ದಾಖಲೆ ಇದ್ದರೂ ಕಾರಣ ನೀಡದೆ ೩೧೦ ಪ್ರಕರಣ ಮುಕ್ತಾಯ ಮಾಡಿದ ಲೋಕಾಯುಕ್ತರು!

ಲೋಕಾಯುಕ್ತ ನ್ಯಾ.ವಿಶ್ವನಾಥ ಶೆಟ್ಟಿ ಅವರಿಗೆ ಇರಿದಿದ್ದ ತೇಜರಾಜ್‌ ವಿರುದ್ಧ ತನಿಖೆ ತೀವ್ರಗೊಂಡಿದೆ. ದೂರು ಮುಕ್ತಾಯ ಆಗಿದ್ದರಿಂದ ಆಕ್ರೋಶಗೊಂಡು ಇರಿದಿದ್ದ ಎನ್ನಲಾಗಿದೆ. ಈ ನಡುವೆಯೇ, ಉನ್ನತ ಅಧಿಕಾರಿಗಳ ವಿರುದ್ಧದ ದೂರುಗಳು ಮುಕ್ತಾಯಗೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ

ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಮಹೇಂದ್ರ ಜೈನ್ (ಈಗ ಬಿಎಂಆರ್‌ಸಿಎಲ್‌ ಎಂಡಿ) ಅವರ ವಿರುದ್ಧ ಕರ್ತವ್ಯ ಲೋಪ ಆರೋಪದಡಿ ದಾಖಲಾಗಿದ್ದ ಸ್ವಯಂಪ್ರೇರಿತ ದೂರು ಯಾವುದೇ ಷರಾ ಇಲ್ಲದೆ ಮುಕ್ತಾಯಗೊಂಡಿದೆ. ವಿಶೇಷ ಎಂದರೆ, ಈ ದೂರು ಲೋಕಾಯುಕ್ತ ವಿಶ್ವನಾಥ ಶೆಟ್ಟಿ ಅವರ ಆದೇಶದ ಮೇರೆಗೆ ದಾಖಲಾಗಿತ್ತು. ಇದೊಂದೇ ದೂರು ಅಲ್ಲ, ಲೋಕಾಯುಕ್ತರ ಪರಿಧಿಗೆ ಒಳಪಡುವ ಹಲವು ದೂರುಗಳು ಮುಕ್ತಾಯಗೊಂಡಿರುವುದು ತಿಳಿದುಬಂದಿದೆ.

ವಿಶ್ವನಾಥ ಶೆಟ್ಟಿ ಅವರು ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ನಂತರ ಲೋಕಾಯುಕ್ತರ ಪರಿಧಿಗೆ ಒಳಪಡುವ ಒಟ್ಟು ೩೧೦ ದೂರುಗಳು ಮುಕ್ತಾಯಗೊಂಡಿವೆ. ಈ ಬಗ್ಗೆ ‘ದಿ ಸ್ಟೇಟ್‌’ ಮಾಹಿತಿ ಹಕ್ಕಿನ ಅಡಿಯಲ್ಲಿ ವಿವರ ಪಡೆದುಕೊಂಡಿದೆ. ದೂರನ್ನು ಸೂಕ್ತ ರೀತಿಯಲ್ಲಿ ವಿಚಾರಣೆ ನಡೆಸದೆಯೇ ಮುಕ್ತಾಯಗೊಳಿಸಲಾಗಿದೆ ಎಂಬ ಕಾರಣವೊಡ್ಡಿ ತೇಜರಾಜ್‌ ಶರ್ಮ ಎಂಬಾತ ಲೋಕಾಯುಕ್ತ ವಿಶ್ವನಾಥ ಶೆಟ್ಟಿ ಅವರಿಗೆ ಚೂರಿ ಇರಿದಿದ್ದ ಘಟನೆ ಬೆನ್ನಲ್ಲೇ, ಸೂಕ್ತ ಕಾರಣಗಳನ್ನು ನೀಡದೆ ೩೧೦ ದೂರುಗಳನ್ನು ಮುಕ್ತಾಯಗೊಳಿಸಿರುವುದು ಬಹಿರಂಗವಾಗಿವೆ.

ಅಕ್ರಮ, ನಿಯಮಬಾಹಿರ ಚಟುವಟಿಕೆ, ಉಲ್ಲಂಘನೆ, ಕರ್ತವ್ಯ ಲೋಪ, ವಂಚನೆ, ಅಧಿಕಾರ ದುರುಪಯೋಗ, ಸರ್ಕಾರದ ಅನುದಾನ ದುರುಪಯೋಗ, ಅನುಮೋದನೆ ಇಲ್ಲದೆ ಕೋಟ್ಯಂತರ ರುಪಾಯಿ ಮೊತ್ತದಲ್ಲಿ ನಡೆಸಿರುವ ಖರೀದಿ ಪ್ರಕ್ರಿಯೆಗಳು ಸೇರಿದಂತೆ ಇನ್ನಿತರ ಗಂಭೀರ ಆರೋಪಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತರು, ಸರ್ಕಾರದ ಹಿರಿಯ ಅಧಿಕಾರಿಗಳು ದಾಖಲೆ, ಪುರಾವೆ ಸಮೇತ ದೂರುಗಳನ್ನು ಸಲ್ಲಿಸಿದ್ದರು. ವಿಶ್ವನಾಥ್ ಶೆಟ್ಟಿ ಅವರು ಅಧಿಕಾರ ವಹಿಸಿಕೊಂಡ ನಂತರ ಅವೆಲ್ಲವೂ ಮುಕ್ತಾಯಗೊಂಡಿದೆ. ಸೂಕ್ತ ಕಾರಣಗಳನ್ನು ನೀಡದೆ ದೂರುಗಳನ್ನು ಮುಕ್ತಾಯಗೊಳಿಸಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಕಳೆದ ಒಂದು ವರ್ಷದಲ್ಲಿ 310 ಪ್ರಕರಣ ಮುಕ್ತಾಯಗೊಂಡಿವೆ. ಈ ಪೈಕಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆಯುಕ್ತರು, ನಿರ್ದೇಶಕರು ಸೇರಿದಂತೆ ಹಿರಿಯ ಐಎಎಸ್‌, ಐಪಿಎಸ್‌, ಐಎಫ್‌ಎಸ್‌, ಕೆಎಎಸ್‌ ಅಧಿಕಾರಿಗಳು ಹಾಗೂ ಪ್ರಭಾವಿಗಳ ವಿರುದ್ಧದ ಪ್ರಕರಣಗಳು ಸೇರಿವೆ. ಲೋಕಾಯುಕ್ತ ವಿಶ್ವನಾಥ ಶೆಟ್ಟಿ ಅವರ ಮೌಖಿಕ ಮತ್ತು ಲಿಖಿತ ಆದೇಶದ ಮೂಲಕ ಸ್ವಯಂಪ್ರೇರಿತವಾಗಿ ದಾಖಲಾಗಿದ್ದ ದೂರುಗಳು ಕೂಡ ಮುಕ್ತಾಯಗೊಂಡಿರುವ ಪ್ರಕರಣಗಳ ಪಟ್ಟಿಯಲ್ಲಿ ಸೇರಿರುವುದು ವಿಶೇಷ.

“ಯಾವುದೇ ಪ್ರಕರಣ ದಾಖಲಿಸಿಕೊಂಡ ನಂತರ ಪ್ರಾಥಮಿಕ ವಿಚಾರಣೆ, ನಂತರ ತನಿಖೆ ಸೇರಿದಂತೆ ಇತರ ಪ್ರಕ್ರಿಯೆಗಳು ನಡೆಯಬೇಕು. ಆದರೆ, ಸೂಕ್ತ ರೀತಿಯಲ್ಲಿ ತನಿಖೆ ನಡೆಸದೆ ತರಾತುರಿಯಲ್ಲಿ ಹಲವು ಪ್ರಕರಣಗಳನ್ನು ಮುಕ್ತಾಯಗೊಳಿಸಿರುವುದು ಸಂಶಯಕ್ಕೆ ಕಾರಣವಾಗಿದೆ. ಪ್ರಕರಣಗಳನ್ನು ಮುಕ್ತಾಯಗೊಳಿಸಿರುವ ಬಗ್ಗೆ ಸೂಕ್ತ ವಿವರಣೆ ನೀಡಿಲ್ಲ,” ಎಂದು ಆರೋಪಿಸುತ್ತಾರೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ.

ಮುಖ್ಯ ಕಾರ್ಯದರ್ಶಿ ಆಗಿದ್ದ ಸುಭಾಷ್‌ ಚಂದ್ರ ಕುಂಟಿಆ, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಗಿದ್ದ ಮಹೇಂದ್ರ ಜೈನ್‌, ಡಿಜಿ-ಐಜಿಪಿಯಾಗಿದ್ದ ರೂಪಕ್‌ ಕುಮಾರ್‌ ದತ್ತಾ, ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ ಶಂಕರ್‌, ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾಗಿದ್ದ ಸುಬೋಧ್‌ ಯಾದವ್, ಐಎಫ್‌ಎಸ್‌ ಅಧಿಕಾರಿ ಕಾಂತರಾಜು, ಉದ್ಯೋಗ, ತರಬೇತಿ ನಿರ್ದೇಶನಾಲಯದ ಆಯುಕ್ತ ಸಮೀರ್‌ ಶುಕ್ಲಾ, ಬಿಡಿಎ ಆಯುಕ್ತ ರಾಕೇಶ್‌ ಸಿಂಗ್, ರಾಜಕುಮಾರ್‌ ಖತ್ರಿ, ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ತಳವಾರ್‌ , ಡಿಪಿಎಆರ್‌ ಕಾರ್ಯದರ್ಶಿ ಆಗಿದ್ದ ಟಿ ಕೆ ಅನಿಲ್‌ಕುಮಾರ್‌, ಐಎಎಸ್‌ ಅಧಿಕಾರಿ ಜಿ ಸತ್ಯವತಿ, ಬಿ ಆರ್‌ ಮಮತಾ, ವಿ ಮಂಜುಳ, ಅಬಕಾರಿ ಇಲಾಖೆ ಆಯುಕ್ತ ಮಂಜುನಾಥ ನಾಯಕ್‌, ಎಂ ರವಿಶಂಕರ್‌, ಐಎಸ್‌ಎನ್‌ ಪ್ರಸಾದ್‌, ಬೆಂಗಳೂರು ನಗರ ಪೊಲೀಸ್‌ ಆಯುಕ್ತರು, ಐಪಿಎಸ್‌ ಅಧಿಕಾರಿ ಆರ್‌ ಪಿ ಶರ್ಮಾ, ವಿಕ್ಟೋರಿಯಾ ಆಸ್ಪತ್ರೆ ನಿರ್ದೇಶಕ ಡಾ.ಸಚ್ಚಿದಾನಂದ, ಕರ್ನಾಟಕ ವಿವಿ ಕುಲಪತಿ ಸೇರಿದಂತೆ ಹಲವು ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ತಹಶೀಲ್ದಾರ್‌ಗಳ ವಿರುದ್ಧದ ಪ್ರಕರಣಗಳು ಮುಕ್ತಾಯಗೊಂಡಿವೆ.

ಅಧಿಕಾರಿ ಮಹೇಂದ್ರ ಜೈನ್‌ ವಿರುದ್ಧ ದೂರು ಮುಕ್ತಾಯಗೊಂಡಿರುವ ಮಾಹಿತಿಯ ಪ್ರತಿ

ದುರಾಡಳಿತ ಕುರಿತಂತೆ ವಿಕ್ಟೋರಿಯಾ ಆಸ್ಪತ್ರೆಯ ನಿರ್ದೇಶಕ ಡಾ.ಸಚ್ಚಿದಾನಂದ ಅವರ ವಿರುದ್ಧ ಲೋಕಾಯುಕ್ತರ ಲಿಖಿತ ಆದೇಶದ ಮೂಲಕ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣವೂ ಮುಕ್ತಾಯಗೊಂಡಿದೆ. ಹಿರಿಯ ಕೆಎಎಸ್‌ ಅಧಿಕಾರಿ ಕೆ ಮಥಾಯ್‌ ಅವರು ಹಿರಿಯ ಐಎಎಸ್‌ ಅಧಿಕಾರಿಗಳ ದುರಾಡಳಿತದ ವಿರುದ್ಧ ೧೦೦ಕ್ಕೂ ಹೆಚ್ಚು ದಾಖಲಾತಿಗಳ ಸಮೇತ ಸಲ್ಲಿಸಿದ್ದ ದೂರನ್ನು ಸೂಕ್ತ ರೀತಿಯಲ್ಲಿ ವಿಚಾರಣೆ ನಡೆಸದೆ ಮುಕ್ತಾಯಗೊಳಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅದೇ ರೀತಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಆಗಿದ್ದ ಸುಭಾಷ್‌ ಚಂದ್ರ ಕುಂಟಿಆ ವಿರುದ್ಧ ಹಿರಿಯ ಐಪಿಎಸ್‌ ಅಧಿಕಾರಿ ಆರ್‌ ಪಿ ಶರ್ಮಾ ಅವರು ದಾಖಲೆ ಸಮೇತ ಸಲ್ಲಿಸಿದ್ದ ದೂರು ಕೂಡ ಮುಕ್ತಾಯಗೊಂಡಿದೆ.

ಲೋಕಾಯುಕ್ತರು ಭಯ, ಆತಂಕಗಳಿಂದಲೋ ಅಥವಾ ಇನ್ಯಾವುದೋ ಕಾರಣಕ್ಕೋ ಸರ್ಕಾರದ ಉನ್ನತ ಅಧಿಕಾರಿಗಳ ವಿರುದ್ಧದ ಕಠಿಣ ಶಿಫಾರಸುಗಳನ್ನು ಮಾಡುತ್ತಿಲ್ಲ. ಸಕಾರಣಗಳಿಲ್ಲದೆ ಪ್ರಕರಣಗಳನ್ನು ಮುಕ್ತಾಯಗೊಳಿಸುತ್ತಿದ್ದಾರೆ. ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ, ನ್ಯಾಯಬದ್ಧತೆ ಲೋಕಾಯುಕ್ತರಿಗೆ ಇಲ್ಲದಿರಬಹುದು. ಲೋಕಾಯುಕ್ತದ ವಿಶ್ವಾಸಾರ್ಹ ಹೆಚ್ಚಿಸುವ ನಿಟ್ಟಿನಲ್ಲಿ ಲೋಕಾಯುಕ್ತರು ಕಠಿಣ ತೀರ್ಮಾನ ಕೈಗೊಳ್ಳಬೇಕಾದ ಅಗತ್ಯವಿದೆ.
ರವಿಕೃಷ್ಣಾ ರೆಡ್ಡಿ, ಲಂಚಮುಕ್ತ ಕರ್ನಾಟಕ ವೇದಿಕೆ

ಉದ್ಯೋಗ, ತರಬೇತಿ ಇಲಾಖೆ ವ್ಯಾಪ್ತಿಯಲ್ಲಿನ ಐಟಿಐಗಳಿಗೆ ಪೀಠೋಪಕರಣಗಳು ಸೇರಿದಂತೆ ಇತರ ಸಾಮಗ್ರಿಗಳ ಸರಬರಾಜಿಗೆ ಸಂಬಂಧಿಸಿದಂತೆ ವಾಣಿಜ್ಯ ತೆರಿಗೆ ವಂಚನೆ ಕುರಿತು ದೂರು ಸಲ್ಲಿಕೆಯಾಗಿತ್ತು. ಸಾಮಾಜಿಕ ಕಾರ್ಯಕರ್ತ ಬಸವರಾಜು ಅವರು ಮಾರಾಟ ಬಿಲ್ಲುಗಳು ಸೇರಿದಂತೆ ತನಿಖೆಗೆ ಪೂರಕವಾಗಿ ಹಲವು ದಾಖಲೆಗಳೊಂದಿಗೆ ಆಯುಕ್ತ ಐಎಎಸ್‌ ಅಧಿಕಾರಿ ಸಮೀರ್‌ ಶುಕ್ಲಾ ಸೇರಿ ಹಲವು ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸಿದ್ದರು. ಸೂಕ್ತ ದಾಖಲಾತಿಗಳಿದ್ದರೂ ದೂರು ಮುಕ್ತಾಯಗೊಂಡಿರುವುದು ದಾಖಲೆಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ : ಲೋಕಾಯುಕ್ತ ಭದ್ರತಾ ವೈಫಲ್ಯ; ಗುಪ್ತಚರ ವರದಿ ನಿರ್ಲಕ್ಷಿಸಿದ್ದ ಗೃಹ ಇಲಾಖೆ!

ಇಪ್ಪತ್ತು ಲಕ್ಷ ರು.ಗಳಿಗೂ ಹೆಚ್ಚಿನ ತೆರಿಗೆ ಮೊತ್ತವನ್ನು ವಂಚಿಸಿದ ಸರಬರಾಜುದಾರರನ್ನುಸಾಮಾಜಿಕ ಕಾರ್ಯಕರ್ತ ಬಸವರಾಜು ಅವರು ಗುರುತಿಸಿ, ದಾಖಲೆಗಳನ್ನು ಮಾಹಿತಿ ಹಕ್ಕಿನ ಅಡಿಯಲ್ಲಿ ಸಂಗ್ರಹಿಸಿದ್ದರು. ಇಲಾಖೆಗೆ ಆಗಿರುವ ವಂಚನೆ ಕುರಿತು ದೂರಿನಲ್ಲಿ ವಿವರಿಸಿದ್ದರು. ತೆರಿಗೆ ಮೊತ್ತವನ್ನು ವಸೂಲು ಮಾಡದೆ ವಿವಿಧ ಇಲಾಖೆಗಳ ನಿಯಮಗಳನ್ನು ಪಾಲಿಸದೆ ಸರಬರಾಜುದಾರರಿಗೆ ಹಣ ಪಾವತಿಸಿ ಅಕ್ರಮ ನಡೆದಿರುವ ಬಗ್ಗೆ ದೂರಿನಲ್ಲಿ ವಿವರಿಸಿದ್ದರೂ ಮುಕ್ತಾಯಗೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಅದೇ ರೀತಿ, ಬಸವರಾಜು ಅವರು ಪ.ಜಾತಿ, ಪ.ಪಂಗಡ ಐಟಿಐ ವಿದ್ಯಾರ್ಥಿಗಳಿಗೆ ಉಚಿತವಾಗಿ ಒದಗಿಸಿದ್ದ ಟೂಲ್‌ ಕಿಟ್‌ ಟೆಂಡರ್‌ನಲ್ಲಿಯೂ ಸಾಕಷ್ಟು ಅಕ್ರಮಗಳಾಗಿವೆ ಎಂದು ದಾಖಲೆಗಳ ಸಮೇತ ದೂರು ಸಲ್ಲಿಸಿದ್ದರು. ತಾಂತ್ರಿಕ ವಿವರ ಮತ್ತು ಅಂದಾಜು ವೆಚ್ಚ ತಯಾರಿಸಲು ರಚಿಸಿದ್ದ ಸಮಿತಿಗೆ ಉನ್ನತ ಹಂತದ ಅಧಿಕಾರಿಗಳ ಬದಲು ಕೆಳಹಂತದ ಅಧಿಕಾರಿಗಳನ್ನು ನೇಮಿಸಿದ್ದು ಅಕ್ರಮಕ್ಕೆ ದಾರಿಯಾಗಿತ್ತು ಎಂದು ದೂರಿನಲ್ಲಿ ವಿವರಿಸಲಾಗಿತ್ತು.

ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಕೆಳಹಂತದ ಅಧಿಕಾರಿಗಳು ಟೆಂಡರ್‌ದಾರರು ಕಳಿಸಿದ್ದ ದರಪಟ್ಟಿಯನ್ನೇ ಅನುಮೋದಿಸಿದ್ದರ ಬಗ್ಗೆ ದಾಖಲೆಗಳನ್ನು ಕಲೆಹಾಕಿದ್ದಲ್ಲದೆ, ತಾಂತ್ರಿಕ ಬಿಡ್‌ನಲ್ಲಿ ಹಲವು ಲೋಪದೋಷಗಳನ್ನು ಪತ್ತೆಹಚ್ಚಿ ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದರು. ಟೂಲ್‌ ಕಿಟ್‌ ಪ್ರಕರಣವೊಂದರಲ್ಲೇ ಸರ್ಕಾರಕ್ಕೆ ೨೫ ಕೋಟಿ ರುಪಾಯಿಯಷ್ಟು ವಂಚನೆಯಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದರು. ಆದರೆ, ಈ ದೂರಿನಲ್ಲಿ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ.

ಬೆಂಗಳೂರು ನಗರದಲ್ಲಿ ಜಾಹಿರಾತು ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳಲು ಕಾರಣರಾಗಿದ್ದ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಅವರು, ಬಿಡಿಎನಲ್ಲಿ ಆಗಿರುವ ಅನುದಾನ ದುರುಪಯೋಗ ಮತ್ತು ದುರಾಡಳಿತ ಕುರಿತು ಆಯುಕ್ತ ರಾಕೇಶ್‌ ಸಿಂಗ್, ಎಂಜಿನಿಯರ್‌ ಸದಸ್ಯ ಪಿ ಎನ್‌ ನಾಯಕ್, ಉಪ ಆಯುಕ್ತ ಲಿಂಗಮೂರ್ತಿ ವಿರುದ್ಧ ದಾಖಲಾತಿಗಳೊಂದಿಗೆ ಸಲ್ಲಿಸಿದ್ದ ದೂರು ಮುಕ್ತಾಯವಾಗಿದೆ. ಹಾಗೆಯೇ, ಬೆಂಗಳೂರು ವಿಶ್ವವಿದ್ಯಾಲಯದ ಪ್ರಭಾರ ರಿಜಿಸ್ಟ್ರಾರ್‌ ಆಗಿದ್ದ ಕೆ ಎನ್‌ ನಿಂಗೇಗೌಡ ಅವರ ವಿರುದ್ಧ ನಿಯಮಗಳ ಉಲ್ಲಂಘನೆ ಆರೋಪದಡಿಯಲ್ಲಿ ಸಹಾಯಕ ರಿಜಿಸ್ಟ್ರಾರ್‌ ಎಚ್‌ ವಿ ಶ್ರೀನಿವಾಸ್‌ ಎಂಬುವರು ಸಲ್ಲಿಸಿದ್ದ ದೂರು ಮುಕ್ತಾಯಗೊಂಡಿರುವುದು ತಿಳಿದುಬಂದಿದೆ.

ಲೋಕಾಯುಕ್ತ ಸಂಸ್ಥೆಗೆ ಸಲ್ಲಿಕೆಯಾಗುವ ದೂರಿನಲ್ಲಿ ತಿಳಿಸಿರುವ ವಿವಿಧ ಆರೋಪಗಳ ಕುರಿತು ತನಿಖೆ ನಡೆಸಲು ಹೆಚ್ಚುವರಿ ವಿಚಾರಣಾಧಿಕಾರಿಗಳಿಗೆ (ಎಆರ್‌ಇ) ಶಿಫಾರಸು ಮಾಡಲಾಗುತ್ತದೆ. ಆ ವಿಚಾರಣಾಧಿಕಾರಿಗಳು ದೂರು ಮತ್ತು ಅದರೊಂದಿಗೆ ಸಲ್ಲಿಸಿರುವ ದಾಖಲಾತಿಗಳನ್ನು ಪರಿಶೀಲಿಸಿ ವಿಚಾರಣೆ ಕೈಗೊಳ್ಳುತ್ತಾರೆ.

ವಿಚಾರಣೆ ವೇಳೆಯಲ್ಲಿ ಆರೋಪ ಸಾಬೀತಾಗಿದ್ದಲ್ಲಿ ಸಂಬಂಧಿಸಿದ ಅಧಿಕಾರಿ, ಚುನಾಯಿತ ಪ್ರತಿನಿಧಿ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗುತ್ತೆ. ಹಾಗೆಯೇ, ಆರೋಪ ಸಾಬೀತಾಗದೆ ಇದ್ದಲ್ಲಿ ದೂರುಗಳನ್ನು ಮುಕ್ತಾಯಗೊಳಿಸಲಾಗುತ್ತದೆ. ಆದರೆ, ದೂರು ಮುಕ್ತಾಯಗೊಳಿಸಲು ಕಾರಣಗಳೇನು ಎನ್ನುವುದನ್ನು ದೂರುದಾರರಿಗೆ ತಿಳಿಸಬೇಕು. ಬಹುತೇಕ ದೂರುದಾರರಿಗೆ ಕಾರಣಗಳನ್ನೇ ತಿಳಿಸುವುದಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More