ಟ್ವಿಟರ್ ಸ್ಟೇಟ್ | ಪ್ರೆಸ್ ಕೌನ್ಸಿಲ್ ಆಫ್‌ ಇಂಡಿಯಾ ಪ್ರಾಮಾಣಿಕ ಸಂಸ್ಥೆಯೆ?

ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರು ಯಾರು ಎನ್ನುವ ಬಗ್ಗೆ ಟ್ವಿಟರ್‌ನಲ್ಲಿ ತೀವ್ರ ಚರ್ಚೆಯಾಗಿದೆ. ಪತ್ರಕರ್ತರ ಪ್ರಾಮಾಣಿಕತೆ ಪರಿಶೀಲಿಸುವವರು ಪ್ರಾಮಾಣಿಕರೇ ಅಥವಾ ಸರ್ಕಾರದ ಪರ ಸುದ್ದಿ ಪ್ರಕಟಿಸುವವರೇ? ಬಿಜೆಪಿ ಸಂಸದರೇ ಎನ್ನುವ ವಿಚಾರವಾಗಿ ಚರ್ಚೆ ಕಾವೇರಿದೆ

ಸುಳ್ಳು ಸುದ್ದಿಗಳನ್ನು ಪ್ರಕಟಿಸುವ ಪತ್ರಕರ್ತರ ಪತ್ರಿಕಾ ಮಾನ್ಯತೆಯನ್ನು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ರದ್ದುಪಡಿಸುವ ನಿರ್ದೇಶನಗಳನ್ನು ಸರ್ಕಾರ ನೀಡಿತ್ತು. ನಂತರ ಮಾಧ್ಯಮಗಳ ಒತ್ತಡದ ನಂತರ ಈ ನಿರ್ಧಾರವನ್ನು ಹಿಂಪಡೆದುಕೊಂಡ ಸರ್ಕಾರ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ಸ್ವಯಂಪ್ರೇರಣೆಯಿಂದ ಸುಳ್ಳುಸುದ್ದಿಗಳ ಮೇಲೆ ಕ್ರಮ ಕೈಗೊಳ್ಳಬಹುದು ಎಂದು ನೀತಿಯನ್ನು ಬದಲಿಸಲಾಗಿದೆ. ಹೀಗಾಗಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರು ಯಾರು ಅಥವಾ ಮಾಧ್ಯಮ ಮಾನ್ಯತಾ ಪತ್ರವನ್ನು ನೀಡುವವರು ಯಾರು ಎನ್ನುವ ಬಗ್ಗೆ ಟ್ವಿಟರ್‌ನಲ್ಲಿ ತೀವ್ರ ಚರ್ಚೆಯಾಗಿದೆ. ಪತ್ರಕರ್ತರ ಪ್ರಾಮಾಣಿಕತೆಯನ್ನು ಪರಿಶೀಲಿಸುವವರು ಪ್ರಾಮಾಣಿಕರೇ ಅಥವಾ ಸರ್ಕಾರದ ಪರವಾಗಿ ಏಕಪಕ್ಷೀಯ ಸುದ್ದಿಗಳನ್ನು ಪ್ರಕಟಿಸುವವರೇ? ಅಥವಾ ಬಿಜೆಪಿ ಸಂಸದರೇ ಎನ್ನುವ ವಿಚಾರವಾಗಿ ಟ್ವಿಟರ್ ಚರ್ಚೆ ಕಾವೇರಿದೆ.

ಭಾರತೀಯ ಪತ್ರಿಕೋದ್ಯಮದ ಅತಿ ಗೌರವಾನ್ವಿತ ಸಂಘಟನೆಯಾಗಿರುವ ಎಡಿಟರ್ಸ್ ಗಿಲ್ಡ್ ಕೂಡ ಮಾಧ್ಯಮದ ವಿಚಾರವಾಗಿ ಸರ್ಕಾರದ ಹಸ್ತಕ್ಷೇಪವನ್ನು ಖಂಡಿಸಿದೆ. ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್ಐ ಟ್ವೀಟ್ ಮಾಡಿದೆ. “ಪ್ರಧಾನಿ ಕಚೇರಿಯು ಮಧ್ಯಪ್ರವೇಶಿಸಿ ಮಾಹಿತಿ ಮತ್ತು ಪ್ರಸಾರ ಸಚಿವರ ಪ್ರಕಟಣೆಯನ್ನು ಹಿಂತೆಗೆದುಕೊಂಡಿರುವುದನ್ನು ಎಡಿಟರ್ಸ್ ಗಿಲ್ಡ್ ಒಪ್ಪಿಕೊಂಡಿದೆ. ಆದರೆ ಅಂತಹ ವಿಚಾರದಲ್ಲಿ ನ್ಯಾಯ ಒದಗಿಸಲು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮೇಲೆ ವಿಶ್ವಾಸವನ್ನು ಮುಂದುವರಿಸಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದೆ,” ಎಂದು ಎಎನ್ಐ ಟ್ವೀಟ್ ಮಾಡಿದೆ. ಸುಪ್ರೀಂಕೋರ್ಟ್ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರೂ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. “ಸುಳ್ಳುಸುದ್ದಿ ಮೇಲೆ ಕ್ರಮ ಕೈಗೊಳ್ಳುವ ನೆಪದಲ್ಲಿ ಮಾಧ್ಯಮದ ಶಕ್ತಿಯನ್ನು ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುವುದು ತಪ್ಪು. ಸರ್ಕಾರ ಮತ್ತು ರಾಜಕೀಯ ಪಕ್ಷಗಳೇ ಸುಳ್ಳು ಸುದ್ದಿಗಳನ್ನು ಹರಡುತ್ತಿರುವಾಗ ಅದರ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರವನ್ನು ಸರ್ಕಾರಕ್ಕೆ ಬಿಡುವುದು ಸರಿಯಲ್ಲ,” ಎಂದು ಗಿಲ್ಡ್ ಹೇಳಿರುವುದನ್ನು ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದಾರೆ.

ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಗೆ ಸುಳ್ಳು ಸುದ್ದಿಗಳನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಕೊಟ್ಟಿರುವ ಬಗ್ಗೆ ಟ್ವಿಟರ್‌ನಲ್ಲಿ ಬಹುತೇಕ ಪತ್ರಕರ್ತರು ಟೀಕೆಗಳನ್ನು ಹರಿಯಬಿಟ್ಟಿದ್ದಾರೆ. ಅಲ್ಲದೆ ಈ ನಿರ್ಧಾರದಲ್ಲೂ ಕೇಂದ್ರ ಸರ್ಕಾರದ ಹಿತಾಸಕ್ತಿ ಅಡಗಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ. “ಸುಳ್ಳು ಸುದ್ದಿಗಳ ವಿಚಾರದಲ್ಲಿ ಹೊಸ ತಿರುವು; ಸರ್ಕಾರಿ ಸೂತ್ರಗಳ ಪ್ರಕಾರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಠಾತ್ ಆಗಿ ಪತ್ರಿಕೆಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ಮುಂದಿಡಲಿಲ್ಲ. ಅವರು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಎನ್‌ಬಿಎ ಮುಖ್ಯಸ್ಥರ ಜೊತೆಗೆ ತಿಂಗಳ ಹಿಂದೆಯೇ ಚರ್ಚಿಸಿದ್ದಾರೆ. ಅವರಿಗೆ ಈ ನಿರ್ಧಾರದ ಮಾಹಿತಿ ಮೊದಲೇ ಇತ್ತು. ಈಗ ಅವರು ಪ್ರತಿಕ್ರಿಯಿಸಬೇಕಿದೆ,” ಎಂದು ಹಿರಿಯ ಪತ್ರಕರ್ತೆ ಬರ್ಖಾ ದತ್ ಅವರು ಹೇಳಿದ್ದಾರೆ. ಅವರ ಟ್ವೀಟ್‌ಗೆ ರಿಲೇಯನ್ಸ್ ಸಂಸ್ಥೆಯ ಸಾಮಾಜಿಕ ಮಾಧ್ಯಮಗಳ ಮುಖ್ಯಸ್ಥರಾಗಿರುವ ರೋಹಿತ್ ಬನ್ಸಾಲ್ ಪ್ರತಿಕ್ರಿಯೆ ನೀಡಿದ ಮೇಲೆ, ಇಬ್ಬರ ನಡುವೆ ದೊಡ್ಡ ಚರ್ಚೆಯೇ ನಡೆದಿದೆ. “ಎನ್‌ಬಿಎಗೆ ಅಧ್ಯಕ್ಷರಿಲ್ಲ. ರಜತ್ ಶರ್ಮಾ ಹಾಗೂ ಜಸ್ಟಿಸ್ ರವೀಂದ್ರನ್ ಅವರು ನೇತೃತ್ವ ವಹಿಸಿದ್ದಾರೆ. ಸರ್ಕಾರ ತಿರುವು ನೀಡಿದೆ ಎಂದು ಆರೋಪಿಸಬೇಕಾದಲ್ಲಿ ನಿಮ್ಮ ಮೂಲಗಳು ಕರಾರುವಕ್ಕಾಗಿರಬೇಕು,” ಎಂದು ರೋಹಿತ್ ಬನ್ಸಾಲ್ ಪ್ರತಿ ಟ್ವೀಟ್ ಮಾಡಿದ್ದಾರೆ. “ಸರಿ. ಆದರೆ ಈ ವಿಷಯದಿಂದ ನಾನು ಹೇಳಿದ ಮಾಹಿತಿ ಸುಳ್ಳಾಗುವುದಿಲ್ಲ. ಕೇಂದ್ರ ಸರ್ಕಾರದ ಪ್ರಕಾರ ಸಚಿವೆ ಈಗಾಗಲೇ ಪಿಸಿಐ ಮತ್ತು ಎನ್‌ಬಿಎ ಮುಖ್ಯಸ್ಥರ ಜೊತೆಗೆ ಮಾತನಾಡಿದ್ದಾರೆ ಎನ್ನುವ ಮಾಹಿತಿ ಇದೆ,” ಎಂದು ಬರ್ಖಾ ದತ್ ಉತ್ತರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವಾಗ್ವಾದವೂ ಆಗಿದೆ.

ಪತ್ರಕರ್ತ ಶ್ರೀನಿವಾಸನ್ ಜೈನ್, ಎಂ ಕೆ ವೇಣು ಮೊದಲಾದವರು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಯಾವುದು ಸುಳ್ಳು ಸುದ್ದಿಗಳು ಎಂಬುದನ್ನು ನಿರ್ಧರಿಸುತ್ತದೆ ಎನ್ನುವ ಬಗ್ಗೆಯೇ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. “ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಸುಳ್ಳು ಸುದ್ದಿಗಳು ಯಾವುವು ಎನ್ನುವುದನ್ನು ನಿರ್ಧರಿಸುತ್ತದೆ. ಆದರೆ ಅದರ ಸದಸ್ಯರ ಪಟ್ಟಿಯನ್ನು ಗಮನಿಸಿದಲ್ಲಿ ಸುಳ್ಳು ಸುದ್ದಿಗಳನ್ನು ಹರಡಿದ್ದಕ್ಕಾಗಿ ಬಂಧನಕ್ಕೆ ಒಳಗಾದ ಸಂಪಾದಕನನ್ನು ಸಮರ್ಥಿಸಿಕೊಂಡಿರುವ ಸಂಸದರೇ ಸದಸ್ಯರಾಗಿರುವುದನ್ನೂ ಕಾಣಬಹುದು,” ಎಂದು ಶ್ರೀನಿವಾಸನ್ ಜೈನ್ ಟ್ವೀಟ್ ಮಾಡಿದ್ದಾರೆ. ಬಿಜೆಪಿ ಸಂಸದ ಪ್ರತಾಪ್ ಸಿಂಹ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರಾಗಿರುವ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಂ ಕೆ ವೇಣು ಅವರು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾವನ್ನೇ ತೆಗೆದು ಹಾಕುವಂತೆ ಎಡಿಟರ್ಸ್ ಗಿಲ್ಡ್ ಅಧಿಕೃತವಾಗಿ ಪ್ರಧಾನಿಗೆ ಪತ್ರ ಬರೆಯಬೇಕು ಎಂದು ತಮ್ಮ ಅಭಿಪ್ರಾಯ ಹೇಳಿದ್ದಾರೆ. ರಿಯಲ್ ಎಸ್ಟೇಟ್ ಸಂಸ್ಥೆಯೊಂದರ ನಿರ್ದೇಶಕರಾಗಿರುವ ಪಿಯೂಶ್ ಕುಲ್‌ಶ್ರೇಷ್ಠ ಅವರೂ ಸೇರಿದಂತೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಜಸ್ಟಿಸ್ ಸಿ ಕೆ ಪ್ರಸಾದ್ ಅವರು ಸುಳ್ಳು ಸುದ್ದಿಗಳಿಗೆ ಸಂಬಂಧಿಸಿ ಸರ್ಕಾರದ ನಿರ್ದೇಶನವನ್ನು ಬೆಂಬಲಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಬಹುತೇಕ ಟ್ವೀಟಿಗರು ವಾಸ್ತವದಲ್ಲಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ತಟಸ್ಥ ಕಾವಲುಗಾರನೇ ಎಂದು ಪ್ರಶ್ನಿಸಿದ್ದಾರೆ. “ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಸ್ವತಂತ್ರ ತಟಸ್ಥ ಕಾವಲುಗಾರ ಎಂದುಕೊಂಡಿದ್ದೀರಾ? ಸುಳ್ಳು. ಅದು ಪೋಸ್ಟ್ ಕಾರ್ಡ್‌ನಂತಹ ವೆಬ್ ತಾಣಗಳನ್ನು ಪ್ರಾಯೋಜಿಸುವ ಸಂಸದರನ್ನು ಸದಸ್ಯರಾಗಿ ಹೊಂದಿದೆ” ಎಂದು ಪತ್ರಕರ್ತ ಶಿವಂ ವಿಜ್ ಟ್ವೀಟ್ ಮಾಡಿದ್ದಾರೆ. ಪತ್ರಕರ್ತೆ ಸಾಗರಿಕಾ ಘೋಷ್ ಅವರೂ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಬಗ್ಗೆ ಇದೇ ರೀತಿಯ ಟ್ವೀಟ್ ಮಾಡಿದ್ದಾರೆ.

ಈ ನಡುವೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಗೆ ಸುಳ್ಳು ಸುದ್ದಿಗಳನ್ನು ಪ್ರಕಟಿಸುವ ಪತ್ರಕರ್ತರ ಮಾನ್ಯತೆ ರದ್ದು ವಿಚಾರದ ಬಗ್ಗೆಯೂ ಚರ್ಚೆಯಾಗಿದೆ. ಮುಖ್ಯವಾಗಿ ಪತ್ರಕರ್ತರಿಗೆ ಮಾನ್ಯತೆಯ ಅಗತ್ಯವೇನಿದೆ ಎಂದು ಹಿರಿಯ ಸಂಪಾದಕರು ಚರ್ಚಿಸಿದ್ದಾರೆ. “ಮಾನ್ಯತೆ ಹೊಂದಿದ ಪತ್ರಕರ್ತರಾದ ನಾವು ಏಕೆ ವಿಚಾರಣೆಗೆ ಭಯಪಡಬೇಕು? ಎಷ್ಟೋ ಮಾನ್ಯತೆ ಹೊಂದಿರದ ಪತ್ರಕರ್ತರು ಕಠಿಣ ಪರಿಸ್ಥಿತಿಗಳಲ್ಲೇ ಕೆಲಸ ಮಾಡಿ ಉತ್ತಮ ಫಲಿತಾಂಶ ಕೊಟ್ಟಿದ್ದಾರೆ” ಎಂದು ರಾಷ್ಟ್ರೀಯ ಭದ್ರತಾ ವಿಶ್ಲೇಷಕ ಮತ್ತು ಲೇಖಕ ನಿತಿನ್ ಎ ಗೋಖಲೆ ಟ್ವೀಟ್ ಮಾಡಿದ್ದರು. ಇದಕ್ಕೆ ಉತ್ತರಿಸಿದ ಪತ್ರಕರ್ತೆ ಸ್ಮಿತಾ ಪ್ರಕಾಶ್, “ನಮ್ಮದೇ ಸಂಸ್ಥೆ ನಮ್ಮ ವರದಿಗಳನ್ನು ಅಧಿಕೃತವೇ ಎಂದು ಪರಿಶೀಲಿಸುತ್ತದೆ. ಅದಕ್ಕೆ ಸರ್ಕಾರದ ಅಥವಾ ಯಾವುದೇ ಸಂಘಟನೆಯ ಪ್ರಮಾಣಪತ್ರದ ಅಗತ್ಯವಿಲ್ಲ. ಸಂಘರ್ಷದ ಪ್ರದೇಶದಲ್ಲಿ ವರದಿ ಮಾಡುವ ಪತ್ರಕರ್ತರ ಮೇಲೆ ಇದು ಯಾವ ಪರಿಣಾಮ ಬೀರಲಿದೆ? ಅಲ್ಲಿ ಮಾನ್ಯತೆ ಇಲ್ಲದೆ ಪ್ರವೇಶವೇ ಸಿಗುವುದಿಲ್ಲ” ಎಂದು ಪತ್ರಕರ್ತೆ ಸ್ಮಿತಾ ಪ್ರಕಾಶ್ ಟ್ವೀಟ್ ಮಾಡಿದ್ದಾರೆ. “ಪ್ರವೇಶಾವಕಾಶ ಪತ್ರಿಕೋದ್ಯಮ ಯಾರಿಗೆ ಬೇಕು? ನಿತ್ಯದ ಬೀಟ್ ಪತ್ರಕರ್ತರಿಗೆ ಮಾನ್ಯತೆ ಅಗತ್ಯವಿರಬಹುದು. ಆದರೆ ಪತ್ರಿಕಾಗೋಷ್ಠಿಗಳ ಆಚೆಗೆ ಇದರ ಅಗತ್ಯವಿಲ್ಲ” ಎಂದು ಸಂಪಾದಕರಾದ ಸಾಮ್ರಾಟ್ ಅವರು ಟ್ವೀಟ್ ಮಾಡಿದ್ದಾರೆ. ಈ ವಿಚಾರವಾಗಿ ಪತ್ರಕರ್ತರೊಳಗೇ ಚರ್ಚೆಯಾಗಿದೆ. ಜೊತೆಗೆ ಪತ್ರಕರ್ತರಿಗೆ ಮಾನ್ಯತೆ ನೀಡುವ ಸಮಿತಿಯಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವ ಬಗ್ಗೆಯೂ ಟ್ವೀಟ್‌ಗಳು ವಿವರ ನೀಡಿವೆ. ಅದಕ್ಕೆ ಸಂಬಂಧಿತ ಟ್ವೀಟ್‌ಗಳನ್ನು ಈ ಕೆಳಗೆ ನೀಡಲಾಗಿದೆ:

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More