ಎಲೆಕ್ಟೊರಲ್ ಬಾಂಡ್ ವಹಿವಾಟು; ವಿತ್ತ ಸಚಿವಾಲಯಕ್ಕೆ ನಿತ್ಯ ಎಸ್‌ಬಿಐ ಮಾಹಿತಿ?

ಎಲೆಕ್ಟೊರಲ್ ಬಾಂಡ್ ಮೇಲೆ ಗೌಪ್ಯವಾಗಿ ಆಲ್ಫಾನ್ಯೂಮರಿಕ್ ಸಂಖ್ಯೆಗಳನ್ನು ನಮೂದಿಸುತ್ತಿರುವುದು ಬಯಲಾಗಿದೆ. ಮತ್ತಷ್ಟು ಆತಂಕಕಾರಿ ಸಂಗತಿ ಎಂದರೆ, ‘ದಿ ಕ್ವಿಂಟ್’ ತನಿಖಾ ವರದಿ ಪ್ರಕಾರ, ಬಾಂಡ್ ಪಡೆದವರ ಮಾಹಿತಿಯನ್ನು ನಿತ್ಯವೂ ಹಣಕಾಸು ಇಲಾಖೆ ಎಸ್‌ಬಿಐನಿಂದ ಪಡೆದುಕೊಳ್ಳುತ್ತಿದೆ! 

ರಾಜಕೀಯ ಪಕ್ಷಗಳಿಗೆ ಕಾರ್ಪೊರೆಟ್ ಸಂಸ್ಥೆಗಳು, ಖಾಸಗಿ ವ್ಯಕ್ತಿಗಳು ಕಪ್ಪು ಹಣ ನೀಡುವುದನ್ನು ತಡೆಗಟ್ಟಲು ಮತ್ತು ಹೆಚ್ಚು ಪಾರದರ್ಶಕತೆ ತರಲು ಜಾರಿಗೆ ತಂದಿರುವ ‘ಎಲೆಕ್ಟೊರಲ್ ಬಾಂಡ್’ ಈಗ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ‘ಎಲೆಕ್ಟೊರಲ್ ಬಾಂಡ್’ನಲ್ಲಿ ಗೌಪ್ಯವಾಗಿ ಆಲ್ಫಾನ್ಯೂಮರಿಕ್ ಸಂಖ್ಯೆಗಳನ್ನು ನಮೂದಿಸಲಾಗುತ್ತಿದೆ ಎಂಬುದು ಈಗಾಗಲೇ ಬಹಿರಂಗವಾಗಿದೆ.

ಮತ್ತೊಂದು ಆಘಾತಕಾರಿ ಸಂಗತಿ ಎಂದರೆ, ಬಾಂಡ್ ಮೂಲಕ ದೇಣಿಗೆ ನೀಡುವವರ ಮೇಲೆ ವಿತ್ತ ಸಚಿವಾಲಯ ಸಂಪೂರ್ಣ ನಿಗಾ ಇಡುತ್ತಿದೆ. ‘ದಿ ಕ್ವಿಂಟ್’ ತನಿಖಾ ವರದಿ ಪ್ರಕಾರ, ಎಲೆಕ್ಟೊರಲ್ ಬಾಂಡ್ ವಿತರಣೆಯ ಸಂಪೂರ್ಣ ಮಾಹಿತಿಯನ್ನು ನಿತ್ಯವೂ ಎಸ್‌ಬಿಐ ವಿತ್ತ ಸಚಿವಾಲಯಕ್ಕೆ ರವಾನಿಸುತ್ತದೆ. ಅಂದಹಾಗೆ, ಎಸ್‌ಬಿಐ ಎಲೆಕ್ಟೊರಲ್ ಬಾಂಡ್ ವಿತರಿಸಲು ನಿಯೋಜಿತವಾಗಿರುವ ಏಕೈಕ ಬ್ಯಾಂಕ್ ಆಗಿದೆ.

ಎಸ್‌ಬಿಐನಿಂದ ಎಲೆಕ್ಟೊರಲ್ ಬಾಂಡ್ ಪಡೆಯುವುದು ಬಾಂಕಿನಲ್ಲಿ ಖಾತೆ ತೆರೆದಷ್ಟು ಸುಲಭವಲ್ಲ. ಖಾತೆ ತೆರೆಯಲು ಕೆವೈಸಿ (ನೋ ಯುವರ್ ಕಸ್ಟಮರ್) ದಾಖಲೆಗಳ ಪ್ರತಿ ನೀಡಿ ಸ್ವಯಂ ಘೋಷಣೆ ಮಾಡಿಕೊಂಡರೆ ಸಾಕು. ಆದರೆ, ಬಾಂಡ್ ಪಡೆಯಬೇಕಾದರೆ, ಎಲ್ಲ ದಾಖಲೆಗಳ ಮೂಲ ಪ್ರತಿಗಳನ್ನು ಬ್ಯಾಂಕಿಗೆ ಒದಗಿಸಬೇಕು.

ಅಂದರೆ, ಪಾನ್ ಕಾರ್ಡ್, ಮತದಾರರ ಗುರುತು ಪತ್ರ, ಆಧಾರ್ ಮತ್ತು ಪಾಸ್‌ಪೋರ್ಟ್ ಈ ಎಲ್ಲ ದಾಖಲೆಗಳ ನಕಲಿ ಪ್ರತಿಗಳ ಜೊತೆಗೆ ಮೂಲ ಪ್ರತಿಗಳನ್ನು ಬ್ಯಾಂಕ್ ಸಿಬ್ಬಂದಿಗೆ ಒದಗಿಸಬೇಕು. ಎಲ್ಲ ಮೂಲ ಪ್ರತಿಗಳನ್ನು ಪರಿಶೀಲಿಸಿದ ನಂತರವಷ್ಟೇ ಬಾಂಡ್ ನೀಡಲಾಗುತ್ತದೆ. ಇದು ಒಂದು ಹಂತದ ಪ್ರಕ್ರಿಯೆ.

ನೀವು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ನಿಯಮಾನುಸಾರ ಎಲ್ಲ ಮೂಲ ದಾಖಲೆಗಳನ್ನು ಬ್ಯಾಂಕ್ ಸಿಬ್ಬಂದಿಗೆ ತೋರಿಸಿ ಬಾಂಡ್ ಖರೀದಿಸುತ್ತೀರಿ. ಅಲ್ಲಿಗೆ ಎಲ್ಲವೂ ಮುಗಿಯುವುದಿಲ್ಲ. ನೀವು ಬಾಂಡ್ ಖರೀದಿಸಿದ ನಂಜೆಯೇ ನಿಮ್ಮ ಎಲ್ಲ ಮಾಹಿತಿಯೂ ವಿತ್ತ ಸಚಿವಾಲಯಕ್ಕೆ ರವಾನೆಯಾಗುತ್ತದೆ. ವಿತ್ತ ಸಚಿವಾಲಯಕ್ಕೆ ರವಾನೆಯಾದರೆ, ಅದು ತನ್ನ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಗಂಭೀರ ಆರ್ಥಿಕ ಅಪರಾಧಗಳ ಸಂಸ್ಥೆ (ಎಸ್ಎಫ್ಐಒ) ಜೊತೆಗೆ ಮಾಹಿತಿ ಹಂಚಿಕೊಳ್ಳುವುದಿಲ್ಲ ಎಂಬುದಕ್ಕೆ ಯಾವ ಖಾತರಿಯೂ ಇಲ್ಲ.

‘ದಿ ಕ್ವಿಂಟ್’ ತನಿಖಾ ವರದಿ ಪ್ರಕಾರ, ಬಾಂಡ್ ಖರೀದಿಗೆ ಮಾಡುವ ಮುನ್ನ ಎಲ್ಲ ದಾಖಲೆಗಳ ಮೂಲ ಪ್ರತಿಯನ್ನು ಪರಿಶೀಲನೆಗೆ ಒಳಪಡಿಸಲು ವಿತ್ತ ಸಚಿವಾಲಯವೇ ಸೂಚಿಸಿದೆ. ಎಸ್‌ಬಿಐ ಎಲೆಕ್ಟೊರಲ್ ಬಾಂಡ್ ವಿತರಿಸುವ ಏಕೈಕ ಬ್ಯಾಂಕ್ ಅಗಿದ್ದು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ಮೇಲ್ನೋಟಕ್ಕಷ್ಟೇ ಕಾಣುತ್ತದೆ. ಆದರೆ, ಬಾಂಡ್ ವಿತರಣೆಯಲ್ಲಿ ಯಾವುದೇ ಸ್ವಾತಂತ್ರ್ಯ ಎಸ್‌ಬಿಐಗೆ ಇಲ್ಲ. ಎಲ್ಲವನ್ನೂ ವಿತ್ತ ಸಚಿವಾಲಯದ ಅಣತಿಯಂತೆ ಚಾಚೂ ತಪ್ಪದೆ ಪಾಲಿಸುತ್ತದೆ.

ಎಸ್‌ಬಿಐ ಹಿರಿಯ ಅಧಿಕಾರಿಗಳು ಬಾಂಡ್ ಮೇಲೆ ಗೌಪ್ಯ ಸಂಖ್ಯೆ ಇರುವುದನ್ನು ಒಪ್ಪಿಕೊಳ್ಳುತ್ತಾರೆ. ಆದರೆ, ಸರ್ಕಾರದ ಯಾವುದೇ ಏಜೆನ್ಸಿ ಅಥವಾ ಇಲಾಖೆಯೊಂದಿಗೆ ಮಾಹಿತಿ ಹಂಚಿಕೊಳ್ಳುವುದಿಲ್ಲ ಎನ್ನುತ್ತಾರೆ. ನಿತ್ಯವೂ ಸೂಚನೆಗಳನ್ನು ಪಡೆದು ಕಾರ್ಯನಿರ್ವಹಿಸುವ ಎಸ್‌ಬಿಐ ಸರ್ಕಾರದ ಜೊತೆಗೆ ಮಾಹಿತಿ ಹಂಚಿಕೊಳ್ಳುವುದಿಲ್ಲ ಎಂದರೆ ಅದನ್ನು ನಂಬುವುದಾದರೂ ಹೇಗೆ?

ಗೌಪ್ಯ ಸಂಖ್ಯೆ ಇರುವುದನ್ನು ಒಪ್ಪಿಕೊಳ್ಳುವ ಅಧಿಕಾರಿಗಳು, ಅದನ್ನು ಬಾಂಡ್ ಖರೀದಿ ಮಾಡುವವರಿಗೆ ಮಾಹಿತಿ ನೀಡುವುದಿಲ್ಲ ಏಕೆ? “ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವವವರ ಗೌಪ್ಯತೆ ಕಾಪಾಡಲಾಗುತ್ತದೆ, ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ನೀಡಲಾಗಿದೆ ಎಂಬುದು ನೀಡಿದವರ ಹೊರತಾಗಿ ಬೇರಾರಿಗೂ ಗೊತ್ತಾಗುವುದಿಲ್ಲ, ಆಮಟ್ಟಿನ ಗೌಪ್ಯತೆ ಕಾಪಾಡಲಾಗುತ್ತದೆ,” ಎಂಬ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಮಾತುಗಳ ಮೇಲೆ ವಿಶ್ವಾಸವಿಡುವದಾದರೂ ಹೇಗೆ?

ಇದನ್ನೂ ಓದಿ : ‘ಎಲೆಕ್ಟೊರಲ್ ಬಾಂಡ್’ ಮೂಲಕ ದೇಣಿಗೆ ಕೊಟ್ಟವರ ಮೇಲೆ ಕೇಂದ್ರ ಸರ್ಕಾರದ ನಿಗಾ!

ಪಾರದರ್ಶಕತೆ ಕಾಪಾಡಲು ಜಾರಿಗೆ ತಂದ ಮೇಲೆ ಸರ್ಕಾರ ಗೌಪ್ಯಸಂಖ್ಯೆಯ ಮೂಲಕ ನಿಗಾ ಇಡುವ ಅಗತ್ಯವಾದರೂ ಏನು? ದೇಣಿಗೆದಾರರ ಅರಿವಿಗೆ ಬಾರದಂತೆ ಮಾಹಿತಿ ಸಂಗ್ರಹಿಸುವುದು ಕಾನೂನುಬಾಹಿರ ಅಲ್ಲವೇ? ‘ದಿ ಕ್ವಿಂಟ್’ ಈ ಪ್ರಶ್ನೆಗಳನ್ನು ವಿತ್ತ ಸಚಿವಾಲಯಕ್ಕೆ ಮತ್ತು ಎಸ್‌ಬಿಐಗೆ ಲಿಖಿತ ರೂಪದಲ್ಲಿ ಕೇಳಿದೆ. ಆದರೆ, ವಿತ್ತ ಸಚಿವಾಲಯವಾಗಲೀ, ಎಸ್‌ಬಿಐ ಆಗಲೀ ಇನ್ನೂ ಉತ್ತರಿಸಿಲ್ಲ.

ಎಲೆಕ್ಟೊರಲ್ ಬಾಂಡ್ ಖರೀದಿ ಮಾಡಿದ್ದ ‘ದಿ ಕ್ವಿಂಟ್’ ಅವುಗಳ್ನು ದೇಶದ ಪ್ರತಿಷ್ಠಿತ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿತ್ತು. ಪರೀಕ್ಷಿಸುವ ವೇಳೆ ಅತಿನೇರಳೆ (ಅಲ್ಟ್ರಾವಾಯ್ಲೆಟ್) ಬೆಳಕಿನಲ್ಲಿ ಬಾಂಡ್ ಮೇಲ್ತುದಿಯಲ್ಲಿ ಆಲ್ಫಾನ್ಯೂಮರಿಕ್ ಸಂಖ್ಯೆಗಳು ಮುದ್ರಿತವಾಗಿರುವುದು ಪತ್ತೆಯಾಗಿತ್ತು. ಅದುವರೆಗೂ ರಾಜಕೀಯ ಪಕ್ಷಗಳೂ ಸೇರಿದಂತೆ ಯಾರಿಗೂ ಗೌಪ್ಯ ಸಂಖ್ಯೆಗಳಿರುವುದು ಗೊತ್ತಿರಲಿಲ್ಲ!

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More