ನ್ಯಾಯಕ್ಕಾಗಿ ಹೋರಾಡುತ್ತಿದ್ದ ವ್ಯಕ್ತಿ ನ್ಯಾಯಾಂಗ ಬಂಧನದಲ್ಲಿ ಸಾವು; ಮುಂದೇನು?

ಬಿಜೆಪಿ ಶಾಸಕನ ಸಹೋದರ ಗುಂಪು ತನ್ನ ಮಗಳ ಮೇಲೆ ಅತ್ಯಾಚಾರ ನಡೆಸಿತೆಂದು ಆರೋಪಿಸಿ, ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದ ಪಪ್ಪು ಸಿಂಗ್ ಎಂಬುವವರು ನ್ಯಾಯಾಂಗ ಬಂಧನದಲ್ಲಿದ್ದಾಗಲೇ ಸಾವನ್ನಪ್ಪಿದ್ದಾರೆ. ಈ ಪ್ರಕರಣದಲ್ಲಿ ಆದಿತ್ಯನಾಥ್ ಸರ್ಕಾರ ನ್ಯಾಯ ದೊರಕಿಸಲಿದೆಯೇ?

ಅಧಿಕಾರದ ಬಲ ಇರುವವರು ಅಮಾಯಕರ ವಿರುದ್ಧ ರಾಕ್ಷಸ ಪೃವೃತ್ತಿ ತೋರಿಸಿದರೆ ಏನಾಗಬಲ್ಲದು ಎಂಬುದಕ್ಕೆ ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯಲ್ಲಿನ ಈ ಘಟನೆ ಸಾಕ್ಷಿ. ಕಳೆದ ವರ್ಷ ತನ್ನ ಮಗಳ ಮೇಲೆ ಅತ್ಯಾಚಾರ ಮಾಡಿದವರ ವಿರುದ್ಧ ಪ್ರತಿಭಟನೆ ನಡೆಸಿದ ತಂದೆ ಪಪ್ಪು ಸಿಂಗ್ (50) ನ್ಯಾಯಾಂಗ ಬಂಧನದಲ್ಲಿ ಇದ್ದಾಗಲೇ ಸಾವನ್ನಪ್ಪಿದ್ದಾರೆ! ಈ ಸಾವಿನ ಹಿಂದೆ ಹಲವು ಅನುಮಾನಗಳು ಎದ್ದಿವೆ.

ಪ್ರಕರಣ ಸಂಬಂಧ ಪೋಲಿಸರಿಗೆ ದೂರು ನೀಡಿದರೂ ಎಫ್‌ಐಆರ್‌ ದಾಖಲಿಸಿರಲಿಲ್ಲ. ಕೆಲವು ದಿನಗಳ ನಂತರ ಎಫ್‌ಐಆರ್ ದಾಖಲಿಸಿದರೂ ದೂರಿನಲ್ಲಿ ಪ್ರಸ್ತಾಪಿಸಿದ್ದ ಆರೋಪಿ ಬಿಜೆಪಿ ಶಾಸಕ ಕುಲದೀಪ್ ಸೆಂಗರ್ ಸಹೋದರ ಅತುಲ್ ಸೆಂಗರ್ ಅವರ ಹೆಸರನ್ನು ಕೈಬಿಡಲಾಗಿತ್ತು. ಆದರೆ, ಒತ್ತಡದಿಂದಾಗಿ ಅತುಲ್ ಸೆಂಗರ್‌ನನ್ನು ಪೊಲೀಸರು ಕೊನೆಗೂ ಮಂಗಳವಾರ ಬಂಧಿಸಿದ್ದಾರೆ.

ಅತುಲ್ ಸೆಂಗರ್ ಕಳೆದ ವರ್ಷ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪವಿತ್ತು. ನ್ಯಾಯಕ್ಕಾಗಿ ಸಂತ್ರಸ್ತೆ ಹಾಗೂ ಸಂತ್ರಸ್ಥೆಯ ಕುಟುಂಬದವರು ಇಲ್ಲಿವರೆಗೆ ಪ್ರತಿಭಟನೆ ಮಾಡುತ್ತಲೇ ಬಂದಿದ್ದರು. ಆದರೂ ಆರೋಪಿ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆತ್ಮಹತ್ಯೆಗೆ ಮುಂದಾಗಿದ್ದರು. ಇವರ ಪ್ರತಿಭಟನೆ ಸೆಂಗರ್ ಸಹೋದರರ ಕೋಪಕ್ಕೆ ಕಾರಣವಾಗಿತ್ತು.

“ಈ ನಡುವೆ, ಆರೋಪಿ ಅತುಲ್ ಸೆಂಗರ್ ಸಂತ್ರಸ್ತೆಯ ತಂದೆಯನ್ನು ಥಳಿಸಿ ಗಂಭೀರ ಗಾಯಗೊಳಿಸಿದ್ದ. ಕೊನೆಗೆ, ಕಾನೂನುಬಾಹಿರ ಪ್ರತಿಭಟನೆಯ ನೆಪವೊಡ್ಡಿ ಸಂತ್ರಸ್ತೆಯ ತಂದೆಯನ್ನು ಬಂಧಿಸಲಾಗಿತ್ತು. ಇದೀಗ ಶಾಸಕರ ಸೂಚನೆಯಂತೆ ಕೊಲೆ ಮಾಡಲಾಗಿದೆ. ಅಲ್ಲದೆ, ನಮಗೂ ಹಲವಾರು ಬೆದರಿಕೆ ಕರೆಗಳು ಬರುತ್ತಿವೆ,” ಎಂದು ಮೃತರ ಕುಟುಂಬ ಸದಸ್ಯರು ಹೇಳಿಕೊಂಡಿದ್ದಾರೆ.

ಘಟನೆಯಿಂದ ಎಚ್ಚೆತ್ತ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದೆ. “ನ್ಯಾಯಯುತ ತನಿಖೆ ನಡೆಯಲಿ ಎನ್ನುವ ಉದ್ದೇಶದಿಂದ ವಿಚಾರಣೆಯನ್ನು ಉನ್ನಾವ್‌ನಿಂದ ಲಖನೌಗೆ ವರ್ಗಾಯಿಸಲಾಗಿದೆ. ಸಂತ್ರಸ್ತೆ ಕುಟುಂಬಕ್ಕೆ ನ್ಯಾಯ ಕೊಡಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ,” ಎಂದು ಸರ್ಕಾರ ಹೇಳಿಕೊಂಡಿದೆ. ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ಸೋನು ಭಾವು, ವಿನೀತ್ ಹಾಗೂ ಶೈಲು ಅವರನ್ನು ಕೂಡ ಸೋಮವಾರ ಬಂಧಿಸಲಾಗಿದೆ.

ಇದನ್ನೂ ಓದಿ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಘೇರಾವ್ ಯತ್ನ

ಈ ಘಟನೆಯಿಂದ ರಾಜ್ಯ ಬಿಜೆಪಿ ಸರ್ಕಾರ ಸಂಕಷ್ಟಕ್ಕೆ ಸಿಲುಕಿದ್ದು, ವಿರೋಧಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದೇ ವೇಳೆ, ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ವರದಿ ನೀಡುವಂತೆ ಲಖನೌನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ. ತಮ್ಮದೇ ಶಾಸಕರನ್ನು ರಕ್ಷಿಸಿ ಪ್ರಕರಣವನ್ನು ಮುಚ್ಚಿಹಾಕುವ ಸಾಧ್ಯತೆಯೂ ಇದ್ದು, ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡುವಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಸಫಲವಾಗುತ್ತದೆಯೇ ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿದೆ.

2013ರ ಮುಜಫ್ಫರ್ ನಗರ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನಾಯಕರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಗಳನ್ನು ಯೋಗಿ ಆದಿತ್ಯನಾಥ್ ಸರಕಾರ ಹಿಂದಕ್ಕೆ ಪಡೆಯಲು ಚಿಂತನೆ ನಡೆಸಿತ್ತು. ಅಲ್ಲದೆ, ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ವಾಪಸು ಪಡೆಯಲು ಸ್ವತಃ ಆದಿತ್ಯನಾಥ್ ಆದೇಶ ಹೊರಡಿಸಿದ್ದರು. ಈ ಬೆಳವಣಿಗೆಯ ನಂತರ ಅತ್ಯಾಚಾರ ಪ್ರಕರಣ ಆದಿತ್ಯನಾಥ್ ಅವರ ಸರ್ಕಾರವನ್ನು ನಡುಗಿಸಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More