ರೈತರ ಮಹಾ ಪ್ರತಿಭಟನೆಗೆ ಸ್ಫೂರ್ತಿಯಾದ ವಿಜು ಕೃಷ್ಣನ್‌ ಕರ್ನಾಟಕಕ್ಕೆ ಹಳಬರು!

ಮಹಾರಾಷ್ಟ್ರ ಸರ್ಕಾರ ರೈತರೆದುರು ಮಂಡಿಯೂರಲೇಬೇಕಾದ ಬೃಹತ್ ಪ್ರತಿಭಟನಾ ನಡಿಗೆ ಹಿಂದೆ ಇದ್ದ ಮುಖ್ಯ ವ್ಯಕ್ತಿ ವಿಜು ಕೃಷ್ಣನ್‌. ಅಖಿಲ ಭಾರತ ಕಿಸಾನ್‌ ಸಭಾದ ಜಂಟಿ ಕಾರ್ಯದರ್ಶಿ ಆಗಿರುವ ಕೃಷ್ಣನ್‌, ವಿದ್ಯಾರ್ಥಿ ಆಗಿದ್ದಾಗಿಂದಲೂ ಇಂಥ ದಿಟ್ಟ ಹೋರಾಟಗಳನ್ನು ರೂಪಿಸುತ್ತ ಬಂದಿದ್ದಾರೆ

"ಎಲ್ಲ ಹೂಗಳನ್ನು ಕತ್ತರಿಸಿ ಹಾಕಬಹುದು, ಆದರೆ ವಸಂತ ಬರುವುದನ್ನು ನಿಮ್ಮಿಂದ ತಡೆಯಲಾಗದು...''

-ಭಾನುವಾರ ನಾಸಿಕ್‌ನಿಂದ ಮುಂಬೈಗೆ ೫೦,೦೦೦ ರೈತರು ಐದು ದಿನಗಳ ಪಾದಯಾತ್ರೆ ಕೈಗೊಳ್ಳುವ ಸಂದರ್ಭದಲ್ಲಿ ಕಮ್ಯುನಿಸ್ಟ್‌ ಪಾರ್ಟಿ ಮಾಡಿದ ಟ್ವೀಟ್‌ ಇದು. ಸುಮಾರು ೧೮೦ ಕಿಮೀ ದೂರದ ಈ ದಾರಿಯಲ್ಲಿ ರೈತರು, ರೈತ ಮಹಿಳೆಯರು, ರೈತ ಸಂಘಟನೆಗಳು, ರೈತ ಪರ ಕಾಳಜಿ ಇರುವವರೆಲ್ಲರೂ ಕೂಡಿ ಹೆಜ್ಜೆ ಹಾಕಿದರು.

ರಾಜ್ಯ ಸರ್ಕಾರ ಅನ್ಯಮಾರ್ಗ ಕಾಣದೆ ಮಾತುಕತೆ ಮುಂದಾಗಲೇಬೇಕಾದ, ರೈತರೆದುರು ಮಂಡಿಯೂರಲೇಬೇಕಾದ ಈ ಇಡೀ ವಿದ್ಯಮಾನದ ಹಿಂದೆ ಇದ್ದ ಮುಖ್ಯ ವ್ಯಕ್ತಿ ವಿಜು ಕೃಷ್ಣನ್‌. ಅಖಿಲ ಭಾರತ ಕಿಸಾನ್‌ ಸಭಾದ ಜಂಟಿ ಕಾರ್ಯದರ್ಶಿಯಾಗಿರುವ ಕೃಷ್ಣನ್‌, ವಿದ್ಯಾರ್ಥಿ ದೆಸೆಯಿಂದಲೂ ಹಲವು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದು, ಇಂಥ ಹೋರಾಟಗಳನ್ನು ರೂಪಿಸುತ್ತ ಬಂದ ದಿಟ್ಟ ವ್ಯಕ್ತಿ. ಇವರ ನಂಟು ಕರ್ನಾಟಕದೊಂದಿಗೆ ಹಳೆಯದೆಂಬುದು ವಿಶೇಷ.

ಕೇರಳದಲ್ಲಿ ಕರಿವೆಲ್ಲೂರ್‌ ಎಂಬ ಪುಟ್ಟ ಊರು. ನಲವತ್ತರ ದಶಕದಲ್ಲಿ ಈ ಊರಿನಲ್ಲಿ ಮದ್ರಾಸ್‌ ಪ್ರಾಂತ್ಯದ ವಿರುದ್ಧ ರೈತರು ಭೂಮಿ, ಆಹಾರ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ಪ್ರತಿಭಟನೆ ಹಿಂಸೆಗೆ ತಿರುಗಿ, ಇಬ್ಬರನ್ನು ಬಲಿತೆಗೆದುಕೊಂಡಿತ್ತು. ವಿಜು ಕೃಷ್ಣನ್‌ ಹುಟ್ಟಿದ್ದು ಇದೇ ಊರಿನಲ್ಲಿ. ಏಳು ದಶಕಗಳ ಬಳಿಕ ಕರಿವೆಲ್ಲೂರು ಹೋರಾಟವನ್ನು, ದೇಶದ ಮೂಲೆಮೂಲೆಯಲ್ಲಿ ಪ್ರತಿಧ್ವನಿಸುವಂತೆ ಮಾಡುತ್ತಿದ್ದಾರೆ. ರೈತರು ತಮ್ಮ ಹಕ್ಕುಗಳಿಗೆ ದನಿ ಎತ್ತುವಂತೆ ಕೃಷ್ಣನ್‌ ಹೋರಾಟ ರೂಪಿಸುತ್ತಿದ್ದಾರೆ.

ಫೈರ್‌ಬ್ರಾಂಡ್‌ ನಾಯಕರೆಂದೇ ಗುರುತಿಸಿಕೊಂಡಿರುವ ವಿಜು ಕೃಷ್ಣನ್‌, ಜವಹರಲಾಲ್‌ ನೆಹರು ವಿವಿ (ಜೆಎನ್‌ಯು) ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿದ್ದರು. ನಂತರದಲ್ಲಿ ಸ್ಟೂಡೆಂಟ್ಸ್‌ ಫೆಡರೇಷನ್‌ ಆಫ್‌ ಇಂಡಿಯಾದಲ್ಲಿ ನಾಯಕರಾಗಿದ್ದರು. ಬದಲಾಗುತ್ತಿರುವ ಭಾರತದ ಕೃಷಿ ಆರ್ಥಿಕತೆ ಕುರಿತು ಅಧ್ಯಯನ ಪೂರೈಸಿ ಡಾಕ್ಟರೇಟ್‌ ಪದವಿ ಪಡೆದುಕೊಂಡರು. ಬಳಿಕ ಬೆಂಗಳೂರಿನ ಸೇಂಟ್‌ ಜೋಸೆಫ್‌ ಕಾಲೇಜಿನಲ್ಲಿ ರಾಜಕೀಯ ವಿಜ್ಞಾನ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾಗಿ ಕೆಲ ಕಾಲ ಕಾರ್ಯನಿರ್ವಹಿಸಿದರು. ಕೆಲ ವರ್ಷಗಳ ಬಳಿಕ ಬೋಧನೆಗೆ ವಿದಾಯ ಹೇಳಿ ಪೂರ್ಣಪ್ರಮಾಣದ ಹೋರಾಟದಲ್ಲಿ ತೊಡಗಿಸಿಕೊಂಡರು. ಅಖಿಲ ಭಾರತ ಕಿಸಾನ್‌ ಸಭಾದ ಹೊಣೆ ಹೊತ್ತ ಮೇಲೆ ದೇಶದ ವಿವಿಧ ಭಾಗಗಳಲ್ಲಿ ಬೃಹತ್‌ ರೈತ ಹೋರಾಟಗಳನ್ನು ಸಂಘಟಿಸುತ್ತಲೇ ಬಂದಿದ್ದಾರೆ. ರೈತ ಹೋರಾಟಗಳಿಗೆ ಹೊಸ ಶಕ್ತಿ ತುಂಬಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ರಾಜ್ಯ ರೈತ ಸಂಘದೊಂದಿಗೆ ಬೃಹತ್‌ ರೈತ ಪ್ರತಿಭಟನೆ, ಸಮಾವೇಶದಲ್ಲಿ ಭಾಗಿಯಾಗಿದ್ದರು. ಸರಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸುವ ನೀತಿ ಕೈಬಿಡಬೇಕು, ನೈಸ್ ಕಂಪನಿಯಿಂದ ಬಲವಂತದ ಭೂಸ್ವಾಧೀನ ನಿಲ್ಲಿಸಬೇಕು, ರಾಜ್ಯದ ಎಲ್ಲ ಬಡವರಿಗೆ ಮನೆ ಹಾಗೂ ಕೃಷಿ ಭೂಮಿ ಒದಗಿಸಬೇಕು ಎಂಬ ಮುಖ್ಯ ಬೇಡಿಕೆಗಳನ್ನು ಸರ್ಕಾರ ಮುಂದಿಟ್ಟಿದ್ದರು.

‘‘ಬಡ ರೈತರ ಭೂಮಿ ಕಿತ್ತುಕೊಂಡು ಬಹುರಾಷ್ಟ್ರೀಯ ಕಂಪನಿಗಳಿಗೆ ನೀಡುವಂತಹ ಸರಕಾರದ ನೀತಿ ಖಂಡಿಸುತ್ತೇವೆ. ಬಂಜರು ಭೂಮಿಯನ್ನು ತಮ್ಮ ಬೆವರ ಮೂಲಕ ಹದ ಮಾಡಿ ಕೃಷಿ ಮಾಡುವ ಲಕ್ಷಾಂತರ ರೈತರಿದ್ದಾರೆ. ಅದರಲ್ಲಿ ಬೆಳೆ ತೆಗೆದು ದೇಶಕ್ಕೆ ಅನ್ನ ನೀಡುತ್ತಿದ್ದಾರೆ. ಅಂತಹ ರೈತರನ್ನು ಭೂಗಳ್ಳರು ಎಂದು ಒಕ್ಕಲೆಬ್ಬಿಸುತ್ತಿರುವುದು ಸರಿಯಲ್ಲ,’’ ಸರ್ಕಾರದ ವಿರುದ್ಧ ಕಿಡಿಕಾರಿದ್ದರು.

ಇದನ್ನೂ ಓದಿ : ರೈತ ಸಾಗರದೆದುರು ಮಂಡಿಯೂರಿದ ಫಡ್ನವಿಸ್ ನೇತೃತ್ವದ ಮಹಾ ಬಿಜೆಪಿ ಸರ್ಕಾರ

ಕಳೆದ ವರ್ಷ ಅಂಕೋಲಾದಲ್ಲಿ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ೪ನೇ ಜಿಲ್ಲಾ ಸಮ್ಮೇಳನದಲ್ಲಿ, ದೇಶಾದ್ಯಂತ ಬೃಹತ್‌ ರೈತ ಹೋರಾಟ ಸುಳಿವು ನೀಡಿದ್ದ ಅವರು, "ಸ್ವಾಮಿನಾಥನ್‌ ವರದಿಯನ್ನು ಜಾರಿಗೊಳಿಸಲು ಒತ್ತಾಯಿಸಿದರೆ ಕೇಂದ್ರ ಸರಕಾರ ಜಾಣಕಿವುಡು ಪ್ರದರ್ಶಿಸುತ್ತಿದೆ. ಆರ್ಥಿಕ, ಕೃಷಿ, ಶಿಕ್ಷಣ ಕ್ಷೇತ್ರಗಳನ್ನು ಶ್ರೀಮಂತರಿಗೆ ಒಪ್ಪಿಸಿ ಜನಸಾಮಾನ್ಯರನ್ನು ಸಂಕಷ್ಟಗಳಿಗೆ ದೂಡುತ್ತಿರುವ ಕೇಂದ್ರ ಸರ್ಕಾರ ಇದನ್ನೇ ‘ಅಚ್ಛೇ ದಿನ್‌’ ಎಂದು ಹೇಳುತ್ತಿದೆ. ಇದರ ವಿರುದ್ಧ ಜನಾಂದೋಲನ ರೂಪಿಸುವ ಮೂಲಕ ಐಕ್ಯತೆಯಿಂದ ಎಲ್ಲರೂ ದೇಶಾದ್ಯಂತ ಬೃಹತ್‌ ಚಳವಳಿಗೆ ಮುಂದಾಗಬೇಕಿದೆ,” ಎಂದರು.

ಅಂಕೋಲಾದಲ್ಲಿ ಹೇಳಿದಂತೆಯೇ, ಫೆಬ್ರವರಿಯಲ್ಲಿ ರಾಜಸ್ಥಾನದಲ್ಲಿ ರೈತರಿಂದ ವಿಧಾನಸಭೆಗೆ ಮುತ್ತಿಗೆ ಹಾಕಿಸಿದರು. ವಸುಂಧರಾ ರಾಜೇ ಅವರ ಸರ್ಕಾರ ಪೊಲೀಸ್‌ ಮೂಲಕ ಹೋರಾಟ ಹತ್ತಿಕ್ಕುವ ಯತ್ನ ನಡೆಸಿದರೂ ರೈತರ ಹೋರಾಟ ಸರ್ಕಾರಕ್ಕೆ ಬಿಸಿ ಮುಟ್ಟಿಸಿತು. ಅದರ ಮುಂದುವರಿದ ಭಾಗವೇ ಮಹಾರಾಷ್ಟ್ರ ರೈತರ ಪ್ರತಿಭಟನೆ.

ನವ ಉದಾರವಾದ ದೇಶಕ್ಕೆ ಮಾರಕವಾಯಿತು ಎಂದು ಪ್ರತಿಪಾದಿಸುವ ವಿಜು ಕೃಷ್ಣನ್‌ ಅವರನ್ನು, ಪಕ್ಷ ಮತ್ತು ಪಕ್ಷದ ಚಿಂತನೆಗಳನ್ನು ಬಲಪಡಿಸುವ ಭರವಸೆಯಾಗಿ ಎಡಪಕ್ಷಗಳು ಕಾಣುತ್ತಿರುವಂತಿದೆ.

ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ 3 ಪ್ರಮುಖ ಸುದ್ದಿಗಳು
ವ್ಯಕ್ತಿ ಆರಾಧನೆಯಲ್ಲಿ ಸಿಲುಕಿದ ಬಿಜೆಪಿಗೆ ಬುದ್ಧಿ ಕಲಿಸಲು ಹೊರಟರೇ ಭಾಗವತ್‌?
ಪಠ್ಯಪುಸ್ತಕ ವಿಳಂಬ; ಅಭಿಮಾನಿ ಪ್ರಕಾಶನ ಸೇರಿ ೨೪ ಮುದ್ರಣಾಲಯ ಕಪ್ಪುಪಟ್ಟಿಗೆ?
Editor’s Pick More