ಕಟುವಾ, ಉನ್ನಾವ್ ಪ್ರಕರಣ; ‘ಸಂಸ್ಕೃತಿ’ ವಕ್ತಾರರ ಗಂಟಲಿಗೆ ಅಡ್ಡ ಬಂದಿದ್ದೇನು?

ಕಟುವಾ ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಹಾಗೂ ಉನ್ನಾವ್ ಯುವತಿ ಮೇಲಿನ ಅತ್ಯಾಚಾರ ಮತ್ತು ಆಕೆಯ ತಂದೆಯ ಸಾವು ಪ್ರಕರಣಗಳು ಇಡೀ ದೇಶವನ್ನೇ ತಲೆ ತಗ್ಗಿಸುವಂತೆ ಮಾಡಿವೆ. ಆದರೆ, ಭಾರತೀಯ ಸಂಸ್ಕೃತಿ ಬಗ್ಗೆ ಭಾಷಣ ಬಿಗಿಯುವವರು ಬಾಯಿಗೆ ಬೀಗ ಹಾಕಿಕೊಂಡಿದ್ದೇಕೆ?

‘ಬೇಟಿ ಬಚಾವೋ, ಬೇಟಿ ಪಡಾವೋ’ ಎಂಬ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಪ್ರಮುಖ ಘೋಷಣೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ, ಕುಹಕಕ್ಕೆ ಗುರಿಯಾಗಿದೆ. ‘ಅದು ನಿಜವಾಗಿಯೂ ಘೋಷಣೆಯಲ್ಲ, ಎಚ್ಚರಿಕೆಯ ಮಾತು’ ಎಂದು ಪ್ರಧಾನಿಯೇ ತನ್ನ ಸಂಪುಟದ ಮಹಿಳಾ ಸಹೋದ್ಯೋಗಿ ಸುಷ್ಮಾ ಸ್ವರಾಜ್‌ ಅವರಿಗೆ ಹೇಳುವ ಧಾಟಿಯ ಬರಹಗಳು ಟ್ರೋಲ್ ಆದವು.

ಸರ್ಕಾರದ ಘನ ಉದ್ದೇಶದ ಒಂದು ಘೋಷಣೆ ಹೀಗೆ ಸಾರ್ವಜನಿಕವಾಗಿ ಕಟು ವ್ಯಂಗ್ಯ ಮತ್ತು ಅಪಹಾಸ್ಯಕ್ಕೆ ಈಡಾಗಲು ಕಾರಣ; ಅದೇ ಆಡಳಿತಾರೂಢ ಪಕ್ಷದ ನಾಯಕರು ಮತ್ತು ಪರಿವಾರದ ಸಂಘಟನೆಗಳು ಎರಡು ಅಮಾನವೀಯ ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಮತ್ತು ಅವರ ಮೇಲಿನ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿದ್ದರೂ, ಬಿಗಿ ಕಾನೂನು ಕ್ರಮಕ್ಕೆ ಸರ್ಕಾರ ಮುಂದಾಗದೆ ಇರುವುದು! ಜೊತೆಗೆ, ಸಣ್ಣಪುಟ್ಟ ಸಂಗತಿಗಳೆಗೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯುತ್ಸಾಹದಿಂದ ಪ್ರತಿಕ್ರಿಯಿಸುವ ಪ್ರಧಾನಿ, ತಾವು ಪ್ರತಿನಿಧಿಸುವ ರಾಜಕೀಯ ಪಕ್ಷ ಮತ್ತು ಮತೀಯ ಸಂಘಟನೆಗಳ ವ್ಯಕ್ತಿಗಳಿಂದ ನಡೆದ ಈ ಹೀನ ಕೃತ್ಯಗಳು ಇಡೀ ದೇಶವನ್ನೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುವಂತೆ ಮಾಡಿರುವಾಗ ದಿವ್ಯಮೌನಕ್ಕೆ ಶರಣಾಗಿದ್ದು ಕೂಡ ಕುಹಕಕ್ಕೆ ಕಾರಣ.

ಪ್ರಧಾನಿಯ ಈ ಮೌನವನ್ನು ಪ್ರಶ್ನಿಸಿ ‘ದಿ ವೈರ್’, ‘ದಿ ಕ್ವಿಂಟ್’‌ನಂತಹ ಸುದ್ದಿತಾಣಗಳು ‘ಕಟುವಾ ಮತ್ತು ಉನ್ನಾವ್ ಘಟನೆ ಕುರಿತು ಮೋದಿಯವರ ಹೇಳಿಕೆ ಇದು’ ಎಂದು ಖಾಲಿ ಜಾಗವನ್ನು ಬಿಟ್ಟು ಅಣಕವಾಡಿವೆ. ಕಟುವಾ ಬಾಲಕಿಯ ಚಿತ್ರಗಳು ವೈರಲ್ ಆಗಿವೆ. ಆಕೆಯ ಅತ್ಯಾಚಾರದ ಘಟನೆಯ ತನಿಖೆ ನಡೆಸಿದ ಪೊಲೀಸರು ಸಲ್ಲಿಸಿದ ಚಾರ್ಜ್‌ಶೀಟ್‌ ವಿವರಗಳು ಬಹಿರಂಗವಾಗುತ್ತಲೇ ದೇಶ-ವಿದೇಶಗಳಲ್ಲಿ ಪ್ರಕರಣ ಮತ್ತು ಕೇಂದ್ರದ ಸರ್ಕಾರದ ನಿರ್ಲಿಪ್ತ ಧೋರಣೆ ಕುರಿತು ಆಕ್ರೋಶ ಭುಗಿಲೆದ್ದಿದೆ. ಉನ್ನಾವ್‌ ಘಟನೆಯ ವಿಷಯದಲ್ಲೂ ಅದೇ ಬಿಜೆಪಿಯ, ಮೋದಿ ನಂತರದ ಮಾದರಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಸಿಎಂ ಯೋಗಿ ಆದಿತ್ಯನಾಥರ ನಿಷ್ಕ್ರಿಯತೆಯ ಬಗ್ಗೆಯೂ ಆಕ್ರೋಶ ವ್ಯಕ್ತವಾಗುತ್ತಿದೆ.

ಅಷ್ಟಕ್ಕೂ ಭಾರತೀಯ ಸಂಸ್ಕೃತಿ, ಹೆಣ್ಣಿನ ಘನತೆ, ದೇಶದ ಮರ್ಯಾದೆಯ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಬಿಜೆಪಿ ಮತ್ತು ಸಂಘಪರಿವಾರದ ಮಂದಿ ಈ ಎರಡು ಪ್ರಕರಣಗಳಲ್ಲಿ ಹೀಗೆ ಬಾಯಿಗೆ ಬೀಗ ಹಾಕಿಕೊಳ್ಳಲು ಕಾರಣವೇನು ಗೊತ್ತೇ? ಆ ಗುಟ್ಟು ಗೊತ್ತಾಗಬೇಕಾದರೆ, ಎರಡೂ ಪ್ರಕರಣಗಳ ಕೆಲವು ವಿವರ ತಿಳಿಯುವುದು ಅಗತ್ಯ.

ಜಮ್ಮು-ಕಾಶ್ಮೀರದ ಕಟುವಾ ಜಿಲ್ಲೆಯ ರಸ್ಸಾನಾ ಎಂಬಲ್ಲಿ ಜನವರಿ ಮೊದಲ ವಾರ ಗುಜ್ಜರ್ ಬಕ್ರಾವಾಲಾ ಮುಸ್ಲಿಂ ಅಲೆಮಾರಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಎಂಟು ವರ್ಷದ ಬಾಲಕಿಯನ್ನು ಅಪಹರಿಸಿ, ಏಳು ಮಂದಿ ಆರೋಪಿಗಳು ಸತತ ನಾಲ್ಕು ದಿನ ಅತ್ಯಾಚಾರ ಎಸಗಿದ್ದರು. ಅದೂ ದೇವಸ್ಥಾನವೊಂದರ ಮುಖ್ಯಸ್ಥ ಸಾಂಜಿ ರಾಮ್ ಎಂಬ ವ್ಯಕ್ತಿ, ಆ ದೇವಸ್ಥಾನದಲ್ಲೇ ಮುಗ್ಧ ಬಾಲಕಿಯ ಮೇಲೆ ಇಂತಹ ಪೈಶಾಚಿಕ ಕೃತ್ಯ ಎಸಗಿದ್ದ. ಬಳಿಕ ಆಕೆಯನ್ನು ಕತ್ತು ಹಿಸುಕಿ ಕೊಂದು, ಕಲ್ಲು ಎತ್ತಿಹಾಕಲಾಗಿತ್ತು. ಆಕೆಯ ಅತ್ಯಾಚಾರಕ್ಕಾಗಿ ದೂರದ ಮೀರತ್‌ನಿಂದ ಸಂಬಂಧಿಯೊಬ್ಬನನ್ನೂ ಕರೆಸಿದ್ದರು ಮತ್ತು ಕೃತ್ಯದಲ್ಲಿ ಪೊಲೀಸ್‌ ಪೇದೆಗಳೂ ಭಾಗಿಯಾಗಿದ್ದರು ಎಂದು ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿ ಹೇಳಿದೆ. ಈ ಘಟನೆಯಲ್ಲಿ ಅತ್ಯಾಚಾರಕ್ಕೆ ಒಳಗಾದ ಬಾಲಕಿ ಬಕ್ರಾವಾಲಾ ಎಂಬ ಮುಸ್ಲಿಂ ಅಲೆಮಾರಿ ಜನಾಂಗಕ್ಕೆ ಸೇರಿದವಳು. ಮೂಲತಃ ಕುರಿ ಮತ್ತಿತರ ಪ್ರಾಣಿಗಳನ್ನು ಮೇಯಿಸುವವರು. ರಾಜ್ಯದಲ್ಲಿ ಶೇ.೧೨ರಷ್ಟಿರುವ ಈ ಜನಾಂಗವನ್ನು ಪರಿಶಿಷ್ಟ ವರ್ಗವೆಂದು ಗುರುತಿಸಲಾಗಿದೆ. ಆ ಸಮುದಾಯದ ಜನ ವಲಸೆ ಬಂದು ಅಲ್ಲಿನ ಅರಣ್ಯ ಪ್ರದೇಶದಲ್ಲಿ ತಾತ್ಕಾಲಿಕ ಟೆಂಟುಗಳಲ್ಲಿ ವಾಸಿಸುವುದು ವಾಡಿಕೆ. ಆದರೆ, ಪ್ರಮುಖ ಆರೋಪಿ ಈ ಮುಸ್ಲಿಂ ಸಮುದಾಯ ಅಲ್ಲಿಗೆ ಬರಬಾರದು ಎಂಬ ಉದ್ದೇಶದಿಂದ ಅವರನ್ನು ಬೆದರಿಸಲು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ಧಾರ್ಮಿಕ ಹಿನ್ನೆಲೆಯ ಕಾರಣಕ್ಕೆ ಆತನಿಗೆ ಅಲ್ಲಿನ ಬಿಜೆಪಿ ನಾಯಕರೊಂದಿಗೆ ಸಖ್ಯವಿದ್ದು, ಕೃತ್ಯದ ತನಿಖೆ ಮತ್ತು ಆರೋಪ ಪಟ್ಟಿ ಸಲ್ಲಿಸಲು ಅಲ್ಲಿನ ಸರ್ಕಾರದ ಬಿಜೆಪಿ ಸಚಿವರೇ ಅಡ್ಡಿಪಡಿಸಿದ್ದಾರೆ. ಅಲ್ಲದೆ, ಕಟುವಾದ ವಕೀಲರ ಸಂಘ ಕೂಡ ನ್ಯಾಯಾಲಯದ ಮುಂದೆ ಪ್ರತಿಭಟನೆ ನಡೆಸಿ, ಪೊಲೀಸರು ಆರೋಪಪಟ್ಟಿ ಸಲ್ಲಿಸದಂತೆ ಅಡ್ಡಿಪಡಿಸಿದೆ. ಪ್ರಕರಣದಲ್ಲಿ ಆರೋಪಿಗಳು ಹಿಂದೂಗಳು ಎಂಬುದನ್ನೇ ನೆಪವಾಗಿಟ್ಟುಕೊಂಡು ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ. ಆದರೆ, ಇದು ಆರೋಪಿಗಳನ್ನು ರಕ್ಷಿಸುವ ತಂತ್ರ ಎಂಬುದು ಗುಟ್ಟೇನೂ ಅಲ್ಲ. ಹಸುಳೆಯ ಮೇಲಿನ ಅತ್ಯಂತ ಹೀನಾಯ ಕೃತ್ಯದ ತನಿಖೆಯ ವಿರುದ್ಧ ಹೀಗೆ ಪ್ರತಿಭಟನೆ ನಡೆಸಿದ ಬಿಜೆಪಿಯ ಇಬ್ಬರು ಸಚಿವರು ಸೇರಿದಂತೆ ಎಲ್ಲರೂ ಆಗ ಕೂಗಿದ್ದು, “ಭಾರತ್‌ ಮಾತಾಕಿ ಜೈ” ಮತ್ತು “ಜೈ ಶ್ರೀರಾಮ್” ಘೋಷಣೆ! ಜೊತೆಗೆ, ಕೈಯಲ್ಲಿ ಹಿಡಿದದ್ದು ದೇಶದ ರಾಷ್ಟ್ರಧ್ವಜವನ್ನು! ಹಿಂದೂ ಏಕ್ತಾ ಮಂಚ್ ಮತ್ತು ಭಾರತ್‌ ಬಚಾವೋ ರಥಯಾತ್ರಾ ಹೆಸರಿನ ಸಂಘಟನೆಗಳಡಿ ನಡೆದ ಈ ನಾಚಿಕೆಗೇಡಿನ ಹೋರಾಟ ಕೂಡ ದೇಶಭಕ್ತಿಯ ವೇಷ ಧರಿಸಿದೆ!

ಇನ್ನು ‘ವೀರ ಸನ್ಯಾಸಿ’ ಯೋಗಿ ಆದಿತ್ಯನಾಥರ ‘ರಾಮರಾಜ್ಯ’ ಉತ್ತರ ಪ್ರದೇಶದಲ್ಲಿ ನಡೆದ ಉನ್ನಾವ್‌ ಅತ್ಯಾಚಾರ ಪ್ರಕರಣ ಕೂಡ ಬಿಜೆಪಿ ಮತ್ತು ಅದರ ಪರಿವಾರದ ನಾಯಕರ ‘ಮನುಷ್ಯತ್ವ’ ಬಯಲು ಮಾಡಿದೆ. ಅಲ್ಲಿಯೂ ೧೭ ವರ್ಷದ ಯುವತಿ ತನ್ನ ಮೇಲೆ ಬಿಜೆಪಿ ಶಾಸಕ ಕುಲದೀಪ್‌ ಸಿಂಗ್ ಸೆಂಗರ್ ಎಂಬಾತ ಅತ್ಯಾಚಾರ ನಡೆಸಿದ್ದಾನೆ ಎಂದು ಸ್ವತಃ ಸಿಎಂ ಯೋಗಿ ಅವರಿಗೇ ದೂರು ನೀಡಿದ್ದಳು. ಬಳಿಕ ಅದೇ ಶಾಸಕರ ಬೆಂಬಲಿಗರು ಮತ್ತೊಮ್ಮೆ ಆಕೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಕಳೆದ ಜೂನ್‌ನಲ್ಲಿ ಘಟನೆ ನಡೆದಿದ್ದು, ಆಕೆಯ ದೂರನ್ನು ಪೊಲೀಸರು ಸ್ವೀಕರಿಸಿರಲಿಲ್ಲ. ಸಿಎಂ ನಿವಾಸದ ಮುಂದೆ ಸೀಮೆಎಣ್ಣೆ ಸುರಿದುಕೊಂಡು ಪ್ರತಿಭಟಿಸಿದರೂ ಆಕೆಗೆ ಆದ ಅನ್ಯಾಯದ ಬಗ್ಗೆ ರಾಮಭಕ್ತ ಯೋಗಿ ಆದಿತ್ಯನಾಥರು ತಲೆ ಕೆಡಿಸಿಕೊಂಡಿರಲಿಲ್ಲ. ಅದಕ್ಕೆ ಬದಲಾಗಿ, ದೂರು ನೀಡದಂತೆ ಆಕೆಯ ಮನೆಯವರಿಗೆ ಕಿರುಕುಳ ನೀಡಲಾಗಿತ್ತು. ಪೊಲೀಸರ ಕಿರುಕುಳದಿಂದ ಆಕೆಯ ತಂದೆ ಇದೀಗ ಕಸ್ಟಡಿಯಲ್ಲೇ ಸಾವು ಕಂಡಿದ್ದಾರೆ. ಆಕೆಯ ಮೇಲೆ ಹಲ್ಲೆ ಮಾಡಿದವರು ಸೆಂಗರ್ ಸಹೋದರರು ಎನ್ನಲಾಗಿದೆ. ಈ ಪ್ರಕರಣದ ವಿರುದ್ಧ ಜನರ ಒತ್ತಡ ಹೆಚ್ಚಾದಾಗ ಆರೋಪಿ ಸೆಂಗರ್ ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ. ಈ ನಡುವೆ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ. ಆದರೆ, ಎಫ್‌ಐಆರ್ ದಾಖಲಾಗಿದ್ದರೂ ಮುಖ್ಯ ಆರೋಪಿಯಾದ ಬಿಜೆಪಿ ಶಾಸಕನನ್ನು ಬಂಧಿಸಿಲ್ಲ.

ಎರಡೂ ಪ್ರಕರಣಗಳು ಅಧಿಕಾರಸ್ಥರು ಮತ್ತು ಅಧಿಕಾರಸ್ಥರ ಆಶೀರ್ವಾದ ಇರುವರಿಂದಲೇ ನಡೆದ ಕೃತ್ಯಗಳು. ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ, ಭಾರತೀಯ ಸಂಸ್ಕೃತಿಗೇ ಮಸಿ ಬಳಿಯುವಂತಹ ಕೃತ್ಯಗಳು. ಆದರೆ, ಆ ಎರಡೂ ಪ್ರಕರಣಗಳ ವಿಷಯದಲ್ಲಿ, ಅದೇ ಭಾರತೀಯ ಸಂಸ್ಕೃತಿಯ ರಕ್ಷಕರೆಂದು ಹೇಳಿಕೊಳ್ಳುವ ನಾಯಕರೇ ತಮ್ಮನ್ನು ರಕ್ಷಿಸಿಕೊಳ್ವಳುವ ಏಕೈಕ ಕಾರಣಕ್ಕೆ ಕಾನೂನು ಮತ್ತು ಕಾಯ್ದೆಗಳನ್ನು, ನ್ಯಾಯಾಂಗವನ್ನು, ಪೊಲೀಸ್ ವ್ಯವಸ್ಥೆಯನ್ನು, ಮಾಧ್ಯಮವನ್ನು ಮತ್ತು ಅಂತಿಮವಾಗಿ ಮನುಷ್ಯತ್ವವನ್ನೇ ಬಾಯಿ ಮುಚ್ಚಿಸುವ ಕೆಲಸ ಮಾಡಿದ್ದಾರೆ.

ದೆಹಲಿಯಲ್ಲಿ ೨೦೧೨ರಲ್ಲಿ ನಡೆದ ನಿರ್ಭಯಾ ಪ್ರಕರಣ ಸಂದರ್ಭದಲ್ಲಿ ಇಡೀ ದೇಶವೇ ಮೊಂಬತ್ತಿ ಹಿಡಿದು ರಸ್ತೆಗಿಳಿದಿತ್ತು. ಆದರೆ, ಕಟುವಾ ಮತ್ತು ಉನ್ನಾವ್‌ನಲ್ಲಿಯೂ ಇಬ್ಬರು ನಿರ್ಭಯಾರು ಕಾಮಾಂಧರ ಹೇಯಕೃತ್ಯಕ್ಕೆ ಈಡಾಗಿದ್ದಾರೆ. ಅದರಲ್ಲೂ, ಕಟುವಾದಲ್ಲಿ ಎಂಟು ವರ್ಷದ ಬಾಲಕಿಯನ್ನು ಆಕೆಯ ಧರ್ಮದ ಕಾರಣಕ್ಕೆ ಅಪಹರಣ ಮಾಡಿ, ಅಮಲು ಪದಾರ್ಥ ನೀಡಿ ಸಾಮೂಹಿಕ ಅತ್ಯಾಚಾರವೆಸಗಿ ಬರ್ಬರವಾಗಿ ಕೊಲ್ಲಲಾಗಿದೆ. ಅದೂ ವಿಶೇಷ ಪೊಲೀಸ್ ಪಡೆಯ ಸಿಬ್ಬಂದಿ ಕೂಡ ಆ ಕೃತ್ಯದ ಪಾಲುದಾರರಾಗಿದ್ದಾರೆ. ಆದರೆ, ಇಂತಹ ಭೀಕರ ಘಟನೆ ಕೂಡ ಅಂದು ದೆಹಲಿಯ ಗಲ್ಲಿಗಲ್ಲಿಗಳಲ್ಲಿ ಮೊಂಬತ್ತಿ ಹೊತ್ತಿಸಿದವರ ಎದೆ ಕರಗಿಸಲಿಲ್ಲವೇಕೆ ಎಂಬ ಪ್ರಶ್ನೆಗಳು ಎದ್ದಿವೆ. ಮಾಧ್ಯಮ ಕೂಡ ಜಾಣಕುರುಡು ವರಸೆಯಿಂದ ಹೊರತಾಗಿಲ್ಲ.

ಅಂದರೆ, ದೇಶದ ನಗರವಾಸಿ, ಮಧ್ಯಮ ಮತ್ತು ಮೇಲ್ವರ್ಗದ ಜನರ ಹೃದಯ ಕೇವಲ ನಗರವಾಸಿ ಅನುಕೂಲಸ್ಥ ಸಾಮಾಜಿಕ ಪ್ರತಿಷ್ಠಿತ ವರ್ಗದ ಜನರ ನೋವಿಗೆ ಮಾತ್ರ ಮಿಡಿಯುವುದೇ? ಹಳ್ಳಿ ಮೂಲೆಯ, ದುರ್ಬಲ ಮತ್ತು ನಿರ್ಲಕ್ಷಿತ ವರ್ಗಗಳ ಹೆಣ್ಣುಮಕ್ಕಳ, ಹಸುಗೂಸುಗಳ ಮೇಲೆ ನಡೆದರೆ ಅದು ಅತ್ಯಾಚಾರವಲ್ಲವೇ? ಅವರ ಮಾನ-ಪ್ರಾಣಕ್ಕೆ ಬೆಲೆ ಇಲ್ಲವೇ? ಅಥವಾ ಅಧಿಕಾರಸ್ಥರ ಮರ್ಜಿಗೆ ಬಿದ್ದು, ಅವರ ಮುನಿಸಿಗೆ ಮಣಿದು ಸಮಾಜದ ಇಂತಹ ಹೀನಕೃತ್ಯಗಳ ಬಗ್ಗೆ ಜಾಣಮರೆವು ಪ್ರದರ್ಶಿಸುತ್ತಿದೆಯೇ? ಅಥವಾ ಕಟುವಾ ಕಟುಕರ ಪರ ಹೋರಾಟದಲ್ಲಿ ಹಾರಾಡಿದ ‘ರಾಷ್ಟ್ರಧ್ವಜ’ ಮತ್ತು ‘ಭಾರತ್‌ ಮಾತಾಕಿ ಜೈ’ ಹಾಗೂ ‘ಜೈ ಶ್ರೀ ರಾಮ್‌’ ಘೋಷಣೆಗಳು ದೇಶದ ಮಾನ-ಸಮ್ಮಾನದ ಮಾತನಾಡುವ ಮಂದಿಯ ಗಂಟಲು ಕಟ್ಟಿಸಿದವೇ? ಅಥವಾ ದೇಶದ ಮಾನವೀಯತೆಗೇ ಇಡಿಯಾಗಿ ಮತೀಯ ಧರ್ಮ ಮತ್ತು ಕೀಳು ರಾಜಕಾರಣದ ಕಿಲುಬು ಮೆತ್ತಿದೆಯೇ? ಎಂಬ ಪ್ರಶ್ನೆಗಳು ಈಗ ದೇಶದ ಅಂತಃಸಾಕ್ಷಿಗೆ ಸವಾಲು ಎಸೆದಿವೆ.

ಇದನ್ನೂ ಓದಿ : ಜಮ್ಮುವಿನಲ್ಲಿ ದ್ವೇಷಕ್ಕೆ ಬಲಿಯಾದ ಬಾಲಕಿ; ಅಸಲಿಗೆ ಅಲ್ಲಿ ನಡೆದದ್ದೇನು?

ಅದರಲ್ಲೂ, ಭಾರತವನ್ನು ಜಾಗತಿಕ ನಾಯಕನ್ನಾಗಿ ಮಾಡಿದ್ದೇವೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಪ್ರಧಾನಿ ಮೋದಿ ಹಾಗೂ ಭಾರತೀಯ ಸಂಸ್ಕೃತಿಯ ವಕ್ತಾರ ಎಂದು ಹೇಳಿಕೊಳ್ಳುವ ಅವರ ಭಾರತೀಯ ಜನತಾ ಪಕ್ಷ ಈ ಪ್ರಶ್ನೆಗಳಿಗೆ ಉತ್ತರ ಕೊಡುತ್ತದೆಯೇ? ಕಾಂಗ್ರೆಸ್ ನಾಯಕರು ಕೂಡ ಅಳೆದು ತೂಗಿ, ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಮುಗಿಲು ಮುಟ್ಟಿದ ಬಳಿಕ ಎಚ್ಚರಾಗಿ ನಡುರಾತ್ರಿ ಮೊಂಬತ್ತಿ ಪ್ರತಿಭಟನೆ ನಡೆಸಿದ್ದು ಕೂಡ ಪ್ರಶ್ನಾರ್ಹವೇ. ಕಳೆದ ಒಂದು ವಾರದಿಂದ ಈ ಘಟನೆಗಳು ಸುದ್ದಿಯಾಗುತ್ತಿದ್ದರೂ ಕಾಂಗ್ರೆಸ್ ಸೇರಿದಂತೆ ಯಾವುದೇ ರಾಷ್ಟ್ರೀಯ ಪಕ್ಷಗಳು ಈ ಬಗ್ಗೆ ದನಿ ಎತ್ತಲಿಲ್ಲವೇಕೆ? ಮನುಷ್ಯತ್ವಕ್ಕೂ ರಾಜಕಾರಣದ ಲಾಭ, ನಷ್ಟದ ಲೆಕ್ಕವೇ?

ಒಬ್ಬ ಬಾಲಕಿಯ ಮೇಲಿನ ಹೀನಾಯ ಅತ್ಯಾಚಾರ ಮತ್ತು ಅಂಥದ್ದನ್ನು ಮುಚ್ಚಿಹಾಕುವ ಅಧಿಕಾರದ ಚುಕ್ಕಾಣಿ ಹಿಡಿದವರ ಆಟಗಳು ಕರುಳು ಹಿಂಡದೆಹೋದರೆ, ವಾಕರಿಕೆ ಹುಟ್ಟಿಸದೆಹೋದರೆ, ಭವ್ಯ ಭಾರತೀಯ ಸಂಸ್ಕೃತಿಯ ವಕ್ತಾರರಾದ ನಮಗೆ ನಾಗರಿಕರು ಎಂದು ಕರೆದುಕೊಳ್ಳುವ ನೈತಿಕತೆ ಇರಲಾರದು ಅಲ್ಲವೇ?

ಚಿತ್ರ: ಉನ್ನಾವ್ ಪ್ರಕರಣದ ಮುಖ್ಯ ಆರೋಪಿ ಕುಲದೀಪ್ ಸಿಂಗ್ ಸೆಂಗರ್

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More