ಹಗರಣದಿಂದ ತತ್ತರಿಸಿರುವ ಪಂಬಾಬ್ ನ್ಯಾಷನಲ್ ಬ್ಯಾಂಕ್ ದಿವಾಳಿಯತ್ತ ಸಾಗಿದೆಯೇ?

ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಮಾಡಿದ ವಂಚನೆಯಿಂದ ಆಗಿರುವ ₹12,800 ಕೋಟಿ ನಷ್ಟ ಹೊಂದಾಣಿಕೆಗೆ ಪಿಎನ್‌ಬಿ ಆರ್‌ಬಿಐ ಬಳಿ ಕಾಲಾವಕಾಶ ಕೋರಿದೆ. ಒಂದು ವೇಳೆ, ಕಾಲಾವಕಾಶ ನೀಡದಿದ್ದರೆ ಪಿಎನ್‌ಬಿ ದಿವಾಳಿಯತ್ತ ಸಾಗಬಹುದು. ಅದನ್ನು ತಡೆಯಲು ಆರ್‌ಬಿಐನಿಂದ ಮಾತ್ರ ಸಾಧ್ಯ!

ಹಗರಣಗಳಿಂದ ತತ್ತರಿಸಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ದಿವಾಳಿಯಂಚಿಗೆ ಸಾಗಿದೆಯೇ? ಈಗ ಬ್ಯಾಂಕ್ ಆರ್ಥಿಕ ಆರೋಗ್ಯ ಪರಿಸ್ಥಿತಿಯನ್ನು ಗಮನಿಸಿದರೆ ದಿವಾಳಿ ಸಮೀಪವಿದೆ ಎನಿಸುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನಿಯಮ ಸಡಿಲಿಸುವ ಮೂಲಕ ಮತ್ತು ಕೇಂದ್ರ ಸರ್ಕಾರ ಬಂಡವಾಳ ಮರುಪೂರಣದ ಮೂಲಕವಷ್ಟೇ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಅನ್ನು ದಿವಾಳಿಯಾಗುವ ಅಪಾಯದಿಂದ ಉಳಿಸಿಕೊಳ್ಳಲು ಸಾಧ್ಯ.

ಹಗರಣದಿಂದಾಗಿ ಪಿಎನ್‌ಬಿ ಆರ್ಥಿಕ ಆರೋಗ್ಯ ಕ್ಷೀಣಿಸುತ್ತಿದೆ. ಬ್ಯಾಂಕಿನ ಮಾರುಕಟ್ಟೆ ಬಂಡವಾಳಕ್ಕಿಂತಲೂ ನಿಷ್ಟ್ರಿಯ ಸಾಲದ ಮೊತ್ತ ಹೆಚ್ಚಿದೆ. ಬ್ಯಾಂಕಿನ ಒಟ್ಟು ನಿವ್ವಳ ಮೌಲ್ಯದಷ್ಟೇ ನಿಷ್ಕ್ರಿಯ ಸಾಲದ ಮೊತ್ತವೂ ಬೆಳೆಯುತ್ತಿದೆ. ಇದು ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗೆ ಅಪಾಯದ ಮಟ್ಟ.

ಈ ಹಿನ್ನೆಲೆಯಲ್ಲೇ, ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ನಡೆಸಿದ ವಂಚನೆಯಿಂದ ₹12,800 ಕೋಟಿ ನಷ್ಟ ಅನುಭವಿಸಿರುವ ಪಿಎನ್‌ಬಿ, ಈ ಬೃಹತ್ ನಷ್ಟ ಹೊಂದಾಣಿಕೆಗೆ ಕಾಲಾವಕಾಶ ನೀಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಮನವಿ ಮಾಡಿದೆ. ಮಾ.31ಕ್ಕೆ ಅಂತ್ಯಗೊಳ್ಳುವ ತ್ರೈಮಾಸಿಕ ಫಲಿತಾಂಶದಲ್ಲಿ ಈ ಬೃಹತ್ ನಷ್ಟವನ್ನು ಹೊಂದಾಣಿಕೆ ಮಾಡಿದರೆ ಬ್ಯಾಂಕ್ ಆರ್ಥಿಕ ಆರೋಗ್ಯಕ್ಕೆ ಹಾನಿಯಾಗುತ್ತದೆ, ಹಾಗಾಗಿ ಕಾಲಾವಕಾಶ ಅವಶ್ಯ ಎಂದು ಪಿಎನ್‌ಬಿ ತಿಳಿಸಿದೆ.

ಆರ್‌ಬಿಐ ಪ್ರಾವಿಷನಿಂಗ್ (ನಷ್ಟ ಹೊಂದಾಣಿಕೆ) ನಿಯಮಗಳ ಪ್ರಕಾರ, ವಂಚನೆ ಪ್ರಕರಣ ಪತ್ತೆಯಾದ ಕೂಡಲೇ ಬ್ಯಾಂಕುಗಳು, ವಂಚನೆಯಾದ ಅಷ್ಟೂ ಮೊತ್ತವನ್ನು ಮುಂದಿನ ತ್ರೈಮಾಸಿಕದ ಬ್ಯಾಲೆನ್ಸ್ ಶೀಟ್‌ನಲ್ಲಿ ಹೊಂದಾಣಿಕೆ ಮಾಡಬೇಕು. ಅಂದರೆ, ಫಲಿತಾಂಶ ಘೋಷಿಸುವಾಗ ವಂಚನೆಯಾದ ಮೊತ್ತವನ್ನು ಬ್ಯಾಲೆನ್ಸ್ ಶೀಟ್‌ನಲ್ಲಿ ನಷ್ಟವೆಂದು ನಮೂದಿಸಬೇಕು.

ಪ್ರಸ್ತುತ ಪಂಜಾಬ್ ನ್ಯಾಷನಲ್ ಬ್ಯಾಂಕ್, ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ನಡೆಸಿರುವ ವಂಚನೆಯಿಂದ ಆಗಿರುವ ನಷ್ಟ ₹12,800 ಕೋಟಿಯನ್ನೂ ಹೊಂದಾಣಿಕೆ ಮಾಡಿ ಬ್ಯಾಲೆನ್ಸ್ ಶೀಟ್‌ನಲ್ಲಿ ನಷ್ಟವೆಂದು ನಮೂದಿಸಿದರೆ, ಬ್ಯಾಂಕ್‌ನ ನಿವ್ವಳ ಮೌಲ್ಯವು ಶೇ.25ರಷ್ಟು ಕುಸಿಯುತ್ತದೆ. ಸದ್ಯ ಪಂಜಾಬ್ ನ್ಯಾಷನಲ್ ಬ್ಯಾಂಕಿನ ನಿವ್ವಳ ಮೌಲ್ಯವು ₹48,000 ಕೋಟಿ. ಮಾರುಕಟ್ಟೆ ಬಂಡವಾಳ ₹24,000 ಕೋಟಿ.

ಪಿಎನ್‌ಬಿ ಆರ್‌ಬಿಐಗೆ ಮಾಡಿರುವ ಮನವಿಯಲ್ಲಿ, “ಒಂದು ವೇಳೆ ಮಾ.31ಕ್ಕೆ ಅಂತ್ಯಗೊಳ್ಳುವ ತ್ರೈಮಾಸಿಕದಲ್ಲೇ ₹12,800 ಕೋಟಿಯನ್ನೂ ಹೊಂದಾಣಿಕೆ ಮಾಡಿದರೆ, ಬ್ಯಾಂಕ್ ನಿವ್ವಳ ಮೌಲ್ಯವು ಶೇ.25ರಷ್ಟು ಕುಸಿಯುತ್ತದೆ. ಇದರಿಂದ ಹೊಸ ಗ್ರಾಹಕರಿಗೆ ಸಾಲ ನೀಡಲು ಮಾರುಕಟ್ಟೆಯಿಂದ ಬಂಡವಾಳ ಸಂಗ್ರಹಿಸಲು ಕಷ್ಟವಾಗುತ್ತದೆ. ಆದ್ದರಿಂದ ಮುಂದಿನ ನಾಲ್ಕು ತ್ರೈಮಾಸಿಕಗಳಲ್ಲಿ ಈ ಮೊತ್ತವನ್ನು ಹೊಂದಾಣಿಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು,” ಎಂದು ಕೋರಿದೆ.

ಆರ್‌ಬಿಐಗೆ ಈ ಕೋರಿಕೆ ಸಲ್ಲಿಸುವುದರ ಹಿಂದೆ ಇರುವ ಪ್ರಮುಖ ಕಾರಣ ಎಂದರೆ, ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಅವರಿಂದ ಶೇ.40ರಷ್ಟು ಮೊತ್ತವನ್ನು ವಸೂಲು ಮಾಡುವ ನಿರೀಕ್ಷೆಯನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೊಂದಿದೆ. ಇದುವರೆಗೆ ಜಾರಿ ನಿರ್ದೇಶನಾಲಯವು ವಿವಿಧೆಡೆ ದಾಳಿ ನಡೆಸಿ ವಶಪಡಿಸಿಕೊಂಡಿರುವ ರಿಯಲ್ ಎಸ್ಟೇಟ್ ಆಸ್ತಿ, ಆಭರಣಗಳ ದಾಸ್ತಾನು ಸುಮಾರು ₹6,000 ಕೋಟಿಯಷ್ಟಿದೆ ಎಂದು ಅಂದಾಜು ಮಾಡಲಾಗಿದೆ. ಆದರೆ, ಆಭರಣಗಳ ದಾಸ್ತಾನುಗಳ ವಾಸ್ತವಿಕ ಮೌಲ್ಯಮಾಪನ ಮಾಡಿಲ್ಲ.

ಮೆಹುಲ್ ಚೊಕ್ಸಿ ನಕಲಿ ವಜ್ರಗಳ ಮಾರಾಟ ಮತ್ತು ವಾಸ್ತವಿಕ ಬೆಲೆಯ ಹತ್ತಾರು ಪಟ್ಟು ದರ ನಮೂದಿಸಿ ಮಾರಾಟ ಮಾಡಿ ಗ್ರಾಹಕರಿಗೆ ವಂಚಿಸಿರುವ ಆರೋಪಗಳಿವೆ. ಹೀಗಾಗಿ, ರಿಯಲ್ ಎಸ್ಟೇಟ್ ಆಸ್ತಿಯ ಮೌಲ್ಯ ಅಂದಾಜಿಸಿದಷ್ಟೇ ಇರಬಹುದು. ಆದರೆ, ವಶಪಡಿಸಿಕೊಂಡಿರುವ ಆಭರಣಗಳ ದಾಸ್ತಾನುಗಳ ವಾಸ್ತವಿಕ ಮೌಲ್ಯವು ಈಗ ತಾತ್ಕಾಲಿಕವಾಗಿ ಅಂದಾಜಿಸಿರುವುದಕ್ಕಿಂತ ಅತ್ಯಂಕ ಕಡಮೆ ಆಗಬಹುದು. ಹೀಗಾಗಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚಕರ ಆಸ್ತಿ ವಿಲೇವಾರಿಯಿಂದ ಶೇ.40ರಷ್ಟು ಸಾಲದ ಮೊತ್ತವನ್ನು ವಸೂಲು ಮಾಡುವ ನಿರೀಕ್ಷೆ ಇಟ್ಟುಕೊಂಡಿದೆ.

ಒಟ್ಟು ವಂಚನೆಯಾದ ಮೊತ್ತದಲ್ಲಿ ಶೇ.40ರಷ್ಟು ವಸೂಲಾದರೆ, ಬ್ಯಾಂಕಿನ ಹೊರೆ ಗಣನೀಯವಾಗಿ ತಗ್ಗುವುದರಿಂದ ಬ್ಯಾಂಕು ಬಂಡವಾಳ ಮಾರುಕಟ್ಟೆಯಲ್ಲಿ ನಿಧಿ ಸಂಗ್ರಹಿಸಲು ಅನುಕೂಲವಾಗುತ್ತದೆ. ಹೀಗಾಗಿ, ನಷ್ಟ ಹೊಂದಾಣಿಕೆಗೆ ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ಕೋರಿದೆ.

ಇದನ್ನೂ ಓದಿ : ಐ ಡಿಬೇಟ್ 7 | ನೀರವ್ ಮೋದಿ ಬ್ಯಾಂಕ್ ಲೂಟಿಗೆ ರಾಜಕೀಯ ಪಕ್ಷಗಳೇ ಕಾರಣವಲ್ಲವೇ?

ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಆರ್‌ಬಿಐ ಸಹ ಪಿಎನ್‌ಬಿ ಮನವಿಯನ್ನು ಪರಿಗಣಿಸುವ ಸಾಧ್ಯತೆ ಇದೆ. ಏಕೆಂದರೆ, ವಂಚನೆ ಪ್ರಕರಣದಲ್ಲಿ ಪಿಎನ್‌ಬಿಯ ಒಪ್ಪಂದ ಪತ್ರವನ್ನು ಆಧರಿಸಿ ಇತರ ಬ್ಯಾಂಕುಗಳು ಸಾಲ ನೀಡಿವೆ. ಈ ರೀತಿ ಸಾಲ ನೀಡುವಾಗ ಒಪ್ಪಂದ ಪತ್ರಗಳು ಆರ್‌ಬಿಐ ನಿಗದಿ ಮಾಡಿದ ಅವಧಿಯನ್ನು ಮೀರಿದ್ದರೂ, ನಿಯಮಗಳನ್ನು ಮೀರಿ ಇತರ ಬ್ಯಾಂಕುಗಳು ಸಾಲ ನೀಡಿವೆ. ಈ ಸಾಲದ ಹೊರೆಯನ್ನು ಇತರ ಬ್ಯಾಂಕುಗಳು ಹೊರಬೇಕು ಎಂದು ವಂಚನೆ ಪ್ರಕರಣ ಹೊರಬಿದ್ದಾಗ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಾದಿಸಿತ್ತು. ಆದರೆ, ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ಗ್ರಾಹಕರಿಗೆ ಇರುವ ವಿಶ್ವಾಸಕ್ಕೆ ಧಕ್ಕೆ ಬರಬಾರದು ಎಂಬ ಕಾರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ವಂಚನೆ ಪ್ರಕರಣದ ಪೂರ್ಣ ಹೊಣೆಯನ್ನು ಪಿಎನ್‌ಬಿ ಹೊರಬೇಕು ಎಂದು ತಾಕೀತು ಮಾಡಿತ್ತು. ತನ್ನ ಆದೇಶವನ್ನು ಪಿಎನ್‌ಬಿ ಯಾವುದೇ ತಕರಾರಿಲ್ಲದೆ ಒಪ್ಪಿರುವುದರಿಂದ ಸಮಯಾವಕಾಶ ಕೋರಿರುವ ಮನವಿಯನ್ನು ಆರ್‌ಬಿಐ ಒಪ್ಪಬಹುದು.

ಪ್ರಕರಣದ ತನಿಖೆ ಪ್ರಗತಿಯಲ್ಲಿ ಇರುವುದರಿಂದ ಸದ್ಯಕ್ಕೆ ನಷ್ಟ ಹೊಂದಾಣಿಕೆಗೆ ಮೊತ್ತ ನಿಗದಿ ಮಾಡುವ ಸ್ಥಿತಿಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಆಡಳಿತ ಮಂಡಳಿ ಇಲ್ಲ. ಪಿಎನ್‌ಬಿಗೆ ಕೇವಲ ನೀರವ್ ಮೋದಿ, ಮೆಹುಲ್ ಚೊಕ್ಸಿ ವಂಚನೆಯಿಂದಾಗಿರುವ ನಷ್ಟವಷ್ಟೇ ಅಲ್ಲ, ₹32,000 ಕೋಟಿ ನಿಷ್ಟ್ರಿಯ ಸಾಲದ ಹೊರೆಯೂ ಇದೆ. ಹೀಗಾಗಿ, ನಿಷ್ಕ್ರಿಯ ಸಾಲದ ಮೊತ್ತಕ್ಕೂ ನಷ್ಟ ಹೊಂದಾಣಿಕೆ ಮೀಸಲಿಡಬೇಕು. ಪ್ರಸ್ತುತ ಪಿಎನ್‌ಬಿ ಮನವಿಯನ್ನು ಆರ್‌ಬಿಐ ಪರಿಗಣಿಸಲೇಬೇಕಿದೆ. ಇಲ್ಲದಿದ್ದರೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ ದಿವಾಳಿಯಂಚಿಗೆ ತಲುಪುತ್ತದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More