ಮುಂಬಡ್ತಿ ಮೀಸಲಾತಿ; ಶೇಕಡ ೧೮ರ ನೀತಿಯನ್ನೂ ಪಾಲಿಸದ ಇಲಾಖೆಗಳು

ಮುಂಬಡ್ತಿಯಲ್ಲಿನ ಮೀಸಲಾತಿ ಕುರಿತಂತೆ ಎದ್ದಿದ್ದ ಗೊಂದಲ ನಿವಾರಣೆಯಾಗಿದ್ದರೂ ಕೆಲ ಇಲಾಖೆಗಳು ಚಾಲ್ತಿಯಲ್ಲಿರುವ ನೀತಿಯನ್ನೇ ಪಾಲಿಸದೆ ಕೈಬಿಟ್ಟಿವೆ. ಅಂತಿಮಗೊಳಿಸಿರುವ ಜೇಷ್ಠತಾ ಪಟ್ಟಿಯಲ್ಲಿ ಹಲವು ಲೋಪಗಳು ಕಂಡುಬಂದಿವೆ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರ ಬಡ್ತಿ ಮೀಸಲಾತಿ ಕುರಿತಂತೆ ಬಿ.ಕೆ.ಪವಿತ್ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಅನುಷ್ಠಾನದಲ್ಲೂ ಕೆಲ ಇಲಾಖೆಗಳು ಲೋಪ ಎಸಗಿರುವುದು ತಿಳಿದು ಬಂದಿದೆ. ಹಾಲಿ ಚಾಲ್ತಿಯಲ್ಲಿರುವ ಶೇ.೧೫ ಮತ್ತು ಶೇ.೩ರ ಪ್ರಮಾಣದ ಮುಂಬಡ್ತಿ ಮೀಸಲಾತಿಯನ್ನು ಪರಿಗಣಿಸದೆಯೇ ಜೇಷ್ಠತಾ ಪಟ್ಟಿಯನ್ನು ಪರಿಷ್ಕರಿಸಿವೆ.

ಎಲ್ಲ ಇಲಾಖೆಗಳು ಅನುಸರಣಾ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ೨೦೧೮ರ ಏ.೧೬ರೊಳಗೆ ಸಲ್ಲಿಸಬೇಕಿದೆ. ಇಲಾಖೆಗಳು ಚಾಲ್ತಿಯಲ್ಲಿರುವ ಮೀಸಲಾತಿ ನೀತಿಯನ್ನು ಪರಿಗಣಿಸದೆಯೇ ಜೇಷ್ಠತಾ ಪಟ್ಟಿಯನ್ನು ಪರಿಷ್ಕರಿಸಿ ಅಂತಿಮಗೊಳಿಸಿರುವುದು ಕೆಲ ನೌಕರರು, ಅಧಿಕಾರಿಗಳಲ್ಲಿ ಆತಂಕಕ್ಕೆ ಕಾರಣವಾಗಿವೆ.

ಇಲಾಖೆಗಳ ಈ ಧೋರಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರು, ಅಂತಿಮಗೊಳಿಸಿರುವ ಜೇಷ್ಠತಾ ಪಟ್ಟಿಯಲ್ಲಿ ಕಂಡು ಬಂದಿರುವ ಲೋಪಗಳನ್ನು ಸರಿಪಡಿಸಿದ ನಂತರ ಜೇಷ್ಠತಾ ಪಟ್ಟಿಯನ್ನು ಪರಿಷ್ಕರಿಸಬೇಕು ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಎಲ್ಲಾ ಇಲಾಖೆ ಮುಖ್ಯಸ್ಥರು, ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಕುರಿತು ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು ೨೦೧೮ರ ಏಪ್ರಿಲ್೧೩ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಸ್ಟೇಟ್‌’ಗೆ ಲಭ್ಯವಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರ ಮುಂಬಡ್ತಿ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್‌೨೦೧೭ರ ಫೆ.೯ರಂದು ತೀರ್ಪು ನೀಡಿತ್ತು. ಈ ತೀರ್ಪನ್ನು ಅನುಷ್ಠಾನಗೊಳಿಸುವ ಸಂಬಂಧ ರಾಜ್ಯ ಸರ್ಕಾರ, ೨೦೧೭ರ ಮೇ.೬ರಂದು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಇದಾದ ನಂತರ ೨೦೧೮ರ ಮಾರ್ಚ್‌ ೨೭ರಂದು ಮುಖ್ಯ ಕಾರ್ಯದರ್ಶಿಗಳು ಎಲ್ಲಾ ಇಲಾಖೆಗಳಿಗೂ ಸುತ್ತೋಲೆ ಹೊರಡಿಸಿತ್ತು.

ಇದನ್ನೂ ಓದಿ : ಮುಂಬಡ್ತಿ ಮೀಸಲಾತಿ; ಶೇಕಡ ೧೮ರ ಪ್ರಮಾಣಕ್ಕೆ ಯಾವುದೇ ಧಕ್ಕೆ ಇಲ್ಲ

‘ಗ್ರೂಪ್‌-ಎ (ಕಿರಿಯ ಶ್ರೇಣಿ) ವೃಂದದವರಿಗೆ ಶೇ.೧೫ ಮತ್ತು ಶೇ.೩ರಷ್ಟು ಮುಂಬಡ್ತಿ ಮೀಸಲಾತಿ ಪ್ರಸ್ತುತವೂ ಮುಂದುವರೆಯಲಿದೆ’ ಎಂದು ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿತ್ತು. ಆದರೂ ಕೆಲ ಇಲಾಖೆಗಳು ಶೇ.೧೫ ಮತ್ತು ಶೇ.೩ರ ನೀತಿಯನ್ನು ಪಾಲಿಸದೇ ಜೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸಿದ್ದವು. ಇದನ್ನು ನೌಕರರು ಮತ್ತು ಅಧಿಕಾರಿ ಸಂಘಗಳು ಹಲವು ದೂರುಗಳನ್ನು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದವು.

ಈ ದೂರುಗಳ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಗಳು ಕಾನೂನು ಇಲಾಖೆ ಅಭಿಪ್ರಾಯ ಪಡೆದುಕೊಂಡಿದ್ದಾರೆ. “ ಜೇಷ್ಠತಾ ಪಟ್ಟಿಗಳನ್ನು ಒಮ್ಮೆ ಅಂತಿಮಗೊಳಿಸಿದ ನಂತರ ಸರ್ಕಾರ ಅಥವಾ ಸಕ್ಷಮ ಪ್ರಾಧಿಕಾರ ಅಂತಹ ಜೇಷ್ಠತಾ ಪಟ್ಟಿಯನ್ನು ಪರಿಷ್ಕರಿಸಲು ಅವಕಾಶವಿಲ್ಲ ಎಂಬುದು ಸಾಮಾನ್ಯ ತತ್ವವಾಗಿದೆ. ಆದರೂ ಕೆಎಟಿಯು ಮಾರನಬಾಸರಿ ಪ್ರಕರಣದಲ್ಲಿ ಸಾಮಾನ್ಯ ತತ್ವಕ್ಕೆ ನೀಡಿರುವ ಕೆಲವೊಂದು ಅಪವಾದಗಳ ಹಿನ್ನೆಲೆಯಲ್ಲಿ ಮೇಲ್ನೋಟಕ್ಕೆ ತಪ್ಪೆಂದು ಕಂಡುಬಂದಿರುವ ಪ್ರಕರಣಗಳಲ್ಲಿ ಅಂತಹ ತಪ್ಪುಗಳನ್ನು ಸರಿಪಡಿಸಲು ಈಗಾಗಲೇ ಅಂತಿಮಗೊಳಿಸಿರುವ ಜೇಷ್ಠತಾ ಪಟ್ಟಿಗಳನ್ನು ಪುನಃ ಪರಿಷ್ಕರಿಸಲು ಬಾಧಕವಿರುವುದಿಲ್ಲ,” ಎಂದು ಕಾನೂನು ಇಲಾಖೆ ೨೦೧೮ರ ಏ.೧೨ರಂದು ಅಭಿಪ್ರಾಯ ನೀಡಿದೆ. ಈ ಅಭಿಪ್ರಾಯದಂತೆ ಆಯಾ ಇಲಾಖೆಗಳು ಪರಿಷ್ಕರಿಸಿರುವ ಜೇಷ್ಠತಾ ಪಟ್ಟಿಗಳಲ್ಲಿ ಕಂಡು ಬಂದಿರುವ ಲೋಪಗಳನ್ನು ಸರಿಪಡಿಸಿದ ನಂತರ ಪುನಃ ಪರಿಷ್ಕರಿಸಬೇಕು ಎಂದು ಸೂಚಿಸಲಾಗಿದೆ.

೨೦೦೨ರ ಕಾಯ್ದೆ ಪ್ರಕಾರ, ಸೇವಾ ಹಿರಿತನ ಆಧಾರದ ಮೇಲೆ ಹೆಚ್ಚುವರಿಯಾಗಿ ಅಂದರೆ ಶೇ.೧೮ಕ್ಕೂ ಮೀರಿ ಬಡ್ತಿಯ ಜತೆಯಲ್ಲೇ ಹಿರಿತನವನ್ನೂ ಪಡೆದಿದ್ದ ಪರಿಶಿಷ್ಟ ಜಾತಿ, ಪ.ಪಂಗಡ ಅಧಿಕಾರಿ, ನೌಕರರಿಗಷ್ಟೇ ಈ ತೀರ್ಪು ಅನ್ವಯವಾಗಲಿದೆ. ಇದರಿಂದ ೧೯೭೮ರಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ಕುರಿತು ನಿಗದಿಪಡಿಸಿದ್ದ ಶೇ.೧೫ ಮತ್ತು ಶೇ.೩ ರ ಪ್ರಮಾಣದ ಮೀಸಲಾತಿಯೇ ಮುಂದುವರೆಯಲಿದೆ ಎಂದು ಸೂಚಿಸಲಾಗಿತ್ತು.

೨೦೦೨ರಲ್ಲಿ ಹೊಸ ಕಾಯ್ದೆಯೊಂದನ್ನು ರೂಪಿಸಿದ್ದ ಆಗಿನ ಸರ್ಕಾರ, ಕ್ಲಾಸ್ ೧ ಜ್ಯೂನಿಯರ್ ಮತ್ತು ತಹಶೀಲ್ದಾರ್‌ ಶ್ರೇಣಿಗೂ ಮೇಲ್ಪಟ್ಟ ಹುದ್ದೆಗಳಿಗೆ ‘ಸೇವಾ ಹಿರಿತನ’ ಆಧಾರದ ಮೇಲೆ ಮುಂಬಡ್ತಿಯಲ್ಲಿ ಮೀಸಲಾತಿ ಕೊಡುವ ಸಂಬಂಧ ಹೊಸ ಆದೇಶ ಹೊರಡಿಸಿತ್ತು.

ಚಿತ್ರ: ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ

ರಫೇಲ್ ಟ್ವಿಸ್ಟ್ | ಮೋದಿ ಸರ್ಕಾರದ ‘ರಿಲಯನ್ಸ್’ ಸೂಚನೆ ಕುರಿತು ಬಾಯಿಬಿಟ್ಟ ಹೊಲಾಂದ್
ಸಂಕಲನ | ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತ ವರದಿ-ವಿಶ್ಲೇಷಣೆಗಳು
ಸರಸಂಘಚಾಲಕ ಭಾಗವತ್‌ ಬೋಧಿಸಿದ ಹಿಂದುತ್ವದ ಹಿಂದಿನ ಅಸಲಿಯತ್ತೇನು?
Editor’s Pick More