ಎಸ್ಸಿ,ಎಸ್ಟಿ ಕಾಯ್ದೆ; ಉಲ್ಟಾ ಹೊಡೆದ ಕೇಂದ್ರಕ್ಕೆ ಸುಪ್ರೀಂಕೋರ್ಟ್ ತರಾಟೆ

ಎಸ್‌‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ದ್ವಂದ್ವ ನಿಲುವನ್ನು ಸುಪ್ರೀಂಕೋರ್ಟ್‌ ಪ್ರಶ್ನಿಸಿದೆ. ಮೊದಲಿಗೆ ಎಸ್‌ಸಿ/ಎಸ್‌ಟಿ ಕಾಯ್ದೆ ದುರ್ಬಳಕೆಯಾಗುತ್ತಿದೆ ಎಂದು ವಾದಿಸಿದ್ದ ಕೇಂದ್ರವು, ಈಗ ಮರುಪರಿಶೀಲನಾ ಅರ್ಜಿ ಸಲ್ಲಿಸಿರುವ ಕ್ರಮವನ್ನು ಅನಾವರಣಗೊಳಿಸಿದೆ

ಪರಿಶಿಷ್ಟ ಜಾತಿ, ಪಂಗಡಗಳ (ಎಸ್‌ಸಿ/ಎಸ್‌ಟಿ) ಜನರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್‌ ೨೦ರಂದು ನೀಡಿದ ತೀರ್ಪಿಗೆ ತಡೆ ನೀಡಲು ನಿರಾಕರಿಸಿರುವ ಸುಪ್ರೀಂಕೋರ್ಟ್‌ ದ್ವಿಸದಸ್ಯ ಪೀಠವು, ೧೦ ದಿನಗಳ ನಂತರ ತೀರ್ಪು ಮರುಪರಿಶೀಲನೆ ಮಾಡುವುದಾಗಿ ಹೇಳಿದೆ. ಈ ಮಧ್ಯೆ, ಎಸ್‌ಸಿ/ಎಸ್‌ಟಿಟಿ ಕಾಯ್ದೆ (ದೌರ್ಜನ್ಯ ತಡೆ)-೧೯೮೯ ದುರ್ಬಳಕೆಯಾಗುತ್ತಿದೆ ಎಂದು ಮೊದಲಿಗೆ ವಾದಿಸಿದ್ದ ಕೇಂದ್ರ ಸರ್ಕಾರವು ಈಗ ತಕ್ಷಣ ನಿಲುವು ಬದಲಿಸಿ ತೀರ್ಪು ಮರುಪರಿಶೀಲನಾ ಅರ್ಜಿ ಸಲ್ಲಿಸಿರುವ ಕ್ರಮವನ್ನು ಪ್ರಶ್ನಿಸಿದೆ ಎಂದು ‘ದಿ ಹಿಂದೂ’ ವರದಿ ಮಾಡಿದೆ. ‘ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ದುರ್ಬಳಕೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರವೇ ಹೇಳಿದೆ’ ಎಂದು ನ್ಯಾ. ಎ ಕೆ ಗೋಯಲ್‌ ಮತ್ತು ಯು ಯು ಲಲಿತ್‌ ಅವರಿದ್ದ ನ್ಯಾಯಪೀಠ ಹೇಳಿದ್ದು, ಕೇಂದ್ರ ಸರ್ಕಾರದ ದ್ವಂದ್ವ ನೀತಿಯನ್ನು ಅನಾವರಣಗೊಳಿಸಿದೆ.

ಡಾ. ಸುಭಾಶ್‌ ಕಾಶಿನಾಥ್‌ ಮಹಾಜನ್‌ ಹಾಗೂ ಮಹಾರಾಷ್ಟ್ರ ಸರ್ಕಾರ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ ಅಮಿಕಸ್‌ ಕ್ಯೂರಿಯಾಗಿರುವ ಅಮರೇಂದ್ರ ಶರಣ್‌, ಕಾಯ್ದೆಯ ದುರ್ಬಳಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿಲುವನ್ನು ಆಧರಿಸಿ ಮಾರ್ಚ್‌ ೨೦ರಂದು ಕೋರ್ಟ್‌ ತೀರ್ಪು ಪ್ರಕಟಿಸಿದೆ. “ಕಾಯ್ದೆಯ ದುರ್ಬಳಕೆಯಾಗುತ್ತಿದೆ ಎಂಬುದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರವು ಅಂಕಿ-ಅಂಶಗಳನ್ನು ಒದಗಿಸಿತ್ತು. ಈಗ ಅದೇ ಸರ್ಕಾರವು ತೀರ್ಪು ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿದೆ,” ಎಂದು ಶರಣ್‌ ಕೋರ್ಟ್‌ ಗಮನ ಸೆಳೆದರು.

ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ (ತಿದ್ದುಪಡಿ)‌ ಕಾಯ್ದೆ -೨೦೧೪ಕ್ಕೆ ಸಂಬಂಧಿಸಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸ್ಥಾಯಿ ಸಮಿತಿಯ (೨೦೧೪-೧೫)ಆರನೇ ವರದಿಯನ್ನು ಕೇಂದ್ರ ಸರ್ಕಾರವು ಕೋರ್ಟ್‌ ಗಮನಕ್ಕೆ ತಂದಿದೆ. ಸ್ಥಾಯಿ ಸಮಿತಿ ವರದಿಯಲ್ಲಿ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗುವ ಸುಳ್ಳು ಮತ್ತು ನಕಲಿ ಪ್ರಕರಣಗಳ ವಿರುದ್ಧ ಕ್ರಮಕೈಗೊಳ್ಳಬಾರದು ಎಂಬ ಇಲಾಖೆಯ ನಿಲುವನ್ನು ತಳ್ಳಿಹಾಕಲಾಗಿದೆ ಎಂಬುದನ್ನು ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಕೋರ್ಟ್‌ ಸಭಾಂಗಣದಲ್ಲಿ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಲ್‌ ಅವರಿಗೆ ನ್ಯಾ. ಎ ಕೆ ಗೋಯಲ್‌ ನೆನಪು ಮಾಡಿಕೊಟ್ಟರು.

ಸ್ಥಾಯಿ ಸಮಿತಿಯ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು, ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಾದ ತಕ್ಷಣ ಆರೋಪಿಗಳನ್ನು ಬಂಧಿಸಕೂಡದು ಎಂದು ಹೇಳಿತ್ತಲ್ಲದೇ ಆರೋಪಿಗಳ ಬಂಧನಕ್ಕೂ ಮುನ್ನ ಪಾಲಿಸಬೇಕಾದ ನಿಯಮಗಳನ್ನು ಸಲಹೆ ಮಾಡಿತ್ತು. ಅಲ್ಲದೇ, ತೀರ್ಪು ಮರುಪರಿಶೀಲನಾ ಅರ್ಜಿಯಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನಿಗೆ ನಿರ್ಬಂಧ ಹೇರುವುದಕ್ಕೆ ಕೇಂದ್ರ ಸರ್ಕಾರ ಬೆಂಬಲ ವ್ಯಕ್ತಪಡಿಸಿದ್ದು, ಇದು ವ್ಯಕ್ತಿ ಸ್ವಾತಂತ್ರ್ಯದಂಥ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುವುದಿಲ್ಲ ಎಂದು ವಾದಿಸಿದೆ.

ಇದನ್ನೂ ಓದಿ : ‘ಸವಲತ್ತಿಗೆ ಶರಣಾದ ದಲಿತ ನಾಯಕರ ನಡುವೆ ಸಮುದಾಯ ಪ್ರಜ್ಞೆಯು ಮಸಣದ ಭೂಮಿ’

ಈ ಮಧ್ಯೆ, ಕಾಯ್ದೆಯ ದುರ್ಬಳಕೆಗೆ ಪೂರಕವಾಗಿ ಕೇಂದ್ರ ಸರ್ಕಾರ ಸಲ್ಲಿಸಿರುವ ಅಂಕಿಅಂಶಗಳನ್ನು ಉಲ್ಲೇಖಿಸಿರುವ ನ್ಯಾಯಪೀಠವು, ೨೦೧೫ರಲ್ಲಿ ದೌರ್ಜನ್ಯ ತಡೆ ಕಾಯ್ದೆ ಅಡಿ ದಾಖಲಾಗಿರುವ ದೂರಿನ ಪೈಕಿ ಶೇ.೧೫-೧೬ರಷ್ಟು ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ. ಶೇ.೭೫ರಷ್ಟು ಪ್ರಕರಣಗಳು ನಿರಾಧಾರ ಅಥವಾ ಮೊಕದ್ದಮೆ ಹಿಂಪಡೆಯಲಾಗಿದೆ ಎಂದು ಹೇಳಿದೆ.

ತೀರ್ಪು ಮರುಪರಿಶೀಲನಾ ಅರ್ಜಿ ಸಲ್ಲಿಸುವ ಸಂದರ್ಭದಲ್ಲೂ ಕೇಂದ್ರ ಸರ್ಕಾರದ ದ್ವಿಮುಖ ನೀತಿ ಪ್ರಕಟವಾಗಿದ್ದು, ೨೦೧೬ ಅಂಕಿಅಂಶಗಳನ್ನು ಉಲ್ಲೇಖಿಸುವ ಮೂಲಕ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿಲ್ಲ ಎಂದು ಹೇಳುವ ಯತ್ನ ನಡೆಸಿದೆ. ೨೦೧೬ರಲ್ಲಿ ದೇಶಾದ್ಯಂತ ೪೭,೩೩೮ ಪ್ರಕರಣ ದಾಖಲಾಗಿದ್ದು, ಶೇ. ೨೪.೯ರಷ್ಟು ಪ್ರಕರಣಗಳು ಮಾತ್ರ ರುಜುವಾತಾಗಿವೆ. ಉಳಿದ ಶೇ. ೮೯.೩ರಷ್ಟು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ ಎಂದಿದೆ.

ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಾದ ತಕ್ಷಣ ಆರೋಪಿಯನ್ನು ಬಂಧಿಸುವುದಕ್ಕೆ ಮಾರ್ಚ್‌ ೨೦ರ ತೀರ್ಪಿನಲ್ಲಿ ಸುಪ್ರೀಂಕೋರ್ಟ್‌ ತಡೆ ನೀಡಿತ್ತು. ದಲಿತ ವ್ಯಕ್ತಿ ನೀಡಿದ ದೂರಿನ ಸತ್ಯಾಸತ್ಯತೆ ಪರಿಶೀಲಿಸುವ ಸಂಬಂಧ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಾಥಮಿಕ ತನಿಖೆ ನಡೆಸಿದ ನಂತರ ಪ್ರಥಮ ತನಿಖಾ ವರದಿ (ಎಫ್‌ಐಆರ್‌) ದಾಖಲಿಸಬೇಕು ಎಂದು ಕೋರ್ಟ್‌ ತೀರ್ಪು ನೀಡಿತ್ತು. ಇದಕ್ಕೆ ದೇಶಾದ್ಯಂತ ದಲಿತ ಸಮುದಾಯದಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಹಲವೆಡೆ ಹಿಂಸಾಚಾರ ನಡೆದು ಒಂಭತ್ತು ಮಂದಿ ಮೃತಪಟ್ಟಿದ್ದನ್ನು ಇಲ್ಲಿ ನೆನೆಯಬಹುದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More