ಎರಡು ಕ್ಷೇತ್ರದಲ್ಲಿ ಸಿಎಂ ಸ್ಪರ್ಧೆ ವಿಚಾರ; ನಿರ್ಧಾರ ವಿಳಂಬದಿಂದ ವರ್ಚಸ್ಸಿಗೆ ಧಕ್ಕೆ?

ಸಿಎಂ ಸಿದ್ದರಾಮಯ್ಯನವರು ಎರಡು ವಿಧಾನಸಭಾ ಕ್ಷೇತ್ರಗಳಿಂದ ಚುನಾವಣೆ ಎದುರಿಸುವ ನಿರ್ಧಾರ ಮೊದಲೇ ಕೈಗೊಂಡಿದ್ದರೆ, ಅದು ಅವರ ಹಾಗೂ ಪಕ್ಷದ ವರ್ಚಸ್ಸಿಗೆ ಪೂರಕವಾಗಿಯೇ ಕೆಲಸ ಮಾಡುತ್ತಿತ್ತು. ಆದರೆ, ಈ ನಿರ್ಧಾರದಲ್ಲಿ ಮಾಡಿದ ವಿಳಂಬವೀಗ ಅವರೆಡೆಗೆ ಕುಹಕದ ಮಾತುಗಳಿಗೆ ಆಸ್ಪದ ಕಲ್ಪಿಸಿದೆ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ವೇದಿಕೆ ಅಣಿಯಾಗಿರುವ ಸಂದೇಶವನ್ನು ರವಾನಿಸುವ ರಾಜಕೀಯವ ಬೆಳವಣಿಗೆಗಳು ರಾಜ್ಯದಲ್ಲೀಗ ನಡೆಯುತ್ತಿವೆ. ಇದಕ್ಕೆ ಪೂರಕವಾಗಿ ಬಾದಾಮಿಯ ಹಾಲಿ ಶಾಸಕ ಬಿ ಬಿ ಚಿಮ್ಮನಕಟ್ಟಿಯವರೂ ಸಮ್ಮತಿಸಿರುವ ಮಾತುಗಳು ಹೊರಬಿದ್ದಿವೆ.

ಮುಖ್ಯಮಂತ್ರಿಯವರು ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿ ಒಂದೆರೆಡು ತಿಂಗಳ ಹಿಂದಿನಿಂದಲೇ ಮಾಧ್ಯಮಗಳಲ್ಲಿ ಹರಿದಾಡತೊಡಗಿತ್ತು. ದಕ್ಷಿಣ ಕರ್ನಾಟಕದಲ್ಲಿ ತಮ್ಮ ತವರು ಜಿಲ್ಲೆ ಮೈಸೂರಿನ ಚಾಮುಂಡೇಶ್ವರಿಯಲ್ಲಿ ಕಣಕ್ಕಿಳಿದರೆ, ಉತ್ತರ ಕರ್ನಾಟಕದಲ್ಲಿ ಬಾದಾಮಿ ಅಥವಾ ಕೊಪ್ಪಳ ಕ್ಷೇತ್ರಗಳಲ್ಲಿ ಚುನಾವಣೆಗೆ ನಿಲ್ಲಬಹುದು ಎನ್ನುವ ಊಹಾಪೋಹಗಳು ಕೇಳಿಬರತೊಡಗಿದ್ದವು. ಆದರೆ, ಇದೆಲ್ಲಕ್ಕೂ ತೆರೆ ಎಳೆಯುವಂತೆ ಸ್ವತಃ ಸಿದ್ದರಾಮಯ್ಯನವರೇ, ತಾವು ಚಾಮುಂಡೇಶ್ವರಿಯಿಂದ ಮಾತ್ರವೇ ಚುನಾವಣೆ ಎದುರಿಸುವುದಾಗಿಯೂ, ಇದುವೇ ತಮ್ಮ ಕೊನೆಯ ಚುನಾವಣೆ ಎಂದೂ ಘೋಷಿಸಿದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಂದು ಸುತ್ತಿನ ಪ್ರಚಾರವನ್ನೂ ಕೈಗೊಂಡರು. ಇದಾದ ಮೇಲೆ ಮತ್ತೆ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ವಿಚಾರ ಚಾಲ್ತಿಗೆ ಬಂದಿತು. ಈಗಿನ ಸುದ್ದಿಗಳು ಬಾಗಲಕೋಟೆಯ ಬಾದಾಮಿಯಿಂದ ಮುಖ್ಯಮಂತ್ರಿಯವರು ಕಣಕ್ಕಿಳಿಯುವುದನ್ನು ಬಹುತೇಕ ಖಚಿತವಾಗಿಸಿದ್ದು, ನಾಟಕೀಯ ತಿರುವುಗಳೇನೂ ಸಂಭವಿಸದೆ ಇದ್ದಲ್ಲಿ ಸದ್ಯದಲ್ಲೇ ಅಧಿಕೃತವಾಗಿಯೇ ಘೋಷಣೆಯಾಗುವ ಸಂಭವ ಹೆಚ್ಚಿದೆ. ವಿಪರ್ಯಾಸವೆಂದರೆ, ರಾಜ್ಯ ಕಾಂಗ್ರೆಸ್‌ ಮಟ್ಟಿಗೆ ಇದೇನೂ ಹುರುಪು ತುಂಬುವಂಥ ವಿಚಾರವಾಗಿ ಕಾಣಿಸುತ್ತಿಲ್ಲ. ಮತ್ತೊಂದೆಡೆ, ವಿಪಕ್ಷಗಳ ಪಾಲಿಗೆ ಇದು ಕೊಂಚ ಉತ್ಸಾಹ ತುಂಬುವ ಬೆಳವಣಿಗೆಯಾಗಿ ತೋರಿದೆ.

ಹೀಗೇಕೆ ಎಂದು ಕಾರಣ ಹುಡುಕಹೊರಟರೆ, ಮುಖ್ಯಮಂತ್ರಿಯವರು ಸೂಕ್ತ ಸಮಯದಲ್ಲಿ ಈ ನಿರ್ಧಾರವನ್ನು ಕೈಗೊಳ್ಳುವಲ್ಲಿ ಎಡವಿರುವುದು ಗೋಚರಿಸುತ್ತಿದೆ. ದಕ್ಷಿಣ ಹಾಗೂ ಉತ್ತರ ಕರ್ನಾಟಕದಿಂದ ತಲಾ ಒಂದೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ನಿರ್ಧಾರವನ್ನು ಕನಿಷ್ಠ ಹದಿನೈದು-ಇಪ್ಪತ್ತು ದಿನಗಳ ಹಿಂದೆ ಅವರು ಕೈಗೊಂಡಿದ್ದರೆ ಬೇರೆಯದೇ ಆದ ಸಂದೇಶ ರವಾನೆಯಾಗುತ್ತಿತ್ತು. ಅದರಲ್ಲಿಯೂ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ‌ ಅವರ ಮುಂಬೈ ಕರ್ನಾಟಕ ಜನಾಶೀರ್ವಾದ ಯಾತ್ರೆಯ ಸಂದರ್ಭದಲ್ಲಿ ಇಂತಹ ಒಂದು ಸೂಚನೆಯನ್ನು ಪಕ್ಷದ ವರಿಷ್ಠರು ಸೂಚ್ಯವಾಗಿ ರವಾನಿಸಿದ್ದರೆ ಆಗ ಅದು ಉಂಟುಮಾಡುತ್ತಿದ್ದ ಪರಿಣಾಮವೇ ಬೇರೆಯಾಗಿರುತ್ತಿತ್ತು. ವಿಶೇಷವಾಗಿ, ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಇದು ರಾಹುಲ್‌ ಭೇಟಿಯ ಹುರುಪನ್ನು ದ್ವಿಗುಣಗೊಳಿಸುವ ಸಾಧ್ಯತೆಯೂ ಇತ್ತು. ಅದಕ್ಕೆ ಕಾರಣಗಳೂ ಇದ್ದವು. ಮೊದಲನೆಯದು, ಮುಖ್ಯಮಂತ್ರಿಯವರು ‘ಸವಲತ್ತು ವಿತರಣೆಯ ಸಮಾವೇಶ’ಗಳನ್ನು ಕೆಲ ತಿಂಗಳ ಹಿಂದಷ್ಟೇ ಈ ಭಾಗದಲ್ಲಿ ನಡೆಸಿದಾಗ ಹಾಗೂ ಆನಂತರ ನವಕರ್ನಾಟಕ ನಿರ್ಮಾಣದ ಸಮಾವೇಶಗಳನ್ನು ನಡೆಸಿದಾಗ ಅವರಿಗೆ ದೊಡ್ಡಮಟ್ಟದ ಜನಸ್ಪಂದನ ಇಲ್ಲಿಂದ ದೊರೆತಿತ್ತು. ದಕ್ಷಿಣ ಕರ್ನಾಟಕಕ್ಕಿಂತ ಹೆಚ್ಚಾಗಿ ಉತ್ತರ ಕರ್ನಾಟಕದ ಭಾಗಗಳಲ್ಲಿ ಮುಖ್ಯಮಂತ್ರಿಯವರೆಡೆಗೆ ಜನರಲ್ಲಿ ವಿಶೇಷ ಅಭಿಮಾನ ಇರುವುದನ್ನು ಅವರ ವಿರೋಧಿಗಳೂ ಗುರುತಿಸಿದ್ದರು. ಸಹಜವಾಗಿಯೇ, ಆ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ತಾವು ಉತ್ತರ ಕರ್ನಾಟಕದಿಂದಲೂ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಇಂಗಿತವನ್ನು ಸೂಚ್ಯವಾಗಿ ವ್ಯಕ್ತಪಡಿಸಿದ್ದರೆ ಆಗ ಅದು ರಾಜಕೀಯ ಅಲೆಯೊಂದನ್ನು ಸೃಷ್ಟಿಸುವ ನಡೆ ಎಂದು ವ್ಯಾಖ್ಯಾನಿಸಲ್ಪಡುತ್ತಿತ್ತು. ಉತ್ತರ ಕರ್ನಾಟಕದಲ್ಲಿ ಅತಿಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ಕಾರ್ಯತಂತ್ರದ ಭಾಗವಾಗಿ ಮುಖ್ಯಮಂತ್ರಿಯವರು ಇಲ್ಲಿಂದ ಸ್ಪರ್ಧಿಸಲಿದ್ದಾರೆ ಎಂದು ಚರ್ಚೆಯಾಗುತ್ತಿತ್ತು. ಅದಾಗಲೇ ಮೂಲೆಗೊತ್ತರಿಸಿದಂತಿದ್ದ ವಿರೋಧಿಗಳ ಮೇಲೆ ಇದು ಮತ್ತಷ್ಟು ಒತ್ತಡ ಸೃಷ್ಟಿಸುತ್ತಿತ್ತು.

ಆದರೆ, ಈಗ ಸಿದ್ದರಾಮಯ್ಯನವರು ಚಾಮುಂಡೇಶ್ವರಿಯಲ್ಲಿ ಮಾತ್ರವೇ ಅಲ್ಲದೆ ಮತ್ತೊಂದು ಕ್ಷೇತ್ರದಲ್ಲಿಯೂ ಸ್ಪರ್ಧಿಸಲು ಮುಂದಾಗಿರುವುದು ಬೇರೆಯದೇ ಆದ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗುತ್ತಿದೆ. ಸಿದ್ದರಾಮಯ್ಯನವರ ಈ ನಿರ್ಧಾರ ಸೋಲಿನ ಭೀತಿಯಿಂದ ಕೈಗೊಂಡ ರಕ್ಷಣಾತ್ಮಕ ನಡೆ ಎನ್ನುವ ವ್ಯಾಖ್ಯಾನಗಳು ಸುದ್ದಿ ಅಧಿಕೃತವಾಗಿ ಘೋಷಣೆಯಾಗುವುದಕ್ಕೂ ಮುನ್ನವೇ ಶುರುವಾಗಿವೆ. ತಾವು ನಿಲ್ಲುವ ಕ್ಷೇತ್ರದಲ್ಲಿಯೇ ತಮ್ಮ ವರ್ಚಸ್ಸಿನ ಬಗ್ಗೆ ಅನುಮಾನ ಹೊಂದಿರುವ ಮುಖ್ಯಮಂತ್ರಿಯವರು ಮರಳಿ ತಾವೇ ರಾಜ್ಯದಲ್ಲಿ ಅಧಿಕಾರ ಹಿಡಿಯುವುದಾಗಿ ಹೇಳುತ್ತಿರುವುದು, ಮುಖ್ಯಮಂತ್ರಿಯಾಗುವುದಾಗಿ ಘೋಷಿಸುತ್ತಿರುವುದು ಪೊಳ್ಳು ವಿಶ್ವಾಸದ ಮಾತುಗಳಲ್ಲವೇ ಎನ್ನುವ ಟೀಕೆಗಳು ಮುಂದಿನ ದಿನಗಳಲ್ಲಿ ಎದುರಾಗುವ ಸಾಧ್ಯತೆ ಇದ್ದೇ ಇದೆ.

ಈ ವಿಳಂಬಿತ ನಿರ್ಧಾರ ಪಕ್ಷದ ಆಂತರಿಕ ವಲಯದಲ್ಲಿಯೂ ಕೊಂಕುಮಾತುಗಳಿಗೆ ಕಾರಣವಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯವರ ಜನಪ್ರಿಯತೆಯ ಬಗ್ಗೆಯೂ ಕೊಂಕು ಕೇಳಿಬರಲು ಶುರುವಾಗಬಹುದು. ಉಪಚುನಾವಣೆಗಳ ಗೆಲುವಿನ ನಂತರ ಪಕ್ಷದೊಳಗೆ ಮೂಡಿದ್ದ ಸಿದ್ದರಾಮಯ್ಯನವರ ಪ್ರಶ್ನಾತೀತ ವರ್ಚಸ್ಸಿನ ಬಗ್ಗೆ ಭಿನ್ನ ಮಾತುಗಳಿಗೆ ಇದು ಕಾರಣವಾಗಬಹುದು. ಬಹುಮುಖ್ಯವಾಗಿ, ರಾಜ್ಯದ ಮತದಾರರಿಗೆ ಮುಖ್ಯಮಂತ್ರಿಯವರು ತೋರುತ್ತಿರುವ ಆತ್ಮವಿಶ್ವಾಸ ಬೇರೆ ಪಕ್ಷದ ನಾಯಕರುಗಳು ತೋರಿಸುತ್ತಿರುವ ಆತ್ಮವಿಶ್ವಾಸಕ್ಕಿಂತ ಭಿನ್ನವೇನೂ ಅಲ್ಲ ಎನಿಸಲು ಆರಂಭವಾಗಬಹುದು. ರಾಜ್ಯದಲ್ಲಿ ಕಾಂಗ್ರೆಸ್‌ ಸುತ್ತ ಈವರೆಗೆ ಆವರಿಸಿದ್ದ ಒಂದು ‘ಸಕಾರಾತ್ಮಕ ಭಾವನೆ’ಯ ಮೇಲೆ ಈ ಬೆಳವಣಿಗೆ ಪರಿಣಾಮ ಬೀರುವುದನ್ನು ಅಲ್ಲಗಳೆಯಲಾಗದು, ಪಕ್ಷದ ವರ್ಚಸ್ಸಿಗೆ ಕೊಂಚ ಹಿನ್ನಡೆ ಉಂಟುಮಾಡುವುದನ್ನು ಕೂಡ. ಮುಂದಿನ ದಿನಗಳಲ್ಲಿ ಪಕ್ಷದ ಪ್ರಮುಖ ಮುಖಂಡರು, "ನಾವೇನೂ ಸೋಲಿಗೆ ಅಂಜಿ ಸುರಕ್ಷಿತ ಕ್ಷೇತ್ರದ ಹುಡುಕಾಟ ಅರಸಿ ಹೋಗಲಿಲ್ಲ. ಬದಲಿಗೆ, ನಮ್ಮ ಕ್ಷೇತ್ರಗಳಲ್ಲಿಯೇ ಸ್ಪರ್ಧೆ ಎದುರಿಸಿ ಗೆದ್ದು ಬಂದಿದ್ದೇವೆ," ಎನ್ನುವ ಮಾತುಗಳನ್ನು ಹೇಳತೊಡಗಬಹುದು. ಇದು ಹೊಸದೊಂದು ತಲೆನೋವಿಗೆ ಕಾರಣವಾಗಲಿಕ್ಕೂ ಸಾಕು. ಕಾರ್ಯಕರ್ತರಿಗೂ ಮುಖ್ಯಮಂತ್ರಿಗಳ ಈ ನಿರ್ಧಾರವನ್ನು ಈ ಹಂತದಲ್ಲಿ ಸಮರ್ಥಿಸುವುದು ಕಷ್ಟವಾಗಬಹುದು. ತಮ್ಮ ನಾಯಕನಿಗೆ ಸೋಲಿನ ಆತಂಕ ಕಾಡಿತೇ ಎನ್ನುವ ಭಾವನೆ ಮೂಡಬಹುದು.

ಇದನ್ನೂ ಓದಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಾದಾಮಿ ಬಯಕೆ ನಿಜವೋ, ಸುಳ್ಳೋ?

ವಿಪರ್ಯಾಸವೆಂದರೆ, ಈ ಎಲ್ಲ ಸಮಸ್ಯೆಗಳ ಮೂಲದಲ್ಲಿ ‘ಅಪ್ಪ-ಮಕ್ಕಳ’ ಟಿಕೆಟ್‌ ವಿಚಾರಗಳಿರುವುದು. ಒಂದೊಮ್ಮೆ ಮುಖ್ಯಮಂತ್ರಿಯವರು ತಮ್ಮ ಮಗನಿಗೆ ವಿಧಾನಸಭಾ ಚುನಾವಣೆಗೆ ಟಿಕೆಟ್‌ ಬೇಡ ಎಂದು ಹೇಳಿದ್ದಿದ್ದರೆ ಪಕ್ಷದಲ್ಲಿ ಈ ಚುನಾವಣೆ ಹೊಸದೊಂದು ಮಾದರಿಗೆ ಕಾರಣವಾಗುತ್ತಿತ್ತು. ಅಲ್ಲದೆ, ತಮಗೆ ಆತ್ಮವಿಶ್ವಾಸವಿರುವ ವರುಣ ಹಾಗೂ ಬಾದಾಮಿ ಎರಡೂ ಕ್ಷೇತ್ರಗಳಲ್ಲಿ ಭರ್ಜರಿಯಾಗಿ ಗೆಲ್ಲುವ ಮೂಲಕ ತಮ್ಮ ಜನಪ್ರಿಯತೆಯ ಬಗ್ಗೆ ಎರಡು ಮಾತಿಲ್ಲ ಎನ್ನುವುದನ್ನು ಹೈಕಮಾಂಡ್‌ ಹಾಗೂ ವಾರಿಗೆಯ ನಾಯಕರಿಗೆ ನಿರೂಪಿಸಬಹುದಿತ್ತು.

ಇತ್ತೀಚಿನ ದಿನಗಳಲ್ಲಿ ರಾಜಕೀಯ ಚಾಣಾಕ್ಷತೆಯನ್ನು ಮತ್ತೆ ಮತ್ತೆ ಮೆರೆಯುತ್ತಿದ್ದ ಮುಖ್ಯಮಂತ್ರಿಯವರು, ಸದ್ಯದ ಸ್ಥಿತಿಯಲ್ಲಿ ತಾವಾಗಿಯೇ ಕೆಂಡವನ್ನು ಹಾಯುವ ಪರಿಸ್ಥಿತಿಯನ್ನು ನಿರ್ಮಿಸಿಕೊಂಡರೇ?

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More