ನುಡಿನಮನ | ತನ್ನದೇ ಆದ ನಾಯಕರಿಂದ ಮಿಂಚುತ್ತಿದೆ ದಕ್ಷಿಣದ ಶೋಷಿತ ಸಮುದಾಯ

ಡಾ.ಬಿ.ಆರ್ ಅಂಬೇಡ್ಕರ್ ದಕ್ಷಿಣ ಭಾರತದ ಬಹುದೊಡ್ಡ ನಾಯಕನಾಗಿದ್ದರೂ ಇಲ್ಲಿನ ತುಳಿತಕ್ಕೊಳಗಾದ ಸಮುದಾಯಗಳು ತಮ್ಮದೇ ಆದ ನಾಯಕರನ್ನು ಮೊದಲಿನಿಂದಲೂ ಹೊಂದಿವೆ ಎನ್ನುತ್ತಾರೆ ಖ್ಯಾತ ದಲಿತ ಚಿಂತಕ ಕಾಂಚ ಐಲಯ್ಯ ಶೆಫರ್ಡ್

ಅಂಬೇಡ್ಕರ್ ಅವರ 127ನೇ ಜನ್ಮದಿನಾಚರಣೆ ಆಚರಿಸುತ್ತಿರುವ ಈ ಹೊತ್ತಿನಲ್ಲಿ ಅವರು ಸಾವನ್ನಪ್ಪಿದ್ದಾರೆ ಮತ್ತು ಬದುಕಿದ್ದಾರೆ ಕೂಡ. ಬದುಕಿದ್ದಾರೆ ಏಕೆಂದರೆ, ಇದೇ ಏಪ್ರಿಲ್ 2ರಂದು ಉತ್ತರ ಭಾರತದಲ್ಲಿ ಬಿಜೆಪಿ ವಿರುದ್ಧ ಬಹುದೊಡ್ಡ ಪ್ರತಿಭಟನೆ ನಡೆಸಿದರು. ಆ ವೇಳೆ 11 ದಲಿತರು ಬೀದಿಯ ಹೆಣವಾದರು. ಆದರೆ ದಕ್ಷಿಣ ಭಾರತದಲ್ಲಿ ಹೀಗಾಗಲಿಲ್ಲ, ಕಾರಣ ಅಲ್ಲಿನ ಸರ್ಕಾರಗಳು ಮತ್ತು ಮೇಲ್ಜಾತಿಗಳು ಸೂಕ್ತವಾಗಿ ಸ್ಪಂದಿಸಿ, ನಾಗರಿಕವಾಗಿ ನಡೆದುಕೊಳ್ಳುವ ಮೂಲಕ ದಲಿತರ ಪ್ರತಿಭಟನೆಗಳು ಹಿಂಸಾತ್ಮಕವಾಗದಂತೆ ನೋಡಿಕೊಂಡವು.

ಐತಿಹಾಸಿಕ ಕಾರಣಗಳಿಗಾಗಿ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಕೇರಳ, ಪಾಂಡಿಚೆರಿ ಸೇರಿದಂತೆ ಆರೂ ರಾಜ್ಯಗಳಲ್ಲಿ ಅಂಬೇಡ್ಕರ್ ತತ್ವ ಮತ್ತು ಸಾಮಾಜಿಕ ಸುಧಾರಣೆಗೆ ವಿಭಿನ್ನವಾದ ಪ್ರತಿಕ್ರಿಯೆ ದೊರೆತಿದೆ. ದಕ್ಷಿಣದಲ್ಲಿ ದೊಡ್ಡ ಮಟ್ಟದಲ್ಲಿ ನಡೆದ ಸಾಮಾಜಿಕ ಸುಧಾರಣೆ ಮತ್ತು ಬ್ರಾಹ್ಮಣ ವಿರೋಧಿ ಆದರ್ಶಗಳು ಅಂಬೇಡ್ಕರ್ ಆಗಮನಕ್ಕೂ ಮೊದಲೇ ಸಾಮಾಜಿಕ ಪ್ರಜ್ಞೆಯ ಭಾಗವಾಗಿದ್ದವು. ಮೈಸೂರು ಒಡೆಯರ ಆಳ್ವಿಕೆ ಮತ್ತು ಮೀಸಲಾತಿಯ ಅನುಷ್ಠಾನವಾಗಲೇಬೇಕೆಂದು ಪಟ್ಟು ಹಿಡಿದ ಪೆರಿಯಾರ್ ಚಳವಳಿಗಳಲ್ಲಿ ಮೀಸಲಾತಿಯ ಆದರ್ಶದ ಬೇರುಗಳು ಹುದುಗಿವೆ. ಈ ತೀವ್ರತೆ ಉತ್ತರ ಭಾರತದಲ್ಲಿ ಎಂದಿಗೂ ಕಂಡುಬರಲಿಲ್ಲ. ಹಾಗೆಂದು ದಕ್ಷಿಣದ ಬ್ರಾಹ್ಮಣರು ಮೀಸಲಾತಿಯನ್ನು ವಿರೋಧಿಸಲಿಲ್ಲ ಎಂದೇನೂ ಅರ್ಥವಲ್ಲ. ಮೀಸಲಾತಿ ಕಾರಣಕ್ಕಾಗಿಯೇ ಬಹುದೊಡ್ಡ ವಿದ್ವಾಂಸ ಮೋಕ್ಷಗೊಂಡಂ ವಿಶ್ವೇಶ್ವರಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಮೈಸೂರು ಒಡೆಯರು ತಲೆ ಕೆಡಿಸಿಕೊಳ್ಳಲಿಲ್ಲ. ಮಹಾರಾಷ್ಟ್ರದಲ್ಲಿ ಶಾಹು ಮಹಾರಾಜರ ಆಳ್ವಿಕೆಯಲ್ಲಿ ಇದೇ ರೀತಿ ಆಯಿತು. ವ್ಯಂಗ್ಯ ಎಂದರೆ ಅಂಬೇಡ್ಕರ್ ಅವರಿಗೆ ಜನ್ಮಕೊಟ್ಟ ನೆಲ ಇಂದು ಕಷ್ಟದಲ್ಲಿದೆ. ಫುಲೆ- ಅಂಬೇಡ್ಕರ್ ವಾದಕ್ಕೆ ಜನ್ಮ ನೀಡಿದ ಸ್ಥಳವೇ ಆರೆಸ್ಸೆಸ್ ಹುಟ್ಟು ನೆಲವೂ ಆಗಿದ್ದು ಅಂಬೇಡ್ಕರ್ ವಾದ ಮತ್ತು ಮೂಲಭೂತ ಹಿಂದೂವಾದ (ಮೂಲಭೂತ ಇಸ್ಲಾಂನಂತೆ) ಅಲ್ಲಿ ಸಮಾನ ಪೈಪೋಟಿ ಒಡ್ಡುತ್ತಿವೆ.

ಇಯಾಂಕಾಳಿಯಿಂದ ಪೆರಿಯಾರ್ ವರೆಗೆ
ಅಂಬೇಡ್ಕರ್ ಅವರು ದಕ್ಷಿಣದಲ್ಲಿ ತುಳಿತಕ್ಕೊಳಗಾದವರ ಬಹುದೊಡ್ಡ ನಾಯಕರಾಗಿದ್ದರೂ ಬಹುಹಿಂದಿನಿಂದಲೇ ಶೋಷಿತ ಸಮುದಾಯದ ಅನೇಕ ನಾಯಕರಿಗೆ ಜನ್ಮಕೊಟ್ಟ ಸ್ಥಳ ಇದು. ಕರ್ನಾಟಕದ ಲಿಂಗಾಯತ ಪ್ರತ್ಯೇಕ ಧರ್ಮ ಚಳವಳಿ, 1956ರಲ್ಲಿ ನವಯಾನ ಬೌದ್ಧಧರ್ಮವನ್ನು ಹುಟ್ಟುಹಾಕಿದ ಅಂಬೇಡ್ಕರ್ ವಾದಕ್ಕೆ ಹತ್ತಿರದಲ್ಲಿದೆ. ಆದರೆ ಬಸವಣ್ಣನವರು (ಲಿಂಗಾಯತ ಧರ್ಮ) ಹಿಂದೂ ಧರ್ಮಕ್ಕಿಂತಲೂ ಬೌದ್ಧ ಅಧ್ಯಾತ್ಮಕ್ಕೆ ಹತ್ತಿರವಾಗಿದ್ದರು.

ನಿಜಾಮರ ಆಳ್ವಿಕೆ ಮತ್ತು ಬ್ರಿಟಿಷರ ಆಳ್ವಿಕೆಯಿಂದ ಪ್ರತ್ಯೇಕವಾಗಿದ್ದ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಬ್ರಾಹ್ಮಣ ವಿರೋಧಿ ಚಳವಳಿ ತುಸು ತಡವಾಗಿ ಆರಂಭವಾಯಿತು. ಈಗ ಇವೆರಡೂ ಅಂಬೇಡ್ಕರ್ ವಾದಕ್ಕೆ ಹದಗೊಂಡಿವೆ. ತೆಲಂಗಾಣ ಪ್ರತ್ಯೇಕ ರಾಜ್ಯವಾಗಬೇಕೆಂದು ನಡೆಸಿದ ಹೋರಾಟದ ವೇಳೆ ಅಂಬೇಡ್ಕರ್ ದೊಡ್ಡಮಟ್ಟದಲ್ಲಿ ಬಿಂಬಿತವಾಗಲು ಕಾರಣ ಅವರ ಸಣ್ಣ ಸಣ್ಣ ರಾಜ್ಯಗಳ ಬಗೆಗಿನ ಕನಸು. ಅಷ್ಟೇ ಅಲ್ಲ ಅವರ ಪ್ರಭಾವ ಹೆಚ್ಚಾಗಲು ಇಲ್ಲಿನ ಬೌದ್ಧ ಚರಿತ್ರೆ ಹೇಳುವ ಅಮರಾವತಿಯೂ ಒಂದು ನೆಪ. ಆಂಧ್ರಪ್ರದೇಶದ ಹೊಸ ರಾಜಧಾನಿ ಬೌದ್ಧಧರ್ಮೀಯ ನಾಗಾರ್ಜುನನ ನೆಲೆ ಮತ್ತು ಬೌದ್ಧರ ಬಹುದೊಡ್ಡ ವಿಹಾರವಾಗಿತ್ತು. ಹೈದರಾಬಾದ್ ನ ಹುಸೇನ್ ಸಾಗರದ ನೀರಿನ ನಡುವೆ ಇರುವ ಬುದ್ಧನ ಬೃಹತ್ ವಿಗ್ರಹ ಮತ್ತು ಅದರ ದಂಡೆಯ ಮೇಲಿರುವ ಅಂಬೇಡ್ಕರ್ ಪುತ್ಥಳಿ ಬುದ್ಧ ಮತ್ತು ಅಂಬೇಡ್ಕರರ ಸಾಂಸ್ಕೃತಿಕ ಸಂಬಂಧದ ಕತೆ ಹೇಳುತ್ತಿವೆ. ಹಾಗೂ ಎರಡೂ ರಾಜ್ಯಗಳು ಅಮರಾವತಿ ಮತ್ತು ಹೈದರಾಬಾದಿನಲ್ಲಿ ಅಂಬೇಡ್ಕರ್ ಅವರ 125 ಅಡಿ ಎತ್ತರದ ಪ್ರತಿಮೆ ಸ್ಥಾಪಿಸುವುದಾಗಿ ಘೋಷಿಸಿವೆ.

ಕೇರಳ ಇಯ್ಯಂಕಾಳಿ (ಅಯ್ಯಂಕಾಳಿ) ಎಂಬ ದಲಿತ ನಾಯಕ ಮತ್ತು ಸಂತ ನಾರಾಯಣ ಗುರುವನ್ನು ಹುಟ್ಟುಹಾಕಿತು. ಆದಿ ಶಂಕರಾಚಾರ್ಯರ ಅದ್ವೈತ ವರ್ಣಧರ್ಮವನ್ನು ತಿರಸ್ಕರಿಸಿದ ಈ ಇಬ್ಬರೂ ಶೋಷಿತ ಪುಲಯ ಮತ್ತು ಈಡವ (ಈಡಿಗ) ಸಮುದಾಯಕ್ಕೆ ಆಧುನಿಕ ಶಿಕ್ಷಣ ಕಲ್ಪಿಸುವ ಹರಿಕಾರರಾದರು. ಕ್ರೈಸ್ತ ಮತ್ತು ಮುಸ್ಲಿಂ ಶಿಕ್ಷಣದ ಬೃಹತ್ ಭಿತ್ತಿಯಲ್ಲಿ ಇದು ಕೇರಳವನ್ನು ದೇಶದಲ್ಲಿಯೇ ಹೆಚ್ಚು ವಿದ್ಯಾವಂತ ರಾಜ್ಯವನ್ನಾಗಿಸಿತು. ಅಂಬೇಡ್ಕರ್ ಆ ಇಬ್ಬರೊಂದಿಗೂ ಉಸಿರಾಡುತ್ತಿದ್ದಾರೆ. ದೇಶದ ಮೊದಲ ರಾಷ್ಟ್ರಪತಿಯಾಗಿ ಕೆ. ಆರ್. ನಾರಾಯಣನ್ ಹಾಗೂ ಸುಪ್ರೀಂಕೋರ್ಟಿನ ಮೊದಲ ದಲಿತ ಮುಖ್ಯ ನ್ಯಾಯಮೂರ್ತಿಯಾಗಿ ಕೆ.ಜಿ. ಬಾಲಕೃಷ್ಣನ್ ಅವತರಿಸಿದ್ದು ದಲಿತ ಶಿಕ್ಷಣ ಬಹುಬೇಗ ಪ್ರವರ್ಧಮಾನಕ್ಕೆ ಬಂದ ಈ ನೆಲದಿಂದಲೇ.

ಇಯೋತಿ ಥಸ್ಸಾರ್ (ಬೌದ್ಧ) ಹಾಗೂ ಪೆರಿಯಾರ್ ಅವರಿಗೆ ತಮಿಳುನಾಡು ಜನ್ಮ ನೀಡಿತು. ಪೆರಿಯಾರ್ ನಿರೀಶ್ವರವಾದಿಯಾಗಿದ್ದರೂ ಅವರ ಬ್ರಾಹ್ಮಣ ವಿರೋಧಿ ಮತ್ತು ಹಿಂದೂ ವಿರೋಧಿ ಹೋರಾಟಗಳು ಅಂಬೇಡ್ಕರ್ ಹೋರಾಟದ ಜೊತೆಜೊತೆಯಲ್ಲೇ ಸಾಗಿದವು. ದುರದೃಷ್ಟವಶಾತ್ ಅಂಬೇಡ್ಕರ್ ಚಿಂತನೆಗಳು ಅವರ ಬರಹದ ಮೂಲಕ ಅನುಯಾಯಿಗಳಿಗೆ ಸಿಕ್ಕಂತೆ ಪೆರಿಯಾರರ ಚಿಂತನೆಗಳು ಸಿಗಲಿಲ್ಲ.

ಉತ್ತರ- ದಕ್ಷಿಣ ಕೊಲ್ಲಿ
ತಮ್ಮ ಗ್ರಂಥಗಳು, ಅನುಯಾಯಿಗಳ ಭಾಷಣ ಹಾಗೂ ಭಾರಿ ಸಂಖ್ಯೆಯಲ್ಲಿ ಸ್ಥಾಪಿಸಲಾಗಿರುವ ಪ್ರತಿಮೆಗಳ (ಅನಕ್ಷರಸ್ಥರಿಗೆ ಇದರಿಂದ ಉಪಯೋಗ) ಮೂಲಕ ಅಂಬೇಡ್ಕರರ ಆದರ್ಶಗಳನ್ನು ಗುರುತರ ರೀತಿಯಲ್ಲಿ ಪಸರಿಸಲಾಗುತ್ತಿದೆ. ದೇಶದ ಉಳಿದ ರಾಷ್ಟ್ರೀಯ ನಾಯಕರಿಗೆ ಹೋಲಿಸಿದರೆ ದಕ್ಷಿಣದ ರಾಜ್ಯಗಳಲ್ಲಿ ಅಂಬೇಡ್ಕರರ ಅತಿ ಹೆಚ್ಚು ಲೇಖನಗಳು ಅನುವಾದಗೊಂಡು ಚರ್ಚೆಗೆ ಒಳಗಾಗಿರುವುದರಿಂದ ಅವರ ವರ್ಚಸ್ಸು ಎಲ್ಲ ಬೌದ್ಧಿಕ ಶಿಸ್ತಿನೊಳಗೂ ಹಾಸುಹೊಕ್ಕಾಗಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನೂ ಹಿಂದಿಕ್ಕಿ ದಕ್ಷಿಣದಲ್ಲಿ ಅಂಬೇಡ್ಕರ್ ಪ್ರಚಲಿತದಲ್ಲಿದ್ದಾರೆ.

ಮೇಲ್ನೋಟಕ್ಕೆ ಉತ್ತರಕ್ಕಿಂತಲೂ ದಕ್ಷಿಣದಲ್ಲಿ ಜಾತಿಗಳ ನಡುವಿನ ಸಾಮಾಜಿಕ ಸಂಬಂಧಗಳು ಉತ್ತಮವಾಗಿವೆ. ಅಲ್ಲಿಗಿಂತಲೂ ಇಲ್ಲಿ ವೇಗವಾಗಿ ಅಸ್ಪೃಶ್ಯತೆ ಕ್ಷೀಣಿಸುತ್ತಿದೆ. ಆರ್ಥಿಕ ಪ್ರಗತಿಯಲ್ಲಿಯೂ ದಕ್ಷಿಣ ಮುಂದಿದೆ. ಆರ್ಥಿಕ ಪ್ರಗತಿ ಅಂಬೇಡ್ಕರರ ಒಂದು ಆದರ್ಶವಾಗಿತ್ತು. ಆದರೆ ಆಧ್ಯಾತ್ಮಿಕ ಅಸಮಾನತೆ ಹಾಗೂ ಅಂತರ್ಜಾತಿ ಮದುವೆಗೆ ವಿರೋಧದಂತಹ ವಿಚಾರಗಳು ದಕ್ಷಿಣದಲ್ಲಿಯೂ ಸಮಸ್ಯೆಯಾಗಿ ಉಳಿದಿವೆ.

ದಕ್ಷಿಣದವರು ಸಂಘಪರಿವಾರ ಅಧಿಕಾರ ಹಿಡಿಯುವುದನ್ನು ತಡೆಯುತ್ತಲೇ ಬಂದಿದ್ದು ತಮ್ಮ ಆರ್ಥಿಕತೆ ಮತ್ತು ಸಾಮಾಜಿಕ ಸಂಬಂಧಗಳು ಸ್ವಾತಂತ್ರ್ಯ ಪೂರ್ವದಲ್ಲಿದ್ದಂತೆಯೇ ಇರುವಂತೆ ನೋಡಿಕೊಳ್ಳುತ್ತಿದ್ದಾರೆ. ಆರೆಸ್ಸೆಸ್- ಬಿಜೆಪಿ ಸಮರ್ಥಿಸುವಂಥ ಮೂಲಭೂತವಾದಿ ಹಿಂದುತ್ವವನ್ನು ತಿರಸ್ಕರಿಸುತ್ತಿರುವ ಶಕ್ತಿಗಳು ಉತ್ತರ ಮತ್ತು ಪಶ್ಚಿಮ ಭಾರತಕ್ಕೆ ವಿರುದ್ಧವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ರೀತಿಯ ಉತ್ಪಾದಕ ಜಾತಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿವೆ.

ಈಗಿನ ರಾಜಕಾರಣ…
ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ಆರೆಸ್ಸೆಸ್- ಬಿಜೆಪಿಗೆ ಭರವಸೆಯ ತಾಣಗಳು. 2013ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದಕ್ಷಿಣದಲ್ಲಿ ತಮ್ಮ ನೆಲೆ ವಿಸ್ತರಿಸಲು ವೇದಿಕೆ ದೊರೆಯಿತು ಎಂದು ಹಿಂದೂ ಮೂಲಭೂತವಾದಿಗಳು ಭಾವಿಸಿದರು. ಮೇ ವೇಳೆಗೆ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದ್ದು ಮೋದಿ ಶಕ್ತಿಯನ್ನು ಸಿದ್ದರಾಮಯ್ಯ ನಾಯಕತ್ವದಲ್ಲಿ ತಡೆದರೆ ಮಾತ್ರ ದಕ್ಷಿಣದ ಉದಾರವಾದ ಹಾಗೂ ಅಂಬೇಡ್ಕರ್ ವಾದ ಸುರಕ್ಷಿತವಾಗಿರಬಲ್ಲದು. ಕನ್ನಡದ ಹಿಂದಿ ವಿರೋಧಿ ಚಳವಳಿ, ಪ್ರತ್ಯೇಕ ನಾಡಧ್ವಜ ಹಾಗೂ ಲಿಂಗಾಯತ ಚಳವಳಿಗಳು ಉತ್ತಮ ಸೈದ್ಧಾಂತಿಕ ರಕ್ಷಣೆ ಒದಗಿಸುತ್ತಿವೆ.

ಇದನ್ನೂ ಓದಿ : ಅಂಬೇಡ್ಕರ್ ಮತ್ತು ಸಂವಿಧಾನದ ಮೇಲೆ ನನಗೆ ಅಪಾರ ಗೌರವವಿದೆ ಎಂದ ಹಾರ್ದಿಕ್

ಪಾಕಿಸ್ತಾನ, ಸಿರಿಯಾ ಹಾಗೂ ಇರಾಕಿನ ಮೂಲಭೂತವಾದಿ ಮುಸ್ಲಿಮರಂತೆ ವಿಸ್ತರಿಸುತ್ತಿರುವ ಹಿಂದೂ ಮೂಲಭೂತವಾದಿಗಳನ್ನು ತಡೆಯಲು ಎಡಪಂಥೀಯರು ಹಾಗೂ ಅಂಬೇಡ್ಕರ್ ವಾದಿಗಳು ಒಂದಾದರೆ ಮಾತ್ರ ಸಾಧ್ಯ ಎಂದು ತೆಲಂಗಾಣದಲ್ಲಿ ಅಂಬೇಡ್ಕರ್ ವಾದಿಗಳು ಎಡಪಕ್ಷ ಸಿಪಿಎಂನ ಮನವೊಲಿಸಿದ್ದಾರೆ. ಯಾವುದೇ ಉಗ್ರ ಧಾರ್ಮಿಕ ಹಾಗೂ ರಾಜಕೀಯ ವ್ಯವಸ್ಥೆ, ಪ್ರಜಾಸತ್ತಾತ್ಮಕ ಸಂವಿಧಾನವಾದವನ್ನು ಉಳಿಯಗೊಡುವುದಿಲ್ಲ. ತೆಲಂಗಾಣದಲ್ಲಿ ಅಂಬೇಡ್ಕರ್ ವಾದಿಗಳು ಹಾಗೂ ಫುಲೆವಾದಿಗಳನ್ನು ಒಳಗೊಂಡ ಸಿಪಿಎಂ, ಬಹುಜನ ಎಡರಂಗವನ್ನು(ಬಿಎಲ್ ಎಫ್) ಸ್ಥಾಪಿಸಿದ್ದು 2019ರ ಚುನಾವಣೆಯಲ್ಲಿ ಸಾಮಾಜಿಕ ನ್ಯಾಯದ ಆಶಯ ಹೊತ್ತು ಎಲ್ಲಾ 119 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ. ಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೈದರಾಬಾದ್ ಹಾಗೂ ನಾಗ್ಪುರದಲ್ಲಿ ಸ್ವತಃ ‘ನೀಲ್ ಲಾಲ್ ಏಕತೆ ಜಿಂದಾಬಾದ್’ ಘೋಷಣೆ ಮೊಳಗಿಸಿದ್ದಾರೆ. ಇದು ಸಿಪಿಎಂ ಆಡಳಿತವಿರುವ ಕೇರಳಕ್ಕೂ ಪಸರಿಸಿದರೆ ದೇಶದಲ್ಲಿ ಗುರುತರ ಬದಲಾವಣೆ ಉಂಟಾಗಬಹುದು.

ತಮ್ಮೊಳಗಿನ ಸಾಂಸ್ಕೃತಿಕ ರೂಪಾಂತರದಿಂದಾಗಿ ಕೇರಳ ಮತ್ತು ತಮಿಳುನಾಡು ರಾಜ್ಯಗಳು ಸುರಕ್ಷಿತವಾಗಿರುವಂತೆ ತೋರುತ್ತಿದ್ದು ಮನುವಾದಿ ಪಡೆಗಳಿಗೆ ಅವಕಾಶ ನೀಡುತ್ತಿಲ್ಲ. ಆದರೆ 2019ರ ನಂತರವೂ ಕೇಂದ್ರದಲ್ಲಿ ಬಿಜೆಪಿ ಮುಂದುವರಿದರೆ ಅಂಬೇಡ್ಕರ್ ಸುಟ್ಟುಹಾಕಿದ ಮನುಧರ್ಮದಲ್ಲಿ ನಂಬಿಕೆ ಇರಿಸಿರುವ ಕೇಸರಿ ಪಕ್ಷ, ಉತ್ತರ ಮತ್ತು ದಕ್ಷಿಣದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳು ಅಷ್ಟೇ ಏಕೆ ಸಂವಿಧಾನಕ್ಕೂ ಮಾರಕವಾಗಿ ಪರಿಣಮಿಸುವ ಭೀತಿ ಎದುರಾಗಿದೆ.

(ಕಾಂಚಾ ಐಲಯ್ಯ ಶೆಫರ್ಡ್ ಪ್ರಸಿದ್ಧ ಲೇಖಕರು ಹಾಗೂ ತೆಲಂಗಾಣದ ಸಾಮಾಜಿಕ ನ್ಯಾಯ ಮತ್ತು ಪ್ರಗತಿಪರ ಶಕ್ತಿಗಳನ್ನು ಒಗ್ಗೂಡಿಸುವಲ್ಲಿ ಶ್ರಮಿಸುತ್ತಿರುವ ಟಿ-ಮಾಸ್ ಸಂಘಟನೆಯ ಅಧ್ಯಕ್ಷರು)

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More