ಪೇಯ್ಡ್‌‌ ನ್ಯೂಸ್‌; ಇದುವರೆಗೂ ಅನರ್ಹ ಆಗಿದ್ದು ಕೇವಲ ಇಬ್ಬರು ಶಾಸಕರು!

ಪೇಯ್ಡ್‌‌ ನ್ಯೂಸ್‌ ನಿರ್ಬಂಧಿಸಲು ಚುನಾವಣಾ ಆಯೋಗದ ಕ್ರಮಗಳು ಪರಿಣಾಮಕಾರಿಯಾಗಿಲ್ಲ ಎಂಬುದಕ್ಕೆ ಈಚೆಗೆ ದಾಖಲಾಗಿರುವ ಪ್ರಕರಣಗಳೇ ಸಾಕ್ಷಿ. ಅಸಹಾಯಕತೆ ವ್ಯಕ್ತಪಡಿಸುವ ಆಯೋಗ, ಲಗಾಮು ಇಲ್ಲದ ಮಾಧ್ಯಮಗಳು ವ್ಯವಸ್ಥೆಯನ್ನು ಶಿಥಿಲಗೊಳಿಸುತ್ತಿವೆ ಎಂಬುದು ವಾಸ್ತವ

ಪೇಯ್ಡ್‌ ನ್ಯೂಸ್‌ ಬರೀ ರಾಜಕೀಯ ವ್ಯವಸ್ಥೆಗೆ ಸೀಮಿತವಾಗಿರುವಂಥದ್ದಲ್ಲ. ಉದ್ಯಮಿ ಮತ್ತು ಉದ್ಯಮ ಸಂಸ್ಥೆಗಳು ಮಾಧ್ಯಮಗಳಿಗೆ ಹೇರಳವಾಗಿ ಜಾಹೀರಾತು ನೀಡುವ ಮೂಲಕ ಉತ್ಪನ್ನ ಮತ್ತು ಸಂಸ್ಥೆಯ ಪರವಾಗಿ ಸುದ್ದಿ ಬರೆಸುವುದು; ಪತ್ರಕರ್ತರಿಗೆ ವಿದೇಶಿ ಪ್ರವಾಸ, ಕೂಪನ್‌‌, ಉಡುಗೊರೆ ಮತ್ತಿತರ ರೂಪದಲ್ಲಿ ಲಂಚ ನೀಡುವುದು ಸಾಮಾನ್ಯವಾಗಿದೆ. ಇದನ್ನು ಬಹುತೇಕ ಪತ್ರಕರ್ತರು ಯಾವುದೇ ಅಳಕು ಮತ್ತು ಬೇಸರವಿಲ್ಲದೆ ಪಡೆದು ಪುನೀತರಾಗುತ್ತಾರೆ. ಆ ಮೂಲಕ ಎಲ್ಲೋ ಒಂದು ಕಡೆ ಅಡಿಯಾಳಾಗುವ ಅನಿವಾರ್ಯತೆಯನ್ನು ತಾವೇ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಪತ್ರಕರ್ತರನ್ನು ಗುರಿಯಾಗಿಸುವುದರಲ್ಲಿ ಅರ್ಥವಿಲ್ಲ. ಮಾಧ್ಯಮ ಸಂಸ್ಥೆಯೊಂದು ಪತ್ರಕರ್ತನಿಗೆ ಉತ್ತಮ ವೇತನ ಮತ್ತು ಭತ್ಯೆ ನೀಡುವುದು ಮತ್ತು ವೈಯಕ್ತಿಕ ನೆಲೆಯಲ್ಲಿ ಪತ್ರಕರ್ತ ತನ್ನ ಕರ್ತವ್ಯ ಮತ್ತು ಜವಾಬ್ದಾರಿಯ ಮಹತ್ವ ಅರಿತಾಗ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ.

ರಾಜಕಾರಣವು ಜನರ ಬದುಕು, ವ್ಯವಸ್ಥೆಯ ಮೇಲೆ ನೇರ ಪರಿಣಾಮ ಬೀರುವುದರಿಂದ ಚುನಾವಣಾ ಸಂದರ್ಭದಲ್ಲಿ ಪೇಯ್ಡ್‌ ನ್ಯೂಸ್‌ ಅನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಜವಾಬ್ದಾರಿ ಹೊತ್ತಿರುವ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗವು ಈ ಸಂದರ್ಭದಲ್ಲಿ ಕಾಗದದ ಮೇಲಿರುವ ಕಠಿಣ ನೀತಿಗಳನ್ನು ಬಾಯಿ ಚಪಲಕ್ಕೆ ಹೇಳಿಕೊಳ್ಳುತ್ತದೆ. ಆದರೆ, ಅವುಗಳನ್ನು ಅನುಷ್ಠಾನಗೊಳಿಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಲು ಸಂಪನ್ಮೂಲ, ಸೀಮಿತ ಅಧಿಕಾರ ವ್ಯಾಪ್ತಿ ಉಲ್ಲೇಖಿಸಿ ಸುಮ್ಮನಾಗಿಬಿಡುತ್ತದೆ. ತನ್ನ ಮೇಲಿನ ಆರೋಪದಿಂದ ಮುಕ್ತವಾಗಲು ಪೇಯ್ಡ್ ನ್ಯೂಸ್‌ ಅನ್ನು ಚುನಾವಣಾ ಅಕ್ರಮ ಎಂದು ಪರಿಗಣಿಸಿ, ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿತರಬೇಕು. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಅನುವು ಮಾಡಿಕೊಡಬೇಕು ಎಂಬ ಆಯೋಗದ ಮನವಿ ಮೂಲೆಗುಂಪಾಗಿದೆ.

ಇದೆಲ್ಲದರ ಮಧ್ಯೆ, ಚುನಾವಣೆಯ ಸಂದರ್ಭದಲ್ಲಿ ಪೇಯ್ಡ್‌ ನ್ಯೂಸ್‌ ಪ್ರಕರಣ ಪತ್ತೆಹಚ್ಚಲು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಚುನಾವಣಾ ಆಯೋಗವು ಮಾಧ್ಯಮ ಪ್ರಮಾಣೀಕೃತ ಮತ್ತು ನಿರ್ವಹಣಾ ಸಮಿತಿಗಳನ್ನು (ಎಂಸಿಎಂಸಿ) ರಚಿಸುತ್ತದೆ. ರಾಜ್ಯ ಮಟ್ಟದ ಸಮಿತಿಯಲ್ಲಿ ಮುಖ್ಯ ಚುನಾವಣಾಧಿಕಾರಿ ಅಧ್ಯಕ್ಷರಾಗಿರಲಿದ್ದು, ಕೇಂದ್ರ ಚುನಾವಣಾ ಆಯೋಗವು ನೇಮಿಸಿದ ವೀಕ್ಷಕರು, ಸಮಿತಿ ಸೂಚಿಸಿದ ಒಬ್ಬ ತಜ್ಞ, ಭಾರತ ಸರ್ಕಾರದ ಮಾಧ್ಯಮ ಇಲಾಖೆ ಪ್ರತಿನಿಧಿಸುವ ಭಾರತೀಯ ಮಾಹಿತಿ ಸೇವಾ ಅಧಿಕಾರಿ, ಸ್ವತಂತ್ರ ನಾಗರಿಕ ಅಥವಾ ಪಿಸಿಐ ನೇಮಿಸಿದ ಪತ್ರಕರ್ತ (ಇದ್ದರೆ) ಇರಲಿದ್ದು, ಮಾಧ್ಯಮ ಉಸ್ತುವಾರಿಯಾದ ಹೆಚ್ಚುವರಿ ಅಥವಾ ಜಂಟಿ ಮುಖ್ಯ ಚುನಾವಣಾಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಜಿಲ್ಲಾ ಮಟ್ಟದ ಸಮಿತಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ, ಹೆಚ್ಚುವರಿ ಚುನಾವಣಾಧಿಕಾರಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಅಧಿಕಾರಿ (ಇದ್ದರೆ), ಸ್ಥಳೀಯರೊಬ್ಬರು ಅಥವಾ ಪಿಸಿಐ ಶಿಫಾರಸು ಮಾಡಿದ ಪತ್ರಕರ್ತ ಇರಲಿದ್ದು (ಇದ್ದರೆ), ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ/ಮಾಹಿತಿ ಅಧಿಕಾರಿ ಅಥವಾ ತತ್ಸಮಾನವಾದ ಅಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಮುಂದಿನ ತಿಂಗಳು ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಪೇಯ್ಡ್ ನ್ಯೂಸ್ ಮೇಲೆ ನಿಗಾ ಇಡಲು ಸಂಪನ್ಮೂಲದ ಕೊರತೆ ಇದೆ ಎಂಬುದನ್ನು ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ. "ಪೇಯ್ಡ್ ನ್ಯೂಸ್ ಸೇರಿದಂತೆ ಚುನಾವಣೆಯ ಎಲ್ಲ ಕೆಲಸಗಳನ್ನೂ ಮಾಡಬೇಕಿದೆ. ಆದರೂ ೨೦ ಟಿವಿಗಳನ್ನು ೨೪/೭ ತಾಸು ರೆಕಾರ್ಡ್‌ ಮಾಡುವ ವ್ಯವಸ್ಥೆ ಇದ್ದು, ಅದನ್ನು ವಿಶ್ಲೇಷಿಸುವ ತಂಡ ನಮ್ಮಲ್ಲಿದೆ. ಅಭ್ಯರ್ಥಿ ಅಥವಾ ಪಕ್ಷ ಕೇಂದ್ರಿತವಾಗಿ ಸುದ್ದಿ ಪ್ರಸಾರ ಮಾಡುವ ಟಿವಿಗಳು ಹಾಗೂ ಪತ್ರಿಕೆಗಳ ಕಟಿಂಗ್‌ ಸಹಿತ ದಾಖಲೆ ಸಿದ್ಧಪಡಿಸಿ, ಅಭ್ಯರ್ಥಿಗೆ ಚುನಾವಣಾಧಿಕಾರಿ ನೋಟಿಸ್‌ ಜಾರಿಗೊಳಿಸುತ್ತಾರೆ. ಆದರೆ, ಕಾಸಿಗಾಗಿ ಸುದ್ದಿಯನ್ನು ತಡೆಯಲು ಸದ್ಯದ ವ್ಯವಸ್ಥೆ ಸಾಲದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ,” ಎನ್ನುತ್ತಾರೆ ಚುನಾವಣಾ ಉಸ್ತುವಾರಿ ಹೊತ್ತಿರುವ ಅಧಿಕಾರಿಯೊಬ್ಬರು.

ಸಾಮಾನ್ಯವಾಗಿ ಅಭ್ಯರ್ಥಿ ಅಥವಾ ಪಕ್ಷದ ಪರವಾಗಿ ಪ್ರಕಟವಾದ ನಿಗದಿತ ಸುದ್ದಿಯನ್ನು ಪೇಯ್ಡ್ ನ್ಯೂಸ್ ಎಂದು ಪರಿಗಣಿಸಿ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಲಾಗುತ್ತದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ವೈಯಕ್ತಿಕವಾಗಿ ೨೮ ಲಕ್ಷ ವೆಚ್ಚ ಮಾಡಬಹುದಾಗಿದ್ದು, ಪಕ್ಷಗಳ ಚುನಾವಣಾ ವೆಚ್ಚಕ್ಕೆ ಯಾವುದೇ ಮಿತಿಯನ್ನು ಆಯೋಗ ವಿಧಿಸಿಲ್ಲ. ಪೇಯ್ಡ್‌ ನ್ಯೂಸ್ ಪ್ರಕಟವಾದ ನಾಲ್ಕು ದಿನಗಳೊಳಗೆ ಜಿಲ್ಲೆಯ ಚುನಾವಣಾಧಿಕಾರಿ ನೋಟಿಸ್‌ ಜಾರಿಗೊಳಿಸುತ್ತಾರೆ. ಇದಕ್ಕೆ ಅಭ್ಯರ್ಥಿಯು ಎರಡು ದಿನದೊಳಗೆ ಪ್ರತಿಕ್ರಿಯಿಸಬೇಕು. ಇಲ್ಲವಾದಲ್ಲಿ ಅದನ್ನು ಕಾಸಿಗಾಗಿ ಸುದ್ದಿ ಎಂದು ಪರಿಗಣಿಸಲಾಗುತ್ತದೆ. ಜಿಲ್ಲಾ ಎಂಸಿಎಂಸಿಯ ನಿರ್ಧಾರ ಅಭ್ಯರ್ಥಿಗೆ ವಿರುದ್ಧ ಎನಿಸಿದರೆ ಎರಡು ದಿನದಲ್ಲಿ ಅವರು ರಾಜ್ಯ ಎಂಸಿಎಂಸಿಯಲ್ಲಿ ಮೇಲ್ಮನವಿ ಸಲ್ಲಿಸಬಹುದು. ರಾಜ್ಯ ಮಟ್ಟದ ಎಂಸಿಎಂಸಿಯು ನಾಲ್ಕು ದಿನದಲ್ಲಿ ಪ್ರಕರಣ ಇತ್ಯರ್ಥಪಡಿಸುತ್ತದೆ. ಇದನ್ನೂ ಪ್ರಶ್ನಿಸಿ ಅಭ್ಯರ್ಥಿಯೂ ಎರಡು ದಿನದಲ್ಲಿ ಕೇಂದ್ರ ಚುನಾವಣಾ ಆಯೋಗದ ಮೊರೆ ಹೋಗಬಹುದಾಗಿದೆ. ಅಲ್ಲಿ ಆಯೋಗ ತೆಗೆದುಕೊಳ್ಳುವ ತೀರ್ಮಾನ ಅಂತಿಮವಾಗಿರುತ್ತದೆ. ಈ ಎಲ್ಲ ಪ್ರಕ್ರಿಯೆಯೂ ಚುನಾವಣಾ ಸಂದರ್ಭದಲ್ಲಿಯೇ ಪೂರ್ಣಗೊಳ್ಳಲಿದೆ.

ಚರ್ಚೆ, ವಾದ-ಸಂವಾದ, ಆಯೋಗ ಮತ್ತು ಪಿಸಿಐ ಎಚ್ಚರಿಕೆಯ ನಡುವೆಯೂ ವರ್ಷದಿಂದ ವರ್ಷಕ್ಕೆ ಪೇಯ್ಡ್‌ ನ್ಯೂಸ್‌ ಪ್ರಕರಣಗಳು ಹೆಚ್ಚಾಗುತ್ತಲೇ ಸಾಗಿವೆ. ಆದರೆ, ಶಿಕ್ಷೆಯ ಪ್ರಮಾಣ ಮಾತ್ರ ಅತ್ಯಂತ ವಿರಳವಾಗಿದೆ. ಪೇಯ್ಡ್‌ ನ್ಯೂಸ್‌ ಆರೋಪದಡಿ ೨೦೦೭ರಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಯಡಿ ಇದುವರೆಗೆ ಕೇವಲ ಇಬ್ಬರು ಶಾಸಕರನ್ನು ಮಾತ್ರ ಅನರ್ಹಗೊಳಿಸಿರುವ ಚುನಾವಣಾ ಆಯೋಗ, ಅವರಿಗೆ ಮೂರು ವರ್ಷ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ವಿಧಿಸಿದೆ. ಮಧ್ಯಪ್ರದೇಶದ ಜಲಸಂಪನ್ಮೂಲ ಸಚಿವ ನರೋತ್ತಮ ಮಿಶ್ರಾ ೨೦೦೮ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪೇಯ್ಡ್‌ ನ್ಯೂಸ್‌ ಆರೋಪಕ್ಕೆ ಗುರಿಯಾಗಿದ್ದರು. ಆದರೆ, ಅವರನ್ನು ಅನರ್ಹಗೊಳಿಸಿದ್ದು ೨೦೧೭ರಲ್ಲಿ! ಇದನ್ನು ಪ್ರಶ್ನಿಸಿ ಅವರು ಕೋರ್ಟ್‌ ಮೆಟ್ಟಿಲೇರಿದ್ದಾರೆ. ಆದರೆ, ಮಿಶ್ರಾ ಅವರು ಕಳೆದ ವರ್ಷದ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದ ಹಕ್ಕಿನಿಂದ ವಂಚಿತರಾಗಿದ್ದರು. ಇದಕ್ಕೂ ಮುನ್ನ, ೨೦೧೧ರಲ್ಲಿ ಉತ್ತರ ಪ್ರದೇಶದ ಉಮ್ಲೇಶಾ ಯಾದವ್‌ ಎಂಬ ಶಾಸಕಿಯನ್ನು ಆಯೋಗವು ಪೇಡ್‌ ನ್ಯೂಸ್‌ ಆರೋಪದಲ್ಲಿ ಅನರ್ಹಗೊಳಿಸಿತ್ತು. ಉಮ್ಲೇಶಾ ಅವರ ಶಾಸಕತ್ವದ ಅವಧಿ ನಾಲ್ಕು ತಿಂಗಳು ಬಾಕಿ ಇರುವಾಗ ಆಯೋಗವು ನಿರ್ಧಾರ ಪ್ರಕಟಿಸಿತ್ತು. ರಾಷ್ಟ್ರೀಯ ಪರಿವರ್ತನಾ ದಳದ ಶಾಸಕಿಯಾಗಿದ್ದ ಉಮ್ಲೇಶ ಅವರು ಪೇಡ್‌ ನ್ಯೂಸ್‌ ಪ್ರಕರಣದಡಿ ಅನರ್ಹರಾದ ಮೊದಲ ಜನಪ್ರತಿನಿಧಿಯಾಗಿದ್ದಾರೆ. ಉಮ್ಲೇಶಾ ಅವರ ಕುರಿತು ಪೇಯ್ಡ್‌ ನ್ಯೂಸ್‌ ಪ್ರಕಟಿಸಿದ್ದ ‘ಅಮರ್ ಉಜಾಲ’ ಮತ್ತು ‘ದೈನಿಕ್‌ ಜಾಗರಣ್‌’ ಪತ್ರಿಕೆಗಳಿಗೆ ನೈತಿಕತೆ ಇಟ್ಟುಕೊಂಡು ವ್ಯವಹರಿಸುವಂತೆ ಆಯೋಗ ಸೂಚಿಸಿತ್ತು. ಆದರೆ, ಮಾಧ್ಯಮ ಸಂಸ್ಥೆಗಳು ಯಾವುದೇ ತೆರನಾದ ಸಲಹೆ, ಸೂಚನೆ, ಸ್ವನಿಯಂತ್ರಣಕ್ಕೆ ಕಿವಿಗೊಡುತ್ತಿಲ್ಲ ಎಂಬುದು ಈಚೆಗೆ ನಡೆದ ಚುನಾವಣೆಗಳ ಸಂದರ್ಭದಲ್ಲಿ ದಾಖಲಾದ ಪೇಯ್ಡ್‌ ನ್ಯೂಸ್‌ ಪ್ರಕರಣಗಳ ಮೇಲೆ ಕಣ್ಣೊರಳಿಸಿದರೆ ಸುಲಭವಾಗಿ ಅರ್ಥವಾಗುತ್ತದೆ.

ಇದನ್ನೂ ಓದಿ : ಮೂಗುದಾರ ಹಾಕಿಸಿಕೊಳ್ಳುವ ಮಾಧ್ಯಮಗಳಿಂದ ಹೆಚ್ಚಿದ ಪೇಯ್ಡ್‌ ನ್ಯೂಸ್‌

೨೦೧೦ರಲ್ಲಿ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕೇವಲ ೧೫ ಪೇಯ್ಡ್ ನ್ಯೂಸ್‌ ಪ್ರಕರಣ ಸಾಬೀತಾಗಿದ್ದವು. ೨೦೧೩ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ೯೩ ಪೇಯ್ಡ್‌ ನ್ಯೂಸ್‌ ಪ್ರಕರಣ ದಾಖಲಾಗಿದ್ದು, ಅಷ್ಟೂ ಪ್ರಕರಣ ಸಾಬೀತಾಗಿವೆ. ಅದೇ ವರ್ಷದಲ್ಲಿ ಮಧ್ಯಪ್ರದೇಶದಲ್ಲಿ ೨೭೯ ಅಭ್ಯರ್ಥಿಗಳಿಗೆ ನೋಟಿಸ್‌ ಜಾರಿಗೊಳಿಸಲಾಗಿದ್ದು, ೧೬೫ ಮಂದಿ ಪೇಯ್ಡ್‌ ನ್ಯೂಸ್‌ ಸೇವೆ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ರಾಜಸ್ಥಾನದಲ್ಲಿ ೧೧೦ ಅಭ್ಯರ್ಥಿಗಳಿಗೆ ಆಯೋಗ ನೋಟಿಸ್‌ ನೀಡಿದ್ದು, ೮೧ ಪ್ರಕರಣಗಳಲ್ಲಿ ಅಭ್ಯರ್ಥಿಗಳು ಪೇಯ್ಡ್‌ ನ್ಯೂಸ್‌ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಚತ್ತೀಸಗಢದಲ್ಲಿ ೩೫ ಪ್ರಕರಣ ದಾಖಲಾಗಿದ್ದು, ೩೨ ಸಾಬೀತಾಗಿವೆ. ದೆಹಲಿಯಲ್ಲಿ ೮೦ ಪ್ರಕರಣಗಳ ಪೈಕಿ ೨೫ ಪ್ರಕರಣ ಪೇಯ್ಡ್‌ ನ್ಯೂಸ್‌ ಎಂಬುದನ್ನು ಅಭ್ಯರ್ಥಿಗಳು ಒಪ್ಪಿಕೊಂಡಿದ್ದಾರೆ.

೨೦೧೧ರಲ್ಲಿ ಕೇರಳದಲ್ಲಿ ೬೫ ಪ್ರಕರಣಗಳ ಪೈಕಿ ೬೫ ಪ್ರಕರಣಗಳೂ ಪೇಯ್ಡ್‌ ನ್ಯೂಸ್‌ ಎಂದು ಅಭ್ಯರ್ಥಿಗಳು ಒಪ್ಪಿಕೊಂಡಿದ್ದಾರೆ. ಪುದುಚೆರಿಯಲ್ಲಿ ೩, ಅಸ್ಸಾಂನಲ್ಲಿ ೪೨ರ ಪೈಕಿ ೨೭, ಪಶ್ಚಿಮ ಬಂಗಾಳದಲ್ಲಿ ೧೫ರ ಪೈಕಿ ೮, ತಮಿಳುನಾಡಿನಲ್ಲಿ ೨೨ ಪ್ರಕರಣಗಳು ಪೇಯ್ಡ್‌ ನ್ಯೂಸ್‌ ಎಂಬುದು ಸಾಬೀತಾಗಿದೆ. ೨೦೧೨ರಲ್ಲಿ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಉತ್ತರ ಪ್ರದೇಶದಲ್ಲಿ ೯೭, ಉತ್ತರಾಖಂಡದಲ್ಲಿ ೬೦ ಪ್ರಕರಣಗಳ ಪೈಕಿ ೩೦, ಪಂಜಾಬ್‌ನಲ್ಲಿ ೫೨೩, ಗೋವಾದಲ್ಲಿ ೯, ಗುಜರಾತ್‌ನಲ್ಲಿ ೪೯೫ ಪ್ರಕರಣಗಳ ಪೈಕಿ ೪೧೪, ಹಿಮಾಚಲ ಪ್ರದೇಶದಲ್ಲಿ ೧೯೦ ಪ್ರಕರಣಗಳ ಪೈಕಿ ೧೦೪ ಪ್ರಕರಣಗಳು ಪೇಯ್ಡ್‌ ನ್ಯೂಸ್‌ ಎಂಬುದು ಸಾಬೀತಾಗಿದೆ. ಈಶಾನ್ಯ ರಾಜ್ಯಗಳ ಪೈಕಿ ಮಣಿಪುರ, ತ್ರಿಪುರ, ಮೇಘಾಲಯ, ನಾಗಾಲ್ಯಾಂಡ್‌, ಮಿಜೋರಾಂನಲ್ಲಿ ೨೦೧೦-೨೦೧೩ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಯಾವುದೇ ಪ್ರಕರಣ ದಾಖಲಾದ ಮಾಹಿತಿ ಇಲ್ಲ. ಇದಕ್ಕೆ ಪೂರಕವಾಗಿ ಈಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಓಂಪ್ರಕಾಶ್‌ ರಾವತ್‌, "ನಾನು ಆಯೋಗದಲ್ಲಿ ಕಮಿಷನರ್‌ ಆಗಿ ನೇಮಕವಾದಾಗಿನಿಂದ ಇದುವರೆಗೆ ಸುಮಾರು ೧,೮೦೦ ಪೇಯ್ಡ್‌ ನ್ಯೂಸ್‌ ಪ್ರಕರಣ ಸಾಬೀತಾಗಿವೆ. ಆಯೋಗದ ಮಿತಿಯಲ್ಲಿ ಇಷ್ಟು ಮಾತ್ರ ಪತ್ತೆಹಚ್ಚಲು ಸಾಧ್ಯವಾಗಿದೆ. ಆದರೆ, ಇದರ ವಿಸ್ತಾರವು ಊಹೆಗೆ ನಿಲುಕುವಂಥದ್ದಲ್ಲ,” ಎಂದು ನಿಟ್ಟುಸಿರುಬಿಟ್ಟಿದ್ದು, ಪೇಡ್‌ ನ್ಯೂಸ್‌ ವ್ಯಾಪ್ತಿ ಮತ್ತು ವಿಸ್ತಾರ ಅಗಾಧವಾದದ್ದು ಎಂಬುದನ್ನು ಧ್ವನಿಸುತ್ತಿತ್ತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More