ಟ್ವಿಟರ್ ಸ್ಟೇಟ್ | ದೇಶದ ಸಾಕ್ಷಿಪ್ರಜ್ಞೆಯನ್ನು ಮತ್ತೊಮ್ಮೆ ಬಡಿದೆಬ್ಬಿಸಿದ ಆಸಿಫಾ

ಕಟುವಾ ಮತ್ತು ಉನ್ನಾವ್‌ ಅತ್ಯಾಚಾರ ಪ್ರಕರಣಗಳಲ್ಲಿ ಬಿಜೆಪಿ ತನ್ನ ಬೆಂಬಲಿಗರನ್ನು ರಕ್ಷಿಸಿಕೊಳ್ಳುತ್ತಿರುವ ವಿರುದ್ಧ ಹಾಗೂ ನ್ಯಾಯಕ್ಕಾಗಿ ಆಗ್ರಹಿಸಿ ದೆಹಲಿಯ ಇಂಡಿಯಾ ಗೇಟ್ ಬಳಿ ಸೇರಿದ ಜನಸಮೂಹ ಪ್ರತಿಭಟಿಸಿದೆ. ಈ ಕ್ಯಾಂಡಲ್ ಮೆರವಣಿಗೆಯ ಕಾವು ಟ್ವಿಟರ್‌ನಲ್ಲೂ ಪ್ರತಿಧ್ವನಿಸಿದೆ

ರಾಷ್ಟ್ರದ ಸಾಕ್ಷಿಪ್ರಜ್ಞೆಯನ್ನು ಬಡಿದೆಬ್ಬಿಸಿ ಪಕ್ಷಾತೀತವಾಗಿ ಜನರು ವಿರೋಧ ವ್ಯಕ್ತಪಡಿಸಿದ ಎರಡು ಅತ್ಯಾಚಾರ ಪ್ರಕರಣದಲ್ಲಿ, ಆಡಳಿತಾರೂಢ ಬಿಜೆಪಿ ಪಕ್ಷ ಅಪರಾಧಿಗಳನ್ನು ರಕ್ಷಿಸುತ್ತಿರುವ ಆರೋಪವನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಬಿಜೆಪಿ ವಿರುದ್ಧ ರಾಷ್ಟ್ರಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಈ ಅತ್ಯಾಚಾರ ಪ್ರಕರಣಗಳನ್ನು ವಿರೋಧಿಸಿ ಭಾರತದಲ್ಲಿ ಮಹಿಳೆಯರಿಗೆ ಭದ್ರತೆ ಸಿಗಬೇಕು ಎನ್ನುವ ಉದ್ದೇಶವಿಟ್ಟುಕೊಂಡು ಮಧ್ಯರಾತ್ರಿಯಂದು ಕ್ಯಾಂಡಲ್ ಹಿಡಿದು ಮೆರವಣಿಗೆ ನಡೆಸಲು ಜನರನ್ನು ಆಹ್ವಾನಿಸಿದ್ದರು. ಈ ಹಿನ್ನೆಲೆಯಲ್ಲಿ, ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು, ವೃದ್ಧರು ಮತ್ತು ಯುವಜನರು ದೆಹಲಿಯ ಇಂಡಿಯಾ ಗೇಟ್ ಮುಂದೆ ಪ್ರತಿಭಟನೆಗೆ ಸೇರಿದ್ದರು. ಹಾಗೆಯೇ ಇದು ಟ್ವಿಟರ್‌ನಲ್ಲೂ ಪ್ರತಿಧ್ವನಿಸಿದೆ.

“ಲಕ್ಷಾಂತರ ಭಾರತೀಯರಂತೆ ಇಂದು ನನ್ನ ಹೃದಯವೂ ಕೂಗುತ್ತಿದೆ. ಭಾರತ ತನ್ನ ಮಹಿಳೆಯರ ಜೊತೆಗೆ ಈ ರೀತಿಯಲ್ಲಿ ವರ್ತಿಸುವುದನ್ನು ಮುಂದುವರಿಸಲು ಸಾಧ್ಯವಿಲ್ಲ. ಮೌನವಾದ, ಶಾಂತಿಯುತವಾದ ಕ್ಯಾಂಡಲ್ ಲೈಟ್ ಮೆರವಣಿಗೆಗೆ ನನ್ನ ಜೊತೆಗೆ ಇಂಡಿಯಾ ಗೇಟ್‌ಗೆ ಬಂದು ಈ ಹಿಂಸೆಯನ್ನು ವಿರೋಧಿಸಿ ಮತ್ತು ನ್ಯಾಯದ ಬೇಡಿಕೆ ಇಡಲು ಜೊತೆಗೂಡಿ,” ಎಂದು ರಾಹುಲ್ ಗಾಂಧಿ ಅವರು ರಾತ್ರಿ ಒಂಬತ್ತೂವರೆಗೆ ಅಧಿಕೃತವಾಗಿ ಟ್ವಿಟರ್‌ನಲ್ಲಿ ಜನರನ್ನು ಆಹ್ವಾನಿಸಿದ್ದರು. ಅವರ ಆಹ್ವಾನಕ್ಕೆ ಮೊದಲು ಸಂಜೆಯಿಂದಲೇ ರಾಹುಲ್ ಗಾಂಧಿ ಕ್ಯಾಂಡಲ್ ಮೆರವಣಿಗೆ ಮಾಡುತ್ತಾರೆ ಎಂದು ಸುದ್ದಿವಾಹಿನಿಗಳು ಬಿತ್ತರಿಸಿದ್ದವು. ಹೀಗಾಗಿ, ಈ ಪ್ರತಿಭಟನಾ ಮೆರವಣಿಗೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ನಂತರ ರಾಹುಲ್ ಗಾಂಧಿ ತಮ್ಮನ್ನು ಬೆಂಬಲಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ ಜನರಿಗೆ ಧನ್ಯವಾದ ಪ್ರಕಟಿಸಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿಯವರ ಬಹುದೊಡ್ಡ ಅಭಿಮಾನಿಗಳು ಎಂದು ಹೇಳಿಕೊಳ್ಳುವವರೂ ಈ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ, ಬಿಜೆಪಿಯನ್ನು ವಿರೋಧಿಸಿದ್ದು ಗಮನಾರ್ಹ. “ನಾನು ನರೇಂದ್ರ ಮೋದಿ ಪರವಾಗಿರುವವನು. ಮೊತ್ತಮೊದಲ ಬಾರಿಗೆ ನಾನು ಆಸಿಫಾಳ ಪರವಾಗಿ ಮಧ್ಯರಾತ್ರಿಯ ಮೆರವಣಿಗೆಯನ್ನು ಆಯೋಜಿಸಿದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸನ್ನು ಬೆಂಬಲಿಸುತ್ತೇನೆ. ಸೆನೆಗರ್ ಮತ್ತು ಇತರ ಜಮ್ಮುವಿನ ಆರೋಪಿಗಳನ್ನು ಬಿಜೆಪಿ ತಕ್ಷಣವೇ ಜೈಲಿಗೆ ತಳ್ಳಬೇಕು. ಬಿಜೆಪಿ ಆರೋಪಿಗಳಿಗೆ ಬೆಂಬಲಿಸುತ್ತಿರುವುದಕ್ಕಾಗಿ ಜನರು ಆಕ್ರೋಶಗೊಂಡಿರುವಾಗ ವಿರೋಧ ಪಕ್ಷಗಳು ಹೀಗೆಯೇ ಕೆಲಸ ಮಾಡಬೇಕು,” ಎಂದು ಸಿನಿಮಾ ನಿರ್ದೇಶಕ ಸುನೀಲ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದಾರೆ. “೪ ವರ್ಷಗಳಲ್ಲಿ ಮೊತ್ತಮೊದಲ ಬಾರಿಗೆ ಕಾಂಗ್ರೆಸ್, ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರ ವಿರುದ್ಧ ನಿಜವಾದ ಕಾರಣಕ್ಕೆ ವಿರೋಧಿಸುತ್ತಿದೆ. ನಾನು ಕಟ್ಟಾ ಮೋದಿ ಅಭಿಮಾನಿಯಾಗಿದ್ದರೂ ಕಟುವಾ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಿಗೆ ನೇಣು ಶಿಕ್ಷೆಯಾಗಬೇಕು,” ಎಂದು ಚಿತ್ತೇಶ್ ಎನ್ನುವ ಬಿಜೆಪಿ ಐಟಿ ಸೆಲ್ ಪರ ಕಾರ್ಯಕರ್ತ ಟ್ವೀಟ್ ಮಾಡಿದ್ದಾರೆ.

ಆಸಿಫಾ ಪ್ರಕರಣ ಮುಖ್ಯವಾಹಿನಿಗಳಲ್ಲಿ ಸುದ್ದಿಯಾದಾಗ ತಕ್ಷಣವೇ ಪ್ರತಿಕ್ರಿಯಿಸದೆ ಇದ್ದ ರಾಹುಲ್ ಗಾಂಧಿಯವರ ಬಗ್ಗೆ ಪತ್ರಕರ್ತರು ಮತ್ತು ಲೇಖಕರೂ ಟೀಕಿಸಿದ್ದರು. ಆದರೆ, ರಾಹುಲ್ ಗಾಂಧಿ ಮೌನ ಮುರಿದು ತಮ್ಮ ಅಭಿಪ್ರಾಯ ಪ್ರಕಟಿಸಿದ್ದಲ್ಲದೆ, ಮಧ್ಯರಾತ್ರಿ ಕ್ಯಾಂಡಲ್ ಮೆರವಣಿಗೆಗೆ ಮುಂದಾಗಿರುವುದನ್ನು ಸಾಹಿತಿಗಳು ಮತ್ತು ಪತ್ರಕರ್ತರ ಸಮುದಾಯ ಒಕ್ಕೊರಲಿನಿಂದ ಸ್ವಾಗತಿಸಿದೆ. “ರಾಹುಲ್ ಗಾಂಧಿ ಅವರ ಮಧ್ಯರಾತ್ರಿ ಕ್ಯಾಂಡಲ್ ಮೆರವಣಿಗೆ ಸ್ವಾಗತಾರ್ಹ. ಈವರೆಗೆ ಕಾಂಗ್ರೆಸ್ ಕಟುವಾ ಅತ್ಯಾಚಾರದ ಬಗ್ಗೆ ಪ್ರತಿಕ್ರಿಯೆಯೇ ನೀಡಿರಲಿಲ್ಲ. ಅತ್ಯಾಚಾರಿಗಳನ್ನು ಬೆಂಬಲಿಸಿದ ಸ್ಥಳೀಯ ಕಾಂಗ್ರೆಸ್ ನಾಯಕರನ್ನೂ ಪಕ್ಷದಿಂದ ಹೊರದಬ್ಬಿ,” ಎಂದು ಹಿರಿಯ ಪತ್ರಕರ್ತೆ ಬರ್ಖಾ ದತ್ ಟ್ವೀಟ್ ಮಾಡಿದ್ದಾರೆ. “ರಾಹುಲ್ ಗಾಂಧಿ ಮೌನವನ್ನು ಪ್ರಶ್ನಿಸಿದವರಿಗೆ ಕೊನೆಗೂ ಅವರು ಪ್ರತಿಕ್ರಿಯೆ ನೀಡಿರುವುದು ಸ್ವಾಗತಾರ್ಹ. ಕಾಂಗ್ರೆಸ್ ಮೃದು ಹಿಂದುತ್ವದ ಹಾದಿಯಲ್ಲಿ ಸಾಗುತ್ತಿದೆ ಎನ್ನುವ ಆರೋಪವನ್ನು ಅವರು ತಳ್ಳಿಹಾಕಿ, ಜಾತ್ಯತೀತ ಹಾದಿಯಲ್ಲಿ ಮುನ್ನಡೆಯುವ ಪ್ರಯತ್ನವನ್ನು ಇನ್ನಾದರೂ ಮಾಡಲಿದ್ದಾರೆ ಎಂದುಕೊಂಡಿದ್ದೇನೆ,” ಎಂದು ಸಾಹಿತಿ ರಾಮಚಂದ್ರ ಗುಹಾ ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಜಮ್ಮುವಿನಲ್ಲಿ ದ್ವೇಷಕ್ಕೆ ಬಲಿಯಾದ ಬಾಲಕಿ; ಅಸಲಿಗೆ ಅಲ್ಲಿ ನಡೆದದ್ದೇನು?

ಮಧ್ಯರಾತ್ರಿಯ ಪ್ರತಿಭಟನಾ ಮೆರವಣಿಗೆಯನ್ನು ವರದಿ ಮಾಡಲು ಹೋದ ಪತ್ರಕರ್ತರೂ ಅಲ್ಲಿ ಸೇರಿದ್ದ ಜನಸಂದಣಿಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. “ರಾಜಕೀಯವಾಗಿ ಹೇಳುವುದಾದಲ್ಲಿ ದೆಹಲಿ ಕಾಂಗ್ರೆಸ್ ಮುಕ್ತವಾಗಿದೆ. ದೆಹಲಿಯಲ್ಲಿ ಕಾಂಗ್ರೆಸ್‌ನ ಶಾಸಕರಿಲ್ಲ, ಸಂಸದರೂ ಇಲ್ಲ. ಹಾಗಿದ್ದರೂ ರಾಹುಲ್ ಗಾಂಧಿ ತಡರಾತ್ರಿಗೆ ಕ್ಯಾಂಡಲ್ ಮೆರವಣಿಗೆಯನ್ನು ಕರೆದಾಗ ಇಂಡಿಯಾ ಗೇಟ್ ಮುಂದೆ ವ್ಯಾಪಕ ಪ್ರಮಾಣದಲ್ಲಿ ಜನ ಸೇರಿದ್ದಾರೆ. ಆದರೆ ಕೆಲ ಸುದ್ದಿವಾಹಿನಿಗಳು ಅವರನ್ನು ಪಕ್ಷದ ಕಾರ್ಯಕರ್ತರು ಎಂದೇ ಹೇಳುತ್ತಿದ್ದಾರೆ. ಹಾಗಿದ್ದರೂ ದೆಹಲಿ ಕಾಂಗ್ರೆಸ್ ಮುಕ್ತವಾಗಿದೆಯಲ್ಲವೇ? ವಾಸ್ತವದಲ್ಲಿ ಸಾರ್ವಜನಿಕರು, ಜನಸಾಮಾನ್ಯರಲ್ಲಿ ಆಕ್ರೋಶವಿದೆ. ದಯವಿಟ್ಟು ಅದನ್ನು ಒಪ್ಪಿಕೊಳ್ಳಬೇಕು. ಕಾರ್ಯಕರ್ತರು ಇದ್ದಾರೆ ಎನ್ನುವುದೂ ನಿಜವಾದರೂ, ಬಹಳಷ್ಟು ಮಂದಿ ಸ್ವಇಚ್ಛೆಯಿಂದಲೂ ಬಂದಿದ್ದಾರೆ,” ಎಂದು ಪತ್ರಕರ್ತ ಆಶಿಷ್ ಹೇಳಿದ್ದಾರೆ. ಮತ್ತೊಬ್ಬ ಪತ್ರಕರ್ತರಾದ ಸಿದ್, “ಬಹಳಷ್ಟು ಕಾಂಗ್ರೆಸ್ ಕಾರ್ಯಕ್ರಮಗಳನ್ನು ನಾನು ನೋಡಿದ್ದೇನೆ. ಇದು ವಿಶೇಷವಾದುದು. ಇಷ್ಟೊಂದು ಜನಸಮೂಹದಲ್ಲಿ ಬಹಳಷ್ಟು ಮಂದಿ ಕಾಂಗ್ರೆಸ್ ಬೆಂಬಲಿಗರೂ ಅಲ್ಲ. ಇಂತಹ ಪ್ರತಿಕ್ರಿಯೆ ಹಿಂದೆ ನಾನು ನೋಡಿರಲಿಲ್ಲ,” ಎಂದು ಟ್ವೀಟ್ ಮಾಡಿದ್ದಾರೆ. “ಸಾಮಾನ್ಯ ಜನರು ಮತ್ತು ಯುವಜನರೂ ಮೆರವಣಿಗೆಯಲ್ಲಿದ್ದರು. ಕಾಲಾಜು ವಿದ್ಯಾರ್ಥಿಗಳಿಂದ ತೊಡಗಿ, ಅದ್ಯಾಪಕರು ಮತ್ತು ಇತರ ಯುವ ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು,” ಎಂದು ಪತ್ರಕರ್ತೆ ರೋಹಿಣಿ ಸಿಂಗ್ ಟ್ವೀಟ್ ಮಾಡಿದ್ದಾರೆ. ಅಂತಹ ಕೆಲವು ಟ್ವೀಟ್‌ಗಳು ಇಲ್ಲಿವೆ:

ಕೆಲವರು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಹೊಸ ವರ್ಚಸ್ಸನ್ನು ಗಳಿಸಿಕೊಳ್ಳುತ್ತಿದೆ ಎಂದು ವ್ಯಾಖ್ಯಾನಿಸಿದ್ದಾರೆ. “ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಹೊಸ ಲುಕ್ ಪಡೆದುಕೊಂಡಿದೆ. ಪರಿಣಾಮಕಾರಿಯಾದ ಸಾಮಾಜಿಕ ಮಾಧ್ಯಮದ ಕಾರ್ಯಯೋಜನೆ ಮತ್ತು ಈಗ ಮಧ್ಯರಾತ್ರಿಗೆ ಇಂಥಾ ಜನಸಮೂಹ. ಮೂಲತಃ ಇಂತಹ ಮಾಂತ್ರಿಕ ಜನಸಮೂಹ ಸೃಷ್ಟಿಸುವ ನರೇಂದ್ರ ಮೋದಿಯವರಿಗೆ ಗಂಭೀರವಾದ ಸ್ಪರ್ಧೆ ಮುಂದಿದೆ,” ಎಂದು ಪತ್ರಕರ್ತ ಇಂದ್ರಜಿತ್ ಕುಂಡು ಅಭಿಪ್ರಾಯಪಟ್ಟಿದ್ದಾರೆ. “ಕ್ಯಾಂಡಲ್ ಮೆರವಣಿಗೆಯನ್ನು ರಾಹುಲ್ ಗಾಂಧಿ ಅಥವಾ ಅರವಿಂದ ಕೇಜ್ರಿವಾಲ್ ಆಯೋಜಿಸಲಿ. ಆಸಿಫಾಳಿಗೆ ನ್ಯಾಯಕ್ಕಾಗಿ ಪ್ರತಿಭಟಿಸುತ್ತಿದ್ದೇವೆ ಎನ್ನುವುದೇ ಮುಖ್ಯ. ರಾಜಕೀಯ ಒಂದೆಡೆ, ಆಕ್ರೋಶವನ್ನು ಗಮನಿಸಿ,” ಎಂದು ಆಪ್ ಪಕ್ಷದ ಬೆಂಬಲಿಗರಾದ ಉಮಂಗ್ ಮಿಶ್ರಾ ಅವರು ಟ್ವೀಟ್ ಮಾಡಿದ್ದಾರೆ. ಈ ಕ್ಯಾಂಡಲ್ ಮೆರವಣಿಗೆಯಲ್ಲಿ ಒಂದು ಕಾಲದಲ್ಲಿ ಮಹಿಳಾ ಸುರಕ್ಷತೆ ಬಗ್ಗೆ ದೇಶದ ಸಾಕ್ಷಿಪ್ರಜ್ಞೆಯನ್ನು ಬಡಿದೆಬ್ಬಿಸಿದ ನಿರ್ಭಯಾಳ ಹೆತ್ತವರೂ ಕ್ಯಾಂಡಲ್ ಮೆರವಣಿಗೆಯಲ್ಲಿ ಭಾಗವಹಿಸಿದ ಬಗ್ಗೆ ವರದಿಗಾರರು ಮಾಹಿತಿ ನೀಡಿದ್ದಾರೆ. “ಇಂಡಿಯಾ ಗೇಟ್ ಬಳಿ ಭಾರೀ ಜನಸಮೂಹ ಸೇರಿದ್ದಾರೆ. ಮುಖ್ಯವಾಗಿ ನಿರ್ಭಯಾಳ ಹೆತ್ತವರೂ ಮೆರವಣಿಗೆಯಲ್ಲಿ ಸೇರಿ ತಮ್ಮ ಬೆಂಬಲವನ್ನು ಪ್ರಕಟಿಸಿದ್ದಾರೆ. ನೀವು ನೈತಿಕವಾಗಿ ಧೈರ್ಯ ತುಂಬುವವರು ಮತ್ತು ಎಲ್ಲರಿಗೂ ಸ್ಫೂರ್ತಿ,” ಎಂದು ಪತ್ರಕರ್ತ ಸಿದ್ ಟ್ವೀಟ್ ಮಾಡಿದ್ದಾರೆ. ಕೆಲವರು ಚಿಕ್ಕ ಮಕ್ಕಳು ಕ್ಯಾಂಡಲ್ ಹಿಡಿದು ಪ್ರತಿಭಟನೆ ವ್ಯಕ್ತಪಡಿಸಿದ್ದನ್ನೂ ಟ್ವಿಟರ್‌ನಲ್ಲಿ ವರದಿ ಮಾಡಿದ್ದಾರೆ.

ಇಂತಹ ಸಂದರ್ಭದಲ್ಲಿ ರಾಷ್ಟ್ರ ಒಂದಾಗಿ ಪ್ರತಿಭಟಿಸಬೇಕು ಎಂದು ಬಹಳಷ್ಟು ಮಂದಿ ಹೇಳಿದ್ದಾರೆ. ಕೆಲವರು ಈ ಮೆರವಣಿಗೆಯನ್ನು ವರದಿ ಮಾಡುತ್ತಿರುವ ಟಿವಿ ವಾಹಿನಿಗಳಲ್ಲಿ ಸಿಗ್ನಲ್‌ಗಳು ಸರಿಯಾಗಿ ದೊರೆಯದೆ ಇರುವ ಹಿಂದೆ ರಾಜಕೀಯ ನಡೆದಿದೆಯೇ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಈ ವಿಚಾರವಾಗಿ ರಾಜಕೀಯ ಮಾಡುತ್ತಿದೆ ಎನ್ನುವ ಆರೋಪವನ್ನೂ ಬಹಳಷ್ಟು ಟ್ವೀಟಿಗರು ಒಪ್ಪಿಕೊಂಡಿಲ್ಲ. ಇಂತಹ ವಿಚಾರಗಳನ್ನು ಎತ್ತಿ ಪ್ರತಿಭಟಿಸುವುದು ವಿರೋಧ ಪಕ್ಷಗಳ ಕರ್ತವ್ಯ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಈ ನಡುವೆ ಇಂಡಿಯಾ ಗೇಟ್ ಮೆರವಣಿಗೆಯನ್ನು ‘ಫ್ಯಾಷನ್ ವಾಕ್’ ಎಂದು ಕರೆದ ಬಿಜೆಪಿ ವಕ್ತಾರರ ಮೇಲೂ ಟ್ವೀಟಿಗರು ಹರಿಹಾಯ್ದಿದ್ದಾರೆ. ಬಾಲಕಿಯನ್ನು ಕ್ರೂರವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಿರುವಾಗ ಅದನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸುವುದನ್ನು ಫ್ಯಾಷನ್ ವಾಕ್ ಎನ್ನುವ ಬಿಜೆಪಿ ಬಗ್ಗೆ ಟ್ವೀಟಿಗರು ಸಿಟ್ಟಾಗಿದ್ದಾರೆ. ಕೆಲವರು ಈ ಮೆರವಣಿಗೆ ಬಿಜೆಪಿಯ ಕೊನೆಯ ದಿನಗಳ ಕೌಂಟ್ಡನ್ ಆಗಿರುವ ಸಾಧ್ಯತೆಯಿದೆ ಎಂದೂ ವಿಶ್ಲೇಷಿಸಿದ್ದಾರೆ. ಇಂತಹ ಕೆಲವು ಟ್ವೀಟ್‌ಗಳು ಇಲ್ಲಿವೆ:

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More