ಕಟುವಾ, ಉನ್ನಾವ್‌ ಘಟನೆ: ತಡವಾದರೂ ಪರಿಣಾಮಕಾರಿ ದಾರಿ ಹಿಡಿದ ರಾಹುಲ್ ನಡೆ

ದೇಶಕ್ಕೆ ದೇಶವೇ ಖಂಡಿಸಿ ಮಾತನಾಡುತ್ತಿದ್ದ ಎರಡು ಪ್ರಕರಣಗಳ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಏಕೆ ಇನ್ನೂ ಎಚ್ಚೆತ್ತುಕೊಂಡಿಲ್ಲ ಎಂಬ ಕುರಿತು ಸಾಕಷ್ಟು ಮಂದಿ ಅಚ್ಚರಿಪಟ್ಟಿದ್ದರು. ಆದರೆ ರಾಹುಲ್ ತೆಗೆದುಕೊಂಡ ಸರಳ ಮತ್ತು ಗಂಭೀರ ನಿಲುವು ಗಮನಾರ್ಹ

ಅಚ್ಚರಿಗಳನ್ನು ಹೊರಹಾಕುವುದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಪ್ರಸಕ್ತ ಪರಮಸಾಧನವಾಗಿದೆ. ಜಮ್ಮು ಮತ್ತು ಕಾಶ್ಮೀರದ ಕಟುವಾ ಜಿಲ್ಲೆಯಲ್ಲಿ ನಡೆದ 8 ವರ್ಷದ ಬಾಲೆ ಆಸಿಫಾ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಹಾಗೂ ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ನಡೆದ ಹದಿಹರೆಯದ ಹುಡುಗಿಯ ಮೇಲಿನ ಅತ್ಯಾಚಾರ ಮತ್ತು ಆಕೆಯ ತಂದೆ ಪೊಲೀಸ್ ಕಸ್ಟಡಿಯಲ್ಲಿ ನಿಗೂಢ ಸಾವನ್ನಪ್ಪಿರುವ ಪ್ರಕರಣಗಳನ್ನು ಖಂಡಿಸಿ ದೆಹಲಿಯಲ್ಲಿ ಏ.12ರ ಗುರುವಾರ ಮಧ್ಯರಾತ್ರಿ ಮೇಣದ ದೀಪಗಳ ಮೆರವಣಿಗೆ ಏರ್ಪಡಿಸಿದ್ದರಲ್ಲೇ ಅಚ್ಚರಿಯ ಅಂಶ ಸ್ಪಷ್ಟವಾಗಿ ಗೋಚರಿಸುತ್ತದೆ.

ಸುದ್ದಿವಾಹಿನಿಗಳಲ್ಲಿ, ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಇಡೀ ದಿನ ಈ ಘಟನೆಗಳ ಕುರಿತು ಸಾರ್ವಜನಿಕ ಆಕ್ರೋಶ ಮತ್ತು ಕ್ರೋಧದ ಪ್ರತಿಕ್ರಿಯೆಗಳು ಬಿರುಸಾಗಿದ್ದವು. ಈ ಎರಡೂ ಘಟನೆಗಳ ವಿವರಗಳು ಸಾರ್ವಜನಿಕ ವಲಯದಲ್ಲಿ ಹೊರಬರುತ್ತಿದ್ದಂತೆ, ಕೇಸರಿ ಪಕ್ಷ ಅಥವಾ ಹಿಂದೂ ಸಂಘಟನೆಗಳ ವ್ಯಕ್ತಿಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಈ ಎರಡೂ ಪ್ರಕರಣಗಳಲ್ಲಿ ಭಾಗಿಯಾಗಿರುವುದರಿಂದ ಭಾರತೀಯ ಜನತಾ ಪಕ್ಷವು ಆಕ್ರೋಶವನ್ನು ಎದುರಿಸಬೇಕಾಯಿತು. ಆದ್ದರಿಂದ ಬಿಜೆಪಿ ತನ್ನ ರಕ್ಷಿಸಿಕೊಳ್ಳಲು ಪ್ರಯತ್ನಿಸಿತು.

ಇಷ್ಟೆಲ್ಲ ನಡೆಯುತ್ತಿದ್ದರೂ ಆಶ್ಚರ್ಯವೆಂಬಂತೆ ಕಾಂಗ್ರೆಸ್ ನಾಯಕತ್ವವು ಮಾತ್ರ ಮೌನ ವಹಿಸಿತ್ತು. ಈ ಬೆಳವಣಿಗೆಯು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಏಕೆ ಇನ್ನೂ ಎಚ್ಚೆತ್ತುಕೊಂಡಿಲ್ಲ ಮತ್ತು ಈ ಎರಡೂ ಘಟನೆಗಳನ್ನು ಖಂಡಿಸಿ ಹೇಳಿಕೆ ಏಕೆ ನೀಡಿಲ್ಲ ಎಂಬ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಬಹುತೇಕರನ್ನು ಅಚ್ಚರಿಗೆ ದೂಡಿತು. ಸಂಜೆ 4.26ರ ವೇಳೆಗೆ ರಾಹುಲ್ ಗಾಂಧಿ ಕಟುವಾ ಘಟನೆ ಕುರಿತು ಟ್ವೀಟ್ ಮಾಡಿದರು. ಆದರೆ, ತನ್ನನ್ನು ತಾನು 2019ರ ಸಾರ್ವತ್ರಿಕ ಚುನಾವಣೆಯ ಗಂಭೀರ ಪ್ರತಿಸ್ಪರ್ಧಿ ಎಂಬುದಾಗಿ ಬಿಂಬಿಸಿಕೊಳ್ಳುತ್ತಿರುವ ವ್ಯಕ್ತಿಯಿಂದ ಇಷ್ಟು ನೀರಸ ಪ್ರತಿಕ್ರಿಯೆ ಸಾಕಾಗುವುದಿಲ್ಲ ಎಂಬುದಾಗಿ ಬಹುತೇಕ ಮಂದಿ ಭಾವಿಸಿದರು.

ವಾಸ್ತವವಾಗಿ, ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರ ಒಂದು ಕಾಲದ ಚುನಾವಣಾ ಏಜೆಂಟ್ ಮತ್ತು ಯುವ ಕಾಂಗ್ರೆಸ್ ಸದಸ್ಯ ಎಂದು ಹೇಳಲಾಗುವ ವ್ಯಕ್ತಿಯೊಬ್ಬ ಆಸೀಫಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವವರ ಪರ ಪ್ರತಿಭಟನೆ ನಡೆಸುತ್ತಿರುವ ಹಿಂದೂ ಗುಂಪಿನ ಭಾಗವಾಗಿರುವುದರಿಂದ ಕಾಂಗ್ರೆಸ್ ಪಕ್ಷವು ಪ್ರತಿಕ್ರಿಯಿಸಲು ಹಿಂಜರಿಯುತ್ತಿದೆ; ಹಾಗಾಗಿ ಎಲ್ಲಿ ತನಗೇ ತಿರುಗುಬಾಣವಾಗುವುದೋ ಎಂಬ ಎಚ್ಚರಿಕೆಯಿಂದ ಪಕ್ಷವು ಗಟ್ಟಿ ನಿಲುವು ತಳೆಯಲು ಹಿಂದೆಮುಂದೆ ನೋಡುತ್ತಿರಬಹುದು ಎಂಬ ಊಹೆಗಳಿಗೆ ರಾಹುಲ್ ಗಾಂಧಿಯವರ ನೀರಸ ಪ್ರತಿಕ್ರಿಯೆ ಎಡೆಮಾಡಿಕೊಟ್ಟಿತು.

ಆದಾಗ್ಯೂ, ಕಾಂಗ್ರೆಸ್‌ನ ಆಂತರಿಕ ವಲಯದ ಪ್ರಕಾರ, ರಾಷ್ಟ್ರವ್ಯಾಪಿ ಕಂಪನ ಎಬ್ಬಿಸಿರುವ ಈ ಪ್ರಕರಣಗಳ ಕುರಿತು ಪಕ್ಷವು ಸಕ್ರಿಯ ನಿಲುವು ತಳೆಯಬೇಕೆಂದು ರಾಹುಲ್ ತವಕಿಸುತ್ತಿದ್ದರು ಎನ್ನಲಾಗಿದೆ. ಅದೊಂದು ಲೋಪವೆಂದು ಉಪೇಕ್ಷಿಸಲಾಯಿತು. ಎಲ್ಲದಕ್ಕಿಂತ ಹೆಚ್ಚಿನದಾಗಿ, ಈಗ ಒಂದು ಅಮುಖ್ಯ ಹಿಂದೂ ಗುಂಪಿನ ಭಾಗವಾಗಿರುವ, ತಪ್ಪುದಾರಿ ಹಿಡಿದ ಚುನಾವಣಾ ಏಜೆಂಟ್ ಮತ್ತು ಯುವ ಮುಖಂಡನಿಂದ ಪಕ್ಷವು ಸುಲಭವಾಗಿ ಅಂತರ ಕಾಪಾಡಿಕೊಳ್ಳಬಹುದು ಎಂಬುದಾಗಿ ಪಕ್ಷವು ಭಾವಿಸಿತು. ಪ್ರಾಯಶಃ ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ರಾಹುಲ್, ಅಕ್ಬರ್ ರಸ್ತೆಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಿಂದ ಇಂಡಿಯಾ ಗೇಟ್‌ವರೆಗೆ ನಡೆದ ಮಧ್ಯರಾತ್ರಿಯ ಮೆರವಣಿಗೆಯಲ್ಲಿ ಗುಲಾಂ ನಬಿ ಆಜಾದ್ ಭಾಗವಹಿಸುವಂತೆ ನೋಡಿಕೊಂಡರು.

ಈ ಮೆರವಣಿಗೆ ಕುರಿತು ರಾತ್ರಿ 9.39ರ ವೇಳೆಗೆ ಟ್ವೀಟ್ ಮೂಲಕ ಪ್ರಕಟಿಸಲಾಯಿತು. “ಲಕ್ಷಾಂತರ ಭಾರತೀಯರ ಹಾಗೆಯೇ ಇಂದು ರಾತ್ರಿ ನನ್ನ ಹೃದಯವೂ ಘಾಸಿಗೊಂಡಿದೆ. ಈಗ ಮಹಿಳೆಯರನ್ನು ನಡೆಸಿಕೊಳ್ಳುತ್ತಿರುವಂತೆಯೇ ಭಾರತವು ಸುಮ್ಮನೆ ಮುಂದುವರಿಯಲು ಸಾಧ್ಯವಿಲ್ಲ. ಈ ಹಿಂಸೆಯನ್ನು ಪ್ರತಿಭಟಿಸಿ ಮತ್ತು ನ್ಯಾಯಕ್ಕಾಗಿ ಆಗ್ರಹಿಸಿ ಇಂದು ಮಧ್ಯರಾತ್ರಿ ಇಂಡಿಯಾ ಗೇಟ್ ಬಳಿ ಮೌನ, ಶಾಂತಿಯುತ ಮೇಣದ ದೀಪಗಳ ಜಾಗರಣೆಯಲ್ಲಿ ನನ್ನ ಜೊತೆಗೂಡಿ,” ಎಂದು ಸರಳವಾಗಿ ಕರೆ ನೀಡಲಾಗಿತ್ತು. ಒಂದು ಆಂದೋಲನಕ್ಕೆ ಸಾಂಕೇತಿಕ ಚಾಲನೆ ನೀಡುವುದು ಈ ಆಲೊಚನೆಯ ಉದ್ದೇಶವಾಗಿತ್ತು.

ಮೊದಲೇ ಊಹಿಸಬಹುದಾದಂತೆ ಈ ಟ್ವೀಟ್ ಕರೆಗೆ ಪ್ರತಿಕ್ರಿಯೆ ಬೃಹತ್ತಾಗಿಲ್ಲದಿದ್ದರೂ ಸಾಕಷ್ಟು ಉತ್ತೇಜನಕಾರಿಯಾಗಿತ್ತು. ರಾಹುಲ್ ಅವರ ಸಹೋದರಿ ಪ್ರಿಯಾಂಕ ಮತ್ತು ಅವರ ಪತಿ, ಅತ್ಯಾಚಾರ ಸಂತ್ರಸ್ತೆ ನಿರ್ಭಯಳ ತಾಯಿ, ಅಹ್ಮದ್ ಪಟೇಲ್, ಗುಲಾಂ ನಬಿ ಆಜಾದ್, ಅಂಬಿಕಾ ಸೋನಿ, ಅಶೋಕ್ ಗೆಹ್ಲೋಟ್ ಮತ್ತಿತರ ಹಿರಿಯ ಕಾಂಗ್ರೆಸ್ ನಾಯಕರು ಇಂಡಿಯಾ ಗೇಟ್ ಬಳಿ ಹಾಜರಿದ್ದುದು ಸಾಮಾನ್ಯವಾಗಿ ರಾತ್ರಿ ಊಟದ ನಂತರ ಹೊರಗಡೆ ಸುತ್ತಾಡಲು ಬರುವ ಕುತೂಹಲಕಾರಿ ಜನರ ಗುಂಪನ್ನು ಆಕರ್ಷಿಸಿತು. ಭಿತ್ತಿಪತ್ರಗಳನ್ನು ಹಿಡಿದಿದ್ದ ಯುವ ಕಾಂಗ್ರೆಸ್ ಸದಸ್ಯರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸಹಜವಾಗೇ ಮೆರವಣಿಗೆಯಲ್ಲಿನ ಜನರ ಸಂಖ್ಯೆಯನ್ನು ಹೆಚ್ಚಿಸಿದ್ದರು.

ಟಿವಿವಾಹಿನಿಗಳು ಮತ್ತು ಸುದ್ದಿಪತ್ರಿಕೆಗಳ ಗಮನ ಸೆಳೆದಿದ್ದ ಅರವಿಂದ ಕೇಜ್ರಿವಾಲ್ ಅವರ ಜನಪ್ರಿಯ ಮೇಣದ ದೀಪಗಳ ಜಾಗರಣೆಯನ್ನು ನೆನಪಿಸುವಂತಿತ್ತು ರಾಹುಲ್ ಅವರ ಈ ಮೆರವಣಿಗೆ. ಅಲ್ಲದೆ, ತಾನು ಟ್ವಿಟರ್-ಚುರುಕು ರಾಜಕಾರಣಿ ಮಾತ್ರವಲ್ಲ, ಬೀದಿಗಿಳಿದೂ ಹೋರಾಟ ಮಾಡಬಲ್ಲೆ ಎಂಬುದನ್ನು ಬಿಂಬಿಸಿಕೊಳ್ಳಲು ಬಯಸುವ ಸಕ್ರಿಯ ರಾಹುಲ್ ಗಾಂಧಿಯವರ ಹೊಸ ಮುಖವನ್ನೂ ಇದು ಪ್ರದರ್ಶಿಸಿತು. ಅಚ್ಚರಿಗಳು ಮತ್ತು ಸಂಕೇತಗಳ ಜೊತೆಗೆ, ಈ ಮಧ್ಯರಾತ್ರಿ ಜಾಗರಣೆಯು ಬಯಸಿದ ಪರಿಣಾಮವನ್ನು ಉಂಟುಮಾಡುವಲ್ಲಿ ಯಶಸ್ವಿಯಾಯಿತು. ಅಲ್ಲದೆ ಇದು ಪ್ರಕರಣ ಕುರಿತಾದ ಪಕ್ಷದ ನಿಲುವನ್ನು ಸುಸ್ಪಷ್ಟವಾಗಿ ಒತ್ತಿಹೇಳಿತು.

ಇದನ್ನೂ ಓದಿ : ಜಮ್ಮುವಿನಲ್ಲಿ ದ್ವೇಷಕ್ಕೆ ಬಲಿಯಾದ ಬಾಲಕಿ; ಅಸಲಿಗೆ ಅಲ್ಲಿ ನಡೆದದ್ದೇನು?

ರಾಹುಲ್ ಗಾಂಧಿ ಸರಿಯಾದ ಶಬ್ದಗಳನ್ನೇ ಪ್ರಯೋಗಿಸಿದರು. “ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧಗಳ ವಿರುದ್ಧ, ಅತ್ಯಾಚಾರಗಳ ವಿರುದ್ಧ, ಹಿಂಸೆ ಮತ್ತು ಕೊಲೆಯ ವಿರುದ್ಧ ಪ್ರತಿಭಟಿಸಲು ನಾವಿಲ್ಲಿ ಸೇರಿದ್ದೇವೆ. ಸರ್ಕಾರ ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದೊಂದು ರಾಷ್ಟ್ರೀಯ ವಿಷಯವೇ ಹೊರತು ರಾಜಕೀಯ ವಿಷಯವಲ್ಲ,” ಎಂದು ನುಡಿದರು. “ದೇಶದ ಹೆಣ್ಣುಮಕ್ಕಳು ಜೀವಬೆದರಿಕೆ ಎದುರಿಸುತ್ತಿರುವ ಸಮಯದಲ್ಲಿ ಮೋದಿ ಸರ್ಕಾರವು ನಿದ್ರಿಸುತ್ತಿದೆ,” ಎಂಬುದಾಗಿ ಗುಲಾಂ ನಬಿ ಆಜಾದ್ ತರಾಟೆಗೆ ತೆಗೆದುಕೊಂಡರು.

ಪೂರ್ವಾಲೋಕನ ಮಾಡಿದರೆ, ಈ ಮಧ್ಯರಾತ್ರಿಯ ಮೆರವಣಿಗೆಯು ಒಂದು ಯೋಜಿತ ನಡೆಯೇ ಹೊರತು ಬಿಜೆಪಿ ವಕ್ತಾರ ಅಲ್ಲಗಳೆದಂತೆ, ‘ಫ್ಯಾಷನ್ ಪರೇಡ್’ ಅಲ್ಲ. ಏತನ್ಮಧ್ಯೆ, ಕಟುವಾ ಮತ್ತು ಉನ್ನಾವ್ ಅತ್ಯಾಚಾರ ಪ್ರಕರಣಗಳ ವಿರುದ್ಧ ಎಲ್ಲ ರಾಜ್ಯಗಳ ರಾಜಧಾನಿಗಳಲ್ಲಿ ಶುಕ್ರವಾರ ಮೇಣದ ದೀಪಗಳ ಮೆರವಣಿಗೆ ನಡೆಸಲು ಪಕ್ಷದ ಸದಸ್ಯರಿಗೆ ಸೂಚಿಸುವ ಮೂಲಕ ರಾಹುಲ್ ಉತ್ತಮ ಕೆಲಸವನ್ನೇ ಮಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು ತಾನೇನು ಮಾಡುತ್ತಿದ್ದೇನೆ ಎಂಬುದರ ಬಗ್ಗೆ ಗಂಭೀರವಾಗಿದ್ದಾರೆ ಮತ್ತು ದೃಢವಾಗಿದ್ದಾರೆ ಎಂಬುದನ್ನು ಇದು ತೋರುತ್ತದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More