ಮುಂಬೈ-ಕರ್ನಾಟಕದಲ್ಲಿ ಲಿಂಗಾಯತ ಮತ ಹಿಡಿದಿಡಲು ಅಮಿತ್ ಶಾ ಪ್ರಯತ್ನ

ಮುಂಬೈ ಕರ್ನಾಟಕದಲ್ಲಿ ಮತಬೇಟೆ ನಡೆಸಿರುವ ಅಮಿತ್‌ ಶಾ, ಶುಕ್ರವಾರ ಕಿತ್ತೂರು, ಮುಧೋಳ, ಬೆಳಗಾವಿಯಲ್ಲಿ ಮತಯಾತ್ರೆ ನಡೆಸಿದರು. ಗೋಕಾಕದಲ್ಲಿ ರೋಡ್‌ ಶೋ ನಡೆಸಿ ಕಾರ್ಯಕರ್ತರಿಗೆ ಹುರುಪು ತುಂಬಿದ್ದಾರೆ. ಜೊತೆಗೆ ಸಿಎಂ ಎರಡು ಕಡೆ ಸ್ಪರ್ಧಿಸುವ ಕುರಿತು ಅಣಕಿಸಿದ್ದಾರೆ

ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಭ್ಯರ್ಥಿಯನ್ನೇ ಘೋಷಿಸದ ಮೂರು ಕ್ಷೇತ್ರಗಳಲ್ಲಿ ಶುಕ್ರವಾರ ಪ್ರಚಾರ ನಡೆಸಿದ್ದಾರೆ. ದಕ್ಷಿಣ ಮತ್ತು ಹೈದಾರಾಬಾದ್‌ ಕರ್ನಾಟಕದಲ್ಲಿ ನಿರೀಕ್ಷಿಸಿದ ಬೆಂಬಲ ಸಿಗದೆ ಕ್ರೋಧಗೊಂಡಿದ್ದ ಅಮಿತ್‌ ಶಾ ಅವರು ಮುಂಬೈ-ಕರ್ನಾಟಕದ ಜನಬೆಂಬಲದಿಂದ ಸಮಾಧಾನಗೊಂಡಂತಿದೆ. ಗಡಿ ಜಿಲ್ಲೆ ಬೆಳಗಾವಿಯ ಕಿತ್ತೂರು ಮತ್ತು ಗೋಕಾಕ, ಬಾಗಲಕೋಟೆ ಜಿಲ್ಲೆಯ ಮುಧೋಳ ಕ್ಷೇತ್ರಗಳಲ್ಲಿ ಅಹಿಂದ ಮತಗಳೇ ನಿರ್ಣಾಯಕವಾಗಿದ್ದು, ಲಿಂಗಾಯತ ಸಮುದಾಯದ ಮತಗಳು ಚದುರುವುದನ್ನು ತಡೆಯಲು ಅಮಿತ್ ಶಾ ಪ್ರಚಾರ ನಡೆಸಿದ್ದಾರೆ.

ಶುಕ್ರವಾರ ಬೆಳಗಾವಿ ಜಿಲ್ಲೆಯ ಕಿತ್ತೂರು, ಸಂಗೊಳ್ಳಿ ರಾಯಣ್ಣನನ್ನು ನೇಣಿಗೇರಿಸಿದ ನಂದಗಡ, ಗೋಕಾಕ ಹಾಗೂ ಮುಧೋಳದಲ್ಲಿ ಪ್ರಚಾರ ನಡೆಸಿರುವ ಅಮಿತ್‌ ಶಾ ಕಾರ್ಯಕರ್ತರಲ್ಲಿ ಹುರುಪು ತುಂಬಲು ಯತ್ನಿಸಿದ್ದಾರೆ. ಆನಂತರ ಮುಧೋಳದಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಅಧ್ಯಕ್ಷ, ಸಂಜೆ ಗೋಕಾಕದಲ್ಲಿ ರೋಡ್‌ ಶೋ ನಡೆಸಿದರು. ಬೆಳಗಾವಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು. "ಬಿಜೆಪಿ ಪರವಾದ ಅಲೆಯಿಂದ ಸಿದ್ದರಾಮಯ್ಯ ಬೆದರಿದ್ದಾರೆ. ಸೋಲುವ ಭೀತಿಯಿಂದ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಮಾತನಾಡುತ್ತಿದ್ದಾರೆ,” ಎಂದು ಗುಡುಗಿದ್ದಾರೆ. "ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಕಹಳೆ ಮೊಳಗಿಸಿದ ಐತಿಹಾಸಿಕ ಸ್ಥಳದಲ್ಲಿ ನಿಂತು ಮಾತನಾಡುತ್ತಿರುವುದಕ್ಕೆ ಸಂತಸವಾಗುತ್ತಿದೆ,” ಎಂದೂ ಶಾ ಹೇಳಿದ್ದಾರೆ.

ಬಾದಾಮಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡುವ ಸಾಧ್ಯತೆ ಇರುವುದರಿಂದ ಈ ಭಾಗದಲ್ಲಿ ಕದನಕಣದಲ್ಲಿ ಕಾವೇರಿದೆ. ಸಿದ್ದರಾಮಯ್ಯ ಸ್ಪರ್ಧೆಯಿಂದ ಈ ಭಾಗದ ಹಿಂದುಳಿದ, ಎಸ್‌ಸಿ, ಎಸ್‌ಟಿ ಮತಗಳು ಕಾಂಗ್ರೆಸ್‌ ಕಡೆಗೆ ವಾಲುವ ಸಾಧ್ಯತೆ ಇದೆ. ಇದನ್ನು ಅರಿತು ಬಿಜೆಪಿ ಭದ್ರಕೋಟೆ ಹಾಗೂ ಪಕ್ಷಕ್ಕೆ ಗೆಲ್ಲುವ ಸಾಧ್ಯತೆ ಇರುವ ಕ್ಷೇತ್ರಗಳನ್ನು ಗುರಿಯಾಗಿಟ್ಟುಕೊಂಡು ಶಾ ಅವರು ಪ್ರಚಾರ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಳೆದ ಬಾರಿ ಬಾಗಲಕೋಟೆಯಲ್ಲಿ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದರೆ, ಮುಧೋಳ ಮೀಸಲು ಕ್ಷೇತ್ರದಲ್ಲಿ ಮಾತ್ರ ಬಿಜೆಪಿಯ ಗೋವಿಂದ ಕಾರಜೋಳ ಗೆಲುವಿನ ಪತಾಕೆ ಹಾರಿಸಿದ್ದರು. ಲಿಂಗಾಯತ ಮತಗಳು ವಿಭಜನೆಯಾಗುವ ಸಾಧ್ಯತೆ ಇದ್ದು, ಈ ಮತಗಳು ಕಾಂಗ್ರೆಸ್‌ ತೆಕ್ಕೆಗೆ ಜಾರಿದರೆ ಬಿಜೆಪಿಗೆ ಹಿನ್ನಡೆಯಾಗಬಹುದು. ಇದನ್ನು ಅರಿತು ಶಾ ಅವರು ಮತ ಧ್ರುವೀಕರಣಕ್ಕಾಗಿ ಬೃಹತ್‌‌ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಕಿತ್ತೂರು ಕ್ಷೇತ್ರದಲ್ಲಿ ರೈತ ನಾಯಕ, ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಜೆಡಿಎಸ್‌ನಿಂದ ಕಣಕ್ಕೆ ಇಳಿಯಲು ಸಿದ್ಧರಾಗಿದ್ದಾರೆ. ಇಲ್ಲಿವರೆಗೂ ಬಿಜೆಪಿಯಲ್ಲಿಯೇ ಗುರುತಿಸಿಕೊಂಡಿದ್ದ ಅವರು, ಬಿಜೆಪಿಯ ವರ್ತನೆಯಿಂದ ಮುನಿಸಿಕೊಂಡು ಜೆಡಿಎಸ್ ಸೇರಿ ಕಮಲ ಉರುಳಿಸಲು ಮುಂದಾಗಿದ್ದಾರೆ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಈ ಮತಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದ ಡಿ ಬಿ ಇನಾಂದಾರ್ ಜಯ ಗಳಿಸಿದ್ದರು. ಈ ಬಾರಿ ಲಿಂಗಾಯತ ಮತಗಳೊಂದಿಗೆ ಅಹಿಂದ ಮತಗಳೂ ವಿಭಜನೆಯಾದರೆ ಬಿಜೆಪಿಗೆ ನಷ್ಟವಾಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಚುನಾವಣೆ ವಿಶೇಷ | ಅಮಿತ್‌ ಶಾ ಪ್ರವಾಸ ಸೃಷ್ಟಿಸಿದ ಎಂಟು ಎಡವಟ್ಟುಗಳು!

ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಪರಾಭವಗೊಂಡಿತ್ತು. ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರು, ಪ್ರಕಾಶ್‌ ಹುಕ್ಕೇರಿ ಹಾಗೂ ಉಮೇಶ್‌ ಕತ್ತಿ ಪ್ರಬಲರಾಗಿದ್ದಾರೆ. ಗೋಕಾಕ ಕ್ಷೇತ್ರದಲ್ಲಿ ಸಚಿವ ರಮೇಶ ಜಾರಕಿಹೊಳಿ ಸ್ಪರ್ಧಿಸುತ್ತಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಸತೀಶ ಜಾರಕಿಹೊಳಿ ಹಾಗೂ ರಮೇಶ ಅವರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇದರ ಲಾಭ ಪಡೆಯಲು ಬಿಜೆಪಿ ಯತ್ನಿಸಿದೆ ಎನ್ನಲಾಗಿದೆ. ಆದರೆ, ಗೋಕಾಕದ ಪಕ್ಕದಲ್ಲಿರುವ ಅರಭಾವಿ ಕ್ಷೇತ್ರವನ್ನು ರಮೇಶ ಅವರ ಮತ್ತೊಬ್ಬ ಸಹೋದರ ಬಾಲಚಂದ್ರ ಜಾರಕಿಹೊಳಿ ಪ್ರತಿನಿಧಿಸುತ್ತಾರೆ. ಬಿಜೆಪಿಯ ಹುರಿಯಾಳದ ಬಾಲಚಂದ್ರ ಅವರು ಸಹೋದರನನ್ನು ಹಣಿಯಲು ಮುಂದಾಗುವರೇ ಎನ್ನುವುದು ಕುತೂಹಲ ಮೂಡಿಸಿದೆ.

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ, ಎಸ್ಸಿ-ಎಸ್ಟಿ ಸಮುದಾಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಯೋಜನೆ, ಉತ್ತರ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸ್ಪರ್ಧೆಯಿಂದಾಗಿ ಹೊಡೆತ ಬೀಳಬಹುದು ಎಂಬುದು ಬಿಜೆಪಿಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಅದಕ್ಕಾಗಿ ಈ ಭಾಗದಲ್ಲಿ ವರ್ಚಸ್ಸು ವೃದ್ಧಿಸಿಕೊಳ್ಳುವ ಪ್ರಯತ್ನ ನಡೆದಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More