ಕೆಂಪಯ್ಯ ಬಗ್ಗೆ ಪ್ರಶ್ನೆ ಎದ್ದರೂ ಯಾವುದೇ ತೀರ್ಮಾನ ಕೈಗೊಳ್ಳದ ಚುನಾವಣಾ ಆಯೋಗ

ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ನೀತಿಸಂಹಿತೆ ಜಾರಿಯಾಗಿದ್ದರೂ ಸಲಹೆಗಾರರ ಹುದ್ದೆಯಲ್ಲಿ ಮುಂದುವರಿದಿರುವುದು ಆಕ್ಷೇಪಕ್ಕೆ ಕಾರಣ. ಕೆಂಪಯ್ಯ ಅವರು ಗೃಹ ಸಚಿವರಿಗೆ ನೀಡುತ್ತಿರುವ ಸಲಹೆಗಳಾದರೂ ಏನು, ಯಾವ ಸ್ವರೂಪದ್ದು ಎಂಬ ಮಾಹಿತಿ ಇಲ್ಲಿದೆ

ಗೃಹ ಸಚಿವರ ಸಲಹೆಗಾರರ ಹುದ್ದೆ ರಾಜಕೀಯ ಹುದ್ದೆಯೋ, ಸರ್ಕಾರಿ ಹುದ್ದೆಯೋ ಎಂಬ ಬಗ್ಗೆ ಪರಿಶೀಲನೆಗೆ ಮುಂದಾಗಿರುವ ಚುನಾವಣಾ ಆಯೋಗ, ಇನ್ನೂ ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಈ ಹುದ್ದೆ ಸಂವಿಧಾನಿಕವೋ ಅಥವಾ ಅಸಂವಿಧಾನಿಕವೋ ಎಂಬುದರ ಕುರಿತು ಎದ್ದಿರುವ ಗೊಂದಲಗಳೂ ನಿವಾರಣೆ ಆಗಿಲ್ಲ. ಈವರೆಗೂ ಚುನಾವಣಾ ಆಯೋಗದಿಂದ ಯಾವುದೇ ನಿರ್ದೇಶನವೂ ರಾಜ್ಯ ಸರ್ಕಾರಕ್ಕೆ ಬಂದಿಲ್ಲ ಎಂದು ತಿಳಿದುಬಂದಿದೆ.

ಈ ಬಗ್ಗೆ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು, ‘ದಿ ಸ್ಟೇಟ್‌’ಗೆ ಪ್ರತಿಕ್ರಿಯಿಸಿದ್ದಾರೆ. “ ಕೆಂಪಯ್ಯ ಅವರು ಯಾಕೆ ರಾಜೀನಾಮೆ ಕೊಡಬೇಕು? ರಾಜೀನಾಮೆ ಕೊಡಿ ಎಂದು ಆಯೋಗ ಹೇಳಿಲ್ಲ. ಅಧಿಕೃತವಾಗಿ ಸಲಹೆ ಕೊಡಲಿಕ್ಕಾಗುವುದಿಲ್ಲ ಅಷ್ಟೇ. ಸರ್ಕಾರ ಒದಗಿಸಿರುವ ವಾಹನವನ್ನು ಮನೆಯಿಂದ ಕಚೇರಿಗೆ, ಕಚೇರಿಯಿಂದ ಮನೆಗೆ ಬಳಸಬೇಕಷ್ಟೇ,” ಎಂದು ತಿಳಿಸಿದರು.

ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, “ರಾಜಕೀಯ ಮತ್ತು ಇತರ ಸಲಹೆಗಾರರು ತಮ್ಮ ಹುದ್ದೆಯಲ್ಲಿ ಮುಂದುವರೆಯುವಂತಿಲ್ಲ,” ಎಂದು ಹೇಳಿದ್ದರು. ಆದರೂ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರು ದಿನವೂ ಕಚೇರಿಗೆ ಹಾಜರಾಗಿ ಕರ್ತವ್ಯ ನಿರ್ವಹಿಸುತ್ತಿರುವುದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಬರೆದಿದ್ದ ಪತ್ರಕ್ಕೆ ಕೇಂದ್ರ ಚುನಾವಣಾ ಆಯೋಗ ಈವರೆವಿಗೂ ಯಾವುದೇ ಉತ್ತರ ಕೊಟ್ಟಿಲ್ಲ ಎನ್ನಲಾಗಿದೆ.

ಈ ಬೆಳವಣಿಗೆಗಳ ನಡುವೆಯೇ ಜೆಡಿಎಸ್‌, ಬಿಜೆಪಿ ಪಕ್ಷಗಳು ಗೃಹ ಸಚಿವರ ಸಲಹೆಗಾರ ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರು ಕರ್ತವ್ಯ ನಿರ್ವಹಿಸದಂತೆ ನಿರ್ಬಂಧಿಸಬೇಕು ಎಂಬ ಬೇಡಿಕೆಯನ್ನು ಮುಖ್ಯ ಚುನಾವಣಾ ಆಯೋಗ, ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಮುಂದಿರಿಸಿವೆ. ಪ್ರತಿಪಕ್ಷಗಳು ಸಲ್ಲಿಸಿರುವ ದೂರನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆಯಾದರೂ ಈ ಬಗ್ಗೆ ಸ್ಪಷ್ಟತೆ ಹೊಂದಿಲ್ಲ. ಹೀಗಾಗಿ, ಕೆಂಪಯ್ಯ ಅವರು ಕಚೇರಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಗೊತ್ತಾಗಿದೆ.

ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯ ಚುನಾವಣಾ ಕ್ಷೇತ್ರದ ಕುರಿತ ಗುಪ್ತಚರ ಇಲಾಖೆ ಪತ್ರ ನಕಲಿ

ಕೆಂಪಯ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಿಕಟವಾಗಿ ಗುರುತಿಸಿಕೊಂಡಿರುವ ಅಧಿಕಾರಿ. ಹೀಗಾಗಿಯೇ ಇವರ ನೇಮಕಾತಿಯೂ ವಿವಾದಕ್ಕೀಡಾಗಿತ್ತು. ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಆರಂಭದ ವರ್ಷದಲ್ಲಿ ಅವರನ್ನು ಭದ್ರತಾ ಸಲಹೆಗಾರನ್ನಾಗಿ ನೇಮಿಸಿಕೊಳ್ಳಲು ಒಲವು ವ್ಯಕ್ತಪಡಿಸಿದ್ದರಾದರೂ, ಅಂತಿಮವಾಗಿ ಗೃಹ ಸಚಿವರಾಗಿದ್ದ ಕೆ ಜೆ ಜಾರ್ಜ್ ಅವರಿಗೆ ಸಲಹೆಗಾರರನ್ನಾಗಿ ೨೦೧೪ರಲ್ಲಿ ನೇಮಿಸಿದ್ದರು. ಅಲ್ಲದೆ, ಇವರಿಗೆ ರಾಜ್ಯ ಸಚಿವರ ಸ್ಥಾನಮಾನವನ್ನೂ ನೀಡಲಾಗಿತ್ತು. ಸಚಿವರು ಪಡೆಯುವ ವೇತನ, ಭತ್ಯೆ ಇತ್ಯಾದಿ ಸೌಲಭ್ಯಗಳನ್ನು ಒದಗಿಸಲಾಗಿತ್ತು.

ಜಾರ್ಜ್ ಅವರ ನಂತರ ಗೃಹ ಸಚಿವರಾಗಿದ್ದ ಜಿ ಪರಮೇಶ್ವರ್‌ ಮತ್ತು ಹಾಲಿ ಗೃಹ ಸಚಿವರಾಗಿರುವ ರಾಮಲಿಂಗಾ ರೆಡ್ಡಿ ಅವರಿಗೂ ಸಲಹೆಗಾರರಾಗಿ ಮುಂದುವರಿದಿದ್ದಾರೆ. ಈ ಮೂವರು ಸಚಿವರ ಅವಧಿಯಲ್ಲಿ ಕೆಂಪಯ್ಯ ಅವರು ‘ಡಿಫ್ಯಾಕ್ಟೋ ಹೋಂ ಮಿನಿಸ್ಟರ್‌’ ಎಂದೇ ಹೆಸರಾಗಿದ್ದರು. ಪೊಲೀಸ್‌ ಅಧಿಕಾರಿ, ನೌಕರರ ವರ್ಗಾವಣೆಯಲ್ಲಿ ಇವರ ಹಸ್ತಕ್ಷೇಪ ನಡೆಯುತ್ತಿದೆ ಎಂದು ಕಾಂಗ್ರೆಸ್‌ ಶಾಸಕರಲ್ಲದೆ, ಪ್ರತಿಪಕ್ಷಗಳೂ ಈ ಬಗ್ಗೆ ಸದನದಲ್ಲಿ ಗದ್ದಲ ಎಬ್ಬಿಸಿದ್ದವು.

ವಿಶೇಷವೆಂದರೆ, ಗೃಹ ಸಚಿವರ ಸಲಹೆಗಾರರಾಗಿರುವ ಕೆಂಪಯ್ಯ ಅವರು ನಿರ್ದಿಷ್ಟವಾಗಿ ಕಾರ್ಯನಿರ್ವಹಿಸಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಗೃಹ ಸಚಿವರಿಗೆ ಅವರು ಏನೇನು ಸಲಹೆಗಳನ್ನು ನೀಡಿದ್ದಾರೆ ಎಂಬ ಬಗ್ಗೆ ಮಾಹಿತಿ ಹಕ್ಕಿನ ಅಡಿಯಲ್ಲಿ ೨೦೧೬ರಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಇದಕ್ಕೆ ಗೃಹ ಇಲಾಖೆ ಮತ್ತು ಗೃಹ ಸಚಿವರ ಆಪ್ತ ಕಾರ್ಯದರ್ಶಿಗಳು, “ಸಭೆಯಲ್ಲಿ ಇತರ ಅಧಿಕಾರಿಗಳೊಂದಿಗೆ ಸಲಹೆಗಳನ್ನು ನೀಡಿರುತ್ತಾರೆ. ಇದನ್ನು ಹೊರತುಪಡಿಸಿ ಸಚಿವರಿಗೆ ನೀಡಿರಬಹುದಾದ ಮೌಖಿಕ ಸಲಹೆಗಳ ಬಗ್ಗೆ ಯಾವುದೇ ದಾಖಲೆ ಇರುವುದಿಲ್ಲ,” ಎಂದು ಉತ್ತರಿಸಿದ್ದರು.

ಕೇವಲ ಮೌಖಿಕ ಸಲಹೆ ನೀಡಲು ಕೆಂಪಯ್ಯ ಅವರನ್ನು ಗೃಹ ಸಚಿವರ ಸಲಹೆಗಾರರನ್ನಾಗಿ ನೇಮಿಸುವ ಔಚಿತ್ಯವೇನಿತ್ತು ಎಂಬ ಪ್ರಶ್ನೆಯೂ ಎದ್ದಿತ್ತು. ಕಾನೂನು ಸುವ್ಯವಸ್ಥೆ ಕಾಪಾಡುವುದು, ಭದ್ರತೆ ಒದಗಿಸುವುದು ಸೇರಿದಂತೆ ಗೃಹ ಇಲಾಖೆಗೆ ಸಂಬಂಧಿಸಿದಂತೆ ಇನ್ನಿತರ ಕಾರ್ಯನಿರ್ವಹಣೆ ಸಂಬಂಧ ಗೃಹ ಸಚಿವರಿಗೆ ಸಲಹೆ ನೀಡಲು ಪೊಲೀಸ್‌ ಮಹಾನಿರ್ದೇಶಕರ ಆದಿಯಾಗಿ ಇಲಾಖೆಯ ಉನ್ನತ ಅಧಿಕಾರಿಗಳಿದ್ದಾರೆ. ಹೀಗಿರುವಾಗ ಸಲಹೆಗಾರರನ್ನು ನೇಮಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಯೂ ಐಪಿಎಸ್‌ ಅಧಿಕಾರಿಗಳ ವಲಯದಲ್ಲಿ ಕೇಳಿಬಂದಿತ್ತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More