ಕೆಪಿಎಸ್ಸಿ ಅಕ್ರಮ ನೇಮಕಕ್ಕೆ ಕೊನೆಗೂ ಸುಪ್ರೀಂ ಕತ್ತರಿ; ಹಿರಿಯ ಅಧಿಕಾರಿಗಳಲ್ಲಿ ತಳಮಳ

೧೯೯೮, ೯೯ ಮತ್ತು ೨೦೦೪ನೇ ಸಾಲಿನ ಕೆಎಎಸ್‌ ಅಧಿಕಾರಿಗಳ ನೇಮಕಾತಿ ಕುರಿತಾದ ವಿಶೇಷ ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ೨೦೧೬ರಲ್ಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿರುವುದು ಐಎಎಸ್‌ಗೆ ಬಡ್ತಿ ಪಡೆದಿರುವ ಅಧಿಕಾರಿಗಳಿಗೆ ತಳಮಳ ಸೃಷ್ಟಿಸಿದೆ

“ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) 1998, 1999 ಹಾಗೂ 2004ರ ಸಾಲಿನ 734 ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ಆಯ್ಕೆ ಪಟ್ಟಿಯೇ ಅಸಂವಿಧಾನಿಕ. ಈ ಆಯ್ಕೆ ಪಟ್ಟಿಯಲ್ಲಿರುವ ಕಳಂಕಿತರು, ಅಕ್ರಮ ಫಲಾನುಭವಿಗಳನ್ನು ಹೊರಗಿಟ್ಟು ಲಿಖಿತ ಪರೀಕ್ಷೆಯಲ್ಲಿ ಗಳಿಸಿರುವ ಅಂಕದ ಆಧಾರದ ಮೇಲೆ ಅರ್ಹರ ಪಟ್ಟಿಯನ್ನು ರಚಿಸಿ ಹೊಸದಾಗಿ ಸಂದರ್ಶನ ನಡೆಸಿ ನೇಮಕ ಪ್ರಕ್ರಿಯೆ ನಡೆಸಬೇಕು,” ಎಂದು ಹೈಕೋರ್ಟ್‌ ೨೦೧೬ರ ಜೂನ್ ೨೨ರಂದು ನೀಡಿದ್ದ ಆದೇಶವನ್ನೇ ಸುಪ್ರೀಂ ಕೋರ್ಟ್‌ನ ದ್ವಿ ಸದಸ್ಯ ಪೀಠ ಎತ್ತಿ ಹಿಡಿದಿದೆ.

ಇದರಿಂದಾಗಿ ಕೆಪಿಎಸ್ಸಿ ಆಯ್ಕೆಯಲ್ಲಿ ಬೃಹತ್‌ ಪ್ರಮಾಣದಲ್ಲಿ ನಡೆದಿದ್ದ ಅಕ್ರಮ, ಹಣದ ವಹಿವಾಟಿಗೆ ಕೊನೆಗೂ ಹೊಡೆತ ಬಿದ್ದಂತಾಗಿದೆ. ಸಂದರ್ಶನದಲ್ಲಿ ನಿಗದಿಪಡಿಸಿದ್ದ ೨೦೦ ಅಂಕಗಳಿಗೆ ೧೮೦ರವರೆಗೂ ಕೆಪಿಎಸ್ಸಿಯ ಕೆಲ ಸದಸ್ಯರು ನಿರ್ದಿಷ್ಟ ಅಭ್ಯರ್ಥಿಗಳಿಗೆ ನೀಡಿದ್ದರು. ಸಂದರ್ಶನದಲ್ಲಿ ದೊರೆತ ಅಂಕಗಳ ಆಧರಿಸಿಯೇ ಹಲವು ಫಲಾನುಭವಿಗಳು ಉನ್ನತ ಹುದ್ದೆಗಳಿಗೆ ನೇಮಕವಾಗಿದ್ದರು.

ಅಕ್ರಮಗಳ ಕುರಿತು ಹೈಕೋರ್ಟ್ ನ್ಯಾಯಮೂರ್ತಿ ಎನ್‌.ಕುಮಾರ್‌ ಅವರು ನೀಡಿದ್ದ ಆದೇಶವನ್ನು ಪ್ರಶ್ನಿಸಿದ್ದ ರಾಜ್ಯ ಸರ್ಕಾರ, ಕರ್ನಾಟಕ ಲೋಕಸೇವಾ ಆಯೋಗ ಮತ್ತು ಕೆಎಎಸ್ ಅಧಿಕಾರಿ ಎಚ್‌.ಎನ್‌.ಗೋಪಾಲಕೃಷ್ಣ ಸೇರಿದಂತೆ ಒಟ್ಟು ೧೨ ಮಂದಿ ಅಧಿಕಾರಿಗಳು ಸಲ್ಲಿಸಿದ್ದ ವಿಶೇಷ ಮೇಲ್ಮನವಿಗಳನ್ನೂ ಆದರ್ಶಕುಮಾರ್ ಗೋಯಲ್ ನೇತೃತ್ವದ ದ್ವಿ ಸದಸ್ಯ ಪೀಠ ವಜಾಗೊಳಿಸಿದೆ. ಸುಪ್ರೀಂ ಕೋರ್ಟ್‌ನ ಈ ಆದೇಶದಿಂದಾಗಿ ಈ ಮೂರೂ ಸಾಲಿನಲ್ಲಿ ನಡೆದಿರುವ ಅಕ್ರಮಗಳ ಕುರಿತು ಕಳೆದ ೧೩ ವರ್ಷಗಳಿಂದ ನ್ಯಾಯಾಲಯದಲ್ಲಿ ನಡೆಸುತ್ತಿದ್ದ ಅರ್ಹ ಅಭ್ಯರ್ಥಿಗಳ ಹೋರಾಟಕ್ಕೆ ಜಯ ಲಭಿಸಿದಂತಾಗಿದೆ.

೧೯೯೮ನೇ ಸಾಲಿನಲ್ಲಿ ಉಪ ವಿಭಾಗಾಧಿಕಾರಿ ಹುದ್ದೆಗಳಿಗೆ ನೇಮಕವಾಗಿದ್ದ ಅಧಿಕಾರಿಗಳಿಗೆ ಕೆಎಎಸ್‌ನಿಂದ ಐಎಎಸ್‌ಗೆ ಬಡ್ತಿ ಲಭಿಸಿತ್ತು. ಐಎಎಸ್‌ಗೆ ಬಡ್ತಿ ನೀಡುವ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆ ಆಧರಿಸಿ ೨೦೧೮ರ ಫೆ.೨೩ರಂದು ೩೩ ಮಂದಿಗೆ ಐಎಎಸ್ ಗೆ ಬಡ್ತಿ ನೀಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಅಂತಿಮ ವಿಚಾರಣೆಯಿಂದ ಹೊರಬರುವ ಅಂತಿಮ ಫಲಿತಾಂಶಕ್ಕೆ ಒಳಪಟ್ಟು ೩೩ ಮಂದಿಗೆ ಐಎಎಸ್‌ಗೆ ಬಡ್ತಿ ನೀಡಲಾಗಿತ್ತು. ಅದೇ ರೀತಿ ೨೨ ಮಂದಿಗೆ ಐಪಿಎಸ್‌ಗೆ ಬಡ್ತಿ ನೀಡಲಾಗಿತ್ತು. ಆದರೀಗ ಸುಪ್ರೀಂ ಕೋರ್ಟ್‌ನ ದ್ವಿ ಸದಸ್ಯ ಪೀಠ ನೀಡಿರುವ ಆದೇಶ, ಐಎಎಸ್‌ ಮತ್ತು ಐಪಿಎಸ್‌ಗೆ ಬಡ್ತಿ ನೀಡಿದ್ದ ಆದೇಶದ ಮೇಲೂ ಪರಿಣಾಮ ಬೀರಲಿದೆ ಎನ್ನಲಾಗಿದೆ.

1998, 1999 ಹಾಗೂ 2004ರ ಸಾಲಿನ ಆಯ್ಕೆಯಿಂದ ವಂಚಿತರಾಗಿದ್ದ ‘ಎ’ ಮತ್ತು ‘ಬಿ’ ಗುಂಪಿನ ಅಭ್ಯರ್ಥಿಗಳು, ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದು ಇದನ್ನು ‘ರೀಡೂ’ (Re-do)  ಮಾಡಬೇಕು ಎಂದು ಕೋರಿ 2012ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮತ್ತು ರಿಟ್‌ ಅರ್ಜಿಗಳನ್ನು ದಾಖಲಿಸಿದ್ದರು. ಎನ್‌.ಕುಮಾರ್‌ ನೇತೃತ್ವದ ಏಕಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿ ೨೦೧೬ರ ಜೂನ್‌ ೨೨ರಂದು ತೀರ್ಪು ನೀಡಿತ್ತು. ಆದರೆ ಕೆಪಿಎಸ್ಸಿ ಈವರೆವಿಗೂ ರೀ-ಡೂ ಮಾಡಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಕೆಎಎಸ್‌ ನೇಮಕಾತಿ ವಂಚಿತರಿಗೆ ಪರಿಹಾರ ನೀಡಲು ಮಾನವ ಹಕ್ಕುಗಳ ಆಯೋಗ ಆದೇಶ

ಹೈಕೋರ್ಟ್‌ ತೀರ್ಪಿನಲ್ಲೇನಿತ್ತು?: ಈ ಮೂರೂ ಸಾಲಿನಲ್ಲಿ ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆಯಾಗಿರುವ  ಅನರ್ಹರನ್ನು ಪ್ರತ್ಯೇಕಿಸಲು ಕೆಪಿಎಸ್‌ಸಿ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಸೂಚಿಸಿತ್ತು. ಈ ಸಂಬಂಧ ಹಲವು ಮಾರ್ಗದರ್ಶಿ ಸೂತ್ರಗಳನ್ನು ಸೂಚಿಸಿತ್ತು. ಮೀಸಲಾತಿ ವ್ಯಾಪ್ತಿಯ ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಪ್ರತ್ಯೇಕವಾಗಿ ಮೆರಿಟ್‌ ಆಧಾರದಲ್ಲಿ ಅರ್ಹತಾ ಪಟ್ಟಿ ತಯಾರಿಸಬೇಕು.

ಇದಾದ ನಂತರ ಆಗ ಲಭ್ಯ ಇದ್ದ ಖಾಲಿ ಹುದ್ದೆಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಿರುವ ಅರ್ಹತಾ ಪಟ್ಟಿಯಲ್ಲಿನ ಈ ಪಟ್ಟಿಯು 1:5 ರ ಅನುಪಾತದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಇದರ ಆಧಾರದ ಮೇಲೆ ಹೊಸ ಪಟ್ಟಿ ತಯಾರಿಸಿ ಅವರನ್ನು ವ್ಯಕ್ತಿತ್ವ ಸಂದರ್ಶನಕ್ಕೆ ಕರೆಯಬೇಕು. ಆದೇಶ ತಲುಪಿದ ಎರಡು ತಿಂಗಳಲ್ಲಿ ಹೊಸಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಬೇಕು ಎಂದು ನಿರ್ದೇಶಿಸಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ.

‘ಈ ಆಯ್ಕೆ ಪಟ್ಟಿ ಸರ್ಕಾರದ ಆದೇಶ ಮತ್ತು ನಿಯಮಾವಳಿಗಳಿಗೆ ತದ್ವಿರುದ್ಧವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದ ಹೈಕೋರ್ಟ್ ನ ವಿಭಾಗೀಯ ನ್ಯಾಯಪೀಠ, ‘ಈ ಪ್ರಕ್ರಿಯೆಯನ್ನು ಅಸಂವಿಧಾನಿಕ ಎಂದು ಹೇಳಿದರೂ ಈ ಮೂರೂ ಬ್ಯಾಚುಗಳಲ್ಲಿ ಆಯ್ಕೆಯಾಗಿರುವ  ಎಲ್ಲರನ್ನೂ ವಜಾ ಮಾಡಬೇಕಾಗಿಲ್ಲ ಎಂದೂ ಹೇಳಿತ್ತು.

ಒಂದೊಮ್ಮೆ ಮೀಸಲು ಅಭ್ಯರ್ಥಿಗಳು ಸಾಮಾನ್ಯ ಅಭ್ಯರ್ಥಿಗಳು ಅಥವಾ ಮೀಸಲು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಲ್ಲಿ ಅವರ ನೇಮಕಾತಿಯು ಕಾನೂನು ಬದ್ಧವಾಗಿರುತ್ತದೆ. ಅವರಿಗೆ ಯಾವುದೇ ರೀತಿ ತೊಂದರೆ ನೀಡಬಾರದು. ಆಯ್ಕೆಯಾದ ಅಭ್ಯರ್ಥಿಗಳ ಹೆಸರು ಹೊಸ ಪಟ್ಟಿಯಲ್ಲಿ ಕಾಣಿಸದಿದ್ದರೆ ಆ ಅಭ್ಯರ್ಥಿಗಳ ನೇಮಕ ಅಕ್ರಮವಾಗಿದ್ದು, ಅವರ ನೇಮಕಾತಿ ರದ್ದುಪಡಿಸಲಾಗುತ್ತದೆ ಎಂದೂ ಆದೇಶದಲ್ಲಿ ಹೇಳಲಾಗಿತ್ತು.

1998ನೇ ಬ್ಯಾಚ್‌ನಲ್ಲಿ ಹೈಕೋರ್ಟ್‌ ನಿರ್ದೇಶನದ ಮೇರೆಗೆ ಕೆಪಿಎಸ್‌ಸಿಯು ಗೆಜೆಟೆಡ್‌ ಪ್ರೊಬೆಷನರಿಗೆ ಹುದ್ದೆಗಳಿಗೆ ನಡೆಸಿದ್ದ ಪರಿಷ್ಕೃತ ಆಯ್ಕೆ ಪಟ್ಟಿ ಕಾನೂನುಬದ್ಧ ಎಂದು ಹೇಳಿದ್ದ ನ್ಯಾಯಪೀಠ, ಇದೇ ಬ್ಯಾಚಿಗೆ ಸಂಬಂಧಿಸಿದಂತೆ ಮರುಮೌಲ್ಯಮಾಪನ ಮಾಡಲಾಗಿದ್ದ 91 ಉತ್ತರ ಪತ್ರಿಕೆಗಳನ್ನು ಕೆಪಿಎಸ್‌ಸಿ ಪರಿಗಣಿಸಬೇಕು. ಹಾಗೆಯೇ ಉತ್ತರ ಪತ್ರಿಕೆ ನಾಶಪಡಿಸಿದ ಅಂಶ ಆಧರಿಸಿ 1999ನೇ ಸಾಲಿನಲ್ಲಿ ಅಭ್ಯರ್ಥಿಗಳ ಆಯ್ಕೆಪಟ್ಟಿ ರದ್ದುಪಡಿಸಲಾಗದು ಎಂದು ಹೇಳಿತ್ತು.

ವಿಚಾರಣೆ ನಡೆಯುವ ಮಧ್ಯೆಯೇ ಕೆಪಿಎಸ್ಸಿ ಸಲ್ಲಿಸಿದ್ದ ಅಭ್ಯರ್ಥಿಗಳ ಪರಿಷ್ಕೃತ ಪಟ್ಟಿಯನ್ನು ಜಾರಿಗೊಳಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಇದೇ ಆದೇಶದಲ್ಲೇ ಸೂಚಿಸಲಾಗಿತ್ತು. ಕೆಪಿಎಸ್ಸಿ ಸಲ್ಲಿಸಿದ್ದ ಪರಿಷ್ಕೃತ ಪಟ್ಟಿ ಪ್ರಕಾರ ಉಪ ವಿಭಾಗಾಧಿಕಾರಿ, ತಹಸೀಲ್ದಾರ್‌, ವಾಣಿಜ್ಯ ತೆರಿಗೆ ಅಧಿಕಾರಿ ಸೇರಿದಂತೆ ಇನ್ನಿತರೆ ಹುದ್ದೆಗಳಲ್ಲಿ ಸ್ಥಾನ ಪಲ್ಲಟಗೊಂಡಿತ್ತು. ಈ ಪಟ್ಟಿಯನ್ನು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತಾದರೂ ಪಟ್ಟಿಯನ್ನು ಅನುಷ್ಠಾನಗೊಳಿಸಿರಲಿಲ್ಲ.

ಅಗ್ನಿವೇಶ್ ಹಲ್ಲೆಗಾರರ ಮುಂದಿದ್ದದ್ದು ಪ್ರಧಾನಿ ಮೋದಿ ಮಾದರಿಯೇ ?
ಜಟಿಲಗೊಳ್ಳುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಅಧಿಕಾರವಧಿ ವಿಸ್ತರಣೆಯ ವಿವಾದ
ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ನೆರವಾಗದ ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆ
Editor’s Pick More