ಸಕ್ಕರೆ ಉದ್ಯಮ ರಕ್ಷಿಸಲು ರಫ್ತು ಸುಂಕ ರದ್ದು ಮಾಡಲಿದೆಯೇ ಕೇಂದ್ರ ಸರ್ಕಾರ?

ಭಾರತದಲ್ಲಿ ಸಕ್ಕರೆ ದರ ಏರಿಳಿತ ವಿಚಿತ್ರ ಸನ್ನಿವೇಶ ಸೃಷ್ಟಿಸುತ್ತದೆ. ಸಕ್ಕರೆ ದರ ಕುಸಿದಾಗಲೆಲ್ಲ ಗ್ರಾಹಕರಿಗೆ ಸಿಹಿ ಆಗಬಹುದು. ಆದರೆ, ಉದ್ಯಮಕ್ಕೆ ಕಹಿಯಾಗುತ್ತದೆ. ಸದ್ಯ ಸಕ್ಕರೆ ಉತ್ಪಾದನೆ ಏರುವ ಅಂದಾಜು ಇದ್ದು, ದರ ಕುಸಿಯಲಿದೆ. ಉದ್ಯಮ ಈಗ ಕೇಂದ್ರ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದೆ

ಸಕ್ಕರೆ ಉದ್ಯಮ ಈಗ ಸಂಕಷ್ಟಕ್ಕೆ ಸಿಲುಕಿದೆ. ಸಕ್ಕರೆ ಉದ್ಯಮ ಸಂಕಷ್ಟಕ್ಕೆ ಸಿಲುಕಲು ಮುಖ್ಯ ಕಾರಣ ಉತ್ಪಾದನೆ ಕುಂಠಿತವಲ್ಲ, ನಿರೀಕ್ಷೆ ಮೀರಿದ ಉತ್ಪಾದನೆ!

ಸಕ್ಕರೆ ಉದ್ಯಮ ವಿಶಿಷ್ಟವಾದದ್ದು. ಇಲ್ಲಿ ಉತ್ಪಾದನೆ ಹೆಚ್ಚಾದರೆ ಇಡೀ ಉದ್ಯಮವೇ ಸಂಕಷ್ಟ ಎದುರಿಸುತ್ತದೆ. ಒಂದು ವೇಳೆ ಉತ್ಪಾದನೆ ಕುಸಿದರೋ ಇಡೀ ಗ್ರಾಹಕ ಸಮೂಹ ಸಂಕಷ್ಟಕ್ಕೀಡಾಗುತ್ತದೆ. ಪ್ರಸ್ತುತ ವರ್ಷದಲ್ಲಿ ನಿರೀಕ್ಷೆ ಮೀರಿ ಸಕ್ಕರೆ ಉತ್ಪಾದನೆ ಆಗಲಿದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ (ಐಎಸ್ಎಂಎ) ಅಂದಾಜಿಸಿದೆ. 2017-18ನೇ ಸಕ್ಕರೆ ವರ್ಷದಲ್ಲಿ ಈ ಹಿಂದೆ ಅಂದಾಜು ಮಾಡಿದ ಉತ್ಪಾದನೆ 26.1 ದಶಲಕ್ಷ ಟನ್. ಈಗ ಪರಿಷ್ಕೃತ ಅಂದಾಜಿನಂತೆ ಸಕ್ಕರೆ ಉತ್ಪಾದನೆಯು 29.5 ದಶಲಕ್ಷ ಟನ್.

ಸಕ್ಕರೆ ಉತ್ಪಾದನೆ ಹೆಚ್ಚಾಗಲಿರುವ ಅಂಕ-ಅಂಶಗಳು ಬಹಿರಂಗವಾದ ನಂತರ ಸಗಟು ಮಾರುಕಟ್ಟೆಯಲ್ಲಿ ಸಕ್ಕರೆ ದಿಢೀರ್ ಕುಸಿದಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಷೇರುಪೇಟೆಯಲ್ಲಿ ಸಕ್ಕರೆ ಕಂಪನಿಗಳ ಷೇರುಗಳು ಪಾತಾಳಕ್ಕೆ ಇಳಿದಿವೆ. ಬಹುತೇಕ ಸಕ್ಕರೆ ಕಂಪನಿಗಳ ಷೇರುಗಳ ದರ ಈಗ ವರ್ಷದ ಕನಿಷ್ಠ ಮಟ್ಟಕ್ಕೆ ಕುಸಿದಿವೆ ಮತ್ತು ದಿನದಿಂದ ದಿನಕ್ಕೆ ಈ ಮಟ್ಟ ಇಳಿಯುತ್ತಲೇ ಇದೆ.

ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾ ಮಂಡಳ (ಎನ್ಎಫ್‌ಸಿಎಸ್ಎಫ್) ಮತ್ತು ಐಎಸ್ಎಂಎ ಈಗ ಕೇಂದ್ರ ಸರ್ಕಾರದತ್ತ ಮುಖ ಮಾಡಿವೆ. ಕೇಂದ್ರ ಸರ್ಕಾರ ರಫ್ತು ಸುಂಕವನ್ನು ರದ್ದು ಮಾಡಬೇಕು ಎಂಬುದು ಉಭಯ ಸಂಘಟನೆಗಳ ಒತ್ತಾಯವಾಗಿದೆ.

ಪ್ರಸ್ತುತ ಕೇಂದ್ರ ಸರ್ಕಾರ ವಿಧಿಸುತ್ತಿರುವ ಸಕ್ಕರೆ ರಫ್ತು ಸುಂಕ ಶೇ.20ರಷ್ಟಿದೆ. ಸಕ್ಕರೆ ಕಾರ್ಖಾನೆಗಳು ರಫ್ತು ಮಾಡಬೇಕಾದರೆ ಶೇ.20ರಷ್ಟು ಸುಂಕ ಪಾವತಿಸಬೇಕು. ಈಗಾಗಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಸಕ್ಕರೆ ದರ ಈಗಾಗಲೇ ದೇಶೀಯ ಸಕ್ಕರೆ ದರಕ್ಕಿಂತ ಇಳಿದಿದೆ. ಹೀಗಾಗಿ, ಸಕ್ಕರೆ ಉತ್ಪಾದಕರು ಸುಂಕ ಪಾವತಿಸಿ ರಫ್ತು ಮಾಡಿದರೆ ಮತ್ತಷ್ಟು ನಷ್ಟಕ್ಕೆ ಈಡಾಗುತ್ತಾರೆ.

“ಸರ್ಕಾರ ತ್ವರಿತವಾಗಿ ಸಕ್ಕರೆ ಮೇಲಿನ ರಫ್ತು ಸುಂಕ ರದ್ದು ಮಾಡಲಿದೆ ಎಂಬ ನಿರೀಕ್ಷೆಯಲ್ಲಿ ನಾವಿದ್ದೇವೆ,” ಎನ್ನುತ್ತಾರೆ ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾ ಮಂಡಳದ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ನಾಯಕ್.

ಗ್ರಾಹಕರ ಬಳಕೆಯಲ್ಲದೆ ಸಿಹಿ ಉದ್ಯಮದ ಬಳಕೆಯೂ ಸೇರಿದಂತೆ ದೇಶೀಯ ಸಕ್ಕರೆ ಬಳಕೆ ಪ್ರಮಾಣವು ಸದ್ಯಕ್ಕೆ 26 ದಶಲಕ್ಷ ಟನ್ ಎಂದು ಅಂದಾಜಿಸಲಾಗಿದೆ. ಈಗಿನ ನಿರೀಕ್ಷಿತ ಉತ್ಪಾದನೆಯಂತೆ 3.5 ದಶಲಕ್ಷ ಟನ್ ಸಕ್ಕರೆ ಹೆಚ್ಚುವರಿಯಾಗಲಿದೆ.

ಸಕ್ಕರೆ ಉತ್ಪಾದನೆಯು ಐದರಿಂದ ಆರು ತಿಂಗಳಲ್ಲಿ ಪೂರ್ಣಗೊಂಡರೂ, ಉತ್ಪಾದನೆಯಾದ ಸಕ್ಕರೆ ವಿಲೇವಾರಿ ಆಗಲು ವರ್ಷವೇ ಬೇಕಾಗುತ್ತದೆ. ಸಕ್ಕರೆ ಉತ್ಪಾದಿಸಿ ದಾಸ್ತಾನು ಇಟ್ಟುಕೊಂಡ ಉತ್ಪಾದಕರು ಬ್ಯಾಂಕುಗಳಿಂದ ಪಡೆದ ಸಾಲವನ್ನು ಮರುಪಾವತಿಸಬೇಕು, ಇತ್ತ ಕಬ್ಬು ಸರಬರಾಜು ಮಾಡಿದ ರೈತರಿಗೂ ಬಾಕಿ ಪಾವತಿಸಬೇಕು. ಸಕ್ಕರೆ ವಿಲೇವಾರಿ ಆಗದೇ ಸಾಲ ಮತ್ತು ಬಾಕಿ ಪಾವತಿಸುವುದು ಕಷ್ಟವಾಗುತ್ತದೆ.

“ನಾವು ಈಗಾಗಲೇ ಪ್ರತಿ ಕೆಜಿ ಸಕ್ಕರೆಗೆ 2 ರುಪಾಯಿ ನಷ್ಟ ಮಾಡಿಕೊಳ್ಳುತ್ತಿದ್ದೇವೆ. ಸಕ್ಕರೆ ಕಾರ್ಖಾನೆಯಿಂದ ಹೊರಹೋಗುವ ಸಕ್ಕರೆಯ ದರ 32 ರುಪಾಯಿ ಇದೆ. ಆದರೆ, ಸಕ್ಕರೆ ಉತ್ಪಾದನೆ ದರ 34 ರುಪಾಯಿ ಆಗುತ್ತದೆ,” ಎನ್ನುತ್ತಾರೆ ತ್ರಿವೇಣಿ ಎಂಜಿನಿಯರಿಂಗ್ ಅಂಡ್ ಇಂಡಸ್ಟ್ರೀಸ್ ಉಪಾಧ್ಯಕ್ಷ ತರುಣ್ ಶಹನೆ. 10 ದಶಲಕ್ಷ ಟನ್ ಸಕ್ಕರೆ ಉತ್ಪಾದನೆ ಮಾಡುತ್ತಿರುವ ಉತ್ತರ ಪ್ರದೇಶದಿಂದಲೇ ಸುಮಾರು 2,000 ಕೋಟಿ ರುಪಾಯಿ ನಷ್ಟವಾಗುತ್ತಿದೆ ಎನ್ನುತ್ತಾರವರು.

ಕಬ್ಬಿನ ದರ ನಿಗದಿ ಮಾಡುವ ಅಧಿಕಾರ ಸಕ್ಕರೆ ಕಾರ್ಖಾನೆಗಳಿಗೆ ಇಲ್ಲ. ಕೇಂದ್ರ ಸರ್ಕಾರ ನಿಗದಿ ಮಾಡಿದ ದರ ಪಾವತಿಸಬೇಕು. ಸಕ್ಕರೆ ಉತ್ಪಾದನೆ ವೆಚ್ಚ ಮತ್ತು ಸಕ್ಕರೆ ದರಕ್ಕೆ ಅನುಗುಣವಾಗಿ ಕಬ್ಬಿನ ದರ ನಿಗದಿಯಾಗುವುದಿಲ್ಲ. ಇದು ಎರಡು ರೀತಿಯ ಸಮಸ್ಯೆಗೆ ಕಾರಣವಾಗುತ್ತದೆ. ಸಕ್ಕರೆ ವಿಲೇವಾರಿ ಆಗದೆ ಕಾರ್ಖಾನೆಗಳಿಗೆ ಹಣ ಬರುವುದಿಲ್ಲ. ಹಣ ಬಾರದೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಹಣ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ : ಕೃಷಿ ವಲಯದ ಬೆಳವಣಿಗೆ ದರ ಇಳಿಕೆ; ಕರ್ನಾಟಕ ಆರ್ಥಿಕ ಸಮೀಕ್ಷೆ ಕಳವಳ

ಈ ಸಮಸ್ಯೆ ಬೃಹತ್ತಾಗಿ ಬೆಳೆದಿದೆ. ಐಎಸ್ಎಂಎ ಪ್ರಕಾರ, 2018 ಜನವರಿ ಅಂತ್ಯದವರೆಗೆ ದೇಶದಲ್ಲಿರುವ ಸಕ್ಕರೆ ಕಾರ್ಖಾನೆಗಳು ಕಬ್ಬು ಸರಬರಾಜು ಮಾಡಿದ ರೈತರಿಗೆ ಪಾವತಿಸಬೇಕಾದ ಮೊತ್ತ 13,932 ಕೋಟಿ ರುಪಾಯಿಗೆ ಏರಿದೆ. ಬಾಕಿ ಪಾವತಿಯಲ್ಲಿ ಕರ್ನಾಟಕದ ಸಕ್ಕರೆ ಕಾರ್ಖಾನೆಗಳು ಎರಡನೇ ಸ್ಥಾನದಲ್ಲಿವೆ. ಉತ್ತರ ಪ್ರದೇಶದ ಸಕ್ಕರೆ ಕಾರ್ಖಾನೆಗಳು ಅತಿ ಹೆಚ್ಚು ಅಂದರೆ, 5,553 ಕೋಟಿ ರುಪಾಯಿ ಬಾಕಿ ಉಳಿಸಿಕೊಂಡಿವೆ. 2,714 ಕೋಟಿ ರುಪಾಯಿ, ಮಹಾರಾಷ್ಟ್ರ 2636 ಕೋಟಿ ರುಪಾಯಿ ಬಾಕಿ ಉಳಿಸಿಕೊಂಡಿವೆ.

ಈಗ ಕೇಂದ್ರ ಸರ್ಕಾರ ರಫ್ತು ಸುಂಕ ರದ್ದು ಮಾಡಿದರೆ, ಹೆಚ್ಚುವರಿ ಸಕ್ಕರೆಯನ್ನು ಕಾರ್ಖಾನೆಗಳು ರಫ್ತು ಮಾಡಬಹುದು. ರಫ್ತು ಸುಂಕವನ್ನೂ ಪಾವತಿಸಿ ರಫ್ತು ಮಾಡುವುದು ಭಾರಿ ನಷ್ಟಕ್ಕೆ ಕಾರಣವಾಗುವುದರಿಂದ ದೇಶೀಯ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕಾಗುತ್ತದೆ. ಆಗ ಮಿತಿ ಮೀರಿದ ಪೂರೈಕೆಯಿಂದಾಗಿ ಈಗಾಗಲೇ ಕುಸಿದಿರುವ ಸಕ್ಕರೆ ದರ ಮತ್ತಷ್ಟು ಕುಸಿಯಬಹುದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More