ಸಿಜೆಐ ದೀಪಕ್ ಮಿಶ್ರಾ ವಿರುದ್ಧ ಮಹಾಭೀಯೋಗ; ಕಾನೂನು ತಜ್ಞರು ಹೇಳುವುದೇನು?

ಒಂದು ವೇಳೆ, ಸಿಜೆಐ ವಿರುದ್ಧ ವಾಗ್ದಂಡನೆಯಾದರೆ ಅದರಿಂದಾಗುವ ಪರಿಣಾಮವೇನು? ಯಾವ ಕಾರಣದಿಂದ ಕಾಂಗ್ರೆಸ್‌ ಸಿಜೆಐ ವಿರುದ್ದ ವಾಗ್ದಂಡನೆಗೆ ಹಠ ಹಿಡಿದಿದೆ ಎಂಬುದರ ಬಗ್ಗೆ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಸುಪ್ರೀಂ ಕೋರ್ಟ್‌ ಹಿರಿಯ ವಕೀಲರು ‘ದಿ ಸ್ಟೇಟ್‌’ನೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ

ಸುಪ್ರೀಂ ಕೋರ್ಟ್‌ನ ನಾಲ್ವರು ಕಾರ್ಯನಿರತ ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ಕಾರ್ಯವಿಧಾನ ಖಂಡಿಸಿ ನಡೆಸಿದ ಸುದ್ದಿಗೋಷ್ಠಿ ನ್ಯಾಯಾಂಗ ವ್ಯವಸ್ಥೆಯಲ್ಲೇ ಚಾರಿತ್ರಿಕ ಘಟನೆಯಾಯಿತು. ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರು ಪ್ರಕರಣಗಳನ್ನು ಹಂಚುವಾಗ ನಿಯಮ ಮೀರಿ, ತಮ್ಮ ಇಚ್ಛೆಯನುಸಾರ ಬೇರೆ ಬೇರೆ ಪೀಠಗಳಿಗೆ ಹಂಚುತ್ತಿದ್ದಾರೆ ಎಂದು ನ್ಯಾಯಮೂರ್ತಿಗಳು ಆರೋಪ ಮಾಡಿದ್ದರು. ಈ ಸಮಸ್ಯೆ ಈವರೆಗೆ ತಾರ್ಕಿಕ ಅಂತ್ಯ ಕಂಡಿಲ್ಲ. ಇದೇ ವಿಚಾರವಾಗಿ ನ್ಯಾ.ಜೆ ಚಲಮೇಶ್ವರ್‌ ಅವರು ಮತ್ತೆ ಸಿಜೆಐ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ. ಮುಖ್ಯನ್ಯಾಯಮೂರ್ತಿಗಳ ವಿರುದ್ಧ ವಾಗ್ದಂಡನೆಅವಕಾಶ ಈಗಲೂ ಮುಕ್ತವಾಗಿದೆ ಎಂದು ಕಾಂಗ್ರೆಸ್‌ ಹೇಳಿದೆ. ಈ ಮೂಲಕ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ ಕೂಡ ಸಮಸ್ಯೆಗಳಿಂದ ಮುಕ್ತವಾಗಿಲ್ಲ ಎಂಬುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ.

ನಾಲ್ವರು ನ್ಯಾಯಮೂರ್ತಿಗಳು ಸಿಜೆಐ ಅವರ ಕಾರ್ಯನಿರ್ವಹಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಸುದ್ದಿಗೋಷ್ಠಿ ನಡೆಸಿದ ನಂತರ ಕಾಂಗ್ರೆಸ್‌ ಸಿಜೆಐ ವಿರುದ್ಧ ಮಹಾಭಿಯೋಗ ನಿಲುವಳಿ ಮಂಡನೆಗೆ ಮುಂದಾಗಿತ್ತು. ಆದರೆ, ಮಹಾಭಿಯೋಗ ನಿಲುವಳಿ ಮಂಡನೆಗೆ ಬೇಕಾದ ಅಗತ್ಯ ಸಂಸದರ ಬೆಂಬಲ ಕಾಂಗ್ರೆಸ್‌ಗೆ ವ್ಯಕ್ತವಾಗಿರಲಿಲ್ಲ. ಆದಾಗ್ಯೂ ನಿಲುವಳಿ ಮಂಡನೆಗೆ ಕಾಂಗ್ರೆಸ್‌ ಜೊತೆಗೆ ಎನ್‌ಸಿಪಿ, ಎಸ್‌ಪಿ, ಬಿಎಸ್‌ಪಿ ಮತ್ತು ಎಡಪಕ್ಷಗಳು ಬೆಂಬಲಿಸಲಿವೆ ಎಂದು ಹೇಳಲಾಗಿತ್ತು. ಇದರ ನಡುವೆಯೇ ಲೋಕಸಭೆಯ ವಿಪಕ್ಷಗಳ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, "ಸಿಜೆಐ ವಿರುದ್ಧ ಮಹಾಭಿಯೋಗ ನಿಲುವಳಿ ಮಂಡನೆ ಮುಗಿದ ಅಧ್ಯಾಯ,” ಎಂದು ಈಚೆಗೆ ಹೇಳಿಕೆ ನೀಡಿದ್ದರು. ಈ ನಡುವೆ ಏ.೧೨ರಂದು, “ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ವಿರುದ್ಧ ವಾಗ್ದಂಡನೆಯ ಅವಕಾಶ ಈಗಲೂ ಮುಕ್ತವಾಗಿದೆ,” ಎಂದು ಕಾಂಗ್ರೆಸ್‌ ಹೇಳಿದೆ.

ಒಂದು ವೇಳೆ, ಸಿಜೆಐ ವಿರುದ್ಧ ವಾಗ್ದಂಡನೆಯಾದರೆ ಅದರಿಂದಾಗುವ ಪರಿಣಾಮವೇನು? ಯಾವ ಕಾರಣದಿಂದ ಕಾಂಗ್ರೆಸ್‌ ಸಿಜೆಐ ವಿರುದ್ದ ವಾಗ್ದಾಂಡನೆ ಹಠ ಹಿಡಿದಿದೆ ಎಂಬುದರ ಬಗ್ಗೆ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಸುಪ್ರೀಂಕೋರ್ಟ್‌ನ ಹಿರಿಯ ವಕೀಲರು 'ದಿ ಸ್ಟೇಟ್‌' ನೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರು ಈ ಬಗ್ಗೆ ಪ್ರತಿಕ್ರಿಯಿಸುತ್ತ, "ಈ ವಿಚಾರವಾಗಿ ನಾನು ಏನನ್ನು ಮಾತನಾಡುವುದಿಲ್ಲ. ಏಕೆಂದರೆ, ಇದರ ಬಗ್ಗೆ ಯಾರೇ ಮಾತನಾಡಿದರೂ ಅದು ನ್ಯಾಯಾಂಗ ವ್ಯವಸ್ಥೆಯ ಮೇಲೆ ಬೀಳುವ ಪೆಟ್ಟು. ನ್ಯಾಯಾಂಗ ವ್ಯವಸ್ಥೆ ಶಾಸಕಾಂಗ, ಕಾರ್ಯಾಂಗಗಳಂತೆ ಅಲ್ಲ. ಇಲ್ಲಿ ನಂಬಿಕೆ, ವಿಶ್ವಾಸ ಮುಖ್ಯವಾಗುತ್ತದೆ. ಒಮ್ಮೆ ಜನರಲ್ಲಿ ನ್ಯಾಯಾಂಗದ ಮೇಲಿನ ನಂಬಿಕೆ ಹೊರಟುಹೋದರೆ ಅದನ್ನು ಮತ್ತೆ ಸಂಪಾದಿಸುವುದು ಸುಲಭಸಾಧ್ಯವಲ್ಲ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ಸಿಜೆಐ ವಿರುದ್ದ ಬಹಿರಂಗ ಅಸಮಾಧಾನ ಹೊರಹಾಕಿದ ನಡೆ ಕೂಡ ಸರಿಯಲ್ಲ. ಸಮಸ್ಯೆ ಇದ್ದಾಗ ಅದನ್ನು ಒಳಗೆ ಪರಿಹರಿಸಿಕೊಳ್ಳಬೇಕೇ ಹೊರತು ಅದನ್ನು ಸಾರ್ವಜನಿಕಗೊಳಿಸುವುದು ಸರಿಯಲ್ಲ. ಒಟ್ಟಿನಲ್ಲಿ ಸಿಜೆಐ ವಿರುದ್ಧ ವಾಗ್ದಂಡನೆ ನಿಲುವಳಿ ವಿಚಾರ ಪ್ರತಿದಿನ ಮಾಧ್ಯಮದಲ್ಲಿ ಸುದ್ದಿಯಾಗೋದು ಒಳ್ಳೆಯ ಬೆಳವಣಿಗೆಯಲ್ಲ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಿಜೆಐ ದೀಪಕ್‌ ಮಿಶ್ರಾ ಅವರ ಕಾರ್ಯವೈಖರಿ ವಿರುದ್ದ ಅಸಮಾಧಾನ ಹೊರಹಾಕಿದ್ದ ನ್ಯಾ.ಜೆ ಚಲಮೇಶ್ವರ್‌ ಅವರು ಕೂಡ, "ಎಲ್ಲ ಪ್ರಶ್ನೆಗಳು ಹಾಗೂ ಸಮಸ್ಯೆಗಳಿಗೆ ವಾಗ್ದಂಡನೆಯೊಂದೇ ಪರಿಹಾರವಲ್ಲ,” ಎಂದು ಈಚೆಗೆ ದೆಹಲಿಯಲ್ಲಿ ಹಾರ್ವರ್ಡ್‌ ಕ್ಲಬ್‌ ಆಫ್ ಇಂಡಿಯಾ ಆಯೋಜಿಸಿದ್ದ ಸಂದರ್ಶನದಲ್ಲಿ ಹೇಳಿದ್ದರು.

ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರೊಬ್ಬರು ಮಾತನಾಡಿ, “ಮಹಾಭಿಯೋಗ ನಿಲುವಳಿ ಮಂಡನೆ ತಪ್ಪು ಮಾರ್ಗದರ್ಶನದ ಸಾಹಸ," ಎಂದು ಹೇಳುವ ಮೂಲಕ ಇದಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್‌ ವಕೀಲ ಕೆ ವಿ ಧನಂಜಯ ಅವರು ಮಾತನಾಡಿ, “ಸಿಜೆಐ ವಿರುದ್ಧ ವಾಗ್ದಂಡನೆಗೆ ಮುಂದಾಗಿರುವ ಕಾಂಗ್ರೆಸ್‌ ನಡೆ ಸಂಪೂರ್ಣವಾಗಿ ರಾಜಕೀಯವಾಗಿರುವಂತಿದೆ ಎಂದು ನನಗೆ ಅನಿಸುತ್ತದೆ. ಇಲ್ಲಿ ನಿಜವಾಗಿಯೂ ಸಿಜೆಐಗೆ ವಾಗ್ದಂಡನೆಗೆ ವಿಧಿಸಬೇಕು ಎನ್ನುವುದಕ್ಕಿಂತ ಮುಖ್ಯ ನ್ಯಾಯಮೂರ್ತಿಯಲ್ಲಿ ಭಯ ಹುಟ್ಟಿಸಬೇಕು ಎಂಬ ಯೋಚನೆಯಲ್ಲಿ ಕಾಂಗ್ರೆಸ್ ಇರುವಂತಿದೆ. ಏಕೆಂದರೆ, ಜೆ ಚಲಮೇಶ್ವರ್‌ ಸೇರಿದಂತೆ ಇತರ ನಾಲ್ವರು ನ್ಯಾಯಮೂರ್ತಿಗಳು ಆರೋಪಿಸಿದಂತೆ ಸಿಜೆಐ ದೀಪಕ್‌ ಮಿಶ್ರಾ ಅವರ ಪೀಠದಲ್ಲಿಯೇ ಸಿಬಿಐ ನ್ಯಾಯಾಧೀಶ ಲೋಯಾ ಅವರ ಅನುಮಾನಾಸ್ಪದ ಸಾವಿನ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಲೋಯಾ ಪ್ರಕರಣದಲ್ಲಿ ಅಮಿತ್‌ ಶಾ ಪ್ರಮುಖ ಆರೋಪಿಯಾಗಿದ್ದಾರೆ. ಈ ಪ್ರಕರಣ ಸ್ವತಂತ್ರ ವಿಚಾರಣೆ ಕೋರಿ ಹಲವು ಅರ್ಜಿಗಳು ದೀಪಕ್‌ ಮಿಶ್ರಾ ಪೀಠದ ಮುಂದಿವೆ. ದೀಪಕ್‌ ಮಿಶ್ರಾ ಅವರು ಬಿಜೆಪಿ ಪರ ಒಲವು ಹೊಂದಿದ್ದಾರೆ ಎಂದು ಹೇಳಲಾಗುತ್ತದೆ. ಹೀಗಾಗಿ, ಲೋಯಾ ಪ್ರಕರಣದಲ್ಲಿ ಅವರು ನಿಷ್ಪಕ್ಷಪಾತವಾಗಿ ತೀರ್ಪು ನೀಡಲಾರರು. ಆದ್ದರಿಂದ ಮಿಶ್ರಾ ಅವರಿಗೆ ವಾಗ್ದಂಡನೆಯ ಭಯ ಹುಟ್ಟಿಸಿ, ಪ್ರಕರಣವನ್ನು ಬೇರೊಂದು ಪೀಠಕ್ಕೆ ವರ್ಗಾಯಿಸಿದ್ದಲ್ಲಿ, ಅಮಿತ್ ಶಾಗೆ ಶಿಕ್ಷೆ ಆಗಬಹುದು, ಆಗ ಬಿಜೆಪಿಯನ್ನು ಸುಲಭವಾಗಿ ಸೋಲಿಸಬಹುದು ಎಂಬುದು ಕಾಂಗ್ರೆಸ್‌ ಲೆಕ್ಕಾಚಾರ ಆಗಿರಬಹುದು ಎಂಬುದು ನನ್ನ ಅನಿಸಿಕೆ,” ಎಂದು ಹೇಳಿ, ವಾಗ್ದಂಡನೆ ಹಿಂದಿನ ಮರ್ಮ ಹೀಗೂ ಇರಲು ಸಾಧ್ಯ ಎಂದು ಅನುಮಾನಿಸುತ್ತಾರೆ.

ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ ಮತ್ತೊಬ್ಬ ವಕೀಲ ಹರೀಶ್‌ ನರಸಪ್ಪ ಅವರು, "ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ತಪ್ಪು ಮಾಡಿದ್ದಾರೆ ಎಂಬುದು ಗೊತ್ತಾದಾಗ ಅವರ ಮೇಲೆ ಪ್ರಯೋಗಿಸುವ ಬ್ರಹ್ಮಾಸ್ತ್ರವೇ ಈ ಮಹಾಭಿಯೋಗ. ಆದರೆ, ಈ ಬ್ರಹ್ಮಾಸ್ತ್ರ ಪ್ರಯೋಗಿಸಲು ಸರಿಯಾದ ಕಾರಣ ಇರಬೇಕು. ಆದರೆ, ಈಗ ಸಿಜೆಐ ವಿರುದ್ದ ಮಹಾಭಿಯೋಗ ನಿಲುವಳಿ ಮಂಡಲಿಸಲು ಸರಿಯಾದ ಸಾಕ್ಷ್ಯಾಧಾರಗಳೇ ಇಲ್ಲ. ಯಾವುದೇ ಆರೋಪ ಮಾಡಿದರೂ ಅದಕ್ಕೆ ಸರಿಯಾದ ಸಾಕ್ಷ್ಯಾಧಾರಗಳು ಬೇಕಾಗುತ್ತವೆ. ಈಗ ಸಿಜೆಐ ಅವರ ಕಾರ್ಯನಿರ್ವಹಣೆ ಸಮರ್ಪಕವಾಗಿಲ್ಲ ಎಂಬ ಒಂದು ಕಾರಣ ವಾಗ್ದಂಡನೆಗೆ ಸಾಕಾಗುವುದಿಲ್ಲ. ಈ ಹಿಂದಿನ ನ್ಯಾ.ರಾಮಸ್ವಾಮಿ ಪ್ರಕರಣಕ್ಕೆ ಹೋಲಿಕೆ ಮಾಡಿದರೆ ಈ ಪ್ರಕರಣ ಏನೇನೂ ಅಲ್ಲ. ಒಂದು ವೇಳೆ, ಮಹಾಭಿಯೋಗಕ್ಕೆ ಅಗತ್ಯಕ್ಕೆ ತಕ್ಕಷ್ಟು ಸಂಸದರು ಸಹಿ ಮಾಡಿ, ತನಿಖೆಗೆ ಸಮಿತಿ ರಚನೆಯಾದರೂ ಅಲ್ಲಿ, ಸರಿಯಾದ ಸಾಕ್ಷಿ, ಕಾರಣ ಸಿಗದೆ ಇದು ಬಿದ್ದುಹೋಗುತ್ತದೆ. ಇದೊಂದು ರೀತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ. ಇದು ರಾಜಕೀಯ ಪ್ರೇರಿತ ನಡೆಯಾಗಿದೆ ಅಷ್ಟೇ,” ಎಂದು ಹೇಳುತ್ತಾರೆ. ಸಾಕ್ಷಿಯ ವಿಚಾರವಾಗಿ ಕೆ ವಿ ಧನಂಜಯ ಅವರು ಹೇಳುವಂತೆ, "ಇಲ್ಲಿ ನಡೆಯುವ ತನಿಖೆ ಸಾಮಾನ್ಯ ತನಿಖೆಯಂತೆ ಇರುವುದಿಲ್ಲ. ಇಲ್ಲಿ ನ್ಯಾಯಮೂರ್ತಿಗಳ ವಿರುದ್ಧ ವಾಗ್ದಂಡನೆಗೆ ಅವರು ಗಂಭೀರ ತಪ್ಪು ಮಾಡಿರಬೇಕು ಎಂಬುದೇನಿಲ್ಲ. ತಮ್ಮ ಘನತೆಗೆ, ಸ್ಥಾನಕ್ಕೆ ಧಕ್ಕೆ ಬರುವ ಹಾಗೆ ನಡೆದುಕೊಂಡರೆ ಅವರಿಗೆ ವಾಗ್ದಂಡನೆ ವಿಧಿಸಬಹುದು,” ಎಂದು ಹೇಳುತ್ತಾರೆ.

ಇದನ್ನೂ ಓದಿ : ಸಿಜೆಐ ದೀಪಕ್ ಮಿಶ್ರಾ ವಿರುದ್ಧ ತನಿಖೆಗೆ ಪ್ರಶಾಂತ್ ಭೂಷಣ್ ದೂರು ನೀಡಿದ್ದೇಕೆ?

ಮಹಾಭಿಯೋಗ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಗಂಭೀರ ಆರೋಪ ಎದುರಿಸುವ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳನ್ನು ವಿಚಾರಣೆಗೆ ಒಳಪಡಿಸುವ ಪ್ರಕ್ರಿಯೆಯೇ ಮಹಾಭಿಯೋಗ. ಸಂವಿಧಾನದ ೧೨೪ನೇ ಪರಿಚ್ಛೇದದ ಪ್ರಕಾರ ಮಹಾಭಿಯೋಗ ಮಂಡಿಸಲಾಗುತ್ತದೆ. ಮಹಾಭಿಯೋಗ ಮಂಡನೆ ಮಾಡಬೇಕಾದರೆ ಲೋಕಸಭೆ ೧೦೦ ಮಂದಿ ಸದಸ್ಯರು, ರಾಜ್ಯಸಭೆಯ ೫೦ ಮಂದಿ ಸದಸ್ಯರು ಸಹಿ ಹಾಕಬೇಕು. ಈ ನಿಲುವಳಿಯನ್ನು ಸಭಾಪತಿ ಅಥವಾ ಸ್ಪೀಕರ್‌ ಸ್ವೀಕರಿಸುತ್ತಾರೆ (ತಿರಸ್ಕರಿಸುವ ಅಧಿಕಾರವೂ ಇರುತ್ತದೆ). ನಿಲುವಳಿ ಸ್ವೀಕೃತಗೊಂಡಲ್ಲಿ ತನಿಖೆಗೆ ಸುಪ್ರೀಂ ಕೋರ್ಟ್, ಹೈಕೋರ್ಟ್‌ನ ತಲಾ ಒಬ್ಬರು ನ್ಯಾಯಮೂರ್ತಿಗಳು ಹಾಗೂ ನ್ಯಾಯಶಾಸ್ತ್ರ ತಜ್ಞರನ್ನು ಒಳಗೊಂಡ ಸಮಿತಿ ರಚಿಸಲಾಗುತ್ತದೆ. ಈ ಸಮಿತಿ ದೋಷಾರೋಪ ಪಟ್ಟಿ ಸಿದ್ಧಪಡಿಸಿಕೊಂಡು, ವಾದಿ ಮತ್ತು ಪ್ರತಿವಾದಿಗಳ ಹೇಳಿಕೆಗಳನ್ನು ಪಡೆದುಕೊಳ್ಳುತ್ತದೆ. ಆರೋಪ ಸಾಬೀತಾದಲ್ಲಿ ಸಮಿತಿಯು ನಿಲುವಳಿಯನ್ನು ಎತ್ತಿಹಿಡಿಯುತ್ತದೆ. ಸರ್ಕಾರವು ಅದನ್ನು ಸದನದಲ್ಲಿ ಮಂಡಿಸಿ, ಮತಕ್ಕೆ ಹಾಕುತ್ತದೆ. ಮತಕ್ಕೆ ಹಾಕಿದ ಸಂದರ್ಭದಲ್ಲಿ ಸದನದಲ್ಲಿ ಉಪಸ್ಥಿತರಿರುವ ಒಟ್ಟು ಸದಸ್ಯರ 3ನೇ 2 ಭಾಗದಷ್ಟು ಸದಸ್ಯರ ಅನುಮೋದನೆ ದೊರೆಯಬೇಕು. ಬಳಿಕ ಮಹಾಭಿಯೋಗದ ನಿಲುವಳಿಯನ್ನು ರಾಷ್ಟ್ರಪತಿಗಳ ಸಹಿಗೆ ರವಾನಿಸಲಾಗುತ್ತದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳನ್ನು ವಜಾಗೊಳಿಸುವ ಅಧಿಕಾರ ರಾಷ್ಟ್ರಪತಿಗಷ್ಟೇ ಇದೆ.

ಮಾರ್ನಿಂಗ್ ಡೈಜಿಸ್ಟ್ | ಇಂದು ಗಮನಿಸಬೇಕಾದ ಪ್ರಮುಖ ಸುದ್ದಿಗಳು
ದೊಂಬಿ ಹತ್ಯೆ ಅರಾಜಕತೆ ಸೂಚಿಸುತ್ತದೆ ಎಂದು ಕೇಂದ್ರಕ್ಕೆ ಎಚ್ಚರಿಸಿದ ಸುಪ್ರೀಂ ಕೋರ್ಟ್
ಮಲೆನಾಡಿನ ಕುಗ್ರಾಮಗಳಲ್ಲಿ ಜೀವಬಲಿಗೆ ಕಾದಿವೆ ಅಸುರಕ್ಷಿತ ಕಾಲುಸಂಕಗಳು
Editor’s Pick More