ಮೂಗುದಾರ ಹಾಕಿಸಿಕೊಳ್ಳುವ ಮಾಧ್ಯಮಗಳಿಂದ ಹೆಚ್ಚಿದ ಪೇಯ್ಡ್‌ ನ್ಯೂಸ್‌

ಪೇಯ್ಡ್‌ ನ್ಯೂಸ್‌ ಹಾವಳಿಯಿಂದ ಮಾಧ್ಯಮಗಳ ಮೂಗುದಾರ ಹಣಬಲ ಹೊಂದಿರುವ ರಾಜಕಾರಣಿಗಳಿಗೆ ಹಸ್ತಾಂತರವಾಗಿದೆ. ಮಾಧ್ಯಮಗಳಲ್ಲೂ ಕಾರ್ಪೊರೆಟ್ ವ್ಯವಸ್ಥೆ ಬಂದಿದ್ದರಿಂದ ಪೇಯ್ಡ್‌ ನ್ಯೂಸ್‌ ಹಾವಳಿ ಹೆಚ್ಚಾಗಿದೆ ಎನ್ನುವ ಮಾತಿದೆ. ಈ ಬಗ್ಗೆ‌ ಮಾಧ್ಯಮ, ಪತ್ರಕರ್ತ, ರಾಜಕಾರಣಿಗಳ ನಿಲುವು ಏನಿರಬಹುದು?

ಪ್ರಜಾಪ್ರಭುತ್ವದ ಆಶಯಗಳನ್ನು ಯಶಸ್ವಿಯಾಗಿಸುವಲ್ಲಿ ಮಾಧ್ಯಮಗಳು ನಿರ್ಣಾಯಕ ಪಾತ್ರವಹಿಸುತ್ತವೆ. ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ವಿಭಿನ್ನ, ಬಲಿಷ್ಠ ಮತ್ತು ವೃತ್ತಿಯೊಂದಿಗೆ ಎಂದಿಗೂ ರಾಜೀಮಾಡಿಕೊಳ್ಳದ ಪತ್ರಕರ್ತ ಮತ್ತು ಸಮೂಹ ಮಾಧ್ಯಮದ ಅಗತ್ಯವಿದೆ. ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಸಮಕಾಲೀನ ಪರಿಸ್ಥಿತಿಯಲ್ಲಿ ಪ್ರಾಮಾಣಿಕ ಮಾಧ್ಯಮಗಳು ಇಂದೆಂದಿಗಿಂತಲೂ ಅಗತ್ಯ. ಮಾಧ್ಯಮಗಳಲ್ಲಿ ಪ್ರಸಾರ ಅಥವಾ ಪ್ರಕಟವಾಗುವ ಸುದ್ದಿ ಮತ್ತು ವಿಶ್ಲೇಷಣೆಗಳು ಉತ್ತಮ ಉದ್ದೇಶ ಹೊಂದುವುದರ ಜೊತೆಗೆ, ನ್ಯಾಯಸಮ್ಮತವಾಗಿರಬೇಕು. ಯಾವುದೇ ಒಂದು ವಿಷಯ, ಪಕ್ಷದ ಪರವಾಗಿ ವಾಲದಂತೆ ಜಾಗೃತಿವಹಿಸಬೇಕು. ಸತ್ಯವೇ ಅಂತಿಮವಾಗಿರುವಂತೆ ನೋಡಿಕೊಳ್ಳಬೇಕು. ಆ ಮೂಲಕ ಪ್ರಜಾಪ್ರಭುತ್ವದ ಬೇರನ್ನು ಭದ್ರಪಡಿಸುವ ನಿಟ್ಟಿನಲ್ಲಿ ಜನರ ತಿಳಿವಳಿಕೆಯನ್ನು ವೃದ್ಧಿಸುವ ಕೆಲವನ್ನು ಮಾಧ್ಯಮಗಳು ಮಾಡಬೇಕಾಗುತ್ತದೆ. ಮಾಧ್ಯಮಗಳ ಮೇಲೆ ಜನರು ಇಟ್ಟಿರುವ ವಿಶ್ವಾಸವನ್ನು ಅಷ್ಟೇ ಜತನವಾಗಿ ಕಾಪಾಡಿಕೊಳ್ಳುವ ಜವಾಬ್ದಾರಿಯೂ ಮಾಧ್ಯಮಗಳ ಮೇಲಿದೆ. ಆದರೆ, ಪೇಯ್ಡ್‌ ನ್ಯೂಸ್ ಎಂಬ ಪೆಡಂಭೂತ ಅದಕ್ಕೆ ಅವಕಾಶ ನೀಡುತ್ತಿಲ್ಲ.

ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ಇಂತಿಷ್ಟೇ ಹಣವನ್ನು ಪ್ರಚಾರಕ್ಕೆ ಖರ್ಚು ಮಾಡಬೇಕು ಎಂದು ಚುನಾವಣಾ ಆಯೋಗವು ಮಿತಿ ನಿಗದಿಪಡಿಸಿರುವುದು ರಾಜಕಾರಣಿಗಳು ಅಡ್ಡದಾರಿಗಳನ್ನು ನೋಡಿಕೊಳ್ಳಲು ಅನುವು ಮಾಡಿಕೊಟ್ಟಿದೆ ಎಂಬ ಆರೋಪವಿದೆ. ಈ ಅವಕಾಶ ಬಳಸಿಕೊಳ್ಳಲು ಮುಂದಾಗಿರುವ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳು ಹಣ ಮಾಡುವ ದಂಧೆಗೆ ಇಳಿದಿವೆ. ಪೇಯ್ಡ್‌ ನ್ಯೂಸ್‌ ಪಿಡುಗಿನ ಬಗ್ಗೆ ಕಠಿಣ ನಿಲುವು ತಳೆದ ಪತ್ರಕರ್ತರನ್ನು ಉದ್ಯೋಗದಾತರು ನಿರ್ಲಕ್ಷಿಸಿದ ಉದಾಹರಣೆಗಳೂ ಹೇರಳವಾಗಿವೆ. ಪೇಯ್ಡ್‌ ನ್ಯೂಸ್‌ ಸೇರಿದಂತೆ ಸಮಾಜವನ್ನು ಬಾಧಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು‌ ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಈ ಮಧ್ಯೆ, ೨೦೦೯ರ ಸಾರ್ವತ್ರಿಕ ಚುನಾವಣೆಯಲ್ಲಿ ವ್ಯಾಪಕವಾಗಿ ಚರ್ಚೆಯಾದ ಪೇಯ್ಡ್‌ ನ್ಯೂಸ್‌ ಬಗ್ಗೆ ದೇಶದ ವಿವಿಧೆಡೆ ಹಲವು ಸೆಮಿನಾರ್‌, ಸಭೆ-ಸಮಾರಂಭ, ಚರ್ಚೆ, ವಾದ-ಸಂವಾದಗಳು ನಡೆದಿವೆ. ಈ ಬಗ್ಗೆ ಸಂಸತ್ತಿನಲ್ಲೂ ಸುದೀರ್ಘ ಚರ್ಚೆಯಾಗಿದೆ. ಪಕ್ಷಾತೀತವಾಗಿ ರಾಜಕಾರಣಿಗಳು ಪೇಯ್ಡ್‌ ನ್ಯೂಸ್‌‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಇದನ್ನು ತಹಬಂದಿಗೆ ತರಲು ಆಗಬೇಕಾದ ಕೆಲಸಗಳು ಮಾತ್ರ ಆಗಿಲ್ಲ. ಪೇಯ್ಡ್‌‌ ನ್ಯೂಸ್‌ಗೆ ವೆಚ್ಚ ಮಾಡಿದ್ದರ ಬಗ್ಗೆ ಅಭ್ಯರ್ಥಿ ದಾಖಲೆ ಸಲ್ಲಿಸದೆ ಇದ್ದರೆ ಅದು ಚುನಾವಣಾ ಅಕ್ರಮವಾಗಲಿದೆ. ಇದನ್ನು ಗುರಿಯಾಗಿಟ್ಟುಕೊಂಡು ಚುನಾವಣಾ ಆಯೋಗವು ಪ್ರಜಾಪ್ರತಿನಿಧಿ ಕಾಯ್ದೆ-೧೯೫೧ರ ಅಡಿ ಕ್ರಮಕೈಗೊಳ್ಳಬಹುದು. ಅಭ್ಯರ್ಥಿಯಿಂದ ಹಣ ಪಡೆದಿದ್ದಕ್ಕೆ ದಾಖಲೆ ನೀಡದೆ ಇದ್ದರೆ ಸಂಬಂಧಿತ ಮಾಧ್ಯಮ ಅಥವಾ ಅದರ ಪ್ರತಿನಿಧಿಯು ಕಂಪನಿ ಕಾಯ್ದೆ-೧೯೫೬ ಮತ್ತು ಆದಾಯ ತೆರಿಗೆ ಕಾಯ್ದೆ-೧೯೬೧ ಉಲ್ಲಂಘಿಸಿದಂತಾಗುತ್ತದೆ. ಅದಕ್ಕಾಗಿಯೇ ಈ ವ್ಯವಹಾರಕ್ಕೆ ಕಪ್ಪು ಹಣ ಬಳಕೆ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ಇಲ್ಲವೇ ಅತ್ಯಂತ ಕಡಿಮೆ ವೆಚ್ಚಕ್ಕೆ ಬಿಲ್‌ ಸಿದ್ಧಪಡಿಸಲಾಗುತ್ತದೆ ಎಂದು ‘ಪೇಡ್‌ ನ್ಯೂಸ್‌: ಹೌ ಕರಪ್ಷನ್‌ ಇನ್‌ ದಿ ಇಂಡಿಯನ್ ಮೀಡಿಯಾ ಅಂಡರ್‌ಮೈನ್ಸ್ ಡೆಮಾಕ್ರಸಿ’ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹಲವು ರಾಜಕಾರಣಿಗಳು ಮತ್ತು ಪತ್ರಕರ್ತರ ಜೊತೆ ಒಡನಾಡಿ ಪೇಯ್ಡ್‌ ನ್ಯೂಸ್‌ ವರ್ತುಲವನ್ನು ಅರ್ಥೈಸಿಕೊಂಡಿದ್ದ ಹಿರಿಯ ಪತ್ರಕರ್ತ ಮತ್ತು ಪೇಯ್ಡ್‌ ನ್ಯೂಸ್‌ ವಿರುದ್ಧದ ಧ್ವನಿಯಾಗಿದ್ದ ಪ್ರಭಾಶ್‌‌ ಜೋಶಿ ಅವರು, “ಬಹುತೇಕ ಮಾಧ್ಯಮ ಸಂಸ್ಥೆಗಳ ಮಾಲೀಕರು ತಾವು ಸಾರ್ವಜನಿಕ ಟೀಕೆ ಟಿಪ್ಪಣಿಗಳಿಂದ ಅತೀತ ಎಂದು ಭಾವಿಸಿದ್ದಾರೆ. ಆದರೆ, ಜನರ ಹಕ್ಕುಗಳನ್ನು ಉಲ್ಲಂಘಸಿದರೆ ಅಂಥವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹಿಂಪಡೆಯಬೇಕು,’’ ಎಂದು ೨೦೦೯ರ ಮಾಧ್ಯಮ ವೃತ್ತಿನಿರತರ ಒಕ್ಕೂಟದ ಸೆಮಿನಾರ್‌ನಲ್ಲಿ ಕಟುವಾಗಿ ನುಡಿದಿದ್ದರು.

“ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಯೊಬ್ಬ ಸಾಮಾನ್ಯವಾಗಿ ೧ರಿಂದ ೨ ಕೋಟಿ ರುಪಾಯಿ ಹಣವನ್ನು ಮಾಧ್ಯಮಗಳಿಗಾಗಿ ಮೀಸಲಿಡುತ್ತಾನೆ. ಇದರ ಜೊತೆಗೆ ಮಾಹಿತಿ‌ ಸಿದ್ಧಪಡಿಸಲು ಇಬ್ಬರು ಅಥವಾ ಮೂವರು ಉದ್ಯೋಗಿಗಳನ್ನು ನೇಮಿಸುತ್ತಾನೆ. ಮಾಧ್ಯಮ ಸಂಸ್ಥೆಗಳ ಮಾಲೀಕರು ಪತ್ರಿಕೆ ಮತ್ತು ಟಿವಿಯನ್ನು ಉತ್ಪನ್ನ ಎಂದು ಪರಿಗಣಿಸುತ್ತಾರೆ. ಆದರೆ, ಅವರು ಉತ್ಪನ್ನದಲ್ಲಿನ ಮಾಹಿತಿ ಉಲ್ಲೇಖಿಸಲು ಉದ್ದೇಶಪೂರ್ವಕವಾಗಿ ಮರೆಯುತ್ತಾರೆ. ಉದಾಹರಣೆಗೆ ನೋಡುವುದಾದರೆ ಔಷಧಿಯೊಂದರ ಕವಚದ ಮೇಲೆ ಔಷಧಿಯ ಮಾಹಿತಿ, ಉತ್ಪಾದನೆಯ ವಿವರ, ಪ್ಯಾಕೇಜಿಂಗ್‌ ಮತ್ತು ಬಾಳಿಕೆ ಕಾಲವನ್ನು ವಿವರಿಸಲಾಗಿರುತ್ತದೆ. ಪತ್ರಿಕೆ ಮತ್ತು ಟಿವಿಯನ್ನು ಉತ್ಪನ್ನ ಎಂದು ಪರಿಗಣಿಸುವುದಾರೆ ಅದರ ಮೇಲೆ ಇದೇ ವಿವರಗಳನ್ನು ಪ್ರಕಟಿಸಬೇಕಲ್ಲವೇ?" ಎನ್ನುವ ಮೂಲಕ ಮಾಧ್ಯಮ ಸಂಸ್ಥೆಗಳ ನಿಲುವಿಗೆ ಆಕ್ರೋಶ ವ್ಯಕ್ತಪಡಿಸಿದ್ದರು.

ಹರಿಯಾಣ ಮುಖ್ಯಮಂತ್ರಿಯಾಗಿದ್ದ ಭೂಪೇಂದ್ರ ಸಿಂಗ್‌ ಹೂಡಾ ಅವರ ಚುನಾವಣಾ ಪ್ರಚಾರದ ಸುದ್ದಿಯನ್ನು ಕೆಲವು ದಿನಗಳ ನಂತರ ಸುದ್ದಿಯ ಬದಲಾಗಿ ಜಾಹೀರಾತಿನ ಮಾದರಿಯಲ್ಲಿ ಪತ್ರಿಕೆಯೊಂದು ಪ್ರಕಟಮಾಡಿತ್ತು. ಇದರಿಂದ ಆಶ್ಚರ್ಯಗೊಂಡಿದ್ದ ಹೂಡಾ ಅವರು ಪತ್ರಿಕೆಯ ಮಾಲೀಕರನ್ನ ಸಂಪರ್ಕಿಸಿ ವಿಷಯ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮಾಧ್ಯಮ ಸಂಸ್ಥೆಯ ಮಾಲೀಕ ಅದು, ಸುದ್ದಿಯಲ್ಲ ಜಾಹೀರಾತು ಎಂದು ವಿವರಿಸಿದ್ದರು. ಇದಕ್ಕೆ ಉತ್ತರಿಸಿದ್ದ ಹೂಡಾ ಅವರು, “ನಮ್ಮ ಪತ್ರಿಕೆ ಸುಳ್ಳು ಹೇಳುತ್ತದೆ ಮತ್ತು ಸುದ್ದಿ ಪ್ರಕಟಿಸಲು ಹಣ ಪಡೆಯುತ್ತದೆ,’’ ಎಂದು ಜಾಹೀರಾತು ಪ್ರಕಟಿಸಲು ಸೂಚಿಸಿದ್ದನ್ನು ಉಲ್ಲೇಖಿಸಿದ್ದ ಪ್ರಭಾಶ್‌‌ ಜೋಶಿ ಅವರು ಮಾಧ್ಯಮಗಳ ಅಧಃಪತನದ ಹಾದಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.

೨೦೦೯ರ ನವೆಂಬರ್‌ನಲ್ಲಿ ‘ಸಂಸತ್ತು ಮತ್ತು ಮಾಧ್ಯಮ’ ಎಂಬ ಸೆಮಿನಾರ್‌ನಲ್ಲಿ ಪಾಲ್ಗೊಂಡಿದ್ದ ಅಂದಿನ ಉಪ ರಾಷ್ಟ್ರಪತಿ ಹಮೀದ್‌ ಅನ್ಸಾರಿ ಅವರು, “ಪ್ರಜಾಪ್ರಭುತ್ವದ ನಾಲ್ಕು ಅಂಗಗಳಲ್ಲಿ ಮಾಧ್ಯಮ ರಂಗ ಮಾತ್ರ ವಾಣಿಜ್ಯ ಮತ್ತು ಆದಾಯ ಕೇಂದ್ರಿತವಾಗಿದೆ,” ಎಂದಿದ್ದರು. ಅಲ್ಲದೆ, ದರಪಟ್ಟಿ ಮತ್ತು ಪ್ಯಾಕೇಜ್‌ ನ್ಯೂಸ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಕೇಂದ್ರ ಚುನಾವಣಾ ಆಯೋಗದ ಆಯುಕ್ತರಾದ ಎಸ್ ವೈ ಖುರೇಷಿ ಅವರು, “ಚುನಾವಣೆ ಸಂದರ್ಭದಲ್ಲಿ ಮಾತ್ರ ಆಯೋಗವು ಹುಲಿಯ ರೀತಿಯಲ್ಲಿ ಘರ್ಜನೆ ಮಾಡುತ್ತದೆ. ಸಾಂದರ್ಭಿಕ ದಾಖಲೆಯಿಂದ ಪೇಯ್ಡ್‌ ನ್ಯೂಸ್‌ ಪ್ರಕರಣ ಸಾಬೀತುಪಡಿಸಲಾಗದು. ಅದಕ್ಕೆ ಹಣಕಾಸು ವ್ಯವಹಾರದ ದಾಖಲೆ ಅಗತ್ಯ. ಈ ನಿಟ್ಟಿನಲ್ಲಿ ಶಾಸಕಾಂಗ ಕಾರ್ಯೋನ್ಮುಖವಾಗಬೇಕು,’’ ಎಂದು ಹೇಳಿದ್ದರು.

ಇದನ್ನೂ ಓದಿ : ರೇಟ್‌ ಕಾರ್ಡಿನಿಂದ ಪ್ಯಾಕೇಜ್‌; ಸಾವಿರಾರು ಕೋಟಿ ರುಪಾಯಿ ಉದ್ಯಮ ಪೇಯ್ಡ್‌ ನ್ಯೂಸ್

೨೦೧೦ರ ಮಾರ್ಚ್‌ನಲ್ಲಿ ನಡೆದ ಬಜೆಟ್‌ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಮಾತನಾಡಿದ್ದ ಸಿಪಿಎಂ ನಾಯಕ ಸೀತಾರಾಂ ಯೆಚೂರಿ, “ಮಾಧ್ಯಮಗಳ ಕಾರ್ಪೊರೇಟೀಕರಣವು ಪೇಯ್ಡ್‌ ನ್ಯೂಸ್‌ ವ್ಯಾಪಕಗೊಳ್ಳುವಂತೆ ಮಾಡಿದೆ. ಪೇಯ್ಡ್‌ ನ್ಯೂಸ್‌ನಿಂದಾಗಿ ಪತ್ರಿಕೋದ್ಯಮದ ತಿರುಳಿಗೆ ಕೊಡಲಿ ಏಟು ಬಿದ್ದಿದೆ. ಇದಕ್ಕೆ ಕಡಿವಾಣ ಹಾಕದೇ ಇದ್ದರೆ ಭಾರತದ ಸಂಸದೀಯ ಪ್ರಜಾಪ್ರಭುತ್ವ ಸಂಪೂರ್ಣವಾಗಿ ಬೆತ್ತಲಾಗಲಿದೆ,’’ ಎಂದು ಆತಂಕ ವ್ಯಕ್ತಪಡಿಸಿದ್ದರು. ಮತ್ತೊಂದು ಹೆಜ್ಜೆ ಮುಂದೆ ಹೋಗಿ ಮಾತನಾಡಿದ್ದ ಯೆಚೂರಿ, “ಮಾಧ್ಯಮ ಸಂಸ್ಥೆಗಳು ಮತ್ತು ಪತ್ರಕರ್ತರನ್ನು ಹೊಣೆಗಾರರನ್ನಾಗಿಸಬೇಕು. ಪೇಯ್ಡ್‌ ನ್ಯೂಸ್‌ ಪ್ರಕರಣ ರುಜುವಾತಾದರೆ ಅಂಥ ಸಂಸ್ಥೆಗಳಿಗೆ ಸರ್ಕಾರಿ ಜಾಹೀರಾತು ನಿರ್ಬಂಧಿಸಬೇಕು,” ಎಂದೂ ಸಲಹೆ ನೀಡಿದ್ದರು.

ಯೆಚೂರಿ ಅವರ ಸಲಹೆಯನ್ನು ವಿಸ್ತರಿಸಿದ್ದ ಅಂದಿನ ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿದ್ದ ಅರುಣ್‌ ಜೇಟ್ಲಿ, “ಕೈಗಾರಿಕೆಗಳು ದೇಶದ ಆರ್ಥಿಕತೆಗೆ ರೂಪ ನೀಡಿದರೆ, ಮಾಧ್ಯಮಗಳು ಮಾನವನ ಮಿದುಳಿಗೆ ರೂಪ ನೀಡುತ್ತವೆ. ಯಾರು ಹೆಚ್ಚಿಗೆ ಹಣ ವ್ಯಯಿಸುತ್ತಾರೋ ಅವರು ಜನರ ಒಲವು, ನಿಲುವುಗಳನ್ನು ರೂಪಿಸುತ್ತಾರೆ. ಆದ್ದರಿಂದ ಪೇಯ್ಡ್‌ ನ್ಯೂಸ್‌ ಅನ್ನು ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ತೆಗೆದು ಬ್ಯುಸಿನೆಸ್‌ ವಿಭಾಗಕ್ಕೆ ಸೇರಿಸಬೇಕು. ಇದರಿಂದ ಪೇಯ್ಡ್‌ ನ್ಯೂಸ್‌ ವಹಿವಾಟು ಎಂಬುದು ಸಾಬೀತಾಗಲಿದ್ದು, ಕಾನೂನಿಗೆ ವಿರುದ್ಧವಾದ ಉದ್ಯಮ ಎಂದೂ ರುಜುವಾತಾಗಲಿದೆ,’’ ಎಂದು ಹೇಳಿದ್ದರು.

ಮಾಧ್ಯಮ ಉದ್ಯಮ ಮಾಡೆಲ್‌ನಲ್ಲಿ ಸಮಸ್ಯೆ

ಪತ್ರಿಕೆ ಮತ್ತು ಟಿವಿ ಮಾಧ್ಯಮ ಕೋಟ್ಯಂತರ ರುಪಾಯಿ ಬಂಡವಾಳವನ್ನು ನಿರೀಕ್ಷಿಸುವ ಉದ್ಯಮವಾಗಿದ್ದು, ಅಪಾರ ವೆಚ್ಚವಾಗುವ ಮುದ್ರಣ ಯಂತ್ರ, ಮಾನವ ಸಂಪನ್ಮೂಲ, ಇನ್ನಿತರ ಸೌಲಭ್ಯ ಕಲ್ಪಿಸಬೇಕಾಗುತ್ತದೆ. ಕನಿಷ್ಠ ೧೪ ಪುಟಗಳ ಒಂದು ಪತ್ರಿಕೆ ರೂಪಿಸಿ ಅದನ್ನು ಓದುಗನ ಕೈಗೆ ತಲುಪಿಸಲು ಕನಿಷ್ಠ ೨೫ ರುಪಾಯಿ ವೆಚ್ಚವಾಗುತ್ತದೆ (ವಿವಿಧೆಡೆ ದರ ವ್ಯತ್ಯಾಸವಾಗುತ್ತದೆ). ಆದರೆ, ಇದರಲ್ಲಿ ಓದುಗ ನೀಡುವುದು ಅದರಲ್ಲಿ ಕಾಲು ಭಾಗ ಮಾತ್ರ. ಉಳಿದ ವೆಚ್ಚವನ್ನು ಮಾಧ್ಯಮ ಸಂಸ್ಥೆಗಳು ಜಾಹೀರಾತಿನಿಂದಲೇ ತುಂಬಿಸಿಕೊಳ್ಳಬೇಕಿದೆ.

ಇನ್ನು, ಸುದ್ದಿವಾಹಿನಿಗಳ ಈ ಸ್ಥಿತಿ ಮತ್ತಷ್ಟು ಕೆಟ್ಟದಾಗಿದ್ದು, ಅವುಗಳು ಸಂಪೂರ್ಣವಾಗಿ ಜಾಹೀರಾತಿನ ಮೇಲೆಯೇ ಅವಲಂಬಿತವಾಗಿವೆ. ಕೇಬಲ್‌ ಆಪರೇಟರ್‌ಗಳಿಗೆ ಟಿವಿ ಮಾಧ್ಯಮಗಳೇ ಕೋಟ್ಯಂತರ ರುಪಾಯಿ ಪಾವತಿಸಬೇಕಿದೆ. ಈ ನಿಟ್ಟಿನಲ್ಲಿ ಉದ್ಯಮದಿಂದ ಲಾಭ ಪಡೆಯುವುದಕ್ಕಿಂತ ಹೆಚ್ಚಾಗಿ ಅಪಾರ ಪ್ರಮಾಣದ ಬಂಡವಾಳ ಸರಿದೂಗಿಸುವುದೇ ಉದ್ಯಮ ಸಂಸ್ಥೆಗಳಿಗೆ ಸವಾಲಾಗಿದೆ. ಇದು ಮಾಧ್ಯಮಗಳು ಇಂದು ತುಳಿಯುತ್ತಿರುವ ಕವಲುದಾರಿಗೆ ಮೂಲ. ಇದರ ಮಧ್ಯೆ, ಮಾಧ್ಯಮಗಳ ನಡುವೆ ಜಾಹೀರಾತು ಸಂಘರ್ಷ ಏರ್ಪಟ್ಟಿದೆ. ಇದನ್ನು ಉಳಿಸಿಕೊಳ್ಳುವುದಕ್ಕೆ ಮಾಧ್ಯಮ ಸಂಸ್ಥೆಗಳು ನಾನಾ ರೀತಿಯಲ್ಲಿ ಯತ್ನ ನಡೆಸುತ್ತಿವೆ. ಕೆಲವು ಮಾಧ್ಯಮ ಸಂಸ್ಥೆಗಳು ಜಾಹೀರಾತು ಏಜೆನ್ಸಿಗಳನ್ನು ಹೊಂದಿವೆ. ಮತ್ತೆ ಕೆಲವು ಸಂಸ್ಥೆಗಳು ಜಾಹೀರಾತು ಏಜೆನ್ಸಿಯಲ್ಲಿ ಬಂಡವಾಳ ತೊಡಗಿಸುವ ಮಾರ್ಗ ತುಳಿದಿವೆ.

ಮಾಧ್ಯಮ ಸಂಸ್ಥೆಗಳು ಯಶಸ್ವಿಯಾಗಲು ಸಾಕಷ್ಟು ಬಂಡವಾಳ ಅಗತ್ಯ ಇರುವಂತೆಯೇ ವೃತ್ತಿ ನೈಪುಣ್ಯ, ಪ್ರಪಂಚ ಜ್ಞಾನ ಮತ್ತು ಸಾಮಾಜಿಕ ಬದ್ಧತೆ ಇಟ್ಟುಕೊಂಡಿರುವ ಮಾನವ ಸಂಪನ್ಮೂಲದ ಅಗತ್ಯವೂ ಇದೆ. ಅಂಥ ಪತ್ರಕರ್ತರಿಲ್ಲದೆ ಉತ್ತಮ ಪತ್ರಿಕೋದ್ಯಮ ಸಂಸ್ಥೆ ಕಟ್ಟುವುದು ಕಷ್ಟ. ಅಂದಮಾತ್ರಕ್ಕೆ ಅಂತಹ ಸಂಸ್ಥೆಗಳು, ಪತ್ರಕರ್ತರು ಇಲ್ಲವೇ ಇಲ್ಲ ಎಂದೇನೂ ಇಲ್ಲ. ಉತ್ತಮ ಮಾಧ್ಯಮ ಸಂಸ್ಥೆ ಕಟ್ಟಲು ಮತ್ತು ಆ ಮೂಲಕ ಪತ್ರಿಕೆ ಅಥವಾ ಟಿವಿ ಚಾನಲ್‌, ಆನ್‌ಲೈನ್‌ ಪೋರ್ಟಲ್‌ ರೂಪಿಸುವ ಸಾಹಸಿಗರು ಇದ್ದೇ ಇದ್ದಾರೆ. ಈ ನಿಟ್ಟಿನಲ್ಲಿ ಲಭ್ಯವಿರುವ ಉತ್ಕೃಷ್ಟ ಮಾದರಿಗಳನ್ನು ಅಧ್ಯಯನ ಮಾಡಿ, ಭಾರತದಲ್ಲಿ ಪತ್ರಿಕೋದ್ಯಮಕ್ಕೆ ಎದುರಾಗಿರುವ ಬಿಕ್ಕಟ್ಟು ನಿವಾರಿಸಲು ಪ್ರಜ್ಞಾವಂತರು ಯತ್ನಿಸಬೇಕಿದೆ.

ಮುಂದುವರಿಯುವುದು...

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More