ಜಮ್ಮುವಿನಲ್ಲಿ ದ್ವೇಷಕ್ಕೆ ಬಲಿಯಾದ ಬಾಲಕಿ; ಅಸಲಿಗೆ ಅಲ್ಲಿ ನಡೆದದ್ದೇನು?

ಇತ್ತೀಚೆಗೆ ಜಮ್ಮು-ಕಾಶ್ಮೀರದಲ್ಲಿ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳನ್ನು ರಕ್ಷಿಸಲು ಧರ್ಮದ ಗುರಾಣಿಯನ್ನೇ ಬಳಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಪತ್ರಕರ್ತ ಸಮೀರ್ ಯಾಸೀರ್ ಬಿಬಿಸಿ ಸುದ್ದಿವಾಹಿನಿಗೆ ಬರೆದ ವರದಿಯ ಯಥಾರೂಪ ಇಲ್ಲಿದೆ

ಅಂದು ಜನವರಿ ೧೭ರ ಬೆಳಗ್ಗೆ, ಮೊಹಮ್ಮದ್ ಯೂಸುಫ್ ಪುಜ್ವಲಾ ಅವರು ತಮ್ಮ ಮನೆಯ ಎದುರು ಕೂತಿದ್ದರು. ಅವರ ನೆರೆಹೊರೆಯವರೊಬ್ಬರು ಹತ್ತಿರಕ್ಕೆ ಓಡಿಬರುತ್ತಾರೆ. ಬಂದವರೇ ಆತಂಕದಲ್ಲಿ ಸುದ್ದಿಯೊಂದನ್ನು ಹೇಳುತ್ತಾರೆ: “ನಾನು ಆಸೀಫಾ ಬಾನೋಳನ್ನು ನೋಡಿದೆ, ಆಕೆಯ ದೇಹ ಇಲ್ಲೇ ಸ್ವಲ್ಪ ದೂರದಲ್ಲಿ ಕಾಡಿನಲ್ಲಿ ಪೊದೆಯ ಮಧ್ಯೆ ಸಿಕ್ಕಿದೆ!”

“ನನಗೆ ಗೊತ್ತು, ನನ್ ಮಗಳಿಗೆ ಏನೋ ಆಗಬಾರದ್ದು ಆಗಿದೆ ಅಂತ,” ಎಂದು ೫೨ ವರ್ಷ ವಯಸ್ಸಿನ ಪುಜ್ವಲಾ ಹೇಳುತ್ತಿರುವಾಗ, ಅವರ ಕಣ್ಣುಗಳು ಆತಂಕದಲ್ಲಿ ಮುಳುಗಿದ್ದವು. ಜೊತೆಯಲ್ಲೇ ಕೂತಿದ್ದ ಅವರ ಹೆಂಡತಿ ನಸೀಮಾ ಬೀಬಿ ಒಂದೇ ಸಮನೇ ಅಳುತ್ತ, ಆಸೀಫಾಳ ಹೆಸರನ್ನು ಕೂಗುತ್ತ ಮರುಗುತ್ತಿದ್ದರು.

ಪುಜ್ವಲಾ ಅವರು ಅಲೆಮಾರಿ ಮುಸ್ಲಿಂ ಬುಡಕಟ್ಟು ‘ಗುಜ್ಜಾರ್’ ಸಮುದಾಯಕ್ಕೆ ಸೇರಿದವರು. ಅವರು ಹಿಮಾಲಯದ ಸುತ್ತಲಿನ ಪ್ರದೇಶದಲ್ಲಿ ಕುರಿ ಹಾಗು ದನಗಳನ್ನು ಮೇಯಿಸುತ್ತ ಅಲ್ಲಿ ಬಿಡಾರ ಹೂಡಿಕೊಂಡು ಇದ್ದವರು.

ಆಸೀಫಾ ಹೇಗೆ ಕಣ್ಮರೆಯಾದಳು?

ಪುಟ್ಟ ಬಾಲಕಿ ಆಸೀಫಾ ಜ.೧೦ರಂದು ಕಣ್ಮರೆಯಾಗುತ್ತಾಳೆ. ಆಸೀಫಾ ಕುಟುಂಬ ವಾಸಿಸುತ್ತಿದ್ದದು ಪೂರ್ವ ಜಮ್ಮುವಿನ ಕಥುವಾ ಪ್ರದೇಶದಲ್ಲಿ. ಮಧ್ಯಾಹ್ನದಂದು ತಾಯಿ ನಸೀಮಾ ಬೀಬಿ, “ಆಸೀಫಾ ಕುದುರೆಗಳನ್ನು ಕರೆತರಲು ಹೋಗಿದ್ದಳಲ್ಲ?” ಎಂದು ನೆನಪಿಸಿಕೊಳ್ಳುತ್ತಾಳೆ. ಆದರೆ ಕುದುರೆಗಳು ಮನೆಗೆ ಬಂದಿರುತ್ತವೆ, ಆಸೀಫಾ ಮಾತ್ರ ಬಂದಿರುವುದಿಲ್ಲ. ಇದನ್ನು ತಿಳಿದ ನಸೀಮಾ, ತನ್ನ ಗಂಡನಿಗೆ ತಿಳಿಸುತ್ತಾಳೆ. ಪುಜ್ವಲಾ ಅಕ್ಕಪಕ್ಕದವರನ್ನು ಸೇರಿಸಿಕೊಂಡು ಲಾಟೀನು, ಮೊಬೈಲ್ ಪ್ಲ್ಯಾಶ್, ಕೊಡಲಿ ಹಿಡಿದುಕೊಂಡು ಸುತ್ತಲ ಕಾಡೆಲ್ಲ ಹುಡುಕಿಬರುತ್ತಾರೆ, ಹಗಲು ಕಳೆದು ಕತ್ತಲಾಯಿತೇ ಹೊರತು ಮಗಳು ಮನೆಗೆ ಬರಲಿಲ್ಲ.

ಎರಡು ದಿನ ಕಳೆದ ನಂತರ (ಜ.೧೨) ಮನೆಯವರು ಪೊಲೀಸರಿಗೆ ದೂರು ಕೊಡುತ್ತಾರೆ. ಆದರೆ, ಆಸೀಫಾ ತಂದೆ ಹೇಳುವಂತೆ ಪೊಲೀಸರು ಏನೂ ಸಹಾಯ ಮಾಡಲಿಲ್ಲ. ಒಬ್ಬ ಅಧಿಕಾರಿಯಂತೂ, “ನಿನ್ನ ಮಗಳು ಯಾವುದೋ ಹುಡುಗನ ಜೊತೆ ಓಡಿಹೋಗಿರಬೇಕು ನೋಡಿ!” ಎಂದು ವ್ಯಂಗ್ಯವಾಗಿ ಹೇಳುತ್ತಾನೆ.

ಪೊಲೀಸ್ ನಿರ್ಲಕ್ಷ್ಯದಿಂದ ಕಂಗೆಟ್ಟ ಗುಜ್ಜಾರ್ ಸಮುದಾಯ ಪ್ರತಿಭಟನೆ ಆರಂಭಿಸುತ್ತದೆ, ಆಸೀಫಾ ನಾಪತ್ತೆಯ ವಿಷಯ ಎಲ್ಲರಿಗೆ ತಿಳಿಯುತ್ತದೆ. ರಾಜ್ಯ ಹೆದ್ದಾರಿಗಳನ್ನು ತಡೆದು ಆಸೀಫಾಳನ್ನು ಹುಡುಕಿಕೊಡಲು ಇಬ್ಬರು ಅಧಿಕಾರಿಗಳನ್ನು ನೇಮಿಸುವಂತೆ ಒತ್ತಾಯಿಸಿ ಪ್ರತಿಭಟನೆಯನ್ನು ಮುಂದುವರಿಸುತ್ತಾರೆ. ಒತ್ತಾಯದ ಮೇಲೆ ಒಬ್ಬ ಅಧಿಕಾರಿಯನ್ನು ಪೊಲೀಸ್ ಇಲಾಖೆ ನೇಮಿಸುತ್ತದೆ. ಆತನ ಹೆಸರು ದೀಪಕ್ ಖಜುರಿಯಾ. ವಿಚಿತ್ರವೆಂದರೆ, ಆಸೀಫಾ ಪ್ರಕರಣದಲ್ಲಿ ಅರೆಸ್ಟ್ ಆದ ಪೊಲೀಸ್ ಅಧಿಕಾರಿ ಆತನೇ!

ಐದು ದಿನಗಳ ಸತತ ಹುಡುಕಾಟದ ನಂತರ ಆಸೀಫಾ ದೇಹ ಸಿಗುತ್ತದೆ. “ದೇಹ ಆಸೀಫಾಳದ್ದೇ ಎಂದು ಗುರುತು ಹಿಡಿಯದಷ್ಟು ವಿಕಾರವಾಗಿತ್ತು. ಕಾಲುಗಳನ್ನು ಮುರಿಯಲಾಗಿತ್ತು. ಹಲ್ಲಿನಿಂದ ಕಚ್ಚಿದ ಗಾಯಗಳು ದೇಹದ ತುಂಬೆಲ್ಲ ಕಾಣಿಸುತ್ತಿದ್ದವು. ಕಾಲಿನ ಉಗುರುಗಳು ನೀಲಿ ಬಣ್ಣಕ್ಕೆ ತಿರುಗಿದ್ದವು,” ಎಂದು ಪುಜ್ವಲಾ ಮಗಳ ಸ್ಥಿತಿಯನ್ನು ನೆನಪಿಸಿಕೊಂಡು ಹಾಗೂ ಹೆಂಡತಿ ನಸೀಮಾ ಕಾಡಿಗೇ ಹೋಗಿ ತನ್ನ ಮಗಳನ್ನು ನೋಡಲು ತವಕಿಸುತ್ತಿದ್ದುದನ್ನು ಆಗಾಗ ನೆನಪಿಸಿಕೊಳ್ಳುತ್ತಾರೆ.

ಜ.೨೩ರಂದು ಆಸೀಫಾಳ ದೇಹ ಸಿಕ್ಕ ಆರು ದಿನಗಳ ಬಳಿಕ, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ರಾಜ್ಯ ಪೊಲೀಸ್ ಇಲಾಖೆಯ ಅಪರಾಧ ವಿಭಾಗದಿಂದ ತನಿಖೆ ನಡೆಸುವಂತೆ ಆದೇಶಿಸುತ್ತಾರೆ. ತನಿಖಾಧಿಕಾರಿಗಳ ಪ್ರಕಾರ, ಆಸೀಫಾಳನ್ನು ಸ್ಥಳೀಯ ದೇವಸ್ಥಾನದಲ್ಲಿ ಪ್ರಜ್ಞಾಹೀನಗೊಳಿಸಿ ಕೆಲ ದಿನಗಳವರೆಗೆ ಕೂಡಿಡಲಾಗಿತ್ತು. ಚಾರ್ಜ್‌ಶೀಟ್‌ನಲ್ಲಿ ಆರೋಪಿಸಿದಂತೆ ಆಕೆಯ ಮೇಲೆ ಅತ್ಯಾಚಾರ ಮಾಡಿ ಹಾಗೂ ಚಿತ್ರಹಿಂಸೆ ಕೊಡಲಾಗಿದೆ. ಕತ್ತು ಹಿಸುಕಿ ಕಲ್ಲಿನಿಂದ ಹಲವಾರು ಬಾರಿ ಜಜ್ಜಿ ಸಾಯಿಸಲಾಗಿದೆ!

ಈ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನಿವೃತ್ತ ಸರಕಾರಿ ಅಧಿಕಾರಿ ಸಂಜೀರಾಮ್ (೬೦), ಪೊಲೀಸ್ ಅಧಿಕಾರಿಗಳಾದ ಸುರೇಂದರ್ ವರ್ಮಾ, ಆನಂದ್ ದತ್ತಾ, ತಿಲಕ್ ರಾಜ್, ದೀಪಕ್ ಖಜುರಿಯಾ, ಸಂಜೀರಾಮ್ ಮಗ ವಿಶಾಲ್, ವಿಶಾಲ್‌ನ ಸೋದರ ಸಂಬಂಧಿ (ಬಾಲಾಪರಾಧಿ) ಹಾಗೂ ವಿಶಾಲ್‌ನ ಸ್ನೇಹಿತ ಪರ್‌ವೇಶ್ ಭಾಗಿಯಾಗಿರುತ್ತಾರೆ. ತನಿಖಾಧಿಕಾರಿಗಳು ಆರೋಪಿಸುವಂತೆ, ಆಸೀಫಾಳನ್ನು ಹುಡುಕಲು ಸಹಕರಿಸಿದ ಪೊಲೀಸರು ಆಸೀಫಾಳ ದೇಹ ಪೊರೆನ್ಸಿಕ್ ಲ್ಯಾಬ್‌ಗೆ ಹೋಗುವುದಕ್ಕಿಂತ ಮುಂಚೆ ಆಕೆಯ ರಕ್ತಸಿಕ್ತ ದೇಹವನ್ನು ತೊಳೆದು ಹಾಗೂ ಮಣ್ಣಾದ ಬಟ್ಟೆಗಳನ್ನು ಬದಲಾಯಿಸಿ ಕಳಿಸಿರುತ್ತಾರೆ.

“ಇಡೀ ಪ್ರಕರಣಕ್ಕೆ ಕಾರಣ ಭೂಮಿ ವಿವಾದ! ಜಮ್ಮು ಪ್ರದೇಶವನ್ನು ಬಿಟ್ಟು ಹೋಗುವಂತೆ ಗುಜ್ಜರ್ ಸಮುದಾಯದವರನ್ನು ಸ್ಥಳೀಯ ಹಿಂದೂಗಳು ಹೆದರಿಸುತ್ತ ಬಂದಿದ್ದಾರೆ. ಕಾರಣ, ಅವರು ಕುರಿ ಹಾಗೂ ದನಗಳನ್ನು ಮೇಯಿಸಲು ಜಮ್ಮುವಿನ ಸಾರ್ವಜನಿಕ ಹಾಗೂ ಅರಣ್ಯ ಪ್ರದೇಶವನ್ನು ಬಳಸುವುದೇ ಆಗಿದೆ. ಇದನ್ನು ಗುಜ್ಜರ್ ಸಮುದಾಯ ವಿರೋಧಿಸಿತು. ಕೆಲ ಸ್ಥಳೀಯ ಹಿಂದೂಗಳು ಇದರಿಂದ ಸಿಟ್ಟಾಗಿ ಸಂಘರ್ಷಕ್ಕೆ ಕಾರಣವಾಗಿತ್ತು,” ಎಂದು ಬುಡಕಟ್ಟು ಜನಾಂಗ ಹಕ್ಕುಗಳ ಕಾರ್ಯಕರ್ತ ಹಾಗೂ ವಕೀಲ ತಾಲಿಬ್ ಹುಸೇನ್ ತಿಳಿಸುತ್ತಾರೆ. ನ್ಯಾಯಕ್ಕಾಗಿ ಆಸೀಫಾಳ ಕುಟುಂಬದವರ ಜೊತೆ ಪ್ರತಿಭಟನೆಯಲ್ಲಿ ಮುಂದಾಳತ್ವ ವಹಿಸಿದ್ದ ಈ ತಾಲಿಬ್‌ರನ್ನು ಪೊಲೀಸರು ಬಂಧಿಸಿ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ.

ಈ ಮುಸ್ಲಿಂ ಅಲೆಮಾರಿಗಳು ಹಿಂದೂ ಪ್ರಾಬಲ್ಯವಿರುವ ಜಮ್ಮುವಿನಲ್ಲಿ ನೆಲೆಯೂರಿ ಅರಣ್ಯ ಹಾಗೂ ನೀರಿನ ಸಂಪನ್ಮೂಲಗಳನ್ನು ಅತಿಕ್ರಮಣ ಮಾಡಿಕೊಳ್ಳುತ್ತಿದ್ದಾರೆ, ಎಂದು ಆರೋಪಿಗಳ ಪರವಾಗಿ ಮಾತಾಡುತ್ತಿರುವ ವಕೀಲ ಅಂಕುರ್ ಶರ್ಮಾ ಬಿಬಿಸಿಗೆ ಹೇಳಿದ್ದಾರೆ.

ಕಾಶ್ಮೀರದಲ್ಲಿ ಸುದ್ದಿ ಪತ್ರಿಕೆಗಳು ಪ್ರಕರಣವನ್ನು ಮುಖಪುಟದಲ್ಲಿ ಪ್ರಕಟಿಸಿವೆ. ಆದರೆ ಜಮ್ಮುವಿನಲ್ಲಿ ಈ ಪ್ರಕರಣ ಇನ್ನೂ ಹೆಚ್ಚಿನ ಜನರ ಗಮನ ಸೆಳೆದಿಲ್ಲ. ವಿಧಾನಸಭೆಯಲ್ಲಿ ಪ್ರಭಾವಿ ಗುಜ್ಜರ್ ಸಮುದಾಯದ ನಾಯಕ ಹಾಗೂ ಶಾಸಕ ಮಿಯಾನ್ ಅತ್ಲಾಫ್ ಘಟನೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಆಸೀಫಾಳ ಫೋಟೋಗಳನ್ನು ಮಾಧ್ಯಮಕ್ಕೆ ಕಳಿಸಿ ವಿಚಾರಣೆಗೆ ಒತ್ತಾಯಿಸುತ್ತಿದ್ದಾರೆ. ಆದರೆ, ಬಿಜೆಪಿ ಶಾಸಕ ರಾಜೀವ್ ಜಸ್‌ರೋಟಿಯಾ “ಅದು ಕುಟುಂಬದ ವಿಷಯ, ಪ್ರಕರಣವನ್ನು ರಾಜಕೀಯಕ್ಕೆ ಎಳೆತರಬೇಡಿ,” ಎಂದು ಅತ್ಲಾಫ್ ಅವರನ್ನು ಟೀಕಿಸಿದ್ದಾರೆ.

ಆಸೀಫಾಳ ಅಂತ್ಯಕ್ರಿಯೆಯನ್ನು ಈ ಹಿಂದೆ ಪುಜ್ವಲಾ ಖರೀದಿಸಿದ ಜಾಗದಲ್ಲೇ ಮಾಡಬೇಕೆಂದು ಗುಜ್ಜರ್ ಸಮುದಾಯದವರು ಯೋಚಿಸಿದ್ದರು. ಆದರೆ ಆ ಜಾಗ ಖರೀದಿಸುವುದಕ್ಕೂ ಮುನ್ನ ಐದು ಜನರನ್ನು ಅಲ್ಲಿ ಸುಡಲಾಗಿತ್ತು. “ಬಲಪಂಥೀಯ ಹಿಂದೂ ಕಾರ್ಯಕರ್ತರು ಗುಜ್ಜರ್ ಸಮುದಾಯದವರನ್ನು ಸುತ್ತುವರಿದು ಅಂತ್ಯಕ್ರಿಯೆಯನ್ನು ಈ ಜಾಗದಲ್ಲಿ ಮಾಡಿದರೆ ಕಟು ಪರಿಣಾಮ ಎದುರಿಸಬೇಕಾದೀತು ಎಂದು ಬೆದರಿಕೆ ಹಾಕಿದ್ದರು,” ಎಂದು ಆಸೀಫಾಳ ತಂದೆ ಪುಜ್ವಲಾ ಬಿಬಿಸಿಗೆ ಹೇಳಿದ್ದಾರೆ.

ಇದನ್ನೂ ಓದಿ : 80 ದಿನದಲ್ಲಿ 8 ಅತ್ಯಾಚಾರ ಪ್ರಕರಣ: ವಿಜಯಪುರದಲ್ಲಿ ನಡೆಯುತ್ತಿರುವುದೇನು?

“ಈ ವಿರೋಧದಿಂದಾಗಿ ಇನ್ನೊಂದು ಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಏಳು ಕಿಮೀ ನಡೆಯಬೇಕಾಯಿತು. ನನ್ನ ಎರಡು ಮಕ್ಕಳು ಈ ಹಿಂದೆ ಅಫಘಾತದಲ್ಲಿ ಮರಣ ಹೊಂದಿದರು. ನಾನು ನನ್ನ ಹೆಂಡತಿ ಒತ್ತಾಯದ ಮೇಲೆ ನನ್ನ ಭಾವನ ಮಗಳಾದ ಆಸೀಫಾಳನ್ನು ದತ್ತು ಪಡೆದುಕೊಂಡಿದ್ದೆವು. ಆಸೀಫಾ ಹಕ್ಕಿಯಂತೆ ಚಿಲಿಪಿಲಿಗುಡುತ್ತಿದ್ದಳು, ಜಿಂಕೆಯಂತೆ ಓಡಾಡಿಕೊಂಡಿದ್ದಳು. ಆಕೆಯೇ ನಮ್ಮ ಜಗತ್ತಾಗಿದ್ದಳು,” ಎಂದು ಆಸೀಫಾಳನ್ನು ನೆನಪಿಸಿಕೊಂಡು ತಂದೆ-ತಾಯಿ ಇಬ್ಬರೂ ಮರುಗುತ್ತಿದ್ದರು.

ಈ ಘಟನೆಯಿಂದ ಇಡೀ ಗುಜ್ಜರ್ ಸಮುದಾಯವೇ ದುಗುಡದಲ್ಲಿ ಮುಳುಗಿದೆ. ಆದರೆ, ಹಲವರಿಗೆ ಅನ್ಯಾಯಕ್ಕಿಂತಲೂ ಅವಳ ಧರ್ಮವೇ ಪ್ರಮುಖವಾಗಿಬಿಟ್ಟಿದೆ. ಘಟನೆಯನ್ನು ಹಿಂದೂ ಪ್ರಾಬಲ್ಯವುಳ್ಳ ಜಮ್ಮು ಹಾಗೂ ಮುಸ್ಲಿಂ ಪ್ರಾಬಲ್ಯವುಳ್ಳ ಕಾಶ್ಮೀರ ನಡುವೆ ಪರ-ವಿರೋಧಗಳನ್ನು ಮುಂದಿಟ್ಟುಕೊಂಡು ಚರ್ಚಿಸಲಾಗುತ್ತಿದೆ.

ಆಸೀಫಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಸರ್ಕಾರಿ ಅಧಿಕಾರಿ ಹಾಗೂ ನಾಲ್ಕು ಮಂದಿ ಪೊಲೀಸರು ಸೇರಿದಂತೆ ಒಟ್ಟು ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ, ಆರೋಪಿಗಳು ಹಾಗೂ ಬೆಂಬಲಿಗರು ಜಮ್ಮುವಿನಲ್ಲಿ ವ್ಯಾಪಕ ಪ್ರತಿಭಟನೆ ಹುಟ್ಟುಹಾಕಿದ್ದಾರೆ. ಸ್ಥಳೀಯ ವಕೀಲರು, ಪೋಲಿಸರು ನ್ಯಾಯಾಲಯಕ್ಕೆ ಬಂದು ಚಾರ್ಜ್‌ಶೀಟ್ ಸಲ್ಲಿಸುವುದನ್ನು ತಡೆಹಿಡಿದ್ದಾರೆ. ಈ ನಡುವೆ, ಆಸೀಫಾ ಕುಟುಂಬಕ್ಕೆ ನ್ಯಾಯ ಸಿಗದಿದ್ದರೆ ಮೈತ್ರಿಕೂಟದಿಂದ ಹೊರನಡೆಯುವುದಾಗಿ ಪಿಡಿಪಿ (ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ) ಶಾಸಕರು ಬೆದರಿಕೆಯೊಡ್ಡಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More