ವಿಡಿಯೋ ಸ್ಟೋರಿ | ಧರ್ಮಸಂಕಟಕ್ಕೆ ಸಿಲುಕಿರುವ ಅಮಿತ್ ಶಾ ವಿರೋಧಾಭಾಸದ ಹೇಳಿಕೆಗಳು 

ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನದ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೀಡುತ್ತಿರುವ ಹೇಳಿಕೆಗಳು ದ್ವಂದ್ವ ನಿಲುವುಗಳಿಂದ ಕೂಡಿರುವುದು ಗೋಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅವರು ನೀಡಿದ ವಿಭಿನ್ನ ಹೇಳಿಕೆಗಳನ್ನು ‘ದಿ ಸ್ಟೇಟ್’ ವಿಶ್ಲೇಷಿಸಿದೆ

ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಕಲ್ಪಿಸುವ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ವಿರೋಧಾಭಾಸದ ಹೇಳಿಕೆಗಳನ್ನು ನೀಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಮೇ.12 ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸ ಕೈಗೊಂಡಿರುವ ಅವರು ಲಿಂಗಾಯತ ಧರ್ಮ ವಿಷಯವಾಗಿ ತಮ್ಮ ಹೇಳಿಕೆಗಳನ್ನು ಬದಲಿಸುತ್ತಲೇ ಇದ್ದಾರೆ.

ಮಾ. 22 ರಂದು ಇಂಡಿಯಾ ಟುಡೇ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಲಿಂಗಾಯತ ಧರ್ಮ ವಿಷಯವಾಗಿ ಪ್ರಶ್ನೆ ಎದುರಾದಾಗ ಅಮಿತ್ ಶಾ ಅವರು, “ಲಿಂಗಾಯತ ಧರ್ಮ ವಿಚಾರ ಸಂವೇದನಾಶೀಲವಾದದ್ದು, ಚುನಾವಣೆ ಹತ್ತಿರವಿರುವಾಗ ಇಂತಹ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ,” ಎಂದಿದ್ದರು. ಈ ವಿಷಯವಾಗಿ ಚರ್ಚೆ ಮುಂದುವರಿಸುವುದನ್ನು ಸರಾಸಗಟಾಗಿ ನಿರಾಕರಿಸಿದ್ದರು.

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿಗೆ ಭೇಟಿ ನೀಡಿದ್ದ ಅಮಿತ್ ಶಾ ಮಾ.31 ರಂದು ಪತ್ರಿಕಾಗೋಷ್ಠಿ ಏರ್ಪಡಿಸಿದ್ದರು. ಈ ವೇಳೆ ಪತ್ರಕರ್ತರೊಬ್ಬರು ಲಿಂಗಾಯತ ಧರ್ಮ ವಿಚಾರವಾಗಿ ಬಿಜೆಪಿಯ ನಿಲುವನ್ನು ಸ್ಪಷ್ಟಪಡಿಸುವಂತೆ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶಾ ಅವರು, “ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಕಲ್ಪಿಸುವ ಬಗ್ಗೆ ರಾಜ್ಯ ವಿಧಾನಸಭಾ ಚುನಾವಣೆ ನಂತರ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಚುನಾವಣೆ ಸಂದರ್ಭದಲ್ಲಿ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುವುದಿಲ್ಲ. ಸಿದ್ದರಾಮಯ್ಯ ಸರ್ಕಾರ ಲಿಂಗಾಯತ ಧರ್ಮದ ವಿಚಾರವಾಗಿ ಅಧಿಕೃತ ಶಿಪಾರಸು ಪತ್ರ ಕೇಂದ್ರಕ್ಕೆ ತಲುಪಿಸಿಲ್ಲ,” ಎಂದು ಉತ್ತರಿಸಿದ್ದರು.

ಮೈಸೂರಿನಲ್ಲಿ ನೀಡಿದ ಹೇಳಿಕೆ ಮಾ. 28 ರಂದು ನೀಡಿದ್ದ ಹೇಳಿಕೆಗೆ ತದ್ವಿರುದ್ದವಾಗಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಅವರು, “ಕರ್ನಾಟಕ ಸರ್ಕಾರವು ಕಳುಹಿಸಿರುವ ಲಿಂಗಾಯತ ಅಲ್ಪಸಂಖ್ಯಾತ ಧರ್ಮದ ಪ್ರಸ್ತಾವಣೆ ಕೇಂದ್ರಕ್ಕೆ ಬಂದು ತಲುಪಿದೆ,” ಎಂದು ಲೋಕಸಭೆಯಲ್ಲಿ ತಿಳಿಸಿದ್ದರು. ಬಿಜೆಪಿ ನಾಯಕರ ತದ್ವಿರುದ್ದ ಹೇಳಿಕೆ ಹಿನ್ನೆಲೆಯಲ್ಲಿ ನೋಡುವುದಾದರೆ, ಅಮಿತ್‌ ಶಾ ಮೈಸೂರಿನಲ್ಲಿ ನೀಡಿದ ಹೇಳಿಕೆ ಜನರ ಕಣ್ಣಿಗೆ ಮಣ್ಣೆರಚುವ ತಂತ್ರವಾಗಿ ಕಂಡುಬರುತ್ತದೆ.

ಏ.3 ರಂದು ಬಾದಾಮಿ ತಾಲೂಕಿನ ಶಿವಯೋಗ ಮಂದಿರದಲ್ಲಿ ವೀರಶೈವ ಮಠಾಧೀಶರನ್ನು ಬೇಟಿ ಮಾಡಿದ ಅಮಿತ್ ಶಾ ವೀರಶೈವ ಮಠಾಧೀಶರ ಒತ್ತಾಯಕ್ಕೆ ಮಣಿದು, “ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿದ ಶಿಫಾರಸು ಚುನಾವಣೆ ದೃಷ್ಟಿಯಿಂದ ಕೂಡಿದೆ. ಯಾವುದೇ ಪರಿಸ್ಥಿತಿಯಲ್ಲಿ ಧರ್ಮ ವಿಭಜನೆಯನ್ನು ಬಿಜೆಪಿ ಮಾಡುವುದಿಲ್ಲ. ಈ ಬಗ್ಗೆ ಆತಂಕಗೊಳ್ಳುವುದು ಬೇಡ,” ಎಂದು ವೀರಶೈವ ಮಠಾಧೀಶರಿಗೆ ಅಭಯ ನೀಡಿದರು.

ಇದನ್ನೂ ಓದಿ : ಲಿಂಗಾಯತ ಧರ್ಮ ಸಂಕಟ; ಬೀಸೋ ದೊಣ್ಣೆಯಿಂದ ಪಾರಾಗಲು ಶಾ ಪ್ರಯತ್ನ

ಮಾ.೨೭ರಂದು ಅಮಿತ್ ಶಾ ಅವರು ಚಿತ್ರದುರ್ಗದ ಮುರುಘಾ ಮಠಕ್ಕೆ ಬೇಟಿ ನೀಡಿದ್ದರು. ಮುರುಘಾ ಶರಣರು ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಶಾ ಅವರನ್ನು ಕೇಳಿಕೊಂಡಿದ್ದರು. ಇದಕ್ಕೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದ ಶಾ ಅವರು ಈಗ ವಿರೋಧಾಭಾಸದ ಹೇಳಿಕೆ ನೀಡಿರುವುದು ವಿರಕ್ತ ಶರಣರ ಕೋಪಕ್ಕೆ ಗುರಿಯಾಗಿದೆ.

ಈ ಎಲ್ಲ ಬೆಳವಣಿಗಳ ನಡುವೆ, ಅಮಿತ್ ಶಾ ಹೂಡಿದ ತಂತ್ರಕ್ಕೆ ಹಿನ್ನಡೆಯಾಗುವಂತೆ ಲಿಂಗಾಯತ ಧರ್ಮ ವಿಚಾರವಾಗಿ ಕರ್ನಾಟಕ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದೆ. ಲಿಂಗಾಯತ ಹಾಗೂ ಬಸವತತ್ವ ಒಪ್ಪುವ ವೀರಶೈವ ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಕರ್ನಾಟಕ ಸರ್ಕಾರ ಸಲ್ಲಿಸಿದ ಶಿಫಾರಸು ಬಗ್ಗೆ ಕೇಂದ್ರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಕರ್ನಾಟಕ ಹೈಕೋರ್ಟ್ ಕೇಂದ್ರಕ್ಕೆ ತಾಕೀತು ಮಾಡಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More