ಪೇಯ್ಡ್‌ ನ್ಯೂಸ್‌ಗೆ ದಶಕದ ಇತಿಹಾಸ; ಮಾಧ್ಯಮಗಳ ದಾಹವೇ ಅವಾಂತರಕ್ಕೆ ಮೂಲ

ಚುನಾವಣೆ ಸಮೀಪಿಸುತ್ತಿದ್ದಂತೆ ಮಾಧ್ಯಮ ಕ್ಷೇತ್ರದಲ್ಲಿ ಪೇಯ್ಡ್‌ ನ್ಯೂಸ್‌ ಚರ್ಚೆ ವ್ಯಾಪಕವಾಗುತ್ತದೆ. ರಾಜಕಾರಣಿಗಳು ಮತ್ತು ಮಾಧ್ಯಮಗಳ ಒಳಒಪ್ಪಂದದಲ್ಲೇ ವ್ಯವಹಾರ ನಡೆಯುತ್ತದೆ. ಇಂಥ ಪೇಯ್ಡ್‌ ನ್ಯೂಸ್‌‌ ಬಗ್ಗೆ ಬಹಿರಂಗ ಚರ್ಚೆ ಆರಂಭವಾಗಿದ್ದು ೨೦೦೯ರ ಸಾರ್ವತ್ರಿಕ ಚುನಾವಣೆಯಲ್ಲಿ

ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಕ್ಕಿರುವಷ್ಟೇ ಪ್ರಾಮುಖ್ಯತೆ ಮಾಧ್ಯಮಕ್ಕಿದೆ. ಸಂವಿಧಾನಾತ್ಮಕವಾಗಿ ದೇಶದ ಸಾಮಾನ್ಯ ನಾಗರಿಕನಿಗೆ ದೊರೆತಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹೊರತಾಗಿ ಬೇರಾವುದೇ ವಿಶೇಷ ಅಧಿಕಾರ ಮಾಧ್ಯಮಕ್ಕಿಲ್ಲ. ಸಮಾಜದಲ್ಲಿ ಆಗುಹೋಗುಗಳ ಮೇಲೆ ಕಣ್ಣಿಡುವ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಲೋಪದೋಷಗಳನ್ನು ಜನರ ಮುಂದಿಡುವ ಗುರುತರ ಜವಾಬ್ದಾರಿ ಮಾಧ್ಯಮದ ಮೇಲಿರುವುದರಿಂದ ಅದನ್ನು ಪ್ರಜಾಪ್ರಭುತ್ವದ ‘ಕಾವಲು ನಾಯಿ’ ಎಂದೂ ಕರೆಯಲಾಗುತ್ತದೆ. ಆದರೆ, ಬಹುತೇಕ ಎಲ್ಲಾ ಕ್ಷೇತ್ರಗಳು ಎದುರಿಸುತ್ತಿರುವ ಬಿಕ್ಕಟ್ಟುಗಳಂತೆಯೇ ಮಾಧ್ಯಮವೂ ಕೆಲವು ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿದೆ. ‘ ಪೇಯ್ಡ್‌ ನ್ಯೂಸ್‌’ ಅದರಲ್ಲೊಂದು.

ಮಾಧ್ಯಮ ಸಂಸ್ಥೆ ಅಥವಾ ಪತ್ರಕರ್ತನೊಬ್ಬ ಹಣ, ಆಸ್ತಿ, ಮತ್ಯಾವುದೇ ತರಹದ ನೆರವು, ದಾಕ್ಷಿಣ್ಯಕ್ಕೆ ಬಿದ್ದು ಸುದ್ದಿ ಬರೆಯುವುದು ಮತ್ತು ಪ್ರಕಟಿಸುವುದಕ್ಕೆ ‘ಪೇಯ್ಡ್‌ ನ್ಯೂಸ್‌’ ಎಂಬ ವ್ಯಾಖ್ಯಾನವಿದೆ. ಎಲ್ಲ ಕಾಲದಲ್ಲೂ ಅಸ್ತಿತ್ವದಲ್ಲಿರುವ ಪೇಯ್ಡ್‌ ನ್ಯೂಸ್‌ ಪಿಡುಗು ಚುನಾವಣೆಯ ಸಂದರ್ಭದಲ್ಲಿ ವ್ಯಾಪಕವಾಗುತ್ತಿದೆ. ಮಾಧ್ಯಮ ವಲಯದಲ್ಲಿ ಸ್ಪರ್ಧೆ ಹೆಚ್ಚಾಗಿರುವುದು ಮತ್ತು ನವ ಮಾಧ್ಯಮಗಳು ಮುನ್ನೆಲೆಗೆ ಬಂದಿರುವುದರಿಂದ ಜಾಹೀರಾತು ಸೇರಿದಂತೆ ಮಾಧ್ಯಮಗಳಿಗೆ ಬರುವ ಆದಾಯದಲ್ಲಿ ಗಣನೀಯ ಕುಸಿತವಾಗಿದೆ. ಆದ್ದರಿಂದ ಚುನಾವಣೆಗಳನ್ನು ಗುರಿಯಾಗಿಸಿಕೊಂಡು, ಪತ್ರಿಕಾ ಧರ್ಮಕ್ಕೆ ತಿಲಾಂಜಲಿ ಇಟ್ಟು ಅಭ್ಯರ್ಥಿ ಅಥವಾ ಪಕ್ಷದ ಪರವಾಗಿ ಸುದ್ದಿಗಳನ್ನು ಪ್ರಕಟಿಸುವ ಮೂಲಕ ಹಣ ಮಾಡುವ ಕೆಲಸವನ್ನು ಹಲವು ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳು ಮಾಡುತ್ತಿವೆ. ಈ ಮೂಲಕ ತಮ್ಮ ವಿಶ್ವಾಸಾರ್ಹತೆ ಕಳೆದುಕೊಂಡು, ಓದುಗರು ಮತ್ತು ಪ್ರೇಕ್ಷಕರಿಗೆ ವಂಚಿಸುತ್ತವೆ. ಇದರಿಂದ ಮಾಧ್ಯಮಗಳಿಗಷ್ಟೆ ಅಲ್ಲದೇ ಹಣಬಲವಿಲ್ಲದ ಪ್ರಾಮಾಣಿಕ ಅಭ್ಯರ್ಥಿಗೂ ಹೊಡೆತ ಬೀಳುತ್ತದೆ. ಪೇಯ್ಡ್‌ ನ್ಯೂಸ್‌ ಜಾಲವು ಅತ್ಯಂತ ವ್ಯವಸ್ಥಿತವಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚುವುದು ಕಷ್ಟಸಾಧ್ಯ.

ಪ್ರಜಾತಂತ್ರದ ಆಶೋತ್ತರಗಳಿಗೆ ವಿರುದ್ಧವಾದ ಪೇಯ್ಡ್‌ ನ್ಯೂಸ್‌ ಬಗ್ಗೆ ೨೦೦೯ರ ಲೋಕಸಭಾ ಚುನಾವಣೆ ಹಾಗೂ ಆನಂತರ ನಡೆದಿದ್ದ ಮಹಾರಾಷ್ಟ್ರ, ಬಿಹಾರ, ಹರಿಯಾಣ, ಆಂಧ್ರಪ್ರದೇಶ ಮತ್ತು ಪಂಜಾಬ್‌ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚರ್ಚೆ ಆರಂಭವಾಗಿತ್ತು. ಹಣ, ಆಸ್ತಿ ಮತ್ತಿತರ ರೂಪದಲ್ಲಿ ಲಂಚ ಪಡೆದು ಸುದ್ದಿ ಪ್ರಕಟಿಸಲಾಗಿದೆ ಎಂದು ಹಲವು ಪತ್ರಕರ್ತರು, ಪತ್ರಕರ್ತರ ಒಕ್ಕೂಟ ಹಾಗೂ ಸರ್ಕಾರೇತರ ಸಂಸ್ಥೆಗಳು ಬಹಿರಂಗವಾಗಿ ಮಾಧ್ಯಮದಲ್ಲಿನ ಅನೈತಿಕ ಬೆಳವಣಿಗೆಯ ಬಗ್ಗೆ ಬೆಳಕು ಚೆಲ್ಲಿದ್ದವು. ಸಮಸ್ಯೆಯ ಗಂಭೀರತೆ ಅರಿತ ಭಾರತೀಯ ಪತ್ರಿಕಾ ಮಂಡಳಿಯು (ಪಿಸಿಐ) ೨೦೧೦ರಲ್ಲಿ ಹಿರಿಯ ಪತ್ರಕರ್ತ ಪರಂಜೊಯ್ ಗುಹಾ‌ ಥಾಕುರ್ತ ಮತ್ತು ಕೆ ಶ್ರೀನಿವಾಸ ರೆಡ್ಡಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತು. ಈ ಸಮಿತಿಯು ಮಾಧ್ಯಮದಲ್ಲಿನ ಭ್ರಷ್ಟಾಚಾರ, ಹಿತಾಸಕ್ತಿ ಸಂಘರ್ಷ, ನೈತಿಕತೆಯ ಅಧಃಪತನ ಸೇರಿದಂತೆ ಮಾಧ್ಯಮಗಳ ವಿಶ್ವಾಸಾರ್ಹತೆ ನಾಶ ಮಾಡುತ್ತಿರುವ ಹಲವು ವಿಚಾರಗಳು ಮತ್ತು ಅವುಗಳಿಗೆ ಕೈಗೊಳ್ಳಬೇಕಾದ ಕ್ರಮ, ಸಲಹೆಗಳನ್ನೊಳಗೊಂಡ ‘ಪೇಯ್ಡ್‌ ನ್ಯೂಸ್‌: ಭಾರತೀಯ ಮಾಧ್ಯಮಗಳಿಂದ ಪ್ರಜಾಪ್ರಭುತ್ವದ ಉಪೇಕ್ಷೆ’ ಎಂಬ ಹೆಸರಿನಲ್ಲಿ ಸುದೀರ್ಘ ವರದಿಯನ್ನು ಪಿಸಿಐಗೆ ಸಲ್ಲಿಸಿತ್ತು. ಆದರೆ, ಪ್ರಭಾವಿ ಮಾಧ್ಯಮ ಸಂಸ್ಥೆಗಳ ಒತ್ತಡಕ್ಕೆ ಮಣಿದ ಪಿಸಿಐ, ವರದಿಯನ್ನು ನೇಪಥ್ಯಕ್ಕೆ ಸರಿಸಿತ್ತು. ಕಡೆಗೆ ವರದಿಯು ಆನ್‌ಲೈನ್‌ನಲ್ಲಿ ಸೋರಿಕೆಯಾಗಿ ಮಾಧ್ಯಮಗಳ ದುರ್ನಡತೆ ಅನಾವರಣಗೊಂಡಿತ್ತು.

ಮಾಧ್ಯಮದಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಂಸದೀಯ ಸಮಿತಿಯು ಕೆಲವು ಮಾಧ್ಯಮಗಳು ಸಂಸ್ಥೆಯ ಉಳಿವಿನ ನೆಪದಲ್ಲಿ ಅಕ್ರಮದಲ್ಲಿ ತೊಡಗಿರುವುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿತ್ತು. ಈ ವರದಿಯಲ್ಲಿಯೂ ಪೇಯ್ಡ್‌ ನ್ಯೂಸ್‌ ಬಗ್ಗೆ ವಿವರವಾಗಿ ಚರ್ಚಿಸಲಾಗಿತ್ತು. ಅದರಲ್ಲಿ ೧೨೬ ಪೇಯ್ಡ್‌ ನ್ಯೂಸ್‌ ಪ್ರಕರಣ ಖಚಿತವಾಗಿದ್ದು, ಈ ಪೈಕಿ ೨೦೧೨ರ ಗುಜರಾತ್ ವಿಧಾನಸಭಾ ಚುನಾವಣೆ ಒಂದರಲ್ಲೇ ೬೧ ಅಭ್ಯರ್ಥಿಗಳು ಸಕಾರಾತ್ಮಕ ವರದಿಗಾಗಿ ಹಣ ನೀಡಿದ್ದಾಗಿ ಬಹಿರಂಗವಾಗಿ ಒಪ್ಪಿಕೊಂಡಿದ್ದು ಇಲ್ಲಿ ಉಲ್ಲೇಖನೀಯ. ಆನಂತರ ಚುನಾವಣಾ ಆಯೋಗವು ಮಾಧ್ಯಮ ಪ್ರಮಾಣೀಕೃತ ಮತ್ತು ನಿಗಾ ಸಮಿತಿ (ಎಂಸಿಎಂಸಿ) ರಚಿಸುತ್ತಿದೆ.

“ಪೇಯ್ಡ್‌ ನ್ಯೂಸ್‌ ಪಿಡುಗನ್ನು ನಿಯಂತ್ರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಇದಕ್ಕೆ ಪ್ರಮುಖ ಕಾರಣ ಸಂಪನ್ಮೂಲದ ಕೊರತೆ. ಪೇಯ್ಡ್‌ ನ್ಯೂಸ್ ಪ್ರಕರಣ ರುಜುವಾತಾದರೆ ಕ್ರಮಕೈಗೊಳ್ಳುವ ಅಧಿಕಾರವನ್ನು ಆಯೋಗಕ್ಕೆ ನೀಡಬೇಕು. ಆದರೆ, ಈ ಕುರಿತು ಸಂಸತ್‌ನಲ್ಲಿ ಯಾವುದೇ ಬೆಳವಣಿಗೆ ಆಗಿಲ್ಲ. ಆಯೋಗವು ಮಾಧ್ಯಮಗಳಿಗೆ ಅಂಕುಶ ಹಾಕುವ ಬದಲಿಗೆ ಅವುಗಳೇ ಸ್ವನಿಯಂತ್ರಣ ಹಾಕಿಕೊಳ್ಳಬೇಕು,” ಎಂದು ಈಚೆಗೆ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓಂಪ್ರಕಾಶ್‌ ರಾವತ್‌ ಹೇಳಿದ್ದರು.

ಇದನ್ನೂ ಓದಿ : ಮಾಧ್ಯಮಗಳ ಮಾನ ಹರಾಜು ಹಾಕುತ್ತಿದೆ ‘ಕಾಸಿಗಾಗಿ ಸುದ್ದಿ’ ಎಂಬ ಪಿಡುಗು

ಇದೆಲ್ಲದರ ಮಧ್ಯೆ, ಕಳೆದ ವರ್ಷದ ಜುಲೈನಲ್ಲಿ ಬಿಜೆಪಿ ಶಾಸಕ, ಮಧ್ಯಪ್ರದೇಶದ ಜಲಸಂಪನ್ಮೂಲ ಸಚಿವ ನರೋತ್ತಮ್‌ ಮಿಶ್ರಾ ಅವರನ್ನು ಚುನಾವಣಾ ಆಯೋಗವು ಪೇಯ್ಡ್‌ ನ್ಯೂಸ್‌ ಪ್ರಕರಣದಲ್ಲಿ ಮೂರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಿತ್ತು. ಹಿಂದಿ ಪತ್ರಿಕೆಯಾದ ದೈನಿಕ್‌ ಭಾಸ್ಕರ್, ನೈ ದುನಿಯಾ, ದೈನಿಕ್‌ ದಾತಿಯಾ ಪ್ರಕಾಶ್, ಬಿಪಿಎನ್‌ ಟೈಮ್ಸ್‌, ಅಚ್ರನ್‌ ಗ್ವಾಲಿಯರ್‌ನಂಥ ಸ್ಥಳೀಯ ಪತ್ರಿಕೆಗಳಲ್ಲಿ ಮಿಶ್ರಾ ಅವರ ಪರವಾಗಿ ೨೦೦೮ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ೪೨ಕ್ಕೂ ಹೆಚ್ಚು ಸುದ್ದಿ ಪ್ರಕಟಗೊಂಡಿದ್ದವು. ಇವುಗಳಿಗೆ ವೆಚ್ಚ ಮಾಡಲಾದ ಹಣವನ್ನು ಅವರು ಚುನಾವಣಾ ವೆಚ್ಚದಲ್ಲಿ ಸೇರಿಸಿರಲಿಲ್ಲ. ಇದನ್ನು ಆಧಾರವಾಗಿಟ್ಟುಕೊಂಡು, ಪ್ರಜಾಪ್ರತಿನಿಧಿ ಕಾಯ್ದೆಯಡಿ ಚುನಾವಣಾ ಅಕ್ರಮವನ್ನು ಉಲ್ಲೇಖಿಸಿ ಮಿಶ್ರಾ ಅವರನ್ನು ಅನರ್ಹಗೊಳಿಸಲಾಗಿತ್ತು.

ಇದರಿಂದಾಗಿ ಮಿಶ್ರಾ ಕಳೆದ ವರ್ಷ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿಯೂ ಮತದಾನ ಮಾಡಲಾಗಲಿಲ್ಲ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ನಾಯಕ ಅಶೋಕ್‌ ಚೌಹಾಣ್ ವಿರುದ್ಧವೂ ಪೇಯ್ಡ್‌ ನ್ಯೂಸ್‌ ಪ್ರಕರಣ ದಾಖಲಾಗಿತ್ತು. ಸಾಕ್ಷ್ಯಾಧಾರದ ನೆಪವೊಡ್ಡಿ ದೆಹಲಿ ಹೈಕೋರ್ಟ್‌ ೨೦೧೪ರಲ್ಲಿ ಅವರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದ್ದನ್ನು ಇಲ್ಲಿ ನೆನೆಯಬಹುದು.

ಮುಂದುವರಿಯುವುದು…

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More