ಕಾವೇರಿ ವಿವಾದದ ಅಗ್ನಿಪರೀಕ್ಷೆಯಲ್ಲಿ ಕೇಂದ್ರದ ‘ಚುನಾವಣಾ ಸ್ಕೀಂ’ ಏನಿದ್ದೀತು?

ಕಾವೇರಿ ನದಿ ವ್ಯಾಜ್ಯ ವಿಷಯದಲ್ಲಿ ಬಹುತೇಕ ಮುಗುಮ್ಮಾಗಿದ್ದ ಕೇಂದ್ರ ಸರ್ಕಾರದ ಪಾಲಿಗೆ ಸುಪ್ರೀಂ ಕೋರ್ಟ್ ನೀಡಿರುವ ತಪರಾಕಿ ಮತ್ತು ಮೇ ೩ರೊಳಗೆ ‘ಸ್ಕೀಂ’ ರಚನೆ ಸಂಬಂಧ ಕರಡು ಸಲ್ಲಿಸಲೇಬೇಕೆಂದು ನೀಡಿರುವ ಗಡುವು ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹಾಗಾದರೆ ಮುಂದೇನಾಗಲಿದೆ?

ಕಾವೇರಿ ನದಿ ವ್ಯಾಜ್ಯ ವಿಷಯದಲ್ಲಿ ಬಹುತೇಕ ಮುಗುಮ್ಮಾಗಿದ್ದ ಕೇಂದ್ರ ಸರ್ಕಾರದ ಪಾಲಿಗೆ ಸುಪ್ರೀಂಕೋರ್ಟ್ ನೀಡಿರುವ ತಪರಾಕಿ ಮತ್ತು ಮೇ ೩ರೊಳಗೆ ‘ಸ್ಕೀಂ’ ರಚನೆ ಸಂಬಂಧ ಕರಡು ಸಲ್ಲಿಸಲೇಬೇಕೆಂದು ನೀಡಿರುವ ಗಡುವು ಬಿಸಿ ತುಪ್ಪವಾಗಿ ಪರಿಣಮಿಸಿದೆ.

ನಾನಾ ಕಾರಣಕ್ಕೆ ರಾಜಕೀಯ ಅಸ್ಥಿರತೆ ಎದುರಿಸುತ್ತಿರುವ ತಮಿಳುನಾಡಿನಲ್ಲಿ ಅಲ್ಲಿನ ಆಡಳಿತ ಪಕ್ಷ, ಪ್ರತಿಪಕ್ಷ ಮತ್ತು ಈಗ ನೆಲೆಗೊಳ್ಳಲು ಹವಣಿಸುತ್ತಿರುವ ಹೊಸ ಪಕ್ಷಗಳಿಗೆ ಕಾವೇರಿ ವಿವಾದ ವರವಾಗಿ,ರಾಜಕೀಯ ಅಸ್ತ್ರವಾಗಿ ಲಭಿಸಿದಂತಿದೆ. “ಬಿಸಿ ಇದ್ದಾಗಲೇ ಕಬ್ಬಿಣವನ್ನು ಬಡಿದು ಬಗ್ಗಿಸಿಕೊಳ್ಳಬೇಕು,’’ ಎನ್ನುವ ಮಾತಿಗೆ ಅನ್ವರ್ಥ ಎನ್ನುವಂತೆ ಅಲ್ಲಿನ ರಾಜಕಾರಣಿಗಳು ನಡೆದುಕೊಳ್ಳುತ್ತಿದ್ದಾರೆ.

ಇತ್ತ, ಕರ್ನಾಟಕದಲ್ಲಿ ಚುನಾವಣೆ ಕಾವು ಏರುತ್ತಿರುವ ಹೊತ್ತಿನಲ್ಲಿ ಕಾವೇರಿ ವಿವಾದದ ಲಾಭ-ನಷ್ಟದ ಲೆಕ್ಕಾಚಾರಗಳು ನಡೆಯುತ್ತಿವೆಯಾದರೂ, ಬಹಿರಂಗ ಸಮರಕ್ಕೆ ಯಾರೂ ಈ ವಿಷಯವನ್ನು ಆಯ್ದುಕೊಂಡಂತಿಲ್ಲ. ತಮಿಳು ನಾಡಿನ ಹಠಮಾರಿ ಧೋರಣೆ, ಸುಪ್ರೀಂ ಕೋರ್ಟ್ ತೀರ್ಮಾನ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಡೆ ಈ ಎಲ್ಲವನ್ನೂ ನೋಡಿಕೊಂಡು ಎಚ್ಚರಿಕೆಯ ದಾಳ ಉರುಳಿಸಲು ಕಾಂಗ್ರೆಸ್,ಜೆಡಿಎಸ್ ಧುರೀಣರು ಕಾಯುತ್ತಿರುವಂತಿದೆ. ಈಗಾಗಲೇ ಮಹಾದಾಯಿ ವಿವಾದ, ಲಿಂಗಾಯಿತ ಧರ್ಮ ಸಂಕಟದ ವಿಷಯದಲ್ಲಿ ಹೊಡೆತ ಅನುಭವಿಸಿರುವ ಬಿಜೆಪಿ,ಈಗ ‘ಕಾವೇರಿ ಕಾವು’ ಅಪ್ಪಳಿಸಬಹುದೇ ಎನ್ನುವ ಆತಂಕಕ್ಕೆ ಬಿದ್ದಂತೆ ತೋರುತ್ತಿದೆ.

ಮುಂದಿನ ಆರು ವಾರಗಳ ಒಳಗೆ ನೀರು ಹಂಚಿಕೆ ಸ್ಕೀಂ ಸಿದ್ಧಪಡಿಸುವಂತೆ ಸುಪ್ರೀಂಕೋರ್ಟ್ ಫೆ.೧೬ರಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ಆದರೆ, ಮಾ.೨೯ರ ಆ ಗಡುವಿನೊಳಗೆ ಕೇಂದ್ರ ಸರ್ಕಾರ ಯಾವುದೇ ನಿಲುವು ತಳೆಯಲಿಲ್ಲ. ಸುಪ್ರೀಂಕೋರ್ಟ್ ಆದೇಶ ಪಾಲಿಸದ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತು. ಮಾತ್ರವಲ್ಲ, ‘ಸ್ಕೀಂ’ ಎಂದರೆ ‘ನೀರು ನಿರ್ವಹಣಾ ಮಂಡಳಿ,’ಎಂದು ಋಜುವಾತು ಪಡಿಸಲು ಪ್ರಯತ್ನಿಸಿತು. ಧರಣಿ ಸತ್ಯಾಗ್ರಹ, ಪ್ರತಿಭಟನೆ, ತಮಿಳುನಾಡು ಬಂದ್ ಮೂಲಕ ಒತ್ತಡ ಹೇರುವ ತಂತ್ರವನ್ನೂ ಅನುಸಿರಿಸಿತು. ಆದರೆ, ನೀರು ನಿರ್ವಹಣಾ ಮಂಡಳಿ ರಚನೆಗೆ ಕರ್ನಾಟಕ ಸರ್ಕಾರ ಆಕ್ಷೇಪ ವ್ಯಕ್ತಪಡಿಸುತ್ತಲೇ ಇದೆ. ಕಾವೇರಿ ಕಣಿವೆ ಪ್ರದೇಶದ ಎಲ್ಲ ಜಲಾಶಯಗಳನ್ನು ನಿರ್ವಹಣಾ ಮಂಡಳಿಗಿ ವ್ಯಾಪ್ತಿಗೆ ತರುವುದು ಕರ್ನಾಟಕಕ್ಕೆ ಒಪ್ಪಿಗೆ ಇಲ್ಲ, ಜೊತೆಗೆ ಕಾವೇರಿಯಲ್ಲಿ ನೀರಿನ ಲಭ್ಯತೆಯೇ ಇಲ್ಲದ ಸಂದರ್ಭದಲ್ಲಿ ಏನುಮಾಡಬೇಕೆಂಬ ಸಂಕಷ್ಟ ಸೂತ್ರದ ಸ್ಪಷ್ಟತೆ ಇಲ್ಲದೆ ಮಂಡಳಿ ರಚಿಸಿ ಪ್ರಯೋಜನವಿಲ್ಲ ಎನ್ನುವುದು ರಾಜ್ಯದ ವಾದ.

ಈ ಮಧ್ಯೆ, ಸ್ಕೀಂ ಎಂದರೆ ಏನೆನ್ನುವುದನ್ನು ಸ್ಪಷ್ಟಪಡಿಸುವಂತೆ ಮತ್ತು “ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲಿ ಈ ವಿಷಯದಲ್ಲಿ ಯಾವುದೇ ನಿರ್ಧಾರ ತಳೆದರೆ ಕಾನೂನು ಸುವ್ಯವಸ್ಥೆಗೆ ತೊಂದರೆ ಆಗಬಹುದು. ಆದ್ದರಿಂದ ಸ್ಕೀಂ ರಚನೆಗೆ ೩ ತಿಂಗಳು ಹೆಚ್ಚುವರಿ ಕಾಲಾವಕಾಶ ನೀಡಬೇಕು,’’ ಎಂದು ಕೇಂದ್ರ ಮೇಲ್ಮನವಿ ಮೂಲಕ ಸುಪ್ರೀಂ ಕೋರ್ಟ್‌ ಅನ್ನು ಕೋರಿತು. ಆದರೆ, ಕೋರ್ಟ್ ಅದಕ್ಕೆಲ್ಲ ಮನ್ನಣೆ ನೀಡಿಲಿಲ್ಲ. “ನೀವು ಅರ್ಥೈಸಿಕೊಂಡ ರೀತಿಯಲ್ಲೇ ಸ್ಕೀಂನ ಕರಡು ತಯಾರಿಸಿ ಮೇ ೩ರೊಳಗೆ ಸಲ್ಲಿಸಿ. ಆ ಕರಡನ್ನು ಪರಿಶೀಲಿಸಿ, ಕಣಿವೆ ವ್ಯಾಪ್ತಿಯ ರಾಜ್ಯಗಳಿಗೆ ಯಾವ ರೀತಿ ನೀರು ಒದಗಿಸಬೇಕೆಂದು ನಾವು ತೀರ್ಮಾನ ಕೈಗೊಳ್ಳುತ್ತೇವೆ,’’ ಎಂದು ತಾಕೀತು ಮಾಡಿದೆ.

ಈ ವಿಷಯದಲ್ಲಿ ಏನೇ ನಿರ್ಧಾರ ಕೈಗೊಂಡರೂ, ಕರ್ನಾಟಕ ಅಥವಾ ತಮಿಳುನಾಡು ಈ ಎರಡು ರಾಜ್ಯಗಳ ಪೈಕಿ ಒಂದು ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎನ್ನುವುದು ಕೇಂದ್ರದ ಆತಂಕ. ೧೯೫೬ರ ಅಂತಾರಾಜ್ಯ ಜಲ ವಿವಾದಗಳ ಕಾಯಿದೆ ೬ಎ ನಿಯಮದಡಿ ಸ್ಕೀಂ ರಚನೆಗೆ ಮುಂದಾಗಿ,ಅದು ಕರ್ನಾಟಕದ ಪಾಲಿಗೆ ವ್ಯತಿರಿಕ್ತವಾದರೆ ಕರ್ನಾಟಕದ ಜನರ ಸಿಟ್ಟಿಗೆ,ಅದರಲ್ಲೂ ಕಾವೇರಿ ಕಣಿವೆ ಭಾಗದ ಮತದಾರರ ಕೆಂಗಣ್ಣಿಗೆ ಬಿಜೆಪಿ ಗುರಿಯಾಗಬೇಕಾಗುತ್ತದೆ. ಆದ್ದರಿಂದಲೇ ಚುನಾವಣಾ ಸಂದರ್ಭ ಮತ್ತು ಕಾನೂನು ಸುವ್ಯವಸ್ಥೆ ಭಂಗವನ್ನು ಮುಂದೆ ಮಾಡಿ,ಸದ್ಯ ಬಚಾವಾಗುವ ಪ್ರಯತ್ನ ಮಾಡಿತಾದರೂ, ಅದಕ್ಕೆ ಕೋರ್ಟ್ ಪುರಸ್ಕಾರ ದಕ್ಕಲಿಲ್ಲ. “ಕೋರ್ಟ್ ತೀರ್ಪಿಗೆ ಎಲ್ಲರೂ ಬದ್ಧವಾಗಿರಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವಂತೆ ರಾಜ್ಯ ಸರ್ಕಾರಗಳಿಗೆ ಹೇಳಿ,’’ ಎಂದು ಕೇಂದ್ರಕ್ಕೆ ನಿರ್ದೇಶನ ಮಾಡಿದೆ.

ಕಾವೇರಿ ವಿವಾದದ ವಿಷಯದಲ್ಲಿ, ಅದೂ ಜಯಲಲಿತಾ ಬದುಕಿದ್ದಾಗ ಕೇಂದ್ರ ಸರ್ಕಾರ ತಮಿಳುನಾಡು ಪರವೇ ಹೆಚ್ಚು ವಾಲುತ್ತಿತ್ತು. ಕರ್ನಾಟಕ ಏನೇ ಒತ್ತಾಯ ಹೇರಿದರೂ, “ಕರ್ನಾಟಕ ೧೯ ಬಿಜೆಪಿ ಸಂಸದರನ್ನು ಗೆಲ್ಲಿಸಿದೆ,’’ ಎಂದು ಮತ್ತೆ ಮತ್ತೆ ನೆನಪು ಮಾಡಿಕೊಟ್ಟಾಗಲೂ ನೆರೆಯ ರಾಜ್ಯದ ರಾಜಕೀಯ ಪ್ರಭಾವಕ್ಕೆ ಮಣಿದಂತೆ ವರ್ತಿಸಿತ್ತು. ಕರ್ನಾಟಕದ ಚುನಾವಣೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಕೇಂದ್ರದ ನಿಲುವು ಏನಿರುತ್ತದೆ ಎನ್ನುವುದು ಈಗಿನ ಕುತೂಹಲ. ಕಾವೇರಿ ನದಿಯಲ್ಲಿ ಲಭ್ಯ ೭೪೦ ಟಿಎಂಸಿ ಅಡಿ ನೀರನ್ನು ಸುಪ್ರೀಂಕೋರ್ಟ್ ಹಂಚಿಕೆ ಮಾಡಿರುವ (ತಮಿಳುನಾಡಿಗೆ ೪೦೪.೨೫ ಟಿಎಂಸಿ ಅಡಿ, ಕರ್ನಾಟಕಕ್ಕೆ ೨೮೪.೭೫ ಟಿಎಂಸಿ ಅಡಿ, ಕೇರಳ ಮತ್ತು ಪುದುಚೇರಿ ರಾಜ್ಯಗಳಿಗೆ ಕ್ರಮವಾಗಿ ೩೦ ಮತ್ತು ೭ ಟಿಎಂಸಿ ಅಡಿ) ಪ್ರಮಾಣದಲ್ಲಿ ಹರಿಸುವ ಸಂಬಂಧ ಕೇಂದ್ರ ಸರ್ಕಾರ ಸ್ಕೀಂ ಕರಡು ರೂಪಿಸಿ, ಮೇ ೩ರ ಗಡುವಿನೊಳಗೆ ಸಲ್ಲಿಸಲೇ ಬೇಕಿದೆ. “ಸ್ಕೀಂ ಎಂದರೆ ಸ್ಕೀಂ ಅಷ್ಟೇ,’’ ಎಂದು ಹೇಳುವ ಮೂಲಕ, “ನದಿ ನೀರು ನಿರ್ವಹಣಾ ಮಂಡಳಿ ಅಲ್ಲ,’’ ಎಂದೂ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದ್ದು, ತುಸು ನಿರಾಳ ಭಾವ ಮೂಡಿಸಿದೆ. ಆದರೆ, ‘ಸ್ಕೀಂ’ ಕರಡು ಸಲ್ಲಿಕೆಯಾದ ನಂತರವಷ್ಟೆ ಅದರ ಪರಿಣಾಮ ಯಾವ ರಾಜ್ಯದ ಮೇಲೆ ಹೇಗೆ ಬೀರುತ್ತದೆನ್ನುವುದು ತಿಳಿಯುವುದು. ತುಸು ವ್ಯತಿರಿಕ್ತವಾದರೂ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಅದನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳಬಹುದೆನ್ನುವ ಆತಂಕದಲ್ಲೇ ‘ಸ್ಕೀಂ’ ರೂಪಿಸಬೇಕಾದ “ಅಗ್ನಿ ಪರೀಕ್ಷೆ’’ಗೆ ಕೇಂದ್ರದ ಬಿಜೆಪಿ ಸರ್ಕಾರ ಒಡ್ಡಿಕೊಂಡಿದೆ.

ಇದನ್ನೂ ಓದಿ : ಕಾವೇರಿ ವಿವಾದ: ವೈರಲ್ ಆಯ್ತು ನಟ ಅನಂತ ನಾಗ್ ಮಾತಿನ ವಿಡಿಯೋ

“ಸಂದರ್ಭ ಬಂದರೆ ಕಾವೇರಿ ವಿಚಾರದಲ್ಲಿ ನನ್ನ ಸ್ಥಾನಕ್ಕೆ ರಾಜಿನಾಮೆ ನೀಡಲು ಸಿದ್ಧನಿದ್ದೇನೆ. ಅಧಿಕಾರದಲ್ಲಿರುವವರು ರಾಜಿನಾಮೆ ನೀಡಿ ಹೋರಾಟಕ್ಕೆ ಇಳಿಯಲು ಸಿದ್ಧರಿದ್ದಾರಾ?’’ ಎಂದು ಪ್ರಶ್ನಿಸಿರುರುವ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡರು, ಕೇಂದ್ರದ ನಿರ್ಣಯ ರಾಜ್ಯಕ್ಕೆ ವ್ಯತಿರಿಕ್ತವಾದರೆ ಚುನಾವಣಾ ಅಸ್ತ್ರ ಮಾಡಿಕೊಳ್ಳುವ ಸೂಚನೆಯನ್ನು ಮೊದಲಿಗರಾಗಿ ನೀಡಿದ್ದಾರೆ. ಕಾಂಗ್ರೆಸ್ ಕೂಡ ಇನ್ನೊಂದು ಅಸ್ತ್ರಕ್ಕೆ ಕಾಯುತ್ತಿರುವಂತಿದೆ. ವಿವಾದದ ಚೆಂಡು ಇದೀಗ ಬಿಜೆಪಿ ಅಂಗಳದಲ್ಲಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More