ಸಾಗಾಟದಲ್ಲಿ ಕಾಣೆಯಾದವು ಒಂಬತ್ತು ಲಕ್ಷಕ್ಕೂ ಅಧಿಕ ಮತಯಂತ್ರಗಳು!

ಬಿಇಎಲ್ ಪ್ರಕಾರ, ಒಟ್ಟು 19,69,932 ಮತಯಂತ್ರಗಳನ್ನು ಪೂರೈಸಿದ ಅಂಕಿ-ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವುದಾದರೆ, 9,64,270 ಮತಯಂತ್ರಗಳು ಲೆಕ್ಕಕ್ಕೆ ಸಿಗುತ್ತಿಲ್ಲ! ಇದು ಹಾದಿತಪ್ಪಿದ ಲೆಕ್ಕಾಚಾರವೇ ಅಥವಾ ಕಳೆದುಹೋಗಿವೆಯೇ ಅಥವಾ ದುಷ್ಟ ಶಕ್ತಿಗಳ ಕೈಸೇರಿವೆಯೇ?

ಸಾಮಾನ್ಯ ವ್ಯಾವಹಾರಿಕ ಭಾಷೆಯಲ್ಲಿ ಮಾರಾಟಗಾರ ಕಳುಹಿಸಿದ ವಸ್ತು ಮತ್ತು ಖರೀದಿದಾರನಿಗೆ ತಲುಪಿದ ವಸ್ತುವಿನ ಎಣಿಕೆಯಲ್ಲಿ ವ್ಯತ್ಯಾಸವಿದ್ದರೆ, ಇದನ್ನು 'ಸಾಗಾಟದಲ್ಲಿ ಕಳೆದುಹೋದವು' ಎಂದು ಪರಿಗಣಿಸಲಾಗುತ್ತದೆ. ಆದರೆ, ಭಾರತೀಯ ಚುನಾವಣಾ ಆಯೋಗಕ್ಕೆ ಕಳುಹಿಸಿದ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡುಬಂದರೆ ಏನನ್ನಬಹುದು?

ಇತ್ತೀಚೆಗೆ, ಮುಂಬಯಿ ಮೂಲಕದ ಆರ್‌ಟಿಐ ಕಾರ್ಯಕರ್ತರೊಬ್ಬ ಮನೋರಾಜನ್ ಎಸ್ ರಾಯ್ ಅವರು ಆರ್‌ಟಿಐ ಕಾಯ್ದೆಯಡಿ ಪಡೆದ ಮಾಹಿತಿ ಅನೇಕ ಮಾಧ್ಯಮಗಳು ವರದಿ ಮಾಡಿದ್ದು, ಅಚ್ಚರಿ ಹುಟ್ಟಿಸುತ್ತವೆ. ಕಳೆದುಹೋಗಿರುವ ಮತಯಂತ್ರಗಳ ಪ್ರಕರಣವು ಆಸಕ್ತಿದಾಯಕವಾಗಿದೆ ಮಾತ್ರವಲ್ಲದೆ, ದೇಶದಲ್ಲಿ ಚುನಾವಣೆ ಎಷ್ಟು ಪಾರದರ್ಶಕವಾಗಿ ನಡೆಯುತ್ತದೆ ಎನ್ನುವ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಅಧಿಕೃತವಾಗಿ ಸಾರ್ವಜನಿಕ ರಂಗದ ಎರಡು ಸಂಸ್ಥೆಗಳು ತಯಾರು ಮಾಡುತ್ತವೆ. ಅವೆಂದರೆ, ಬೆಂಗಳೂರು ಮೂಲದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಮತ್ತು ಹೈದರಾಬಾದ್‌ನಲ್ಲಿರುವ ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ. ರಾಯ್ ಅವರು ಪಡೆದಿರುವ ಆರ್‌ಟಿಐ ಮಾಹಿತಿ ಪ್ರಕಾರ, 1989ರಲ್ಲಿ ಚಾಲ್ತಿಗೆ ಬಂದ ಎಲೆಕ್ಟ್ರಾನಿಕ್ ಮತಯಂತ್ರಗಳ ಕುರಿತು ಈ ಕೆಳಗಿನ ಅಚ್ಚರಿಯ ಅಂಶಗಳು ಬೆಳಕಿಗೆ ಬಂದಿವೆ.

ಬಿಇಎಲ್ ಬೆಂಗಳೂರು ಪೂರೈಸಿರುವ ಮತಯಂತ್ರಗಳಲ್ಲಿ ಕಂಡುಬಂದ ವ್ಯತ್ಯಯಗಳ ಪಟ್ಟಿ ಇಲ್ಲಿದೆ. ಚುನಾವಣಾ ಆಯೋಗದ ಪ್ರಕಾರ, 1989ರಿಂದ 2014-15ರ ತನಕ ಅದು ಬೆಂಗಳೂರು ಸಂಸ್ಥೆಯಿಂದ 10,05,662 ಮತಯಂತ್ರಗಳನ್ನು ಪಡೆದಿದೆ. ಆದರೆ, ಬಿಇಎಲ್ ಹೇಳುವ ಪ್ರಕಾರ ಅದು ಒಟ್ಟು 19,69,932 ಮತಯಂತ್ರಗಳನ್ನು ಪೂರೈಸಿದೆ. ಈ ಅಂಕಿ-ಅಂಶಗಳನ್ನು ಗಣನೆಗೆ ತೆಗೆದುಕೊಂಡು ಹೇಳುವುದಾದರೆ, 9,64,270 ಮತಯಂತ್ರಗಳು ಲೆಕ್ಕಕ್ಕೆ ಸಿಗುತ್ತಿಲ್ಲ. ಇದು ಹಾದಿ ತಪ್ಪಿದ ಲೆಕ್ಕಾಚಾರದ ಫಲವೇ ಅಥವಾ ಅವು ಕಳೆದುಹೋಗಿವೆಯೇ ಅಥವಾ ದುಷ್ಟಶಕ್ತಿಗಳ ಕೈ ಸೇರಿವೆಯೇ?

ಆರ್‌ಟಿಐ ಮಾಹಿತಿಯಂತೆ ಪ್ರತಿವರ್ಷ ಪಡೆದ ಮತಯಂತ್ರಗಳ ಸಂಖ್ಯೆಯನ್ನು ನೋಡುತ್ತಹೋದರೆ ಅನೇಕ ಆಸಕ್ತಿಕರ ಅಂಶಗಳು ಬೆಳಕಿಗೆ ಬರುತ್ತವೆ. ಕೆಲ ವರ್ಷಗಳಲ್ಲಿ ಉತ್ಪಾದಕರು ಕಳುಹಿಸಿದ ಮತಯಂತ್ರಗಳಿಗಿಂತಲೂ ಹೆಚ್ಚಿನ ಮತಯಂತ್ರಗಳನ್ನು ಚುನಾವಣಾ ಆಯೋಗ 'ಪಡೆದಿದೆ.' ಇನ್ನುಳಿದ ವರ್ಷಗಳಲ್ಲಿ ಬಿಇಎಲ್ ಪೂರೈಸಿದ ಮತಯಂತ್ರಗಳಿಗಿಂತ ಕಡಿಮೆ ಮತಯಂತ್ರಗಳನ್ನು ಚುನಾವಣಾ ಆಯೋಗ ಪಡೆದಿದೆ.

ಇದನ್ನೂ ಓದಿ : ಬಿಜೆಪಿಯೇ ಹುಟ್ಟುಹಾಕಿದ್ದ ಮತಯಂತ್ರ ದುರ್ಬಳಕೆ ಚರ್ಚೆ ಈಗ ವಿಪಕ್ಷಗಳ ಅಸ್ತ್ರ

ಇದೇ ರೀತಿ, 2003-04ರಲ್ಲಿ ಚುನಾವಣಾ ಆಯೋಗ ಪಡೆದಿರುವುದಕ್ಕಿಂತಲೂ 25,625 ಹೆಚ್ಚು ಮತಯಂತ್ರಗಳನ್ನು ಬಿಇಎಲ್ ಪೂರೈಸಿದೆ. ಇನ್ನೊಂದೆಡೆ, 2005-06ರಲ್ಲಿ ಆಯೋಗವು 36,395 ಯಂತ್ರಗಳನ್ನು ಪಡೆದಿದೆ. ಆದರೆ ಬಿಇಎಲ್ ದಾಖಲೆಗಳ ಪ್ರಕಾರ, ಅದು ಕಳುಹಿಸಿದ್ದು ಕೇವಲ 2,070 ಮತಯಂತ್ರಗಳನ್ನು ಮಾತ್ರ. 2014-15ರಲ್ಲಿ ತಾನು 62,183 ಮತಯಂತ್ರಗಳನ್ನು ಕಳುಹಿಸಿರುವುದಾಗಿ ಬಿಇಎಲ್ ಹೇಳಿಕೊಂಡಿದೆ. ಆದರೆ, ಚುನಾವಣಾ ಆಯೋಗಕ್ಕೆ ಒಂದೇ ಒಂದು ಮತಯಂತ್ರ ಪೂರೈಕೆಯಾಗಿಲ್ಲ!

ಚುನಾವಣಾ ಆಯೋಗ ಮತ್ತು ಇಸಿಐಎಲ್ ಹೈದರಾಬಾದ್ ಹೇಳುವ ಪ್ರಕಾರ, 1989ರಿಂದ 2016-17ರತನಕ ಆ ಸಂಸ್ಥೆ ಒಟ್ಟು 19,445,93 ಮತಯಂತ್ರ ಪೂರೈಸಿದೆ. ಆಯೋಗದ ಪ್ರಕಾರ, ಅದಕ್ಕೆ ಪೂರೈಕೆಯಾಗಿದ್ದು ಕೇವಲ 10.146,44 ಮತಯಂತ್ರಗಳು! ಅಂದರೆ 9,29,949 ಮತಯಂತ್ರಗಳ ವ್ಯತ್ಯಯ ಉಂಟಾಗಿದೆ.

ಬಿಇಎಲ್ ಪ್ರಕರಣದಲ್ಲಿ ನಡೆದಿರುವಂತೆಯೇ, ಪ್ರತಿವರ್ಷದ ಅಂಕಿ-ಅಂಶಗಳು ಅನೇಕ ಅಚ್ಚರಿಯ ವ್ಯತ್ಯಯಗಳನ್ನು ಎತ್ತಿತೋರಿಸುತ್ತವೆ. ಉದಾಹರಣೆಗೆ, ಚುನಾವಣಾ ಆಯೋಗ ಹೇಳುವ ಪ್ರಕಾರ, 2013-14ರಲ್ಲಿ ಅದು 1,91,438 ಮತಯಂತ್ರಗಳನ್ನು ಪಡೆದಿದೆ. ಆದರೆ, ಇಸಿಐಎಲ್ ಹೇಳುವ ಪ್ರಕಾರ, ಅದು ಆ ವರ್ಷ ಯಾವುದೇ ಮತಯಂತ್ರವನ್ನು ಪೂರೈಸಿಲ್ಲ. ಇದೇ ವೇಳೆ, 2014-17ರ ನಡುವೆ ತಾನು 2,94,337 ಮತಯಂತ್ರಗಳನ್ನು ಪೂರೈಸಿರುವುದಾಗಿ ಇಸಿಐಎಲ್ ಹೇಳಿಕೊಂಡಿದೆ. ಆದರೆ, ತಾನು ಯಾವುದೇ ಮತಯಂತ್ರಗಳನ್ನು ಇಸಿಐಎಲ್‌ನಿಂದ ಪಡೆದಿಲ್ಲ ಎಂದು ಚುನಾವಣಾ ಆಯೋಗ ಹೇಳಿಕೊಂಡಿದೆ.

ಲೆಕ್ಕಾಚಾರದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಕಂಡುಬರುವ ಈ ವ್ಯತ್ಯಾಸಕ್ಕೆ ಖಂಡಿತವಾಗಿಯೂ ಸೂಕ್ತ ವಿವರಣೆ ಬೇಕು. ಐಎಎನ್‌ಎಸ್ ಸುದ್ದಿಸಂಸ್ಥೆ ವರದಿ ಮಾಡಿರುವ ಪ್ರಕಾರ, "ಎರಡು ಸಂಸ್ಥೆಗಳಿಂದ ಪಡೆದಿರುವ ಎಲೆಕ್ಟ್ರಾನಿಕ್ ಮತಯಂತ್ರಗಳ ಸಂಖ್ಯೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ವ್ಯತ್ಯಯ ಕಂಡುಬರಲು ಕಾರಣವೇನು? ಬಿಇಎಲ್ ಮತ್ತು ಇಸಿಐಎಲ್ ಪೂರೈಸಿರುವ ಹೆಚ್ಚುವರಿ ಯಂತ್ರಗಳು ಎಲ್ಲಿ ಹೋಗಿವೆ?" ಎಂದು ರಾಯ್ ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗಳಿಗೆಲ್ಲ ಉತ್ತರ ಪಡೆಯಲು ಇವರು ಬಾಂಬೆ ಹೈಕೋರ್ಟ್‌ನ ಕದ ತಟ್ಟಲು ಇವರು ನಿರ್ಧರಿಸಿದ್ದಾರೆ.

ಮತಯಂತ್ರಗಳ ದುರ್ಬಳಕೆ ಕುರಿತು ಈ ಹಿಂದೆಯೂ ಅನೇಕ ವಿಪಕ್ಷಗಳು ಕಳವಳ ವ್ಯಕ್ತಪಡಿಸಿದ್ದವು. ಚುನಾವಣಾ ಆಯೋಗ ಮತ್ತು ಮತಯಂತ್ರ ತಯಾರಕ ಸಂಸ್ಥೆಗಳು ಈ ಕುರಿತು ಸತ್ಯ ನುಡಿಯಬೇಕಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More