ತಾಜ್ ಮಹಲ್ ವಕ್ಫ್ ಮಂಡಳಿಗೆ ಸೇರಿದ್ದು ಎಂದು ಶಹಜಹಾನ್ ಸಹಿ ಹಾಕಿದ್ದು ನಿಜವೇ?

ಉತ್ತರ ಪ್ರದೇಶದ ಸುನ್ನಿ ವಕ್ಫ್ ಮಂಡಳಿ ಹಾಗೂ ಭಾರತ ಪುರಾತತ್ವ ಇಲಾಖೆಯು ತಾಜ್‌ ಮಹಲ್ ನಮ್ಮ ಆಸ್ತಿ ಎಂದು ಹೇಳಿಕೊಂಡು ನ್ಯಾಯಾಲಯದಲ್ಲಿ ಕಿತ್ತಾಡುತ್ತಿವೆ. ಶಹಜಹಾನ್ ತಾಜ್ ಮಹಲ್ ವಕ್ಫ್ ಮಂಡಳಿಗೇ ಸೇರಿದ್ದೆಂದು ವಕ್ಫ್ ನಾಮಾದಲ್ಲಿ ಸಹಿ ಹಾಕಿರುವುದಾಗಿ ವಕ್ಫ್ ಮಂಡಳಿ ವಾದಿಸುತ್ತಿದೆ

ಮೊಘಲ್ ರಾಜ ಶಹಜಹಾನ್ ತನ್ನ ಹೆಂಡತಿ ಮಮ್ತಾಜ್‌ಗೋಸ್ಕರ ಆಗ್ರಾದಲ್ಲಿ ಕಟ್ಟಿಸಿದ ಸ್ಮಾರಕ ಈಗ ವಿವಿಧ ಗುಂಪುಗಳ ಕಿತ್ತಾಟಕ್ಕೆ ಕಾರಣವಾಗಿದೆ. ಉ.ಪ್ರದೇಶದ ಸುನ್ನಿ ವಕ್ಫ್ ಮಂಡಳಿ ಹಾಗೂ ಭಾರತ ಪುರಾತತ್ವ ಇಲಾಖೆಯು ತಾಜ್‌ ಮಹಲ್ ನಮ್ಮ ಆಸ್ತಿ ಎಂದು ಹೇಳಿಕೊಂಡು ನ್ಯಾಯಾಲಯದಲ್ಲಿ ಕಿತ್ತಾಡುತ್ತಿವೆ. ತಾಜ್ ಮಹಲ್ ವಕ್ಫ್ ಮಂಡಳಿಗೇ ಸೇರಿದ್ದೆಂದು ವಕ್ಫ್ ನಾಮಾದಲ್ಲಿ ಶಹಜಹಾನ್ ಸಹಿ ಹಾಕಿದ್ದಾನೆ, ಹಾಗಾಗಿ ತಾಜ್‌ ಮಹಲ್ ತನ್ನ ವ್ಯಾಪ್ತಿಗೆ ಬರುತ್ತದೆ ಎಂದು ವಕ್ಫ್ ಮಂಡಳಿ ವಾದಿಸುತ್ತಿದೆ. ಈ ಮಧ್ಯೆ, ಶಹಜಹಾನ್ ಸಹಿ ಹಾಕಿದ್ದೇ ಆದಲ್ಲಿ ದಾಖಲೆಗಳನ್ನು ಹಾಜರುಪಡಿಸಿ ಎಂದು ಸುಪ್ರೀಂ ಕೋರ್ಟ್ ವಕ್ಫ್ ಮಂಡಳಿಗೆ ಒಂದು ವಾರದ ಗಡುವು ನೀಡಿದೆ.

೧೬೬೬ರಲ್ಲಿ ಮರಣ ಹೊಂದಿದ ಶಹಜಹಾನ್ ಬರೆದುಕೊಟ್ಟ ದಾಖಲೆ ಪತ್ರವನ್ನು ಹಾಜರುಪಡಿಸುವುದು ವಕ್ಫ್ ಮಂಡಳಿಗೆ ಅಸಾಧ್ಯದ ಕೆಲಸವೇ ಸರಿ. 1631ರಲ್ಲಿ ತಾಜ್ ಮಹಲ್ ನಿರ್ಮಾಣ ಆರಂಭವಾಗುತ್ತದೆ, ೧೮ ವರ್ಷಗಳ ಬಳಿಕ ನಿರ್ಮಾಣ ಪೂರ್ಣಗೊಳ್ಳುತ್ತದೆ. ಆದರೆ, ಶಹಜಹಾನ್ ಈ ಮಧ್ಯೆ ಅನಾರೋಗ್ಯಕ್ಕೆ ಒಳಗಾಗುತ್ತಾನೆ ಹಾಗೂ ಮಗ ಔರಂಗಜೇಬನಿಂದಲೇ ಗೃಹಬಂಧನಕ್ಕೆ ಒಳಗಾಗುತ್ತಾನೆ. ಅಂತಹ ಸಂದರ್ಭದಲ್ಲಿ ಆತ ತಾಜ್ ಮಹಲ್ ವಕ್ಫ್ ಮಂಡಳಿಗೆ ಸೇರಿದ್ದು ಎಂದು ಬರೆದುಕೊಡಲು ಹೇಗೆ ಸಾಧ್ಯ ಎಂದು ಸುಪ್ರೀಂ ಕೋರ್ಟ್ ವಕ್ಫ್ ಮಂಡಳಿಯನ್ನು ಪ್ರಶ್ನಿಸಿದೆ. ಇದನ್ನು ಯಾರೂ ನಂಬಲು ಸಾಧ್ಯವಿಲ್ಲ, ಕೋರ್ಟಿನ ಸಮಯವನ್ನು ಹಾಳುಮಾಡಬೇಡಿ ಎಂದೂ ನ್ಯಾಯಾಧೀಶರು ತರಾಟೆಗೆ ತಗೆದುಕೊಂಡಿದ್ದಾರೆ.

೨೦೧೫ರಲ್ಲಿ ವಕ್ಫ್ ಮಂಡಳಿಯು ತಾಜ್ ಮಹಲ್ ತನ್ನ ಆಸ್ತಿಯೆಂದು ಘೋಷಣೆ ಮಾಡಿಕೊಂಡಿತು. ಅದರ ವಿರುದ್ಧ ಪುರಾತತ್ವ ಇಲಾಖೆ ೨೦೧೦ರಲ್ಲಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿತು. ಮಂಡಳಿಯ ಆದೇಶಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿತು. ಆಗ ಹಿರಿಯ ವಕೀಲ ವಿ ವಿ ಗಿರಿಯವರು ಕೂಡ ಶಹಜಹಾನ್ ಆಗ ಇದ್ದ ಪರಿಸ್ಥಿತಿಯಲ್ಲಿ ಸಹಿ ಹಾಕಲು ಸಾಧ್ಯವೇ ಎಂದು ಪ್ರಶ್ನಿಸಿ ವಾದ ಮಂಡಿಸಿದ್ದರು. ೧೭ನೇ ಶತಮಾನದ ಈ ಸ್ಮಾರಕ ಅದು ಸಂಪೂರ್ಣ ಕಟ್ಟಿ ಮುಗಿಯುವದರೊಳಗಾಗಿ ಬ್ರಿಟಿಷರಿಗೆ ಹಸ್ತಾಂತರವಾಗಿದೆ, ಭಾರತ ಸ್ವತಂತ್ರಗೊಂಡ ನಂತರ ಅದು ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಬಂದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಬಾಬರಿ ಮಸೀದಿ ಪ್ರಕರಣ; ಲೆಬರ್ಹಾನ್ ಆಯೋಗದ ವರದಿ ಈಗಲೂ ಪ್ರಸ್ತುತ ಏಕೆ?

ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ತಾಜ್ ಮಹಲ್ ಸೇರಿದಂತೆ ಅನೇಕ ಪಾರಂಪರಿಕ ಕಟ್ಟಡಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಪುರಾತತ್ವ ಇಲಾಖೆ ವಹಿಸಿಕೊಂಡಿದೆ. ಧಾರ್ಮಿಕ ಹಿನ್ನೆಲೆಯಲ್ಲಿ ವಕ್ಫ್ ಮಂಡಳಿಯು ದತ್ತಿ ಆಸ್ತಿಯಾಗಿ ತಾಜ್ ಮಹಲನ್ನು ಪರಿವರ್ತಿಸುವ ಸಾಧ್ಯತೆ ಇದೆ ಎಂಬ ಕಾರಣ ನೀಡಿ, ಪುರಾತತ್ವ ಇಲಾಖೆಯು ಅದು ತನ್ನ ವ್ಯಾಪ್ತಿಗೆ ಬರುತ್ತದೆ ಎಂದು ಹೇಳುತ್ತಿದೆ. ಅಲ್ಲದೆ, ಇತ್ತೀಚೆಗೆ ಅತಿಯಾದ ವಾಯುಮಾಲಿನ್ಯದಿಂದ ತಾಜ್ ಮಹಲ್ ತನ್ನ ಹೊಳಪು ಕಳೆದುಕೊಳ್ಳುತ್ತಿದೆ; ಹೀಗಾಗಿ, ಆಗ್ರಾ ಸುತ್ತಲಿರುವ ಕಾರ್ಖಾನೆಗಳನ್ನು ಸ್ಥಗಿತಗೊಳಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರ ಈ ಹಿಂದೆ ಯೋಚಿಸಿತ್ತು. 1996ರಲ್ಲೇ ಸುಪ್ರೀಂ ಕೋರ್ಟ್‌, ತಾಜ್‌ ಸುತ್ತಮುತ್ತಲಿನ 500 ಮೀಟರ್‌ ಆವರಣವನ್ನು 'ಗ್ರೀನ್‌ ಬೆಲ್ಟ್‌' ಎಂದು ಪೋಷಿಸಬೇಕು ಎಂದು ತೀರ್ಪು ನೀಡಿತ್ತು. ವಕ್ಫ್ ಮಂಡಳಿಗೆ ತಾಜ್ ಮಹಲನ್ನು ವಹಿಸಿದರೆ ಸಂರಕ್ಷಿಸುವ ಆರ್ಥಿಕ ಸಾಮರ್ಥ್ಯ ಅದಕ್ಕೆ ಇದೆಯೇ ಎಂಬ ಪ್ರಶ್ನೆಯೂ ಎದ್ದಿದೆ.

ಈ ಮೇಲಿನ ಈ ಎರಡು ವಾದಗಳಲ್ಲದೆ, “ತಾಜ್ ಮಹಲ್ ಈ ಹಿಂದೆ ಶಿವನ ದೇವಾಲಯವಾಗಿತ್ತು; ಅದನ್ನು ಶಹಜಹಾನ್ ಇಸ್ಲಾಂ ಸ್ಮಾರಕವಾಗಿ ತನ್ನ ಹೆಂಡತಿಗಾಗಿ ನವೀಕರಿಸಿದ,” ಎಂದು ಸಂಘಪರಿವಾರ ಹೇಳಿಕೊಳ್ಳುತ್ತಿದೆ. ಹೀಗಾಗಿ ಸುಪ್ರೀಂ ಕೋರ್ಟ್ ಅಂತಿಮವಾಗಿ ಅದು ಯಾರ ವ್ಯಾಪ್ತಿಗೆ ಬರುತ್ತದೆ ಎಂಬ ಬಗ್ಗೆ ನಿರ್ಧಾರ ಪ್ರಕಟಿಸಲಿದ್ದು, ಎಲ್ಲರೂ ಸುಪ್ರೀಂ ಮಾತಿಗೆ ಎದುರುನೋಡುತ್ತಿದ್ದಾರೆ.

ಇಂದಿನ ಡೈಜೆಸ್ಟ್ | ನೀವು ಗಮನಿಸಬೇಕಾದ ಇತರ 10 ಪ್ರಮುಖ ಸುದ್ದಿಗಳು
ಒಂದು ವರ್ಷದ ನಂತರ ಎಚ್ಚೆತ್ತ ಸರ್ಕಾರ; ಸ್ಯಾನಿಟರಿ ನ್ಯಾಪ್ಕಿನ್ ತೆರಿಗೆ ರದ್ದು
ಮೋದಿ ದೇಶದ ಅತ್ಯಂತ ದುಬಾರಿ ಪ್ರಧಾನಿ; ವಿಮಾನ ಹಾರಾಟ ವೆಚ್ಚವೇ ₹1,484 ಕೋಟಿ
Editor’s Pick More