ಜಾತಿ, ಮತೀಯ ಧ್ರುವೀಕರಣದ ನಡೆಗಳು ಬರಲಿರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿಯೇ?

ಮೇಲ್ನೋಟಕ್ಕೆ ನ್ಯಾಯಾಂಗದ ಪರಿಧಿಯಲ್ಲಿನ ಪ್ರಕರಣಗಳಂತೆ ತೋರುವ ಅನೇಕ ವಿಚಾರಗಳು ಇಂದು ಸಾಮಾಜಿಕ ತುಮುಲಕ್ಕೆ ಕಾರಣವಾಗುತ್ತಿವೆ. ನ್ಯಾಯಾಂಗದ ಪರಿಧಿಯಾಚೆಗಿನ ಶಕ್ತಿಗಳು ಹೂಡುವ ಕಾರ್ಯತಂತ್ರಗಳಿಗೆ ನ್ಯಾಯಾಲಯ ವೇದಿಕೆಯಾಗುತ್ತಿದೆಯೇ ಎನ್ನುವ ಚರ್ಚೆಗಳು ಹೆಚ್ಚೆಚ್ಚು ಕೇಳಿಬರತೊಡಗಿವೆ

ಪರಿಶಿಷ್ಟ ಜಾತಿ ಮತ್ತು ವರ್ಗಗಳ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ದೇಶಾದ್ಯಂತ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ ಬೆನ್ನಿಗೇ ಮುಂದಿನ ದಿನಗಳಲ್ಲಿ ಇಡೀ ಪ್ರಕರಣ ತೆಗೆದುಕೊಳ್ಳಬಹುದಾದ ಸಾಮಾಜಿಕ, ರಾಜಕೀಯ ತಿರುವುಗಳ ಕಡೆಗೆ ಈಗ ಚರ್ಚೆ ಹೊರಳಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್‌ ತನ್ನ ಆದೇಶದಲ್ಲಿ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ದುರಪಯೋಗವಾಗುತ್ತಿದ್ದು, ಇದರಡಿ ದೂರು ಸಲ್ಲಿಕೆಯಾದ ಕೂಡಲೇ ಎಫ್‌ಐಆರ್ ದಾಖಲಿಸುವುದಾಗಲಿ, ಆರೋಪಿಗಳನ್ನು ಬಂಧಿಸುವುದಾಗಲಿ ಮಾಡಬಾರದು. ತನಿಖೆಯ ನಂತರವೇ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ಕೋರ್ಟ್‌ ಆದೇಶ ಸಹಜವಾಗಿಯೇ ದಲಿತ ಸಮುದಾಯದ ತಳಮಳಕ್ಕೆ ಕಾರಣವಾಗಿದೆ. ತಮ್ಮ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯಲು ಇದ್ದ ಒಂದು ಕಾನೂನಾತ್ಮಕ ಆಸ್ತ್ರವೂ ಈಗ ದುರ್ಬಲಗೊಂಡಿದೆ ಎನ್ನುವ ಅಭಿಪ್ರಾಯ ದೇಶಾದ್ಯಂತ ನಡೆದ ಪ್ರತಿಭಟನೆಯ ವೇಳೆ ವ್ಯಕ್ತವಾಯಿತು. ವಾಸ್ತವದಲ್ಲಿ ಈ ಕಾಯ್ದೆ ಅಡಿ ದೂರು ಸಲ್ಲಿಸಿದರೂ ಅದನ್ನು ಒಮ್ಮೆಲೇ ದಾಖಲಿಸದೆ ದೂರುದಾರರ ಮನವೊಲಿಸುವ, ರಾಜಿ, ಸಂಧಾನ ನಡೆಸುವ ಪ್ರಹಸನಗಳು ಸಾಮಾನ್ಯವಾಗಿ ನಡೆಯುತ್ತಿದ್ದವು. ಬಹಳಷ್ಟು ಬಾರಿ ಪ್ರಕರಣಗಳು ದಾಖಲಾದರೂ ನ್ಯಾಯಾಂಗ ವಿಚಾರಣೆಯ ವೇಳೆ ದೂರುದಾರರನ್ನು ಓಲೈಸುವ, ಅವರ ಮೇಲೆ ಒತ್ತಡ ಹೇರುವ ತಂತ್ರವನ್ನು ಬಳಸಿ ಪ್ರಕರಣ ಕೈಬಿಡುವಂತೆ ಮಾಡುವ ನಿದರ್ಶನಗಳೂ ಸಾಕಷ್ಟಿದ್ದವು. ಅದೇನೇ ಇದ್ದರೂ, ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಯುವಲ್ಲಿ ಈ ಕಾಯ್ದೆ ಮಹತ್ವದ ಪಾತ್ರ ವಹಿಸಿತ್ತು. ದೌರ್ಜನ್ಯ ಎಸಗಲು ಮುಂದಾಗುವವರಿಗೆ ಕಾನೂನಿನ ಭಯವನ್ನೂ, ದೌರ್ಜನ್ಯಕ್ಕೆ ತುತ್ತಾದವರಿಗೆ ಕಾನೂನಿನ ಅಭಯವನ್ನೂ ಕಾಯಿದೆ ನೀಡುತ್ತಿತ್ತು ಎನ್ನುವ ಅಭಿಪ್ರಾಯಗಳು ದಲಿತ ಹೋರಾಟಗಾರರು, ಪ್ರಗತಿಪರರಿಂದ ವ್ಯಕ್ತವಾಗಿವೆ.

ಇದಾಗಲೇ ವಿವಿಧ ಸಂದರ್ಭ, ಸನ್ನಿವೇಶಗಳಲ್ಲಿ ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಆಪಾದನೆಯನ್ನು ಎದುರಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ಇಡೀ ಪ್ರಕರಣ ಕೇವಲ ಶಾಸನಾತ್ಮಕ ಸವಾಲಾಗಿಯೇ ಮಾತ್ರವಲ್ಲದೇ ರಾಜಕೀಯ ಸವಾಲಾಗಿಯೂ ಪರಿಣಮಿಸಿದಂತೆ ಹೊರನೋಟಕ್ಕೆ ಗೋಚರಿಸುತ್ತಿದೆ. ದೇಶಾದ್ಯಂತ ವ್ಯಕ್ತವಾದ ದಲಿತರ ಬೃಹತ್‌ ಪ್ರತಿಭಟನೆಗಳ ಬೆನ್ನಿಗೆ ಸೋಮವಾರವೇ ಕೇಂದ್ರವು ಕೋರ್ಟ್‌ ಮುಂದೆ ಮರುಪರಿಶೀಲನಾ ಅರ್ಜಿ ಸಲ್ಲಿಸಿತ್ತು. ಮಂಗಳವಾರ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ಆದೇಶವನ್ನು ಅಮಾನತಿನಲ್ಲಿಡಲು ನಿರಾಕರಿಸಿದ್ದು, ೧೦ ದಿನಗಳ ನಂತರ ವಿಚಾರಣೆ ನಡೆಸುವುದಾಗಿ ಹೇಳಿದೆ.

ನ್ಯಾ. ಯು.ಯು. ಲಲಿತ್ ಮತ್ತು ನ್ಯಾ. ಎ.ಕೆ.ಗೊಯಲ್‌‌ರಿದ್ದ ಸುಪ್ರೀಂಕೋರ್ಟ್‌ನ ವಿಭಾಗೀಯ ಪೀಠದ ಆದೇಶಗಳು ಇದಾಗಲೇ ನ್ಯಾಯಾಂಗ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ. ಈ ಹಿಂದೆ ಮಹಿಳಾ ಹೋರಾಟಗಾರರು ಹಾಗೂ ಲಿಂಗತಾರತಮ್ಯ ವಿರೋಧಿ ಗುಂಪುಗಳು ವರದಕ್ಷಿಣೆ ವಿರೋಧಿ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ ದುರ್ಬಲಗೊಳಿಸಿತು ಎಂದು ತೀವ್ರ ಆಕ್ಷೇಪಣೆಗಳನ್ನು ಎತ್ತಿದ್ದನ್ನೂ ಇಲ್ಲಿ ನೆನೆಯಬಹುದು. ಇದಲ್ಲದೆ ದಲಿತರಿಗೆ ಸರ್ಕಾರಿ ಸೇವೆಗಳಲ್ಲಿ ಬಡ್ತಿ ಮೀಸಲಾತಿ ಕಲ್ಪಿಸಿರುವ ಕಾಯ್ದೆಯನ್ನು ರದ್ದತಿಗೆ ಮುಂದಾಗಿರುವ ಪ್ರಕರಣದಲ್ಲಿಯೂ ಸುಪ್ರೀಂ ಕೋರ್ಟ್ ಇರಿಸಿರುವ ಹೆಜ್ಜೆಗಳು ಅನೇಕ ಸಂದೇಹಗಳನ್ನಂತೂ ದಲಿತ ಸಮುದಾಯದಲ್ಲಿ ಹುಟ್ಟುಹಾಕಿವೆ‌.

ಪ್ರಸ್ತುತ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಪ್ರಕರಣದಲ್ಲಿನ ಸರ್ವೋಚ್ಚ ನ್ಯಾಯಾಲಯ ಇರಿಸಿದ ಹೆಜ್ಜೆಯೂ ಸಹ ಹತ್ತು ಹಲವು ಚರ್ಚೆಗಳಿಗೆ, ವ್ಯಾಖ್ಯಾನಗಳಿಗೆ ಕಾರಣವಾಗಿದೆ. ದುರ್ಬಲ ವರ್ಗಗಳ ಹಕ್ಕುಗಳು ದಮನವಾಗುವುದನ್ನು ತಪ್ಪಿಸಲೆಂದೇ ರೂಪಿಸಲಾದ ಕಾಯ್ದೆಯ ಆಶಯಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯುವ ಆಶಯವನ್ನಿರಿಸಿ ಇಡೀ ಪ್ರಕರಣವನ್ನು ವ್ಯಾಖ್ಯಾನಿಸಿ ನ್ಯಾಯಾಲಯವು ಆದೇಶಿಸಿದೆ. ಇದು ನ್ಯಾಯಾಂಗದ ಅತಿಶಯ ನಡೆಯಾಗಿದ್ದು ಸಾಂವಿಧಾನಿಕ ಆಶೋತ್ತರಗಳ ಕೂದಲು ಸೀಳುವ ಕೆಲಸವಾಗಿದೆ ಎನ್ನುವ ಅಭಿಪ್ರಾಯ ಕಾನೂನು ತಜ್ಞರಿಂದ ವ್ಯಕ್ತವಾಗಿದೆ.

ಇತ್ತ ಪ್ರಕರಣ ಇದಾಗಲೇ ಗಂಭೀರ ರಾಜಕೀಯ ಸ್ವರೂಪ ಪಡೆಯತೊಡಗಿದೆ. ದಲಿತರಿಗೆ ಸಾಂವಿಧಾನಿಕವಾಗಿ, ಶಾಸನಬದ್ಧವಾಗಿ ನೀಡಿರುವ ಅಧಿಕಾರಗಳನ್ನು ಕಸಿಯುವ ಪ್ರಯತ್ನವನ್ನು ಕೇಂದ್ರ ಸರ್ಕಾರವು ಮಾಡುತ್ತಿದೆ ಎನ್ನುವ ಆರೋಪಗಳನ್ನು ವಿಪಕ್ಷಗಳು ಮಾಡುತ್ತಿವೆ. ಬಿಎಸ್‌ಪಿ ವರಿಷ್ಠೆ ಮಾಯಾವತಿಯವರು ಈ ಕುರಿತು ಆಕ್ರೋಶಭರಿತ ಹೇಳಿಕೆ ನೀಡಿದ್ದು, “ದಲಿತರ ಹಕ್ಕುಗಳನ್ನು ದಮನ ಮಾಡಲು ಕೇಂದ್ರ ಸರ್ಕಾರವು ನ್ಯಾಯಾಲಯಗಳ ಸಹಾಯವನ್ನು, ಆರ್‌ಎಸ್‌ಎಸ್‌ನವರ ನೆರವನ್ನು ಪಡೆಯುತ್ತಿದೆ,” ಎಂದು ನೇರವಾಗಿ ಆರೋಪಿಸಿದ್ದಾರೆ. ಮಾರ್ಚ್‌‌ ೨೦ರಂದೇ ನ್ಯಾಯಾಲಯದ ಆದೇಶ ಬಂದರೂ, ಈ ಸಂಬಂಧ ತುರ್ತು ಮರುಪರಿಶೀಲನಾ ಅರ್ಜಿ ಸಲ್ಲಿಸುವಂತೆ ತಾವು ಮತ್ತೆ ಮತ್ತೆ ಮನವಿ ಮಾಡಿದ ಹೊರತಾಗಿಯೂ ಕೇಂದ್ರ ಸರ್ಕಾರವು ತನ್ನ ದಲಿತ ವಿರೋಧಿ ನೀತಿಯನ್ನು ಮುಂದುವರೆಸಿತು. ಇದು ದಲಿತ ಹಾಗೂ ಆದಿವಾಸಿ ಸಮುದಾಯಗಳಿಗೆ ಈ ಸರ್ಕಾರವು ತಮ್ಮ ಹಿತರಕ್ಷಣೆಯ ಕ್ರಮಕ್ಕೆ ಮುಂದಾಗುವುದಿಲ್ಲವೇನೋ ಎನ್ನುವ ಭಾವನೆ ಮೂಡಿಸಿತು. ಅದುವೇ ಭಾರತ್‌ ಬಂದ್‌ ಕರೆ ಕೊಡಲು ಕಾರಣವಾಯಿತು. ಕೇಂದ್ರದ ಧೋರಣೆಯಿಂದಾಗಿ ಜೀವಹಾನಿ, ಆಸ್ತಿಪಾಸ್ತಿ ಹಾನಿಗಳು ಸಂಭವಿಸುವಂತಾಯಿತು. ಸರ್ಕಾರವು ಸೂಕ್ತ ಸಮಯದಲ್ಲಿ ಕ್ರಮ ಕೈಗೊಂಡಿದ್ದರೆ ಇದೆಲ್ಲವನ್ನೂ ತಪ್ಪಿಸಬಹುದಿತ್ತು ಎಂದಿದ್ದಾರೆ.

ಇತ್ತ ದಲಿತರ ಪ್ರತಿರೋಧದ ಭಾಗವಾಗಿ ಮೂಡಿದ ‘ಭಾರತ್‌ ಬಂದ್’‌ ವೇಳೆ ಆಸ್ತಿಪಾಸ್ತಿ ನಷ್ಟ ಸಂಭವಿಸಿದ್ದನ್ನು ವಿರೋಧಿಸಿ ರಾಜಸ್ಥಾನದಲ್ಲಿ ಮಂಗಳವಾರ ಸವರ್ಣೀಯರು ಪ್ರತಿಭಟನೆ ನಡೆಸಿದ್ದಾರೆ. ಹಿಂದುವಾನ್‌ ನಗರದಲ್ಲಿ ನಡೆದ ಪ್ರತಿಭಟನೆಯ ವೇಳೆ ಇಬ್ಬರು ದಲಿತ ಶಾಸಕರ ಮನೆಗಳಿಗೆ ಈ ಗುಂಪುಗಳು ಬೆಂಕಿ ಇಟ್ಟಿವೆ. ದಲಿತರ ಕಾಲೋನಿಯೊಂದಕ್ಕೆ ನುಗ್ಗಿ ದಾಂಧಲೆ ನಡೆಸುವ ಪ್ರಯತ್ನವನ್ನೂ ಮಾಡಿವೆ. ಇದು ಮುಂದಿನ ದಿನಗಳಲ್ಲಿ ಗಂಭೀರವಾದ ಕಾನೂನು ಸುವ್ಯವಸ್ಥೆ ಪ್ರಶ್ನೆ ಉತ್ತರ ಭಾರತದ ರಾಜ್ಯಗಳಲ್ಲಿ ಮೂಡಬಹುದೇ ಎನ್ನುವ ಸಂದೇಹವನ್ನು ಹುಟ್ಟುಹಾಕಿದೆ. ಪ್ರಕರಣದ ಸಂಬಂಧ ಕೇಂದ್ರ ಹಾಗೂ ವಿಶೇಷವಾಗಿ ಉತ್ತರ ಭಾರತದ ಬಿಜೆಪಿ ಆಡಳಿತವಿರುವ ರಾಜ್ಯಗಳು ಮುಂಜಾಗರೂಕತೆ ವಹಿಸದೆ ಹೋದರೆ ಮತ್ತೊಮ್ಮೆ ಮಂಡಲ್ ವರದಿಗಾಗಿ ಆಗ್ರಹಿಸಿ - ವಿರೋಧಿಸಿ ನಡೆದ ಪ್ರತಿಭಟನೆಗಳಿಂದ ತತ್ತರಿಸಿದಂತೆಯೇ ಉತ್ತರ ಭಾರತದ ಜನಜೀವನ ತತ್ತರಿಸಬೇಕಾಗಬಹುದು. ಮಂಡಲ್‌ ಚರ್ಚೆ ಸಾಂವಿಧಾನಿಕ ಪರಿಧಿಯಿಂದ ಆಚೆ ಸಾಗಿ ಹೇಗೆ ಉತ್ತರ ಭಾರತದ ಸಮುದಾಯುಗಳನ್ನು ವಿಭಜಿಸಿದವೋ ಅದೇ ರೀತಿ ಮತ್ತೊಂದು ಬಾರಿ ಜಾತೀಯ ಧ್ರುವೀಕರಣದ ಕಾವು ಹೆಚ್ಚಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ವಿಪರ್ಯಾಸವೆಂದರೆ, ಇದೆಲ್ಲವೂ ಕೇವಲ ನ್ಯಾಯಿಕ ಪ್ರಕ್ರಿಯೆಗೆ ಸಂಬಂಧಿಸಿದ ವಿಷಯವಾಗಿ ಮಾತ್ರವೇ ಉಳಿದಿಲ್ಲ. ಬದಲಿಗೆ, ಒಂದು ನಿರ್ದಿಷ್ಟ ‘ರಾಜಕೀಯ ಕಾರ್ಯತಂತ್ರ’ದ ಭಾಗವಾಗಿ ನಡೆಯುತ್ತಿರುವಂತೆ ಭಾಸವಾಗುತ್ತಿವೆ. ದಲಿತರು ಮತ್ತು ಸವರ್ಣೀಯರ ನಡುವೆ ಕಂದರವನ್ನು ಸೃಷ್ಟಿಸುವ, ದಲಿತ ಹಾಗೂ ದಲಿತೇತರ ಜಾತೀಯ ಧ್ರುವೀಕರಣಗಳಿಗೆ ಕಾರಣವಾಗುವ ನಡೆಗಳಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪರೋಕ್ಷವಾಗಿ ಇಂಬು ನೀಡುತ್ತಿದೆ ಎನ್ನುವ ಭಾವನೆ ದಿನೇದಿನೇ ದಲಿತ ಸಮುದಾಯಗಳಲ್ಲಿ ಬಲಗೊಳ್ಳುತ್ತಿರುವಂತೆಯೇ, ತಮ್ಮ ಗುಪ್ತ ಕಾರ್ಯಸೂಚಿಗೆ ಅನುಸಾರವಾಗಿಯೇ ಎಲ್ಲವೂ ನಡೆಯುತ್ತಿದೆ ಎನ್ನುವ ವಿಕೃತ ಹರ್ಷ ಬಲಪಂಥೀಯ ಸಂಘಟನೆಗಳಿಗೆ ಸೇರಿದ ಮನಸ್ಸುಗಳಿಂದ ಹೊಮ್ಮತೊಡಗಿದೆ. ಇಂತಹ ಅನುಮಾನಗಳನ್ನು ದೂರೀಕರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಈವರೆಗೆ ಯಾವುದೇ ಗಂಭೀರ ಹೆಜ್ಜೆಗಳಿಗೆ ಮುಂದಾಗಿಲ್ಲ ಎನ್ನುವುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ : ಬಹುಮುಖಿ | ದಲಿತರ ದೌರ್ಜನ್ಯ ಕಾಯ್ದೆ ಕುರಿತ ಸುಪ್ರೀಂ ತೀರ್ಪು ಎಷ್ಟು ಸಮಂಜಸ? 

ದೇಶಾದ್ಯಂತ ದಲಿತರನ್ನು ಗುರಿಯಾಗಿಸಿಕೊಂಡು ನಡೆದ ಹಲ್ಲೆಗಳು, ದಲಿತ ಸಂಘಟನೆಗಳ ವ್ಯಾಪಕ ಆಕ್ರೋಶಕ್ಕೆ ಕಾರಣವಾದ ಊನಾ ಘಟನೆ, ಬಡ್ತಿ ಮೀಸಲಾತಿ ವಿಚಾರದಲ್ಲಿ ಕೇಂದ್ರ ಸರ್ಕಾರ ಅನುಸರಿಸಿರುವ ಧೋರಣೆ, ಕೇಂದ್ರ ಸಚಿವ ಅನಂತ್‌ ಕುಮಾರ್ ಹೆಗಡೆ ಸಂವಿಧಾನವನ್ನು ಬದಲಾಯಿಸುವ ಸಲುವಾಗಿಯೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ನೀಡಿದ್ದ ಹೇಳಿಕೆಯೂ ಸೇರಿದಂತೆ, ವಿವಿಧ ಸಂದರ್ಭಗಳಲ್ಲಿ ಬಿಜೆಪಿಯ ಮುಖಂಡರು ನೀಡಿದ ಸಂವಿಧಾನಕ್ಕೆ, ಸಾಮಾಜಿಕ ನ್ಯಾಯಕ್ಕೆ ಸವಾಲೊಡ್ಡುವಂತೆ ನೀಡಿರುವ ಹೇಳಿಕೆಗಳು ಇವೆಲ್ಲವೂ ಸಹಜವಾಗಿಯೇ ದಲಿತ ಸಮುದಾಯದಲ್ಲಿ ಆತಂಕವನ್ನು ಮೂಡಿಸಿವೆ. ಮುಸಲ್ಮಾನರು ಹಾಗೂ ದಲಿತರು ಇಂದು ಹೆಚ್ಚು ಕಡಿಮೆ ಒಂದೇ ತೆರನಾದ ಆತಂಕಗಳನ್ನು ಎದುರಿಸುತ್ತಿರುವುದು ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಗಂಭೀರ ಆತಂಕ ಹುಟ್ಟಿಸುತ್ತಿದೆ. ಆದರೆ, ಇದೆಲ್ಲವೂ ಚುನಾವಣಾ ರಾಜಕಾರಣದ ಭಾಗವಾಗಿಯೇ ನಡೆದು ಹೋದರೆ, ಚುನಾವಣೆಗಳನ್ನೂ ಯಾರೇ ಗೆದ್ದರೂ ಅಂತಿಮವಾಗಿ ಸೋಲು ಸಮಾಜ ಹಾಗೂ ಸಂವಿಧಾನದ್ದೇ ಆಗಿರುತ್ತದೆ.

ಮತೀಯ ಧ್ರುವೀಕರಣ ಹಾಗೂ ಜಾತೀಯ ಧ್ರುವೀಕರಣಗಳೇ ೨೦೧೯ರ ಲೋಕಸಭಾ ಚುನಾವಣೆಯ ಕಾರ್ಯಸೂಚಿಗಳಾಗಬಹುದೇ ಎನ್ನುವ ಪ್ರಶ್ನೆ ಈ ಸಂದರ್ಭದಲ್ಲಿ ಮೂಡದೆ ಇರದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More