ಕಾವೇರಿ ಗಲಭೆ ಹಿನ್ನೆಲೆ; ಚೆನ್ನೈ ಐಪಿಎಲ್ ಪಂದ್ಯಗಳು ಸ್ಥಳಾಂತರ ಸಾಧ್ಯತೆ

ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರದಲ್ಲಿ ಕೇಂದ್ರದ ಮೇಲೆ ಒತ್ತಡ ಹೇರಲು ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ಬಿರುಸುಗೊಂಡಿದೆ. ಈ ಹಿನ್ನೆಲೆಯಲ್ಲಿ ಚೆನ್ನೈ ಪಂದ್ಯಗಳು ಬೇರೆಡೆಗೆ ಸ್ಥಳಾಂತರಗೊಳ್ಳುವ ಸಂಭವವಿದೆ ಎಂದು ಬಿಸಿಸಿಐ ಮೂಲಗಳು ಬುಧವಾರ (ಏ.೧೧) ತಿಳಿಸಿವೆ

ಮಾರ್ಚ್ ೨೯ರೊಳಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಬೇಕೆಂಬ ಸರ್ವೋಚ್ಚ ನ್ಯಾಯಾಲಯದ ಗಡುವು ಮುಗಿದಿದ್ದರೂ, ಕೇಂದ್ರ ಸರ್ಕಾರ ಆ ಕಾಯಕಕ್ಕೆ ಮುಂದಾಗಿಲ್ಲ ಎಂದು ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಭದ್ರತಾ ಕಾರಣಗಳಿಗಾಗಿ ಇಲ್ಲಿನ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಐಪಿಎಲ್ ಆಡಳಿತ ಮಂಡಳಿ ತೀರ್ಮಾನಿಸಿದೆ ಎಂಬ ಮಾತು ಕೇಳಿಬಂದಿದೆ. ಇದಲ್ಲದೆ, ಚೆನ್ನೈ ಪಂದ್ಯಗಳು ನಡೆಯುವ ಸ್ಥಳದ ಕುರಿತು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದೂ ಬಿಸಿಸಿಐ ಹೇಳಿದೆ.

ತಮಿಳುನಾಡಿನ ಕೆಲವು ರಾಜಕೀಯ ಪಕ್ಷಗಳು ಹಾಗೂ ಕೆಲ ಸಂಘಟನೆಗಳ ಕಾರ್ಯಕರ್ತರು ರಾಜ್ಯದ ಹಲವೆಡೆ ವಿಶೇಷವಾಗಿ ಚೆನ್ನೈನಲ್ಲಿ ಪ್ರತಿಭಟನೆ ತೀವ್ರಗೊಳಿಸಿವೆ. ಇದೇ ವೇಳೆ ಭಾನುವಾರ (ಏಪ್ರಿಲ್ ೯) ನಡೆದಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್, “ಕಾವೇರಿ ನೀರಿಗಾಗಿ ರಾಜ್ಯ ಹೋರಾಡುತ್ತಿದ್ದು, ಈ ವೇಳೆಯಲ್ಲಿ ಐಪಿಎಲ್ ನಮಗೆ ಬೇಕೇ? ಇದು ನಿಜವಾಗಿಯೂ ಮುಜುಗರ ತರಿಸುತ್ತದೆ ಎಂದಿದ್ದರಲ್ಲದೆ, ಕೇಂದ್ರದ ಮೇಲೆ ಒತ್ತಡ ಹೇರಲು ಆಟಗಾರರು ಕಪ್ಪು ಪಟ್ಟಿ ಧರಿಸಿ ಆಡಬೇಕು,’’ ಎಂದಿದ್ದರು.

ಅವರ ಈ ಹೇಳಿಕೆ ಕೂಡ ಕೆಲವು ಕಾರ್ಯಕರ್ತರನ್ನು ಪ್ರತಿಭಟನೆಗೆ ಇನ್ನಷ್ಟು ಪ್ರೇರೇಪಿಸಿತ್ತು. ಏತನ್ಮಧ್ಯೆ, ಬೆಟ್ಟಿಂಗ್ ವಿಚಾರದಲ್ಲಿ ಎರಡು ವರ್ಷ ಅಮಾನತು ಶಿಕ್ಷೆ ಪೂರೈಸಿ ಮತ್ತೆ ಐಪಿಎಲ್ ಕೂಟಕ್ಕೆ ಆಗಮಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ದಿನದ ಹಿಂದಷ್ಟೇ ತವರಿನಲ್ಲಿ ಮೊದಲ ಪಂದ್ಯವನ್ನಾಡಿತ್ತು. ಎಷ್ಟೇ ಪ್ರತಿಭಟನೆ ನಡೆದರೂ, ಚೆನ್ನೈನ ಎಂ ಎ ಚಿದಂಬರಂ ಕ್ರೀಡಾಂಗಣ ಬಹುತೇಕ ಭರ್ತಿಯಾಗಿತ್ತು. ಈ ಮಧ್ಯೆ, ಪಂದ್ಯದ ವೇಳೆ ಕೆಲವು ಕಿಡಿಗೇಡಿಗಳು ಫೀಲ್ಡಿಂಗ್‌ನಲ್ಲಿದ್ದ ರವೀಂದ್ರ ಜಡೇಜಾ ಹಾಗೂ ಹನ್ನೆರಡನೇ ಆಟಗಾರ ಫಾಫ್ ಡು ಪ್ಲೆಸಿಸ್ ಅವರತ್ತ ಚಪ್ಪಲಿ, ಶೂಗಳನ್ನು ತೂರಿದ್ದರು. ಪೊಲೀಸರು ಬಳಿಕ ಪ್ರತಿಭಟನಾಕಾರರನ್ನು ಕ್ರೀಡಾಂಗಣದಿಂದ ಹೊರಗೆ ಕರೆದೊಯ್ದಿದ್ದರು.

ಇದನ್ನೂ ಓದಿ : ರಸೆಲ್ ಆಟ ವ್ಯರ್ಥ; ಚೆನ್ನೈಗೆ ಗೆಲುವು ತಂದುಕೊಟ್ಟ ಸ್ಯಾಮ್ ಬಿಲ್ಲಿಂಗ್ಸ್ 

ನಿಲುವು ಬದಲಿಸಿದ ಶುಕ್ಲಾ: ಕಾವೇರಿ ವಿಷಯದಲ್ಲಿ ನಡೆಯುತ್ತಿರುವ ಗಲಭೆಯಿಂದಾಗಿ ಚೆನ್ನೈ ಪಂದ್ಯಗಳನ್ನು ಸ್ಥಳಾಂತರಿಸುವ ಬಗ್ಗೆ ಮಂಗಳವಾರವೇ ಪ್ರತಿಕ್ರಿಯಿಸಿದ್ದ ಐಪಿಎಲ್ ಆಯುಕ್ತ ರಾಜೀವ್ ಶುಕ್ಲಾ, “ಯಾವುದೇ ಕಾರಣಕ್ಕೂ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಮಾತಿಲ್ಲ. ಕ್ರೀಡೆಯನ್ನು ರಾಜಕೀಯಗೊಳಿಸಲಾಗದು,’’ ಎಂದು ತಿಳಿಸಿದ್ದರು. ಆದರೆ, ಇದೀಗ ಕ್ರೀಡಾಂಗಣದೊಳಗಡೆ ಆಟಗಾರರತ್ತ ಚಪ್ಪಲಿಗಳನ್ನು ತೂರುವಂಥ ಘಟನೆ ನಡೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಅವರು, ಚೆನ್ನೈ ಪಂದ್ಯಗಳ ಸ್ಥಳಾಂತರಕ್ಕೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ಪಂದ್ಯಕ್ಕೂ ಮುನ್ನ ಚೀಪಕ್ ಮೈದಾನದ ಮುಂದೆ ಸೇರಿದ್ದ ತಮಿಳಿಗ ವಾಳುರಿಮೈ ಕಚಿಗೆ (ಟಿವಿಕೆ) ಸೇರಿದ ಕಾರ್ಯಕರ್ತರಲ್ಲದೆ, ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಚೀಪಕ್ ಕ್ರೀಡಾಂಗಣದ ಮುಂದೆ ಪ್ರತಿಭಟಿಸಿದರು. ಕ್ರೀಡಾಂಗಣಕ್ಕೆ ಪ್ರವೇಶಿಸುತ್ತಿದ್ದವರ ಜತೆಗೆ ಜಟಾಪಟಿ ನಡೆಸಿದ್ದರು. ಈ ಪ್ರತಿಭಟನೆಯನ್ನು ಲೆಕ್ಕಿಸದ ಕ್ರಿಕೆಟ್ ಪ್ರೇಮಿಗಳು ಕ್ರೀಡಾಂಗಣವನ್ನು ಭರ್ತಿಯಾಗಿಸಿದ್ದರು. ಆದರೆ, ಇದೀಗ ಅಂತಿಮವಾಗಿ ಚೆನ್ನೈ ಪಂದ್ಯಗಳು ಬೇರೆಡೆ ಸ್ಥಳಾಂತರಗೊಳ್ಳುತ್ತಿರುವುದರಿಂದ ಸಹಜವಾಗಿಯೇ ಚೆನ್ನೈ ಕ್ರಿಕೆಟ್ ಪ್ರೇಮಿಗಳು ಬೇಸರಗೊಂಡಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More