ರೇಟ್‌ ಕಾರ್ಡಿನಿಂದ ಪ್ಯಾಕೇಜ್‌; ಸಾವಿರಾರು ಕೋಟಿ ರುಪಾಯಿ ಉದ್ಯಮ ಪೇಯ್ಡ್‌ ನ್ಯೂಸ್

ಪ್ರಜಾಪ್ರಭುತ್ವಕ್ಕೆ ಮಾರಕವಾದ ಪೇಯ್ಡ್‌ ನ್ಯೂಸ್‌, ಹಲವು ಮಾಧ್ಯಮಗಳ ಪಾಲಿಗೆ ಕಾಮಧೇನು. ಪ್ಯಾಕೇಜ್‌ ಲೆಕ್ಕದಲ್ಲಿ ಸುದ್ದಿ ಪ್ರಕಟಿಸಲು ಮುಂದಾಗುವ ಮಾಧ್ಯಮಗಳು ಪೇಯ್ಡ್‌ ನ್ಯೂಸ್‌ ಅನ್ನು ಕೋಟ್ಯಂತರ ರು. ಮಾರುಕಟ್ಟೆ ಆಗಿಸಿವೆ. ಹಣ ನೀಡದಿದ್ದಕ್ಕೆ ಸುದ್ದಿ ಪ್ರಕಟಿಸಿದ ನಿರ್ಧಾರ ಮಾಡಿದ್ದೂ ಇದೆ

ಪೇಯ್ಡ್‌ ನ್ಯೂಸ್ ಎಂಬ ಪೆಡಂಭೂತವು ಭಾರತದ ಪತ್ರಿಕಾ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಆಳವಾಗಿ ಬೇರುಬಿಟ್ಟಿದ್ದು, ಅದರ ವ್ಯಾಪ್ತಿಯು ಗಣನೆಗೆ ನಿಲುಕದಷ್ಟು ಹಬ್ಬಿದೆ. ಅತ್ಯಂತ ಸಂಘಟಿತವಾಗಿ ಕೆಲಸ ಮಾಡುವ ಪೇಯ್ಡ್‌ ನ್ಯೂಸ್ ಜಾಲದಲ್ಲಿ ಪತ್ರಕರ್ತರು, ಮ್ಯಾನೇಜರ್‌ಗಳು, ಮಾಧ್ಯಮ ಸಂಸ್ಥೆಯ ಮಾಲೀಕರಲ್ಲದೇ ಜಾಹೀರಾತು ಏಜೆನ್ಸಿ ಮತ್ತು ಸಾರ್ವಜನಿಕ ಸಂಪರ್ಕ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಸಕಾರಾತ್ಮಕ ಸುದ್ದಿ ಬರೆಯುವುದು ಮತ್ತು ಪ್ರಸಾರ ಮಾಡುವುದಕ್ಕಾಗಿ ರಾಜಕಾರಣಿಗಳು ವೈಯಕ್ತಿಕ ನೆಲೆಯಲ್ಲಿ ಪತ್ರಕರ್ತರಿಗೆ ಹಣ, ಆಭರಣ, ಸೈಟು ಮತ್ತಿತರ ಆಮಿಷಗಳನ್ನು ಒಡ್ಡುತ್ತಾರೆ. ಕೆಲವು ಕಡೆ ಪತ್ರಕರ್ತರೇ ಹಣ ಮತ್ತು ಉಡುಗೊರೆಗಳಿಗೆ ಬೇಡಿಕೆ ಇಡುತ್ತಾರೆ. ಅಗತ್ಯ ಬಿದ್ದಾಗ ರಾಜಕಾರಣಿಗಳಿಂದ ವಿವಿಧ ರೀತಿಯ ಸಹಾಯ ಪಡೆಯುವ ಪತ್ರಕರ್ತರ ಗುಂಪು ದೊಡ್ಡದೇ ಇದೆ.

ರಾಜಕಾರಣಿಗಳ ಜೊತೆ ಪತ್ರಕರ್ತರು ಹೊಂದಿರುವ ಸಂಪರ್ಕವನ್ನು ಬಳಸಿಕೊಳ್ಳುವ ಮಾಧ್ಯಮ ಸಂಸ್ಥೆಯ ಮಾರ್ಕೆಟಿಂಗ್‌ ಎಕ್ಸಿಕ್ಯೂಟಿವ್‌ಗಳು ಆ ಮೂಲಕ ಪೇಯ್ಡ್‌ ನ್ಯೂಸ್‌ ವ್ಯವಹಾರ ನಡೆಸುತ್ತಾರೆ. ರಾಜಕಾರಣಿಗಳ ಜೊತೆ ಸಂಪರ್ಕ ಏರ್ಪಡಿಸಲು ಸಹಕರಿಸಿದ್ದಕ್ಕಾಗಿ ಕೆಲವು ಕಡೆ ಪತ್ರಕರ್ತರಿಗೂ ಪರ್ಸೆಂಟೇಜ್‌ ಲೆಕ್ಕದಲ್ಲಿ ಕಮಿಷನ್‌ ನೀಡಲಾಗುತ್ತದೆ. ಜಾಹೀರಾತು ಮತ್ತು ಮತ್ತಿತರ ಕೆಲಸಕ್ಕಾಗಿ ಮಾರ್ಕೆಟಿಂಗ್‌ ಮತ್ತು ಪ್ರಸರಣ ವಿಭಾಗದವರಿಗೆ ಸಹಕರಿಸುವಂತೆ ಮಾಧ್ಯಮ ಸಂಸ್ಥೆಗಳೇ ಸೂಚನೆ ನೀಡುವುದು ಈಗ ಸಾಮಾನ್ಯವಾಗಿದೆ.

ರಾಜಕಾರಣಿಗಳ ಜೊತೆ ಸಂಪರ್ಕ ಸಾಧಿಸುವ ಮಾರ್ಕೆಟಿಂಗ್‌ ವಿಭಾಗದವರು ಸಕಾರಾತ್ಮಕ ಸುದ್ದಿ ಪ್ರಕಟಣೆ/ ಪ್ರಸಾರಕ್ಕೆ ಸಂಬಂಧಿಸಿದ ರೇಟ್‌ ಕಾರ್ಡ್‌ (ದರ ಪಟ್ಟಿ) ಅಥವಾ ನಿರ್ದಿಷ್ಟ ದಿನಗಳವವರೆಗೆ ಪ್ರಚಾರ ನೀಡಲು ಪ್ಯಾಕೇಜ್‌ ಆಫರ್‌ ಮಾಡುತ್ತಾರೆ. ಕೆಲವು ಕಡೆ ವರದಿಗಾರರು ಮತ್ತು ಪ್ರತಿನಿಧಿಗಳಿಗೆ ಮಾಧ್ಯಮ ಸಂಸ್ಥೆಗಳೇ ಟಾರ್ಗೆಟ್‌ ವಿಧಿಸಿರುತ್ತವೆ. ರಾಜಕಾರಣಿಯ ಪರವಾಗಿ ವಿಶೇಷ ಸಂಚಿಕೆಗಳನ್ನೂ ರೂಪಿಸಲಾಗುತ್ತದೆ. ಇಲ್ಲಿ ಮಾಧ್ಯಮ ಸಂಸ್ಥೆಗಳೇ ತನ್ನ ವರದಿಗಾರರ ನೆರವಿನಿಂದ ಸಂಬಂಧಿತ ರಾಜಕಾರಣಿಯ ‘ಸಾಧನೆ’ಯ ವಿಶೇಷ ವರದಿಗಳನ್ನು ಸಿದ್ಧಪಡಿಸುತ್ತವೆ. ಮತ್ತೆ ಕೆಲವು ಕಡೆ ಈ ಕೆಲಸವನ್ನು ಸಾರ್ವಜನಿಕ ಸಂಪರ್ಕ ಸಂಸ್ಥೆ ಅಥವಾ ಜಾಹೀರಾತು ಏಜೆನ್ಸಿಗಳು ಮಾಡುತ್ತವೆ. ನಿರ್ದಿಷ್ಟ ದಿನಗಳ ಪ್ರಚಾರಕ್ಕಾಗಿ ೫೦ ಸಾವಿರದಿಂದ ಕೋಟ್ಯಂತರ ರುಪಾಯಿವರೆಗೂ ಪ್ಯಾಕೇಜ್‌ ಇರಲಿದ್ದು, ಅವಶ್ಯಕತೆ ಮತ್ತು ಶಕ್ತ್ಯಾನುಸಾರ ರಾಜಕಾರಣಿಗಳು ಪ್ಯಾಕೇಜ್‌ ಖರೀದಿಸುತ್ತಾರೆ.

ಪೇಯ್ಡ್‌ ನ್ಯೂಸ್‌ ರುಜುವಾತುಪಡಿಸಲು ಸಾಂದರ್ಭಿಕ ದಾಖಲೆ ದೊರಕಿದರೂ ಹಣದ ವರ್ಗಾವಣೆಯು ನಗದು ರೂಪದಲ್ಲೇ ನಡೆಯುವುದರಿಂದ ಅದನ್ನು ಸಾಬೀತುಪಡಿಸುವುದು ಅಷ್ಟು ಸುಲಭವಲ್ಲ. ಮಾಧ್ಯಮಗಳು ತಮ್ಮ ಜಾಹೀರಾತು ದರಪಟ್ಟಿ ಆಧಾರದಲ್ಲೇ ಪೇಯ್ಡ್‌ ನ್ಯೂಸ್‌ಗಳಿಗೆ ಹಣ ಪಡೆಯುತ್ತವೆ. ಆದರೆ, ಅವುಗಳನ್ನು ಜಾಹೀರಾತು ಎಂದು ಪರಿಗಣಿಸುವುದಿಲ್ಲವಷ್ಟೆ. ಅಭ್ಯರ್ಥಿಯು ಪ್ಯಾಕೇಜ್‌ಗೆ ಸಮ್ಮಿತಿಸಿದರೆ ಅವರ ಪರವಾಗಿ ಸುದ್ದಿ ಪ್ರಕಟಣೆ/ ಪ್ರಸಾರದ ಜೊತೆಗೆ ಎದುರಾಳಿಯ ವಿರುದ್ಧ ನಕಾರಾತ್ಮಕ ಸುದ್ದಿ ಪ್ರಕಟಿಸಲಾಗುತ್ತದೆ. ಇದಕ್ಕೆ ಒಪ್ಪದ ಅಭ್ಯರ್ಥಿಗಳಿಗೆ ಮಾಧ್ಯಮಗಳು ಪ್ರಚಾರವನ್ನೇ ನೀಡದೇ ತಿರಸ್ಕಿರಿಸಿರುವ ಸಾಕಷ್ಟು ಉದಾಹರಣೆಗಳೂ ಇವೆ. ಪೇಯ್ಡ್‌ ನ್ಯೂಸ್‌ ಅಕ್ರಮ ಎಂದು ತಿಳಿದಿದ್ದರೂ ಹಲವು ಮಾಧ್ಯಮ ಸಂಸ್ಥೆಗಳು ಇದರಲ್ಲಿ ಉದ್ದೇಶಪೂರ್ವಕವಾಗಿ ಪಾಲುದಾರರಾಗಿದ್ದು, ಬಹಿರಂಗವಾಗಿ ವಿರೋಧ ವ್ಯಕ್ತಪಡಿಸುವ ಮೂಲಕ ಆತ್ಮವಂಚನೆಗೂ ಇಳಿದಿವೆ.

ರಾಜಕಾರಣದಲ್ಲಿ ಹಣದ ಪ್ರಭಾವದ ಜೊತೆಗೆ ಕಪ್ಪು ಹಣದ ವ್ಯವಹಾರ ಹೆಚ್ಚಾಗುವುದಕ್ಕೆ ಮಾಧ್ಯಮಗಳು ನೇರ ಕಾರಣವಾಗುತ್ತಿದ್ದು, ಪ್ರಜಾಪ್ರಭುತ್ವದ ಪ್ರಕ್ರಿಯೆ ಮತ್ತು ನಿಲುವಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ. ಇದರಿಂದಾಗಿ ಮುಕ್ತ ಮತ್ತು ನ್ಯಾಯಸಮ್ಮತವಾಗಿ ಚುನಾವಣೆ ನಡೆಸುವ ಆಯೋಗದ ಆಶಯ ಮಣ್ಣು ಪಾಲಾಗುತ್ತಿದೆ. ಪೇಯ್ಡ್‌ ನ್ಯೂಸ್‌ ಎಂಬ ಪಿಡುಗು ಒಟ್ಟಾರೆ ವ್ಯವಸ್ಥೆಯನ್ನೇ ಭ್ರಷ್ಟಗೊಳಿಸುತ್ತಿದೆ ಎಂದು ‘ಪೇಯ್ಡ್‌ ನ್ಯೂಸ್‌: ಹೌ ಕರಪ್ಷನ್‌ ಇನ್‌ ದಿ ಇಂಡಿಯನ್‌ ಮೀಡಿಯಾ ಅಂಡರ್‌ಮೈನ್ಸ್‌ ಡೆಮಾಕ್ರಸಿ’ ವರದಿಯಲ್ಲಿ ಉಲ್ಲೇಖಿಸಲಾಗಿದೆ.

೨೦೦೯ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಸಕಾರಾತ್ಮ ಸುದ್ದಿ ಪ್ರಕಟಣೆಗಾಗಿ ‘ಈನಾಡು’ ಪತ್ರಿಕೆಗೆ ೫೦ ಸಾವಿರ ರುಪಾಯಿ ಹಣ ಪಾವತಿಸಿದ್ದಾಗಿ ಅದನ್ನು ಚುನಾವಣಾ ವೆಚ್ಚಕ್ಕೆ ಸೇರಿಸಿರುವುದಾಗಿ ಆಂಧ್ರಪ್ರದೇಶದ ಲೋಕಸತ್ತಾ ಪಕ್ಷದ ಅಭ್ಯರ್ಥಿಯಾಗಿದ್ದ ಪಿ ಕೋದಂಡರಾಮ್‌ ರಾವ್ ಅವರು ಚುನಾವಣೆ ಆಯೋಗಕ್ಕೆ ಔಪಚಾರಿಕವಾಗಿ ದೂರು ನೀಡಿದ್ದರು. ೨೦೦೯ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಲಾಲ್‌ಜೀ ಟಂಡನ್‌ ಅವರು ವಿಶ್ವದ ಅತ್ಯಂತ ಹೆಚ್ಚು ಪ್ರಸಾರ ಹೊಂದಿರುವ ಪತ್ರಿಕೆ ಎಂಬ ಖ್ಯಾತಿ ಹೊಂದಿರುವ ‘ದೈನಿಕ್‌ ಜಾಗರಣ್’ ಪತ್ರಿಕೆ‌ ವಿರುದ್ಧ ಪೇಯ್ಡ್‌ ನ್ಯೂಸ್‌ ಆರೋಪ ಮಾಡಿದ್ದರು. ‘ಹಣ ನೀಡುವುದಿಲ್ಲ ಎಂದಿದ್ದಕ್ಕೆ ಪತ್ರಿಕೆ ನನ್ನ ಪ್ರಚಾರದ ಯಾವುದೇ ಸುದ್ದಿಯನ್ನು ಪ್ರಕಟಿಸಿರಲಿಲ್ಲ’‌ ಎನ್ನುವ ಮೂಲಕ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ನಿಕಟವರ್ತಿಯಾಗಿದ್ದ ಟಂಡನ್‌ ಅವರು ಪೇಯ್ಡ್‌ ನ್ಯೂಸ್‌ ಅಗಾಧತೆಯನ್ನು ಪರಿಚಯಿಸಿದ್ದರು. ಆದರೆ, ಪತ್ರಿಕೆಯು ಟಂಡನ್‌ ಆರೋಪ ನಿರಾಧಾರ ಎಂದು ಅಲ್ಲಗಳೆದಿತ್ತು.

ಇದೇ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಮಾಜಿ ಮುಖ್ಯಮಂತ್ರಿ ಅಶೋಕ್‌ ಚೌಹಾಣ್‌ ಪರವಾಗಿ ಮರಾಠಿ ಪತ್ರಿಕೆಗಳಾದ ಲೋಕಮತ್‌, ಪುಡಾರಿ ಮತ್ತು ಮಹಾರಾಷ್ಟ್ರ ಟೈಮ್ಸ್‌ ಪತ್ರಿಕೆಗಳಲ್ಲಿ ಹಲವು ಪೇಯ್ಡ್‌ ನ್ಯೂಸ್‌ ಪ್ರಕಟವಾಗಿರುವುದನ್ನು ಹಿರಿಯ ಪತ್ರಕರ್ತ ಪಿ ಸಾಯಿನಾಥ್‌ ಅವರು ದಾಖಲೆ ಸಮೇತ ವರದಿ ಮಾಡಿದ್ದರು. ಆ ಚುನಾವಣೆಯಲ್ಲಿ ಆಯೋಗವು ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ಗರಿಷ್ಠ ೧೦ ಲಕ್ಷ ರುಪಾಯಿಗೆ ನಿಗದಿಪಡಿಸಿತ್ತು. ಚೌಹಾಣ್‌ ಅವರು ಕೇವಲ ೭ ಲಕ್ಷ ರುಪಾಯಿ ಖರ್ಚು ಮಾಡಿರುವುದಾಗಿ ಆಯೋಗಕ್ಕೆ ದಾಖಲೆ ಸಲ್ಲಿಸಿದ್ದರು. ಇದರಲ್ಲಿ ೫,೩೭೯ ರುಪಾಯಿಗಳನ್ನು ಪತ್ರಿಕೆ ಮತ್ತು ೬ ಸಾವಿರ ರುಪಾಯಿಗಳನ್ನು ಕೇಬಲ್‌ ಟಿವಿ ಜಾಹೀರಾತಿಗೆ ವೆಚ್ಚ ಮಾಡಿರುವುದಾಗಿ ವಿವರಿಸಿದ್ದರು. ಆದರೆ, ಚೌಹಾಣ್‌ ಪರವಾಗಿ ೮೯ ಪೂರ್ಣಪುಟದ ಸುದ್ದಿ (ಬಹುತೇಕ ಕಲರ್ ಪುಟ‌) ಪ್ರಕಟವಾಗಿರುವ ದಾಖಲೆಯನ್ನು ಸಾಯಿನಾಥ್‌ ಅವರು ಸಂಗ್ರಹಿಸಿದ್ದರು. ಇದರಲ್ಲಿ ಬಹುತೇಕ ಪುಟಗಳು ೨೦೦೬ರಲ್ಲಿ ರಾಷ್ಟ್ರೀಯ ಓದುಗರ ಸಮೀಕ್ಷೆ ಪ್ರಕಾರ ಮರಾಠಿ ಭಾಷೆಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಲೋಕಮತ್‌ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಸುದ್ದಿಗಳಾಗಿದ್ದವು. ಆದರೆ, ಆನಂತರದ ದಿನಗಳಲ್ಲಿ ಅವರ ವಿರುದ್ಧದ ಆರೋಪಗಳಿಗೆ ಸಾಕ್ಷ್ಯ ಕೊರತೆ ಎಂದು ಕೋರ್ಟ್ ಪ್ರಕರಣ ರದ್ದುಪಡಿಸಿತ್ತು.

ಇನ್ನು ‘ಔಟ್‌ಲುಕ್‌’ ಮ್ಯಾಗಜಿನ್‌ ಜೊತೆ ಮಾತನಾಡಿದ್ದ ಉತ್ತರ ಪ್ರದೇಶದ ಗೋರಖಪುರದ ಸಂಸದರಾಗಿ ಆಯ್ಕೆಯಾಗಿದ್ದ ಯೋಗಿ ಆದಿತ್ಯನಾಥ್‌ ಅವರು, ‘೨೦೦೯ರ ಚುನಾವಣೆಯಲ್ಲಿ ಪ್ರಮುಖ ಪತ್ರಿಕೆಗಳಲ್ಲಿ ತನ್ನ ಹೆಸರಿಗೆ ಸ್ಥಳಾವಕಾಶವೇ ದೊರಕಿರಲಿಲ್ಲ. ಅಷ್ಟರಮಟ್ಟಿಗೆ ಸಂಪಾದಕೀಯ ಸ್ಥಳವನ್ನು ಬಹುತೇಕ ಮಾಧ್ಯಮಗಳು ಮಾರಾಟ ಮಾಡಿಕೊಂಡಿದ್ದವು’ ಎಂದು ಆರೋಪಿಸಿದ್ದರು. ‘೪-೫ ಲಕ್ಷ ರುಪಾಯಿ ನೀಡಿದರೆ ವಿಶೇಷ ಯೋಜನೆಯಡಿ ೧೫-೨೦ ದಿನಗಳವರೆಗೆ ಸಕಾರಾತ್ಮಕ ಪ್ರಚಾರ ನೀಡುವುದಾಗಿ ಮಾಧ್ಯಮವೊಂದು ತನ್ನನ್ನು ಸಂಪರ್ಕಿಸಿತ್ತು’ ಎಂದು ೨೦೦೯ರ ಲೋಕಸಭಾ ಚುನಾವಣೆಯ ನಂತರ ತಮಿಳುನಾಡಿನ ಬಿಎಸ್‌ಪಿಯ ರಾಜ್ಯ ಕಾರ್ಯದರ್ಶಿ ಕೆ ರಾಮಸುಬ್ರಹ್ಮಣ್ಯನ್ ಅವರು ಭಾರತೀಯ ಪತ್ರಿಕಾ ಮಂಡಳಿಗೆ ಪತ್ರ ದೂರು ಸಲ್ಲಿಸಿದ್ದರು. ಸಿಪಿಐನ ಅತುಲ್‌ ಅನೇಜಾ ಅವರು ‘ದೈನಿಕ್‌ ಜಾಗರಣ್ ಮತ್ತು ಪಂಜಾಬ್‌ ಕೇಸರಿ ಪತ್ರಿಕೆಗಳು ಹಾಗೂ ಆಜ್‌ ತಕ್‌ ಟಿವಿ ಚಾನಲ್‌ ಸುದ್ದಿ ಪ್ರಕಟಿಸಲು ಹಣದ ಬೇಡಿಕೆ ಇಟ್ಟಿದ್ದವು. ಇದನ್ನು ತಿರಸ್ಕರಿಸಿದ್ದಕ್ಕೆ ಸುದ್ದಿಯನ್ನೇ ಪ್ರಕಟಿಸಿರಲಿಲ್ಲ’ ಎಂದು ಹೇಳಿದ್ದರು.

ಇನ್ನು ಆಂಧ್ರಪ್ರದೇಶದ ಮಾಜಿ ಸಂಸದ ಕೆ ಪಿ ರೆಡ್ಡಯ್ಯ ಯಾದವ್‌ ಅವರು ‘ಈನಾಡು ಸಮೂಹದ ಮುಖ್ಯಸ್ಥ ರಾಮೋಜಿ ರಾವ್‌ ಅವರು ೧೫ ದಿನಗಳ ಪ್ರಚಾರ ನೀಡಲು ವಿವಿಧ ಮಾಧ್ಯಮಗಳ ಜತೆ ಸೇರಿ ತಲಾ ೧೦ ಲಕ್ಷ ರುಪಾಯಿ ಪ್ಯಾಕೇಜ್‌ ನಿಗದಿಪಡಿಸಿದ್ದಾರೆ. ಅದರಂತೆಯೇ ಈನಾಡು, ಆಂಧ್ರ ಜ್ಯೋತಿ, ಸಾಕ್ಷಿ, ವಾರ್ತ ಮತ್ತು ಆಂಧ್ರಭೂಮಿ ಮತ್ತು ಟಿವಿ ಚಾನಲ್‌ಗಳಾದ ಟಿವಿ೯, ಈಟಿವಿ-೨, ಟಿವಿ-೫, ಎಚ್‌ಎಂ ಟಿವಿ ನ್ಯೂಸ್‌ಗೆ ಹಣ ಪಡೆದುಕೊಂಡಿವೆ’ ಎಂದು ಆರೋಪಿಸಿ ಭಾರತೀಯ ಪತ್ರಿಕಾ ಮಂಡಳಿಗೆ ೨೦೦೯ರಲ್ಲಿ ಪತ್ರ ಬರೆದಿದ್ದರು. ಆದರೆ, ರಾಮೋಜಿ ರಾವ್‌ ಅವರು ಆರೋಪ ಅಲ್ಲಗಳೆದಿದ್ದರು.

ಇದನ್ನೂ ಓದಿ : ಪೇಯ್ಡ್‌ ನ್ಯೂಸ್‌ಗೆ ದಶಕದ ಇತಿಹಾಸ; ಮಾಧ್ಯಮಗಳ ದಾಹವೇ ಅವಾಂತರಕ್ಕೆ ಮೂಲ

ಗಮನಾರ್ಹ ಅಂಶವೆಂದರೆ ಮೊದಲಿಗೆ ಪೇಯ್ಡ್‌ ನ್ಯೂಸ್‌ ವಿರುದ್ಧ ಧ್ವನಿ ಎತ್ತಿದ್ದು ಮತ್ತು ಪೇಡ್‌ ನ್ಯೂಸ್‌ ಪದ ಬಳಕೆಗೆ ತಂದಿದ್ದು ಆಂಧ್ರಪ್ರದೇಶ ಕಾರ್ಯನಿರತ ಪತ್ರಕರ್ತರ ಸಂಘ (ಎಪಿಯುಡಬ್ಲ್ಯುಜೆ). ‘೨೦೦೪ರಿಂದಲೂ ಪೇಯ್ಡ್‌ ನ್ಯೂಸ್‌ ಚಾಲ್ತಿಯಲ್ಲಿದ್ದು, ಗ್ರಾಮೀಣ ಭಾಗದ ಮಾಧ್ಯಮಗಳಲ್ಲಿ ಸಣ್ಣಮಟ್ಟದಲ್ಲಿ ಪೇಯ್ಡ್‌ ನ್ಯೂಸ್ ಪ್ರಕಟಿಸಲಾಗುತ್ತಿತ್ತು. ೨೦೦೯ರ ವೇಳೆಗೆ ಇದು ರಾಜ್ಯಮಟ್ಟದಲ್ಲಿ ವ್ಯಾಪಕವಾಯಿತು. ೨೦೦೯ರ ಮಾರ್ಚ್‌-ಏಪ್ರಿಲ್‌ನಲ್ಲಿ ೨೭ ದಿನಗಳ ಅಂತರದಲ್ಲಿ ಈನಾಡು ಪತ್ರಿಕೆಯಲ್ಲಿ ೯೪ ರಾಜಕೀಯ ಜಾಹೀರಾತು ಮತ್ತು ೯೨ ಪೇಯ್ಡ್‌ ನ್ಯೂಸ್‌, ಆಂಧ್ರ ಜ್ಯೋತಿಯಲ್ಲಿ ೮೭ ರಾಜಕೀಯ ಜಾಹೀರಾತು ಮತ್ತು ೧೬೩ ಪೇಯ್ಡ್‌ ನ್ಯೂಸ್‌ ಪ್ರಕಟವಾಗಿದ್ದವು. ಸಾಕ್ಷಿ, ವಾರ್ತ, ಆಂಧ್ರಭೂಮಿ ಮತ್ತು ಸೂರ್ಯ ಪತ್ರಿಕೆಗಳಲ್ಲೂ ಪೇಯ್ಡ್‌ ನ್ಯೂಸ್‌ ಪತ್ತೆಯಾಗಿದ್ದವು. ವಿಚಿತ್ರವೆಂದರೆ ಏಕಕಾಲಕ್ಕೆ ಒಂದೇ ಕ್ಷೇತ್ರದಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಗೆಲ್ಲುತ್ತಾರೆ ಎನ್ನುವ ಅರ್ಥ ಹೊಮ್ಮಿಸುವ ಸುದ್ದಿಗಳನ್ನು ಪ್ರಕಟಿಸಿದ್ದವು’ ಎಂದು ಪಿಸಿಐಗೆ ಎಪಿಯುಡಬ್ಲ್ಯುಜೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿತ್ತು.

‘ಅಂದಾಜು ೩೦೦-೧ ಸಾವಿರ ಕೋಟಿ ರುಪಾಯಿವರೆಗೂ ಪೇಯ್ಡ್‌ ನ್ಯೂಸ್‌ ಮಾರುಕಟ್ಟೆ ವಿಸ್ತರಿಸಿದೆ. ಮಹಾರಾಷ್ಟ್ರದಲ್ಲಿ ಪೇಯ್ಡ್‌ ನ್ಯೂಸ್‌ ಸಾವಿರಾರು ಕೋಟಿಯ ಮಾರುಕಟ್ಟೆಯಾಗಿ ಪರಿವರ್ತನೆಯಾಗಿತ್ತು’ ಎಂದು ‘ಪೇಯ್ಡ್‌ ನ್ಯೂಸ್‌: ಹೌ ಕರಪ್ಷನ್‌ ಇನ್‌ ದಿ ಇಂಡಿಯನ್‌ ಮೀಡಿಯಾ ಅಂಡರ್‌ಮೈನ್ಸ್‌ ಡೆಮಾಕ್ರಸಿ’ ವರದಿಯಲ್ಲಿ ವಿವರಿಸಲಾಗಿದೆ.

ಪಕ್ಷಾತೀತವಾಗಿ ದೇಶದ ಹಲವು ರಾಜಕಾರಣಿಗಳು ಪೇಯ್ಡ್‌ ನ್ಯೂಸ್‌ ಪಿಡುಗಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಕೆಲವರು ದೀರ್ಘವಾಧಿಯಲ್ಲಿ ಎದುರಾಗಬಹುದಾದ ಸಮಸ್ಯೆ ಅಂದಾಜಿಸಿ, ಮಾಧ್ಯಮಗಳ ಹೆಸರು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಪೇಯ್ಡ್‌ ನ್ಯೂಸ್‌ ವರ್ತುಲವು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಹಬ್ಬಿದೆ. ಕೆಲವು ಕಡೆ ವ್ಯಾಪಕವಾಗಿದ್ದರೆ ಮತ್ತೆ ಕೆಲವು ಕಡೆ ಇದ್ದೂ ಇಲ್ಲದಂತೆ ಕೆಲಸ ಮಾಡುತ್ತಿದೆ.

ಮುಂದುವರಿಯುವುದು...

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More