ಮುಂಬಡ್ತಿ ಮೀಸಲಾತಿ; ಶೇಕಡ ೧೮ರ ಪ್ರಮಾಣಕ್ಕೆ ಯಾವುದೇ ಧಕ್ಕೆ ಇಲ್ಲ

ಮುಂಬಡ್ತಿಯಲ್ಲಿನ ಮೀಸಲಾತಿ ಕುರಿತಂತೆ ಎದ್ದಿದ್ದ ಗೊಂದಲ ಇದೀಗ ನಿವಾರಣೆಯಾಗಿದೆ. ಬಿ.ಕೆ.ಪವಿತ್ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು, ೨೦೦೨ರ ಕಾಯ್ದೆ ಪ್ರಕಾರ ಶೇ.೧೮ಕ್ಕೂ ಹೆಚ್ಚುವರಿಯಾಗಿ ಮುಂಬಡ್ತಿ ಜತೆಯಲ್ಲೇ ಸೇವಾ ಹಿರಿತನ ಪಡೆದಿರುವ ಎಸ್ಸಿ, ಎಸ್ಟಿ ನೌಕರರಿಗಷ್ಟೇ ಮಾತ್ರ ಅನ್ವಯವಾಗಲಿದೆ

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರ ಬಡ್ತಿ ಮೀಸಲಾತಿ ಕುರಿತ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನಿಂದ ಉಂಟಾಗಿದ್ದ ಗೊಂದಲ ಮತ್ತು ಆತಂಕ ದೂರವಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರಿಗೆ ಬಡ್ತಿ ಮೀಸಲಾತಿ ಕುರಿತಂತೆ ಬಿ.ಕೆ.ಪವಿತ್ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನಿಂದ ಸಂವಿಧಾನಬದ್ಧವಾಗಿ ಹಾಲಿ ಚಾಲ್ತಿಯಲ್ಲಿರುವ ಮುಂಬಡ್ತಿಯಲ್ಲಿನ ಮೀಸಲಾತಿಗೆ ಯಾವುದೇ ಧಕ್ಕೆ ಆಗುವುದಿಲ್ಲ. ಆದರೆ ರಾಜ್ಯ ಸರ್ಕಾರ ಈ ಕುರಿತು ಪರಿಶಿಷ್ಟ ಜಾತಿ, ಪ.ಪಂಗಡ ನೌಕರರಿಗೆ ಸರಿಯಾಗಿ ಮೊದಲೇ ಮನವರಿಕೆ ಮಾಡಿಕೊಡದ ಕಾರಣ ಅವರಲ್ಲಿ ಆತಂಕ ಸೃಷ್ಟಿಯಾಗಿತ್ತು.

ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಅನುಷ್ಠಾನದ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರು ಏಪ್ರಿಲ್‌ ೪ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. “೧೯೭೭ ಮತ್ತು ೧೯೭೮ ಮತ್ತು ಆನಂತರ ಮುಂಬಡ್ತಿ ಮೀಸಲಾತಿ ಆದೇಶಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕ್ರಮವಾಗಿ ನಿಗದಿಪಡಿಸಿರುವ ಶೇ.೧೫ ಮತ್ತು ಶೇ.೩ ಪ್ರಮಾಣದಲ್ಲಿ ಮುಂಬಡ್ತಿಯಲ್ಲಿನ ಮೀಸಲಾತಿಯು ಪ್ರಸ್ತತವೂ ಚಾಲ್ತಿಯಲ್ಲಿರುತ್ತದೆ,” ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

೨೦೦೨ರ ಕಾಯ್ದೆ ಪ್ರಕಾರ ಸೇವಾ ಹಿರಿತನ ಆಧಾರದ ಮೇಲೆ ಹೆಚ್ಚುವರಿಯಾಗಿ ಅಂದರೆ ಶೇ.೧೮ಕ್ಕೂ ಮೀರಿ ಬಡ್ತಿಯ ಜತೆಯಲ್ಲೇ ಹಿರಿತನವನ್ನೂ ಪಡೆದಿದ್ದ ಪರಿಶಿಷ್ಟ ಜಾತಿ, ಪ.ಪಂಗಡ ಅಧಿಕಾರಿ, ನೌಕರರಿಗಷ್ಟೇ ಈ ತೀರ್ಪು ಅನ್ವಯವಾಗಲಿದೆ. ಇದರಿಂದ ೧೯೭೮ರಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರಿಗೆ ಬಡ್ತಿಯಲ್ಲಿನ ಮೀಸಲಾತಿ ಕುರಿತು ನಿಗದಿಪಡಿಸಿದ್ದ ಶೇ.೧೫ ಮತ್ತು ಶೇ.೩ ರ ಪ್ರಮಾಣದ ಮೀಸಲಾತಿಯೇ ಮುಂದುವರೆಯಲಿದೆ.

೨೮,೦೦೦ ರೂ.ಕ್ಕೂ ಹೆಚ್ಚು ಮೂಲ ವೇತನ ಪಡೆದು ೨೦೦೨ರ ಕಾಯ್ದೆಯನ್ವಯ ಮುಂಬಡ್ತಿ ಪಡೆದಿರುವ ಪರಿಶಿಷ್ಟ ಜಾತಿ, ಪ.ಪಂಗಡ ನೌಕರರಿಗಷ್ಟೇ ಈ ತೀರ್ಪಿನ ಪರಿಣಾಮ ಬೀರಲಿದೆ. ಅಲ್ಲದೆ, ಮುಂಬಡ್ತಿ ಪಡೆದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರೆಲ್ಲರೂ ಹಿಂಬಡ್ತಿಗೊಳ್ಳಬೇಕಿಲ್ಲ ಎಂಬ ವಿಚಾರ ಸ್ಪಷ್ಟತೆ ಪಡೆದುಕೊಂಡಿದೆ.

ಇದನ್ನೂ ಓದಿ : ಮೀಸಲಾತಿ ಹಂಚಿಕೆ ವೈಫಲ್ಯಕ್ಕೆ ವೈಜ್ಞಾನಿಕ ಜಾತಿಗಣತಿ ಇಲ್ಲದಿರುವುದೇ ಕಾರಣ

ಬಡ್ತಿ ಮೀಸಲಾತಿ ಕುರಿತಂತೆ ರಾಜ್ಯ ಸರ್ಕಾರ ೧೯೭೮ರ ಏಪ್ರಿಲ್‌ ೨೭ರಂದು ಆದೇಶ ಹೊರಡಿಸಿತ್ತು. ಈ ಆದೇಶದ ಪ್ರಕಾರವೇ ಪರಿಶಿಷ್ಟ ಜಾತಿ ಮತ್ತು ಪ.ಪಂಗಡದವರಿಗೆ ಶೇ.೧೫ ಮತ್ತು ಶೇ.೩ರಷ್ಟು ಮೀಸಲಾತಿಯಲ್ಲಿ ಬಡ್ತಿ ನೀಡಲಾಗುತ್ತಿದೆ. ಮೀಸಲಾತಿಯ ಈ ಆದೇಶವನ್ನು ಕ್ಲಾಸ್‌ ೧ ಜ್ಯೂನಿಯರ್‌ ಮತ್ತು ತಹಶೀಲ್ದಾರ್‌ ಶ್ರೇಣಿಗೆ ಮಾತ್ರ ಸೀಮಿತವಾಗಿರುವಂತೆ ಹೊರಡಿಸಲಾಗಿತ್ತು.

೨೦೦೨ರಲ್ಲಿ ಹೊಸ ಕಾಯ್ದೆಯೊಂದನ್ನು ರೂಪಿಸಿದ್ದ ಆಗಿನ ಸರ್ಕಾರ, ಕ್ಲಾಸ್ ೧ ಜೂನಿಯರ್ ಮತ್ತು ತಹಶೀಲ್ದಾರ್‌ ಶ್ರೇಣಿಗೂ ಮೇಲ್ಪಟ್ಟ ಹುದ್ದೆಗಳಿಗೆ ‘ಸೇವಾ ಹಿರಿತನ’ ಆಧಾರದ ಮೇಲೆ ಮುಂಬಡ್ತಿಯಲ್ಲಿ ಮೀಸಲಾತಿ ಕೊಡುವ ಸಂಬಂಧ ಹೊಸ ಆದೇಶ ಹೊರಡಿಸಿತ್ತು. ಆದರೆ ಈ ಆದೇಶಕ್ಕೆ ಸಂವಿಧಾನಾತ್ಮಾಕ ಮಾನ್ಯತೆಯಾಗಲೀ, ರಕ್ಷಣೆಯಾಗಲಿ ಇರಲಿಲ್ಲ. ಇದರಿಂದಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರು ಬಹು ಬೇಗನೆ ಬಡ್ತಿಯನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಇದು ಶೇಕಡವಾರು ಮೀಸಲಾತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಇದ್ದುದರಿಂದಾಗಿ ಉನ್ನತ ಹುದ್ದೆಗಳಲ್ಲಿ ಸಾಮಾನ್ಯ ವರ್ಗ(ಜನರಲ್‌ ಮೆರಿಟ್‌)ದ ಅಭ್ಯರ್ಥಿಗಳೇ ಇಲ್ಲದೆ, ಕೇವಲ ಪ.ಜಾತಿ ಮತ್ತು ಪ.ಪಂಗಡದ ಅಭ್ಯರ್ಥಿಗಳೇ ಬಡ್ತಿ ಪಡೆಯುತ್ತಿದ್ದರು. ಈ ಆದೇಶವನ್ನು ಬಿ.ಕೆ.ಪವಿತ್ರ ಮತ್ತು ಎಂ.ನಾಗರಾಜು ಮತ್ತಿತರರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಸಚಿವಾಲಯದಲ್ಲಿನ ಅಧೀನ ಕಾರ್ಯದರ್ಶಿ ಹುದ್ದೆ ಮೇಲ್ಪಟ್ಟು ಉಪ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ, ವಿಶೇಷ ಕಾರ್ಯದರ್ಶಿ ಹುದ್ದೆಗಳಿಗೆ ೨೦೦೨ರ ಕಾಯ್ದೆ ಪ್ರಕಾರ ಪ.ಜಾತಿ, ಪ.ಪಂಗಡ ಅಭ್ಯರ್ಥಿಗಳಿಗೆ ಬಡ್ತಿ ನೀಡಲಾಗಿತ್ತು. ಅದೇ ರೀತಿ, ಲೋಕೋಪಯೋಗಿ, ನೀರಾವರಿ, ಜಲ ಸಂಪನ್ಮೂಲ, ಇಂಧನ ಇಲಾಖೆಯಲ್ಲೂ ಎಕ್ಸಿಕ್ಯೂಟಿವ್ ಇಂಜಿನಿಯರ್‌, ಸೂಪರಿಟೆಂಡಿಂಗ್‌ ಇಂಜಿನಿಯರ್‌, ಮುಖ್ಯ ಇಂಜಿನಿಯರ್‌ ಹುದ್ದೆಯಲ್ಲೂ ೨೦೦೨ರ ಕಾಯ್ದೆ ಪ್ರಕಾರವೇ ಬಡ್ತಿ ನೀಡಲಾಗಿತ್ತು. ಇದು ಇಲಾಖೆಗಳಲ್ಲಿನ ವಿವಿಧ ವೃಂದಗಳಿಗೆ ತಕ್ಕಂತೆ ಬಡ್ತಿ ಕೊಡಲಾಗಿತ್ತು.

ಇದರ ಪ್ರಕಾರ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಗಳಾಗಿ ೭ ಮಂದಿ, ಜಂಟಿ ಕಾರ್ಯದರ್ಶಿ ಹುದ್ದೆಯಲ್ಲಿ ೪ ಮಂದಿ, ಉಪ ಕಾರ್ಯದರ್ಶಿ ವೃಂದದಲ್ಲಿ ೧೧ ಮಂದಿಗೆ ಬಡ್ತಿ ನೀಡಲಾಗಿತ್ತು. ಲೋಕೋಪಯೋಗಿ, ನೀರಾವರಿ, ಜಿಲ್ಲಾ ಪಂಚಾಯತ್‌ಗಳಲ್ಲಿ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ಹುದ್ದೆಯಲ್ಲಿ ಸುಮಾರು ೩೦೦ ಮಂದಿ, ಸೂಪರಿಟೆಂಡಿಂಗ್‌ ಇಂಜಿನಿಯರ್‌ ಹುದ್ದೆಯಲ್ಲಿ ೩೦ ಮತ್ತು ಮುಖ್ಯ ಇಂಜಿನಿಯರ್‌ ಹುದ್ದೆಯಲ್ಲಿ ೬ ಮಂದಿ, ಕೆಪಿಟಿಸಿಎಲ್‌ನಲ್ಲಿ ಮುಖ್ಯ ಇಂಜಿನಿಯರ್‌ ಹುದ್ದೆಯಲ್ಲಿ ೩೬ ಮಂದಿ ಸೇವಾ ಹಿರಿತನ ಮೇಲೆ ಮುಂಬಡ್ತಿ ಪಡೆದಿದ್ದಾರೆ ಎನ್ನಲಾಗಿದೆ.

“ಸೇವಾ ಹಿರಿತನ ಆಧಾರದ ಮೇಲೆ ಬಡ್ತಿಯಲ್ಲಿ ಮೀಸಲಾತಿ ಪಡೆದಿರುವ ಅಧಿಕಾರಿ, ನೌಕರರು, ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರ ಸಹಜವಾಗಿಯೇ ಹಿಂಬಡ್ತಿಗೊಳ್ಳುತ್ತಾರೆ. ಹಿಂಬಡ್ತಿಗೊಳ್ಳುವ ಹುದ್ದೆಗೆ ನಿಗದಿಪಡಿಸಿರುವ ಮೂಲ ವೇತನವನ್ನೇ ಪಡೆಯಲಿದ್ದಾರೆ,” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ೨೦೧೮ರ ಏಪ್ರಿಲ್‌ ೧೬ರೊಳಗೆ ಎಲ್ಲಾ ಇಲಾಖೆಗಳು ಅನುಸರಣಾ ವರದಿ ಸಲ್ಲಿಸಬೇಕು. ಈ ತೀರ್ಪಿನ ಪರಿಣಾಮ ಮುಂಬಡ್ತಿ ಮತ್ತು ಹಿಂಬಡ್ತಿಗಳೆರಡನ್ನೂ ಒಳಗೊಂಡಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಎಲ್ಲಾ ಇಲಾಖೆಗಳು ವಿವಿಧ ವೃಂದಗಳಲ್ಲಿ ಹಿಂಬಡ್ತಿಗೊಳಗಾದವರ ಪಟ್ಟಿಯನ್ನು ತಯಾರಿಸಬೇಕು ಎಂದೂ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More