ಖಾಸಗಿ ಬ್ಯಾಂಕುಗಳ ನಿಷ್ಕ್ರಿಯ ಸಾಲ ತ್ವರಿತ  ಹೆಚ್ಚಳವಾಗುತ್ತಿದೆ ಎಂದಿದೆ ಆರ್‌ಬಿಐ ವರದಿ

ನಿಷ್ಕ್ರಿಯ ಸಾಲದ ಪ್ರಮಾಣ ಮುಂದಿಟ್ಟುಕೊಂಡು ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣ ಮಾಡಬೇಕೆಂಬ ಒತ್ತಡ ಹೆಚ್ಚುತ್ತಿದೆ. ವಾಸ್ತವವಾಗಿ ಖಾಸಗಿ ಬ್ಯಾಂಕುಗಳ ನಿಷ್ಕ್ರಿಯ ಸಾಲದ ಪ್ರಮಾಣ ಇತ್ತೀಚೆಗೆ ಜಿಗಿಯುತ್ತಿದೆ ಎಂದು ಆರ್‌ಬಿಐ ವರದಿ ತಿಳಿಸಿದೆ. ಖಾಸಗೀಕರಣ ಎಲ್ಲದಕ್ಕೂ ಪರಿಹಾರವಲ್ಲ!

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಹೊರ ಬಿದ್ದ ನಂತರ ಬಹುತೇಕ ಕಾರ್ಪೋರೆಟ್ ದೈತ್ಯರು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣ ಮಾಡಬೇಕು ಎಂಬ ಒತ್ತಾಯ ಪೂರ್ವಕ ಸಲಹೆಯನ್ನು ನೀಡಿದರು. ಅವರ ಮಾತಿನ ಒಳಾರ್ಥ ಏನಿತ್ತೆಂದರೆ ಖಾಸಗಿ ಬ್ಯಾಂಕುಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತವೆ, ಸಾರ್ವಜನಿಕ ವಲಯದ ಬ್ಯಾಂಕುಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದಾಗಿತ್ತು.

ಬ್ಯಾಂಕುಗಳ ಕಾರ್ಯನಿರ್ವಹಣೆಯನ್ನು ಅವುಗಳು ನೀಡುವ ಸೇವೆಗಳಿಗಿಂತಲೂ ಅವರು, ಗಳಿಸುವ ಲಾಭ ಮತ್ತು ಹೊಂದಿರುವ ನಿಷ್ಕ್ರಿಯ ಆಸ್ತಿ ಮತ್ತು ಒತ್ತಡದ ಸಾಲವನ್ನಾಧರಿಸಿ ಅಳೆಯಲಾಗುತ್ತದೆ. ಆ ಲೆಕ್ಕದಲ್ಲಿ ಖಾಸಗಿ ವಲಯದ ಬ್ಯಾಂಕುಗಳಿಗಿಂತ ಸಾರ್ವಜನಿಕ ವಲಯದ ಬ್ಯಾಂಕುಗಳ ನಿಷ್ಕ್ರಿಯ ಸಾಲದ ಪ್ರಮಾಣ ಹೆಚ್ಚಿದ್ದರೆ, ಖಾಸಗಿ ವಲಯದ ಬ್ಯಾಂಕುಗಳ ಲಾಭದ ಪ್ರಮಾಣ ಹೆಚ್ಚಿದೆ. ಅದರರ್ಥ ಖಾಸಗಿ ಬ್ಯಾಂಕುಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕ ವಲಯದ ಬ್ಯಾಂಕುಗಳ ಕಾರ್ಯನಿರ್ವಹಣೆ ಕಳಪೆ ಎಂದೇನೂ ಅಲ್ಲ.

ಖಾಸಗಿ ವಲಯದ ಬ್ಯಾಂಕುಗಳು ಸಾರ್ವಜನಿಕ ವಲಯದ ಬ್ಯಾಂಕುಗಳಿಗಿಂತ ಹೆಚ್ಚು ಲಾಭಗಳಿಸಲು ಹಲವು ಕಾರಣಗಳಿವೆ. ಖಾಸಗಿ ಬ್ಯಾಂಕುಗಳ ಸೇವೆಗಳ ಶುಲ್ಕ ಸದಾ ದುಬಾರಿ. ಬಡ್ಡಿದರವೂ ಹೆಚ್ಚಿರುತ್ತದೆ. ಸಾಲವನ್ನು ಸಕಾಲದಲ್ಲಿ ಪಾವತಿಸದೇ ಇದ್ದಾಗ ವಿವಿಧ ಕಾರಣಗಳಿಗಾಗಿ ವಿಧಿಸುವ ದಂಡಶುಲ್ಕ ಹೆಚ್ಚಿರುತ್ತದೆ. ಸಾಲ ನೀಡುವಾಗ ಖಾಸಗಿ ಬ್ಯಾಂಕುಗಳಿಗೆ ಬರುವ ಬಡ್ಡಿ ಮುಖ್ಯವೇ ಹೊರತು, ಸಮಾಜದ ಶ್ರೇಯೋಭಿವೃದ್ಧಿ ಅಲ್ಲ. ಸರ್ಕಾರ ಆದ್ಯತಾ ವಲಯದ ಎಂದು ಪರಿಗಣಿಸಿರುವ ಕೃಷಿ ವಲಯಕ್ಕೆ, ಅಸಂಘಟಿತ ವಲಯಕ್ಕೆ ಖಾಸಗಿ ಬ್ಯಾಂಕುಗಳು ನೀಡುವ ಸಾಲದ ಪ್ರಮಾಣ ಅತ್ಯಲ್ಪ.

ಸಾರ್ವಜನಿಕ ವಲಯದ ಬ್ಯಾಂಕುಗಳು ಕಡಮೆ ಲಾಭ ಮಾಡುವುದಕ್ಕೆ ಅಥವಾ ನಷ್ಟ ಅನುಭವಿಸುವುದಕ್ಕೆ ಹಾಗೂ ನಿಷ್ಕ್ರಿಯ ಆಸ್ತಿ ಪ್ರಮಾಣ ಹೆಚ್ಚಲಿಕ್ಕೆ ಹಲವು ಕಾರಣಗಳಿವೆ. ಸಾರ್ವಜನಿಕ ವಲಯದ ಬ್ಯಾಂಕುಗಳ ಸೇವಾ ಶುಲ್ಕ ಖಾಸಗಿ ಬ್ಯಾಂಕುಗಳಿಗೆ ಹೋಲಿಸಿದರೆ ಕಡಮೆ ಇರುತ್ತದೆ. ಸಾರ್ವಜನಿಕ ವಲಯದ ಬ್ಯಾಂಕುಗಳು ವಿಧಿಸುವ ಸಾಲದ ಮೇಲಿನ ಬಡ್ಡಿ ಪ್ರಮಾಣವೂ ಖಾಸಗಿ ಬ್ಯಾಂಕುಗಳಿಗಿಂತ ಕಡಮೆ ಇರುತ್ತದೆ. ಆದ್ಯತಾ ವಲಯಕ್ಕೆ ನೀಡುವ ಸಾಲದ ಪ್ರಮಾಣ ಹೆಚ್ಚಿರುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಖಾಸಗಿ ಬ್ಯಾಂಕುಗಳನ್ನು ನಡೆಸುವ ಕಾರ್ಪೋರೆಟ್ ದೈತ್ಯರೇ ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಸಾಲ ಪಡೆದು ಸಕಾಲದಲ್ಲಿ ಪಾವತಿಸಿರುವುದಿಲ್ಲ. ಆರ್‌ಬಿಐ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿನ ನಿಷ್ಕ್ರಿಯ ಸಾಲದ ಪ್ರಮಾಣದಲ್ಲಿ ಶೇ.70ರಷ್ಟು ಕಾರ್ಪೋರೆಟ್ ವಲಯಕ್ಕೆ ಸೇರಿದೆ.

ಅಂದರೆ, ಖಾಸಗಿ ಬ್ಯಾಂಕುಗಳನ್ನು ನಡೆಸುವ ಕಾರ್ಪೋರೆಟ್‌ಗಳು ಒಂದು ಕಡೆ ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಬೃಹತ್ ಮೊತ್ತದ ಸಾಲ ಪಡೆದು ಸಕಾಲದಲ್ಲಿ ಪಾವತಿಸದೇ ಅದು ನಿಷ್ಕ್ರಿಯ ಸಾಲವಾಗುವಂತೆ ಮಾಡುತ್ತಾರೆ. ಆ ಮೂಲಕ ಸಾರ್ವಜನಿಕ ವಲಯದ ಬ್ಯಾಂಕುಗಳ ಕಾರ್ಯಕ್ಷಮತೆ ಉತ್ತಮವಾಗಿಲ್ಲ ಎಂದು ಬಿಂಬಿಸುವ  ಪ್ರಯತ್ನ ಮಾಡುತ್ತಾರೆ. ಮತ್ತೊಂದು ಕಡೆ ಖಾಸಗಿ ವಲಯದ ಬ್ಯಾಂಕುಗಳ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಬಿಂಬಿಸುತ್ತಾ, ಅವುಗಳ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ. ಇದು ಕಾರ್ಪೋರೆಟ್‌ಗಳು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವ್ಯವಸ್ಥಿತವಾಗಿ ಮುಗಿಸುವ ಮತ್ತು ಖಾಸಗಿ ಬ್ಯಾಂಕುಗಳ ಕ್ಷೇತ್ರವ್ಯಾಪ್ತಿಯನ್ನು ವಿಸ್ತರಿಸಿ ಇಡೀ ಹಣಕಾಸು ಮಾರುಕಟ್ಟೆಯನ್ನು ತಮ್ಮ ಬಿಗಿ ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನ.

ಭಾರತೀಯ ರಿಸರ್ವ್ ಬ್ಯಾಂಕ್ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ 2017ರ ಸೆಪ್ಟೆಂಬರ್‌ವರೆಗೆ ಸಾರ್ವಜನಿಕ ವಲಯದ ಬ್ಯಾಂಕುಗಳ ನಿಷ್ಕ್ರಿಯ ಸಾಲವು 7.34 ಲಕ್ಷ ಕೋಟಿ ರುಪಾಯಿ. ಖಾಸಗಿ ವಲಯದ ಬ್ಯಾಂಕುಗಳ ನಿಷ್ಕ್ರಿಯ ಸಾಲದ ಪ್ರಮಾಣ 1.03 ಲಕ್ಷ ಕೋಟಿ ರುಪಾಯಿ. ಸಾರ್ವಜನಿಕ ವಲಯದ ಬ್ಯಾಂಕುಗಳ ನಿಷ್ಕ್ರಿಯ ಸಾಲದ ಪ್ರಮಾಣ ಹೆಚ್ಚಿದೆ ಅಂದರೆ ಅದಕ್ಕೆ ಮುಖ್ಯ ಕಾರಣ ನಮ್ಮ ಒಟ್ಟಾರೆ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳ ಒಟ್ಟು ಆಸ್ತಿ ಶೇ.87ರಷ್ಟಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 1.86 ಲಕ್ಷ ಕೋಟಿ ರುಪಾಯಿ ನಿಷ್ಕ್ರಿಯ ಸಾಲ ಹೊಂದಿದೆ. ನಂತರದ ಸ್ಥಾನದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ 57,630 ಕೋಟಿ ರುಪಾಯಿ. ಮೆಹುಲ್ ಚೊಕ್ಸಿ ಮತ್ತು ನೀರವ್ ಮೋದಿ ಹಗರಣದ ನಂತರ ಈ ಮೊತ್ತ ಮತ್ತಷ್ಟು ಹೆಚ್ಚಬಹುದು. ಬ್ಯಾಂಕ್ ಆಫ್ ಇಂಡಿಯಾ 49,307 ಕೋಟಿ ರು. ಬ್ಯಾಂಕ್ ಆಫ್ ಬರೋಡ 46,307 ಕೋಟಿ ರು., ಕೆನರಾ ಬ್ಯಾಂಕ್ 39,164 ಕೋಟಿ ರು. ಮತ್ತು ಯೂನಿಯ್ ಬ್ಯಾಂಕ್ ಆಫ್ ಇಂಡಿಯಾ 38,286 ಕೋಟಿ ರು. ನಿಷ್ಕ್ರಿಯ ಸಾಲ ಹೊಂದಿವೆ.

ಆರ್‌ಬಿಐ ವರದಿ ಪ್ರಕಾರ, 2017 ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಖಾಸಗಿ ವಲಯದ ಬ್ಯಾಂಕುಗಳ ಪೈಕಿ ಐಸಿಐಸಿಐ ಬ್ಯಾಂಕ್ ನಿಷ್ಕ್ರಿಯ ಸಾಲವು ಗರಿಷ್ಠಮಟ್ಟದಲ್ಲಿ ಅಂದರೆ 44237 ಕೋಟಿ ರುಪಾಯಿಗಳಷ್ಟಿದೆ. ಆಕ್ಸಿಸ್ ಬ್ಯಾಂಕ್ 22316 ಕೋಟಿ ರು., ಎಚ್‌ಡಿಎಫ್‌ಸಿ ಬ್ಯಾಂಕ್ 7644 ಕೋಟಿ ರು. ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ 5983 ಕೋಟಿ ರು. ನಿಷ್ಕ್ರಿಯ ಸಾಲ ಹೊಂದಿವೆ.

ಭಾರತೀಯ ರಿಸರ್ವ್ ಬ್ಯಾಂಕ್ ನ ಅರೆವಾರ್ಷಿಕ ಹಣಕಾಸು ಸ್ಥಿರತೆ ವರದಿ ಪ್ರಕಾರ, ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಅಪಾಯದಲ್ಲಿರುವ ಬಂಡವಾಳದ ಪ್ರಮಾಣವು ಮಾರ್ಚ್ -ಸೆಪ್ಟೆಂಬರ್ ಅವಧಿಯಲ್ಲಿ ಶೇ.13.6ರಿಂದ ಶೇ.13.9ಕ್ಕೆ ಏರಿದೆ. ನಿಷ್ಕ್ರಿಯ ಸಾಲದ ಪ್ರಮಾಣವು ಹೆಚ್ಚಿದೆ. ನಿಷ್ಕ್ರಿಯ ಸಾಲದ ಪೈಕಿ ಕಾರ್ಪೋರೆಟ್ ವಲಯದ ಸಾಲದ ಪ್ರಮಾಣವು ಶೇ.77ರಷ್ಟಿದೆ. ಅಂದರೆ, ಕೆಲವು ಕಾರ್ಪೋರೆಟ್ ಕಂಪನಿಗಳು ಮತ್ತು ಕಾರ್ಪೋರೆಟ್ ದೈತ್ಯರು ಬಹುದೊಡ್ಡ ಪ್ರಮಾಣದಲ್ಲಿ ಸುಸ್ತಿದಾರರಾಗಿದ್ದಾರೆ.

ಇದನ್ನೂ ಓದಿ : ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೊಚ್ಚಾರ್‌ ಭವಿಷ್ಯ ನಿರ್ಧರಿಸಲಿದೆಯೇ ಆರ್‌ಬಿಐ?

ಆರ್‌ಬಿಐನ ಹಿಂದಿನ ಹಣಕಾಸು ಸ್ಥಿರತೆ ವರದಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳ ಪೈಕಿ ಐದು ಬ್ಯಾಂಕುಗಳನ್ನು ಹೊರತುಪಡಿಸಿದರೆ ನಿಷ್ಕ್ರಿಯ ಸಾಲವು ಎರಡಂಕಿಗೆ ಏರಿದೆ ಎಂದು ತಿಳಿಸಿತ್ತು. ಇದೇ ಅವಧಿಯಲ್ಲಿ ಖಾಸಗಿ ಬ್ಯಾಂಕುಗಳು ಸಾಲದ ಪ್ರಮಾಣವನ್ನು ಸುಧಾರಿಸಿಕೊಂಡಿದ್ದರೂ ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಗಳ ನಿಷ್ಕ್ರಿಯ ಸಾಲದ ಪ್ರಮಾಣವು ಏರಿತ್ತು. 2012-2015ರ ನಡುವೆ ಸಾರ್ವಜನಿಕ ವಲಯದ ಬ್ಯಾಂಕುಗಳ ನಿಷ್ಕ್ರಿಯ ಸಾಲದ ಪ್ರಮಾಣ ತಗ್ಗುತ್ತಾ ಬಂದಿತ್ತು. ಬ್ಯಾಂಕುಗಳ ಬಂಡವಾಳ ಮತ್ತು ಮೀಸಲು ಪ್ರಮಾಣಕ್ಕೆ ಹೋಲಿಸಿದರೆ 2012ರಲ್ಲಿ ಶೇ.18ರಷ್ಟು ಇದ್ದ ನಿಷ್ಕ್ರಿಯ ಸಾಲದ ಪ್ರಮಾಣವು 2017 ಜೂನ್ ವೇಳೆಗೆ ಶೇ.76ಕ್ಕೆ ಜಿಗಿಯಿತು.

ಆರ್‌ಬಿಐ ವರದಿ ಪ್ರಕಾರ, ಐಸಿಐಸಿಐ ಬ್ಯಾಂಕ್ ಶೇ.15ರಷ್ಟು ಮತ್ತು ಆಕ್ಸಿಸ್ ಬ್ಯಾಂಕ್ ಶೇ.25ರಷ್ಟು ಮತ್ತು ಜೆ ಆಂಡ್ ಕೆ ಬ್ಯಾಂಕ್ ನಿಷ್ಕ್ರಿಯ ಸಾಲವು ಶೇ.43ರಷ್ಟಿತ್ತು. ಆರ್‌ಐ ವರದಿಯಲ್ಲಿನ ಪ್ರಮುಖ ಅಂಶ ಎಂದರೆ, ಸಾರ್ವಜನಿಕ ವಲಯದ ನಿಷ್ಕ್ರಿಯ ಸಾಲದ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇ.17ರಷ್ಟು ಏರಿಕೆಯಾಗಿದ್ದರೆ, ಖಾಸಗಿ ಬ್ಯಾಂಕುಗಳ ನಿಷ್ಕ್ರಿಯ ಸಾಲದ ಪ್ರಮಾಣವು ಶೇ.40.8ರಷ್ಟು ಏರಿದೆ. ಈ ಏರಿಕೆಯನ್ನು ತುಲನಾತ್ಮಕವಾಗಿ ಗಮನಿಸಿದರೆ ಬರುವ ವರ್ಷಗಳಲ್ಲಿ ಖಾಸಗಿ ವಲಯದ ನಿಷ್ಕ್ರಿಯ ಸಾಲದ ಪ್ರಮಾಣ ಸಾರ್ವಜನಿಕ ವಲಯದ ಬ್ಯಾಂಕುಗಳ ನಿಷ್ಕ್ರಿಯ ಸಾಲಕ್ಕಿಂತಲೂ ಹೆಚ್ಚಾಗಲಿದೆ. ಆರ್‌ಬಿಐ ಹೊಸದಾಗಿ ಪ್ರಕಟಿಸಿರುವ ಮಾರ್ಗಸೂಚಿಗಳ ಪ್ರಕಾರ ನಿಷ್ಕ್ರಿಯ ಸಾಲವನ್ನು ತ್ವರಿತವಾಗಿ ನಿರ್ವಹಿಸಲಾಗುತ್ತದೆ. ಅಂದರೆ, ನಿಷ್ಕ್ರಿಯ ಸಾಲವನ್ನು ದಿವಾಳಿ ಸಂಹಿತೆಯಡಿ ತಂದು ಅವುಗಳನ್ನು ಕಾಲಮಿತಿಯೊಳಗೆ ಹರಾಜು ಹಾಕಲಾಗುತ್ತದೆ. ಈ ಪ್ರಕ್ರಿಯೆಯಿಂದಾಗಿ ದೀರ್ಘ ಅವಧಿಯಲ್ಲಿ ನಿಷ್ಕ್ರಿಯ ಸಾಲದ ಪ್ರಮಾಣ ಗಣನೀಯವಾಗಿ ತಗ್ಗುತ್ತದೆ. ಶೇ.77ರಷ್ಟಿ ನಿಷ್ಕ್ರಿಯ ಸಾಲ ಹೊಂದಿರುವ ಕಾರ್ಪೋರೆಟ್ ವಲಯವು ಸಾಲದ ಹೊಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More