ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪ್ರಮುಖ ವಿವಾದ ಮತ್ತು ಎಡವಟ್ಟುಗಳು!

ನಟಿಯಾಗಿ ನಂತರ ರಾಜಕಾರಣಕ್ಕೆ ಬಂದ ಸ್ಮೃತಿ ಇರಾನಿ ಕೆಲವೊಮ್ಮೆ ಧಾರಾವಾಹಿಯ ಪಾತ್ರಗಳಂತೆ ಕಾಣಿಸುತ್ತಾರೆ. ಕೇಂದ್ರ ಕ್ಯಾಬಿನೆಟ್‌ನಲ್ಲಿ ಮೂರು ಖಾತೆಗಳನ್ನು ನಿರ್ವಹಿಸುವ ಹೊತ್ತಿಗೆ ಅವರು ಹಲವು ವಿವಾದ ಮತ್ತು ಎಡವಟ್ಟುಗಳನ್ನು ಮಾಡಿ ಸುದ್ದಿಯಾಗಿದ್ದಾರೆ, ಆಗುತ್ತಿದ್ದಾರೆ!

ಸ್ಮೃತಿ ಇರಾನಿ ಕೇಂದ್ರದಲ್ಲಿ ಇಲ್ಲಿಯವರೆಗೆ ಮೂರು ಖಾತೆಗಳನ್ನು ನಿರ್ವಹಿಸಿದ ಹೆಗ್ಗಳಿಕೆ ಇರುವ ಸಚಿವೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಮಾನವ ಸಂಪನ್ಮೂಲ ಸಚಿವೆಯಾಗಿ ನಂತರದಲ್ಲಿ ಜವಳಿ ಖಾತೆ ಸಚಿವೆಯಾಗಿ ಕಾರ್ಯನಿರ್ವಹಿಸಿ ಈಗ ಮಾಹಿತಿ ಮತ್ತು ಪ್ರಸಾರ ಖಾತೆ ನೋಡಿಕೊಳ್ಳುತ್ತಿದ್ದಾರೆ. ಈ ನಾಲ್ಕು ವರ್ಷಗಳಲ್ಲಿ ಹೀಗೆ ಖಾತೆ ಬದಲಿಸಿಕೊಂಡ ಇರಾನಿ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಲ್ಲಿದ್ದರು.

ಮೋದಿಯವರು ಹೆಚ್ಚು ವಿಶ್ವಾಸವಿಟ್ಟಿರುವ ಸಂಪುಟ ಸದಸ್ಯೆ ಎಂಬ ಹೆಗ್ಗಳಿಕೆ ಒಂದೆಡೆಯಾದರೆ, ಟ್ರಾಲ್‌ಗಳು ಅತ್ಯಂತ ಇಷ್ಟಪಡುವ ರಾಜಕಾರಣಿ ಎಂಬುದು ಇನ್ನೊಂದೆಡೆ. ಸಂಪುಟ ಉಳಿದೆಲ್ಲ ಮಂತ್ರಿಗಳಿಗಿಂತ ಹೆಚ್ಚು ಚರ್ಚೆಯಲ್ಲಿರುವ, ದುಡುಕು, ಸಿಡುಕುಗಳ, ಎಡವಟ್ಟುಗಳ ಮೂಲಕ ಸದಾ ಗಮನಸೆಳೆಯುವ ಇರಾನಿ, ತಾವು ಬಯಸಿಯೂ, ಬಯಸದೆಯೂ ಸುದ್ದಿಯಲ್ಲಿರುತ್ತಾರೆ. ಸಚಿವೆಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಇಲ್ಲಿಯವರೆಗೆ ಅವರು ಮಾಡಿದ ಪ್ರಮುಖ ಎಡವಟ್ಟುಗಳು ಇಲ್ಲಿವೆ.

೧. ಪದವಿ ಸಿಕ್ಕ ಮೇಲೆ ಪದವಿಯ ಪ್ರಶ್ನೆ

ಮೇ ೨೦೧೪ರಲ್ಲಿ ಮಾನವ ಸಂಪನ್ಮೂಲ ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ಸ್ಮೃತಿ ಇರಾನಿಯವರಿಗೆ ರಾಜಕೀಯ ಪದವಿ ಸಿಕ್ಕಿತು. ಬೆನ್ನಹಿಂದೆ ಅವರು ಪದವಿ ಪೂರೈಸಿರುವ ಪ್ರಶ್ನೆ ಎದ್ದಿತು. ಏಪ್ರಿಲ್‌ ೨೦೦೪ ಚುನಾವಣೆ ವೇಳೆ, ೧೯೯೬ರಲ್ಲಿ ದೂರಶಿಕ್ಷಣದ ಮೂಲಕ ಬಿಎ ಪದವಿ ಪಡೆದಿರುವುದಾಗಿ ಅಫಿಡವಿಟ್‌ ಸಲ್ಲಿಸಿದ್ದರು. ಕಳೆದ ಲೋಕಸಭಾ ಚುನಾವಣೆಯ ವೇಳೆ ದೆಹಲಿ ವಿವಿಯ ಸ್ಕೂಲ್‌ ಆಫ್‌ ಓಪನ್‌ ಲರ್ನಿಂಗ್‌ ಮೂಲಕ ವಾಣಿಜ್ಯಶಾಸ್ತ್ರದಲ್ಲಿ ಪದವಿ ಪೂರೈಸಿರುವುದಾಗಿ ಅಫಿಡವಿಟ್‌ ಸಲ್ಲಿಸಿದರು. ಇದರ ಜೊತೆಗೆ ಅಮೆರಿಕ ಯೇಲ್‌ ವಿವಿಯಿಂದ ಪದವಿ ಪಡೆದಿರುವುದಾಗಿಯೂ ಹೇಳಿ ಪೇಚಿಗೆ ಸಿಲುಕಿದರು. ಮಾನವ ಸಂಪನ್ಮೂಲ ಸಚಿವೆಯಾಗಿ ಅಧಿಕಾರ ಸ್ವೀಕರಿಸಿ ತಮ್ಮ ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಸುಳ್ಳುಗಳನ್ನು ಹೊಸೆದರು ಎಂಬ ಟೀಕೆ ಕೇಳಿ ಬಂದವು.

೨. ಸುಬ್ರಮಣಿಯನ್‌ ಸ್ವಾಮಿ ಬಾಕಿ ಕೊಡಿ

ಡಿಸೆಂಬರ್‌ ೨೦೧೪ರಲ್ಲಿ, ಐಐಟಿ ದೆಹಲಿಯ ನಿರ್ದೇಶಕ ಆರ್ ಕೆ ಶೆವಗಾಂವಕರ್‌ ತಮ್ಮ ಅವಧಿ ಪೂರೈಸುವುದಕ್ಕೆ ಎರಡು ವರ್ಷಗಳಿರುವಾಗಲೇ ರಾಜೀನಾಮೆ ನೀಡಿದರು. ಅದಕ್ಕೆ ಅವರು ಕೊಟ್ಟ ಕಾರಣ, ಪ್ರತಿಷ್ಠಿತ ತಾಂತ್ರಿಕ ಸಂಸ್ಥೆಯ ಚಟುವಟಿಕೆಗಳಲ್ಲಿ ಸ್ಮೃತಿ ಇರಾನಿ ಸಚಿವಾಲಯದ ಪ್ರಭಾವ. ಸ್ಮೃತಿ ಇರಾನಿ, ಐಐಟಿ ದೆಹಲಿಯ ಸಿಬ್ಬಂದಿಯಾಗಿದ್ದ ಬಿಜೆಪಿಯ ನಾಯಕ ಸುಬ್ರಮಣಿಯನ್‌ ಸ್ವಾಮಿಯವರಿಗೆ ೧೯೭೨ರಿಂದ ೧೯೯೧ರವರೆಗೆ ಬಾಕಿ ಇರುವ ಸುಮಾರು ೭೦ ಲಕ್ಷ ರೂ.ಗಳ ಸಂಬಳವನ್ನು ನೀಡುವಂತೆ ಶೆವಗಾಂವಕರ್‌ ಅವರ ಮೇಲೆ ಒತ್ತಡ ಹಾಕಿದ್ದರು. ಇದರಿಂದ ಬೇಸತ್ತು, ಶೆವಗಾಂವಕರ್‌ ರಾಜೀನಾಮೆ ನೀಡಿದ್ದರು. ಈ ಆರೋಪ ತಳ್ಳಿ ಹಾಕಿದ್ದ ಇರಾನಿ, ಶೆವಗಾಂವಕರ್‌ ಮಾರಿಷಸ್‌ನಲ್ಲಿ ಅಕ್ರಮವಾಗಿ ಕ್ಯಾಂಪಸ್‌ ಸ್ಥಾಪಿಸಿದ್ದರು ಎಂದು ಆರೋಪಿಸಿದ್ದಲ್ಲದೆ ತನಿಖಾ ಸಮಿತಿಯನ್ನು ನೇಮಿಸಿದರು. ಆದರೆ ತನಿಖೆಯಿಂದ ಆರೋಪ ಸಾಬೀತಾಗಲಿಲ್ಲ.

೩. ಪೆರಿಯಾರ್‌ ಗ್ರೂಪ್‌ ನಿಷೇಧಿಸುವಂತೆ ಪತ್ರ

ಐಐಟಿ ಮದ್ರಾಸ್‌ನಲ್ಲಿ ಅಂಬೇಡ್ಕರ್‌ ಪೆರಿಯಾರ್‌ ಎಂಬ ವಿದ್ಯಾರ್ಥಿಗಳ ಚರ್ಚಾ ಕೂಟವೊಂದಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಕಟುವಾದ ವಿಮರ್ಶೆ ಮಾಡುತ್ತಿದೆ ಎಂದು ತಿಳಿದ ಸ್ಮೃತಿ ಇರಾನಿ ಐಐಟಿ ಮದ್ರಾಸ್‌ಗೆ ಅನಾಮಿಕವಾಗಿ ಪತ್ರ ಬರೆದು ಈ ವೇದಿಕೆಯನ್ನು ನಿಷೇಧಿಸಬೇಕೆಂದು, ಇಂಥ ವೇದಿಕೆ ಅಥವಾ ಗುಂಪುಗಳಿಗೆ ಕ್ಯಾಂಪಸ್‌ನಲ್ಲಿ ಅವಕಾಶ ಕೊಡಬಾರದೆಂದು ಹೇಳಿದ್ದರು.

೪. ರೋಹಿತ್‌ ವೇಮುಲಾ ಪ್ರಕರಣ

ಹೈದರಾಬಾದ್‌ ಸೆಂಟ್ರಲ್‌ ಯೂನಿವರ್ಸಿಟಿಯ ವಿರುದ್ಧ ಪ್ರತಿಭಟಿಸಿದ ದಲಿತ ವಿದ್ಯಾರ್ಥಿಗಳಿಗೆ ಮಾನವ ಸಂಪನ್ಮೂಲ ಸಚಿವಾಲಯದ ಸೂಚನೆ ಮೇರೆಗೆ ಫೆಲೋಶಿಪ್‌ ಹಣವನ್ನು ತಡೆ ಹಿಡಿಯಲಾಯಿತು. ಇದನ್ನು ಪ್ರತಿಭಟಿಸಿದ್ದ ಅವರನ್ನು ಅಮಾನತು ಮಾಡಲಾಯಿತು. ಈ ವಿದ್ಯಾರ್ಥಿಗಳ ಪೈಕಿ ನೊಂದ ರೋಹಿತ್‌ ವೇಮುಲಾ ಆತ್ಮಹತ್ಯೆ ಮಾಡಿಕೊಂಡರು. ರಾಷ್ಟ್ರದ ಗಮನಸೆಳೆದ ಈ ಘಟನೆ ಸ್ಮೃತಿ ಇರಾನಿಯನ್ನು ಪೇಚಿಗೆ ಸಿಲುಕಿಸಿತು. ಮುಜುಗರದಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಅಮಾನತು ಮಾಡಿದ್ದು ವಿಶ್ವವಿದ್ಯಾಲಯದ ಕಾರ್ಯಕಾರಿ ಮಂಡಳಿ, ಅದನ್ನು ನೇಮಿಸಿದ್ದ ಕಾಂಗ್ರೆಸ್‌ ಎಂದು ಹೇಳಿಕೆಕೊಟ್ಟರು. ವಾಸ್ತವದಲ್ಲಿ ಆ ಸಮಿತಿಗೆ ಕುಲಪತಿ ಅಪ್ಪರಾವ್‌ ಮುಖ್ಯಸ್ಥರಾಗಿದ್ದರು ಮತ್ತು ಇವರನ್ನು ನೇಮಿಸಿದ್ದು ಸ್ವತಃ ಸ್ಮೃತಿ ಇರಾನಿಯವರಾಗಿದ್ದರು. ಈ ಪ್ರಕರಣದಲ್ಲಿ ಅತ್ಯಂತ ಅಮಾನವೀಯವಾಗಿ ನಡೆದುಕೊಂಡರು ಎಂಬ ಟೀಕೆಗೆ ಸ್ಮೃತಿ ಇರಾನಿ ಗುರಿಯಾದರು.

೫. ಜೆಎನ್‌ಯುಗೆ ದೇಶದ್ರೋಹದ ಪಟ್ಟ

ರೋಹಿತ್‌ ವೇಮುಲಾ ಪ್ರಕರಣದ ಬಳಿಕ ಜೇನಿನ ಗೂಡಿಗೆ ಕೈಹಾಕಿದಂತಹ ಸಾಹಸ ಮಾಡಿದ್ದು ಜವಹರ್‌ ಲಾಲ್‌ ನೆಹರು ವಿಶ್ವವಿದ್ಯಾಲಯದ ಘಟನೆಯಲ್ಲಿ. ಅಫಜಲ್‌ ಗುರು ನೆನಪಿನಲ್ಲಿ ವಿದ್ಯಾರ್ಥಿಗಳು ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಇದು ಜೆಎನ್‌ಯು ವಿದ್ಯಾರ್ಥಿಗಳು ಮತ್ತು ಎಬಿವಿಪಿ ನಡುವಿನ ಸಂಘರ್ಷಕ್ಕೆ ಕಾರಣವಾಯಿತು. ಅಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಲಾಯಿತು ಎಂದು ಆರೋಪಿಸಿ ಗದ್ದಲ ಸೃಷ್ಟಿಸಲಾಯಿತು. ದೇಶದ್ರೋಹದ ಆರೋಪದ ಮೇಲೆ ವಿದ್ಯಾರ್ಥಿ ಕನ್ಹಯ್ಯ ಕುಮಾರ್‌ ಅವರನ್ನು ಬಂಧಿಸಲಾಯಿತು. ಈ ಸಂದರ್ಭದಲ್ಲಿ “ತಾಯಿ ಭಾರತೀಯ ಮೇಲಿನ ದಾಳಿಯನ್ನು ಸಹಿಸಲು ಸಾಧ್ಯವಿಲ್ಲ'' ಎಂದು ಇರಾನಿ ಹೇಳಿಕೆ ಕೊಟ್ಟರು. ಈ ಘಟನೆ ನಡೆದು ಒಂದು ವಾರದ ಬಳಿಕ ಇರಾನಿ ಅವರು, ದೇಶದ ಎಲ್ಲ ವಿವಿಗಳ ಕುಲಪತಿಗಳಿಗೆ ಪತ್ರ ಬರೆದು ಎಲ್ಲ ಕ್ಯಾಂಪಸ್‌ಗಳ ಮುಖ್ಯ ಭಾಗದಲ್ಲಿ ೨೦೦ ಅಡಿ ಎತ್ತರದಲ್ಲಿ ದೇಶದ ಬಾವುಟ ಹಾರಿಸುವಂತೆ ಸೂಚಿಸಿದರು.

೬. ಐಐಟಿಗಳಲ್ಲಿ ಕಡ್ಡಾಯ ಸಂಸ್ಕೃತ ಅಧ್ಯಯನ

ಇರಾನಿ ಮಾನವ ಸಂಪನ್ಮೂಲ ಸಚಿವೆಯಾದ ಕೂಡಲೇ ತೆಗೆದುಕೊಂಡ ಕೆಲವು ನಿರ್ಣಯಗಳಲ್ಲಿ ಇದೂ ಒಂದು. ದೇಶದ ಪ್ರತಿಷ್ಠಿತ ತಾಂತ್ರಿಕ ಸಂಸ್ಥೆ ಐಐಟಿ ತನ್ನ ಪಠ್ಯಕ್ರಮದಲ್ಲಿ ಸಂಸ್ಕೃತವನ್ನು ಕಡ್ಡಾಯವಾಗಿ ಸೇರಿಸುವಂತೆ ಇರಾನಿ ಸೂಚಿಸಿದ್ದರು. ಅದಕ್ಕೆ ಅವರು ಕೊಟ್ಟ ಕಾರಣ, “ಸಂಸ್ಕೃತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಅಪಾರ ಜ್ಞಾನ ಭಂಡಾರವಿದೆ. ಅದರ ಅಧ್ಯಯನದಿಂದ ವಿದ್ಯಾರ್ಥಿಗಳಿಗೆ ಲಾಭವಾಗುತ್ತದೆ”. ಸಂಸ್ಕೃತವನ್ನು ಕಡ್ಡಾಯವಾಗಿ ಅಧ್ಯಯನ ಮಾಡುವಂತೆ ಹೇಳಿದ್ದಷ್ಟೇ ಅಲ್ಲ, ಭಾಷೆಯನ್ನು ಪ್ರೋತ್ಸಾಹಿಸುವುದಕ್ಕಾಗಿ ಐಐಟಿಗಳಲ್ಲಿ ಸಮಿತಿಯೊಂದನ್ನು ರಚಿಸಿದರು.

೭. ಐಐಟಿ ಆಡಳಿತದಲ್ಲಿ ಹಸ್ತಕ್ಷೇಪ

ಮಾನವ ಸಂಪನ್ಮೂಲ ಸಚಿವೆಯಾದ ಅವಧಿಯಲ್ಲಿ ಇರಾನಿಯವರು ಐಐಟಿ ಆಡಳಿತದಲ್ಲಿ ಸಾಕಷ್ಟು ಹಸ್ತಕ್ಷೇಪ ಮಾಡಿ ಸುದ್ದಿಯಲ್ಲಿದ್ದರು. ಸಸ್ಯಾಹಾರಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಮೆಸ್‌ ಮತ್ತು ಊಟ ಮಾಡುವ ಜಾಗವನ್ನು ಹೊಂದುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಸೂಚನೆ ನೀಡಿದ್ದರು. ಸಿಪಿಐ ನಾಯಕ ಸೀತಾರಾಮ್‌ ಯೆಚೂರಿ ಇರಾನಿ ಅವರಿಗೆ ಪತ್ರ ಬರೆದು ವಿದ್ಯಾರ್ಥಿಗಳ ಆಹಾರ ಅಭ್ಯಾಸಗಳಲ್ಲಿ ಪೊಲೀಸ್‌ಗಿರಿ ಮಾಡುವ ಹಕ್ಕಿಲ್ಲ ಎಂದು ಖಾರವಾಗಿ ಖಂಡಿಸಿದ್ದರು. ಜೊತೆಗೆ ಮುಂಬೈ ಐಐಟಿಯ ಅನಿಲ್‌ ಕಾಕೋಡ್ಕರ್‌ ರಾಜೀನಾಮೆ ವಿಷಯದಲ್ಲಿ ವಿವಾದಕ್ಕೆ ಇರಾನಿ ಕಾರಣವಾಗಿದ್ದರು.

೮. ನಾಲ್ಕು ವರ್ಷಗಳ ಕೋರ್ಸ್‌ ರದ್ದು

ದೆಹಲಿ ವಿಶ್ವವಿದ್ಯಾಲಯದ ನಾಲ್ಕು ವರ್ಷಗಳ ವಿಶ್ವವಿದ್ಯಾಲಯ ಕಾರ್ಯಕ್ರಮವನ್ನು ಸ್ಮೃತಿ ಇರಾನಿ ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣದಲ್ಲಿ ರದ್ದು ಮಾಡಿದರು. ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ತಜ್ಞರು ಸಚಿವರ ನಡೆಯನ್ನು ತೀವ್ರವಾಗಿ ವಿರೋಧಿಸಿದರು. ಸ್ವಾಯತ್ತ ಸಂಸ್ಥೆಯ ಮೇಲೆ ಸಚಿವರು ತಮ್ಮ ನಿರ್ಧಾರವನ್ನು ಹೇರಿದ್ದಾರೆ ಎಂಬ ಟೀಕೆಯೂ ಕೇಳಿ ಬಂದಿತು.

೯.ಶಾಲೆಗಳಲ್ಲಿ ಜರ್ಮನಿ ಬದಲು ಸಂಸ್ಕೃತ

ಕೇಂದ್ರೀಯ ವಿದ್ಯಾಲಯದಲ್ಲಿ ತೃತೀಯ ಭಾಷೆಯಾಗಿ ಜರ್ಮನಿ ಭಾಷೆಯನ್ನು ಕಲಿಸಲಾಗುತ್ತಿತ್ತು. ಅಕ್ಟೋಬರ್‌ ೨೦೧೪ರಲ್ಲಿ ಜರ್ಮನಿಯ ಬದಲಿಗೆ ಸಂಸ್ಕೃತವನ್ನು ಬೋಧಿಸುವಂತೆ ಮಾನವ ಸಂಪನ್ಮೂಲ ಸಚಿವಾಲಯ ನಿರ್ದೇಶಿಸಿತು. ಈ ವಿಷಯ ದೊಡ್ಡ ಚರ್ಚೆ ಹುಟ್ಟುಹಾಕಿತು. ರಾಜತಾಂತ್ರಿಕ ವಿಷಯವೂ ಆಯಿತು. ಒಂದು ವರ್ಷದ ಬಳಿಕ ಜಿ-೨೦ ಶೃಂಗಸಭೆಗೆ ಆಗಮಿಸಿದ್ದ ಏಂಜೆಲಾ ಮರ್ಕೆಲ್‌ ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ನಂತರದಲ್ಲಿ ಇಲಾಖೆ ನೀಡಿದ ಆದೇಶವನ್ನು ಹಿಂದಕ್ಕೆ ಪಡೆದಿತ್ತು.

ಇದನ್ನೂ ಓದಿ : ಸ್ಮೃತಿ ಇರಾನಿ ಮತ್ತು ೧೩ ಸಚಿವರು ಟ್ವೀಟ್‌ ಮಾಡುತ್ತಿರುವ ‘ದಿ ಟ್ರೂ ಪಿಕ್ಚರ್‌’ ಯಾರದ್ದು?

೧೦. ಸಿನಿಮಾ ನಿರ್ಮಾಪಕರಿಗೆ ಪಾಠ

ಸ್ಮೃತಿ ಇರಾನಿ ೨೦೧೭ರ ಜುಲೈನಲ್ಲಿ ಮಾಹಿತಿ ಮತ್ತು ಪ್ರಸಾರ ಸವೆಯಾಗಿ ಅಧಿಕಾರ ವಹಿಸಿಕೊಂಡರು. ಇಲ್ಲೂ ಸಣ್ಣ ಪುಟ್ಟ ಹೇಳಿಕೆಗಳ ಮೂಲಕ ವಿವಾದ ಕಿಡಿ ಸಿಡಿಸುತ್ತಲೇ ಇದ್ದ ಇರಾನಿ ಇತ್ತೀಚೆಗೆ ಬಾಕ್ಸ್‌ಆಫೀಸ್‌ನಲ್ಲಿ ಯಶಸ್ಸು ಕಾಣಬೇಕೆಂದು ವಿವಾದ ಸೃಷ್ಟಿಸುವ ಪ್ರಯತ್ನ ಮಾಡಬಾರದು ಎಂದು ನಿರ್ಮಾಪಕರಿಗೆ ಪಾಠ ಮಾಡಲು ಹೋಗಿ ಪೇಚಿಗೆ ಸಿಲುಕಿದರು. ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದ್ದಂತೆ ಚಿತ್ರದ ನಿರ್ಮಾಪಕರು ವಿವಾದವನ್ನು ಉತ್ಪಾದನೆ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದರು. ಸಿನಿಮಾರಂಗದಿಂದ ಇರಾನಿಯವರ ಗ್ರಹಿಕೆ ಮತ್ತು ಹೇಳಿಕೆಯ ಬಗ್ಗೆ ತಕರಾರುಗಳು ಕೇಳಿ ಬಂದವು.

ಇರಾನಿ ಇದ್ದಲ್ಲಿ ವಿವಾದಗಳು ಖಚಿತ. ಕಳೆದ ಮೂರು ದಿನಗಳ ಹಿಂದೆ ಫೇಕ್‌ ನ್ಯೂಸ್‌ ನಿಯಂತ್ರಿಸುವ ವಿಚಾರದಲ್ಲಿ ನೀಡಿದ ಆದೇಶವೂ ಸೇರಿದಂತೆ ಇನ್ನೂ ಹಲವು ವಿವಾದಗಳು, ಎಡವಟ್ಟುಗಳು ಇರಾನಿ ಬೆನ್ನಿಗಿವೆ. ಮಾತು ಕೇಳದ ಸಚಿವಾಲಯದ ಹಿರಿಯ ಐಎಎಸ್‌ ಸಿಬ್ಬಂದಿಯನ್ನು ವರ್ಗಾವಣೆ ಮಾಡುವುದು, ವಾಜಪೇಯಿ ಅವರ ಜನ್ಮದಿನವನ್ನು (ಡಿಸೆಂಬರ್‌ ೨೫) ಉತ್ತಮ ಆಡಳಿತ ದಿನವನ್ನಾಗಿ ಆಚರಿಸುವಂತೆ ಆದೇಶ ಹೊರಡಿಸಿದ್ದು, ಸಚಿವಾಲಯದ ಮಹತ್ವದ ಸ್ಥಾನಗಳಿಗೆ ಆರ್‌ಎಸ್‌ಎಸ್‌ ಹಿನ್ನೆಲೆಯವರನ್ನು ನೇಮಿಸಿದ್ದು, ಪ್ರಸಾರ ಭಾರತಿ ಸಿಬ್ಬಂದಿ ವೇತನದ ವಿಷಯದಲ್ಲಿ ಸಂಘರ್ಷ ನಡೆದಿದ್ದು ಎಲ್ಲವೂ ಸ್ಮೃತಿ ಇರಾನಿಯವರ ತಮ್ಮ ಮೂಗಿನ ನೇರಕ್ಕೆ ನಡೆಯುವ ಧೋರಣೆಯಿಂದ. ಇವೆಲ್ಲವೂ ಅವರನ್ನು ಸದಾ ವಿವಾದದ ಮೂಲಕ ಸುದ್ದಿಯಲ್ಲಿರುವಂತೆ ಮಾಡಿದವು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More