ಮಾರ್ಕ್‌ ಝುಕರ್‌ಬರ್ಗ್‌ ವಿಚಾರಣೆ | ಉತ್ತರ ಸಿಗದೆ ಉಳಿದ ಐದು ಪ್ರಶ್ನೆಗಳು

ಫೇಸ್ಬುಕ್‌ ಸಿಇಒ ಮಾರ್ಕ್‌ ಝುಕರ್‌ಬರ್ಗ್‌ ಅಮೆರಿಕದ ೪೨ ಸೆನೆಟರ್‌ಗಳ ಸಮಿತಿ ಮುಂದೆ ಹಾಜರಾದರು. ಕೇಂಬ್ರಿಡ್ಜ್‌ ಅನಾಲಿಟಿಕಾ ಹುಟ್ಟುಹಾಕಿದ ವಿವಾದದ ಹಿನ್ನೆಲೆಯಲ್ಲಿ ಫೇಸ್‌ಬುಕ್‌ ಬಳಕೆದಾರರ ಮಾಹಿತಿ ಗೌಪ್ಯತೆ ಕುರಿತು ಎದ್ದ ಪ್ರಶ್ನೆಗಳಿಗೆ ಉತ್ತರಿಸಿದರು. ಆದರೆ ಅವು ನಿಜಕ್ಕೂ ಉತ್ತರಗಳೇ!

ಹದಿನೈದು ವರ್ಷಗಳಲ್ಲಿ ಫೇಸ್‌ಬುಕ್‌ ಸಿಇಒ ಮಾರ್ಕ್‌ ಝುಕರ್‌ಬರ್ಗ್‌ ಸಾರ್ವಜನಿಕವಾಗಿ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿ ಬಂದದ್ದು ಇದೇ ಮೊದಲು. ಅಮೆರಿಕದ ೪೨ ಸೆನೆಟರ್‌ಗಳ ನ್ಯಾಯಾಂಗ ಸಮಿತಿ ಮತ್ತು ವಾಣಿಜ್ಯ ಸಮಿತಿ ಎದುರು ಎರಡು ದಿನಗಳ ಕಾಲ ಇಡೀ ವಿಚಾರಣೆಯಲ್ಲಿ ಮಂಗಳವಾರ ಮೊದಲನೆಯ ದಿನ ೫ ಗಂಟೆಗಳ ಕಾಲ ಸೆನೆಟರ್‌ಗಳ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡಿದರು.

ಐದು ತಾಸುಗಳಲ್ಲಿ ೧೮ ಬಾರಿ “ನನಗೆ ಗೊತ್ತಿಲ್ಲ”, “ನನ್ನ ತಂಡದೊಂದಿಗೆ ಮಾತನಾಡಿ ತಿಳಿಯಬೇಕು,” ಎಂಬ ಉತ್ತರಗಳನ್ನು ಕೊಟ್ಟರು ಝುಕರ್‌ಬರ್ಗ್‌. ಒಂದೆಡೆ ತಪ್ಪು ಮಾಡಿ ದೊಡ್ಡ ಸಂಖ್ಯೆಯ ಬಳಕೆದಾರರ ವಿಶ್ವಾಸ ಉಳಿಸಿಕೊಳ್ಳಬೇಕಾದ ಅಗತ್ಯವಿರುವ ಮಾರ್ಕ್‌ ಝುಕರ್‌ ಬರ್ಗ್‌, ಇನ್ನೊಂದೆಡೆ ದೇಶದ ನಾಗರಿಕರ ಮಾಹಿತಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕಾದ ಹೊಣೆ ಹೊತ್ತ ಸೆನೆಟರ್‌ಗಳು.

ಸೆನೆಟರ್‌ಗಳಿಗೆ ಫೇಸ್‌ಬುಕ್‌ ಕಾರ್ಯವಿಧಾನ ಮತ್ತು ಅದರ ವ್ಯಾಪ್ತಿಯ ಬಗ್ಗೆ ಇದ್ದ ತಿಳಿವು ಅಚ್ಚರಿ ಮತ್ತು ಅನುಮಾನಗಳು ಹುಟ್ಟಿಸುವಂತೆ ವಿಚಾರಣೆಯ ಪ್ರಶ್ನೆಗಳಿದ್ದವು. ತಪ್ಪೊಪ್ಪಿಕೊಳ್ಳುವ ಮೂಲಕವೇ ಎಲ್ಲವನ್ನು ಸರಿಪಡಿಸಿಕೊಳ್ಳುವ, ಆಗಿರುವ ಹಾನಿಯನ್ನು ಕಡಿಮೆ ಮಾಡಿಕೊಳ್ಳುವ ಲೆಕ್ಕಾಚಾರ ಝುಕರ್‌ಬರ್ಗ್‌ ಅವರಲ್ಲಿ ಕಾಣುತ್ತಿತ್ತು.

ಪ್ರಶ್ನೆ ೧- ಝುಕರ್‌ಬರ್ಗ್‌ ವಿಚಾರಣೆಗೆ ಕುಳಿತಿದ್ದ ಸೆನೆಟ್‌ ಸದಸ್ಯರಿಗೆ ಫೇಸ್‌ಬುಕ್‌ ಏನೆಂಬುದು ಗೊತ್ತಿತ್ತೆ?

ಮಂಗಳವಾರ ಸೆನೆಟ್‌ ಸಮಿತಿ ಫೇಸ್‌ಬುಕ್‌ ಸಿಇಒ ಝುಕರ್‌ಬರ್ಗ್‌ ವಾದವನ್ನು ಕೇಳಿತು. ಅಕ್ಷರಶಃ ವಾದವನ್ನು ಕೇಳಿಸಿಕೊಂಡಂತೇ ಇತ್ತೆ ಹೊರತು, ಝುಕರ್‌ಬರ್ಗ್‌ ಅವರನ್ನು ನಿಷ್ಠುರವಾಗಿ ಪ್ರಶ್ನಿಸಿದಂತೆ ಕಾಣಲಿಲ್ಲ. ಯಾಕೆಂದರೆ ಪ್ರಶ್ನೆ ಕೇಳಲು ಕುಳಿತ ಸೆನೆಟ್‌ ಸದಸ್ಯರಿಗೆ ವಾಸ್ತವದಲ್ಲಿ ಫೇಸ್‌ಬುಕ್‌ ಸ್ವರೂಪ, ಕಾರ್ಯವೈಖರಿಯ ಬಗ್ಗೆ ಸ್ಪಷ್ಟ ತಿಳಿವು ಇದ್ದಂತೆ ಕಾಣಿಸಲಿಲ್ಲ. ಈಗ ಎದುರಾಗಿರುವ ಫೇಸ್‌ಬುಕ್‌ ಸಮಸ್ಯೆಗಳಿಗೆ ಹೇಗೆ ಪರಿಹಾರ ಸೂಚಿಸಬಹುದು ಎಂಬ ಸುಳಿವೂ ಇರಲಿಲ್ಲ. ಮಂಗಳವಾರ ಝುಕರ್‌ ಬರ್ಗ್‌ ಅವರಿಗೆ ಕೇಳಲಾದ ಪ್ರಶ್ನೆಗಳು ಪ್ರಸ್ತುತ ರಾಜಕಾರಣಿಗಳಿಗೆ ೨೧ನೇ ಶತಮಾನದ ತಂತ್ರಜ್ಞಾನದ ಬಗ್ಗೆ ಸಾಮಾನ್ಯ ತಿಳಿವಳಿಕೆಯೂ ಇಲ್ಲ ಎಂಬುದನ್ನು ಸಾಬೀತು ಮಾಡಿತೆ ಹೊರತು, ಝುಕರ್‌ಬರ್ಗ್‌ನನ್ನು ಮಾಹಿತಿ ಸೋರಿಕೆ, ಖಾಸಗಿತನದ ವಿಷಯದಲ್ಲಿ ಬಾಧ್ಯಸ್ಥನನ್ನಾಗಿ ಮಾಡುವ ಪ್ರಯತ್ನವಾಗಲಿಲ್ಲ. ಫೇಸ್‌ಬುಕ್‌ ಹೇಗೆ ಕೆಲಸ ಮಾಡುತ್ತದೆ? ಗ್ರಾಹಕರಿಂದ ಹಣ ಸಂಗ್ರಹಿಸಿದೇ ನಿಮ್ಮ ತಾಣವನ್ನು ಹೇಗೆ ನಡೆಸುತ್ತೀರಿ? ಫೇಸ್‌ಬುಕ್‌ ಸಂಗ್ರಹಿಸುವ ಮಾಹಿತಿಯನ್ನು ಪ್ರತ್ಯೇಕ ವಿಭಾಗಗಳಲ್ಲಿ ಸಂಗ್ರಹಿಸಲಾಗುತ್ತದೆಯೇ?

ಪ್ರಶ್ನೆ ೨ - ಫೇಸ್‌ಬುಕ್‌ ಬಳಕೆದಾರರ ಮಾಹಿತಿ ಗೌಪ್ಯತೆ ಮತ್ತು ಖಾಸಗಿತನದ ಬಗ್ಗೆ ಸ್ಪಷ್ಟ ನಿಲುವೇನು?

ಫೇಸ್‌ಬುಕ್‌ನಲ್ಲಿ ಪ್ರತಿಯೊಬ್ಬ ಬಳಕೆದಾರನ ದೈನಂದಿನ ಮಾಹಿತಿಗಳು ಹಂಚಿಕೆಯಾಗುತ್ತವೆ. ಫೋಟೋಗಳು, ತಮ್ಮ ಆಸಕ್ತಿಗಳು, ಇಷ್ಟಾನಿಷ್ಟಗಳು, ಸ್ನೇಹಿತರು ಇತ್ಯಾದಿ. ಈ ಮಾಹಿತಿಯನ್ನೇ ಬಂಡವಾಳ ಮಾಡಿಕೊಂಡಿರುವ ಫೇಸ್‌ಬುಕ್‌ ಸ್ವತಃ ಜಾಹೀರಾತುದಾರರೊಂದಿಗೆ ಹಂಚಿಕೊಂಡು ಹಣ ಮಾಡುತ್ತದೆ. ಇದೂ ಒಂದು ರೀತಿಯಲ್ಲಿ ಖಾಸಗಿತನದ ಉಲ್ಲಂಘನೆಯೇ. ಆದರೆ ತನ್ನ ನಿಯಮಗಳಲ್ಲಿ ಇದನ್ನು ಮೊದಲೇ ತಿಳಿಸಿ, ಅನುಮತಿ ಪಡೆದಿರುವ ವಾದವನ್ನು ಫೇಸ್‌ಬುಕ್‌ ಮಂಡಿಸುತ್ತಿದೆ. ಹಾಗಾಗಿ ಬಳಕೆದಾರರನ್ನು ಗ್ರಾಹಕರು ಎಂದು ಪರಿಗಣಿಸುವುದಿಲ್ಲ, ಬದಲಿಗೆ ಉತ್ಪನ್ನ ಎಂದು ಪ್ರತಿಪಾದಿಸುತ್ತದೆ. ಹಾಗಾಗಿ ಮಾರಾಟ ಮಾಡುವ ಮೂಲಕ ಆದಾಯವನ್ನು ಸಂಗ್ರಹಿಸುತ್ತದೆ. ಬಳಕೆದಾರರಿಂದ ಯಾವುದೇ ಆದಾಯವಿಲ್ಲದಿರುವುದರಿಂದ ಈ ಮಾದರಿಯನ್ನು ಅನುಸರಿಸುತ್ತಿರುವುದಾಗಿ ಹೇಳುತ್ತಾರೆ. ಹಾಗೇ ಅಂದುಕೊಂಡರು ತನ್ನ ಉತ್ಪನ್ನದ ಬಗ್ಗೆಯೂ ಯಾವುದೇ ಕಂಪನಿ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತಾನೆ. ಆದರೆ ಫೇಸ್‌ಬುಕ್‌ ಯಾಕೆ ಈ ವಿಷಯದಲ್ಲಿ ಉಪೇಕ್ಷೆ ಮಾಡಿತು?

ಪ್ರಶ್ನೆ ೩- ಫೇಸ್‌ಬುಕ್‌ಗೆ ಮಾಹಿತಿ ಸೋರಿಕೆಯಾಗಿರುವುದು ತಿಳಿದಿದ್ದರೂ ಅದನ್ನು ತನ್ನ ಬಳಕೆದಾರರಿಂದ ಮುಚ್ಚಿಟ್ಟಿದ್ದು ಏಕೆ?

ಕ್ಯಾಲಿಫೋರ್ನಿಯಾದ ಸೆನೆಟರ್‌ ಕಮಲಾ ಹ್ಯಾರಿಸ್‌ ಎತ್ತಿದ ಪ್ರಶ್ನೆ ಇದು. ಮಾರ್ಕ್‌ಝುಕರ್‌ ಬರ್ಗ್‌ಗೆ ಸಂಶೋಧಕರು ಫೇಸ್‌ಬುಕ್‌ನಿಂದ ಸಂಗ್ರಹಿಸಿದ ಮಾಹಿತಿಯನ್ನು ೨೦೧೫ರಲ್ಲೇ ರಾಜಕೀಯ ಸಂಸ್ಥೆಯೊಂದಕ್ಕೆ ಮಾರಾಟ ಮಾಡಿದ ಮಾಹಿತಿ ಇದ್ದರೂ ತನ್ನ ಬಳಕೆದಾರರಿಗೆ ಯಾಕೆ ಈ ವಿಷಯ ತಿಳಿಸಲಿಲ್ಲ? ಇದು ಬಳಕೆದಾರರಿಗೆ ಮಾಡಿದ ಮೋಸವಲ್ಲವೆ? ಇದಕ್ಕೆ ಉದ್ದೇಶಪೂರ್ವಕವಾಗಿ ಹೇಳಬಾರದು ಎಂಬ ನಿರ್ಧಾರವೇನು ಮಾಡಿರಲಿಲ್ಲ. ಆದರೆ ಹೇಳಲಿಲ್ಲ. ತಪ್ಪು ಮಾಡಿದೆವು ಎಂದಷ್ಟೇ ಉತ್ತರಿಸಿದರು. ಕೇಂಬ್ರಿಡ್ಜ್‌ ಅನಾಲಿಟಿಕಾ ಮಾಡಿದ ತಪ್ಪು ಇಷ್ಟು ದೊಡ್ಡ ಸುದ್ದಿ ಮಾಡಬಹುದು ಮತ್ತು ತನ್ನ ವಿಶ್ವಾಸಾರ್ಹತೆಗೆ ಧಕ್ಕೆ ಉಂಟು ಮಾಡಬಹುದು ಎಂಬ ಕಲ್ಪನೆಯೇ ಇಲ್ಲದ ಮಾರ್ಕ್‌ ಝುಕರ್‌ ಆಗ ಉಪೇಕ್ಷೆ ಮಾಡಿದ್ದರೆ?

ಪ್ರಶ್ನೆ ೪ - ಕೇಂಬ್ರಿಡ್ಜ್‌ ಅನಾಲಿಟಿಕಾದಂತಹ ಇನ್ನೆಷ್ಟು ಸಂಸ್ಥೆಗಳು ಫೇಸ್‌ಬುಕ್‌ ಮಾಹಿತಿಯನ್ನು ಬಳಸುತ್ತಿವೆ? ಈ ಬಗ್ಗೆ ಗ್ರಾಹಕರಿಗೆ ಎಚ್ಚರಿಸಿದೆಯೇ?

ಕೇಂಬ್ರಿಡ್ಜ್‌ ಅನಾಲಿಟಿಕಾ ಫೇಸ್‌ಬುಕ್‌ನಿಂದ ಅಕ್ರಮವಾಗಿ ಮಾಹಿತಿ ಸಂಗ್ರಹಿಸಿದ್ದು, ಆಕಸ್ಮಿಕವಾಗಿ ಬಯಲಾಯಿತು. ಆದರೆ ಜಗತ್ತಿನಾದ್ಯಂತ ಸಾವಿರಾರು ಕಂಪನಿಗಳು ವಿವಿಧ ಉದ್ದೇಶಕ್ಕಾಗಿ ಇದೇ ಮಾಹಿತಿಯನ್ನು ಬಳಸುತ್ತವೆ. ವಾಣಿಜ್ಯ, ರಾಜಕೀಯ ಹಾಗೂ ಇತರೆ ವಿಷಯಗಳಲ್ಲಿ ಅಭಿಪ್ರಾಯ ರೂಪಿಸಲು, ಪ್ರಭಾವಿಸಲು ಫೇಸ್‌ಬುಕ್‌ ಬಳಕೆದಾರರ ಮಾಹಿತಿಯನ್ನೇ ಅನಧಿಕೃತವಾಗಿ ಸಂಗ್ರಹಿಸಿ ಬಳಸುತ್ತಿವೆ. ಇವುಗಳ ಬಗ್ಗೆ ಫೇಸ್‌ಬುಕ್‌ ತನ್ನ ಬಳಕೆದಾರರಿಗೆ ಎಚ್ಚರಿಸುತ್ತಿದೆಯೆ? ತೀರಾ ಇತ್ತೀಚಿನ ಉದಾಹರಣೆಯನ್ನೇ ನೋಡಿ, ಕೇಂಬ್ರಿಡ್ಜ್‌ ಅನಾಲಿಟಿಕಾದಂತೆಯೇ ಫೇಸ್‌ಬುಕ್‌ ಆಪ್‌ನಿಂದ ಮಾಹಿತಿ ಸಂಗ್ರಹಿಸಿ ಮೂರನೆಯ ವ್ಯಕ್ತಿಗೆ ಮಾರುತ್ತಿದ್ದ ಕ್ಯೂಬ್‌ಯೂ ವಿರುದ್ಧ ಕ್ರಮಕ್ಕೆ ಮುಂದಾಯಿತು. ಇದನ್ನು ಸ್ವತಃ ಫೇಸ್‌ಬುಕ್‌ ಪತ್ತೆ ಮಾಡಿದ್ದಲ್ಲ, ಸಿಎನ್‌ಬಿಸಿ ವಾಹಿನಿ ತನಿಖೆಯಿಂದ ಬಯಲಾದದ್ದು!

ಪ್ರಶ್ನೆ ೫ - ಫೇಸ್‌ಬುಕ್‌ ಸಾಮಾಜಿಕ ಜಾಲತಾಣವಾಗಿ ತನ್ನ ಏಕಾಧಿಪತ್ಯವನ್ನು ಉಳಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದೆಯೇ?

ಜಗತ್ತಿನ ಅತಿ ದೊಡ್ಡ ಸಾಮಾಜಿಕ ಜಾಲತಾಣವಾಗಿರುವ ಫೇಸ್‌ಬುಕ್‌ಗೆ ಪ್ರತಿಸ್ಪರ್ಧಿಯೇ ಇಲ್ಲ. ಚೀನಾ, ರಷ್ಯಾ ದೇಶಗಳು ತಮ್ಮದೇ ಸಾಮಾಜಿಕ ಜಾಲತಾಣಗಳನ್ನು ಹೊಂದಿವೆಯಾದರೂ, ಅವು ಆಯಾ ದೇಶಗಳಿಗೆ ಸೀಮಿತವಾಗಿವೆ. ಉಳಿದಂತೆ ಜಗತ್ತನ್ನೇ ಆವರಿಸಿಕೊಂಡಿರುವ ಫೇಸ್‌ಬುಕ್‌ ತನ್ನ ಬಾಹುಗಳನ್ನು ಇನ್ನಷ್ಟು ಆಳ ಮತ್ತು ಅಗಲಕ್ಕೆ ಚಾಚಿಕೊಳ್ಳುವುದಕ್ಕೆ ಸದಾ ಪ್ರಯತ್ನಿಸಿದೆ. ಭಾರತ, ಆಫ್ರಿಕಾಗಳಲ್ಲಿ ಫ್ರೀಬೇಸಿಕ್ಸ್‌ ಪರಿಚಯಿಸುವ ಹಿಂದೆ ಇದ್ದದ್ದು ಇದೇ ಉದ್ದೇಶ. ಆದರೆ ಈ ಪ್ರಶ್ನೆಯನ್ನು ದಕ್ಷಿಣ ಕ್ಯಾರೋಲಿನಾದ ಸೆನೆಟರ್‌ ಲಿಂಡ್ಸೆ ಗ್ರಹಂ ಪ್ರಸ್ತಾಪಿಸಿದಾಗ, “ಅದು ಹಾಗಿಲ್ಲ” ಎಂದಷ್ಟೇ ಉತ್ತರಿಸಿದ್ದಾರೆ ಝುಕರ್‌ಬರ್ಗ್‌.

ಇದನ್ನೂ ಓದಿ : ಕೇಂಬ್ರಿಡ್ಜ್‌ ಅನಾಲಿಟಿಕಾ ಕದ್ದಿದ್ದು ೫೦ ಅಲ್ಲ, ೮೭ ಕೋಟಿ ಬಳಕೆದಾರರ ಮಾಹಿತಿ!

ಮೊದಲ ದಿನದ ವಿಚಾರಣೆಯಲ್ಲಿ ತಾವು ಸಿದ್ಧ ಮಾಡಿಕೊಂಡು ಬಂದಿದ್ದ ಟಿಪ್ಪಣಿಗಳನ್ನು ಓದುತ್ತಾ ಎಲ್ಲ ಪ್ರಶ್ನೆಗಳಿಗೆ ಸುಲಭವಾಗಿ ಜಾರಿಕೊಂಡ ಮಾರ್ಕ್‌ ಝುಕರ್‌ ಬರ್ಗ್‌ ಬುಧವಾರವೂ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ನಿಜವಾದ ಅರ್ಥವಾದಲ್ಲಿ ವಿಚಾರಣೆ ಮಾಡುವುದಕ್ಕೆ ಸೆನೆಟರ್‌ಗಳಿಗೆ ಅಂಥ ತಾಂತ್ರಿಕ ಜ್ಞಾನದ ಕೊರತೆ ಇರುವುದರಿಂದ ಝುಕರ್‌ ಬರ್ಗ್‌ ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎಂದುಕೊಂಡಿದ್ದಾರೆ.

ವಿಚಾರಣೆಯ ವಿರುದ್ಧ ಗೊಂದಲ ಹುಟ್ಟಿಸುವ, ವೈರುಧ್ಯದ ಹೇಳಿಕೆಗಳನ್ನು ನೀಡುತ್ತಲೇ ಹೋಗಿದ್ದಾರೆ. ಫೇಸ್‌ಬುಕ್‌ ಮಾಧ್ಯಮ ಸಂಸ್ಥೆಯಲ್ಲ, ಅಲ್ಲಿ ಪ್ರಕಟಿಸುವ ಮಾಹಿತಿಗೆ ನಾವು ಹೊಣೆಯಲ್ಲ ಎಂದು ಹಿಂದೆ ಹೇಳಿಕೆ ನೀಡಿದ್ದರು. ಆದರೆ ಈಗ ವಿಚಾರಣೆಯ ವೇಳೆ ಫೇಸ್‌ಬುಕ್‌ನಲ್ಲಿರುವ ಮಾಹಿತಿಗೆ ನಾವೇ ಹೊಣೆ ಎಂದಿದ್ದಾರೆ. ಇದೊಂದೇ ಹೇಳಿಕೆ ಝುಕರ್‌ಬರ್ಗ್‌ ಅವರನ್ನು ಕಾಡಲಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More