ನುಡಿನಮನ | ದಲಿತ ಆಕ್ರೋಶದ ಹಿಂದಿನ ಭ್ರಮನಿರಸನ ಮತ್ತು ಅಪನಂಬಿಕೆ

ಎಸ್‍ಸಿ-ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆ ಕುರಿತ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಏ.2ನೇ ತಾರೀಖು ದಲಿತರು ನಡೆಸಿದ ಪ್ರತಿಭಟನೆಗಳು ಹಿಂದಿ ಭಾಷಿಕ ರಾಜ್ಯಗಳಲ್ಲಿ ದಲಿತ-ಬಹುಜನ ಚಳವಳಿ ಪಡೆದಿರುವ ತಿರುವನ್ನು ಸೂಚಿಸುತ್ತದೆ. ದಲಿತರ ಈ ಆಕ್ರೋಶದ ಕುರಿತ ಅವಲೋಕನ ಇಲ್ಲಿದೆ

ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ತಡೆ) ಕಾಯ್ದೆಯ ಬಗ್ಗೆ ಇತ್ತೀಚೆಗೆ ಸುಪ್ರೀಂ ಕೋರ್ಟು ನೀಡಿದ ತೀರ್ಪನ್ನು ವಿರೋಧಿಸಿ ಸುಮಾರು 100 ದಲಿತ ಸಂಘಟನೆಗಳು 2018ರ ಏ.2ರಂದು ಭಾರತ್ ಬಂದ್‍ಗೆ ಕರೆ ನೀಡಿದ್ದವು. ಇದಕ್ಕೆ ಪ್ರತಿಸ್ಪಂದನೆಯಾಗಿ ಉತ್ತರ ಭಾರತದ ಅನೇಕ ಕಡೆಗಳಲ್ಲಿ ದಲಿತ ಜನಸಮುದಾಯಗಳು ಗೌರವಾನ್ವಿತ ಸುಪ್ರೀಂ ಕೋರ್ಟಿನ ತೀರ್ಪಗೆ ವಿರುದ್ಧವಾಗಿ ತಮ್ಮ ಪ್ರತಿರೋಧ ವ್ಯಕ್ತಪಡಿಸಿದವು. ಈ ಬಂದ್ ಮೂಲಕ ದಲಿತ ಸಂಘಟನೆಗಳು ತಮ್ಮ ಶಕ್ತಿ ಮತ್ತು ಐಕ್ಯತೆ ಪ್ರದರ್ಶಿಸಿದವು. ಪ್ರತಿಭಟನಾಕಾರರ ಆಕ್ರೋಶದ ಭೀತಿಯಿಂದ ಅಂಗಡಿ ಮುಂಗಟ್ಟುಗಳು, ಶಾಲೆಗಳು ಹಾಗೂ ಇನ್ನಿತರ ಅನೇಕ ಸಾರ್ವಜನಿಕ ಸಂಸ್ಥೆಗಳು ಅನಿವಾರ್ಯವಾಗಿ ಬಾಗಿಲು ಮುಚ್ಚಬೇಕಾಯಿತು.

ಉತ್ತರ ಭಾರತಾದ್ಯಂತ ಅನೇಕ ಸ್ಥಳಗಳಲ್ಲಿ ಹಿಂಸಾತ್ಮಕ ಘಟನೆಗಳು ನಡೆದದ್ದು ವರದಿಯಾಯಿತು. ಕೈಮೀರಿ ಹೋಗುತ್ತಿದ್ದ ಪರಿಸ್ಥಿತಿಯನ್ನು ನಿಯಂತ್ರಿಸಲಾಗದೆ ಪೊಲೀಸರೂ ಅನೇಕ ಕಡೆ ಅಸಹಾಯಕತೆ ಪ್ರದರ್ಶಿಸಿದರು. ಪ್ರತಿಭಟನೆಗಳು ಇಷ್ಟೊಂದು ತೀವ್ರ ಸ್ವರೂಪ ಪಡೆಯುತ್ತವೆ, ಪರಿಸ್ಥಿತಿ ಈ ಮಟ್ಟಕ್ಕೆ ಬಿಗಡಾಯಿಸುತ್ತದೆ ಎಂಬುದನ್ನು ಪ್ರಾಯಶಃ ಪೊಲೀಸರು ಮತ್ತು ಆಡಳಿತಾಂಗ ಅಂದಾಜಿಸಿರಲಿಲ್ಲ ಎಂದು ತೋರುತ್ತದೆ.

ವಿವಿಧ ದಲಿತ ಸಮುದಾಯಗಳು ಈ ರಾಜಕೀಯ ವ್ಯವಸ್ಥೆಯ ಬಗ್ಗೆ, ಸರ್ಕಾರದ ಬಗ್ಗೆ ವಿಶ್ವಾಸ ಕಳೆದುಕೊಂಡು ಭ್ರಮನಿರಸನಗೊಂಡಿರುವುದನ್ನು ಈ ಚಳವಳಿಯು ಸಂಕೇತಿಸುತ್ತದೆ ಎಂದು ಹಲವು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಕೆಲವು ದಲಿತ ಸಮುದಾಯಗಳು ಈ ಕಲ್ಯಾಣರಾಜ್ಯ ಅಥವಾ ಸರ್ಕಾರಿ ವ್ಯವಸ್ಥೆಯ ಬಗ್ಗೆ ಅನುಮಾನಗೊಂಡಿರುವುದರನ್ನು ಮತ್ತು ಆಕ್ರೋಶಗೊಂಡಿರುವುದನ್ನು ಸಹ ಈ ಪ್ರತಿಭಟನೆಗಳು ಸೂಚಿಸುತ್ತವೆ. ದಲಿತ ಸಮುದಾಯಗಳಿಗೀಗ ನಂಬಿಕೆ ಹೊರಟುಹೋಗಿದೆ. ತಮ್ಮ ಕಲ್ಯಾಣಕ್ಕಾಗಿ ನೀಡಲಾಗುತ್ತಿರುವ ಸೌಲಭ್ಯಗಳನ್ನು, ತಮ್ಮ ಅಭಿವೃದ್ಧಿಗಾಗಿ ಜಾರಿಗೆ ತಂದಿರುವ ನೀತಿಗಳನ್ನು ಕೆಲವು ಸಮಯದ ನಂತರ ಕಡಿಮೆ ಮಾಡಬಹುದು ಎಂಬ ಆಲೋಚನೆ ಅವರಲ್ಲಿ ಒಂದು ರೀತಿಯ ಆತಂಕ ಮತ್ತು ಅನುಮಾನಗಳನ್ನು ಹುಟ್ಟಿಸಿದೆ.

ಏ.2ರ ಚಳವಳಿಯಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡವರೆಂದರೆ ಮಧ್ಯಮ ಮತ್ತು ಉನ್ನತ ದಲಿತ ವರ್ಗಗಳು, ದಲಿತ ಸಮುದಾಯದ ಯುವಜನತೆ, ಶಿಕ್ಷಿತ ದಲಿತ ಸಮುದಾಯ ಮತ್ತು ದಲಿತ ಸರ್ಕಾರಿ ನೌಕರರು. ಈ ಚಳವಳಿಯ ಒಂದು ವಿಶೇಷತೆ ಏನೆಂದರೆ, ಅದೊಂದು ಸ್ವಯಂಪ್ರೇರಿತ ಆಂದೋಲನವಾಗಿತ್ತೇ ಹೊರತು ಅದಕ್ಕೆ ಯಾವುದೇ ಒಂದು ಸಂಘಟನೆ ಅಥವಾ ಒಬ್ಬ ನಾಯಕ ನೇತೃತ್ವ ವಹಿಸಿರಲಿಲ್ಲ. ಹಿಂದೆಲ್ಲ ಈ ರೀತಿಯ ಚಳವಳಿಗಳು ಸಾಂಪ್ರದಾಯಿಕ ಶೈಲಿಯ ನಾಯಕತ್ವದೊಂದಿಗೆ ಸಮೂಹ ಚಳವಳಿಗಳ ಸ್ವರೂಪ ಪಡೆದಿರುತ್ತಿದ್ದವು. ಆದರೆ, ಈ ವಿಷಯದಲ್ಲಿ ಆಮೂಲಾಗ್ರ ಬದಲಾವಣೆಯಾಗಿರುವುದನ್ನು ನಾವು ಈ ಚಳವಳಿಯಲ್ಲಿ ಕಾಣಬಹುದು. ಇದು ಕಾನ್ಷಿರಾಮ್ ಮತ್ತು ಮಾಯಾವತಿ ನೇತೃತ್ವದ ದಲಿತ-ಬಹುಜನ ಚಳವಳಿಯ ಸ್ವಭಾವದಲ್ಲಿ ಉಂಟಾದ ಬದಲಾವಣೆ ಅಥವಾ ತಿರುವು ಎಂದು ಪರಿಗಣಸಬಹುದು.

ಏ.2ರ ಚಳವಳಿಗಿಂತ ಮುಂಚೆ, ಬಹುಜನ ಸಮಾಜ ಪಕ್ಷದ (ಬಿಎಸ್‍ಪಿ) ನೇತೃತ್ವದಲ್ಲಿದ್ದ ಬಹುತೇಕ ದಲಿತ-ದಲಿತ ಬಹುಜನ ಚಳವಳಿಗಳನ್ನು ಕಾನ್ಸಿರಾಮ್ ಮತ್ತು ಮಾಯಾವತಿಯವರೇ ಬಹಳವಾಗಿ ನಿಯಂತ್ರಿಸುತ್ತಿದ್ದರು. ಉತ್ತರ ಪ್ರದೇಶ ಮತ್ತು ಇನ್ನಿತರ ಹಿಂದಿ ಪಟ್ಟಿಯ ರಾಜ್ಯಗಳಲ್ಲಿ ಮುನ್ನಡೆಯುತ್ತಿದ್ದ ಈ ಕಾನ್ಷಿರಾಮ್-ಮಾಯಾವತಿ ನೇತೃತ್ವದ ದಲಿತ-ಬಹುಜನ ಚಳವಳಿಗಳ ಇನ್ನೊಂದು ಮುಖ್ಯವಾದ ಗುಣಲಕ್ಷಣ ಏನೆಂದರೆ, ಅವು ಯಾವಾಗಲೂ ಅಹಿಂಸಾತ್ಮಕವಾಗಿಯೇ ಇದ್ದುದು. ಏ.೨ರಂದು ದಿನವಿಡೀ ನಡೆದ ಬಂದ್ ಸಮಯದಲ್ಲಿ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸುವಾಗ ಉಂಟಾದ ಹಿಂಸಾಚಾರವನ್ನು ಮಾಯಾವತಿಯವರು ತಮ್ಮ ಹೇಳಿಕೆಯೊಂದರಲ್ಲಿ ವಿಮರ್ಶಿಸಿದ್ದಾರೆ.

ಭಾರತ್ ಬಂದ್ ಸಮಯದಲ್ಲಿ ದಲಿತರನ್ನು ಒಂದೆಡೆ ಸೇರಿಸುವಲ್ಲಿ ಫೇಸ್ಬುಕ್ ಮತ್ತು ಟ್ವಿಟರ್‌ಗಳಂತಹ ಸಾಮಾಜಿಕ ಜಾಲತಾಣಗಳು ಬಹುಮುಖ್ಯ ಪಾತ್ರ ನಿರ್ವಹಿಸಿದವು. ಸಾಮಾಜಿಕ ಜಾಲತಾಣವು ಈ ವಿಷಯದ ಮೇಲೆ ಜನರನ್ನು ಒಂದೆಡೆ ಸೇರಿಸುವಲ್ಲಿ ಬಹಳ ಕೆಲಸ ಮಾಡಿತು. ಅವರೆಲ್ಲ ನಾಲ್ಕು ರಸ್ತೆಗಳು ಕೂಡುವ ಕಡೆಯಲ್ಲಿ, ಬಜಾರುಗಳಲ್ಲಿ, ಉದ್ಯಾನವನಗಳಲ್ಲಿ ಹಾಗೂ ಸರ್ಕಾರಿ ಕಚೇರಿಗಳ ಮುಂದೆ ನೆರೆದು ಪ್ರತಿಭಟಿಸಿದರು.

ಸಣ್ಣ-ಸಣ್ಣ ಅಂಬೇಡ್ಕರ್‌ವಾದಿ ಮತ್ತು ದಲಿತ ಸಂಘಟನೆಗಳು ಈ ಚಳವಳಿಯ ಸಂಘಟನಾತ್ಮಕ ಸಂರಚನೆಯಲ್ಲಿ ತಳಮಟ್ಟದಲ್ಲಿ ಕೋಶಕೇಂದ್ರಗಳಂತೆ ಕಾರ್ಯನಿರ್ವಹಿಸಿದವು. ಉತ್ತರ ಪ್ರದೇಶದ ಬಹುಮುಖ್ಯ ನಗರಗಳಲ್ಲೊಂದಾದ ಅಲಹಾಬಾದ್‍ನಲ್ಲಿ ಸುಮಾರು 25 ದಲಿತ ಸಂಘಟನೆಗಳು ಈ ಪ್ರತಿಭಟನೆಗಾಗಿ ಒಗ್ಗೂಡಿ ಕಾರ್ಯನಿರ್ವಹಿಸಿದವು. ಈ ಪ್ರತಿಭಟನೆಗಳ ಸಮಯದಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದ ಹಲವು ಸಂಘಟನೆಗಳ ಹೆಸರನ್ನು ಅಲ್ಲಿತನಕ ಯಾರೂ ಕೇಳಿಯೂ ಇರಲಿಲ್ಲ. ಅದೇ ರೀತಿಯಲ್ಲಿ ಇನ್ನಿತರ ನಗರ, ಪಟ್ಟಣಗಳಲ್ಲೂ ಹಲವು ಸ್ಥಳೀಯ ದಲಿತ ಸಂಘಟನೆಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದವು.

ಇದನ್ನೂ ಓದಿ : ನುಡಿನಮನ | ಅಂಬೇಡ್ಕರ್ ಚಿಂತನೆಗಳು ದಲಿತರನ್ನು ಪ್ರತಿನಿಧಿಸುವ ದನಿಯಷ್ಟೇ ಅಲ್ಲ

ನಿಜ ಹೇಳಬೇಕೆಂದರೆ, ಭಾರತ ಸ್ವಾತಂತ್ರ್ಯದ 70 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ರಿಯಾಶೀಲವಾದ ಮತ್ತು ರಾಜಕೀಯವಾಗಿ ಪ್ರಬುದ್ಧವಾದ ಅಂಬೇಡ್ಕರ್‍ವಾದಿ ಸಾರ್ವಜನಿಕ ಶಕ್ತಿಯೊಂದು ನಿಧಾನವಾಗಿ ವಿಕಾಸಹೊಂದಿ ಹರಡುತ್ತಿದೆ. ದೇಶಾದ್ಯಂತ ಜನಸಮುದಾಯಗಳಲ್ಲಿ ಅಂಬೇಡ್ಕರ್ ಸಿದ್ಧಾಂತವನ್ನು ಹರಡುತ್ತಿರುವ ನಾಗರಿಕ ಸಮಾಜದ ಅನೇಕ ಸಣ್ಣದೊಡ್ಡ ಸಾಮಾಜಿಕ, ಸಾಂಸ್ಕೃತಿಕ ಮತ್ತು ದಲಿತ ಸಂಘಟನೆಗಳನ್ನು ಈ ಶಕ್ತಿ ಒಳಗೊಂಡಿದೆ. ಅವರೆಲ್ಲ ಈ ಚಳವಳಿಯನ್ನು ತಮ್ಮದೇ ಹೋರಾಟವೆಂದು ಪರಿಭಾವಿಸಿದ್ದಾರೆ; ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ತಮಗೆ ಕೊಟ್ಟಿರುವ ಹಕ್ಕುಗಳಿಗಾಗಿ ಗಟ್ಟಿಯಾಗಿ ಒತ್ತಾಯ ಮಾಡುವ ಪ್ರಬುದ್ಧತೆ ಬೆಳೆಸಿಕೊಂಡಿದ್ದಾರೆ. ದಲಿತ ಸಮುದಾಯಗಳಲ್ಲಿ ಅಭಿಪ್ರಾಯ ಮೂಡಿಸುವ ಕೆಲಸದಲ್ಲಿ ನಿರತರಾಗಿರುವ ದಲಿತ ಮಧ್ಯಮ ವರ್ಗ, ಸರ್ಕಾರಿ ನೌಕರರು, ಸಮುದಾಯಗಳ ನಾಯಕರು ಮತ್ತು ನಾಗರಿಕ ಸಮಾಜದ ಕಾರ್ಯಕರ್ತರು ಈ ಚಳವಳಿಗೆ ನಾಯಕತ್ವ ನೀಡುತ್ತಿದ್ದಾರೆ.

ಹೊಸ ಅಲೆಗಳು

ಇಲ್ಲಿ ಗಮನಿಸಬೇಕಾದ ಒಂದು ಕುತೂಹಲಕಾರಿ ಅಂಶ ಏನೆಂದರೆ, ಏ.2ರ ಚಳವಳಿಯು ಪ್ರಧಾನವಾಗಿ ಉತ್ತರ ಭಾರತದ ಹಿಂದಿ ಭಾಷಿಕ ರಾಜ್ಯಗಳ ನಗರಗಳಲ್ಲಿ, ಪಟ್ಟಣಗಳಲ್ಲಿ, ಕಸಬಾಗಳಲ್ಲಿ ಹಾಗೂ ಇತರ ಸ್ಥಳೀಯ ಬಜಾರುಗಳಲ್ಲಿ ಕೇಂದ್ರೀಕರಣಗೊಂಡಿತ್ತು. ಅದು ಹಳ್ಳಿಗಳಿಗೆ ಮತ್ತು ಗ್ರಾಮೀಣ ಪ್ರದೇಶದ ಇತರ ಭಾಗಗಳಿಗೆ ಹರಡುವುದಕ್ಕೆ ಸಾಧ್ಯವಾಗಲಿಲ್ಲ.

ಉತ್ತರ ಪ್ರದೇಶದ ಸಮಾಜವಾದಿ ಪಕ್ಷವನ್ನೂ ಒಳಗೊಂಡಂತೆ ಅನೇಕ ರಾಜಕೀಯ ಸಂಘಟನೆಗಳೂ ಈ ಚಳವಳಿಯ ಬೆಂಬಲಕ್ಕೆ ನಿಂತವು. ಇದು ಹಿಂದೆಂದೂ ಆಗಿರದಂತಹ ಅನನ್ಯ ಬೆಳವಣಿಗೆ ಎನ್ನಬಹುದು. ವಾಸ್ತವದಲ್ಲಿ, ಮಾಯಾವತಿ ನೇತೃತ್ವದ ಬಿಎಸ್‍ಪಿ ಸರ್ಕಾರದ ಆಡಳಿತಾವಧಿಯಲ್ಲಿ ಎಸ್ಸಿ-ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆಯ ದುರುಪಯೋಗದಿಂದ ದಲಿತೇತರ ಸಮುದಾಯಗಳು ಅನುಭವಿಸಿದ ಕಿರಿಕಿರಿಗಳು 2012ರ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷಕ್ಕೆ ಲಾಭ ಮಾಡಿಕೊಟ್ಟವು ಎಂದು ಹೇಳಲಾಗುತ್ತದೆ. ಈಗ ಅದೇ ಎಸ್ಸಿ-ಎಸ್‍ಟಿ ಕಾಯ್ದೆಯ ದುರುಪಯೋಗವನ್ನು ತಡೆಯುವುದಕ್ಕಾಗಿ ಸುಪ್ರೀಂ ಕೋರ್ಟು ನೀಡಿದ ತೀರ್ಪಿನ ವಿರುದ್ಧ ದಲಿತರು ಬೀದಿಗಿಳಿದಾಗ ಅದೇ ಸಮಾಜವಾದಿ ಪಕ್ಷವು ಅವರ ಬೆಂಬಲಕ್ಕೆ ಬಹಿರಂಗವಾಗಿ ನಿಂತಿತು. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಮತ್ತು ಎಡ ಪಕ್ಷಗಳೂ ಕೂಡ ಈ ಚಳವಳಿಗೆ ಬಹಿರಂಗವಾಗಿ ಬೆಂಬಲಿಸಿದವು. ಬಿಹಾರದ ರಾಷ್ಟ್ರೀಯ ಜನತಾದಳದ ರೀತಿಯಲ್ಲಿ ಅನೇಕ ಪ್ರಾದೇಶಿಕ ಪಕ್ಷಗಳೂ ಈ ಚಳವಳಿಗೆ ತಮ್ಮ ಬೆಂಬಲ ಸೂಚಿಸಿದವು. ಹೀಗಾಗಿ, ಈ ಚಳವಳಿಯು ವಿವಿಧ ಬಣ್ಣಗಳ ಬಾವುಟಗಳನ್ನು ತನ್ನೊಳಗೆ ವಿಲೀನಗೊಳಿಸಿಕೊಂಡು ಭಾರತೀಯ ಜನತಾ ಪಕ್ಷದ (ಬಿಜೆಪಿ) ಸರ್ಕಾರದ ವಿರುದ್ಧ ತಿರುಗಿಬಿದ್ದಿತ್ತು.

ಬಿಜೆಪಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‍ಎಸ್) ಮತ್ತು ಅದರ ವಿವಿಧ ಸಹಭಾಗಿ ಸಂಘಟನೆಗಳು ಈ ವಿಷಯಕ್ಕೆ ಮತ್ತು ಈ ಚಳವಳಿಗೆ ಹೇಗೆ ಪ್ರತಿಸ್ಪಂದಿಸಬೇಕು ಎಂಬ ಗೊಂದಲಕ್ಕೆ ಬಿದ್ದವು. ಉದಿತ್ ರಾಜ್, ಸಾವಿತ್ರಿಬಾಯಿ ಫುಲೆ ಮತ್ತು ಅಶೋಕ್ ಕುಮಾರ್ ದೊರೆ ರೀತಿಯ ಬಿಜೆಪಿಯಲ್ಲಿನ ದಲಿತ ಸಂಸದರು ಈ ವಿಷಯದಲ್ಲಿ ರಾಜ್ಯ ಸರ್ಕಾರ ತೋರಿದ ಅಸಡ್ಡೆಯ ವಿರುದ್ಧ ತಮ್ಮ ದನಿ ಎತ್ತಿದರು. ದುರದೃಷ್ಟವಶಾತ್ ಇದರಿಂದ ಬಿಜೆಪಿಗೆ ಮತ್ತಷ್ಟು ಮುಜುಗರದ ಸನ್ನಿವೇಶ ಸೃಷ್ಟಿಯಾಯಿತು.

ಆದರೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಂಬೇಡ್ಕರ್ ಅವರನ್ನು ಅನುಕರಣೀಯ ಆದರ್ಶವೆಂದು ಬಿಂಬಿಸಲು ತುಂಬಾ ಕಷ್ಟಪಟ್ಟು ಪ್ರಯತ್ನಿಸುತ್ತಿದೆ. ಮೋದಿ ಮತ್ತು ಅವರ ತಂಡ ಅನೇಕ ಸಾಂಕೇತಿಕ ಕ್ರಿಯೆ ಮತ್ತು ಕ್ರಮಗಳ ಮೂಲಕ ಸಾಮಾಜಿಕ ಗೌರವಕ್ಕಾಗಿನ ದಲಿತರ ಹಂಬಲವನ್ನು ತೃಪ್ತಿಪಡಿಸುವ ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ವಾಸ್ತವದಲ್ಲಿ ಅವರೇನೇ ಪ್ರಯತ್ನ ಪಟ್ಟರೂ ಅದರಿಂದ ಅವರ ಮೇಲಿನ ಅವಿಶ್ವಾಸ ದಲಿತರಲ್ಲಿ ಇನ್ನೂ ಹೆಚ್ಚಾಗುತ್ತಲೇ ಹೋಗುತ್ತಿದೆ. ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳು, ನಿರುದ್ಯೋಗ ಮತ್ತು ಇನ್ನಿತರ ಸಮಸ್ಯೆಗಳು ಅವರಲ್ಲಿರುವ ಅಸಂತೋಷ ಮತ್ತು ಅತೃಪ್ತಿಯ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯುತ್ತಿವೆ. ವ್ಯವಸ್ಥೆಯ ಮೇಲೆ ದಲಿತರಿಗೆ ಅವಿಶ್ವಾಸ ಬೆಳೆದಿರುವುದು, ಅವರು ಭ್ರಮನಿರಸನಗೊಂಡಿರುವುದು ಅವರಲ್ಲಿ ಒಂದು ರೀತಿಯ ಪ್ರಕ್ಷುಬ್ದವಾದ ಬಂಡಾಯದ ವಾತಾವರಣವನ್ನು ಸೃಷ್ಟಿಸಿದೆ. ಕೇಂದ್ರ ಸರ್ಕಾರವು ಈ ಸಮಸ್ಯೆಗಳಿಗೆ ಇನ್ನಷ್ಟು ಹೆಚ್ಚು ಪರಿಣಾಮಕಾರಿಯಾಗಿ ಪರಿಹಾರ ಕಂಡಕೊಳ್ಳುವ ಅವಶ್ಯಕತೆ ಇದೆ. ವಾಸ್ತವದಲ್ಲಿ ಇದೇ ಏ.2ರ ಪ್ರತಿಭಟನೆಗಳ ಸಂದೇಶ.

ಲೇಖಕರು ಅಲಹಾಬಾದಿನ ಗೋವಿಂದ ವಲ್ಲಭ ಪಂತ್ ಸಮಾಜವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರು

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More