ಮೋದಿಯವರ ‘ಕಾಂಗ್ರೆಸ್ ಮುಕ್ತ ಭಾರತ’ ಕುರಿತು ಇದೀಗ ಎಚ್ಚೆತ್ತುಕೊಂಡ ಆರೆಸ್ಸೆಸ್

ಕಾಂಗ್ರೆಸ್ ಮುಕ್ತ ಭಾರತ ಸಂಭವಿಸಲಿ ಎಂದು ಆರೆಸ್ಸೆಸ್‌ ಕೂಡ ಕಾಯುತ್ತಿತ್ತೇ ಎಂಬ ಅನುಮಾನ ಮೂಡುತ್ತದೆ. ಅದು ಯಾವಾಗ ಫಲಿಸುವುದಿಲ್ಲ ಎಂದು ತಿಳಿಯಿತೋ ಆಗ, ತಮ್ಮ ವಿರೋಧಿಗಳನ್ನು ಒಳಗೊಳ್ಳುವ ಮಂತ್ರವನ್ನು ಅದು ಜಪಿಸುತ್ತಿರುವಂತಿದೆ; ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ!

ಮೋದಿಯವರ ‘ಕಾಂಗ್ರೆಸ್ ಮುಕ್ತ ಭಾರತ’ ಹೇಳಿಕೆಯಿಂದ ಆರೆಸ್ಸೆಸ್‌ ಅಂತರ ಕಾಯ್ದುಕೊಂಡಿದ್ದು, ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು, “ಇದೊಂದು ರಾಜಕೀಯ ಘೋಷಣೆ. ಆರೆಸ್ಸೆಸ್‌ ಭಾಷೆ ಇದಲ್ಲ. ‘ಮುಕ್ತ’ ಪದವನ್ನು ರಾಜಕೀಯದಲ್ಲಿ ಬಳಸಲಾಗುತ್ತದೆ. ನಮ್ಮನ್ನು ವಿರೋಧಿಸುವವರನ್ನೂ ಒಳಗೊಂಡಂತೆ ಎಲ್ಲರನ್ನೂ ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ತೊಡಗಿಸಬೇಕಿದೆ,” ಎಂದಿದ್ದಾರೆ.

ಮಹಾತ್ಮ ಗಾಂಧಿ ಕಾಂಗ್ರೆಸ್ ಅನ್ನು ವಿಸರ್ಜಿಸಬೇಕು ಎಂದು ಹೇಳಿದ್ದನ್ನು ಒಮ್ಮೆ ಉಲ್ಲೇಖಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮುಕ್ತ ಭಾರತ ಎಂಬ ಕರೆ ನೀಡಿದ್ದರು. ಅಂದಿನಿಂದ ಅದು ಬಿಜೆಪಿಯ ಮಂತ್ರವಾಗಿತ್ತು. ‘ಕಾಂಗ್ರೆಸ್ ಮುಕ್ತ ಈಶಾನ್ಯ’, ‘ಕಾಂಗ್ರೆಸ್ ಮುಕ್ತ ಕರ್ನಾಟಕ’, ‘ಕಾಂಗ್ರೆಸ್ ಮುಕ್ತ ಹರ್ಯಾಣ’ ಇತ್ಯಾದಿ ಘೋಷಣೆಗಳೂ ರೆಕ್ಕೆಪುಕ್ಕ ಪಡೆದುಕೊಂಡವು. ಆದರೆ, ಈಗ ಲೋಕಸಭೆ ಚುನಾವಣೆಯ ಹೊಸ್ತಿಲಿನಲ್ಲಿ ಇಂಥ ಘೋಷಣೆಗಳಿಂದ ಅಂತರ ಕಾಯ್ದುಕೊಂಡಿರುವ ಆರೆಸ್ಸೆಸ್‌ ನಿಲುವು ಏನನ್ನು ಧ್ವನಿಸಲು ಹೊರಟಿದೆ ಎಂಬುದು ಕುತೂಹಲಕ್ಕೆ ವಸ್ತುವಾಗಿದೆ.

ಅಮಿತ್ ಶಾ ಶಿವಮೊಗ್ಗದಲ್ಲಿ ಕುವೆಂಪು ಅವರ ಪುತ್ಥಳಿಗೆ ನಮಸ್ಕರಿಸಿದ್ದಕ್ಕೂ ಭಾಗವತರ ಇಂಥ ಹೇಳಿಕೆಗೂ ಹೆಚ್ಚು ವ್ಯತ್ಯಾಸವಿಲ್ಲ. ಕಾಂಗ್ರೆಸ್ ವಿರುದ್ಧ ಈಜಲು ಶಾ ವಿಶ್ವಮಾನವನಿಗೆ ನಮಸ್ಕರಿಸಿದ್ದರು. ಅದೇ ರೀತಿ, ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿಯೇ ಸಂಘ ನಡೆದುಕೊಳ್ಳುತ್ತದೆ ಎಂಬುದನ್ನು ಸಾರಲು ಮೋಹನ್ ಭಾಗವತ್ ಕೈ ಹಾಕಿರುವಂತಿದೆ. ಎರಡರ ತಂತ್ರವೂ ಒಂದೇ; ಒಂದು ಹೆಜ್ಜೆ ಹಿಂದಿರಿಸಿ ಮತ್ತೆ ಮುನ್ನುಗ್ಗುವ ತಂತ್ರ. ಮೋದಿ ಘೋಷಣೆಗಳೆಲ್ಲ ವಾಸ್ತವಕ್ಕೆ ದೂರ ಎಂದು ಆರೆಸ್ಸೆಸ್‌ ಮೊದಲೇ ಹೇಳಿಬಿಡಬಹುದಿತ್ತು. ಕೇವಲ ಪ್ರಚಾರ ತಂತ್ರಕ್ಕೆ ಘೋಷಣೆ ಬಳಸದಿರಿ ಎಂದು ತಾಕೀತು ಮಾಡಬಹುದಿತ್ತು. ಆದರೆ, ಪ್ರಧಾನಿ ಘೋಷಣೆ ಹೊರಡಿಸಿದ ದಿನದಿಂದಲೂ ಮೌನವಾಗಿದ್ದ ಆರೆಸ್ಸೆಸ್‌ ಈಗ ದಿಢೀರನೆ ನೀಡಿರುವ ಹೇಳಿಕೆಯ ಹಿಂದೆ ರಾಜಕೀಯ ಮರ್ಮ ಇರುವಂತಿದೆ. ಬಿಜೆಪಿ ಪರವಾಗಿ ಮತದಾರರ ಒಲವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿಯೂ ಸಂಘದ ಹೇಳಿಕೆ ಹೊರಬಿದ್ದಿರುವ ಸಾಧ್ಯತೆಗಳಿವೆ.

ಇದೇ ಹೊತ್ತಿನಲ್ಲಿ, ಕಾಂಗ್ರೆಸ್ ಮುಕ್ತ ಭಾರತ ಸಂಭವಿಸಲಿ ಎಂದು ಆರೆಸ್ಸೆಸ್‌ ಕೂಡ ಕಾಯುತ್ತಿತ್ತೇ ಎಂಬ ಅನುಮಾನ ಮೂಡುತ್ತಿದೆ. ಅದು ಯಾವಾಗ ಫಲಿಸುವುದಿಲ್ಲ ಎಂದು ತಿಳಿಯಿತೋ ಆಗ, ತಮ್ಮ ವಿರೋಧಿಗಳನ್ನು ಒಳಗೊಳ್ಳುವ ಮಂತ್ರವನ್ನು ಅದು ಜಪಿಸುತ್ತಿರುವಂತಿದೆ; ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ. ಕೇವಲ ಜನಪ್ರಿಯತೆಯ ಭ್ರಮೆಯನ್ನು ನೆಚ್ಚಿಕೊಳ್ಳದೆ ಸಂಘ ಬಿಜೆಪಿಯನ್ನು ವಿಮರ್ಶಾತ್ಮಕವಾಗಿ ಮೊದಲಿನಿಂದಲೂ ನೋಡಿದ್ದರೆ ಇಂಥ ಹೇಳಿಕೆಗಳನ್ನು ನೀಡುವ ಪ್ರಮೇಯವೇ ಬರುತ್ತಿರಲಿಲ್ಲ. ಮೋದಿ ಒಂದು ಪಕ್ಷವನ್ನು ಇಲ್ಲವಾಗಿಸಿ ಭಾರತವನ್ನು ಸೃಷ್ಟಿಸಲು ಹೊರಟಿದ್ದು ನಿಜ. ಆದರೆ, ಅದನ್ನು ರೂಪಿಸಲು ಬೇಕಾದ ಅಗತ್ಯ ಪರಿಕರಗಳು ಅವರ ಬಳಿ ಇದ್ದವೇ ಎಂಬುದು ಬಹುದೊಡ್ಡ ಪ್ರಶ್ನೆ. ಉದಾಹರಣೆಗೆ, ಆಹಾರದ ಕೊರತೆ. ಅದನ್ನು ನೀಗಿಸುವ ನಿಟ್ಟಿನಲ್ಲಿ ಶ್ರಮಿಸಿದ್ದರೂ ಮೋದಿಯವರ ಘೋಷಣೆ ಯಶಸ್ವಿಯಾಗುತ್ತಿತ್ತು. ನಿರುದ್ಯೋಗ ಪೆಡಂಭೂತದಂತೆ ಕಾಡುತ್ತಿದೆ. ಇಂಥ ವಿಷಯಗಳನ್ನು ಪರಿಣಾಮಕಾರಿಯಾಗಿ ಎದುರಿಸಿದ್ದರೂ ಅವರು ಹೇಳಿದ್ದಕ್ಕೆ ತೂಕ ಬರುತ್ತಿತ್ತು. ಇಂತಹ ಸಮಸ್ಯೆಗಳತ್ತ ಗಮನಹರಿಸಿ ಎಂದು ಆರೆಸ್ಸೆಸ್‌ ಬುದ್ಧಿಮಾತು ಹೇಳಬಹುದಿತ್ತು. ಆದರೆ, ಅಂಥದ್ದೇನೂ ನಡೆಯಲಿಲ್ಲ. ಹಾಗಾಗಿ ಕಾಂಗ್ರೆಸ್ ಮುಕ್ತ ಭಾರತದ ಭ್ರಮೆಯಲ್ಲಿ ಆರೆಸ್ಸೆಸ್‌ ಕೂಡ ತೇಲುತ್ತಿತ್ತು ಎನ್ನುವುದರಲ್ಲಿ ಈಗ ಅನುಮಾನ ಉಳಿದಿಲ್ಲ.

ಮೋದಿ ಅಲೆಯ ಭ್ರಮೆ ಸ್ವತಃ ಆರೆಸ್ಸೆಸ್‌ ಅನ್ನೂ ಕೊಚ್ಚಿಹಾಕಿರುವ ಸಾಧ್ಯತೆಗಳಿವೆ. ಇಲ್ಲದಿದ್ದರೆ ಅದು ಈಗ ಇಕ್ಕಟ್ಟಿಗೆ ಸಿಲುಕುವ ಸ್ಥಿತಿಗೆ ತಲುಪುತ್ತಿರಲಿಲ್ಲ. ಒಂದು ಬಗೆಯ ಮೈಮರೆವು ಸಂಘವನ್ನು ಕಾಡಿರಬಹುದು. ಬಿಜೆಪಿ ಮತ್ತು ಆರೆಸ್ಸೆಸ್‌ ನಡುವಿನ ಶೀತಲಸಮರ ಎಲ್ಲರಿಗೂ ಗೊತ್ತಿರುವಂಥದ್ದೇ. ಅದು ಎರಡೂ ಕಡೆಯವರಿಗೆ ಹಾನಿ ಮಾಡುವುದಕ್ಕಿಂತಲೂ ಹೆಚ್ಚಾಗಿ ಮೂರನೆಯವರಿಗೆ ಪೆಟ್ಟು ನೀಡಿದ್ದಿದೆ. ಈಗಿನ ಅಂತರವೂ ಅಂಥದ್ದೇ ಇರಬಹುದು. ತಾನು ಹೇಳಿದ್ದಕ್ಕೆ ಬಿಜೆಪಿ ಮಣಿಯಲಿಲ್ಲ, ಹಾಗಾಗಿ ಆರೆಸ್ಸೆಸ್‌ ಮುಖ ನೋಡಿಯಾದರೂ ಮತ ನೀಡಿ ಎನ್ನುವಂತಿದೆ ಭಾಗವತರ ಹೇಳಿಕೆ.

ಸಂಘದ ಮಾತಿನಿಂದ ಮೋದಿ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂದು ಕೆಲವರು ಬಿಂಬಿಸುತ್ತಿದ್ದಾರೆ. ಆದರೆ ವಾಸ್ತವ ಬೇರೆಯೇ ಇದೆ. ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶದಲ್ಲಿ ನಡೆದ ಉಪ ಚುನಾವಣೆಗಳು ಬಿಜೆಪಿ ಪರವಾಗಿಯೇನೂ ಇರಲಿಲ್ಲ. ಗುಜರಾತ್ ಗೆಲುವು ಪಕ್ಷದ ಪಾಲಿಗೆ ಬೀಗುವಂತಹ ವಿಜಯವೇನೂ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ, ಭಾಗವತ್ ನೀಡಿರುವ ಹೇಳಿಕೆಯೊಳಗೆ ಬಿಜೆಪಿಗೆ ಮುಂದೆ ಆಗಬಹುದಾದ ಬಹುದೊಡ್ಡ ಹಾನಿಯನ್ನು ತಪ್ಪಿಸುವ ಕಾರ್ಯಸೂಚಿ ಇದ್ದಂತಿದೆ. ಒಂದು ವೇಳೆ, ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಮೋದಿ ಘೋಷಣೆಗೆ ಭಾರಿ ಪೆಟ್ಟು ಬೀಳುವುದಂತೂ ನಿಜ. ರಾಜ್ಯದ ವಿಧಾನಸಭೆ ಚುನಾವಣೆಯು ಮೋದಿ ಮತ್ತು ಸಿದ್ದರಾಮಯ್ಯ ನಡುವಿನ ಹಣಾಹಣಿ ಎಂದು ಮಾಧ್ಯಮಗಳಲ್ಲಿ ಬಿಂಬಿತವಾಗಿರುವುದರಿಂದ ಬಿಜೆಪಿಗೆ ವ್ಯತಿರಿಕ್ತವಾಗಿ ಫಲಿತಾಂಶ ಬಂದರೆ ಅದು ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ವರ್ಚಸ್ಸಿಗೆ ಧಕ್ಕೆ ಎಂದು ಭಾವಿಸಿ ಭಾಗವತ್ ಹೀಗೆ ಮಾತನಾಡಿರುವ ಸಾಧ್ಯತೆಗಳಿವೆ.

ಅದೇನೇ ಇರಲಿ, ಬಿಜೆಪಿಗೆ ದೇಶ ಕಟ್ಟಲು ಕೊನೆಗೂ ಸಾಧ್ಯವಾಗಲಿಲ್ಲ ಎಂಬುದು ಭಾಗವತರ ಮಾತಿನ ಒಟ್ಟು ತಾತ್ಪರ್ಯವೇ? ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಪಕ್ಷ ಆಡಳಿತ ನಡೆಸುತ್ತಿದೆ. ರಾಜ್ಯಸಭೆಯಲ್ಲಿಯೂ ಬಿಜೆಪಿಯದೇ ಮೇಲುಗೈ. ಕೇಂದ್ರದ ಅಧಿಕಾರಾವಧಿ ಕೊನೆಗೊಳ್ಳಲು ಇನ್ನೂ ಒಂದು ವರ್ಷ ಬಾಕಿ ಇದೆ. ಹಾಗಿರುವಾಗ ಬಿಜೆಪಿಯೇ ಏಕೆ ಸ್ವತಃ ದೇಶ ಕಟ್ಟಬಾರದು, ಸಂಘ ಅದಕ್ಕೇಕೆ ನೀರೆರೆಯಬಾರದು? ಅದು ಸಾಧ್ಯವಿಲ್ಲ. ಏಕೆಂದರೆ, ವಿರೋಧಿಗಳ ವಿಮರ್ಶೆಯನ್ನು ಬಿಜೆಪಿಯಾಗಲೀ ಸಂಘವಾಗಲೀ ಗಂಭೀರವಾಗಿ ಪರಿಗಣಿಸುವುದಿಲ್ಲ. ದಲಿತರ ಪ್ರಶ್ನೆ ಎದುರಾದಾಗ, ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೇ ಹೇಳಿದಾಗ, ನಿರುದ್ಯೋಗಿಗಳು ಪಕೋಡ ಮಾರಿಯೂ ಬದುಕಬಹುದು ಎಂದಾಗ, ಇವಿಎಂಗಳಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಾಗ, ನೋಟು ನಿಷೇಧದಂತಹ ಕ್ರಮವನ್ನು ಏಕಪಕ್ಷೀಯವಾಗಿ ಕೈಗೊಂಡಾಗ, ಆರೆಸ್ಸೆಸ್‌ ತನ್ನ ವಿರೋಧಿಗಳನ್ನು ಒಳಗೊಂಡು ದೇಶ ಕಟ್ಟುವ ಮಾತನಾಡಬೇಕಿತ್ತು. ಆದರೆ, ಚುನಾವಣೆ ಹೊತ್ತಿನಲ್ಲಿ ನೀಡುತ್ತಿರುವ ಇಂತಹ ಹೇಳಿಕೆಗಳಿಂದ ಬಿಜೆಪಿಗೆ ಲಾಭವೇ ಹೊರತು ದೇಶ ಕಟ್ಟುವ ಉದಾತ್ತತೆ ರೂಪುಗೊಳ್ಳುವುದು ಅಸಾಧ್ಯ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ಆರೆಸ್ಸೆಸ್ ಮುಖ್ಯಸ್ಥ ಭಾಗವತ್ ಹೇಳಿಕೆಗೆ ಭಾರಿ ಆಕ್ರೋಶ

ಇನ್ನು, ಮೋಹನ್ ಭಾಗವತ್ ನೀಡಿರುವ ಹೇಳಿಕೆಯಲ್ಲಿ ಕ್ರಾಂತಿಕಾರಕವಾದುದ್ದೇನೂ ಇಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರ ಮಾತಿಗೂ ಕಿವಿಗೊಡಬೇಕಾದುದು, ವಿರೋಧಿಗಳನ್ನೂ ಒಳಗೊಳ್ಳುವಂತೆ ನಡೆಯಬೇಕಾದುದು ವಾಸ್ತವ. ಕೆಲವು ಪಕ್ಷಗಳಿಗೆ ಈ ಅಂಶ ಮೊದಲೇ ಅರಿವಾಗಿರಬಹುದು, ಆರೆಸ್ಸೆಸ್‌ನಂತಹ ಸಂಘಟನೆಗಳು ಈಗ ಪಾಠ ಕಲಿತಿರಬಹುದು. ಅದನ್ನೇ ಕ್ರಾಂತಿಕಾರಕ ಹೆಜ್ಜೆ ಎಂದು ನಂಬುವುದು ಕೇವಲ ಭ್ರಮೆಯಾದೀತು. ಮತ್ತೊಂದೆಡೆ, ತನಗಂಟಿರುವ ಕಳಂಕವನ್ನು ಕಳೆದುಕೊಳ್ಳುವ ಯತ್ನವೂ ಈ ಹೇಳಿಕೆಯ ಹಿಂದಿದೆ. ತಾನು ಫ್ಯಾಸಿಸ್ಟ್ ಎಂಬ ಆರೋಪದಿಂದ ಆರೆಸ್ಸೆಸ್‌ ಮುಕ್ತಿ ಹೊಂದಬೇಕೆಂಬ ಇಂಗಿತ ಇದ್ದಂತಿದೆ. ಕಾಂಗ್ರೆಸ್ ಮೃದು ಹಿಂದುತ್ವದ ಮೊರೆಹೋದಂತೆ, ಬಿಜೆಪಿ ಕೂಡ ಜಾತ್ಯತೀತ ನಿಲುವುಗಳನ್ನು ಹೊಂದುವುದು,ಚುನಾವಣೆ ಕಾರಣಕ್ಕಾದರೂ ಅನಿವಾರ್ಯವೇ ಎಂಬ ಪ್ರಶ್ನೆಯನ್ನು ಇದು ಹುಟ್ಟುಹಾಕುತ್ತಿದೆ.

ಯಾವುದೇ ಒಂದು ಪಕ್ಷವನ್ನು ಮತ್ತೊಂದು ಪಕ್ಷ ಶಾಶ್ವತವಾಗಿ ಇಲ್ಲವಾಗಿಸುವುದು ಪ್ರಜಾಪ್ರಭುತ್ವದಲ್ಲಿ ಅಸಾಧ್ಯ. ಈಗ ಬಿಜೆಪಿ ಅಲೆ ಇರಬಹುದು ನಾಳೆ ಕಾಂಗ್ರೆಸ್ ಅಲೆ ಬರಬಹುದು. ಮುಂದೊಂದು ದಿನ ಎರಡೂ ಪಕ್ಷಗಳ ಪ್ರಭಾವ ಕಡಿಮೆಯಾಗಿ ಬೇರೊಂದು ಪಕ್ಷ ಉದಯಿಸಬಹುದು. ಮತ್ತೆ ಅದೂ ನಶಿಸಿ, ಬಿಜೆಪಿ ಅಥವಾ ಕಾಂಗ್ರೆಸ್ಸೇ ಅಧಿಕಾರ ಹಿಡಿಯಬಹುದು. ಇಂಥ ಸಾಧ್ಯತೆಗಳೇ ಪ್ರಜಾಪ್ರಭುತ್ವದ ಶಕ್ತಿ. ಆದರೆ, ಈ ವಿಷಯವನ್ನು ಚುನಾವಣೆ ಹೊಸ್ತಿಲಿನಲ್ಲಿ ನೆನಪಿಸಿಕೊಳ್ಳುವ ಮೂಲಕ ಆರೆಸ್ಸೆಸ್‌ ಜಾಣತನ ಪ್ರದರ್ಶಿಸುತ್ತಿದೆಯಷ್ಟೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More