ನ್ಯಾಯದ ತಕ್ಕಡಿಯಲ್ಲೇ ಎದ್ದಿದ್ದ ಆತಂಕದ ಬಿರುಗಾಳಿಗೆ ತಣ್ಣೀರೆರಚಿದ ತೀರ್ಪು

ಭರವಸೆಯ ಅಂತಿಮ ಆಶಾಕಿರಣವಾಗಿ ನ್ಯಾಯಾಂಗವನ್ನೇ ಎದುರು ನೋಡುವ ಪರಿಸ್ಥಿತಿಯಲ್ಲಿ ನ್ಯಾಯಾಂಗದ ಒಳಗೇ ತನ್ನ ವ್ಯವಸ್ಥೆಯ ಬಗ್ಗೆ ಅಸಮಾಧಾನಗಳು, ಬಂಡಾಯದ ದನಿಗಳು ಭುಗಿಲೆದ್ದರೆ? ಹೌದು, ಸದ್ಯ ಸರ್ವೋಚ್ಚ ನ್ಯಾಯಾಲಯದ ವಿಷಯದಲ್ಲಿ ಆಗುತ್ತಿರುವುದು ಕೂಡ ಅದೇ

ಒಂದೆಡೆ, ಭ್ರಷ್ಟ ಮತ್ತು ಸ್ವಜನ ಪಕ್ಷಪಾತ ಎಂಬ ಕಳಂಕಗಳು ಶಾಸಕಾಂಗ ಮತ್ತು ಕಾರ್ಯಾಂಗವನ್ನು ಜನರ ಕಣ್ಣಲ್ಲಿ ತುಚ್ಛವಾಗಿಸಿದ್ದರೆ, ಮತ್ತೊಂದೆಡೆ ಪ್ರಜಾಪ್ರಭುತ್ವದ ‘ಕಾವಲು ನಾಯಿ’ ಎಂದೇ ಕರೆಯಲಾಗುವ ಮಾಧ್ಯಮ, ಜನಸಾಮಾನ್ಯರ ದನಿಯಾಗುವ ಬದಲು ಉದ್ಯಮ ಮತ್ತು ಅಧಿಕಾರಸ್ಥರ ‘ಸಾಕು ನಾಯಿ’ಯಾಗಿದೆ ಎಂಬ ಆರೋಪಗಳು ಸಾಮಾನ್ಯವಾಗಿವೆ. ಇಂತಹ ಹೊತ್ತಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ಜನಸಾಮಾನ್ಯರ ನಂಬಿಕೆ ಕಳಚಿಬೀಳದಂತೆ ಕಾಯುವ ಹೊಣೆಗಾರಿಕೆ ದೇಶದ ನ್ಯಾಯಾಂಗದ ಮೇಲಿದೆ. ಈಗಾಗಲೇ ಜನಸಾಮಾನ್ಯರು ಭರವಸೆಯ ಅಂತಿಮ ಆಶಾಕಿರಣವಾಗಿ ನ್ಯಾಯಾಂಗವನ್ನೇ ಎದುರುನೋಡುತ್ತಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ನ್ಯಾಯಾಂಗದ ಒಳಗೇ ತನ್ನ ವ್ಯವಸ್ಥೆಯ ಬಗ್ಗೆ ನಿರಂತರ ಅಸಮಾಧಾನಗಳು, ಬಂಡಾಯದ ದನಿಗಳು ಭುಗಿಲೆದ್ದರೆ? ಹೌದು, ಸದ್ಯ ದೇಶದ ಸರ್ವೋಚ್ಚ ನ್ಯಾಯಾಲಯದ ವಿಷಯದಲ್ಲಿ ಆಗುತ್ತಿರುವುದು ಕೂಡ ಅದೇ.

ಕಳೆದ ಕೆಲವು ತಿಂಗಳಿಂದ ಸುಪ್ರೀಂಕೋರ್ಟ್ ಮತ್ತು ಕೆಲವು ಹೈಕೋರ್ಟ್‌ಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ, ಆ ವ್ಯವಸ್ಥೆಯ ಲೋಪ ಮತ್ತು ಮಿತಿಗಳ ಬಗ್ಗೆ ಅದರ ಒಳಗಿನಿಂದಲೇ ದೊಡ್ಡ ಪ್ರಮಾಣದ ಬಂಡಾಯವೊಂದು ಭುಗಿಲೆದ್ದಿರುವುದನ್ನು ತಳ್ಳಿಹಾಕಲಾಗದು.

ಅದರಲ್ಲೂ ಕಳೆದ ಜನವರಿಯಲ್ಲಿ ಸುಪ್ರೀಂಕೋರ್ಟಿನ ನಾಲ್ವರು ಅತ್ಯಂತ ಹಿರಿಯ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸಿ, ನ್ಯಾಯಾಂಗದ ಸುಧಾರಣೆಯ ಬಗ್ಗೆ ತಮ್ಮ ಒಳದನಿಗೆ ಬೆಲೆ ಇಲ್ಲದಾಗಿದೆ ಎಂದು ದೇಶದ ಜನರ ಎದುರು ಕಣ್ಣೀರುಗರೆದಿದ್ದರು. ಅದಾದ ಬಳಿಕ ಅಂತಹದ್ದೇ ಸಾಲು ಸಾಲು ಅಸಮಾಧಾನದ, ಅಸಹಾಯಕತೆಯ ದನಿಗಳು ಅದೇ ಉನ್ನತ ನ್ಯಾಯಮೂರ್ತಿಗಳ ಕಡೆಯಿಂದ ಕೇಳಿಬರುತ್ತಲೇ ಇವೆ.

ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಪ್ರಕರಣಗಳ ಹಂಚಿಕೆಯ ವೇಳೆ ನ್ಯಾಯಮೂರ್ತಿಗಳ ಹಿರಿತನ, ಅನುಭವದಂತಹ ಅರ್ಹತೆಯ ಅಂಶಗಳನ್ನು ಗಾಳಿಗೆ ತೂರಲಾಗುತ್ತಿದೆ. ರೋಸ್ಟರ್ ನಿಯಮಗಳನ್ನು ಮೀರಿ ಪ್ರಕರಣಗಳ ಹಂಚಿಕೆ ನಡೆಯುತ್ತಿದೆ. ಆ ಮೂಲಕ ಪರೋಕ್ಷವಾಗಿ ಅಧಿಕಾರಸ್ಥರ ಅನುಕೂಲಕ್ಕೆ ನ್ಯಾಯವನ್ನು ತಿರುಚಲಾಗುತ್ತಿದೆ. ದೇಶದ ನ್ಯಾಯಾಂಗ ವ್ಯವಸ್ಥೆಯೊಂದಿಗೆ ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ ಎಂದು ನಾಲ್ವರು ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿಯಲ್ಲಿ ಗದ್ಗದಿತರಾಗಿ ಹೇಳಿದಾಗ, ಇಡೀ ದೇಶವೇ ಒಂದು ಕ್ಷಣ ಬೆಕ್ಕಸಬೆರಗಾಗಿತ್ತು.

ಆ ಆಘಾತದಿಂದ ದೇಶ ಹೊರಬರುವ ಮುನ್ನವೇ, ಅದೇ ನಾಲ್ವರು ಹಿರಿಯ ನ್ಯಾಯಮೂರ್ತಿಗಳಲ್ಲಿ ಒಬ್ಬರಾದ, ನಿರ್ಭಿಡೆಯ ವ್ಯಕ್ತಿತ್ವದ ನ್ಯಾ.ಜೆ ಚಲಮೇಶ್ವರ್ ಅವರು ಮತ್ತೊಂದು ಗಂಭೀರ ಆತಂಕದ ಬಗ್ಗೆ ದೇಶದ ಗಮನ ಸೆಳೆದರು. ನ್ಯಾಯಾಂಗದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗದ ಹಸ್ತಕ್ಷೇಪ ಅತಿಯಾಗಿದ್ದು, ದೈನಂದಿನ ಕಾರ್ಯನಿರ್ವಹಣೆ ಕೂಡ ಅಪಾಯದಲ್ಲಿದೆ ಎಂದು ಮುಖ್ಯನ್ಯಾಯಮೂರ್ತಿ ಮತ್ತು ಇತರ ಎಲ್ಲಾ ನ್ಯಾಯಮೂರ್ತಿಗಳಿಗೆ ಬಹಿರಂಗ ಪತ್ರ ಬರೆದರು. ಕರ್ನಾಟಕ ಹೈಕೋರ್ಟ್‌ ನ್ಯಾಯಾಧೀಶರೊಬ್ಬರ ನೇಮಕ ಸಂಬಂಧ ಸರ್ಕಾರ ಅನಗತ್ಯ ಮೂಗು ತೂರಿಸುತ್ತಿದೆ. ಕೊಲಿಜಿಯಂ ವ್ಯವಸ್ಥೆಯ ತೀರ್ಮಾನವನ್ನು ಬದಿಗೊತ್ತಿ ತನ್ನದೇ ಆದೇಶ ಚಲಾಯಿಸುತ್ತಿದೆ ಎಂಬ ಅವರ ಕಾಳಜಿಯ ಮಾತುಗಳು ಮತ್ತೊಂದು ಸುತ್ತಿನ ಆತಂಕದ ಅಲೆ ಎಬ್ಬಿಸಿದವು.

ಇದನ್ನೂ ಓದಿ : ಸಿಜೆಐ ದೀಪಕ್ ಮಿಶ್ರಾ ವಿರುದ್ಧ ತನಿಖೆಗೆ ಪ್ರಶಾಂತ್ ಭೂಷಣ್ ದೂರು ನೀಡಿದ್ದೇಕೆ?

ಅದಾದ ಒಂದೆರಡು ದಿನಗಳಲ್ಲೇ, ಸಂದರ್ಶನವೊಂದರಲ್ಲಿ ಮೂರು ತಿಂಗಳಲ್ಲಿ ನಿವೃತ್ತಿಯಾಗಲಿರುವ ತಾವು, ಆ ಬಳಿಕ ಯಾವುದೇ ಸರ್ಕಾರದ ಯಾವುದೇ ಹುದ್ದೆಗಳನ್ನೂ ಒಪ್ಪಿಕೊಳ್ಳುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿ ಹಲವರ ಹುಬ್ಬೇರಿಸಿದರು. ಆ ಮೂಲಕ ತಮ್ಮ ಈ ಹಿಂದಿನ ನ್ಯಾಯಾಂಗ ವ್ಯವಸ್ಥೆ ಸುಧಾರಣೆಯ ಮಾತು ಮತ್ತು ಪ್ರಯತ್ನಗಳ ಹಿಂದೆ ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗದ ಪರ ಕಾಳಜಿಯ ಹೊರತಾಗಿ ಬೇರಾವುದೇ ಉದ್ದೇಶವಿಲ್ಲ ಎಂಬುದನ್ನು ಜಗಜ್ಜಾಹೀರು ಮಾಡಿದರು.

ಆ ಬಳಿಕ ಕಳೆದ ಭಾನುವಾರ ನ್ಯಾಯಾಂಗ ಸುಧಾರಣೆ ಕುರಿತ ಪುಸ್ತಕವೊಂದರ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ದೇಶದ ಎರಡನೇ ಅತಿ ಹಿರಿಯ ನ್ಯಾಯಮೂರ್ತಿ ನ್ಯಾ. ಚಲಮೇಶ್ವರ್, “ದೇಶದಲ್ಲಿ ನ್ಯಾಯಾಧೀಶರ ನೇಮಕ ಅವರ ಅರ್ಹತೆ, ಅನುಭವದ ಮೇಲೆ ನಡೆಯುವುದಕ್ಕಿಂತ ಹೆಚ್ಚಾಗಿ ಅವರ ಬಗೆಗಿನ ‘ಅಭಿಪ್ರಾಯ’ಗಳ(ಇಂಪ್ರೆಷನ್ಸ್) ಮಾನದಂಡದ ಮೇಲೆ ನಡೆಯುತ್ತಿದೆ. ಆದರೆ, ನಿಜವಾಗಿಯೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕಾದರೆ, ನ್ಯಾಯಾಧೀಶರ ನೇಮಕ ಪಾರದರ್ಶಕವಾಗಿರಬೇಕು. ನ್ಯಾಯಾಧೀಶರ ಕಾರ್ಯಕ್ಷಮತೆಯ ತುಲನೆಯ ಮೇಲೆ ಅವರ ಅರ್ಹತೆ ನಿರ್ಧಾರವಾಗಬೇಕು,” ಎಂದಿದ್ದಾರೆ.

ಆ ಮೂಲಕ ದೇಶದ ನ್ಯಾಯಾಂಗದ ವ್ಯವಸ್ಥೆಯ ಸಮಸ್ಯೆಯ ಮೂಲ ಏನು ಎಂಬುದನ್ನು ತಮ್ಮ ಎಂದಿನ ದಿಟ್ಟ ಶೈಲಿಯಲ್ಲೇ ಜನರ ಮುಂದಿಟ್ಟಿದ್ದಾರೆ. ಅದೇ ವೇಳೆ, ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳ ಸಂಖ್ಯೆ ಮತ್ತು ನ್ಯಾಯಾಧೀಶರ ವರ್ಗಾವಣೆಯ ನೀತಿಯ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಅದೇ ವೇಳೆ, ಮತ್ತೊಬ್ಬ ಹಿರಿಯ ನ್ಯಾಯಮೂರ್ತಿ ಹಾಗೂ ಜನವರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ನ್ಯಾ. ಕುರಿಯನ್ ಜೋಸೆಫ್ ಕೂಡ ಚಲಮೇಶ್ವರ್ ಅವರಿಗೆ ದನಿಗೂಡಿಸಿದ್ದಾರೆ. ತಾವೂ ಕೂಡ ನಿವೃತ್ತಿಯ ಬಳಿಕ ಯಾವುದೇ ಸರ್ಕಾರದ ಯಾವುದೇ ಹುದ್ದೆಯ ಪ್ರಸ್ತಾಪಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ. ಜೊತೆಗೆ, “ನ್ಯಾಯಾಂಗ ಮತ್ತು ಮಾಧ್ಯಮಗಳೆರಡೂ ಪ್ರಜಾಪ್ರಭುತ್ವದ ಕಾವಲು ನಾಯಿಗಳು. ಅವು ತಮ್ಮ ಒಡೆಯನ ಆಸ್ತಿಗೆ ಅಪಾಯ ಎದುರಾದಾಗ ತನ್ನ ಒಡೆಯನನ್ನು ಎಚ್ಚರಿಸಲು ಬೊಗಳಲೇಬೇಕು. ಹಾಗೆ ನಿರಂತರ ಬೊಗಳಿಯೂ ಮಾಲೀಕ ಎಚ್ಚರವಾಗದೇ ಇದ್ದರೆ, ಆಗ ಕಚ್ಚಿ ಎಚ್ಚರಿಸುವುದು ಅನಿವಾರ್ಯ. ಆ ಅರ್ಥದಲ್ಲಿ ಬೊಗಳುವ ನಾಯಿ ಕಚ್ಚುವುದಿಲ್ಲ ಎಂಬ ಹಳೆಯ ಗಾದೆ ಮಾತಿಗೆ ಈಗಿನ ಪರಿಸ್ಥಿತಿ ವ್ಯತಿರಿಕ್ತ,” ಎಂದು ಮಾರ್ಮಿಕವಾಗಿ ನುಡಿದ್ದಾರೆ.

ಆ ಮೂಲಕ ದೇಶದ ಮಾಧ್ಯಮ ಮತ್ತು ನ್ಯಾಯಾಂಗದ ಹೊಣೆಗಾರಿಕೆಯನ್ನು ಬದಲಾದ ಕಾಲದ ಹಿನ್ನೆಲೆಯಲ್ಲಿ ನ್ಯಾ. ಕುರಿಯನ್ ಜೋಸೆಫ್ ವಿಶ್ಲೇಷಿಸಿದ್ದಾರೆ.

ನಿವೃತ್ತಿಯ ಬಳಿಕ ಯಾವುದೇ ಸ್ಥಾನಮಾನವನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ಇಬ್ಬರು ನ್ಯಾಯಮೂರ್ತಿಗಳ ಘೋಷಣೆಗೆ ಹಿನ್ನೆಲೆಯಾಗಿರುವ ಸಂಗತಿಗಳಲ್ಲಿ ಪ್ರಮುಖವಾದುದು, ಈ ಹಿಂದಿನ ಇಬ್ಬರು ಮುಖ್ಯ ನ್ಯಾಯಮೂರ್ತಿಗಳು ನಿವೃತ್ತಿಯಾಗುತ್ತಲೇ ಸರ್ಕಾರದ ಆಯಕಟ್ಟಿನ ಸ್ಥಾನಗಳಿಗೆ ನೇಮಕವಾಗಿದ್ದು ಮತ್ತು ಆ ಬಗ್ಗೆ ಸ್ವತಃ ನ್ಯಾಯಾಂಗ ಮತ್ತು ಸಾರ್ವಜನಿಕ ವಲಯದಲ್ಲಿ ಕೇಳಿಬಂದ ವ್ಯಾಪಕ ಟೀಕೆಗಳು. ನಿವೃತ್ತ ಸಿಜೆಐ ಪಿ ಸದಾಶಿವನ್ ಅವರು ನ್ಯಾಯಾಂಗದ ತಮ್ಮ ಸೇವೆ ಮುಗಿಯುತ್ತಲೇ ಕೇರಳ ರಾಜ್ಯಪಾಲರಾಗಿ ನೇಮಕವಾಗಿದ್ದರು. ಆ ಬಳಿಕ ಕರ್ನಾಟಕ ಮೂಲದ ನ್ಯಾ. ಎಚ್ ಎಲ್ ದತ್ತು ಕೂಡ ಸಿಜೆಐ ಆಗಿ ತಮ್ಮ ಸೇವಾವಧಿ ಪೂರ್ಣಗೊಳಿಸಿ ನಿವೃತ್ತರಾದ ಬಳಿಕ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಹೊಣೆಗಾರಿಕೆಯನ್ನು ಒಪ್ಪಿಕೊಂಡಿದ್ದರು.

ಇತ್ತೀಚಿನ ವರ್ಷಗಳಲ್ಲಿ ಆಳುವ ಸರ್ಕಾರಗಳು, ದೇಶದ ಅತ್ಯುನ್ನತ ಸಂವಿಧಾನಿಕ ಹುದ್ದೆಯಲ್ಲಿದ್ದು ನ್ಯಾಯಾಂಗದ ಚುಕ್ಕಾಣಿ ಹಿಡಿದವರಿಗೆ, ನಿವೃತ್ತಿಯ ಬಳಿಕ ಲಾಭದಾಯಕ ಹುದ್ದೆಗಳ ಆಮಿಷವೊಡ್ಡುತ್ತಿವೆ. ಇದು ನ್ಯಾಯಾಂಗದ ಕಾರ್ಯನಿರ್ವಹಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರೊಂದಿಗೆ, ಅದರ ವಿಶ್ವಾಸಾರ್ಹತೆಗೂ ಪೆಟ್ಟು ನೀಡುತ್ತಿದೆ ಎಂಬ ಆತಂಕ ಸ್ವತಃ ನ್ಯಾಯಾಂಗದ ಒಳಗಿನಿಂದಲೇ ಕೇಳಿಬಂದಿತ್ತು.

ಈ ನಡುವೆ, ಗುಜರಾತಿನ ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ವಿರುದ್ಧದ ಆರೋಪದ ಕುರಿತು ವಿಚಾರಣೆ ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಾಧೀಶ ಬಿ ಎಚ್ ಲೋಯಾ ಅವರ ದಿಢೀರ್ ಸಾವಿನ ಕುರಿತ ಪ್ರಕರಣದ ವಿಚಾರಣೆಯ ವಿಷಯದಲ್ಲೂ ಸ್ವತಃ ನ್ಯಾಯಾಂಗದ ಉನ್ನತ ವ್ಯಕ್ತಿಗಳಿಂದಲೇ ಅಸಮಾಧಾನ ವ್ಯಕ್ತವಾಗಿತ್ತು. ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರಿಗೆ ವಹಿಸುವ ವಿಷಯದಲ್ಲಿ ಸಿಜೆಐ ರೋಸ್ಟರ್ ವ್ಯವಸ್ಥೆಯನ್ನು ಅನುಸರಿಸಿಲ್ಲ. ಅಧಿಕಾರಸ್ಥರಿಗೆ ಅನುಕೂಲಕರವಾಗುವ ದಿಸೆಯಲ್ಲಿ ನ್ಯಾಯಾಂಗ ಕಾರ್ಯನಿರ್ವಹಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕರ ಎಂದು ನಾಲ್ವರು ಹಿರಿಯ ನ್ಯಾಯಮೂರ್ತಿಗಳು, ಲೋಯಾ ಪ್ರಕರಣವನ್ನು ಉಲ್ಲೇಖಿಸಿ, ತಮ್ಮ ಐತಿಹಾಸಿಕ ಪತ್ರಿಕಾಗೋಷ್ಠಿಯಲ್ಲೇ ಹೇಳಿದ್ದರು.

ನ್ಯಾಯಾಂಗದ ಅತ್ಯುನ್ನತ ಸ್ಥಾನದಲ್ಲಿರುವವರ ಕಾರ್ಯನಿರ್ವಹಣೆಯ ಬಗ್ಗೆ ಹೀಗೆ ಸಾಲು-ಸಾಲು ಆತಂಕಗಳು ವ್ಯಕ್ತವಾಗುತ್ತಿರುವ ಹೊತ್ತಿಗೇ, ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೆ ಪ್ರಕರಣಗಳ ಹಂಚಿಕೆಯ ಸಿಜೆಐ ಅವರ ಆಡಳಿತಾತ್ಮಕ ಅಧಿಕಾರದ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸ್ವತಃ ಸಿಜೆಐ ನೇತೃತ್ವದ ತ್ರಿಸದಸ್ಯ ಪೀಠ ಬುಧವಾರ ತನ್ನ ತೀರ್ಪು ಪ್ರಕಟಿಸಿದೆ.

ಸಿಜೆಐ ಸ್ಥಾನ ಅತ್ಯುನ್ನತ ಸಂವಿಧಾನಿಕ ಹುದ್ದೆ. ಅದರ ವಿಶ್ವಾಸಾರ್ಹತೆಗೆ ಧಕ್ಕೆ ತರುವಂತಹ ಕ್ರಮಗಳು ಸರಿಯಲ್ಲ. ಪ್ರಕರಣಗಳ ಹಂಚಿಕೆಯ ಅವರ ಪರಮಾಧಿಕಾರವನ್ನು ಪ್ರಶ್ನಿಸುವುದನ್ನು ನ್ಯಾಯಾಲಯ ಒಪ್ಪಲಾಗದು ಎಂದು ಸ್ವತಃ ಸಿಜೆಐ ಅವರನ್ನೊಳಗೊಂಡ ಮೂವರು ನ್ಯಾಯಮೂರ್ತಿಗಳ ಪೀಠ ತೀರ್ಪು ನೀಡಿದೆ. ಆ ಮೂಲಕ ಜನವರಿಯಲ್ಲಿ ನಾಲ್ವರು ಹಿರಿಯ ನ್ಯಾಯಮೂರ್ತಿಗಳ ಬಹಿರಂಗ ಅಸಮಾಧಾನದ ಬಳಿಕ ನ್ಯಾಯಾಂಗದ ಸುಧಾರಣೆಯ ಕೂಗಿಗೆ ತಾತ್ಕಾಲಿಕ ವಿರಾಮ ನೀಡಿದೆ. ನ್ಯಾಯಾಂಗದ ತಕ್ಕಡಿಯಲ್ಲಿ ಎದ್ದಿದ್ದ ಆತಂಕದ ಬಿರುಗಾಳಿಗೆ ಸದ್ಯ ಈ ತೀರ್ಪು ತಣ್ಣೀರೆರಚಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More