‘ಮನ್ ಕೀ ಬಾತ್’ ರೇಡಿಯೋ ಸರಣಿ ವಿಶ್ಲೇಷಿಸಿ ಬರೆದ ಪುಸ್ತಕದ ಲೇಖಕನಾರು?

ಕೇಂದ್ರ ಸರ್ಕಾರದ ಸಚಿವರು ಸಾವಿರಾರು ಸುಳ್ಳುಗಳನ್ನು ಜನರ ಮುಂದಿಟ್ಟಿದ್ದಾರೆ. ಅದರಲ್ಲಿ ಪ್ರಧಾನಿ ಕಚೇರಿಗೆ ಸೇರಿದ ಒಂದು ಸುಳ್ಳನ್ನು ನಿಮ್ಮ ಮುಂದಿಡುತ್ತೇನೆ ಎನ್ನುತ್ತಾ ಅರುಣ್ ಶೌರಿಯವರು ‘ಮನ್ ಕೀ ಬಾತ್’ ಪುಸ್ತಕದ ಲೇಖಕ ಯಾರೆನ್ನುವುದೂ ತಿಳಿಯದ ವಿವರ ಬಹಿರಂಗಪಡಿಸಿದ್ದಾರೆ

ಸುಳ್ಳು ಸುದ್ದಿಗಳ ಮೇಲೆ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ನಿರ್ದೇಶನಗಳನ್ನು ನೀಡಿದ ಹಿನ್ನೆಲೆಯಲ್ಲಿ ಸರ್ಕಾರದ ಬಹಳಷ್ಟು ಸುಳ್ಳುಗಳು ಬಹಿರಂಗವಾಗುತ್ತಿವೆ. ಅದರಲ್ಲಿ ಅತೀ ಪ್ರಮುಖ ಸುಳ್ಳೆಂದರೆ ಪ್ರಧಾನಿ ನರೇಂದ್ರ ಮೋದಿಯವರ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ ಪುಸ್ತಕವನ್ನು ಬರೆದದ್ದು ಯಾರು ಎನ್ನುವ ಪ್ರಶ್ನೆ. ಈ ಪುಸ್ತಕದ ಮೂರು ಆವೃತ್ತಿಗಳು ಪ್ರಕಟವಾಗಿವೆ. ‘ಮನ್ ಕೀ ಬಾತ್’ ಕಾರ್ಯಕ್ರಮವನ್ನು ವಿಶ್ಲೇಷಿಸಿ ಬರೆದ ಪುಸ್ತಕವಿದು ಎಂದೂ ಅದನ್ನು ಮಾರುಕಟ್ಟೆಗೆ ತರಲಾಗಿದೆ. ಆದರೆ ಈ ಪುಸ್ತಕದಲ್ಲಿ ಅಧಿಕೃತವಾಗಿ ಲೇಖಕ ಎಂದು ಮುದ್ರಿಸಲಾಗಿರುವ ಲೇಖಕ ರಾಜೇಶ್ ಜೈನ್ ತಾನು ಅದನ್ನು ಬರೆದಿಲ್ಲ ಎಂದು ಹೇಳಿರುವುದನ್ನು ಎನ್‌ಡಿಟಿವಿ ಸುದ್ದಿ ಸಂಸ್ಥೆ ಬಹಿರಂಗಪಡಿದಿದೆ.

ಎನ್‌ಡಿಟಿವಿ ಸಂದರ್ಶನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಮಾಜಿ ಕೇಂದ್ರ ಸಚಿವರಾದ ಅರುಣ್ ಶೌರಿಯವರು ಈ ವಿಷಯವನ್ನು ಹೊರಗೆಡವಿದ್ದಾರೆ. ಕೇಂದ್ರ ಸರ್ಕಾರದ ಸಚಿವರು ಸಾವಿರಾರು ಸುಳ್ಳುಗಳನ್ನು ಜನರ ಮುಂದಿಟ್ಟಿದ್ದಾರೆ. ಅದರಲ್ಲಿ ಪ್ರಧಾನಿ ಕಚೇರಿಗೆ ಸೇರಿದ ಒಂದು ಸುಳ್ಳನ್ನು ನಿಮ್ಮ ಮುಂದಿಡುತ್ತೇನೆ ಎನ್ನುತ್ತಾ ಅರುಣ್ ಶೌರಿಯವರು ‘ಮನ್ ಕೀ ಬಾತ್’ ಪುಸ್ತಕದ ವಿವರ ನೀಡಿದ್ದಾರೆ. ‘ಮನ್ ಕೀ ಬಾತ್’ ಪುಸ್ತಕ ಬರೆದವರೆಂದು ಉಲ್ಲೇಖಿಸಲಾದ ರಾಜೇಶ್ ಜೈನ್ ಅವರು ಅರುಣ್ ಶೌರಿ ಸ್ನೇಹಿತರು. ‘ಮನ್ ಕೀ ಬಾತ್’ ಪುಸ್ತಕದ ಮೊದಲ ಆವೃತ್ತಿ ಬಿಡುಗಡೆಯಾದಾಗ ರಾಜೇಶ್ ಜೈನ್, ಆ ಪುಸ್ತಕವನ್ನು ಪ್ರಕಟಿಸಿದ ಸಂಸ್ಥೆಯಾಗಿರುವ ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್‌ನ ಸಿಬ್ಬಂದಿಯಾಗಿದ್ದರು. ಈ ಸಂಸ್ಥೆ ಪ್ರಕಟಿಸಿದ ಪುಸ್ತಕದಲ್ಲಿ ರಾಜೇಶ್ ಜೈನ್ ಅವರ ಒಪ್ಪಿಗೆ ಇಲ್ಲದೆಯೇ ಅವರ ಹೆಸರನ್ನು ಲೇಖಕರೆಂದು ನಮೂದಿಸಿತ್ತು. ಸಂಸ್ಥೆಯ ಸಿಬ್ಬಂದಿಯಾಗಿದ್ದ ಕಾರಣ ರಾಜೇಶ್ ಜೈನ್ ಏನೂ ಮಾತನಾಡದೆ ಸುಮ್ಮನಿದ್ದರು. ಅಲ್ಲದೆ ಪ್ರಥಮ ಆವೃತ್ತಿಯ ಬಿಡುಗಡೆ ಸಮಾರಂಭದಲ್ಲಿ ಭಾಷಣ ಮಾಡುವಂತೆಯೂ ರಾಜೇಶ್ ಅವರ ಮೇಲೆ ಒತ್ತಡ ಹಾಕಲಾಗಿತ್ತು.

ಇದನ್ನೂ ಓದಿ : ದೃಶ್ಯಸಹಿತ ಮನ್ ಕೀ ಬಾತ್; ದೀನ ಭಕ್ತರ ನರೇಂದ್ರ ಮೋದಿ ಸಂದರ್ಶನ ಕಂಡಿರಾ?

ಇದೀಗ ಎನ್‌ಡಿಟಿವಿ ಕಾರ್ಯಕ್ರಮದಲ್ಲಿ ರಾಜೇಶ್ ತಮ್ಮ ನೋವನ್ನು ಬಹಿರಂಗಪಡಿಸಿದ್ದಾರೆ. “ನನ್ನನ್ನು ಪ್ರಧಾನಿ ಕಚೇರಿ ಕಾರ್ಯಕ್ರಮಕ್ಕೆ ಬರುವಂತೆ ಸೂಚಿಸಿತ್ತು. ಅಲ್ಲಿ ನನ್ನ ಹೆಸರು ಆಹ್ವಾನ ಪತ್ರಿಕೆಗಳಲ್ಲಿ ಲೇಖಕನೆಂದು ನಮೂದಿಸಿರುವುದನ್ನು ನೋಡಿದೆ. ಕಾರ್ಯಕ್ರಮದಲ್ಲಿ ನಾನು ಲೇಖಕನಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ. ಆದರೆ ಪಿಐಬಿ ವೆಬ್ತಾಣ ಮತ್ತು ನರೇಂದ್ರಮೋದಿ ಡಾಟ್ ಇನ್ ಎನ್ನುವ ಪ್ರಧಾನಿ ನರೇಂದ್ರ ಮೋದಿಯವರ ವೆಬ್ ತಾಣ ಇಂದಿಗೂ ನನ್ನನ್ನೇ ಆ ಪುಸ್ತಕದ ಲೇಖಕ ಎಂದು ಹೇಳುವುದನ್ನು ಮುಂದುವರಿಸಿದೆ,” ಎಂದು ರಾಜೇಶ್ ಹೇಳಿದ್ದಾರೆ. ಆ ಪುಸ್ತಕವನ್ನು ಯಾರು ಬರೆದಿದ್ದಾರೆ ಎನ್ನುವುದೂ ರಾಜೇಶ್ ಅವರಿಗೆ ಗೊತ್ತಿಲ್ಲ. ಅಲ್ಲದೆ ಲೇಖಕನೆಂದು ರಾಜೇಶ್ ಹೆಸರನ್ನು ಏಕೆ ಪದೇ ಪದೇ ಮುಂದಿಡಲಾಗುತ್ತಿದೆ ಎನ್ನುವ ವಿಚಾರವೂ ತಮಗೆ ಗೊತ್ತಿಲ್ಲ ಎಂದು ರಾಜೇಶ್ ಎನ್ಡಿಟಿವಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

‘ಮನ್ ಕೀ ಬಾತ್’ ಪುಸ್ತಕ ಮತ್ತು ಇತ್ತೀಚೆಗೆ ನರೇಂದ್ರ ಮೋದಿಯವರು ಬರೆದಿದ್ದಾರೆ ಎಂದು ಹೇಳಲಾಗಿರುವ ‘ಎಕ್ಸಾಮ್ ವಾರಿಯರ್ಸ್’ ಪುಸ್ತಕವನ್ನೂ ಪ್ರಕಟಿಸಿರುವ ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ಬಗ್ಗೆಯೇ ಈಗ ಪ್ರಶ್ನೆಗಳು ಎದ್ದಿವೆ. ಇತ್ತೀಚೆಗೆ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಕೆಲವು ಸುದ್ದಿಗಳು ಸುಳ್ಳು ಎಂದು ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ಜೊತೆ ಸಂಪರ್ಕವಿರುವ ‘ದ ಟ್ರೂ ಪಿಕ್ಚರ್’ ಎನ್ನುವ ವೆಬ್ತಾಣವು ‘ಫೇಕ್ ನ್ಯೂಸ್’ ಹೆಸರಲ್ಲಿ ಪ್ರಕಟಿಸಿತ್ತು. ಕೇಂದ್ರ ಸರ್ಕಾರದ ೧೩ ಸಚಿವರು ಈ ಸುದ್ದಿಗಳನ್ನು ಟ್ಯಾಗ್ ಮಾಡಿ ಇಂಡಿಯನ್ ಎಕ್ಸ್‌ಪ್ರೆಸ್ ಸುಳ್ಳು ಸುದ್ದಿ ಪ್ರಕಟಿಸುತ್ತಿದೆ ಎಂದು ಆರೋಪಿಸಿದ್ದರು. ಇದಕ್ಕೆ ಉತ್ತರವಾಗಿ ಪತ್ರಿಕೆಯು ತನ್ನ ನಿಜ ಸುದ್ದಿಗಳನ್ನು ನಕಲಿ ವೆಬ್‌ತಾಣದಲ್ಲಿ ಫೇಕ್ ನ್ಯೂಸ್ ಎಂದು ಪ್ರಕಟಿಸಲಾಗುತ್ತಿದೆ ಮತ್ತು ಸರ್ಕಾರ ಅದನ್ನು ಪ್ರಾಯೋಜಿಸುತ್ತಿದೆ ಎನ್ನುವ ವಿಚಾರವನ್ನು ಬಹಿರಂಗಪಡಿಸಿತ್ತು.

ಈ ವಿಚಾರ ವಿವಾದಕ್ಕೆ ಒಳಗಾಗುತ್ತಲೇ ತಮಗೂ ‘ಟ್ರೂ ಪಿಕ್ಚರ್’ ವೆಬ್‌ತಾಣಕ್ಕೂ ಸಂಬಂಧವಿಲ್ಲ ಎಂದು ಬ್ಲೂ ಕ್ರಾಫ್ಟ್ ಹೇಳಿತ್ತು. ಹಾಗಿದ್ದರೆ ಸರ್ಕಾರಿ ಸಚಿವರು ಟ್ವೀಟ್ ಮಾಡುವ ಟ್ರೂ ಪಿಕ್ಚರ್ ಯಾರಿಗೆ ಸೇರಿದೆ? ಬ್ಲೂಕ್ರಾಫ್ಟ್‌ನಲ್ಲಿ ಕೇವಲ ಸಿಬ್ಬಂದಿಯಾಗಿದ್ದೆ ಎಂದು ರಾಜೇಶ್ ಜೈನ್ ಹೇಳುತ್ತಾರೆ. ಹಾಗಿದ್ದರೆ ರಾಜೇಶ್ ಜೈನ್ ಆ ಸಂಸ್ಥೆಯ ಮಾಲೀಕರು ಎಂದು ಏಕೆ ಬಿಂಬಿಸಲಾಗುತ್ತಿದೆ? ವಾಸ್ತವದಲ್ಲಿ ಪ್ರಧಾನಿ ಕಚೇರಿಗೆ ಸಂಬಂಧಿಸಿ ಪ್ರಕಟವಾಗುವ ಪುಸ್ತಕಗಳಿಗೆ ಲೇಖಕರು ಅಥವಾ ಪ್ರಕಾಶಕರು ಏಕೆ ಇರುವುದಿಲ್ಲ? ಈ ಬಗ್ಗೆ ತನಿಖೆ ಮಾಡುವುದು ಯಾರು? ಸುಳ್ಳು ಸುದ್ದಿಗಳ ಮೇಲೆ ಕ್ರಮ ಕೈಗೊಳ್ಳಲು ಹೊರಟಿರುವ ಕೇಂದ್ರ ಸರ್ಕಾರದ ಪ್ರಧಾನಿಯೇ ಮುಖವಿಲ್ಲದ ಸಂಸ್ಥೆಯವ ಜೊತೆಗೆ ಸಂಬಂಧವಿಟ್ಟುಕೊಂಡಿರುವುದು ಹಲವು ಪ್ರಶ್ನೆಗಳು ಏಳುವಂತೆ ಮಾಡಿದೆ.

ಟ್ವಿಟರ್ ಸ್ಟೇಟ್ | ಜಮ್ಮು-ಕಾಶ್ಮೀರ ಶಾಲೆಗಳಲ್ಲಿ ಭಗವದ್ಗೀತೆ ಪರಿಚಯ, ವಿವಾದ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ಎಎನ್ಐ ಸುದ್ದಿಸಂಸ್ಥೆಯ ಎಡವಟ್ಟು ವರದಿಗಳ ಹಿಂದಿನ ಮರ್ಮವೇನು?
Editor’s Pick More