ಕೇಸರಿ ಬಣ್ಣ ಬಳಿದಿದ್ದ ಅಂಬೇಡ್ಕರ್‌ ಪುತ್ಥಳಿಗೆ ನೀಲಿ ಬಣ್ಣ ಹಾಕಿದ ಬಿಎಸ್‌ಪಿ

ಉ.ಪ್ರದೇಶದಲ್ಲಿ ಹಾನಿಗೊಳಗಾಗಿದ್ದ ಅಂಬೇಡ್ಕರ್ ಪುತ್ಥಳಿಯನ್ನು ಪುನರ್‌ ನಿರ್ಮಿಸಿ ಸೋಮವಾರ ಅನಾವರಣ ಮಾಡಲಾಗಿತ್ತು. ಆದರೆ, ಈ ಹೊಸ ಪುತ್ಥಳಿಯ ಅಂಬೇಡ್ಕರ್‌ ಕೋಟ್‌ ಕೇಸರಿ ಬಣ್ಣದ್ದಾಗಿತ್ತು. ಇದನ್ನು ಖಂಡಿಸಿದ ಬಿಎಸ್‌ಪಿ ನಾಯಕರು ಇದೀಗ ಪುತ್ಥಳಿಗೆ ನೀಲಿ ಬಣ್ಣ ಬಳಿದಿದ್ದಾರೆ

ಉತ್ತರ ಪ್ರದೇಶದ ಬಡಾವ್‌ ಜಿಲ್ಲೆಯ ದುಗ್ಗರಾಯ ಪಟ್ಟಣದಲ್ಲಿ ಕೆಲ ದಿನಗಳ ಹಿಂದೆ ಹಾನಿಗೆ ಒಳಗಾಗಿದ್ದ ಅಂಬೇಡ್ಕರ್ ಪುತ್ಥಳಿಯನ್ನು ಪುನರ್‌ ನಿರ್ಮಿಸಿ, ಸೋಮವಾರ ಮತ್ತೆ ಅನಾವರಣ ಮಾಡಲಾಗಿತ್ತು. ವಿಶೇಷ ಅಂದರೆ, ಅಂಬೇಡ್ಕರ್‌ ಅವರ ಕೋಟ್‌ ಕೇಸರಿ ಬಣ್ಣದಿಂದ ಕೂಡಿತ್ತು. ಬಿಜೆಪಿ ಸರ್ಕಾರ ಪುತ್ಥಳಿಗಳನ್ನು ಕೇಸರೀಕರಣ ಮಾಡಲು ಮುಂದಾಗಿದೆ ಎಂದು ಆರೋಪಿಸಿ ಬಿಎಸ್‌ಪಿ ನಾಯಕರು ಮಂಗಳವಾರ ಪುತ್ಥಳಿಯಲ್ಲಿ ಕೇಸರಿ ಬಣ್ಣವಿದ್ದ ಜಾಗದಲ್ಲಿ ನೀಲಿ ಬಣ್ಣ ಬಳಿದಿದ್ದಾರೆ.

ಎರಡು ದಿನದ ಹಿಂದೆ, ಅಂಬೇಡ್ಕರ್ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿತ್ತು. ತಕ್ಷಣವೇ ಪೊಲೀಸರು ಮತ್ತು ಅಧಿಕಾರಿಗಳು ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದರು. ಆದರೆ, ಅಂಬೇಡ್ಕರ್ ಅವರು ಧರಿಸಿರುವ ಶೇರ್ವಾನಿ ಕೇಸರಿ ಬಣ್ಣದಿಂದ ಕೂಡಿತ್ತು. ಇದು ದಲಿತರ ಕೆಂಗಣ್ಣಿಗೆ ಗುರಿಯಾಗಿ, ಮಂಗಳವಾರ ಪ್ರತಿಭಟನೆ ಮಾಡಿದ್ದರು. ಆನಂತರ ಬಿಎಸ್‌ಪಿ ನಾಯಕ ಹೀಮೇಂದ್ರ ಗೌತಮ್‌ ಅವರು ಪುತ್ಥಳಿಗೆ ನೀಲಿ ಬಣ್ಣ ಬಳಿದರು.

ಬಡಗಾವ್‌ ಜಿಲ್ಲೆಯ ಆರಕ್ಷಣಾ ಬಚಾವೋ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಭರತ್ ಸಿಂಗ್‌ ಜಾಟ್ವಾ, “ಸರ್ಕಾರದ ಕೇಸರೀಕರಣದ ವಿಚಾರವಾಗಿ ದಲಿತ ಸಮುದಾಯದವರಲ್ಲಿ ಕೋಪವಿದೆ. ಅಂಬೇಡ್ಕರ್‌ ಪುತ್ಥಳಿಯಲ್ಲಿ ಅಥವಾ ಚಿತ್ರದಲ್ಲಿ ಅಂಬೇಡ್ಕರ್‌ ಕೇಸರಿ ಬಣ್ಣದ ಕೋಟ್‌ ಧರಿಸಿರುವುದನ್ನು ನಾವು ಏಲ್ಲಿಯೂ ನೋಡಿಲ್ಲ,” ಎಂದಿದ್ದಾರೆ.

ಅಖಿಲ ಭಾರತೀಯ ಖಾತಿಕ್ ಸಮಾಜದ ಪ್ರಧಾನ ಕಾರ್ಯದರ್ಶಿ ವೀರು ಸೋನ್ಕರ್‌, “ಇತ್ತೀಚೆಗೆ ಉತ್ತರ ಪ್ರದೇಶದ ಯೋಗಿ ಸರ್ಕಾರ ಅಂಬೇಡ್ಕರ್‌ ಅವರ ಹೆಸರಿನ ಮಧ್ಯೆ ‘ರಾಮ್‌ಜಿ’ ಎಂದು ಸೇರಿಸಲು ಮುಂದಾಗಿತ್ತು. ಇದೀಗ ಪುತ್ಥಳಿಗೆ ಕೇಸರಿ ಬಣ್ಣ ಹಾಕದೆ, ನೀಲಿ ಬಣ್ಣದಲ್ಲಿಯೇ ಇರುವಂತೆ ನಮ್ಮ ಸ್ಥಳೀಯ ಗುಂಪು ಜಿಲ್ಲಾ ಮ್ಯಾಜಿಸ್ಟ್ರೆಟ್‌ ನ್ಯಾಯಾಲಯಕ್ಕೆ ಮನವಿ ಮಾಡಿದೆ,” ಎಂದು ತಿಳಿಸಿದರು.

ಇದನ್ನೂ ಓದಿ : ಬಿಹಾರ ಕೋಮುಗಲಭೆ; ಬಿಜೆಪಿ ಪ್ರಭಾವದ ಮುಂದೆ ಕಳಚಿಬಿತ್ತೇ ನಿತೀಶ್ ಮುಖವಾಡ?

ಬಿಎಸ್‌ಪಿಯಿಂದ ಎರಡು ಬಾರಿ ಶಾಸಕರಾಗಿದ್ದ ಸಿನೋದ್‌ ಶಕ್ಯ, “ರಾಜ್ಯದಲ್ಲಿ ಹಲವು ಕಟ್ಟಡಗಳಿಗೆ ಕೇಸರಿ ಬಣ್ಣ ಬಳಿಯಲಾಗಿದೆ. ಬಿಜೆಪಿ ಸರ್ಕಾರ ಅಂಬೇಡ್ಕರ್ ಪುತ್ಥಳಿಯನ್ನೂ ಕೇಸರೀಕರಣ ಮಾಡಲು ಹೊರಟಿದೆ. ಒಂದು ವೇಳೆ, ಸರ್ಕಾರ ನೀಲಿ ಬಣ್ಣವನ್ನು ಪುತ್ಥಳಿಗೆ ಬಳಸದಿದ್ದರೆ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ,” ಎಂದು ಎಚ್ಚರಿಕೆ ನೀಡಿ, ಪುತ್ಥಳಿ ಧ್ವಂಸ ಮಾಡಿದವರನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿದರು.

ಕಳೆದ ಶನಿವಾರ ಅಂಬೇಡ್ಕರ್‌ ಅವರ ಪುತ್ಥಳಿಯನ್ನು ಧ್ವಂಸಗೊಳಿಸಲಾಗಿತ್ತು. ಈ ಸಂಬಂಧ ಸ್ಥಳೀಯ ನಿವಾಸಿಯೊಬ್ಬರ ಮೇಲೆ ಎಫ್‌ಐಆರ್‌ ಕೂಡ ದಾಖಲಾಗಿದೆ. ಈ ಹಿಂದೆ, ೨೦೧೪ರಲ್ಲಿ ಅಂಬೇಡ್ಕರ್‌ ಅವರ ಪುತ್ಥಳಿಯನ್ನು ಧ್ವಂಸ ಮಾಡಲಾಗಿತ್ತು.

ಅಗ್ನಿವೇಶ್ ಹಲ್ಲೆಗಾರರ ಮುಂದಿದ್ದದ್ದು ಪ್ರಧಾನಿ ಮೋದಿ ಮಾದರಿಯೇ ?
ಜಟಿಲಗೊಳ್ಳುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಅಧಿಕಾರವಧಿ ವಿಸ್ತರಣೆಯ ವಿವಾದ
ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ನೆರವಾಗದ ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆ
Editor’s Pick More