ದೇಶದ ನೈತಿಕತೆಯನ್ನೇ ಗಾಳಿಗೆ ತೂರಿದ ಕಟುವಾ ಘಟನೆ ಬಗ್ಗೆ ಪ್ರಧಾನಿ ಮಾತನಾಡಲಿ

ಜಮ್ಮುವಿನಲ್ಲಿ ಎಂಟು ವರ್ಷದ ಬಾಲೆಯನ್ನು ಸಾಮೂಹಿಕ ಅತ್ಯಾಚಾರ ಮಾಡಿ ಹತ್ಯೆಗೈದ ಘಟನೆ ಜರುಗಿದೆ. ಇದು ಜನಾಂಗೀಯ ದ್ವೇಷಕ್ಕೆ ನಡೆದಿರುವ ಕೃತ್ಯ. ಇಂತಹ ಘೋರ ಕೃತ್ಯ ಕಂಡು ದೇಶಕ್ಕೆ ದೇಶವೇ ಬೆಚ್ಚಿಬಿದ್ದಿದೆ. ಇಷ್ಟಾದರೂ ಪ್ರಧಾನಿ ಮೋದಿ ಮೌನಕ್ಕೆ ಶರಣಾಗಿರುವುದು ದುರಂತವೇ ಸರಿ

ಜಮ್ಮು-ಕಾಶ್ಮಿರದಲ್ಲಿ ಬಕರ್‌ವಾಲ್ (ಜಮ್ಮು-ಕಾಶ್ಮೀರದ ದನ-ಕುರಿಗಾಹಿ ಬುಡಕಟ್ಟು) ಸಮುದಾಯಕ್ಕೆ ಸೇರಿದ ಎಂಟು ವರ್ಷ ಬಾಲೆಯ ಮೇಲೆ ನಡೆದ ಭೀಕರ ಅತ್ಯಾಚಾರ ಹಾಗೂ ಕೊಲೆಯ ಪ್ರಕರಣ ದೇಶಾದ್ಯಂತ ತಲ್ಲಣ ಸೃಷ್ಟಿಸಿದೆ. ಭಾರತೀಯ ನಾಗರಿಕ ಸಮುದಾಯವು ಈ ಘಟನೆಯ ಬಗ್ಗೆ ಕೋಪ, ಹತಾಶೆ ಹಾಗೂ ಅಸಹಾಯಕತೆಗಳನ್ನು ವ್ಯಕ್ತಪಡಿಸುತ್ತಿದೆ. ಈ ದೇಶದಲ್ಲಿ ಅತ್ಯಾಚಾರ ಹಾಗೂ ಕೊಲೆಗಳಂತ ಅಪರಾಧಗಳು ಹಿಂದೆ ನಡೆದಿವೆ. ಆದರೆ, ಈ ನಿರ್ದಿಷ್ಟ ಪ್ರಕರಣದ ಹಿಂದಿನ ಕಾರಣಗಳು, ಬರ್ಬರತೆ, ಪ್ರಕರಣದಲ್ಲಿ ಭಾಗಿಯಾದವರು ಹಾಗೂ ಭಾಗಿಯಾದವರು ಪರ ನಿಂತ ಪ್ರಭಾವಿ ರಾಜಕಾರಣಿಗಳ ನಡೆಗಳು ಎಂಥವರನ್ನೂ ಸಹ ಹತಾಶೆಯ ದಳ್ಳುರಿಗೆ ತಳ್ಳುತ್ತವೆ. ಧರ್ಮ, ರಾಜಕೀಯ ಹಾಗೂ ಅಧಿಕಾರ ಒಂದುಗೂಡಿದಾಗ ಮನುಷ್ಯರು ಅದಾವ ಮಟ್ಟದಲ್ಲಿ ಅಮಾನವೀಯವಾಗಿ ನಡೆದುಕೊಳ್ಳುತ್ತಾರೆಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಹಿಂದೂಗಳ ಪ್ರಾಬಲ್ಯವಿರುವ ಜಮ್ಮುವಿನ ಕಠುವಾ ಜಿಲ್ಲೆಯ ಬಕರ್‌ವಾಲ್ ಸಮುದಾಯಕ್ಕೆ ಸೇರಿದ ಎಂಟು ವರ್ಷದ ಮಗು ಆಸಿಫಾ. ತನ್ನ ಮನೆಯ ಹತ್ತಿರದ ಹುಲ್ಲುಗಾವಲಿನಲ್ಲಿ ಮೇಯುತ್ತಿದ್ದ ಕುದುರೆಯನ್ನು ಮರಳಿ ಮನೆಗೆ ಕರೆತರಲು ಹೋಗಿದ್ದ ಅವಳನ್ನು ಜ.10ರಂದು ದುಷ್ಕರ್ಮಿಗಳು ಅಪಹರಿಸಿ ಸಮೀಪದ ಕಾಡಿಗೆ ಕರೆತಂದರು. ಅವಳಿಗೆ ಬಲವಂತವಾಗಿ ನಿದ್ರೆ ಮಾತ್ರೆ ಕೊಟ್ಟು ಪ್ರಜ್ಞೆ ತಪ್ಪಿಸಿದರು. ಅವಳನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಕರೆದುಕೊಂಡು ಬಂದು ಊರಿನ ದೇವಸ್ಥಾನವೊಂದರಲ್ಲಿ ಕೂಡಿ ಹಾಕಿದರು. ನಂತರ ಒಂದುಗೂಡಿದ ಏಳು ಜನರು ಎಂಟು ವರ್ಷದ ಆಸಿಪಾಳ ಮೇಲೆ ಸಾಮೂಹಿಕ ಅತ್ಯಾಚಾರಗೈದು ಹತ್ಯೆಮಾಡಿದರು.

ಈ ಪ್ರಕರಣದ ದೋಷಾರೋಪಣೆ ಸಲ್ಲಿಸಲು ಜಮ್ಮು-ಕಾಶ್ಮಿರ ಕ್ರೈಮ್‌ ಬ್ರ್ಯಾಂಚ್ ಪೋಲಿಸರು ದಿನವಿಡೀ ಹೆಣಗಿದರು. ಕಾರಣ, ಕಟುವಾ ಜಿಲ್ಲೆಯ ಬಾರ್ ಅಸೋಶಿಯೇಶನ್ ವಕೀಲರು ಚಾರ್ಚ್‌ಶೀಟ್‌ ಸಲ್ಲಿಸದಂತೆ ಪೊಲೀಸರನ್ನು ತಡೆಯಲು ಪ್ರಯತ್ನಿಸಿದರು. ಜಮ್ಮು ಪೊಲೀಸರು ವಕೀಲರ ಮಾತು ಕೇಳದಿದ್ದಾಗ, ಪೊಲೀಸ್ ವಿರೋಧಿ ಘೋಷಣೆಗಳನ್ನು ಕೂಗಿ ಪ್ರತಿಭಟಿಸಲು ಮುಂದಾದರು. ಕೊನೆಗೆ ರಾತ್ರಿ 9:30ರ ವೇಳೆಗೆ ದೋಷಾರೋಪಣೆ ಸಲ್ಲಿಸಲು ಪೊಲೀಸರು ಯಶಸ್ವಿಯಾದರು. ಈ ವಿಷಯವು ಸಾರ್ವಜನಿಕವಾಗಿ ಹೊರಬಂದು ದೇಶಾದ್ಯಂತ ಕಲ್ಲೋಲ ಸೃಷ್ಟಿಸಿದೆ. ಇದಕ್ಕೂ ದೊಡ್ಡ ದುರಂತವೆಂದರೆ, ಹಿಂದು ಎಕ್ತಾ ಮಂಚ್ ಎಂಬ ಸಂಘಟನೆಯೊಂದು ಅತ್ಯಾಚಾರದ ಆರೋಪಿಗಳ ಪರ ಪ್ರತಿಭಟನೆ ನಡೆಸಿದೆ. ಈ ಪ್ರತಿಭಟನೆಯಲ್ಲಿ ಬಿಜೆಪಿಗೆ ಸೇರಿದ ಜಮ್ಮು-ಕಾಶ್ಮೀರ ಸರ್ಕಾರದ ಇಬ್ಬರು ಸಚಿವರು ಭಾಗಿಯಾಗಿದ್ದಾರೆ.

ಈ ಪ್ರಕರಣದ ಬಗ್ಗೆ ಪೊಲೀಸರು ಸಲ್ಲಿಸಿರುವ ದೋಷಾರೋಪಣೆ ವಿವರಗಳು ಪ್ರಜ್ಞಾವಂತ ನಾಗರಿಕ ಸಮುದಾಯವನ್ನು ಬೆಚ್ಚಿ ಬೀಳಿಸುವಂತಿವೆ. “ಧಾರ್ಮಿಕ ಕ್ರಿಯೆಗಳು ನಡೆಯುವ ಪ್ರಾರ್ಥನಾ ಸಭಾಂಗಣದಲ್ಲಿ ಆಸಿಪಾಳ ಮೇಲೆ ಮೂರು ಬಾರಿ ಸಾಮೂಹಿಕ ಅತ್ಯಾಚಾರ ಎಸಗಲಾಯಿತು. ಅವಳಿಗೆ ನಿದ್ರಾಮಾತ್ರೆಯನ್ನು ಕೊಟ್ಟು ಪ್ರಜ್ಞಾಹೀನವಾಗಿ ಮಾಡಲಾಗಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದರೆನ್ನಲಾದ ಏಳು ಆರೋಪಿಗಳ ಪೈಕಿ ಒಬ್ಬ ಆರೋಪಿ ಇದಕ್ಕೆಂದೇ ದೂರದ ಮೀರತ್‌ನಿಂದ ಬಂದಿದ್ದ. ಈ ಪ್ರಕರಣದಲ್ಲಿ ಇಬ್ಬರು ಪೊಲೀಸರು ಶಾಮೀಲಾಗಿದ್ದಾರೆ. ಅವರಲ್ಲಿ ಒಬ್ಬ ಆಸೀಫಾಳನ್ನು ಕೊಲೆಗೈಯುವುದಕ್ಕಿಂತ ಸ್ವಲ್ಪ ಹೊತ್ತಿನ ಮುಂಚೆ ಕೊನೆಯ ಬಾರಿ ಅತ್ಯಾಚಾರವೆಸುವುದಾಗಿ ಉಳಿದ ಆರೋಪಿಗಳನ್ನು ಕೇಳಿಕೊಂಡು ಹೀನ ಕೃತ್ಯವೆಸಗಿದ್ದ. ಕೊನೆಗೆ ಆಸಿಪಾಳ ಕತ್ತು ಹಿಸುಕಿ ಕೊಲ್ಲಲಾಯಿತು. ಅವಳ ಸಾವನ್ನು ದೃಢಪಡಿಸಿಕೊಳ್ಳಲು ಕಲ್ಲಿನಿಂದ ಅವಳ ತಲೆಯನ್ನು ಚಚ್ಚಿ ಒಡೆಯಲಾಯಿತು. ಒಂದು ವಾರದ ನಂತರ ಅವಳ ದೇಹ ಸಿಕ್ಕಿತು. ಬಕರ್‌ವಾಲ್‌‌ ಮುಸ್ಲಿಂ ಸಮುದಾಯಕ್ಕೆ ಸೇರಿದವರು ತಮ್ಮ ಪ್ರದೇಶವನ್ನು ತೊರೆಯಬೇಕೆಂಬ ಉದ್ದೇಶದಿಂದ ಈ ಬರ್ಬರತೆಯನ್ನು ಮೆರೆಯಲಾಗಿದೆ,” ಎಂದು ದೋ‍‍ಷಾರೋಪಣೆಯಲ್ಲಿ ದಾಖಲಾಗಿದೆ.

ಇದೆಲ್ಲದಕ್ಕಿಂತ ಘೋರವೆಂದರೆ, ಅಪರಾಧದಲ್ಲಿ ಭಾಗಿಯಾದ ಇಬ್ಬರು ಪೊಲೀಸರು ಪ್ರಮುಖ ಆರೋಪಿಗಳಿಂದ ದುಡ್ಡು ತೆಗೆದುಕೊಂಡಿದ್ದು, ಅದರಲ್ಲಿ ಒಬ್ಬ ವಿಶೇಷ ಪೊಲೀಸ್‌ ಅಧಿಕಾರಿ ದೀಪಕ್ ಖಜುರಿಯಾ ಎಂದು ತಿಳಿದುಬಂದಿದೆ. ಈ ವಿಶೇಷ ತನಿಖಾಧಿಕಾರಿಯ ಬಂಧನ ವಿರೋಧಿಸಿ ಹಿಂದೂ ಎಕ್ತಾ ಮಂಚ್ ಸಂಘಟನೆಯು ಬೀದಿಗಿಳಿದು ಪ್ರತಿಭಟಿಸಿತು. ಸಚಿವರುಗಳಾದ ಲಾಲ್ ಸಿಂಗ್‌ ಮತ್ತು ಚಂದರ್ ಪ್ರಕಾಶ್ ಗಂಗಾ ಅವರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ತಿಳಿದುಬಂದಿದೆ. ಹಿಂದೂಗಳನ್ನು ಗುರಿಯಾಗಿಸಿ ಜಮ್ಮು-ಕಾಶ್ಮೀರದ ಅಪರಾಧ ವಿಭಾಗ ಹಾಗೂ ಪಿಡಿಪಿ ಪಕ್ಷವು ಕೆಲಸ ಮಾಡುತ್ತಿದೆ. ಈ ಕಾರಣದಿಂದ ಆಸೀಫಾ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಹಿಂದೂ ಎಕ್ತಾ ಮಂಚ್‌ ಒತ್ತಾಯಿಸಿದೆ. ಈ ಆರೋಪವನ್ನು ತಳ್ಳಿಹಾಕಿರುವ ಹಿರಿಯ ಪೊಲೀಸ್ ಅಧೀಕ್ಷಕ ಆರ್‌ ಕೆ ಜಲ್ಲಾ ಅವರು ಪ್ರಕರಣದ ತನಿಖೆಯು ಪ್ರಾಮಾಣಿಕವಾಗಿ ನಡೆದಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ರಾವಿ ತೀರ | ಜಮ್ಮು-ಕಾಶ್ಮೀರದಲ್ಲಿ ಅತ್ಯಾಚಾರ ಆರೋಪಿಗಳ ರಕ್ಷಣೆಗೆ ನಿಂತ ಧರ್ಮ!

ಈ ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸುವಂತೆ ದೇಶಾದ್ಯಂತ ಒತ್ತಡ ಹೆಚ್ಚುತ್ತಿದ್ದು, ರಾಜಕೀಯ ಮುಖಂಡರು, ಚಿತ್ರ ತಾರೆಯರು ಹಾಗೂ ಸಾಮಾಜಿಕ ಹೋರಾಟಗಾರರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಹಿಂದೂ ಎಕ್ತಾ ಮಂಚ್ ಸಂಘಟನೆಯ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಿಜೆಪಿಯ ಸಚಿವರನ್ನು ಉಚ್ಛಾಟಿಸಬೇಕೆಂದು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಈ ಘಟನೆಯ ಬಗ್ಗೆ ಮೌನ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬರುತ್ತಿದೆ. ಮೋದಿಯನ್ನು ಪ್ರಶ್ನಿಸಿರುವ ಕಾಂಗ್ರೆಸ್‌ ರಾಷ್ಟ್ರಾದ್ಯಕ್ಷ ರಾಹುಲ್ ಗಾಂಧಿಯವರು, ಪ್ರಕರಣದ ಬಗ್ಗೆ ಮಾತನಾಡುವಂತೆ ಒತ್ತಾಯಿಸಿದ್ದಾರೆ.

ಏನೇ ಆಗಲಿ, ನ್ಯಾಯವನ್ನು ದಿಕ್ಕರಿಸುವುದು ಈ ದೇಶದಲ್ಲಿ ಅಪರಾಧವಾಗಿ ಉಳಿದಿಲ್ಲ ಎನ್ನುವ ಸಂಶಯ ಸಾರ್ವಜನಿಕರನ್ನು ಕಾಡುತ್ತಿದೆ. ಧರ್ಮ, ರಾಜಕಾರಣ ಮತ್ತು ಅಧಿಕಾರ ಮನುಷ್ಯರನ್ನು ಅದೆಷ್ಟು ಪ್ರಜ್ಞಾಹೀನರನ್ನಾಗಿ ಮಾಡುತ್ತವೆ ಎನ್ನುವುದಕ್ಕೆ ಈ ಘಟನೆ ಉದಾಹರಣೆಯಾಗಿದೆ. ಇಷ್ಟೆಲ್ಲ ಘಟಿಸಿದ ನಂತರ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಲಿದೆಯಾ? ಈ ಪ್ರಕರಣದ ಬಗ್ಗೆ ಪ್ರಧಾನಿ ಮೋದಿಯವರು ಸಾರ್ವಜನಿಕವಾಗಿ ತಮ್ಮ ಖೇದ ವ್ಯಕ್ತಪಡಿಸುತ್ತಾರಾ? ತಮ್ಮದೇ ಪಕ್ಷದ ಪ್ರಭಾವಿ ಕೈಗಳನ್ನು ಪ್ರಧಾನಿಗಳು ಕಟ್ಟಿ ಹಾಕುತ್ತಾರಾ? ಎಂಬ ಪ್ರಶ್ನೆಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ.

ಟ್ವಿಟರ್ ಸ್ಟೇಟ್ | ಜಮ್ಮು-ಕಾಶ್ಮೀರ ಶಾಲೆಗಳಲ್ಲಿ ಭಗವದ್ಗೀತೆ ಪರಿಚಯ, ವಿವಾದ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ಎಎನ್ಐ ಸುದ್ದಿಸಂಸ್ಥೆಯ ಎಡವಟ್ಟು ವರದಿಗಳ ಹಿಂದಿನ ಮರ್ಮವೇನು?
Editor’s Pick More