ಕಟುವಾ, ಉನ್ನಾವ್‌ ಅತ್ಯಾಚಾರ ಪ್ರಕರಣ ಕುರಿತು ಕಡೆಗೂ ಮೌನ ಮುರಿದ ಪ್ರಧಾನಿ

ಎರಡು ದಿನಗಳ ಕಾಲ ದೇಶಾದ್ಯಂತ ಆಕ್ರೋಶ, ಪ್ರತಿಭಟನೆಗೆ ಕಾರಣವಾದ ಕಟುವಾ ಮತ್ತು ಉನ್ನಾವ್‌ ಅತ್ಯಾಚಾರ ಪ್ರಕರಣಗಳ ಬಗ್ಗೆ ಕಡೆಗೂ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. “ಯಾವುದೇ ಅಪರಾಧಿಯೂ ತಪ್ಪಿಸಿಕೊಳ್ಳಲು ಬಿಡುವುದಿಲ್ಲ. ನ್ಯಾಯ ದೊರೆತೇ ತೀರುವುದು,” ಎಂದಿದ್ದಾರೆ

"ಈ ಘಟನೆಗಳು ಯಾವುದೇ ನಾಗರಿಕ ಸಮಾಜ ನಾಚಿಕೆ ಪಡುವಂಥದ್ದು. ದೇಶ ಕಟ್ಟಿದ ನಾಯಕರ ಮುಂದೆ ತಲೆ ತಗ್ಗಿಸಿ ನಿಲ್ಲುವಂತಾಗಿದೆ. ಯಾವುದೇ ಅಪರಾಧಿಯೂ ತಪ್ಪಿಸಿಕೊಳ್ಳಲು ಬಿಡುವುದಿಲ್ಲ. ನ್ಯಾಯ ದೊರೆತೇ ತೀರುವುದು. ಆ ಹೆಣ್ಣುಮಕ್ಕಳಿಗೆ ಸಲ್ಲಬೇಕಾದ ನ್ಯಾಯ ಸಿಕ್ಕುವುದು. ನಾವೆಲ್ಲರೂ ಕೂಡಿ ಈ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಅಪರಾಧಿ ಯಾವುದೇ ಕಾರಣಕ್ಕೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಬಿಡುವುದಿಲ್ಲ...''

-ಇವು ಪ್ರಧಾನಿ ನರೇಂದ್ರ ಮೋದಿಯವರ ಮಾತುಗಳು. ನವದೆಹಲಿಯಲ್ಲಿ ಶುಕ್ರವಾರ ಅಂಬೇಡ್ಕರ್‌ ಜನ್ಮದಿನೋತ್ಸವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತ ಅವರು, ಕಟುವಾ ಮತ್ತು ಉನ್ನಾವ್ ಪ್ರಕರಣಗಳಿಗೆ ಸಂಬಂಧಿಸಿ ತಮ್ಮ ಮೌನ ಮುರಿದಿದ್ದಾರೆ.

ಈ ಕುರಿತು ಟ್ವೀಟ್‌ ಕೂಡ ಮಾಡಿರುವ ಪ್ರಧಾನಿ, "ದೇಶದ ಯಾವುದೇ ರಾಜ್ಯದಲ್ಲಿ ಯಾವುದೇ ಕ್ಷೇತ್ರದಲ್ಲಿ ಇಂಥ ಘಟನೆಗಳು ಸಂಭವಿಸಿದರೂ ನಮ್ಮ ಮಾನವೀಯ ಸಂವೇದನೆಗಳನ್ನು ಅಲುಗಾಡಿಬಿಡಿಸುತ್ತವೆ. ನಾನು ದೇಶದ ನಾಗರಿಕರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಲು ಬಯಸುತ್ತೇನೆ; ಏನೆಂದರೆ, ಯಾವ ಅಪರಾಧಿಯೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನ್ಯಾಯ ಸಿಕ್ಕೇ ಸಿಗುತ್ತದೆ, ಪೂರ್ಣ ನ್ಯಾಯ ಸಿಕ್ಕುತ್ತದೆ. ಸಮಾಜದೊಳಗೆ ಇರುವ ಇಂಥ ದುಷ್ಟತನವನ್ನು ನಾವೆಲ್ಲರೂ ಅಂತ್ಯಗೊಳಿಸೋಣ,'' ಎಂದಿದ್ದಾರೆ.

ಇದನ್ನೂ ಓದಿ : ಕಟುವಾ, ಉನ್ನಾವ್‌ ಪ್ರಕರಣ: ಪ್ರಧಾನಿ ಮೌನದ ಕುರಿತ ‘ಕ್ವಿಂಟ್‌’ ಖಾಲಿ ಸುದ್ದಿ ವೈರಲ್

ಗುರುವಾರ ಮಧ್ಯರಾತ್ರಿ ನವದೆಹಲಿಯಲ್ಲಿ ನಡೆದ ಪ್ರತಿಭಟನೆ ಸೃಷ್ಟಿಸಿದ ರಾಜಕೀಯ ಒತ್ತಡ, ರಾಹುಲ್‌ ಗಾಂಧಿ ಮೋದಿಯವರತ್ತ ಎಸೆದ ಪ್ರಶ್ನೆಗಳು, ಅತ್ಯಾಚಾರಿಗಳನ್ನು ಸಮರ್ಥಿಸಿಕೊಂಡ ಬಿಜೆಪಿ ಶಾಸಕರು ಮತ್ತು ನಾಯಕರನ್ನು ಖಂಡಿಸಿ ದೇಶಾದ್ಯಂತ ನಡೆದ ಪ್ರತಿಭಟನೆಗಳು ಮೋದಿಯವರು ಮೌನ ಮುರಿಯುವಂಥ ಒತ್ತಡ ಸೃಷ್ಟಿ ಮಾಡಿತ್ತು. ಈ ಪ್ರಕರಣಗಳ ಕುರಿತ ಪ್ರಧಾನಿ ಮೌನವನ್ನು ಆಘಾತಕಾರಿಯಾದ ಮೌನವೆಂದು ಬಣ್ಣಿಸಿ, 'ದಿ ಕ್ವಿಂಟ್‌' ಮತ್ತು 'ದಿ ವೈರ್‌' ಆನ್‌ಲೈನ್‌ ಸುದ್ದಿಸಂಸ್ಥೆಗಳು ‘ಖಾಲಿ ಸುದ್ದಿ’ ಪ್ರಕಟಿಸಿದ್ದು ವೈರಲ್ ಕೂಡ ಆಗಿತ್ತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More