ಝುಕರ್‌ಬರ್ಗ್‌ ವಿಚಾರಣೆ | 2ನೇ ದಿನ ಉತ್ತರಿಸಲು ತತ್ತರಿಸಿದ ಫೇಸ್‌ಬುಕ್‌ ಸಿಇಒ

ಮೊದಲ ದಿನ ಸೆನೆಟರ್‌ಗಳ ಪ್ರಶ್ನೆಗಳಿಗೆ ಜಾರಿಗೊಳ್ಳುವ ಉತ್ತರ ಕೊಟ್ಟು ಪರಿಸ್ಥಿತಿ ನಿಭಾಯಿಸಿದ್ದ ಝುಕರ್‌ಬರ್ಗ್‌, ಎರಡನೇ ದಿನ ಜನಪ್ರತಿನಿಧಿಗಳ ಪ್ರಶ್ನೆಗಳ ದಾಳಿಗೆ ತತ್ತರಿಸಿದರು. ಬಳಕೆದಾರರ ಮಾಹಿತಿ ಸುರಕ್ಷತೆ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಸ್ಪಷ್ಟ ನಿಲುವು ವ್ಯಕ್ತಪಡಿಸದೆ ತಡವರಿಸಿದರು

ಮಾರ್ಕ್‌ ಝುಕರ್‌ಬರ್ಗ್ ಎರಡು ದಿನಗಳ ವಿಚಾರಣೆಯಲ್ಲಿ ಮೊದಲ ದಿನ ತಪ್ಪೊಪ್ಪಿಗೆ, ಸರಿಪಡಿಸುವ ಸಬೂಬು ಹೇಳುತ್ತ ಹಿರಿಯ ಸೆನೆಟರ್‌ಗಳನ್ನು ಹೇಗೋ ನಿಭಾಯಿಸಿದರು. ಆದರೆ, ಎರಡನೆಯ ದಿನ ಜನಪ್ರತಿನಿಧಿಗಳೊಂದಿಗೆ ಅದೇ ವರಸೆ ಕೆಲಸ ಮಾಡಲಿಲ್ಲ. ಜನಪ್ರತಿನಿಧಿಗಳು ನಿಷ್ಠುರವಾಗಿ, ಖಾರವಾಗಿ ಫೇಸ್‌ಬುಕ್‌ನ ನಿಲುವು ಮತ್ತು ನೀತಿಗಳನ್ನು ಪ್ರಶ್ನಿಸಿದರು. ಪರಿಣಾಮವಾಗಿ ಝುಕರ್‌ಬರ್ಗ್ ತಡವರಿಸಿದರು.

ಮೊದಲ ದಿನದಂತೆಯೇ ಐದು ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ ಝುಕರ್‌ಬರ್ಗ್‌ ಹಲವು ಪ್ರಶ್ನೆಗಳನ್ನು ಎದುರಿಸಿದರು. ಬಳಕೆದಾರರ ಮಾಹಿತಿಯನ್ನು ಕೇಂದ್ರವನ್ನಾಗಿಕೊಂಡು ಹಲವು ಪ್ರಶ್ನೆಗಳನ್ನು ಜನಪ್ರತಿನಿಧಿಗಳು ಝುಕರ್‌ಬರ್ಗ್‌ ಮುಂದಿಟ್ಟರು. ಜೊತೆಗೆ, ಫೇಸ್‌ಬುಕ್‌ ಜಾಲವನ್ನು ನಿಯಂತ್ರಿಸುವ ಅಗತ್ಯವಿದೆಯೇ? ಅಮೆರಿಕದ ೨೦೧೬ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯನ್ನರು ಮಾಡಿದ್ದೇನು? ಫೇಸ್‌ಬುಕ್‌ ಪೂರ್ವಗ್ರಹಪೀಡಿತವೇ? ಎಂಬ ಪ್ರಶ್ನೆಗಳನ್ನು ಕೇಳಲಾಯಿತು.

ತಮ್ಮ ಎಂದಿನ ವರಸೆಯಲ್ಲಿ, “ಇದು ಸಂಕೀರ್ಣ ಪ್ರಶ್ನೆ. ಒಂದೇ ಪದದಲ್ಲಿ ಉತ್ತರಿಸುವುದು ಕಷ್ಟ,” ಎಂದು ಜಾರಿಕೊಳ್ಳುವ ಯತ್ನ ಮಾಡಿದರು ಝುಕರ್‌ಬರ್ಗ್. ಆದರೆ, ಈ ಉತ್ತರದಿಂದ ಸಂತೃಪ್ತರಾಗದ ಜನಪ್ರತಿನಿಧಿಗಳು ಖಾರವಾಗಿ ಖಂಡಿಸಿದರು. ಕೇಂಬ್ರಿಡ್ಜ್‌ ಅನಾಲಿಟಿಕಾದಿಂದ ತಮ್ಮ ಮಾಹಿತಿಯೂ ಸೋರಿಕೆಯಾಯಿತು, ಫೇಸ್‌ಬುಕ್‌ ಮಾಹಿತಿಗೆ ಬಳಕೆದಾರರೇ ಮಾಲಿಕರು, ಅವರದ್ದೇ ನಿಯಂತ್ರಣ ಎಂಬ ಉತ್ತರಗಳ ಮೂಲಕ ಪರಿಸ್ಥಿತಿಯನ್ನು ನಿರ್ವಹಿಸುವ ಝುಕರ್‌ಬರ್ಗ್ ಪ್ರಯತ್ನ ಉಳಿದ ಪ್ರಶ್ನೆಗಳನ್ನು ಎದುರಿಸುವಾಗ ಸೋತಿತು.

ಎರಡು ದಿನಗಳ ವಿಚಾರಣೆಯಿಂದ ಸ್ಪಷ್ಟವಾಗುವ ಅಂಶಗಳಿವು

  1. ಝುಕರ್‌ಬರ್ಗ್‌ ಕೂಡ ನಮ್ಮಂತೆಯೇ. ಏಕೆಂದರೆ ಮಾಹಿತಿಯ ಖಾಸಗಿತನವನ್ನು ಕಾಪಾಡಿಕೊಳ್ಳುವಲ್ಲಿ ಸೋತಿರುವುದನ್ನು ಸ್ವತಃ ಒಪ್ಪಿಕೊಂಡಿದ್ದಾರೆ. ಫೇಸ್‌ಬುಕ್‌ನ ಸಿಇಒ ಆದ ಝುಕರ್‌ಬರ್ಗ್‌ ಹಲವು ವಿಚಾರಗಳ ಬಗ್ಗೆ ಸ್ಪಷ್ಟ ಮಾಹಿತಿ ಹೊಂದಿರುವಂತೆ ಕಾಣಲಿಲ್ಲ ಅಥವಾ ಇದು ಪ್ರಜ್ಞಾಪೂರ್ವಕವಾದ ನಡೆಯೂ ಆಗಿರಬಹುದು. ಫೇಸ್‌ಬುಕ್‌ ಮಾಹಿತಿಯೂ ಮೂರನೆಯ ವ್ಯಕ್ತಿಗಳ ಪಾಲಾದ ಬಗೆಯನ್ನು ಖಚಿತಪಡಿಸಿದರೂ ಯಾರ ಪಾಲಾಗಿದೆ, ಕೇಂಬ್ರಿಡ್ಜ್‌ ಅನಾಲಿಟಿಕಾ ಹೊರತಾಗಿ ಇನ್ನಾವ ಕಂಪನಿಗಳು ಮಾಹಿತಿ ಹೊಂದಿರುವ ಸಾಧ್ಯತೆ ಇದೆ, ಯಾಕೆ ನಿಯಂತ್ರಿಸಲಾಗಿಲ್ಲ ಎಂಬ ಪ್ರಶ್ನೆಗಳಿಗೆ ಇನ್ನೂ ಮಾಹಿತಿ ಇಲ್ಲ ಎಂದು ಝುಕರ್‌ಬರ್ಗ್‌ ತಮ್ಮ ಅಸಹಾಯಕತೆ ತೋಡಿಕೊಂಡರೇ ಹೊರತು ಬಳಕೆದಾರರಿಗೆ ಧೈರ್ಯ ತುಂಬಬಹುದಾದ ಸ್ಪಷ್ಟ ಮಾಹಿತಿ ನೀಡಲಿಲ್ಲ.
  2. ಫೇಸ್‌ಬುಕ್‌ ಅನ್ನು ಇಂಥ ದೊಡ್ಡ ಇಕ್ಕಟ್ಟಿಗೆ ಸಿಲುಕಿಸಿದ ಕೇಂಬ್ರಿಡ್ಜ್‌ ಅನಾಲಿಟಿಕಾ ವಿರುದ್ಧ ಸಮರವನ್ನೇ ಸಾರುತ್ತಿರುವ ಸ್ಪಷ್ಟ ಸುಳಿವನ್ನಂತೂ ಈ ವಿಚಾರಣೆ ಹೊರಹಾಕಿತು. ಕೇಂಬ್ರಿಡ್ಜ್‌ ಅನಾಲಿಟಿಕಾ ಫೇಸ್‌ಬುಕ್‌ ಮಾಹಿತಿ ಆಧರಿಸಿ ಸೈಕೋಗ್ರಾಫ್‌ಗಳನ್ನು ರೂಪಿಸುತ್ತಿದ್ದು, ಅದಕ್ಕಾಗಿ ತಂಡಗಳನ್ನೇ ಹೊಂದಿದೆ. ಆಪ್‌ಗಳನ್ನೂ ಅಭಿವೃದ್ಧಿಪಡಿಸುತ್ತಿದ್ದು ಹಲವು ಸಂಖ್ಯೆಯಲ್ಲಿ ಸಂಶೋಧಕರು ಈ ಕಾರ್ಯದಲ್ಲಿ ತೊಡಗಿದ್ದಾರೆ. ಈ ಕಾರ್ಯದಲ್ಲಿ ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯವೂ ಭಾಗಿಯಾಗಿರುವುದು ಆಘಾತಕಾರಿ ಎಂಬ ಅಭಿಪ್ರಾಯವನ್ನು ಝುಕರ್‌ ವ್ಯಕ್ತಪಡಿಸಿದ್ದು, ಅನುಮಾನಿಸುತ್ತಿರುವ ಅಕ್ರಮಗಳು ಸಾಬೀತಾದರೆ ಕಾನೂನು ಕ್ರಮಕ್ಕೆ ಮುಂದಾಗುವ ಸೂಚನೆಯನ್ನೂ ನೀಡಿದ್ದಾರೆ.
  3. ಝುಕರ್‌ಬರ್ಗ್‌ ವಿಚಾರಣೆ, ಸಾಮಾಜಿಕ ಜಾಲತಾಣಗಳ ಇತಿಹಾಸದಲ್ಲೇ ಮೊದಲು ಎನ್ನುವಂಥದ್ದು. ಮಾಹಿತಿಯೇ ಅಗಾಧ ಸಂಪತ್ತಾಗಿರುವ ದಿನಗಳಲ್ಲಿ, ಸುಳ್ಳುಸುದ್ದಿ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ, ಸಾಮಾಜಿಕ ಜಾಲತಾಣಗಳಿಂದಾಗಿ ದ್ವೇಷದ ಮಾತುಗಳು ಕಾಳ್ಗಿಚ್ಚಿನಂತೆ ಹರಡುತ್ತಿರುವ ಕಾರಣಕ್ಕೆ ನಿಯಂತ್ರಣದ ಬಗ್ಗೆ ಹೆಚ್ಚು ಚರ್ಚೆಯಾಯಿತು. ಈಗಾಗಲೇ ಯುರೋಪಿಯನ್‌ ಒಕ್ಕೂಟವು ಇಂಟರ್ನೆಟ್‌ನಲ್ಲಿ ಮಾಹಿತಿ ಸುರಕ್ಷತೆ ಮತ್ತು ಖಾಸಗಿತನಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಅನುಸರಿಸಿದ್ದು, ಅಲ್ಲೂ ಕೆಲವು ವೈಫಲ್ಯ ಕಂಡಿದ್ದನ್ನು ಪ್ರಸ್ತಾಪಿಸಿದ ಜನಪ್ರತಿನಿಧಿಗಳು ಹೊಸ ನಿಯಮಗಳನ್ನು ರಚಿಸಲು, ಶಾಸನ ರೂಪಿಸಲು ಇಚ್ಛಿಸುವಿರಾ ಎಂದು ಪ್ರಶ್ನಿಸಿದರು. ಬಳಕೆದಾರರೇ ಮಾಹಿತಿಯ ಹಕ್ಕುದಾರರು, ಅವರೇ ಅದರ ನಿಯಂತ್ರಕರು ಎಂದು ಪದೇಪದೇ ಹೇಳುವ ಮೂಲಕ ನಿಯಂತ್ರಣ ಕ್ರಮದ ಬಗ್ಗೆ ತಮ್ಮ ಹಿಂಜರಿಕೆಯನ್ನು ವ್ಯಕ್ತಪಡಿಸಿದ ಝುಕರ್‌ಬರ್ಗ್‌, ಪ್ರತಿನಿಧಿಗಳ ಒತ್ತಡಕ್ಕೆ ಸಮ್ಮತಿಯನ್ನಂತೂ ಸೂಚಿಸಿದರು. ಆದರೆ ನಿಜಕ್ಕೂ ಜಾರಿಗೆ ಬದ್ಧರಾಗಿರುತ್ತಾರೆಯೇ ಎಂಬ ಪ್ರಶ್ನೆಯನ್ನಂತೂ ಉಳಿಸಿದರು.
  4. ಜನಪ್ರತಿನಿಧಿಗಳ ಸಮಿತಿ ಅಧ್ಯಕ್ಷ ಗ್ರೆಗ್‌ ವಾಲ್ಡನ್‌ ಫೇಸ್‌ಬುಕ್‌ ಅನ್ನು ಅಮೆರಿಕದ ಯಶಸ್ಸು ಎಂದು ಹೇಳಿ, ಅಮೆರಿಕದ ಮೂಲ ಮೌಲ್ಯಗಳಾದ ಅಭಿವ್ಯಕ್ತಿ ಸ್ವಾತಂತ್ರ್ಯ, ಉದ್ಯಮ ಸ್ವಾತಂತ್ರ್ಯವನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು. ಆದರೆ, ವಾಸ್ತವದಲ್ಲಿ ಫೇಸ್‌ಬುಕ್‌ ಕೇವಲ ಅಮೆರಿಕದ ಕಂಪನಿಯಾಗಿ ಉಳಿದಿಲ್ಲ. ಫೇಸ್‌ಬುಕ್‌ನ ಶೇ.೮೫ರಿಂದ ೯೦ರಷ್ಟು ಬಳಕೆದಾರರಿರುವುದು ಅಮೆರಿಕದಾಚೆಗೆ. ಹಾಗಾಗಿ, ತನ್ನನ್ನು ಜಾಗತಿಕ ಕಂಪನಿ ಎಂದೇ ಗುರುತಿಸಿಕೊಳ್ಳಬಯಸುತ್ತದೆ. ಆದರೆ, ಅಮೆರಿಕದಾಚೆಯ ಬಳಕೆದಾರರಿಂದ ಸಮಸ್ಯೆ ಸೃಷ್ಟಿ ಆಗುತ್ತಿರುವುದರಿಂದ ಅವುಗಳನ್ನು ಹೇಗೆ ಪರಿಹರಿಸಿಕೊಳ್ಳಬೇಕೆಂಬ ತಲೆನೋವು ಝುಕರ್‌ಬರ್ಗ್‌ ಅವರನ್ನು ಕಾಡುತ್ತಿದೆ. ಅಮೆರಿಕ ಹೇರಬಹುದಾದ ನಿಯಮಗಳಿಂದ ಸೃಷ್ಟಿಯಾಗಬಹುದಾದ ತೊಡಕುಗಳ ಬಗ್ಗೆಯೂ ಅವರು ಆತಂಕ ಹೊಂದಿದ್ದಾರೆ.
  5. ಎರಡು ದಿನದ ವಿಚಾರಣೆಯಲ್ಲಿ ಝುಕರ್‌ಬರ್ಗ್‌ ಉತ್ತರಿಸದ ಅಥವಾ ಉತ್ತರಿಸಲಾಗದ ಪ್ರಶ್ನೆಗಳೇ ಹಲವಿದ್ದವು. ಉದಾಹರಣೆಗೆ, ಬಳಕೆದಾರರು ತಮ್ಮ ಪರಿಚಯವನ್ನು ಅಪ್‌ಲೋಡ್‌ ಮಾಡಬಹುದು ಮತ್ತು ಅದನ್ನು ಬೇಡವೆನಿಸಿದಾಗ ಡಿಲೀಟ್‌ ಕೂಡ ಮಾಡಬಹುದು. ಆದರೆ, ಅಪ್‌ಲೋಡ್‌ ಆದ ಪರಿಚಯದಲ್ಲಿರುವ ಮಾಹಿತಿಯನ್ನು ಆಧರಿಸಿ ಜಾಹೀರಾತು ಉದ್ದೇಶಕ್ಕೆ ಸಿದ್ಧಪಡಿಸುವ ಪ್ರೊಫೈಲ್‌ಗಳ ಮೇಲೆ ಬಳಕೆದಾರರ ನಿಯಂತ್ರಣವಿರುತ್ತದೆಯೇ ಎಂಬ ಪ್ರಶ್ನೆಗೆ ಝುಕರ್‌ಬರ್ಗ್‌ ಉತ್ತರಿಸಲಿಲ್ಲ. ಹಾಗೆಯೇ, ಫೇಸ್‌ಬುಕ್‌ ಬಳಕೆದಾರರ ಬ್ರೌಸರ್‌ಗಳಿಂದ ಎಷ್ಟು ಪ್ರಮಾಣದ ಮಾಹಿತಿಯನ್ನು ಸಂಗ್ರಹಿಸಿದೆ ಎಂಬುದಕ್ಕೂ ಉತ್ತರ ಸಿಗಲಿಲ್ಲ. ಬಳಕೆದಾರ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುವ ಮಾಹಿತಿ ಮೇಲ್ನೋಟಕ್ಕೆ ಆತನ ನಿಯಂತ್ರಣದಲ್ಲೇ ಇರುವುದಾಗಿ ಕಂಡರೂ, ಅದನ್ನು ಆಧರಿಸಿ ತನ್ನ ಉದ್ದೇಶಗಳಿಗೆ ಫೇಸ್‌ಬುಕ್‌ ಬಳಸುತ್ತದೆ. ಆದರೆ, ಈ ಬಗ್ಗೆ ಸ್ಪಷ್ಟ ವಿವರಣೆ ಎಲ್ಲೂ ಸಿಗುವುದಿಲ್ಲ. ಯಾಕೆಂದರೆ, ಫೇಸ್‌ಬುಕ್‌ ಅದನ್ನು ಬಹಿರಂಗಪಡಿಸಲು ಇಚ್ಛಿಸುವುದಿಲ್ಲ ಎಂಬುದು ವಿಚಾರಣೆಯ ವೇಳೆ ಸ್ಪಷ್ಟವಾಯಿತು.
ಇದನ್ನೂ ಓದಿ : ಮಾರ್ಕ್‌ ಝುಕರ್‌ಬರ್ಗ್‌ ವಿಚಾರಣೆ | ಉತ್ತರ ಸಿಗದೆ ಉಳಿದ ಐದು ಪ್ರಶ್ನೆಗಳು

ಈ ಮಹತ್ವದ ವಿಚಾರಣೆಯಿಂದ ಫೇಸ್‌ಬುಕ್‌ ಎಚ್ಚೆತ್ತುಕೊಂಡರೆ, ಬಳಕೆದಾರರ ಮೇಲೆ ಹೊಸ ನಿಯಮಗಳನ್ನು ಹೇರುವ ಸಾಧ್ಯತೆ ಇದೆ. ಹಣ ಕೊಟ್ಟು ಬಳಸುವ ಅಥವಾ ಉಚಿತ ಬಳಸುವವರಿಗೆ ನಿಯಮಿತ ಸೇವೆಗಳು ಮುಂತಾದ ಬದಲಾವಣೆಗಳನ್ನು ತರುವ ಸಾಧ್ಯತೆ ಇದೆ. ಫೇಸ್‌ಬುಕ್‌ ಎರಡು ದಿನಗಳ ಅವಧಿಯಲ್ಲಿ ತಾನು ಏನೆಲ್ಲ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ತಿಳಿದುಕೊಂಡಿದೆ. ಇನ್ನು ಮುಂದೆ ಇಂಥ ಸಂದರ್ಭಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡೇ ಕಾರ್ಯನಿರ್ವಹಿಸುತ್ತದೆ ಎಂಬುದು ಸ್ಪಷ್ಟ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More