‘ಎಲೆಕ್ಟೊರಲ್ ಬಾಂಡ್’ ಮೂಲಕ ದೇಣಿಗೆ ಕೊಟ್ಟವರ ಮೇಲೆ ಕೇಂದ್ರ ಸರ್ಕಾರದ ನಿಗಾ!

ರಾಜಕೀಯ ಪಕ್ಷಗಳಿಗೆ ಕಪ್ಪು ಹಣದ ಮೂಲಕ ದೇಣಿಗೆ ನೀಡುವುದನ್ನು ತಡೆಗಟ್ಟುವ ಸಲುವಾಗಿ ಎನ್‌ಡಿಎ ಸರ್ಕಾರ ‘ಎಲೆಕ್ಟೊರಲ್ ಬಾಂಡ್’ ಪರಿಚಯಿಸಿದೆ. ಬಾಂಡ್ ಮೂಲಕ ದೇಣಿಗೆ ನೀಡುವವರ ಬಗ್ಗೆ ಗೌಪ್ಯತೆ ಕಾಪಾಡುವುದಾಗಿ ವಿತ್ತ ಸಚಿವರು ಭರವಸೆ ನೀಡಿದ್ದರು. ಆದರೆ, ಈಗ ಏನಾಗಿದೆ?

ನೀವು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಬಯಸುತ್ತೀರಿ. ಅದಕ್ಕಾಗಿ ಎನ್‌ಡಿಎ ಸರ್ಕಾರ ಜಾರಿಗೆ ತಂದಿರುವ ಎಲೆಕ್ಟೊರಲ್ ಬಾಂಡ್ ಮೂಲಕ ದೇಣಿಗೆ ಪಾವತಿಸುತ್ತೀರಿ. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಆಶ್ವಾಸನೆ ನೀಡಿದಂತೆ, ‘ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುತ್ತದೆ, ದೇಣಿಗೆ ಕೊಟ್ಟವರಿಗೆ ಹೊರತು ಪಡಿಸಿ ಬೇರಾರಿಗೂ ಮಾಹಿತಿ ಸಿಗುವುದಿಲ್ಲ’ ಎಂದೇ ನಂಬಿರುತ್ತೀರಿ. ನೀವು ಹಾಗೆ ನಂಬಿದರೆ ಮೋಸಹೋಗುವುದು ಖಚಿತ!

ನೀವು ಕೊಟ್ಟ ದೇಣಿಗೆಯ ಲೆಕ್ಕದ ಮೇಲೆ ಕೇಂದ್ರ ಸರ್ಕಾರ ನಿಗಾ ಇಡುತ್ತಿದೆ. ನಿಮಗೆ ಗೊತ್ತಿಲ್ಲದಂತೆಯೇ ನೀವು ಯಾವ ರಾಜಕೀಯ ಪಕ್ಷಗಳಿಗೆ ಎಷ್ಟು ದೇಣಿಗೆ ಪಾವತಿಸುತ್ತೀರಿ ಎಂಬುದನ್ನು ಪತ್ತೆಹಚ್ಚುತ್ತದೆ. ಅದು ಹೇಗೆ ಗೊತ್ತೇ? ದೇಣಿಗೆ ಪಾವತಿಸುವ ಎಲೆಕ್ಟೊರಲ್ ಬಾಂಡ್ ಮೇಲೆ ಅಕ್ಷರಸಂಖ್ಯಾಯುಕ್ತ (ಆಲ್ಫಾನ್ಯೂಮರಿಕ್) ಸಂಖ್ಯೆಗಳನ್ನು ನಮೂದಿಸಲಾಗಿರುತ್ತದೆ. ಈ ಸಂಖ್ಯೆ ಬರೀ ಕಣ್ಣಿಗೆ ಕಾಣುವುದಿಲ್ಲ. ನೇರಳಾತೀತ (ಅಲ್ಟ್ರಾವಾಯ್ಲೆಟ್) ಬೆಳಕಿನಲ್ಲಿ ಮಾತ್ರ ಕಾಣುತ್ತದೆ.

‘ದಿ ಕ್ವಿಂಟ್’ ಜಾಲತಾಣ ನಡೆಸಿರುವ ತನಿಖೆಯಿಂದ ಎಲೆಕ್ಟೊರಲ್ ಬಾಂಡ್ ಮೇಲೆ ಆಲ್ಫಾನ್ಯೂಮರಿಕ್ ಸಂಖ್ಯೆ ಇರುವುದು ಪತ್ತೆಯಾಗಿದೆ. ಈ ಸಂಖ್ಯೆಯ ಜಾಡು ಹಿಡಿದು ಹೋದರೆ, ಯಾರು ಯಾವ ರಾಜಕೀಯ ಪಕ್ಷಕ್ಕೆ ಎಷ್ಟು ದೇಣಿಗೆ ನೀಡಿದ್ದಾರೆ ಎಂಬುದನ್ನು ಸಲೀಸಾಗಿ ಪತ್ತೆಹಚ್ಚಬಹುದು.

ರಾಜಕೀಯ ಪಕ್ಷಗಳಿಗೆ ಕಾರ್ಪೊರೆಟ್ ಹೌಸ್‌ಗಳು, ವ್ಯಕ್ತಿಗಳು ದೇಣಿಗೆ ನೀಡುತ್ತಾರೆ. ಆದರೆ, ಬಹುತೇಕ ದೇಣಿಗೆಯು ಕಪ್ಪುಹಣದ ಮೂಲಕ ಪಾವತಿಯಾಗುತ್ತಿತ್ತು. ಇದನ್ನು ತಡೆಯುವ ಸಲುವಾಗಿ ಎನ್‌ಡಿಎ ಸರ್ಕಾರ ಎಲೆಕ್ಟೊರಲ್ ಬಾಂಡ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ರಾಜಕೀಯ ಪಕ್ಷಗಳಿಗೆ 2,000 ರುಪಾಯಿ ಮೀರಿದ ದೇಣಿಗೆಯನ್ನು ನಗದು ರೂಪದಲ್ಲಿ ನೀಡಲಾಗದು. ಅದನ್ನು ಎಲೆಕ್ಟೊರಲ್ ಬಾಂಡ್ ಮೂಲಕವೇ ಪಾವತಿಸಬೇಕು. ಎಲೆಕ್ಟೊರಲ್ ಬಾಂಡ್ ಅನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆಯ್ದ ನಿಯೋಜಿತ ಶಾಖೆಗಳಲ್ಲಿ ಮಾತ್ರ ಪ್ರತಿ ಮೂರು ತಿಂಗಳಿಗೆ ಒಮ್ಮೆ ಹತ್ತು ದಿನಗಳ ಕಾಲ ವಿತರಿಸಲಾಗುತ್ತದೆ.

ಎಲೆಕ್ಟೊರಲ್ ಬಾಂಡ್ ಪರಿಚಯಿಸಿದಾಗ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, “ದೇಣಿಗೆ ನೀಡುವ ವ್ಯಕ್ತಿ ಗೌಪ್ಯತೆ ಕಾಪಾಡಲಾಗುತ್ತದೆ. ಆ ವ್ಯಕ್ತಿ ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ನೀಡಿದರು ಎಂಬುದು ಆ ವ್ಯಕ್ತಿಗಲ್ಲದೆ ಬೇರಾರಿಗೂ ಗೊತ್ತಾಗುವುದಿಲ್ಲ,” ಎಂದು ತಿಳಿಸಿದ್ದರು. ಆದರೆ, ಈಗ ಎಲೆಕ್ಟೊರಲ್ ಬಾಂಡ್‌ಗಳಲ್ಲಿ ಆಲ್ಪಾನ್ಯೂಮರಿಕ್ ಸಂಖ್ಯೆಗಳನ್ನು ಮುದ್ರಿಸಲಾಗುತ್ತಿದೆ. ಇದು ಬಾಂಡ್ ಖರೀದಿಸುವವರಿಗೆ ಗೊತ್ತೇ ಇರುವುದಿಲ್ಲ.

‘ದಿ ಕ್ವಿಂಟ್’ ತನಿಖೆ ನಡೆಸುವ ಸಲುವಾಗಿ ಎಸ್‌ಬಿಐ ನಿಯೋಜಿತ ಶಾಖೆಯಿಂದ ಏ.5 ಮತ್ತು ಏ.9ರಂದು 1,000 ರುಪಾಯಿ ಮುಖಬೆಲೆಯ ಎರಡು ಬಾಂಡ್ ಗಳನ್ನು ಖರೀದಿಸಿತು. ನೇರವಾಗಿ ನೋಡಿದಾಗ ಬಾಂಡ್ ಮೇಲೆ ಯಾವುದೇ ಸಂಖ್ಯೆ ನಮೂದಾಗಿರಲಿಲ್ಲ. ಎರಡೂ ಬಾಂಡ್‌ಗಳನ್ನು ದೇಶದ ಪ್ರತಿಷ್ಠಿತ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿತು. ಆಗ ನೇರಳಾತೀತ ಬೆಳಕಿನಲ್ಲಿ ಬಾಂಡ್‌ನ ಮೇಲ್ಭಾಗದಲ್ಲಿ ಇದ್ದ ಆಲ್ಫಾನ್ಯೂಮರಿಕ್ ಸಂಖ್ಯೆಗಳು ಗೋಚರಿಸಿದವು.

ಇದನ್ನೂ ಓದಿ : 2019ರ ಚುನಾವಣೆ ದೃಷ್ಟಿಯಿಂದ ಜೇಟ್ಲಿ ಜಾಣ್ಮೆಯಿಂದ ಕಟ್ಟಿದ ಕನಸಿನ ಪೊಟ್ಟಣಗಳು

ಎಲೆಕ್ಟೊರಲ್ ಬಾಂಡ್ ಮೇಲೆ ಆಲ್ಫಾನ್ಯೂಮರಿಕ್ ಸಂಖ್ಯೆಗಳನ್ನು ನಮೂದಿಸಿರುವುದು ಮತ್ತು ಈ ಬಗ್ಗೆ ಯಾರಿಗೂ ಮಾಹಿತಿ ನೀಡದೆ ಇರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಏಕೆಂದರೆ ಖುದ್ದು ವಿತ್ತ ಸಚಿವ ಅರುಣ್ ಜೇಟ್ಲಿ ಅವರೇ ದೇಣಿಗೆ ನೀಡಿದವರ ಗೌಪ್ಯತೆ ಕಾಪಾಡುವುದಾಗಿ ತಿಳಿಸಿದ್ದರು. ದೇಣಿಗೆ ನೀಡಿದವರ ಗೌಪ್ಯತೆ ಕಾಪಾಡುವುದಾರೆ ಆಲ್ಫಾನ್ಯೂಮರಿಕ್ ಸಂಖ್ಯೆ ಬಳಸುವ ಅಗತ್ಯವೇನಿದೆ? ಈ ಸಂಖ್ಯೆಯು ಬಾಂಡ್ ಮೇಲೆ ನಮೂದಾಗಿದ್ದರೂ ದೇಣಿಗೆ ನೀಡುವವರಿಗೆ ಆ ಮಾಹಿತಿ ನೀಡದಿರಲು ಕಾರಣವೇನು? ದೇಣಿಗೆದಾರರಿಗೆ ಮಾಹಿತಿ ನೀಡದೆ ಅವರ ಮೇಲೆ ನಿಗಾ ಇಡುವ ಕ್ರಮವು ಅಕ್ರಮವಲ್ಲವೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ಬಾಂಡ್ ವಿತರಿಸುವ ಎಸ್‌ಬಿಐ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ:

ಕೇಂದ್ರ ಸರ್ಕಾರ ಉತ್ತರಿಸಬೇಕಾದ ಪ್ರಶ್ನೆಗಳು

  • ಎಲೆಕ್ಟೊರಲ್ ಬಾಂಡ್ ಮೇಲೆ ಬರಿಗಣ್ಣಿಗೆ ಗೋಚರಿಸದ ಆಲ್ಫಾನ್ಯೂಮರಿಕ್ ಸಂಖ್ಯೆ ಇರುವುದು ಉಳಿದ ರಾಜಕೀಯ ಪಕ್ಷಗಳಿಗೆ ಗೊತ್ತಿದೆಯೇ?
  • ಕೇಂದ್ರ ಚುನಾವಣಾ ಆಯೋಗಕ್ಕೆ ಎಲೆಕ್ಟೊರಲ್ ಬಾಂಡ್ ಮೇಲೆ ಬರಿಗಣ್ಣಿಗೆ ಗೋಚರಿಸದ ಆಲ್ಫಾನ್ಯೂಮರಿಕ್ ಸಂಖ್ಯೆ ಇರುವ ಬಗ್ಗೆ ಮಾಹಿತಿ ನೀಡಲಾಗಿದೆಯೇ?
  • ಎಲೆಕ್ಟೊರಲ್ ಬಾಂಡ್ ಖರೀದಿಸುವವರಿಗೆ ಬಾಂಡ್ ಮೇಲೆ ಬರಿಗಣ್ಣಿಗೆ ಗೋಚರಿಸದ ಆಲ್ಫಾನ್ಯೂಮರಿಕ್ ಸಂಖ್ಯೆ ಇರುವ ಬಗ್ಗೆ ಮಾಹಿತಿಯನ್ನೇಕೆ ನೀಡುತ್ತಿಲ್ಲ?
  • ಎಲೆಕ್ಟೊರಲ್ ಬಾಂಡ್ ಮೇಲೆ ಬರಿಗಣ್ಣಿಗೆ ಗೋಚರಿಸದ ಆಲ್ಫಾನ್ಯೂಮರಿಕ್ ಸಂಖ್ಯೆಯ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವವರ ಮೇಲೆ ನಿಗಾ ಇಡುವುದು ಅಕ್ರಮವಲ್ಲವೇ?

ಎಸ್‌ಬಿಐ ಉತ್ತರಿಸಬೇಕಾದ ಪ್ರಶ್ನೆಗಳು

  • ಎಲೆಕ್ಟೊರಲ್ ಬಾಂಡ್ ಮೇಲೆ ಬರಿಗಣ್ಣಿಗೆ ಗೋಚರಿಸದ ಆಲ್ಫಾನ್ಯೂಮರಿಕ್ ಸಂಖ್ಯೆ ಇರುವುದು ಬಾಂಡ್ ವಿತರಿಸುವ ಎಸ್‌ಬಿಐ ಗಮನಕ್ಕೆ ಬಂದಿದೆಯೇ?
  • ಎಲೆಕ್ಟೊರಲ್ ಬಾಂಡ್ ಮೇಲೆ ಬರಿಗಣ್ಣಿಗೆ ಗೋಚರಿಸದ ಆಲ್ಫಾನ್ಯೂಮರಿಕ್ ಸಂಖ್ಯೆಯನ್ನು ಸರ್ಕಾರದ ಯಾವುದೇ ಸಂಸ್ಥೆ ಮತ್ತು ಇಲಾಖೆಯೊಂದಿಗೆ ಹಂಚಿಕೊಳ್ಳಲು ಒಪ್ಪಿಕೊಳ್ಳುವುದೇ?
  • ಬಾಂಡ್ ವಿತರಿಸುತ್ತಿರುವ ಎಸ್‌ಬಿಐ, ಆಲ್ಫಾನ್ಯೂಮರಿಕ್ ಸಂಖ್ಯೆಗಳ ದಾಖಲೆಗಳನ್ನು ಇಟ್ಟಿದೆಯೇ?

ಚಿತ್ರ: ‘ದಿ ಕ್ವಿಂಟ್’ ನಡೆಸಿದ ತನಿಖೆಯಲ್ಲಿ ಎಲೆಕ್ಟೊರಲ್ ಬಾಂಡ್ ಮೇಲೆ ಕಂಡುಬಂದ ಆಲ್ಫಾನ್ಯೂಮರಿಕ್ ಸಂಖ್ಯೆಗಳು

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More