ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೊಚ್ಚಾರ್‌ ಭವಿಷ್ಯ ನಿರ್ಧರಿಸಲಿದೆಯೇ ಆರ್‌ಬಿಐ?

ಆಕ್ಸಿಸ್ ಬ್ಯಾಂಕ್ ಸಿಇಒ ಶಿಖಾ ಶರ್ಮಾ ಅವರನ್ನು ನಾಲ್ಕನೇ ಅವಧಿಗೆ ಸಿಇಒ ಆಗಿ ನೇಮಕ ಮಾಡುವ ನಿರ್ಧಾರ ಪರಿಶೀಲಿಸುವಂತೆ ಆಡಳಿತ ಮಂಡಳಿಗೆ ಆರ್‌ಬಿಐ ಸೂಚಿಸಿತ್ತು. ಹಿತಾಸಕ್ತಿ ಸಂಘರ್ಷ ಎದುರಿಸುತ್ತಿರುವ ಚಂದಾ ಕೊಚ್ಚಾರ್ ವಿಚಾರದಲ್ಲೂ ಮಧ್ಯಪ್ರವೇಶಿಸಲಿದೆಯೇ ಆರ್‌ಬಿಐ?

ವೇಣುಗೋಪಾಲ್ ದೂತ್ ಒಡೆತನದ ವಿಡಿಯೋಕಾನ್ ಸಂಸ್ಥೆಗೆ 3250 ಕೋಟಿ ರುಪಾಯಿ ಸಾಲ ನೀಡಿರುವ ಪ್ರಕರಣದಲ್ಲಿ ಸ್ವಜನ ಪಕ್ಷಪಾತ ಮತ್ತು ಹಿತಾಸಕ್ತಿ ಸಂಘರ್ಷ ಆರೋಪ ಎದುರಿಸುತ್ತಿರುವ ಚಂದಾ ಕೊಚ್ಚಾರ್ ವಿಚಾರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯ ಪ್ರವೇಶಿಸುವ ನಿರೀಕ್ಷೆ ಇದೆ. ಚಂದಾಕೊಚ್ಚಾರ್ ಅವರಿಗೆ ಹುದ್ದೆ ತೊರೆಯುವಂತೆ ಸೂಚಿಸಬಹುದು ಅಥವಾ ಇಡೀ ಪ್ರಕರಣದ ಬಗ್ಗೆ ಸ್ವತಂತ್ರ ತನಿಖೆಗೆ ಸೂಚಿಸಬಹುದು. ಅಥವಾ ಆರ್‌ಬಿಐ ತಾನೇ ಖುದ್ದು ತನಿಖೆ ನಡೆಸಬಹುದು. ಆದರೆ, ಆರ್‌ಬಿಐ ಇದುವರೆಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ.

ಐಸಿಐಸಿಐ ಬ್ಯಾಂಕ್ ಆಡಳಿತ ಮಂಡಳಿ ಚಂದಾ ಕೊಚ್ಚಾರ್ ಅವರ ಬೆಂಬಲಕ್ಕೆ ನಿಂತಿದ್ದು, ತನ್ನ ಪೂರ್ಣ ವಿಶ್ವಾಸವನ್ನು ವ್ಯಕ್ತಪಡಿಸಿದೆ. ಸಂಸ್ಥೆಯೊಂದರ ಸಿಇಒಗೆ ಆಡಳಿತ ಮಂಡಳಿ ಇಂತಹ ಸಂದರ್ಭಗಳಲ್ಲಿ ವಿಶ್ವಾಸ ವ್ಯಕ್ತಪಡಿಸಿ ಬೆಂಬಲಕ್ಕೆ ನಿಲ್ಲುವುದು ಸಹಜ. ಆದರೆ, ಸಾರ್ಜವನಿಕವಾಗಿ ಒತ್ತಡ ಹೆಚ್ಚುತ್ತಿದ್ದರೂ ಐಸಿಐಸಿಐ ಬ್ಯಾಂಕ್ ಆಡಳಿತ ಮಂಡಳಿಯು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆಗೆ ಒಪ್ಪುತ್ತಿಲ್ಲ. ಹೀಗಾಗಿ ಆಡಳಿತ ಮಂಡಳಿಯ ನಡೆ ಅನುಮಾನಕ್ಕೆ ಎಡೆ ಮಾಡಿದೆ.

ಸ್ವತಂತ್ರ ತನಿಖೆಗೆ ಒಪ್ಪದ ಆಡಳಿತ ಮಂಡಳಿಯ ಬಗ್ಗೆ ಕೆಲ ಸ್ವತಂತ್ರ ನಿರ್ದೇಶಕರಿಗೂ ಅಸಮಾಧಾನ ಇದೆ ಎಂಬುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸಮಾನ ಮನಸ್ಕ ಸ್ವತಂತ್ರ ನಿರ್ದೇಶಕರು ಈ ಪ್ರಕರಣದ ಬಗ್ಗೆ ಸಂಪರ್ಕದಲ್ಲಿ ಇದ್ದು, ಪರಸ್ಪರ ಮಾತುಕತೆ ನಡೆಸುತ್ತಿದ್ದಾರೆ. ಆದರೆ, ಬ್ಯಾಂಕುಗಳನ್ನು ನಿಯಂತ್ರಿಸುವ ಅಧಿಕಾರ ಇರುವ ಭಾರತೀಯ ರಿಸರ್ವ್ ಬ್ಯಾಂಕ್ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಎಂಬ ನಿರೀಕ್ಷೆಯಲ್ಲಿದ್ದಾರೆ.

ಆಕ್ಸಿಸ್ ಬ್ಯಾಂಕ್ ಪ್ರಕರಣದಲ್ಲಿ ಆರ್‌ಬಿಐ ಮಧ್ಯ ಪ್ರವೇಶಿಸಿದಂತೆ ಐಸಿಐಸಿಐ ಬ್ಯಾಂಕ್ ಪ್ರಕರಣದಲ್ಲೂ ಮಧ್ಯೆ ಪ್ರವೇಶಿಸಬೇಕು ಎಂಬ ನಿರೀಕ್ಷೆ ಕೆಲ ಸ್ವತಂತ್ರ ನಿರ್ದೇಶಕರದ್ದಷ್ಟೇ ಅಲ್ಲ, ಐಸಿಐಸಿಐ ಬ್ಯಾಂಕಿನಲ್ಲಿ ಹೂಡಿಕೆ ಮಾಡಿರುವ ಹಲವರದ್ದೂ ಆಗಿದೆ. ಆದಷ್ಟು ತ್ವರಿತವಾಗಿ ಆರ್‌ಬಿಐ ಮಧ್ಯಪ್ರವೇಶಿಸಿ, ಎದ್ದಿರುವ ವಿವಾದಕ್ಕೆ ಒಂದು ತಾರ್ಕಿಕ ಅಂತ್ಯಹಾಡಬೇಕೆಂದು ಬಯಸಿದ್ದಾರೆ.

ಆಕ್ಸಿಸ್ ಬ್ಯಾಂಕ್ ನಿರೀಕ್ಷೆ ಮೀರಿ ನಿಷ್ಕ್ರಿಯ ಸಾಲದ ಪ್ರಮಾಣ ಹೆಚ್ಚಳವಾಗಿದ್ದರಿಂದಾಗಿ ಸಿಇಒ ಶಿಖಾ ಶರ್ಮಾ ಅವರಿಗೆ ನಾಲ್ಕನೇ ಅವಧಿಗೆ ಮುಂದುವರೆಸುವ ಆಡಳಿತ ಮಂಡಳಿ ನಿರ್ಧಾರದ ಬಗ್ಗೆ ಆರ್‌ಬಿಐ ಆಕ್ಷೇಪಿಸಿತ್ತು. ನಾಲ್ಕನೇ ಅವಧಿಗೆ ಮುಂದುವರೆಸುವ ಕುರಿತ ನಿರ್ಧಾರವನ್ನು ಮರುಪರಿಶೀಲಿಸುವಂತೆ ಆಡಳಿತ ಮಂಡಳಿಗೆ ಸೂಚಿಸಿತ್ತು. ಈ ನಡುವೆ ಸಿಇಒ ಶಿಖಾ ಶರ್ಮಾ ಅವರೇ ತಮ್ಮ ನಾಲ್ಕನೇ ಅವಧಿಯನ್ನು 2108 ಡಿಸೆಂಬರ್ ಮೊಟಕುಗೊಳಿಸುವಂತೆ ಮನವಿ ಮಾಡಿದ್ದರು. ಅದಕ್ಕೆ ಆಡಳಿತ ಮಂಡಳಿಯೂ ಒಪ್ಪಿತು. ಶಿಖಾ ಅವರೇ ಬೇಗ ಹುದ್ದೆ ತೊರೆಯುವ ನಿರ್ಧಾರ ಮಾಡಿದ್ದರಿಂದ ಬ್ಯಾಂಕಿನ ಆಡಳಿತ ಮಂಡಳಿಗೆ ಆಗಬಹುದಾದ ಮುಜುಗರ ತಪ್ಪಿಸಿದರು.

ಇದೆಲ್ಲವೂ ಆರ್‌ಬಿಐ ಸೂಚನೆ ನೀಡಿದ ನಂತರ ನಡೆದ ಪ್ರಕ್ರಿಯೆಗಳು. ಈಗ ಐಸಿಐಸಿಐ ಬ್ಯಾಂಕಿನಲ್ಲಿ ಸಿಇಒ ಚಂದಾ ಕೊಚ್ಚಾರ್ ಅವರು ವಿಡಿಯೋಕಾನ್ ಸಂಸ್ಥೆಗೆ 3250 ಕೋಟಿ ರುಪಾಯಿ ಸಾಲ ನೀಡಿದ್ದು ಮತ್ತು ಈ ಪೈಕಿ 2850 ಕೋಟಿ ರುಪಾಯಿಗಳನ್ನು ನಿಷ್ಕ್ರಿಯ ಸಾಲ ಎಂದು ಘೋಷಿಸಿದ್ದು ಸ್ವಜನ ಪಕ್ಷಪಾತ ಮತ್ತು ಹಿತಾಸಕ್ತಿ ಸಂಘರ್ಷದ ಆರೋಪಕ್ಕೆ ಕಾರಣವಾಗಿದೆ. ವಿಡಿಯೋಕಾನ್ ಸಂಸ್ಥೆಯು ಚಂದಾ ಕೊಚ್ಚಾರ್ ಪತಿ ದೀಪಕ್ ಕೊಚ್ಚಾರ್ ಒಡೆತನದ ನ್ಯುಪವರ್ ಗೆ 64 ಕೋಟಿ ಸಾಲ ನೀಡಿದ್ದಾರೆ. ವಿವಿಧ ಹಂತದಲ್ಲಿ ಪಾಲುದಾರಿಕೆ ವರ್ಗಾವಣೆ ಮಾಡಿ ಅಂತಿಮವಾಗಿ 64 ಕೋಟಿ ರುಪಾಯಿ ಮೊತ್ತದ ಪಾಲುದಾರಿಯನ್ನು ದೀಪಕ್ ಕೊಚ್ಚಾರ್ ಮ್ಯಾನೆಜಿಂಗ್ ಟ್ರಸ್ಟಿ ಆಗಿರುವ ಸಂಸ್ಥೆಯೊಂದಕ್ಕೆ ಕೇವಲ 9 ಲಕ್ಷ ರುಪಾಯಿಗೆ ವರ್ಗಾಹಿಸಲಾಗಿದೆ. ಅದಾದ ಕೆಲವು ತಿಂಗಳ ನಂತರ ವಿಡಿಯೋಕಾನ್ ಸಂಸ್ಥೆಯ 2850 ಕೋಟಿ ರುಪಾಯಿ ಸಾಲವನ್ನು ನಿಷ್ಕ್ರಿಯ ಸಾಲ ಎಂದು ಘೋಷಿಸಲಾಗಿದೆ.

ಈ ವಹಿವಾಟುಗಳು ಅನುಮಾನಾಸ್ಪದವಾಗಿವೆ. ಮೇಲ್ನೋಟಕ್ಕೆ ಸ್ವಜನ ಪಕ್ಷಪಾತ ಮತ್ತು ಹಿತಾಸಕ್ತಿ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿರುವುದು ಕಾಣುತ್ತದೆ. ಆದ್ದರಿಂದ ಈ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂಬ ಒತ್ತಡ ಹೆಚ್ಚುತ್ತಿದೆ. ಆದರೆ, ಐಸಿಐಸಿಐ ಬ್ಯಾಂಕ್ ಆಡಳಿತ ಮಂಡಳಿಯು ಸ್ವತಂತ್ರ ತನಿಖೆಗೆ ಒಪ್ಪಿಲ್ಲ. ಅಲ್ಲದೇ ಇಡೀ ಪ್ರಕರಣದಲ್ಲಿ ಯಾವುದೇ ಸ್ವಜನಪಕ್ಷವಾತ ಅಥವಾ ಹಿತಾಸಕ್ತಿ ಸಂಘರ್ಷ ಇಲ್ಲ ಎಂದು ಹೇಳಿದೆ. ಬ್ಯಾಂಕ್ ಆಡಳಿತ ಮಂಡಳಿ ಸ್ವತಂತ್ರ ತನಿಖೆಗೆ ಹಿಂದೇಟು ಹಾಕುತ್ತಿರುವುದು ಬ್ಯಾಂಕ್ ಆಡಳಿತ ಮಂಡಳಿಯಲ್ಲಿರುವ ಸ್ವತಂತ್ರ ನಿರ್ದೇಶಕರಲ್ಲಿ, ಹೂಡಿಕೆದಾರಲ್ಲಿ ಅನುಮಾನ ಹುಟ್ಟಿಸಿದೆ. ಅಲ್ಲದೇ ಈ ಪ್ರಕರಣ ಹೊರಬಿದ್ದ ನಂತರ ಬ್ಯಾಂಕ್ ಷೇರು ಕುಸಿದು ಮಾರುಕಟ್ಟೆ ಬಂಡವಾಳವು ತಗ್ಗಿದೆ. ಆರ್ಬಿಐ ಮಧ್ಯ ಪ್ರವೇಶಿಸಬಹುದು ಎಂಬ ನಿರೀಕ್ಷೆಯಲ್ಲಿ ಸತತ ಕುಸಿದಿದ್ದ ಷೇರು ಕೊಂಚ ಚೇತರಿಸಿಕೊಂಡಿದೆ.

ಇದನ್ನೂ ಓದಿ : ಹಿತಾಸಕ್ತಿ ಸಂಘರ್ಷದ ಸಂಕೋಲೆಯಲ್ಲಿ ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೊಚ್ಚಾರ್

ಆರ್‌ಬಿಐ ಏಕಾಏಕಿ ಯಾವುದೇ ನಿರ್ಧಾರವನ್ನೂ ಕೈಗೊಳ್ಳುವುದು ಸಾಧ್ಯವಿಲ್ಲ. ಹೀಗಾಗಿ ಇಡೀ ಪ್ರಕರಣದಲ್ಲಿ ನಡೆದಿರುವ ವಹಿವಾಟಿನ ಬಗ್ಗೆ ತೆರಿಗೆ ಕಾನೂನು ತಜ್ಞರು ಮತ್ತು ಲೆಕ್ಕಪರಿಶೋಧಕರಿಂದ ವಿಸ್ತೃತ ಮಾಹಿತಿ ಪಡೆದ ನಂತರವಷ್ಟೇ ತನ್ನ ನಿಲವು ಪ್ರಕಟಿಸಲಿದೆ. ಅಷ್ಟರೊಳಗೆ ಖುದ್ದಾಗಿ ಚಂದಾ ಕೊಚ್ಚಾರ್ ಅವರೇ ಹುದ್ದೆ ತೊರೆದರೂ ಅಚ್ಚರಿ ಇಲ್ಲ. ಏಕೆಂದರೆ ಆರಂಭದಲ್ಲಿ ಚಂದಾ ಕೊಚ್ಚಾರ್ ಅವರ ಬೆಂಬಲಕ್ಕೆ ನಿಂತು ಸ್ವತಂತ್ರ ತನಿಖೆ ನಡೆಸದಿರುವ ನಿರ್ಧಾರ ಪ್ರಕಟಿಸಿದ ಆಡಳಿತ ಮಂಡಳಿಯೂ ಈಗ ಮುಜುಗರ ಎದುರಿಸುತ್ತಿದೆ.

ಫಿಚ್ಚ್ ರೇಟಿಂಗ್ ಏಜೆನ್ಸಿ, ಸ್ವಜನಪಕ್ಷಪಾತ ಮತ್ತು ಹಿತಾಸಕ್ತಿ ಸಂಘರ್ಷದ ಆರೋಪದ ಹಿನ್ನೆಲೆಯಲ್ಲಿ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿರುವುದರಿಂದ ಬ್ಯಾಂಕಿನ ವರ್ಚಸ್ಸಿಗೆ ಧಕ್ಕೆಯಾಗಿದೆ, ಇದು ಬರುವ ದಿನಗಳಲ್ಲಿ ಬ್ಯಾಂಕಿನ ವಹಿವಾಟು ಮತ್ತು ಫಲಿತಾಂಶದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ತಿಳಿಸಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More