ಕಟುವಾ, ಉನ್ನಾವ್‌ ಪ್ರಕರಣ: ಪ್ರಧಾನಿ ಮೌನದ ಕುರಿತ ‘ಕ್ವಿಂಟ್‌’ ಖಾಲಿ ಸುದ್ದಿ ವೈರಲ್

ಕಟುವಾ ಮತ್ತು ಉನ್ನಾವ್‌ ಅತ್ಯಾಚಾರ ಪ್ರಕರಣದ ಬಗ್ಗೆ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪ್ರಧಾನಿಯ ಈ ಮೌನದ ಕುರಿತು ‘ದಿ ಕ್ವಿಂಟ್‌’ ಪ್ರಕಟಿಸಿರುವ ‘ಖಾಲಿ ಸುದ್ದಿ’ ಇದೀಗ ವೈರಲ್ ಆಗಿದೆ. ಈ ಕುರಿತ ವಿವರ ಇಲ್ಲಿದೆ

ಎಂಥವರ ಮನವನ್ನೂ ಕಲಕಿಬಿಡುವಂತಿರುವ ಉನ್ನಾವ್‌ ಮತ್ತು ಕಟುವಾ ಅತ್ಯಾಚಾರ ಪ್ರಕರಣಗಳ ಬಗ್ಗೆ ದೇಶದ ಎಲ್ಲ ಸಂವೇದನಾಶೀಲರು, ಪ್ರಜ್ಞಾವಂತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮನುಷ್ಯರು ತಲೆ ತಗ್ಗಿಸುವಂತಹ ಘಟನೆಗಳೆಂದು ಟೀಕೆ ವ್ಯಕ್ತವಾಗುತ್ತಿದೆ.

ಆದರೆ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದವರನ್ನು ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ, ಆರೋಪಿಗಳ ಪರವಾಗಿಯೇ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೇಯವೆನಿಸುವ ಈ ಬೆಳವಣಿಗೆಯನ್ನು ದೇಶವೇ ಖಂಡಿಸುತ್ತಿರುವಾಗ, ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದನ್ನು ಟೀಕಿಸಿ ಕ್ವಿಂಟ್‌ ಖಾಲಿ ಸುದ್ದಿಯೊಂದನ್ನು ಪ್ರಕಟಿಸಿದೆ.

"ಕಟುವಾ ಮತ್ತುಉನ್ನಾವ್‌ ಅತ್ಯಾಚಾರ ಪ್ರಕರಣಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದೇನು, ಇಲ್ಲಿದೆ ನೋಡಿ'' ಎಂಬ ಶೀರ್ಷಿಕೆಯೊಂದಿಗೆ ಒಂದು ಸುದ್ದಿ ಪ್ರಕಟಿಸಿದೆ.

ಈ ಶೀರ್ಷಿಕೆಯ ಅಡಿಯಲ್ಲಿ, '' ಪ್ರಧಾನಿ ನರೇಂದ್ರ ಮೋದಿಯವರು ಕಟುವಾ ಮತ್ತು ಉನ್ನಾವ್‌ ಅತ್ಯಾಚಾರ ಪ್ರಕರಣಗಳ ಬಗ್ಗೆ ಹೇಳಿಕೆ ನೀಡಿದಾಗ ಈ ವರದಿಯನ್ನು ಅಪ್‌ಡೇಟ್‌ ಮಾಡಲಾಗುವುದು'' ಎಂದಷ್ಟೇ ಹೇಳಿದೆ.

ಬ್ರೇಕಿಂಗ್‌ ನ್ಯೂಸ್‌ನಡಿ ‘ದಿ ವೈರ್‌’ ಪ್ರಕಟಿಸಿದ ಸುದ್ದಿಯ ಚಿತ್ರ

'ದಿ ಕ್ವಿಂಟ್‌' ಪ್ರಕಟಿಸಿದ ಈ ವಿಶೇಷ ಸುದ್ದಿಗೆ ಮೆಚ್ಚಿ ಧನ್ಯವಾದ ಸೂಚಿಸಿದ 'ದಿ ವೈರ್‌' ಕೂಡ ಬ್ರೇಕಿಂಗ್‌ ನ್ಯೂಸ್‌ನಡಿ ಈ ಸುದ್ದಿಯನ್ನು ಪ್ರಕಟಿಸಿದೆ. ಜೊತೆಗೆ, ''ಇತರ ಮಾಧ್ಯಮಗಳು ಈ ಸುದ್ದಿಯನ್ನು ಪ್ರಕಟಿಸಬೇಕು. ಹೀಗಾದರೂ ಈ ಸುದ್ದಿಯ ಬೆಳವಣಿಗೆಗಳನ್ನು ವರದಿ ಮಾಡಬಹುದು,'' ಎಂದು ಹೇಳಿದೆ.

ನಿನ್ನೆ ಮಧ್ಯರಾತ್ರಿ ದೆಹಲಿಯ ಇಂಡಿಯಾ ಗೇಟ್‌ನಲ್ಲಿ ಕಾಂಗ್ರೆಸ್‌ ನಾಯಕರು, ಸಾಮಾಜಿಕ ಕಾರ್ಯಕರ್ತರು, ನಿರ್ಭಯಾ ಪೋಷಕರು, ಸೇರಿದಂತೆ ಅನೇಕರು ನ್ಯಾಯಕ್ಕಾಗಿ ಪ್ರತಿಭಟಿಸಿದರು. ಸಾವಿರಾರು ಸಂಖ್ಯೆಯಲ್ಲಿ ಜನ ಕ್ಯಾಂಡಲ್‌ಲೈಟ್‌ ಹಿಡಿದು ಅಮಾನವೀಯ ಘಟನೆಯನ್ನು ವಿರೋಧಿಸಿದರು, ನ್ಯಾಯಕ್ಕಾಗಿ ಆಗ್ರಹಿಸಿದರು. ಇಡೀ ವಿದ್ಯಮಾನ ನಿರ್ಭಯಾ ಪ್ರಕರಣ ಖಂಡಿಸಿ ನಡೆದ ಪ್ರತಿಭಟನೆಯನ್ನು ನೆನಪಿಸುವಂತಿತ್ತು.

ಇದನ್ನೂ ಓದಿ : ಜಮ್ಮುವಿನಲ್ಲಿ ದ್ವೇಷಕ್ಕೆ ಬಲಿಯಾದ ಬಾಲಕಿ; ಅಸಲಿಗೆ ಅಲ್ಲಿ ನಡೆದದ್ದೇನು?

ಈ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ಮಗಳೊಂದಿಗೆ ಆಗಮಿಸಿದ್ದ ಪ್ರಿಯಾಂಕ ಗಾಂಧಿ ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ರಕ್ಷಣೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆಯೂ ಮೋದಿಯವರ ಮೌನ ಅಸಹಜವಾಗಿದ್ದು. ದಿ ಕ್ವಿಂಟ್‌ ಮತ್ತು ದಿ ವೈರ್‌ ಖಾಲಿ ಸುದ್ದಿ ಪ್ರಕಟಿಸುವ ಮೂಲಕ ಟೀಕಿಸಿವೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More