ಟ್ವಿಟರ್ ಸ್ಟೇಟ್ | ಬಿಜೆಪಿಯ ರಾಜ್ಯಸಭಾ ಅಭ್ಯರ್ಥಿ ಆಯ್ಕೆ ಬಗ್ಗೆ ಬಿಸಿ ಚರ್ಚೆ

ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಯಾಗಿ ರಾಜೀವ್ ಚಂದ್ರಶೇಖರ್ ಅವರು ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷ ಸೇರಿದಂತೆ ಹಲವರಿಂದ ಪ್ರಶ್ನೆಗೆ ಒಳಗಾಗಿದೆ. ರಾಜ್ಯಸಭೆಗೆ ಆಯ್ಕೆ ಮಾಡುವಾಗ ಬಿಜೆಪಿ ಕನ್ನಡಿಗರಿಗೆ ಆದ್ಯತೆ ಕೊಡದಿರುವ ಬಗ್ಗೆ ಟ್ವೀಟಿಗರ ನಡುವೆ ಬಿಸಿಬಿಸಿ ಚರ್ಚೆ ನಡೆದಿದೆ

ರಾಜ್ಯಸಭೆಗೆ ಅಭ್ಯರ್ಥಿ ಆಯ್ಕೆಯನ್ನು ಪ್ರಕಟಿಸಲು ಕಾಂಗ್ರೆಸ್ ಮತ್ತು ಬಿಜೆಪಿ ನಾಮಪತ್ರ ಸಲ್ಲಿಸುವ ಕೊನೆಯ ಕ್ಷಣದವರೆಗೂ ಕಾದಾಡಿವೆ. ಹಾಗಿದ್ದರೂ, ಬಿಜೆಪಿ ಅಭ್ಯರ್ಥಿ ಆಯ್ಕೆ ಟ್ವಿಟರ್ ಸಮರಕ್ಕೆ ಕಾರಣವಾಗಿದೆ. ಮುಖ್ಯವಾಗಿ ಬಿಜೆಪಿ ಸದಾ ಕನ್ನಡೇತರ ಅಭ್ಯರ್ಥಿಗಳನ್ನೇ ಕರ್ನಾಟಕದಿಂದ ರಾಜ್ಯಸಭೆಗೆ ಕಳುಹಿಸುತ್ತಿರುವುದು ಟ್ವೀಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕ ಕಾಂಗ್ರೆಸ್ ಇತ್ತೀಚೆಗೆ ಕನ್ನಡತನ ಮೆರೆಯುವ ಒಂದು ಅವಕಾಶವನ್ನೂ ಕೈಬಿಟ್ಟಿಲ್ಲ. ರಾಜ್ಯಸಭೆ ಅಭ್ಯರ್ಥಿ ವಿಚಾರದಲ್ಲೂ ಸ್ಯಾಮ್ ಪಿತ್ರೋಡರನ್ನು ಕರ್ನಾಟಕದಿಂದ ಕಳುಹಿಸುವ ಉದ್ದೇಶ ಕಾಂಗ್ರೆಸ್ ಹೈಕಮಾಂಡ್‌ಗೆ ಇತ್ತು. ಆದರೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕನ್ನಡಿಗ ಅಭ್ಯರ್ಥಿಗಳೇ ಬೇಕು ಎನ್ನುವ ಬೇಡಿಕೆ ಇಟ್ಟು ಸಾಧಿಸಿಕೊಂಡರು. ಹೀಗಾಗಿ ಬಿಜೆಪಿ ತನ್ನ ಅಭ್ಯರ್ಥಿಯಾಗಿ ಕೇರಳ ಮೂಲದ ರಾಜೀವ್ ಚಂದ್ರಶೇಖರ್ ಅವರನ್ನು ಆರಿಸಿದಾಗ ಟೀಕಿಸುವ ಅವಕಾಶವನ್ನು ಕಾಂಗ್ರೆಸ್ ಕಳೆದುಕೊಂಡಿಲ್ಲ. ಬಿಜೆಪಿಗೆ ಕನ್ನಡಿಗ ಅಭ್ಯರ್ಥಿಗಳೇ ಸಿಗುವುದಿಲ್ಲ ಎನ್ನುವ ಟ್ವಿಟರ್ ಚರ್ಚೆ #NamageMosa ಹ್ಯಾಷ್‌ಟ್ಯಾಗ್‌ನಲ್ಲಿ ಕಾಂಗ್ರೆಸ್ ಮುಂದಾಳತ್ವದಲ್ಲಿ ನಡೆಯಿತು. ಬಿಜೆಪಿ ಪರ ಟ್ವೀಟಿಗರು ಇದರ ವಿರುದ್ಧ ಸಮರ್ಥನೆಗಳನ್ನು ಮಾಡಲು ಪ್ರಯತ್ನಿಸಿದರಾದರೂ ಎಲ್ಲರೂ ಒಪ್ಪಿಕೊಳ್ಳುವ ಒಂದು ನಿಲುವು ಅಥವಾ ಅಭಿಪ್ರಾಯವನ್ನು ಕೊಡಲು ವಿಫಲರಾಗಿದ್ದಾರೆ.

“ಬಿಜೆಪಿ ನಿರಂತರವಾಗಿ ಕನ್ನಡೇತರ ಅಭ್ಯರ್ಥಿಗಳನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡುತ್ತಿದೆ. ಅದಕ್ಕೆ ಸೂಕ್ತ ಉದಾಹರಣೆ ಸಂಭಾವ್ಯ ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರಶೇಖರ್. ಇಂತಹ ಕನ್ನಡೇತರ ನಾಯಕರು ಸಂಸತ್ತಿನಲ್ಲಿ ಕರ್ನಾಟಕದ ಹಿತಾಸಕ್ತಿಗೆ ನ್ಯಾಯ ಒದಗಿಸಿಕೊಡುವರೇ?” ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ. ಇದಕ್ಕೆ ಬಿಜೆಪಿಯ ಅಧಿಕೃತ ಕರ್ನಾಟಕ ಖಾತೆ ಸರಣಿ ಉತ್ತರಗಳನ್ನು ನೀಡಿದೆ. “ರಾಜೀವ್ ಚಂದ್ರಶೇಖರ್ ಅವರು ನಿರಂತರವಾಗಿ ಬೆಂಗಳೂರು ಮತ್ತು ಕರ್ನಾಟಕದ ವಿಚಾರಗಳ ಬಗ್ಗೆ ಕಾಳಜಿ ವಹಿಸಿದ್ದಾರೆ. ಅದರ ವಿವರಗಳು ಸಾರ್ವಜನಿಕ ವೇದಿಕೆಯಲ್ಲಿದೆ. ಕಾಂಗ್ರೆಸ್ನ ಸ್ಟೀಲ್ ಫ್ಲೈಓವರ್ ಹಗರಣವನ್ನೂ ಅವರು ನಿಲ್ಲಿಸಿದ್ದಾರೆ. ಬಿ ಕೆ ಹರಿಪ್ರಸಾದ್ ಮತ್ತು ಜೈರಾಂ ರಮೇಶ್ ಅವರು ಕರ್ನಾಟಕಕ್ಕೇನು ಕೊಡುಗೆ ಕೊಟ್ಟಿದ್ದಾರೆ? ಇವರೆಲ್ಲರೂ ೧೦ ಜನಪಥ್‌ನ ಖಾಸಗಿ ಸಿಬ್ಬಂದಿಗಳಂತೆ ಕೆಲಸ ಮಾಡುತ್ತಾರೆ,” ಎಂದು ಸಮರ್ಥನೆಗೆ ಇಳಿದಿದೆ. ಅಲ್ಲದೆ, ಕಾಂಗ್ರೆಸ್ ಪರ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ನಾಸೀರ್ ಹುಸೇನ್ ಅವರು ಕರ್ನಾಟಕಕ್ಕೆ ಏನು ಕೊಡುಗೆ ನೀಡಿದೆ ಎಂದು ಬಿಜೆಪಿ ಪ್ರಶ್ನಿಸಿದೆ.

ಆದರೆ ಟ್ವಿಟರ್‌ನಲ್ಲಿ ಅನೇಕರು ಬಿಜೆಪಿ ಪದೇ ಪದೇ ರಾಜ್ಯಸಭೆಗೆ ಕನ್ನಡೇತರರನ್ನು ಆರಿಸುವುದಕ್ಕಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಬ್ಯಾಂಕರ್ ಅರ್ಜುನ್, “2010ರಲ್ಲಿ ಆಂಧ್ರ ಪ್ರದೇಶದ ವೆಂಕಯ್ಯನಾಯ್ಡು, 2011ರಲ್ಲಿ ತಮಿಳುನಾಡಿನ ಹೇಮಮಾಲಿನಿ, 2013ರಲ್ಲಿ ತಮಿಳುನಾಡಿನ ರಂಗಸಾಯೆ ರಾಮಕೃಷ್ಣ, ಈ ಬಾರಿ ಕೇರಳದ ರಾಜೀವ್ ಚಂದ್ರಶೇಖರ್,” ಎಂದು ಟ್ವೀಟ್ ಮಾಡಿದ್ದಾರೆ. “ಸಿದ್ದರಾಮಯ್ಯನವರು ಹೈಕಮಾಂಡ್ ಆರಿಸಿದ ಕನ್ನಡೇತರರನ್ನು ಬೇಡ ಎಂದು ಮೂವರು ಕನ್ನಡಿಗರನ್ನೇ ಆಯ್ಕೆ ಮಾಡಿದ್ದಾರೆ,” ಎಂದು ಕಾಂಗ್ರೆಸ್ ಪರ ಟ್ವೀಟಿಗರ ಅರುಣ್ ಕುಮಾರ್ ಖುಷಿಯಾಗಿದ್ದಾರೆ. ಆದರೆ ಕಾಂಗ್ರೆಸ್ ಪರವಲ್ಲದ ಕೆಲವರು ಕನ್ನಡಿಗರೂ ಬಿಜೆಪಿ ಕನ್ನಡೇತರರನ್ನು ಆರಿಸಿರುವುದಕ್ಕಾಗಿ ಬೇಸರಿಸಿದ್ದಾರೆ. ಜೆಡಿಎಸ್ ಅಭಿಮಾನಿ ಎಂದು ಹೇಳಿಕೊಳ್ಳುವ ಪ್ರತಾಪ್ ಕಣಗಾಲ್, “ವೆಂಕಯ್ಯ ನಾಯ್ಡು, ನಿರ್ಮಲಾ ಸೀತಾರಾಮನ್, ರಾಜೀವ್ ಚಂದ್ರಶೇಖರ್ ಇವರಾರು ಕನ್ನಡಿಗರಲ್ಲ, ಕನ್ನಡ ಬರಲ್ಲ, ಕನ್ನಡಿಗರ ಕಷ್ಟ ಏನು ಅಂತ ಗೊತ್ತಿಲ್ಲ, ಕೊನೆಗೆ ಕನ್ನಡ ಅಂತ ಸರಿಯಾಗಿ ಹೇಳೋಕು ಬರಲ್ಲ, ಇವರು ಹೇಗೆ ಕನ್ನಡಿಗರ ಸಮಸ್ಯೆಗೆ ಸ್ಪಂದಿಸುತ್ತಾರೆ? ಕನ್ನಡಿಗರ ಅಭಿಪ್ರಾಯಕ್ಕೆ ಬೆಲೆ ನೀಡದೆ ಇವರನ್ನೇ ಆರಿಸಿ ಕಳುಹಿಸುವ ಬಿಜೆಪಿ ನಮಗೆ ಬೇಕೆ?” ಎಂದು ಪ್ರಶ್ನಿಸಿದ್ದಾರೆ. ಜೆಡಿಎಸ್‌ನ ಇತರ ಸದಸ್ಯರೂ ಇಂತಹುದೇ ಅಭಿಪ್ರಾಯಗಳನ್ನು ಹರಿಯಬಿಟ್ಟಿದ್ದಾರೆ. ಅಲ್ಲದೆ ಕನ್ನಡ ಪರ ಹೋರಾಟಗಾರರೂ ಬಿಜೆಪಿಯ ಕ್ರಮವನ್ನು ಟೀಕಿಸಿದ್ದಾರೆ.

ಈ ಟೀಕೆಗಳ ನೇತೃತ್ವ ವಹಿಸಿದ ಕರ್ನಾಟಕ ಕಾಂಗ್ರೆಸ್ ಖಾತೆಯ ಟ್ವೀಟ್‌ಗೆ ಕರ್ನಾಟಕ ಬಿಜೆಪಿ ಸರಣಿ ಟ್ವೀಟ್‌ಗಳಲ್ಲಿ ಉತ್ತರಿಸಿದೆ. “ಕಾಂಗ್ರೆಸ್ ರಾಜೀವ್ ಚಂದ್ರಶೇಖರ್ ರಾಜ್ಯಸಭೆಗೆ ಸ್ಪರ್ಧಿಸುತ್ತಿರುವುದನ್ನು ವಿರೋಧಿಸುತ್ತಿದ್ದಾರೆ. ಅವರು ಕೇರಳಿಗರು ಎನ್ನುವ ಲಾಜಿಕ್‌ನಲ್ಲಿ ನೋಡಿದರೆ ಕೇರಳಿಗರಾದ ಸಚಿವ ಕೆಜೆ ಜಾರ್ಜ್‌, ಶಾಸಕ ಹ್ಯಾರಿಸ್ ಎಲ್ಲರೂ ರಾಜೀನಾಮೆ ನೀಡಬೇಕು,” ಎಂದು ಟ್ವೀಟ್ ಮಾಡಿದೆ. ಬೆಂಗಳೂರು ವಕೀಲರಾದ ರುತು ಹೊಂಗಲ್ ಅವರೂ ಟ್ವೀಟ್ ಮಾಡಿ, ಪಶ್ಚಿಮ ಬಂಗಾಳದಿಂದ ಅಭಿಷೇಕ್ ಮನು ಸಿಂಗ್ವಿ ಅವರನ್ನು ರಾಜ್ಯಸಭೆಗೆ ಕಳುಹಿಸುವ ಕಾಂಗ್ರೆಸ್‌ನ ದ್ವಂದ್ವ ನೀತಿಯನ್ನು ಪ್ರಶ್ನಿಸಿದ್ದಾರೆ. ರಾಜೀವ್ ಚಂದ್ರಶೇಖರ್ ಬೆಂಗಳೂರಿನ ಅಭಿವೃದ್ಧಿಗಾಗಿ ಹಲವು ರೀತಿಯಲ್ಲಿ ಹೋರಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಎಲ್ಲ ಟ್ವೀಟಿಗರೂ ಈ ಆಲೋಚನಾ ರೀತಿಯನ್ನು ಒಪ್ಪಿಕೊಂಡಿಲ್ಲ. “ಬಿಜೆಪಿ ಹ್ಯಾರಿಸ್ ಮತ್ತು ಜಾರ್ಜ್‌ರನ್ನು ಮುಂದಿಟ್ಟು ರಾಜೀವ್ ಆಯ್ಕೆಯನ್ನು ಪ್ರಶಂಸಿಸುತ್ತಿದೆ. ಆದರೆ ಬಿಜೆಪಿಯಲ್ಲಿ ಇಂತಹ ವಲಸೆ ರಾಜಕಾರಣಿಗಳು ಸಾಕಷ್ಟಿದ್ದಾರೆ,” ಎಂದು ಬೆಂಗಳೂರಿನ ಗಣೇಶ್ ಚೇತನ್ ಟ್ವೀಟ್ ಮಾಡಿದ್ದಾರೆ.

ರಾಜೀವ್ ಚಂದ್ರಶೇಖರ್ ಅವರಿಗೆ ರಾಜ್ಯಸಭೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿರುವುದು ದೆಹಲಿಯ ನಿರ್ಧಾರ. ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ವಿಜಯ ಸಂಕೇಶ್ವರ್ ಅವರನ್ನು ಆರಿಸಿದ್ದರು ಎನ್ನುವ ವಿಷಯವೂ ಟ್ವೀಟಿಗರ ನಡುವೆ ಚರ್ಚೆಗೆ ಬಂದಿದೆ. “ನಾಮಪತ್ರ ಸಲ್ಲಿಸಲು ಸಿದ್ಧರಾಗಿರುವಂತೆ ಯಡಿಯೂರಪ್ಪವನ್ನು ಸೂಚಿಸಿದ್ದರು ಎಂದು ವಿಜಯ ಸಂಕೇಶ್ವರ್ ಹೇಳಿದ್ದಾರೆ. ಆದರೆ, ತಮಗೆ ರಾಜೀವ್ ಆಯ್ಕೆಯಿಂದ ಬೇಸರವಾಗಿಲ್ಲ. ಬಿಜೆಪಿಗೆ ಅವರ ಅಗತ್ಯವಿದೆ. ಕೇರಳದಲ್ಲಿ ಎಡಪಕ್ಷ ಮತ್ತು ಕಾಂಗ್ರೆಸ್ ಆಡಳಿತವನ್ನು ಇಳಿಸಲು ಬಿಜೆಪಿಗೆ ರಾಜೀವ್ ಅಗತ್ಯವಿದೆ ಎಂದು ವಿಜಯ ಸಂಕೇಶ್ವರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ,” ಎಂದು ಪತ್ರಕರ್ತ ಡಿ ಪಿ ಸತೀಶ್ ಟ್ವೀಟ್ ಮಾಡಿದ್ದಾರೆ. ವಿಜಯ ಸಂಕೇಶ್ವರ್ ಅವರು ಸ್ಪರ್ಧೆಯಿಂದ ಹಿಂದೆ ಸರಿದರೂ ಅವರ ಬೆಂಬಲಿಗರು ಟ್ವಿಟರ್‌ನಲ್ಲಿ ಸಿಟ್ಟಾಗಿದ್ದಾರೆ. “ಗೆದ್ದ ವಲಸಿಗ ರಾಜೀವ್ ಚಂದ್ರಶೇಖರ್, ಸೋತ ಕನ್ನಡಿಗ ವಿಜಯ ಸಂಕೇಶ್ವರ್‌. ರಾಜಕೀಯ ಏನೇ ಇದ್ದರೂ, ನಾವು ಮೊದಲು ಕನ್ನಡಿಗರು. ಕರ್ನಾಟಕ ಬಿಜೆಪಿಗೆ ಧಿಕ್ಕಾರ,” ಎಂದು ಸಚಿನ್ ಕೃಷ್ಣೇಗೌಡ ಟ್ವೀಟ್ ಮಾಡಿದ್ದಾರೆ. ಕೆಲವರು ಅಮಿತ್ ಶಾ ಮತ್ತು ನರೇಂದ್ರ ಮೋದಿಯವರ ಮುಂದೆ ಬಿ ಎಸ್ ಯಡಿಯೂರಪ್ಪ ಅವರ ಮಾತು ನಡೆಯುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜೀವ್ ಚಂದ್ರಶೇಖರ್ ಆಯ್ಕೆಯನ್ನು ಟ್ವಿಟರ್‌ನಲ್ಲಿ ಸ್ವಾಗತಿಸಿದ ಬಿಜೆಪಿ ಮುಖಂಡ ಸದಾನಂದ ಗೌಡ ಅವರೂ ಟ್ರೋಲ್ ಆಗಿದ್ದಾರೆ. “ಮಾನ್ಯ ರಾಜೀವ್ ಚಂದ್ರಶೇಖರ್ ಅವರೇ, ನಿಮ್ಮಸಾಮಾಜಿಕ ಕಳಕಳಿ, ಸ್ಟೀಲ್ ಬ್ರಿಡ್ಜ್ ನಂತಹ ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ನೀವು ನಡೆಸಿದ ಹೋರಾಟ, ಯೋಧರ ಪರ ನಿಲುವು, ಅಲ್ಲದೆ ಈವರೆಗೆ ರಾಜ್ಯಸಭಾ ಸದಸ್ಯರಾಗಿ ಕನ್ನಡದ ಪರ ನಿಮ್ಮ ಹೆಜ್ಜೆ ಬಿಜೆಪಿಗೆ ನಿಕಟವಾಗುವ ಹಾಗೆ ಮಾಡಿದವು,ಈಗ ಬಿಜೆಪಿ ರಾಜ್ಯಸಭಾ ಅಭ್ಯರ್ಥಿಯಾಗಿರುವ ನಿಮಗೆ ಅಭಿನಂದನೆಗಳು,” ಎಂದು ಸದಾನಂದ ಗೌಡರು ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಹಲವರು ಬಿಜೆಪಿ ನಾಯಕರಿಗೆ ಇಂಥಹ ಸ್ಥಿತಿ ಬರಬಾರದಿತ್ತು ಎಂದು ಖೇದ ವ್ಯಕ್ತಪಡಿಸಿದ್ದಾರೆ. ಕನ್ನಡಿಗರನ್ನು ಕಳುಹಿಸಬೇಕೆಂಬ ಜನಾಭಿಪ್ರಾಯವಿದ್ದರೂ ಕೇಂದ್ರ ಬಿಜೆಪಿಯನ್ನು ಒಪ್ಪಿಸಲು ಕರ್ನಾಟಕದ ನಾಯಕರಿಗೆ ಸಾಧ್ಯವಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಈ ನಡುವೆ, ರಾಜೀವ್ ಚಂದ್ರಶೇಖರ್ ಆಯ್ಕೆಯನ್ನು ವಿರೋಧಿಸುವವರು ಕಾಂಗ್ರೆಸಿಗರು ಮಾತ್ರ, ಕನ್ನಡಿಗರಲ್ಲ ಎನ್ನುವ ಬಿಜೆಪಿ ವಾದಕ್ಕೆ ಟ್ವೀಟಿಗರು ತಿರುಗಿ ಬಿದ್ದಿದ್ದಾರೆ. ಬೆಂಗಳೂರಿನ ಇಂಜಿನಿಯರ್ ಆಗಿರುವ ರಕ್ಷಿತ್ ಪೊನ್ನತಪುರ್ ಸರಣಿ ಟ್ವೀಟ್‌ಗಳ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ವಕೀಲ ಮತ್ತು ಬಿಜೆಪಿ ಪರ ಟ್ವೀಟಿಗ ತೇಜಸ್ವಿ ಸೂರ್ಯ ಟ್ವಿಟರ್‌ನಲ್ಲಿ ರಾಜೀವ್ ಚಂದ್ರಶೇಖರ್‌ ಅವರನ್ನು ವಿರೋಧಿಸುವವರೆಲ್ಲ ಕಾಂಗ್ರೆಸ್ಸಿಗರು ಎಂದು ಟ್ವೀಟ್ ಮಾಡಿ ಆಕ್ರೋಶವನ್ನು ಎದುರಿಸಿದ್ದಾರೆ. ಈ ಹಿನ್ನೆಲೆಯ ಕೆಲವು ಟ್ವೀಟ್ ಗಳು ಇಲ್ಲಿವೆ:

ಈ ಮಧ್ಯೆ, ರಾಜೀವ್ ಚಂದ್ರಶೇಖರ್ ಅವರು ತಾವು ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿಯುತ್ತಿರುವ ಖುಷಿಯನ್ನು ಸರಣಿ ಟ್ವೀಟ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಅವು ಹೀಗಿವೆ:

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More