ರಾಜಕೀಯ ನಾಜೂಕು ಯಾವಾಗಲೂ ಸ್ವಾತಂತ್ರ್ಯದ ಶತ್ರು: ಮಾರಿಯೋ ವರ್ಗಾಸ್ ಲೊಸಾ

ನೊಬೆಲ್ ಪುರಸ್ಕೃತ ಪೆರುವಿನ ಲೇಖಕ ಮಾರಿಯೋ ಲೊಸಾ, ನಾಗರಿಕ ಹಕ್ಕುಗಳ ಹೋರಾಟಗಾರರೂ ಹೌದು. ತಮ್ಮ ಹೊಸ ಕೃತಿ ‘ದಿ ಕಾಲ್ ಆಫ್‌ ದಿ ಟ್ರೈಬ್’ ಹೊರಬರುತ್ತಿರುವ ಈ ಹೊತ್ತಲ್ಲಿ ಅವರು, ಬೌದ್ಧಿಕ ಕುರುಡುತನ, ಪ್ರಜಾಪ್ರಭುತ್ವ ಎದುರಿಸುತ್ತಿರುವ ಅಪಾಯಗಳ ಕುರಿತು ಮಾತನಾಡಿದ್ದಾರೆ

ಪ್ರಮುಖವಾಗಿ ಆಡಮ್‌ ಸ್ಮಿತ್, ಜೋಸ್ ಒರ್ಟೆಗಾ ಗ್ಯಾಸೆಟ್, ಫ್ರೆಡ್ರಿಕ್ ವಾನ್ ಹೈಕ್, ಕಾರ್ಲ್‌ ಪಾಪ್ಪರ್, ರೇಮಂಡ್ ಅರಾನ್, ಇಸ್ಸಾಯ್ ಬರ್ಲಿನ್ ಮತ್ತು ಜೀನ್ ಫ್ರಾಂಕೋಸ್ ರೆವೆಲ್‌ ಅವರ ಉದಾರವಾದಿ ತತ್ವಚಿಂತನೆ ಮತ್ತು ಆಧುನಿಕ ಸಮಾಜದ ಮೇಲಿನ ಪ್ರಭಾವಗಳ ಕುರಿತ ‘ದಿ ಕಾಲ್ ಆಫ್‌ ದಿ ಟ್ರೈಬ್‌’ ಹಿನ್ನೆಲೆಯಲ್ಲಿ, ವ್ಯಕ್ತಿ ಮತ್ತು ಸ್ವಾತಂತ್ರ್ಯ, ಉದಾರವಾದಕ್ಕಿರುವ ಆತಂಕಗಳ ಕುರಿತ ತಮ್ಮ ಚಿಂತನೆಗಳನ್ನೂ ಲೋಸಾ, ‘ಎಲ್ ಪೈಸ್’ನ ಈ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಲೋಸಾ ಪ್ರಸ್ತಾಪಿಸುವ ಏಳು ಮಂದಿ ಚಿಂತಕರು, ಸಮಾಜದ ಒಂದು ಸ್ವಾಯತ್ತ ಮತ್ತು ಜವಾಬ್ದಾರಿಯುತ ಘಟಕ ವ್ಯಕ್ತಿ ಮತ್ತು ಸ್ವಾತಂತ್ರ್ಯ ಆತನ ಅತ್ಯುನ್ನತ ಸಂಪತ್ತು ಎಂದು ನಂಬಿ, ಅದನ್ನೇ ಪ್ರತಿಪಾದಿಸಿದವರು. ಪ್ರಜಾಪ್ರಭುತ್ವ ವ್ಯವಸ್ಥೆಯ ಪರವಿದ್ದ ಅವರು, ಪರಸ್ಪರ ವಿರೋಧಾಭಾಸದ ಮೌಲ್ಯಗಳನ್ನು ಮೀರಿ ಸಮಾಜವನ್ನು ಒಟ್ಟುಗೂಡಿಸಲು ಅಧಿಕಾರದ ವಿಕೇಂದ್ರೀಕರಣ ಅತ್ಯಂತ ಪ್ರಬಲ ಅಸ್ತ್ರ ಎಂಬ ಕಾರಣಕ್ಕೆ ಆ ಚಿಂತಕರು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿದ್ದರು. ಫ್ಯಾಸಿಸಂ, ಕಮ್ಯುನಿಸಂ, ನ್ಯಾಷನಲಿಸಂ ಮತ್ತು ಮತಾಂಧತೆಗಳಿಗೆ ಕುಮ್ಮಕ್ಕು ನೀಡಿದ ‘ಟ್ರೈಬಲ್ ಸ್ಪಿರಿಟ್ (ಆದಿಮ ಮನಸ್ಥಿತಿ)’ಯನ್ನು ತಿರಸ್ಕರಿಸುವ ತಮ್ಮದೇ ಆದ ಒಂದು ತತ್ವವನ್ನು ಆ ಚಿಂತಕರು ಅಳವಡಿಸಿಕೊಂಡರು ಎಂಬ ವಾದವನ್ನು ಮುಂದಿಡುವ ‘ದಿ ಕಾಲ್ ಆಫ್‌ ದಿ ಟ್ರೈಬ್’, ಮಾರ್ಕ್ಸ್‌ವಾದದಿಂದ ಅಸ್ತಿತ್ವವಾದ ಮತ್ತು ಅಂತಿಮವಾಗಿ ಉದಾರವಾದದ ಅನುಮೋದನೆಯವರೆಗಿನ ಲೋಸಾ ಅವರ ತಾತ್ವಿಕ ಯಾನವನ್ನೂ ಅನಾವರಣಗೊಳಿಸುತ್ತದೆ.

ಉದಾರವಾದಿ ಚಿಂತನೆಯ ಮೇಲೆ ಏಕೆ ಈಗ ಅಷ್ಟೊಂದು ದಾಳಿಗಳು ನಡೆಯುತ್ತಿವೆ?

ಸ್ವಾತಂತ್ರ್ಯದ ವಿರುದ್ಧ ಇರುವ ಸಿದ್ಧಾಂತಗಳು ಉದಾರವಾದದ ಮೇಲೆ ಯಾವಾಗಲೂ ದಾಳಿ ಮಾಡುತ್ತಿವೆ. ಏಕೆಂದರೆ, ಉದಾರವಾದವೇ ತಮ್ಮ ಅತ್ಯಂತ ದೊಡ್ಡ ಶತ್ರು ಎಂಬುದು ಅವರ ಗ್ರಹಿಕೆ. ನನ್ನ ಕೃತಿಯಲ್ಲೂ ಇದನ್ನೇ ವಿವರಿಸುವ ಯತ್ನ ಮಾಡಿದ್ದೇನೆ. ಫ್ಯಾಸಿಸಂ ಮತ್ತು ಕಮ್ಯುನಿಸಂ ಎರಡೂ ಉದಾರವಾದದ ಮೇಲೆ, ಅದನ್ನು ಮುಖ್ಯವಾಗಿ ಸಂಪ್ರದಾಯವಾದ ಎಂದು ಬಿಂಬಿಸುವ ಮೂಲಕ ಅಥವಾ ಅದರೊಂದಿಗೆ ತಳಕು ಹಾಕುವ ಮೂಲಕ ದಾಳಿ ಮಾಡಿವೆ, ಮಾಡುತ್ತಲೂ ಇವೆ. ಆರಂಭದ ಕಾಲಘಟ್ಟದಲ್ಲಿ ಉದಾರವಾದ ಬಲಪಂಥೀಯರಿಂದ ದಾಳಿಗೊಳಗಾಯಿತು. ಧರ್ಮ ಮತ್ತು ಸ್ಥಾಪಿತ ನೈತಿಕ ಮೌಲ್ಯಗಳ ವಿರೋಧಿ ಎಂಬ ಕಾರಣಕ್ಕೆ ಚರ್ಚುಗಳ ಮೂಲಕವೂ ದಾಳಿಗಳು ನಡೆದವು. ಇಂತಹ ಪ್ರತಿಕೂಲ ಪರಿಸ್ಥಿತಿಗಳೇ ಉದಾರವಾದ ಮತ್ತು ಪ್ರಜಾಪ್ರಭುತ್ವದ ನಂಟನ್ನು ಸ್ಪಷ್ಟಪಡಿಸುತ್ತವೆ ಎಂಬುದು ನನ್ನ ನಂಬಿಕೆ. ಇಂದು ಜಗತ್ತಿನಾದ್ಯಂತ ಪ್ರಜಾಪ್ರಭುತ್ವ ಸಾಕಷ್ಟು ಪ್ರಬಲವಾಗಿ ಬೇರೂರಿದೆ ಮತ್ತು ಮಾನವ ಹಕ್ಕುಗಳು ಪ್ರವರ್ಧಮಾನಕ್ಕೆ ಬಂದಿವೆ ಎಂದರೆ, ಅದಕ್ಕೆ ಕಾರಣ ಉದಾರವಾದಿ ಚಿಂತಕರು ಎಂಬುದನ್ನು ಮರೆಯುವಂತಿಲ್ಲ.

ನಿಮ್ಮ ಕೃತಿಯಲ್ಲಿ ನೀವು ಪ್ರಸ್ತಾಪಿಸಿರುವ ಲೇಖಕರೆಲ್ಲರೂ ಪ್ರವಾಹದ ವಿರುದ್ಧ ಈಜಿದವರೇ

ಹೌದು, ಹೈಕ್ ಮತ್ತು ಒರ್ಟೆಗಾ ಅವರ ತಲಾ ಎರಡು ಕೃತಿಗಳು ನಿಷೇಧಕ್ಕೊಳಗಾಗಿದ್ದವು. ಉದಾರವಾದಿಗಳು ಯಾವಾಗಲೂ ವ್ಯವಸ್ಥೆಯಲ್ಲಿ ಒಂಟಿಧ್ವನಿಗಳೇ? ಎಂದರೆ ಹೌದು ಎನ್ನಬಹುದು. ಏಕೆಂದರೆ, ಉದಾರವಾದ ಭಿನ್ನತೆಯನ್ನು ಒಪ್ಪಿಕೊಳ್ಳುವುದಷ್ಟೇ ಅಲ್ಲ; ಅದಕ್ಕೆ ಒತ್ತಾಸೆಯಾಗಿಯೂ ನಿಲ್ಲುತ್ತದೆ. ಸಮಾಜ ಹಲವು ಭಿನ್ನ ವ್ಯಕ್ತಿಗಳ ಮೊತ್ತ ಎಂಬುದನ್ನು ಉದಾರವಾದ ನಂಬುತ್ತದೆ ಮತ್ತು ಅಂತಹ ಭಿನ್ನತೆಯನ್ನು ಹಾಗೇ ಕಾಯ್ದುಕೊಳ್ಳುವುದು ಮುಖ್ಯ ಎಂದು ಪ್ರತಿಪಾದಿಸುತ್ತದೆ. ಅದೊಂದು ಸಿದ್ಧಾಂತವಲ್ಲ; ಸಿದ್ಧಾಂತವೆಂಬುದು ಒಂದು ಜಾತ್ಯತೀತ ಧರ್ಮ. ಆದರೆ, ಉದಾರವಾದ, ಸ್ವಾತಂತ್ರ್ಯ, ವ್ಯಕ್ತಿವಿಶಿಷ್ಟತೆಯಲ್ಲಿ ನಂಬಿಕೆ ಇಡುತ್ತದೆ ಮತ್ತು ನ್ಯಾಷನಲಿಸಂ(ರಾಷ್ಟ್ರೀಯತಾವಾದ) ಮತ್ತು ಸಾಮುದಾಯಿಕ ಅಸ್ತಿತ್ವವನ್ನು (ಕಲೆಕ್ಟಿವಿಸಂ) ತಿರಸ್ಕರಿಸುತ್ತದೆ. ಅಂದರೆ, ವ್ಯವಸ್ಥೆಯ ಒಳಗಿನ ಸ್ವಾತಂತ್ರ್ಯವನ್ನು ನಿರಾಕರಿಸುವ ಎಲ್ಲ ತತ್ವ, ಸಿದ್ದಾಂತಗಳನ್ನೂ ಉದಾರವಾದ ನಿರಾಕರಿಸುತ್ತದೆ.

ನ್ಯಾಷನಲಿಸಂ ವಿಷಯದಲ್ಲಿ ಬಾಸ್ಕ್‌ ಮತ್ತು ಕೆಟಲೋನಿಯಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸಾಕಷ್ಟು ಚರ್ಚೆಯಾಗಿದೆ. ಉದಾರವಾದಿಗಳು ಯಾಕೆ ನ್ಯಾಷನಲಿಸಂ ವಿರುದ್ಧ ಇರುತ್ತಾರೆ?

ಏಕೆಂದರೆ, ನ್ಯಾಷನಲಿಸಂ ಎಂಬುದು ಸ್ವಾತಂತ್ರ್ಯಕ್ಕೆ ಪೂರಕವಲ್ಲ. ನ್ಯಾಷನಲಿಸಂ ಒಳಗೂ ಹೇಗೆ ಜನಾಂಗೀಯವಾದ ಅವಿತಿದೆ ಎಂಬುದನ್ನು ಕಾಣಲು ನೀವು ಅದರ ಆಳಕ್ಕಿಳಿದೇ ನೋಡಬೇಕು. ಯಾವುದೇ ದೇಶ, ರಾಷ್ಟ್ರ, ಜನಾಂಗ, ಧರ್ಮಕ್ಕೆ ಸೇರಿರುವುದು ಒಂದು ಹೆಚ್ಚುಗಾರಿಕೆ ಎಂದು ನೀವು ಅಂದುಕೊಂಡ ಕ್ಷಣವೇ ನೀವು ಇತರರಿಗಿಂತ ಶ್ರೇಷ್ಠ ಎಂಬ ಅಹಂ ಕಾಣಿಸಿಕೊಳ್ಳುತ್ತದೆ. ಅಂತಹ ಅಹಂಕೇಂದ್ರಿತ ಜನಾಂಗೀಯವಾದ ಅಂತಿಮವಾಗಿ ಇತರರ ಸ್ವಾತಂತ್ರ್ಯವನ್ನು ಹತ್ತಿಕ್ಕುವುದಕ್ಕೂ, ಆ ಮೂಲಕ ಹಿಂಸೆಗೂ ದಾರಿಮಾಡಿಕೊಡುತ್ತದೆ. ನ್ಯಾಷನಲಿಸಂನ ಆಳದ ಈ ಬಗೆಯ ಕಲೆಕ್ಟಿವಿಸಂ ಮತ್ತು ತರ್ಕದ, ವಿಚಾರದ ಬೆಲೆ ತೆತ್ತು ನಂಬಿಕೆಯನ್ನು ಪೊರೆಯುವ ಅದರ ವರಸೆಯನ್ನು ಆಡಂ ಸ್ಮಿತ್ ಕಾಲದಿಂದಲೂ ಉದಾರವಾದ ಸರಿಯಾಗಿಯೇ ಗ್ರಹಿಸಿದೆ.

ಜನಮೆಚ್ಚುಗೆಯ ಹೊಸ ಅಸ್ತ್ರವಾಗಿ ಇದೀಗ ನ್ಯಾಷನಲಿಸಂ ಪುನರಾವತಾರವೆತ್ತಿದೆ. ಬ್ರಿಕ್ಸಿಟ್ ಅದಕ್ಕೊಂದು ಉದಾಹರಣೆ. ಅಂದರೆ, ಟ್ರೈಬಲಿಸಂ ಕೂಡ ಪುನರಾವತಾರವೆತ್ತಿದೆಯೇ?

ನಮ್ಮ ಕಾಲದ ಅತ್ಯಂತ ಪ್ರಗತಿಗಾಮಿ ಎನಿಸಿದ್ದ ಒಂದು ಬೆಳವಣಿಗೆಯ ವಿರುದ್ಧ ದಿಕ್ಕಿನ ವಿದ್ಯಮಾನ ಇದು. ಗಡಿ, ಭಾಷೆ, ಸಂಸ್ಕೃತಿ ಮತ್ತು ನಂಬಿಕೆಗಳನ್ನು ಮೀರಿ ಒಂದು ಬೃಹತ್‌ ವ್ಯವಸ್ಥೆಯನ್ನು ಕಟ್ಟುವ ಯುರೋಪಿನ ಒಕ್ಕೂಟ ವ್ಯವಸ್ಥೆಗೆ ಪ್ರತಿಯಾಗಿ ಈ ಹೊಸ ವ್ಯವಸ್ಥೆ ಪ್ರವರ್ಧಮಾನಕ್ಕೆ ಬರುತ್ತಿದೆ. ಬೃಹತ್ ವ್ಯವಸ್ಥೆ ಹುಟ್ಟಿಸಿರುವ ಅಸುರಕ್ಷತೆ ಮತ್ತು ಆತಂಕವನ್ನೇ ಆಧಾರವಾಗಿಟ್ಟುಕೊಂಡು ಬುಡಕಟ್ಟು ಮನಸ್ಥಿತಿ ಬೆಳೆಯುತ್ತಿದೆ. ಎಲ್ಲರೂ ಒಂದೇ ಅಭಿರುಚಿ, ಒಂದೇ ಭಾಷೆ, ಒಂದೇ ಸಂಸ್ಕೃತಿಯನ್ನು ಹೊಂದಿರುವ, ಅತ್ಯಂತ ಚಿಕ್ಕ ಏಕರೀತಿಯ ಸಮುದಾಯವಾಗಿ ಸಮಾಜವನ್ನು ಕಟ್ಟುವ ಪ್ರಯತ್ನ ನಡೆಯುತ್ತಿದೆ. ಆದರೆ, ಅಂತಹದ್ದೊಂದು ಸಮಾಜ ಎಂದಾದರೂ ಅಸ್ತಿತ್ವದಲ್ಲಿತ್ತೇ ಎಂಬುದು ಒಂದು ಭ್ರಮೆ. ಅಂತಹ ಭ್ರಮೆಯ ಭಾಗವಾಗಿಯೇ ಬ್ರಿಕ್ಸಿಟ್‌, ಕೆಟಲಾನ್‌ ನ್ಯಾಷನಲಿಸಂಗಳು ಹುಟ್ಟಿಕೊಂಡದ್ದು. ಪೋಲೆಂಡ್, ಹಂಗೇರಿ ಮತ್ತು ಹಾಲೆಂಡ್‌ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೇ ಕೇಳಿಬರುತ್ತಿರುವ ಪ್ರತ್ಯೇಕ ನ್ಯಾಷನಲಿಸಂ ಕೂಗಿನ ಹಿಂದೆಯೂ ಇಂತಹದ್ದೇ ಭ್ರಮೆಯೇ ಕೆಲಸ ಮಾಡುತ್ತಿದೆ. ನ್ಯಾಷನಲಿಸಂ ಎಂಬುದು ನಿಜ. ಆದರೆ, ಕೆಟಲೋನಿಯಾದಂತೆ ಅದು ತೀರಾ ಅಲ್ಪಸಂಖ್ಯಾತರ ಕೂಗು. ಆದರೆ, ಅದನ್ನು ಉಪೇಕ್ಷಿಸಿದಷ್ಟು ಪ್ರಜಾಪ್ರಭುತ್ವದ ಸಾಂಸ್ಥಿಕ ವ್ಯವಸ್ಥೆ ಹಳಿತಪ್ಪುವ ಅಪಾಯವಿದೆ.

ಮಾರ್ಕ್ಸ್‌ವಾದದಿಂದ ಉದಾರವಾದದವರೆಗಿನ ನಿಮ್ಮ ಪಯಣ ಒಂದು ರೀತಿಯಲ್ಲಿ ತೀರಾ ವಿಚಿತ್ರ. ನೀವು ಪ್ರಸ್ತಾಪಿಸಿರುವ ಚಿಂತಕರಲ್ಲಿ ಪಾಪರ್, ಅರೋನ್ ಮತ್ತು ರೇವಲ್ ಸೇರಿದಂತೆ ಕೆಲವರು ಕೂಡ ನಿಮ್ಮ ಹಾಗೆಯೇ ಸಿದ್ಧಾಂತದ ಹಾದಿಯಲ್ಲಿ ಬದಲಾವಣೆ ಕಂಡವರು.

ಲ್ಯಾಟಿನ್ ಅಮೆರಿಕದ ನನ್ನ ತಲೆಮಾರು, ಅಗಾಧ ಅಸಮಾನತೆ ಮತ್ತು ಅಮೆರಿಕ ಬೆಂಬಲಿತ ಸೇನಾ ಸರ್ವಾಧಿಕಾರದ ನಡುವೆ ವಿಚಾರವಾದಕ್ಕೆ ತೆರೆದುಕೊಂಡೆವು. ಅಂತಹ ಹಿನ್ನೆಲೆಯಲ್ಲಿ ಒಬ್ಬ ಯುವ ಮತ್ತು ವ್ಯವಸ್ಥೆಯ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದ ಲ್ಯಾಟಿನ್ ಅಮೆರಿಕನ್, ಪ್ರಜಾಪ್ರಭುತ್ವದ ಹೆಸರಿನ ಈ ಅಪಹಾಸ್ಯವನ್ನು ತಿರಸ್ಕರಿಸದೇ ಗತ್ಯಂತರವಿರಲಿಲ್ಲ. ಆಗ ನಾನು ಒಬ್ಬ ಕಮ್ಯುನಿಸ್ಟನಾಗಲು ಬಯಸಿದ್ದೆ. ಸೇವಾ ಸರ್ವಾಧಿಕಾರ, ಭ್ರಷ್ಟಾಚಾರ ಮತ್ತು ಅದೆಲ್ಲಕ್ಕಿಂತ ಮುಖ್ಯವಾಗಿ ಅಸಮಾನತೆಯ ವಿರುದ್ಧ ಕಮ್ಯುನಿಸಂ ಇದೆ ಎಂದುಕೊಂಡಿದ್ದೆ. ಸ್ಯಾನ್ ಮಾರ್ಕೋಸ್ ರಾಷ್ಟ್ರೀಯ ವಿವಿಯ ದಿನಗಳಲ್ಲೇ ನಾನು ಕಮ್ಯುನಿಸ್ಟ್‌ ಸಂಗಾತಿಗಳೊಂದಿಗೆ ಗುರುತಿಸಿಕೊಂಡಿದ್ದೆ. ಆದರೆ, ಲ್ಯಾಟಿನ್ ಅಮೆರಿಕದ ಕಮ್ಯುನಿಸಂ ಸಂಪೂರ್ಣ ಸ್ಟಾಲಿನ್‌ವಾದಕ್ಕೆ ನಿಷ್ಟವಾಗಿತ್ತು. ಹಾಗಾಗಿ, ಒಂದು ವರ್ಷದ ಉಗ್ರ ಕಮ್ಯುನಿಸ್ಟ್‌ ಚಟುವಟಿಕೆಗಳ ಬಳಿಕ ನಾನು ಕ್ಯೂಬಾದ ಪ್ರಭಾವದಿಂದಾಗಿ ಸಮಾಜವಾದಿ ವರಸೆಗೆ ಮೊರೆಹೋದೆ. ಆರಂಭದಲ್ಲಿ ಸಮಾಜವಾದಿ ವ್ಯವಸ್ಥೆಯಲ್ಲೇ ಅತ್ಯುತ್ತಮ ಎನಿಸಿದ್ದ ಕ್ಯೂಬಾದ ಸೋಷಿಯಲಿಸಂ ನನ್ನನ್ನು ಆಕರ್ಷಿಸಿತ್ತು. ೧೯೭೦ರಲ್ಲಿ ನಾನು ಐದು ಬಾರಿ ಕ್ಯೂಬಾಕ್ಕೆ ಹೋಗಿದ್ದೆ. ಆದರೆ, ಕ್ರಮೇಣ ಆ ವ್ಯವಸ್ಥೆ ಕೂಡ ಭಿನ್ನವಲ್ಲ ಎಂಬ ವಾಸ್ತವ ಕಾಣತೊಡಗಿತು. ಅದರಲ್ಲೂ ಮಿಲಿಟರಿ ಯುನಿಟ್ಸ್‌ ಆಫ್ ಏಯ್ಡ್ ಪ್ರೊಡಕ್ಷನ್ ಆರಂಭದ ಬಳಿಕ ನನ್ನ ಭ್ರಮೆ ಸಂಪೂರ್ಣ ಕಳಚಿತು. ಆ ಸಂದರ್ಭದಲ್ಲೇ ಯುವಕನ ಮೇಲಿನ ಪೊಲೀಸ್ ದಾಳಿಯನ್ನು ವಿರೋಧಿಸಿ ನಾನು ಫಿಡಲ್ ಕ್ಯಾಸ್ಟ್ರೋಗೆ ಪತ್ರ ಬರೆದಿದ್ದೆ.

ಸಹಿಷ್ಣುತೆ ಮತ್ತು ಮುಕ್ತ ಸಮಾಜವಾದಿ ಧೋರಣೆಯ ಕ್ಯೂಬಾದಲ್ಲಿ ಕೂಡ ಸಲಿಂಗಿಗಳ ವಿರುದ್ಧ ಪೊಲೀಸ್ ಕಾರ್ಯಾಚರಣೆ ನಡೆಯುವುದು ಊಹಿಸಲಾಗದು ಎಂದು ಹೇಳಿದ್ದೆ. ಬಳಿಕ ನನ್ನನ್ನೂ ಸೇರಿ ಹಲವು ಬುದ್ದಿಜೀವಿಗಳನ್ನು ಮಾತುಕತೆಗೆ ಕರೆದರು. ಇಡೀ ರಾತ್ರಿ ೧೨ ಗಂಟೆಗಳ ಕಾಲ ಆ ಸಭೆ ನಡೆಯಿತು. ಕ್ಯಾಸ್ಟ್ರೋ ರಾತ್ರಿ ಇಡೀ ಮಾತನಾಡಿದರು. ಆದರೆ, ಆಕರ್ಷಕವಾಗಿದ್ದ ಆ ಮಾತುಗಳು, ನಮ್ಮ ಅನುಮಾನಗಳನ್ನು ಪರಿಹರಿಸುವಲ್ಲಿ ಮಾತ್ರ ಸಫಲವಾಗಲಿಲ್ಲ. ಆ ಬಳಿಕ ನಾನು ಇನ್ನಷ್ಟು ನಂಬಿಕೆ ಕಳೆದುಕೊಂಡೆ. ನಂತರ ೧೯೭೧ರಲ್ಲಿ ಲೇಖಕ ಹರ್ಬಟ್‌ ಪಡಿಲ್ಲಾ ಅವರನ್ನು ಜೈಲಿಗೆ ಹಾಕಿದ ಬಳಿಕ ಅಂತಿಮವಾಗಿ ಸಂಪೂರ್ಣ ದೂರಾದೆ. ನಾನಷ್ಟೇ ಅಲ್ಲ, ಆ ಘಟನೆ ಕ್ಯೂಬಾ ಆಡಳಿತದೊಂದಿಗೆ ಬುದ್ದಿಜೀವಿಗಳ ನಂಟನ್ನೇ ತುಂಡರಿಸಿತು. ಆ ಬಳಿಕ ಪ್ರಜಾಪ್ರಭುತ್ವ ಮತ್ತು ಉದಾರವಾದದ ತತ್ವಗಳೆಡೆಗೆ ಹೋದೆ. ಬಳಿಕ ಮಾರ್ಗರೆಟ್ ಥ್ಯಾಚರ್ ಅವರ ಅವಧಿಯಲ್ಲಿ ಬ್ರಿಟನ್‌ನಲ್ಲಿ ಇದ್ದದ್ದು ನನ್ನ ಅದೃಷ್ಟ.

ನಾವು ಅವರ ಬಗ್ಗೆ ಹೊಂದಿರುವ ಚಿತ್ರಣಕ್ಕಿಂತ ಭಿನ್ನವಾಗಿ ದಿಟ್ಟ ಮತ್ತು ಸ್ಪಷ್ಟ ಉದಾರವಾದಿ ಆದರ್ಶಗಳನ್ನು ಹೊಂದಿದ್ದ ಬಹಳ ಬುದ್ದಿವಂತೆ ಎಂಬರ್ಥದಲ್ಲಿ ಮಾರ್ಗರೆಟ್ ಥ್ಯಾಚರ್ ಅವರನ್ನು ಚಿತ್ರಿಸಿದ್ದೀರಿ?

ಮಾರ್ಗರೆಟ್ ಥ್ಯಾಚರ್ ಬಗೆಗಿನ ಜನಪ್ರಿಯ ಚಿತ್ರಣ ತೀರಾ ಅಸತ್ಯವಾದದು. ನಾನು ಇಂಗ್ಲೆಂಡಿಗೆ ಹೋಗುವ ಹೊತ್ತಿಗಾಗಲೇ ಆ ದೇಶ ಕುಸಿಯತೊಡಗಿತ್ತು. ಲೇಬರ್ ಪಾರ್ಟಿಯ ಆರ್ಥಿಕ ರಾಷ್ಟ್ರೀಯತಾವಾದ ಆ ದೇಶದ ಸ್ವಾತಂತ್ರ್ಯವನ್ನೇ ಬುಡಮೇಲು ಮಾಡತೊಡಗಿತ್ತು. ಅಂತಹ ಸಂದರ್ಭದಲ್ಲಿ ಥ್ಯಾಚರ್ ಅವರ ಕ್ರಾಂತಿ ಬ್ರಿಟನ್‌ ಜನತೆಯನ್ನು ಬಡಿದೆಬ್ಬಿಸಿತು. ಟ್ರೇಡ್‌ ಯೂನಿಯನ್‌ಗಳ ಕಪಿಮುಷ್ಟಿಯಿಂದ ಉದ್ಯಮವನ್ನು ಪಾರು ಮಾಡಿ ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ತಂದದ್ದು, ಚರಿತ್ರೆಯಲ್ಲೇ ಅತ್ಯಂತ ಕ್ರೂರ ಸರ್ವಾಧಿಕಾರಿ ಶಕ್ತಿಗಳಾದ ರಷ್ಯಾ ಮತ್ತು ಚೀನಾದ ಸೋಷಿಯಲಿಸಂಗೆ ಸರಿಸಮನಾಗಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಿದ್ದು ಸೇರಿದಂತೆ ಕಠಿಣ ಸವಾಲುಗಳ ನಡುವೆಯೂ ಥ್ಯಾಚರ್ ಸಾಧಿಸಿ ತೋರಿಸಿದ್ದರು. ಅದೇ ಹೊತ್ತಿಗೆ ನಾನು ಹೈಕ್‌ ಮತ್ತು ಪಾಪ್ಪರ್ರನ್ನು ಓದಲು ಆರಂಭಿಸಿದ್ದೆ. ಆ ಇಬ್ಬರೂ ಲೇಖಕರನ್ನು ಸ್ವತಃ ಥ್ಯಾಚರ್ ಉಲ್ಲೇಖಿಸುತ್ತಿದ್ದರು. ಮುಕ್ತ ಸಮಾಜ ಮತ್ತು ಅದರ ಶತ್ರುಗಳೇ ೨೦ನೇ ಶತಮಾನದ ನಿರ್ಣಾಯಕ ಅಂಶಗಳು ಎಂದು ಆಕೆ ಹೇಳಿದ್ದರು. ಸೋವಿಯತ್ ಒಕ್ಕೂಟದ ಪತನದೊಂದಿಗೆ, ಸ್ವತಂತ್ರ ಸಂಸ್ಕೃತಿಗೆ ಥ್ಯಾಚರ್ ಮತ್ತು ರೋನಾಲ್ಡ್ ರೀಗನ್ ಅವರ ಕೊಡುಗೆ ಅಪಾರ. ಆದರೆ, ಎಡಪಂಥೀಯ ಪ್ರಭಾವದ ಮಾಧ್ಯಮ ಅದನ್ನು ಬಿಂಬಿಸಲಿಲ್ಲ ಎಂಬುದು ದುರಂತ.

ಹಾಗಾದರೆ, ಈಗ ಪಾಶ್ಚಿಮಾತ್ಯ ಪ್ರಜಾಪ್ರಭುತ್ವಗಳ ದೊಡ್ಡ ಸವಾಲು ಏನು?

ಈಗ ಅದರ ದೊಡ್ಡ ಶತ್ರುವೇ ಪಾಪ್ಯುಲಿಸಂ. ತಲೆ ಸರಿ ಇರುವ ಯಾವುದೇ ವ್ಯಕ್ತಿ ತನ್ನ ದೇಶವನ್ನು ಉತ್ತರ ಕೊರಿಯಾ, ಕ್ಯೂಬಾ ಅಥವಾ ವೆನಿಜುವೆಲಾ ಮಾದರಿಯಲ್ಲಿ ಕಟ್ಟಲು ಬಯಸುವುದಿಲ್ಲ. ಮಾರ್ಕ್ಸ್‌ವಾದ ಈಗಾಗಲೇ ರಾಜಕೀಯ ತೆರೆಮರೆಗೆ ಸರಿಯುತ್ತಿದೆ. ಆದರೆ, ಜನಮೆಚ್ಚುಗೆಯ ಧಾವಂತರ ಪಾಪ್ಯುಲಿಸಂ ಹಾಗಲ್ಲ. ಅದು ಪ್ರಜಾಪ್ರಭುತ್ವವನ್ನು ಒಳಗಿನಿಂದಲೇ ಕೊರೆದು ತಿನ್ನುವ ಗೆದ್ದಲ ಹುಳುವಿನಂತೆ. ಸಿದ್ಧಾಂತದ ರೀತಿಯಲ್ಲದೆ, ಪಾಪ್ಯುಲಿಸಂ ಎಂಬುದು ದುರ್ಬಲ ಪ್ರಜಾಪ್ರಭುತ್ವಗಳು ತಮಗೆ ಅರಿವಿಲ್ಲದಂತೆ ಬಲಿಯಾಗುವ ಅಪಾಯ.

ಅಸಮಾನತೆಯನ್ನು ಇನ್ನಷ್ಟು ಹಿಗ್ಗಿಸಿದ ೨೦೦೮ರ ಬ್ಯಾಂಕ್ ಬಿಕ್ಕಟ್ಟು ಉದಾರವಾದಿ ಸಿದ್ಧಾಂತವನ್ನು ನವಉದಾರವಾದ ಎಂಬ ಹಣೆಪಟ್ಟಿಯೊಂದಿಗೆ ತೀವ್ರ ಟೀಕೆಗೆ ಗುರಿಮಾಡಿತು ಅಲ್ಲವೇ?

ಈ ನವ ಉದಾರವಾದ ಎಂದು ಅವರು ಯಾವುದಕ್ಕೆ ಹೇಳುತ್ತಾರೆ ಎಂಬುದು ನನಗೆ ಸ್ಪಷ್ಟವಿಲ್ಲ. ಅದು ಉದಾರವಾದವನ್ನು ಅಮಾನವೀಯ ಬಂಡವಾಳಶಾಹಿ ಎಂಬಂತೆ ಚಿತ್ರಿಸುವ ಹುನ್ನಾರದ ಪ್ರಯತ್ನ. ಉದಾರವಾದ ಯಾವುದೇ ಕಂದಾಚಾರಗಳಿಗೆ ಈಡಾಗಿಲ್ಲ. ಅಥವಾ ಎಲ್ಲದಕ್ಕೂ ಅದರಲ್ಲಿ ಉತ್ತರವೂ ಇಲ್ಲ. ಅದು ಆಡಂ ಸ್ಮಿತ್ ಕಾಲದಿಂದ ವಿಕಾಸಹೊಂದುತ್ತಾ ಬಂದಿದೆ. ಇದೀಗ ಸಮಾಜದ ಹೆಚ್ಚು ಸಂಕೀರ್ಣಗೊಂಡಿದೆ. ಇವತ್ತು ಕೂಡ, ಹಿಂದೆ ಕಾಣದಂತಹ ಪ್ರಮಾಣದ ಮಹಿಳೆಯರ ವಿರುದ್ಧದ ಅಸಮಾನತೆ, ತಾರತಮ್ಯದಂತಹ ಅನ್ಯಾಯಗಳಿವೆ.

ಉದಾರವಾದದ ಬೇರೆ-ಬೇರೆ ವಿಧಗಳಿಗೆ ಮುಖ್ಯ ಕಾರಣ ರಾಷ್ಟ್ರಪ್ರಭುತ್ವದ ಪಾತ್ರದಲ್ಲಿನ ವ್ಯತ್ಯಾಸ ಅಲ್ಲವೇ?

ಹೌದು, ಉದಾರವಾದಿಗಳು ರಾಷ್ಟ್ರಪ್ರಭುತ್ವವನ್ನು ಬಯಸುತ್ತಾರೆ. ಆದರೆ, ಅದು ವ್ಯಕ್ತಿ ಸ್ವಾತಂತ್ರ್ಯವನ್ನು ಕಬಳಿಸುವಂತಿರಬಾರದು ಎಂದೂ ಬಯಸುತ್ತಾರೆ. ವ್ಯಕ್ತಿ ಸ್ವಾತಂತ್ರ್ಯ, ಸಮಾನ ಅವಕಾಶ- ಅದರಲ್ಲೂ ಮುಖ್ಯವಾಗಿ ಶಿಕ್ಷಣ ಮತ್ತು ಕಾನೂನು ವಿಷಯದಲ್ಲಿ- ಖಾತ್ರಿಪಡಿಸುವ ರಾಷ್ಟ್ರಪ್ರಭುತ್ವ ಉದಾರವಾದಿಗಳ ನಿರೀಕ್ಷೆಯಾಗಿರುತ್ತದೆ. ಆಡಂ ಸ್ಮಿತ್‌ರಿಂದ ಬರ್ಲಿನ್, ಹೈಕ್‌ವರೆಗೆ ಉದಾರವಾದಿ ಚಿಂತಕರ ನಡುವೆ ಹಲವು ಭಿನ್ನತೆಗಳಿದ್ದವು. ಕೆಲವರು ಆರ್ಥಿಕ ಸುಧಾರಣೆಗಳು ಮಾತ್ರ ನಿಜವಾದ ಸ್ವಾತಂತ್ರ್ಯ ತರಬಲ್ಲವು ಎಂದು ಕೆಲವರು ನಂಬಿದ್ದರೆ, ಮತ್ತೆ ಕೆಲವರು ಮುಕ್ತ ಆರ್ಥಿಕ ವ್ಯವಸ್ಥೆಯೇ ಪ್ರಜಾಪ್ರಭುತ್ವಕ್ಕೆ ಮತ್ತು ಅಂತಿಮವಾಗಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾರಕ ಎಂದೂ ನಂಬಿದ್ದರು. ಆದರೆ, ನನ್ನ ಪ್ರಕಾರ ಆರ್ಥಿಕ ಸುಧಾರಣೆಗಿಂತಲೂ ಚಿಂತನೆಗಳು ಬಹಳ ಮುಖ್ಯ. ಆದರೆ, ಭಾಷೆಯ ವಿಷಯದಲ್ಲಿ ಹೇಳುವುದಾದರೆ, ಪ್ರಗತಿಪರರು ಎಂಬ ಪದವನ್ನೇ ತೆಗೆದುಕೊಂಡರೂ, ಸ್ಪೇನ್‌ನಲ್ಲಿ ಅದು ಕ್ಯೂಬಾ ಮತ್ತು ವೆನಿಜುವೆಲಾದ ಸರ್ವಾಧಿಕಾರಿಗಳನ್ನು ಕುರಿತ ಪದವಾಗಿತ್ತು. ಇದು ಬುದ್ದಿಜೀವಿಗಳು ಭಾಷೆಯನ್ನು ಬಳಸಿ ನಡೆಸುವ ಹುನ್ನಾರಗಳಿಗೆ ಒಂದು ನಿದರ್ಶನ. ಅವರು ನಾಜಿಸಂ ಮತ್ತು ಫ್ಯಾಸಿಸಂ ವಿಷಯದಲ್ಲಿ ಅವರು ಮಾಡಿದಂತೆಯೇ ಮಾರ್ಕ್ಸ್‌ವಾದ ಮತ್ತು ಕಮ್ಯುನಿಸಂನ್ನೂ ಬಹಳ ಹೆಮ್ಮೆಯಿಂದಲೇ ಬೆಳೆಸಿದರು. ವಿಶಾಲ ಸಿದ್ಧಾಂತಗಳ ಪರಿಪೂರ್ಣತೆ ಮತ್ತು ಉತ್ತಮ ಗುಣಗಳನ್ನು ಪೂರ್ಣ ಹೊಂದಿರದ ಪ್ರಜಾಪ್ರಭುತ್ವ ಒಂದು ಸಾಧಾರಣ ವ್ಯವಸ್ಥೆ ಎಂಬ ಉಪೇಕ್ಷೆ ಬುದ್ಧಿಜೀವಿಗಳಲ್ಲಿ ಇತ್ತು. ಇಂತಹ ಕುರುಡುತನಕ್ಕೆ ಮೇಧಾಶಕ್ತಿಯ ಕೊರತೆ ಕಾರಣವೇನೂ ಆಗಿರಲಿಲ್ಲ. ಏಕೆಂದರೆ, ಇತ್ತೀಚಿನ ದಿನಗಳಲ್ಲಿ ಜಗತ್ತು ಕಂಡ ಮಹಾ ಬುದ್ಧಿವಂತ ಹೈಡಗರ್‌ ನಾಝಿಯಾಗಲು ಹೇಗೆ ಸಾಧ್ಯವಿತ್ತು? ಕಮ್ಯುನಿಸಂ ವಿಷಯದಲ್ಲೂ ಹಾಗೇ ಆಯಿತು. ಅದೂ ಕೂಡ ದೊಡ್ಡ ಸಂಖ್ಯೆಯಲ್ಲಿ ಕವಿಗಳು, ಲೇಖಕರನ್ನು ಸೆಳೆಯಿತು. ೨೦ನೇ ಶತಮಾನದ ಮಹಾನ್ ಫ್ರೆಂಚ್ ತತ್ವಜ್ಞಾನಿ ಸಾತ್ರೆ ಚೀನಾದ ಸಾಂಸ್ಖೃತಿಕ ಕ್ರಾಂತಿಯನ್ನು ಬೆಂಬಲಿಸಿದ್ದು ಹೇಗೆ?

ಆದರೆ, ಬೌದ್ಧಿಕ ಪ್ರಾಮಾಣಿಕತೆಯ ಪ್ರಶ್ನೆ ಮುಖ್ಯವಲ್ಲವೇ?

ಪ್ರಭುತ್ವವನ್ನು ಸಮರ್ಥಿಸಿಕೊಳ್ಳುವ ಯಾವುದೇ ಎಲೈಟ್‌ ಕೂಡ, ಒಂದು ಹಂತದಲ್ಲಿ ಬಿಕ್ಕಟ್ಟಿಗೆ ಸಿಲುಕುತ್ತಾನೆ. ಅದಕ್ಕೆ ಬರ್ಟೆಂಡ್ ರುಸೆಲ್‌ ಅತ್ಯುತ್ತಮ ಉದಾಹರಣೆ. ಆತ ಬಹಳ ಉದಾತ್ತ ಸಂಗತಿಗಳ ಪರವಿದ್ದ ಮತ್ತು ಬಹಳಷ್ಟು ವಿಷಯದಲ್ಲಿ ಅಭಿಮಾನಪಡುವಂತಹ ಕೆಲಸಗಳನ್ನು ಮಾಡಿದ್ದ. ಆದರೆ, ಅದೇ ಹೊತ್ತಿಗೆ ಅತ್ಯಂತ ಹೀನಾಯ ಸಂಗತಿಗಳಿಗೂ ಆತ ಬೆಂಬಲವಾಗಿ ನಿಂತ. ತನ್ನ ಕೃತಿ ಮತ್ತು ಚಿಂತನೆಯ ಬಗ್ಗೆ ಯಾವುದೇ ಬೆಲೆ ಕೊಡದ, ಕನಿಷ್ಠ ತನ್ನನ್ನು ಓದಿಕೊಂಡಿರದ ಎಡಪಂಥೀಯರ ಕೈಗೊಂಬೆಯಾದ. ಈ ವೈರುಧ್ಯವನ್ನು ನೀವು ಏನನ್ನುತ್ತೀರಿ? ಅದಕ್ಕೆ, ಬುದ್ಧಿವಂತಿಕೆ ಎಂಬುದು ಯಾವಾಗಲೂ ಬೌದ್ಧಿಕ ಪ್ರಾಮಾಣಿಕತೆಯ ಮಾನದಂಡವಾಗಲಾರದು.

ಆ ದೃಷ್ಟಿಯಿಂದ ಕುಚೇಷ್ಠೆಯ ಕೃತಿಗಳನ್ನೂ ನಾವು ಗಮನಿಸುವುದು ಅಗತ್ಯ ಅಲ್ಲವೆ?

ಅಂತಹವನ್ನು ಗಮನಿಸುವುದು ಮಾತ್ರವಲ್ಲ, ಪ್ರಕಟಿಸಲೂಬೇಕು. ಏಕೆಂದರೆ, ಸಾಹಿತ್ಯವನ್ನು ನೀವು ನೈತಿಕ ಮಾನದಂಡಗಳ ಮೇಲೆ ಅಳೆಯಲುಹೊರಟರೆ ಅದು ಕ್ಷೀಣಿಸುತ್ತದೆ ಮತ್ತು ಅಂತಿಮವಾಗಿ ಮರೆಯಾಗಿ ಹೋಗಲೂಬಹುದು. ಹಲವು ಕಾರಣಗಳಿಂದಾಗಿ ವಾಸ್ತವ ಬದುಕು ಯಾವುದನ್ನೆಲ್ಲ ಬಚ್ಚಿಡಲು ಪ್ರಯತ್ನಿಸುತ್ತದೆಯೋ, ಅದೆಲ್ಲವನ್ನೂ ಬಿಚ್ಚಿಡಲು ಸಾಹಿತ್ಯ ಪ್ರಯತ್ನಿಸುತ್ತದೆ. ಸಮಾಜದಲ್ಲಿ ಒಳ್ಳೆಯ ಸಾಹಿತ್ಯದಷ್ಟು ಇನ್ನಾವುದೂ ವಿಮರ್ಶೆಯ ಪ್ರಜ್ಞೆಯನ್ನು ಬೆಳೆಸಲಾರದು. ಆದರೆ, ನೈತಿಕತೆ ಮತ್ತು ಸಾಹಿತ್ಯ ಯಾವಾಗಲೂ ಜೊತೆಯಾಗಿ ಸಾಗಲಾರವು, ಅವು ಬದ್ಧವೈರಿಗಳು. ಹಾಗಾಗಿ, ನೀವು ಸ್ವಾತಂತ್ರ್ಯದ ಪರವಿದ್ದರೆ, ಸಾಹಿತ್ಯವನ್ನೇ ಬೆಂಬಲಿಸಬೇಕು.


ಯಾರಿಗೂ ನೋವಾಗದಂತೆ ನಾಜೂಕಾಗಿ ಮಾತಾಡುವುದು (ಪೊಲಿಟಿಕಲ್ ಕರೆಕ್ಟ್‌ನೆಸ್‌) ಸ್ವಾತಂತ್ರ್ಯಕ್ಕೆ ಅಪಾಯಕಾರಿಯೇ?

ಹೌದು, ಇಂತಹ ನಾಜೂಕು ಮಾತು ಯಾವಾಗಲೂ ಸ್ವಾತಂತ್ರ್ಯದ ಶತ್ರು. ಏಕೆಂದರೆ, ರಾಜಕೀಯವಾಗಿ ಸರಿಯಾಗಿ ಇರುವುದು ಯಾವಾಗಲೂ ಪ್ರಾಮಾಣಿಕತೆಯನ್ನೂ, ಅಧಿಕೃತತೆಯನ್ನೂ ನಿರಾಕರಿಸುತ್ತದೆ. ಸತ್ಯದ ಹೊರತಾದ ದಾರಿಯಲ್ಲಿ ಸಾಗುವುದು ರಾಜಕೀಯ ಸರಿತನ ಎನಿಸುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.

ಇತ್ತೀಚೆಗೆ ಫೇಕ್‌ ನ್ಯೂಸ್ ಎಂಬುದು ಏನೋ ಹೊಸದು ಎಂಬಂತೆ ನಮ್ಮ ಮನಸ್ಸಿಗೆ ನಾಟಿದೆ?

ಹಳೆಯ ವಾಸ್ತವಕ್ಕೆ ಹೊಸ ಪರಿಭಾಷೆ ಅದು. ಕಮ್ಯುನಿಸಂ ಇಂತಹ ಇಂತಹ ಸುಳ್ಳು ವದಂತಿ, ಊಹಾಪೋಹಗಳನ್ನು ಹರಡಿ ಪ್ರಾಮಾಣಿಕರನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು ಹಾದಿ ತಪ್ಪಿಸಲು ಕುಖ್ಯಾತಿಯಾಗಿತ್ತು. ಸುಳ್ಳು ಮತ್ತು ನಕಲಿ ವಿಷಯಗಳನ್ನು ಹರಡಿ ಸತ್ಯವನ್ನು ಮರೆಮಾಚುವಲ್ಲಿ ಅದು ಬಹಳ ಯಶಸ್ಸು ಗಳಿಸಿತ್ತು ಕೂಡ.

ಇದನ್ನೂ ಓದಿ : ಜನುಮ ದಿನ | ಮಾರ್ಕೆಜ್‌ ಬದುಕು ಚಿತ್ರಿಸುವ ಬೃಹತ್ ಸಂಗ್ರಹ ಆನ್‌ಲೈನ್‌ನಲ್ಲಿ

ಸೋವಿಯತ್ ರಷ್ಯಾ ಒಕ್ಕೂಟ ಪತನವಾಗಿದೆ. ಆದರೆ, ಇದೀಗ ಮಾಸ್ಕೋದ ಸೈಬರ್‌ ಷಢ್ಯಂತ್ರಗಳು ಅಮೆರಿಕ, ಕೆಟಲಾನ್‌, ಮೆಕ್ಸಿಕೋ, ಕೊಲಂಬಿಯಾ ಚುನಾವಣೆಗಳನ್ನು ಕೂಡ ತಿರುಚಿದ ಬಗ್ಗೆ ಕೇಳುತ್ತಿದ್ದೇವೆ...

ಈಗ ನಾವು ಕಾಣುತ್ತಿರುವ ತಂತ್ರಜ್ಞಾನದ ಕ್ರಾಂತಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಬದಲು, ದುರ್ಬಲಗೊಳಿಸುತ್ತಿದೆ. ತಂತ್ರಜ್ಞಾನವನ್ನು ಒಳಿತಾಗಿ ಬಳಸುವ ಬದಲು, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ವಿರೋಧಿಗಳು ತಮ್ಮ ಸ್ವಾರ್ಥಸಾಧನೆಗಾಗಿ ಬಳಸುತ್ತಿದ್ದಾರೆ. ನಾವು ಇದನ್ನು ಎದುರಿಸಲೇಬೇಕಿದೆ. ಆದರೆ, ಅದನ್ನು ಎದುರಿಸಲು ನಮಗೆ ತೀರಾ ಕಡಿಮೆ ಅವಕಾಶಗಳಿವೆ ಎಂಬುದು ನನ್ನ ಗ್ರಹಿಕೆ. ಸುಳ್ಳು ಮತ್ತು ಸತ್ಯೋತ್ತರ ಸಂಗತಿಗಳನ್ನು ಪರಿಣಾಮಕಾರಿಯಾಗಿ ಹರಡುವ ತಂತ್ರಜ್ಞಾನವನ್ನು ಬಹುವಾಗಿ ನೆಚ್ಚಿಕೊಂಡಿದ್ದೇವೆ. ಅದರ ಮೇಲಿನ ನಮ್ಮ ಅವಲಂಬನೆಯ ಹಿನ್ನೆಲೆಯಲ್ಲಿ ಅಂತಹ ಶಕ್ತಿಗಳನ್ನು ಎದುರಿಸುವುದು ಕಷ್ಟಸಾಧ್ಯ. ಹಾಗಾಗಿ, ವಿನಾಶಕಾರಿಯಾಗಿ ಪರಿಣಮಿಸಬಹುದು. ನಾಗರಿಕತೆಯನ್ನೇ ಭ್ರಷ್ಟಗೊಳಿಸಬಹುದು. ಪ್ರಜಾಪ್ರಭುತ್ವವನ್ನೆ ಬುಡಮೇಲು ಮಾಡಬಹುದು. ಇದು ನಿಜವಾಗಿಯೂ ಸದ್ಯದ ದೊಡ್ಡ ಆತಂಕ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More