ಪಿಎನ್‌ಬಿ ಹಗರಣ ಹಿನ್ನೆಲೆ; ಒಪ್ಪಂದ ಪತ್ರ ವ್ಯವಸ್ಥೆಯನ್ನೇ ರದ್ದು ಮಾಡಿದ ಆರ್‌ಬಿಐ

ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 12,800 ಕೋಟಿ ರುಪಾಯಿ ವಂಚಿಸಿದ ಹಿನ್ನೆಲೆಯಲ್ಲಿ ಆರ್‌ಬಿಐ ಒಪ್ಪಂದ ಪತ್ರ ವ್ಯವಸ್ಥೆಯನ್ನೇ ರದ್ದು ಮಾಡಿದೆ. ವಿದೇಶಿ ಸಂಸ್ಥೆಗಳೊಂದಿಗೆ ವಹಿವಾಟು ನಡೆಸುವವರು ಬಳಸುತ್ತಿದ್ದ ಈ ವ್ಯವಸ್ಥೆ ತಕ್ಷಣದಿಂದ ರದ್ದಾಗಿದೆ

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 12,800 ಕೋಟಿ ರುಪಾಯಿ ನಷ್ಟಕ್ಕೆ ಕಾರಣವಾಗಿರುವ ಒಪ್ಪಂದ ಪತ್ರ (ಲೆಟರ್ ಆಫ್ ಅಂಡರ್‌ಸ್ಟಾಂಡಿಂಗ್) ವ್ಯವಸ್ಥೆಯನ್ನೇ ಭಾರತೀಯ ರಿಸರ್ವ್ ಬ್ಯಾಂಕ್ ರದ್ದು ಮಾಡಿದೆ.

ವಿಸ್ತೃತ ಮಾರ್ಗಸೂಚಿಗಳ ಪರಾಮರ್ಶೆಯ ನಂತರ ವಿದೇಶದಿಂದ ಆಮದು ಮಾಡಿಕೊಳ್ಳುವವರಿಗೆ ಸಾಲದ ವಹಿವಾಟು ನಡೆಸಲು ಎಡಿ ವರ್ಗ-1ರ ಬ್ಯಾಂಕುಗಳು ಒಪ್ಪಂದ ಪತ್ರಗಳನ್ನು ನೀಡುವ ವ್ಯವಸ್ಥೆ ರದ್ದು ಮಾಡಲು ನಿರ್ಧರಿಸಲಾಗಿದೆ. ಈ ನಿರ್ಧಾರವು ತಕ್ಷಣದಿಂದಲೇ ಜಾರಿಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.

ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಒಪ್ಪಂದ ಪತ್ರಗಳನ್ನು ಬಳಸಿಕೊಂಡು 12,800 ಕೋಟಿ ರುಪಾಯಿ ವಂಚಿಸಿದ್ದರು. ಒಪ್ಪಂದ ಪತ್ರಗಳ (ಎಲ್ಒಯು) ವ್ಯವಸ್ಥೆಯನ್ನು ಅಲ್ಪಕಾಲಾವಧಿ ವಹಿವಾಟಿಗೆ ಬಳಸಲಾಗುತ್ತದೆ. ಒಪ್ಪಂದ ಪತ್ರವು ವಿದೇಶಿ ಕಂಪನಿಯೊಂದಿಗೆ ವಹಿವಾಟು ನಡೆಸುವ ಗ್ರಾಹಕನು ಆ ಕಂಪನಿಗೆ ವಿದೇಶಿ ಕರೆನ್ಸಿಯಲ್ಲಿ ಪಾವತಿ ಮಾಡಲು ನೀಡುವ ಗ್ಯಾರಂಟಿ ಪತ್ರವಾಗಿರುತ್ತದೆ.

ಅಂದರೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ ನೀಡಿದ ಒಪ್ಪಂದ ಪತ್ರವನ್ನು ಬೇರೊಂದು ಬ್ಯಾಂಕಿನ ವಿದೇಶಿ ಶಾಖೆಗೆ ನೀಡಿ, ಆ ಶಾಖೆಯಿಂದ ಗ್ರಾಹಕ ವಹಿವಾಟು ನಡೆಸಿದ ಕಂಪನಿಗೆ ವಿದೇಶಿ ಕರೆನ್ಸಿಯಲ್ಲಿ ಪಾವತಿ ಮಾಡಬಹುದಾಗಿದೆ. ಹೀಗೆ ಪಾವತಿ ಮಾಡಿದ ನಂತರ ಗ್ರಾಹಕನು ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಹಣ ಪಾವತಿಸುತ್ತಾನೆ. ನಂತರ ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಒಪ್ಪಂದ ಪತ್ರ ಪಡೆದು, ವಿದೇಶಿ ಕರೆನ್ಸಿ ಪಾವತಿಸಿದ ಬ್ಯಾಂಕಿಗೆ ಹಣ ಪಾವತಿಸುತ್ತದೆ. ಈ ವಹಿವಾಟಿಗೆ ಬ್ಯಾಂಕು ಕಮಿಷನ್ ಪಡೆಯುತ್ತದೆ.

ಪಂಜಾಬ್ ನ್ಯಾಷನಲ್ ಬ್ಯಾಂಕಿನ ಕೆಲವು ಸಿಬ್ಬಂದಿ ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿಗೆ ಬ್ಯಾಂಕಿನ ಉನ್ನತಾಧಿಕಾರಿಗಳಿಗೆ ಗೊತ್ತಿಲ್ಲದಂತೆ ಒಪ್ಪಂದ ಪತ್ರಗಳನ್ನು ನೀಡಿದ್ದರು. ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಈ ಒಪ್ಪಂದ ಪತ್ರಗಳನ್ನು ಪಡೆದು, ವಿದೇಶದಲ್ಲಿರುವ ಭಾರತದ ಬೇರೆ ಬೇರೆ ಬ್ಯಾಂಕುಗಳ ಶಾಖೆಯಲ್ಲಿ ಸಾಲ ಪಡೆದಿದ್ದರು. ಆರಂಭದಲ್ಲಿ ಸಾಲ ಮರುಪಾವತಿಸಿದ್ದ ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಬೃಹತ್ ಪ್ರಮಾಣದಲ್ಲಿ ಸಾಲ ಪಡೆದ ನಂತರ ವಂಚಿಸಿ ಪರಾರಿಯಾಗಿದ್ದಾರೆ.

ವಿದೇಶದಲ್ಲಿರುವ ಶಾಖೆಗಳಲ್ಲಿನ ವಹಿವಾಟು ಸ್ಪಿಫ್ಟ್ ವ್ಯವಸ್ಥೆಯಡಿ ನಡೆಯುತ್ತದೆ. ದೇಶೀಯ ವಹಿವಾಟು ಸಿಬಿಎಸ್ ವ್ಯವಸ್ಥೆಯಡಿ ನಡೆಯುತ್ತದೆ. ಸ್ವಿಫ್ಟ್ ಮತ್ತು ಸಿಪಿಎಸ್ ನಡುವೆ ಸಂಯೋಜನೆ ಇಲ್ಲದ ಕಾರಣ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಿದೇಶಿ ಶಾಖೆಗಳಲ್ಲಿ ತನ್ನ ಒಪ್ಪಂದ ಪತ್ರ ಪಡೆದು ಸಾಲ ಪಡೆದ ವಹಿವಾಟಿನ ಮಾಹಿತಿ ದಕ್ಕಿರಲಿಲ್ಲ. ಹೀಗಾಗಿ, ವಂಚನೆ ಪ್ರಕರಣ ಬಯಲಿಗೆ ಬರುವುದು ತಡವಾಗಿತ್ತು.

ಕಳೆದ ಏಳು ವರ್ಷಗಳಿಂದ ನೀರವ್ ಮೋದಿ ತನ್ನ ಒಡೆತನದ ಡೈಮಂಡ್ ಆರ್‌ಯುಎಸ್, ಸೋಲಾರ್ ಎಕ್ಸ್‌ಪೋರ್ಟ್‌, ಸ್ಟೆಲ್ಲಾರ್ ಡೈಮಂಡ್ಸ್ ಕಂಪನಿಗಳಿಗೆ ಮುಂಬೈ ಬ್ರಾಡಿ ರೋಡ್ ಪಿಎನ್‌ಬಿ ಶಾಖೆಯಿಂದ ಪಡೆದ ಒಪ್ಪಂದ ಪತ್ರಗಳನ್ನು ಬಳಸಿಕೊಂಡು ಅಲ್ಪಾವಧಿ ಸಾಲ ಪಡೆಯುತ್ತಿದ್ದ. ತನ್ನ ಕಂಪನಿಗಳಿಗೆ ವಜ್ರ ಮತ್ತು ಹರಳು ಸರಬರಾಜು ಮಾಡುತ್ತಿದ್ದ ವಿದೇಶಿ ಕಂಪನಿಗಳಿಗೆ ವಿದೇಶಿ ಕರೆನ್ಸಿ ಮೂಲಕ ಹಣ ಪಾವತಿಸುತ್ತಿದ್ದ. ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳ ಪ್ರಕಾರ, ಈ ಒಪ್ಪಂದ ಪತ್ರಗಳನ್ನು 90 ದಿನಗಳ ನಂತರ ಮಾನ್ಯ ಮಾಡಬಾರದು. ಆದರೂ ಪಿಎನ್‌ಬಿ ಮತ್ತು ಇತರ ಬ್ಯಾಂಕುಗಳು ದೀರ್ಘ ಅವಧಿವರೆಗೆ ಸಾಲ ನೀಡುತ್ತಿದ್ದವು. ಈ ಕಾರಣಕ್ಕಾಗಿಯೇ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಬಗ್ಗೆ ವಿಸ್ತೃತ ತನಿಖೆ ನಡೆಸುವಂತೆ ಸಂಸದೀಯ ಸಮಿತಿ ಹಣಕಾಸು ಸಚಿವಾಲಯಕ್ಕೆ ಸೂಚಿಸಿದೆ.

ಇದನ್ನೂ ಓದಿ : ನೀರವ್ ಮೋದಿ ಹಗರಣ; ಯಶವಂತ್ ಸಿನ್ಹಾ ಪ್ರಶ್ನೆಗಳಿಗೆ ಸಚಿವ ಜೇಟ್ಲಿ ಉತ್ತರಿಸುವರೇ?

ಈಗಾಗಲೇ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸಿ ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿಗೆ ಸೇರಿದ ಆಸ್ತಿಗಳನ್ನು ಜಫ್ತಿ ಮಾಡಿವೆ. ಪ್ರಕರಣದ ನಂತರ ಪಂಜಾಬ್ ನ್ಯಾಷನಲ್ ಬ್ಯಾಂಕ್ ಜತೆಗೆ ಸಾರ್ವಜನಿಕ ವಲಯದ ಬ್ಯಾಂಕುಗಳ ಷೇರುಗಳು ಕುಸಿದಿವೆ. ಹಗರಣದಲ್ಲಿ ಭಾಗಿಯಾಗಿದ್ದ ಮೆಹುಲ್ ಚೊಕ್ಸಿಗೆ ಸೇರಿದ ಗೀತಾಂಜಲಿ ಜೆಮ್ಸ್ ಷೇರು 15 ರುಪಾಯಿಗೆ ಕುಸಿದಿದೆ.

ಹಗರಣದ ಹಿನ್ನೆಲೆಯಲ್ಲಿ 100 ಕೋಟಿ ರು. ಮೀರಿ ಸಾಲ ಮಾಡಿ ವಿದೇಶಕ್ಕೆ ಹಾರುವ ವಂಚಕರ ದೇಶೀಯ ಆಸ್ತಿಯನ್ನು ತ್ವರಿತವಾಗಿ ವಶಪಡಿಸಿಕೊಂಡು ವಿಲೇವಾರಿ ಮಾಡಲು ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಮಸೂದೆಯನ್ನು (ಎಫ್ಇಒಬಿ) ಸಂಸತ್ತಿನಲ್ಲಿ ಮಂಡಿಸಲಾಗಿದೆ. ಅಲ್ಲದೆ, 50 ಕೋಟಿ ರು. ಮೀರಿದ ಸಾಲ ಪಡೆಯಲು ಪಾಸ್‌ಪೋರ್ಟ್ ಕಡ್ಡಾಯ ಮಾಡಲಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More