ಕೇಂದ್ರದ ಆನ್‌ಲೈನ್ ಮಾಧ್ಯಮ ನಿಯಂತ್ರಣ ಯತ್ನ ಪ್ರಜಾಪ್ರಭುತ್ವ ವಿರೋಧಿ ನಡೆ

ಸ್ಮೃತಿ ಇರಾನಿ ನೇತೃತ್ವದ ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು ಆನ್‌ಲೈನ್ ಸುದ್ಧಿತಾಣಗಳ ನಿಯಂತ್ರಣಕ್ಕೆ ಹತ್ತು ಸದಸ್ಯರ ಸಮಿತಿಯೊಂದನ್ನು ರಚಿಸಿದೆ. ಈ ಹಿನ್ನೆಲೆಯಲ್ಲಿಮ ಆನ್‌ಲೈನ್ ಮಾಧ್ಯಮದ ಬಗ್ಗೆ ಕೇಂದ್ರ ಸರ್ಕಾರ ಹೊಂದಿರುವ ಆತಂಕಗಳ ಬಗ್ಗೆ ‘ದಿ ವೈರ್’ನ ವಿಶ್ಲೇಷಣೆಯ ಯಥಾರೂಪ ಇಲ್ಲಿದೆ

ಕೆಲ ದಿನಗಳ ಹಿಂದೆ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವೆ ಸ್ಮೃತಿ ಇರಾನಿ ಅವರು ಖಾಸಗಿ ಮಾದ್ಯಮವೊಂದರ ಸಮಾವೇಶದಲ್ಲಿ ಮಾತನಾಡುತ್ತ, “ಆನ್‌ಲೈನ್‌ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದ್ದ, ಇದನ್ನು ನಿಯಂತ್ರಿಸಲು ತಮ್ಮ ಸಚಿವಾಲಯವು ಮಾರ್ಗಸೂಚಿ ರೂಪಿಸುವ ಯತ್ನದಲ್ಲಿದೆ,” ಎಂದು ಹೇಳಿದ್ದರು. ಆನಂತರ ಇರಾನಿ ಅವರ ಕೆಂಗಣ್ಣು ಮುಖ್ಯವಾಹಿನಿ ಮಾಧ್ಯಮಗಳ ಮೇಲೆ ತಿರುಗಿತು. “ಸುಳ್ಳು ಸುದ್ದಿ (Fake News) ಪ್ರಕಟಿಸುವ ಪತ್ರಕರ್ತರ ಮಾನ್ಯತೆಯನ್ನು ರದ್ದು ಮಾಡಲಾಗುವುದು,” ಎಂದು ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿತ್ತು.

ಸ್ಮೃತಿ ಇರಾನಿ ಅವರ ಈ ನಿರ್ಧಾರಕ್ಕೆ ಮಾಧ್ಯಮ ಹಾಗೂ ಸಾರ್ವಜನಿಕರ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಯಿತು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಕಚೇರಿಯು ಮಾಧ್ಯಮಗಳ ಮೇಲೆ ನಿಯಂತ್ರಣ ಹೇರುವ ನಿರ್ಧಾರವನ್ನು ಕೂಡಲೇ ಹಿಂಪಡೆಯಲು ಮಾಹಿತಿ ಹಾಗೂ ಪ್ರಸಾರ ಸಚಿವಾಲಯಕ್ಕೆ ಸೂಚಿಸಿತು.

ಇದರ ಬೆನ್ನಲ್ಲೇ, ಸ್ಮೃತಿ ಇರಾನಿ ನೇತೃತ್ವದ ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು ಡಿಜಿಟಲ್ ಮಾಧ್ಯಮ ಹಾಗೂ ಆನ್‌ಲೈನ್ ಸುದ್ದಿತಾಣಗಳನ್ನು ನಿಯಂತ್ರಣಕ್ಕೆ ಮಾರ್ಗಸೂಚಿ ರೂಪಿಸಲು ಹತ್ತು ಸದಸ್ಯರ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿಯಲ್ಲಿ ಗೃಹ ಸಚಿವಾಲಯ, ಮಾಹಿತಿ ಹಾಗೂ ಪ್ರಸಾರ ಸಚಿವಾಲಯ, ಕಾನೂನು ಸಚಿವಾಲಯ ಮತ್ತು ಕೈಗಾರಿಕಾ ಸಚಿವಾಲಯಗಳ ಕಾರ್ಯದರ್ಶಿಗಳು ಸೇರಿದಂತೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ನ್ಯಾಷನಲ್‌ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್ ಹಾಗೂ ಇಂಡಿಯನ್ ಬ್ರಾಡ್ ಕಾಸ್ಟರ್ಸ್ ಫೆಡರೇಷನ್ ಸದಸ್ಯರು ಇರಲಿದ್ದಾರೆ ಎಂದು ಸಚಿವಾಲಯ ಘೋಷಿಸಿತು.

ಈ ಸಮಿತಿಯು ಆನ್‌ಲೈನ್‌ನಲ್ಲಿ ಪ್ರಸಾರವಾಗುವ ಸುದ್ದಿ ಹಾಗೂ ಮಾಹಿತಿಗಳ ಮೇಲೆ ನಿಗಾ ವಹಿಸಲಿದ್ದು, ಡಿಜಿಟಲ್ ಮಾಧ್ಯಮ, ನ್ಯೂಸ್ ಪೋರ್ಟಲ್ ಹಾಗೂ ನ್ಯೂಸ್‌ ಪೇಪರ್ ವೆಬ್‌ಸೈಟ್‌ಗಳಲ್ಲಿ ಪ್ರಸಾರವಾಗುವ ಸುದ್ದಿಗಳ ಮೇಲೆ ನಿಯಂತ್ರಣ ಹೊಂದಲಿದೆ. ಆ ಮೂಲಕ ಕೇಂದ್ರ ಸರ್ಕಾರವು ಡಿಜಿಟಲ್ ಮಾಧ್ಯಮ ಹಾಗೂ ಆನ್‌ಲೈನ್ ಸುದ್ದಿತಾಣಗಳ ಮೇಲೆ ತನ್ನ ಅಧಿಕಾರ ಚಲಾಯಿಸಲು ಮುಂದಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು ಆನ್‌ಲೈನ್ ಮಾಧ್ಯಮಗಳ ಮೇಲೆ ನಿಗಾ ವಹಿಸಲು ರಚಿಸಿರುವ ಹತ್ತು ಸದಸ್ಯರ ಸಮಿತಿಯು ಆನ್‌ಲೈನ್ ಮಾಧ್ಯಮದ ಯಾವುದೇ ಪ್ರತಿನಿಧಿಯನ್ನು ಒಳಗೊಳ್ಳಲಿರುವುದು ವಿಪರ್ಯಾಸದ ಸಂಗತಿ. ನ್ಯಾಷನಲ್‌ ಬ್ರಾಡ್‌ಕಾಸ್ಟರ್ಸ್ ಅಸೋಶಿಯೇಷನ್ ಹಾಗೂ ಇಂಡಿಯನ್ ಬ್ರಾಡ್‌ಕಾಸ್ಟರ್ಸ್ ಫೇಡರೇಷನ್‌ಗಳು ಟಿವಿ ಮಾಧ್ಯಮಗಳಿಗೆ ಸಂಬಂಧಿಸಿದ ಸಂಸ್ಥೆಗಳಾಗಿದ್ದು, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ಆನ್ಲೈಲ್‌ ಮಾಧ್ಯಮ ಹಾಗೂ ಟಿವಿ ಮಾಧ್ಯಮಗಳೆರಡಕ್ಕೂ ಸಂಬಂಧಿಸಿದ್ದಲ್ಲ. ಆನ್ಲೈನ್ ಮಾಧ್ಯಮಗಳಿಗೆ ನಿಯಮ ರೂಪಿಸುವಲ್ಲಿ ಈ ಸಮಿತಿ ಸದಸ್ಯರು ಅರ್ಹರಾಗಿದ್ದಾರೆಂದು ಮೋದಿ ಸರ್ಕಾರವು ಬಿಂಬಿಸುತ್ತಿದೆ. ಈ ಸಮಿತಿಯ ಅಧಿಕಾರಿಗಳು ಆನ್ಲೈನ್ ಮಾಧ್ಯಮಗಳನ್ನು ನಿಯಂತ್ರಿಸುವಲ್ಲಿ, ನ್ಯೂಸ್ ಪೋರ್ಟಲ್‌ಗೆ ಪರವಾನಗಿ ಹೊಂದಲು ಮಾನದಂಡ ರೂಪಿಸುವಲ್ಲಿ ಹಾಗೂ ವಿದೇಶಿ ಹೂಡಿಕೆ ವ್ಯವಹಾರದ ಇತರ ಅಂಶಗಳನ್ನು ನಿರ್ಧರಿಸುವಲ್ಲಿ ಸಮರ್ಥರಿದ್ದಾರೆಂಬ ತಪ್ಪು ಪರಿಕಲ್ಪನೆ ಮೋದಿ ಸರ್ಕಾರಕ್ಕೆ ಇದ್ದಂತಿದೆ ಎಂಬ ಸಂದೇಹ ಕಾಡುತ್ತಿದೆ.

ಇದನ್ನೂ ಓದಿ : ಸುಳ್ಳು ಸುದ್ದಿ ತಡೆಯಲು ಹೊರಟು ತಾವೇ ಸುದ್ದಿಯಾದ ಸಚಿವೆ ಸ್ಮೃತಿ ಇರಾನಿ

ಆನ್‌ಲೈನ್ ಮಾಧ್ಯಮಗಳ ಬಗ್ಗೆ ಏಕಿಷ್ಟು ಆತಂಕ?

ಮೋದಿ ಸರ್ಕಾರವು ಆನ್‌ಲೈನ್ ಮಾಧ್ಯಮಗಳ ನಿಯಂತ್ರಣಕ್ಕೆ ಕೈಹಾಕಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಕಳೆದ ಕೆಲ ವರ್ಷಗಳಿಂದ ಕೇಂದ್ರ ಸರ್ಕಾರವನ್ನು ಪ್ರಶ್ನಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಆನ್‌ಲೈನ್ ಮಾಧ್ಯಮ ವೇದಿಕೆಗಳನ್ನು ಮೋದಿ ಸರ್ಕಾರ ನಿಯಂತ್ರಿಸುವಲ್ಲಿ ಹೆಜ್ಜೆ ಇಟ್ಟಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ದಿನೇದಿನೇ ಪ್ರಬಲವಾಗತ್ತಿರುವ ಫೇಸ್ಬುಕ್, ಟ್ವಿಟರ್‌ ಹಾಗೂ ಗೂಗಲ್‌ನಂತಹ ಆನ್ಲೈನ್ ಮಾಧ್ಯಮಗಳ ಶಕ್ತಿಯನ್ನು ಕೇಂದ್ರ ಸರ್ಕಾರ ಅರಿತಂತಿದೆ. ಸಂಪನ್ಮೂಲಗಳ ಕೊರತೆ ಇರುವ ಸಣ್ಣ ಪುಟ್ಟ ಆನ್ಲೈನ್ ಮಾಧ್ಯಮಗಳು ಫೇಸ್ಬುಕ್ ಹಾಗೂ ಗೂಗಲ್‌ನಂತಹ ಜಾಗತಿಕ ಮಾಧ್ಯಮಗಳ ಮೂಲಕ ತಮ್ಮ ಸುದ್ದಿ ಅಥವಾ ಮಾಹಿತಿಗಳನ್ನು ಜನರಿಗೆ ಮುಟ್ಟಿಸುವಲ್ಲಿ ಯಶಸ್ಸು ಕಾಣುತ್ತಿರುವುದು ಕೇಂದ್ರ ಸರ್ಕಾರವನ್ನು ಚಿಂತೆಗೀಡು ಮಾಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಸುದ್ದಿ ವಿತರಣೆ ಮತ್ತು ವಿಚಾರ ಹಂಚಿಕೆ ಈಗ ಹಿಂದೆಂದಿಗಿಂತಲೂ ಹೆಚ್ಚು ಪ್ರಜಾಪ್ರಭುತ್ವವಾದಿಯಾಗಿದೆ ಎಂಬ ಸತ್ಯ ಕೇಂದ್ರ ಸರ್ಕಾರಕ್ಕೆ ತಿಳಿದಿದೆ ಎಂಬುದನ್ನು ಅಲ್ಲಗಳೆಯುಂತಿಲ್ಲ.

ಸುದ್ದಿಗಳನ್ನು ವೈರಲ್ ಮಾಡಿ ಆಡಳಿತ ವರ್ಗವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಆನ್ಲೈನ್ ಮಾಧ್ಯಮ ಹೆಚ್ಚು ಸಕ್ರೀಯವಾಗಿರುವುದನ್ನು ಕೇಂದ್ರ ಸರ್ಕಾರವು ಎಚ್ಚರಿಕೆಯಿಂದ ಗಮನಿಸುತ್ತಿದೆ ಎಂಬುದೀಗ ಗುಟ್ಟಾಗಿ ಉಳಿದಿಲ್ಲ. ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಮೋದಿಯವರು ಕೊಟ್ಟಿದ್ದ ಭರವಸೆಗಳ ಬಗ್ಗೆ ಆನ್ಲೈನ್ ಮೂಲಕ ಪ್ರಶ್ನೆಗಳನ್ನು ಕೇಳಿ, ಕೇಂದ್ರ ಸರ್ಕಾರದ ಸುಳ್ಳು ಭರವಸೆಗಳ ಬಗ್ಗೆ ವ್ಯಾಪಕವಾಗಿ ಸುದ್ಧಿಗಳನ್ನು ಹಂಚುವ ಕಾರ್ಯವನ್ನು ಆನ್ಲೈಲ್ ಮಾಧ್ಯಮ ಮಾಡಲಿದೆ ಎಂಬ ಆತಂಕವೂ ಕೇಂದ್ರವನ್ನು ಕಾಡುತ್ತಿದೆಯೇ ಎಂಬ ಪ್ರಶ್ನೆ ಸಹ ಮೂಡಿದೆ. ಒಟ್ಟಿನಲ್ಲಿ ಆನ್‌ಲೈನ್ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ಹವಣಿಸುತ್ತಿರುವ ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆ ಈಗ ಜಗಜ್ಜಾಹೀರವಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More