಗ್ವಾಲಿಯರ್‌ಗೆ ತೆರಳಿ ಅಲ್ಲಿನ ಪಾರ್ಚೂರ್‌ ಅವರ ಮನೆಯಲ್ಲಿ ಒಂದು ರಾತ್ರಿ ತಂಗಿದ್ದರು. ಮಾರನೇ ದಿನ ಅವರು ಗೋಯೆಲ್‌ ಎಂಬಾತನಿಂದ ಪಿಸ್ತೂಲು ಖರೀದಿಸಿ, ೨೯ರ ಬೆಳಗ್ಗೆ ದೆಹಲಿಗೆ ವಾಪಸ್ಸಾಗಿದ್ದರು. ಅಂದು ದೆಹಲಿಯ ಮುಖ್ಯ ರೈಲು ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲೇ ಉಳಿದುಕೊಂಡಿದ್ದರು ಮತ್ತು ಅಲ್ಲಿಯೇ ಕರ್ಕರೆಯನ್ನು ಭೇಟಿ ಮಾಡಿದ್ದರು. ಜ.೩೦ರಂದು ಮೊದಲು ಅವರು ಬಿರ್ಲಾ ಮಂದಿರದ ಹಿಂದಿನ ಕಾಡಿನಲ್ಲಿ ‘ಪಿಸ್ತೂಲು ಶೂಟಿಂಗ್’‌ ಅಭ್ಯಾಸ ಮಾಡಿದ್ದರು. ಹಾಗೇ ಹಿಂದಿನ ದಿನ ತಾವು ಮಾಡಿದಂತೆಯೆ, ಬೆಳಗ್ಗೆ ಒಂದು ಸುತ್ತು ಬಿರ್ಲಾ ಹೌಸ್‌ಗೆ ತೆರಳಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ್ದರು. ಬಳಿಕ ಸಂಜೆ ೫ಕ್ಕೆ ಗೋಡ್ಸೆ ಗಾಂಧಿ ಹತ್ಯೆಯನ್ನು ನಡೆಸಿದ್ದ. ಅದಕ್ಕೂ ಮುನ್ನ ಆತ, ತಾನು ಆರಾಧಿಸುವ ಶಿವಾಜಿ ಮಹರಾಜ ಮತ್ತು ಪೇಶ್ವೆಯ ಪ್ರತಿಮೆಗಳಿಗೆ ನಮನ ಸಲ್ಲಿಸಿ ಬಂದಿದ್ದ!

ಗಾಂಧಿ ಹತ್ಯೆ ಆಗುತ್ತಿದ್ದಂತೆ ನಾಥೂರಾಂ ಗೋಡ್ಸೆಯನ್ನು ಸ್ಥಳದಲ್ಲೇ ವಶಕ್ಕೆ ಪಡೆಯಲಾಯಿತು. ಆದರೆ, ಆತನ ಸಹಚರರಾಗಿದ್ದ ಆಪ್ಟೆ ಮತ್ತು ಕರ್ಕರೆ ದೆಹಲಿಯಿಂದ ಪರಾರಿಯಾಗಿ ಬಾಂಬೆ ಸೇರಿಕೊಂಡಿದ್ದರು. ೧೯೪೮ರ ಫೆ.೧೪ರಂದು ಬಾಂಬೆಯಲ್ಲೇ ಅವರಿಬ್ಬರನ್ನೂ ಬಂಧಿಸಲಾಯಿತು.

ಇದನ್ನೂ ಓದಿ : ಗಾಂಧಿ ಹತ್ಯೆ ಸಂಚು | ಭಾಗ 3 | ಬಾಂಬ್ ಸ್ಫೋಟಿಸಿದಾತ ಶಾಂತಿಮಂತ್ರ ಇಷ್ಟವಿಲ್ಲ ಎಂದಿದ್ದ!

ಈ ನಡುವೆ ಬಿರ್ಲಾ ಹೌಸ್ ಬಾಂಬ್ ಸ್ಫೋಟ ಪ್ರಕರಣದ ಕುರಿತು ಬಾಂಬೆಯಲ್ಲಿ ಜ.೨೧ರಿಂದ ೩೦ರವರೆಗೆ ನಡೆದ ವಿಚಾರಣೆಯನ್ನು ನ್ಯಾ.ಕಪೂರ್ ‘ಬಾಂಬೆ ತನಿಖೆ’ ಎಂಬ ಹೆಸರಿನಲ್ಲಿ ವಿವರಿಸುತ್ತಾರೆ. ಬಾಂಬೆಯ ಪ್ರೊ.ಜೈನ್ ಎಂಬುವರು ನೀಡಿದ ಮಹತ್ವದ ಸುಳಿವಿನ ವಿಷಯದಲ್ಲಿ ಆದ ತನಿಖೆ ಏನು? ಆದ ಎಡವಟ್ಟುಗಳೇನು ಎಂಬುದನ್ನು ಕಪೂರ್ ಈ ಭಾಗದಲ್ಲಿ ಹೇಳಿದ್ದಾರೆ. ಅಪೂರ್ವ ಅವಕಾಶವೊಂದನ್ನು ಕಳೆದುಕೊಂಡು, ಸಾಕಷ್ಟು ತಪ್ಪುಗಳನ್ನು ಎಸಗಿದ ಆ ತನಿಖೆಯ ರೀತಿ ನಿಜಕ್ಕೂ ದುರದೃಷ್ಟಕರ ಎಂಬುದು ಅವರ ಅಭಿಪ್ರಾಯ.

ಅತ್ತ, ದೆಹಲಿಯ ಬಿರ್ಲಾ ಹೌಸ್‌ನಲ್ಲಿ ೧೯೪೮ರ ಜ.೨೦ರಂದು ಬಾಂಬ್‌ ಸ್ಫೋಟವಾಗುತ್ತಲೇ ಇತ್ತ ಬಾಂಬೆಯ ರುಯಿಯಾ ಕಾಲೇಜಿನ ಪ್ರೊ.ಜೆ ಸಿ ಜೈನ್‌ರಿಗೆ ಸಣ್ಣ ನಡುಕ ಶುರುವಾಗಿತ್ತು. ಏಕೆಂದರೆ, ದೆಹಲಿಗೆ ಹೊರಡುವ ಮುನ್ನ ಮದನ್‌ಲಾಲ್‌ ತಾನು ಮತ್ತು ತನ್ನ ಸಹಚರರು ಗಾಂಧಿಯನ್ನು ಕೊಲ್ಲಲು ಹೋಗುತ್ತಿರುವುದಾಗಿ ಅವರ ಬಳಿ ಹೇಳಿದ್ದ. ಆದರೆ, ಜೈನ್ ಆತನ ಮಾತನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಏನೋ ಹುಚ್ಚು ಉಡಾಫೆ ಮಾತು ಎಂದು ನಿರ್ಲಕ್ಷಿಸಿದ್ದರು! ಹಾಗಾಗಿ, ಆ ಕುರಿತ ಮಾಹಿತಿಯನ್ನು ಕೂಡ ಪೊಲೀಸರು ಅಥವಾ ಆಡಳಿತಕ್ಕೆ ನೀಡಲು ಅವರು ಹಿಂದೇಟು ಹಾಕಿದ್ದರು. ಆದರೆ, ಬಾಂಬ್ ಸ್ಫೋಟದ ಮಾರನೇ ದಿನ, ಜ.೨೧ರಂದು ಜೈನ್ ಅವರು, ಬಾಂಬೆ ಸರ್ಕಾರದ ಅಂದಿನ ಪ್ರೈಮರ್ ಮತ್ತು ಗೃಹ ಸಚಿವರನ್ನು ಭೇಟಿಯಾಗಿ ಈ ಮಹತ್ವದ ಮಾಹಿತಿಯನ್ನು ನೀಡಿದ್ದರು. ಜೊತೆಗೆ, ತಮ್ಮ ಹೆಸರನ್ನು ಬಹಿರಂಗಪಡಿಸದಂತೆ ಗೃಹ ಸಚಿವ ಮೊರಾರ್ಜಿ ದೇಸಾಯಿ ಅವರಲ್ಲಿ ಮನವಿ ಮಾಡಿದ್ದರು.

ಈ ಮಹತ್ವದ ಮಾಹಿತಿ ತಿಳಿಯುತ್ತಲೇ ಮೊರಾರ್ಜಿ ದೇಸಾಯಿ ಅವರು ಡಿಸಿಪಿ ನಾಗರ್ವಾಲ ಅವರಿಗೆ ಬರಹೇಳಿದ್ದರು. ಆದರೆ, ಗೃಹ ಸಚಿವರೇ ತುರ್ತು ಭೇಟಿಗೆ ಹೇಳಿದರೂ, ನಗರ್‌ವಾಲ್ ಸಕಾಲದಲ್ಲಿ ಬರಲಿಲ್ಲ. ಅಷ್ಟರಲ್ಲಿ ಈ ಮಹತ್ವದ ಮಾಹಿತಿಯನ್ನು ದೇಶದ ಗೃಹ ಸಚಿವ ಸರ್ದಾರ್ ಪಟೇಲ್ ಅವರಿಗೆ ನೀಡಲು, ದೇಸಾಯಿ ಅಹಮದಾಬಾದಿಗೆ ಹೊರಟಿದ್ದರು. ಹಾಗಾಗಿ, ಬಿಬಿ ಅಂಡ್ ಸಿಐ ರೈಲ್ವೆಯ ಸೆಂಟ್ರಲ್ ಸ್ಟೇಷನ್ನಿಗೆ ಬಂದು ಕಾಣುವಂತೆ ನಗರ್‌ವಾಲ್‌ರಿಗೆ ಹೇಳಿದ್ದರು. ದೇಸಾಯಿಯವರು ತಮಗೆ ಲಭ್ಯವಾಗಿದ್ದ ಆ ಮಹತ್ವದ ಮಾಹಿತಿಯನ್ನು ನಗರ್‌ವಾಲ್ ಅವರಿಗೆ ನೀಡಿ, ಕೂಡಲೇ ಕರ್ಕರೆ ಮತ್ತು ಆತನ ಸಹಚರರನ್ನು ಬಂಧಿಸುವಂತೆ ತಾಕೀತು ಮಾಡಿದ್ದರು. ಅಲ್ಲದೆ, ಸಾವರ್ಕರ್ ಮನೆಯ ಮೇಲೆ ಕಣ್ಣಿಡುವಂತೆಯೂ ಸೂಚಿಸಿದ್ದರು. ಏಕೆಂದರೆ, ಪ್ರೊ.ಜೈನ್ ಅವರೇ ಸ್ವತಃ ಕರ್ಕರೆ ಮತ್ತು ಸಾವರ್ಕರ್ ಅವರ ಹೆಸರನ್ನು ಹೇಳಿದ್ದರು!

ಆದರೆ, ಗೃಹ ಸಚಿವರು ಹೇಳಿದ ವಿಷಯವನ್ನು ಡಿಸಿಪಿ ನಗರ್‌ವಾಲ್ ಅವರು ಗಂಭೀರವಾಗಿ ತೆಗೆದುಕೊಂಡರೇ? ಆಮೇಲೇನಾಯಿತು? ಎಂಬ ಕುತೂಹಲಕಾರಿ ಅಂಶಗಳು ಮಹಾತ್ಮರ ಜೀವನ್ಮರಣದ ಸಂಗತಿಗಳಾಗಿದ್ದವು!

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More